ಇಡೀ ದೇಶವೇ ಬೆಚ್ಚಿ ಬೀಳುವಂತಹ ದಾರುಣವಾದ ಘಟನೆಯಲ್ಲಿ ನಾಡಿನ ಕಾಫಿ ಉದ್ಯಮದ ಮೇರು ಸಾಧಕ ವಿ ಜಿ ಸಿದ್ದಾರ್ಥ ಹೆಗಡೆ ಇಹಲೋಕವನ್ನು ತ್ಯಜಿಸಿದ್ದಾರೆ. ಈ ದುರ್ಘಟನೆಗೆ ಕರ್ನಾಟಕವೇ ಆಘಾತ ಮತ್ತು ಸಂತಾಪವನ್ನು ವ್ಯಕ್ತಪಡಿಸಿದೆ. ಸಾವಿರಾರು ಕೋಟಿ ರೂಪಾಯಿಗಳ ಆಸ್ತಿಪಾಸ್ತಿ ಹೊಂದಿದ್ದ ಉದ್ಯಮಿ ಸಿದ್ದಾರ್ಥ ಅವರ ಸಾವು ಅವರಿಗೆ ಸಾಲ ಕೊಟ್ಟಿದ್ದವರು ಮತ್ತು ಐಟಿ ಅಧಿಕಾರಿಗಳ ಕಿರುಕುಳದಿಂದ ಉಂಟಾಗಿದೆ ಎಂಬುದಾಗಿ ಮೇಲ್ನೋಟಕ್ಕೆ ಕಾಣಿಸುತ್ತಿದೆ. ಬೃಹತ್ ಗಾತ್ರದ ಉದ್ಯಮಗಳನ್ನು ಕಟ್ಟಿ ಬೆಳೆಸಿದ್ದ ಪರಿಣಾಮ ಸಿದ್ದಾರ್ಥ ಅವರು ನಿಭಾಯಿಸಲಾಗದ ಮಟ್ಟಿಗೆ ಮಾನಸಿಕ ಸಂಕ್ಷೋಭೆಗೆ ಗುರಿಯಾಗಿದ್ದು ಸಹ ಈ ದುರಂತಕ್ಕೆ ಕಾರಣವಾಗಿದೆ. ಸಿದ್ದಾರ್ಥ ಅವರು ಸಹೋದ್ಯೋಗಿಗಳಿಗೆ ಬರೆದಿದ್ದರೆನ್ನಲಾದ ಕೊನೆಯ ಪತ್ರವು ಅವರಿಗೆ ಉಂಟಾಗಿದ್ದ ಮಾನಸಿಕ ಒತ್ತಡಕ್ಕೆ ಸಾಕ್ಷಿ ಒದಗಿಸಿದೆ. ಈ ಎಲ್ಲಾ ಸಂಗತಿಗಳ ಕುರಿತು ತನಿಖೆಯೂ ನಡೆಯುತ್ತಿದೆ. ಖಂಡಿತಾ ಈ ತನಿಖೆ ಸೂಕ್ತ ರೀತಿಯಲ್ಲಿ ನಡೆದು ತಾರ್ಕಿಕ ಅಂತ್ಯ ಕಾಣಬೇಕು, ನಾಡಿನ ಅತ್ಯಂತ ಮಹತ್ವಾಕಾಂಕ್ಷೆಯ ಉದ್ಯಮಿಯೊಬ್ಬರು ಇಂತಹ ದಾರುಣ ಅಂತ್ಯ ಕಾಣುವ ಸ್ಥಿತಿ ಉಂಟಾಗಿದ್ದರ ಕುರಿತ ಸತ್ಯ ಸಂಗತಿಗಳು ದೇಶದ, ರಾಜ್ಯದ ಜನತೆಗೆ ತಿಳಿಯಲೇಬೇಕು…
ಪ್ರಸ್ತುತ ವರದಿಯಲ್ಲಿ ಟ್ರೂಥ್ ಇಂಡಿಯಾ ಕನ್ನಡ ಹೇಳಲು ಹೊರಟಿರುವುದು ಮತ್ತೊಂದು ಮುಖ್ಯ ವಿಷಯ. ಕೆಫೆ ಕಾಫಿ ಡೇ, ಮೈಂಡ್ ಟ್ರೀ, ಡಾರ್ಕ್ ಫಾರೆಸ್ಟ್, ಇತ್ಯಾದಿ ಹೆಸರಿನ ವಿವಿಧ ಉದ್ಯಮಗಳನ್ನು ಸ್ಥಾಪಿಸಿ ದೇಶದ ಉದ್ಯಮಲೋಕದಲ್ಲಿ ಹೆಸರು ಮಾಡಿದ್ದ ಮತ್ತು ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರ ಮಗಳನ್ನು ಮದುವೆಯಾಗಿ ರಾಜಕೀಯವಾಗಿಯೂ ಪರೋಕ್ಷವಾಗಿ ಪ್ರಭಾವಿಯಾಗಿದ್ದ ಸಿದ್ದಾರ್ಥ ಅವರ ಉದ್ಯಮಶೀಲತೆ, ಉದಾರತೆ, ಮಾನವೀಯತೆ ಇತ್ಯಾದಿಗಳ ಕುರಿತು ಅನೇಕಾನೇಕ ವರದಿಗಳು, ಲೇಖನಗಳು ಪ್ರಕಟವಾಗುತ್ತಿವೆ. ಸಿದ್ದಾರ್ಥ ಅವರನ್ನು ಭಗವಾನ್ ಬುದ್ಧನಿಗೆ ಹೋಲಿಸಿ ಹೊಗಳಿದ ಬರೆಹಗಳೂ ಪ್ರಕಟವಾಗಿವೆ. ಆದರೆ 15,000 ಎಕರೆಗೂ ಹೆಚ್ಚು ಕಾಫಿ ತೋಟವನ್ನು ಹೊಂದಿದ್ದು, 18,000 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಹೊಂದಿರುವ ಭೂಮಾಲೀಕ ಉದ್ಯಮಿಯೊಬ್ಬರು ಅದೆಷ್ಟೇ ಉದಾರಿಯಾಗಿದ್ದರೂ ಸಮತೆಯ ತತ್ವವನ್ನು ಲೋಕಕ್ಕೇ ಸಾರಿದ ಬುದ್ಧನಂತಾಗಲು ಸಾಧ್ಯವೇ ಎಂಬ ಮೂಲಭೂತ ಪ್ರಶ್ನೆಯನ್ನು ಕೇಳಿಕೊಳ್ಳಬೇಕಾಗುತ್ತದೆ. ಸಿದ್ದಾರ್ಥ ಅವರು ಹೇಳಿ ಕೇಳಿ 90ರ ದಶಕದ ನವ-ಉದಾರವಾದಿ ಆರ್ಥಿಕತೆಯ, ಹಣಕಾಸು ಶೇರು ಮಾರುಕಟ್ಟೆ ಎಂಬ ವಿಕೃತ ರೂಪದ ಬಂಡವಾಳಶಾಹಿ ವ್ಯವಸ್ಥೆಯ ಫಲಾನುಭವಿಯಾಗಿದ್ದವರು ಮತ್ತು ಇದೀಗ ಅಂತಿಮವಾಗಿ ಅದೇ ವ್ಯವಸ್ಥೆಯ ಬಲಿಪಶುವಾಗಿದ್ದಾರೆ ಕೂಡ. ಕಾರ್ಲ್ ಮಾರ್ಕ್ಸ್ ರಚಿಸಿದ್ದ ಪುಸ್ತಕವನ್ನು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಓದಿದ್ದರೂ ಸಹ, ಮಾರ್ಕ್ಸ್ ಯಾವ ಬಂಡವಾಳಶಾಹಿ ವ್ಯವಸ್ಥೆಯನ್ನು ಕಾರ್ಮಿಕರ ರಕ್ತ ಹೀರುವ ವ್ಯವಸ್ಥೆ ಎಂದು ವಿಶ್ಲೇಷಿಸಿ, ಅದರ ವಿರುದ್ಧ ಹೋರಾಡಲು ಜಗತ್ತಿನ ಕಾರ್ಮಿಕರಿಗೆ ಕರೆ ಕೊಟ್ಟಿದ್ದರೋ, ಅದೇ ಬಂಡವಾಳಶಾಹಿ ವ್ಯವಸ್ಥೆಯ ಸಮರ್ಥಕ, ಪ್ರವರ್ಥಕ ನಮ್ಮ ಸಿದ್ದಾರ್ಥ ಹೆಗಡೆ.
ಈ ಪ್ರಶ್ನೆಯನ್ನು ಇಟ್ಟುಕೊಂಡ ಟ್ರೂಥ್ ಇಂಡಿಯಾ ಕನ್ನಡ ಸಿದ್ದಾರ್ಥ ಅವರ ಮಾಲೀಕತ್ವದ ಕಾಫಿ ತೋಟಗಳನ್ನು ವೀಕ್ಷಿಸಿದಾಗ ಅಲ್ಲಿ ಕಂಡಿದ್ದು ಮಾತ್ರ ಆಘಾತಕಾರಿ ಎನಿಸುವ ಸಂಗತಿಯೇ…
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಮತ್ತು ಹಾಸನ ಜಿಲ್ಲೆಯ ಬೇಲೂರು ಮಾರ್ಗದ ನಡುವೆ ಇರುವ ಸಿದ್ದಾರ್ಥ ಅವರ ಮನೆ ಇರುವ ಚಟ್ನಳ್ಳಿಯ ಸುತ್ತಮುತ್ತಲಿನ ಪ್ರದೇಶದಲ್ಲಿ ಹಲವಾರು ಕಾಫಿ ಎಸ್ಟೇಟುಗಳು ಸಿದ್ದಾರ್ಥ ಅವರಿಗೆ ಸೇರಿವೆ. ಮೂಡಿಗೆರೆ ಮತ್ತು ಬೇಲೂರು ತಾಲ್ಲೂಕುಗಳಿಗೆ ಸೇರಿದ ಚಟ್ನಳ್ಳಿ, ಚಂದ್ರಾಪುರ, ಕಮ್ಮರಗೋಡು ಎಸ್ಟೇಟುಗಳಲ್ಲಿ ನೂರಾರು ಕಾರ್ಮಿಕರು ದುಡಿಯುತ್ತಾರೆ. ಸ್ವತಃ ಸಿದ್ದಾರ್ಥ ಅವರು ಹೇಗೆ ಸಾಲದ ಒತ್ತಡದಲ್ಲಿ ಸಿಲುಕಿದ್ದರೋ ಅಂತಹುದೇ ಸಾಲದ ವಿಷಚಕ್ರದಲ್ಲಿ ಸಿಲುಕಿಕೊಂಡೇ ಈ ಕಾಫಿ ತೋಟಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರು ಎಸ್ಟೇಟುಗಳ ಚೆಂಗೂಲಿಗೆ (ದಿನಗೂಲಿ) ಬಂದಿದ್ದಾರೆ. ಮತ್ತವರ ಬದುಕು ಕಣ್ಣೀರು ತರಿಸುವಷ್ಟು ತೀರಾ ಕಷ್ಟಕರವಾಗಿದೆ. ಎಷ್ಟೆಂದರೆ ಮೊನ್ನೆ ಸಿದ್ದಾರ್ಥ ಅವರ ಮೃತದೇಹ ನೇತ್ರಾವತಿ ನದಿಯಲ್ಲಿ ಸಿಕ್ಕಿದ ಬಳಿಕ ಅಂತ್ಯಕ್ರಿಯೆಗೆಂದು ಶವವನ್ನು ಚಟ್ನಳ್ಳಿಗೆ ತರುವ ದಿನ ಮತ್ತು ಮಾರನೆ ದಿನ ಕಾರ್ಮಿಕರಿಗೆ ರಜೆ ನೀಡಲಾಗಿತ್ತು. ಎರಡು ಮೂರು ದಿನ ರಜೆಯಾದರೆ ಸಂತೆಗೆ ಹಣ ಕೂಡಿಸಲು ಏನು ಮಾಡುವುದು ಎಂಬ ಆತಂಕದಲ್ಲಿ ಕಾರ್ಮಿಕರಿದ್ದರು. ಯಾಕೆ ನಿಮಗೆ ಸಾಕಷ್ಟು (ಉತ್ತಮ) ಸಂಬಳ ನೀಡಲಾಗುತ್ತಿಲ್ಲವೇ ಎಂಬ ಪ್ರಶ್ನೆಗೆ ಕಾರ್ಮಿಕರು ತಿಳಿಸಿದ ಸಂಗತಿಗಳು ಸ್ವತಃ ಈ ವರದಿಗಾರನಿಗೂ ಆಘಾತ ನೀಡಿದವು!
ಸಾಲಬಾಧೆ ತೀರಿಸಲು ಬರುವ ಕಾರ್ಮಿಕರು ಹಾಗೂ ಸಪ್ಲೈಯರ್ ಮಾಫಿಯಾ!
ಟ್ರೂಥ್ ಇಂಡಿಯಾ ಕನ್ನಡ ಈ ಕಾಫಿ ಪ್ಲಾಂಟೇಶನ್ಗಳಲ್ಲಿ ಕಂಡುಕೊಂಡದ್ದೇನೆಂದರೆ ಹಲವರ ತಿಳಿವಳಿಕೆಯಂತೆ ಸಿದ್ದಾರ್ಥ ಅವರ ಕಾಫಿ ತೋಟಗಳಲ್ಲಿ ದುಡಿಯುವ ಕಾರ್ಮಿಕರು ನೆಮ್ಮದಿಯ ವಾತಾವರಣದಲ್ಲೇನೂ ಬದುಕುತ್ತಿಲ್ಲ. “ನಮ್ಮನ್ನ ಚೆನ್ನಾಗಿ ನೋಡಿಕೊಳ್ತಾರ್ರೀ” ಎಂದು ಬಾಯಿಮಾತಿಗಷ್ಟೇ ಹೇಳುವ ಈ ಬಡ ಕೂಲಿಕಾರ್ಮಿಕರ ಹಿನ್ನೆಲೆಯನ್ನು ಕೆದಕಿದಾಗ ಬಯಲುಸೀಮೆಯ ಹಳ್ಳಿಗಳಿಂದ ಮಲೆನಾಡಿನ ಕಾಫಿ ತೋಟಗಳಿಗೆ ಅಗ್ಗದ ಕೂಲಿಗೆ ಕಾರ್ಮಿಕರನ್ನು ಸರಬರಾಜು ಮಾಡುವ ಕರಾಳ ದಂಧೆಯೊಂದರ ದರ್ಶನವಾಗುತ್ತದೆ. ಇದು ಕೇವಲ ಸಿದ್ದಾರ್ಥ ಅವರ ಕಾಫಿ ತೋಟದ ಕಾರ್ಮಿಕರ ಕತೆ ಮಾತ್ರ ಅಲ್ಲ ಎಂಬುದನ್ನೂ ಇಲ್ಲಿ ಸ್ಪಷ್ಟಪಡಿಸಬೇಕಾಗುತ್ತದೆ. ಚಿಕ್ಕಮಗಳೂರು, ಹಾಸನ ಜಿಲ್ಲೆಗಳಲ್ಲಿ ಎಷ್ಟು ಕಾಫಿ ಮತ್ತು ಟೀ ತೋಟಗಳಿವೆಯೋ ಅವುಗಳಲ್ಲೆಲ್ಲಾ “ಚೆಂಗೂಲಿ”ಗೆಂದು ಬಂದು ಬೆವರು ಬಸಿಯುತ್ತಿರುವ ಕಾರ್ಮಿಕರ ಕತೆ ಇದು.
ಏನದು ಮಾಫಿಯಾ?
ಸಿದ್ದಾರ್ಥ ಅವರ ಕಾಫಿ ತೋಟಗಳನ್ನೂ ಒಳಗೊಂಡಂತೆ ಇಲ್ಲಿನ ನೂರಾರು ಎಸ್ಟೇಟುಗಳಲ್ಲಿ ಮಧ್ಯ ಕರ್ನಾಟಕದ ದಾವಣಗೆರೆ, ಬಳ್ಳಾರಿ ಜಿಲ್ಲೆಗಳಿಂದ ಬಂದು ವರ್ಷದ ಕೆಲವು ತಿಂಗಳುಗಳ ಕಾಲ ದುಡಿಯುವ ಕೂಲಿಕಾರ್ಮಿಕರನ್ನು ಸರಬರಾಜು ಮಾಡುವವರನ್ನು ಮೇಸ್ತ್ರಿಗಳು ಅಥವಾ ಸಪ್ಲೈಯರ್ಗಳು ಎಂದು ಕರೆಯಲಾಗುತ್ತದೆ. ಈ ಸಪ್ಲೈಯರುಗಳು ಅಸಲಿಗೆ ಲೇವಾದೇವಿಗಾರರೂ ಆಗಿದ್ದಾರೆ. ಹರಪ್ಪನಹಳ್ಳಿ, ಸಂಡೂರು ತಾಲ್ಲೂಕುಗಳಲ್ಲಿ ತಾಂಡಾ ಮತ್ತು ಹಳ್ಳಿಗಳ ಜನರಿಗೆ ಮದುವೆಗೆ, ಹಬ್ಬಗಳಿಗೆ, ಖಾಯಿಲೆ ಕಸಾಲೆಗೆಂದು ಕೈಸಾಲ ಕೊಡುವುದು, ನಂತರ ಆ ಸಾಲ ತೀರಿಸಲು ಕಾಫಿ ತೋಟಗಳಿಗೆ ಒತ್ತಾಯದ ಮೇಲೆ ಕರೆ ತರುವುದು… ಇದು ಕಳೆದ ಹತ್ತಾರು ವರ್ಷಗಳಿಂದಲೂ ಅನೂಚಾನವಾಗಿ ನಡೆದುಕೊಂಡು ಬಂದಿದೆ. ಈ ಭಾಗಗಳ ಲಂಬಾಣಿ, ಮ್ಯಾಸಬೇಡ, ಗೊಲ್ಲ ಮುಂತಾದ ತಳ ಸಮುದಾಯಗಳ ಜನರೇ ಈ ಸಾಲದ ಶೂಲದಲ್ಲಿ ಸಿಲುಕಿಕೊಂಡು, ಬಡ್ಡಿಕೋರ ಸಪ್ಲೈಯರ್ಗಳ ಮೂಲಕ ಕಾಫಿ ತೋಟಗಳಿಗೆ ಕಾರ್ಮಿಕರಾಗಿ ಬರುತ್ತಿದ್ದಾರೆ.
ಬದುಕುಳಿಯಲು ದಿನಕ್ಕೆ 20-30 ರೂಪಾಯಿ!
ಹೀಗೆ ಸಪ್ಲೈಯರ್ಗಳ ಮೂಲಕ ಬರುವ ಕಾರ್ಮಿಕರು ನಾಲ್ಕಾರು ತಿಂಗಳುಗಳ ಕಾಲ ಇಲ್ಲಿ ದುಡಿಯುತ್ತಾರೆ. ಕೆಲವರು ವರ್ಷಗಟ್ಟಲೆ ಎಸ್ಟೇಟಿನ ಲೈನ್ ಮನೆಗಳಲ್ಲಿ ಬೀಡು ಬಿಡುತ್ತಾರೆ. ಈ ಅವಧಿಯಲ್ಲಿ ಅವರಿಗೆ ಹೊಟ್ಟೆ ಬಟ್ಟೆಗೆ ಎಂದು ನೀಡುವ ಕೂಲಿ ದಿನಕ್ಕೆ 20ರಿಂದ 30 ರೂಪಾಯಿ ಮಾತ್ರ. ವಾರದ ಬಟವಾಡೆಯಲ್ಲಿ (ಕೂಲಿ ಪಾವತಿ) 180 ರಿಂದ 250 ರೂಪಾಯಿಗಳನ್ನು ಪ್ರತಿ ಕಾರ್ಮಿಕರು ಪಡೆಯುತ್ತಾರೆ. ಆದರೆ ಕಾಫಿ ತೋಟದ ಮಾಲೀಕರ ಲೆಕ್ಕದಲ್ಲಿ ಪ್ರತಿ ಕಾರ್ಮಿಕರಿಗೆ 200 ರಿಂದ 250 ರೂಪಾಯಿ ನೀಡಲಾಗುತ್ತದೆ. ಮಿಕ್ಕ ಹಣವನ್ನು ನೇರವಾಗಿ ಸಪ್ಲೈಯರ್ಗಳಿಗೆ ನೀಡಲಾಗುತ್ತದೆ.

ಈ ರೀತಿಯಲ್ಲಿ ಸಪ್ಲೈಯರುಗಳು ತಾವು ನೀಡಿದ ಸಾಲಕ್ಕೆ ಮನಸ್ಸಿಗೆ ಬಂದಂತೆ ಬಡ್ಡಿ ಸೇರಿಸಿ ಈ ಕಾರ್ಮಿಕರನ್ನು ವಂಚಿಸಿ, ತಮ್ಮ ಜೇಬು ತುಂಬಿಸಿಕೊಳ್ಳುತ್ತಿದ್ದಾರೆ. ಕಾರ್ಮಿಕರ ದುಡಿಮೆಯಿಂದ ಕಾಫಿ ತೋಟಗಳ ಮಾಲೀಕರಿಗೂ/ಮ್ಯಾನೇಜರ್/ರೈಟರುಗಳಿಗೂ ಲಾಭ, ತೋಟಗಳ ಮಾಲೀಕರು ನೀಡುವ ಲಕ್ಷಾಂತರ ರೂಪಾಯಿಗಳನ್ನು ಪಡೆಯುವ ಬಯಲು ಸೀಮೆಯ ಸಪ್ಲೈಯರುಗಳಿಗೂ ಲಾಭ! ನಡುವೆ ಸಿಲುಕಿ ಹಿಪ್ಪೆಯಾಗುವ ಬಯಲುಸೀಮೆಯ ಚೆಂಗೂಲಿ ಕಾರ್ಮಿಕರ ಪರಿಸ್ಥಿತಿ ಮಾತ್ರ ಭೀಕರವಾಗಿದೆ. “ಬಂಡವಾಳಿಗರ ಲಾಭ ಬರುವುದೇ ಕಾರ್ಮಿಕರ ದುಡಿಮೆಯನ್ನು ದೋಚಿ ಉಂಟಾಗುವ ಮಿಗುತಾಯ ಮೌಲ್ಯದಿಂದ” ಎಂಬ ಕಾರ್ಲ್ ಮಾರ್ಕ್ಸ್ ನ ತತ್ವ ಕಾಫಿ ತೋಟಗಳಿಗೆ ಹೆಚ್ಚೆಚ್ಚು ಅನ್ವಯವಾಗುತ್ತದೆ. ಈ ಕಾರ್ಮಿಕರಿಗೆ ಉತ್ತಮ ಬದುಕೆಂಬುದೇ ಇಲ್ಲ. ಚಿಕ್ಕಮಗಳೂರು, ಹಾಸನ ಜಿಲ್ಲೆಗಳ ಕಾಫಿ ತೋಟಗಳಲ್ಲಿ ಬಯಲುಸೀಮೆಯೆ ಕಾರ್ಮಿಕರ ಸ್ಥಿತಿ ಹೀಗಿದ್ದರೆ ಕೊಡಗಿನ ಕಾಫಿ ತೋಟಗಳಲ್ಲಿ ಜೇನು ಕುರುಬ, ಬೆಟ್ಟ ಕುರುಬ, ಇರುಳಿಗ ಮೊದಲಾದ ಬುಡಕಟ್ಟು ಜನರು ಕಾರ್ಮಿಕರಾಗಿ ದಾರುಣ ಸ್ಥಿತಿಯಲ್ಲಿ ಇರುವ ಸಂಗತಿಯನ್ನು ನೋಡಬಹುದು. ಇಲ್ಲಿ ಸಹ ಸಾಲದ ಶೂಲದಲ್ಲಿ ಈ ಆದಿವಾಸಿಗಳನ್ನು ಸಿಲುಕಿಸಿ ಜೀವನ ಪರ್ಯಂತ ಜೀತ ಮಾಡುವ ಮಟ್ಟಿಗೆ ದುಡಿಸುತ್ತಿರುವ ಸಂಗತಿ ದಾಖಲಾಗಿದೆ.

ಕೆಲವೊಮ್ಮೆ ಏನಾಗುತ್ತಿದೆ ಎಂದರೆ “ಕಾರ್ಮಿಕರನ್ನು ಸರಿಯಾಗಿ ಸಪ್ಲೈ ಮಾಡದ” ವಿಷಯದಲ್ಲಿ ಕಾಫಿ ತೋಟಗಳ ಮಾಲೀಕರಿಗೂ/ಮ್ಯಾನೇಜರ್ಗಳಿಗೂ ಮತ್ತು ಸಪ್ಲೈಯರ್ಗಳಿಗೂ ಕಾನೂನು ವ್ಯಾಜ್ಯಗಳೂ ಉಂಟಾಗಿವೆ. ಟ್ರೂಥ್ ಇಂಡಿಯಾ ಕನ್ನಡಕ್ಕೆ ಲಭ್ಯವಾಗಿರುವ ಖಚಿತ ಮಾಹಿತಿಯ ಪ್ರಕಾರ, ಮೂಡಿಗೆರೆಯ ನ್ಯಾಯಾಲಯದಲ್ಲಿ ಇದುವರೆಗೆ ನೂರಕ್ಕೂ ಹೆಚ್ಚು ಇಂತಹ ಪ್ರಕರಣಗಳು ದಾಖಲಾಗಿವೆ. ಸಾಮಾನ್ಯವಾಗಿ ಸಪ್ಲೈಯರುಗಳು ತಾವು ಎಸ್ಟೇಟುಗಳಿಗೆ ಕಾರ್ಮಿಕರನ್ನು ಸರಬರಾಜು ಮಾಡುವ ಭರವಸೆ ನೀಡಿ ಲಕ್ಷಗಟ್ಟಲೆ ಮುಂಗಡ ಹಣವನ್ನು ಪಡೆದು, ಸಹಿ ಹಾಕಿ, ಚೆಕ್ ಗಳನ್ನು ನೀಡಿರುತ್ತಾರೆ. ಕೆಲವೊಮ್ಮೆ ಅವರು ನೀಡಿದ ಮಾತಿನಂತೆ “ಕೂಲಿಗಳನ್ನು ಸಪ್ಲೈ” ಮಾಡುವುದೇ ಇಲ್ಲ, ಮಾಡಿದರೂ ವಾಯಿದೆ ನೀಡಿದ ಪ್ರಮಾಣದಲ್ಲಿ ಮಾಡಿರುವುದಿಲ್ಲ. ಇದರಿಂದಾಗಿ ಕಾಫಿ ತೋಟಗಳ ಮಾಲೀಕರು ಅವರ ವಿರುದ್ಧ ಚೆಕ್ ಬೌನ್ಸ್ ಪ್ರಕರಣಗಳನ್ನು ದಾಖಲಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಸಪ್ಲೈಯರುಗಳೂ ಸಹ ವಾದ ಮಂಡಿಸಿರುವುದೂ ಕಂಡು ಬಂದಿದ್ದು ಈ ಕುರಿತ ಕಾನೂನು ದಾಖಲೆಗಳು ಲಭ್ಯವಾಗಿವೆ. ಇಂತಹ ಹಲವು ಪ್ರಕರಣಗಳಲ್ಲಿ ರಾಜಿ ಸಂಧಾನ ಏರ್ಪಟ್ಟಿರುವುದಾಗಿ ತಿಳಿದುಬಂದಿದೆ.
ಕಾಫಿ ತೋಟಗಳ ಒಡೆಯರು ಮತ್ತು ಸಪ್ಲೈಯರ್ ಕಂ ಲೇವಾದೇವಿಗಾರರ ನಡುವಿನ ವ್ಯಾಜ್ಯಗಳು ಏನೇ ಇರಲಿ, ನಾವಿಲ್ಲಿ ಯೋಚಿಸಬೇಕಾಗಿರುವುದು, ಸಾಲದ ಒತ್ತಡದಲ್ಲಿ ಸಿಲುಕಿ, ಈ ತೋಟಗಳಿಗೆ ಬಂದು ಅತ್ಯಂತ ಕಡಿಮೆ ಕೂಲಿ ಪಡೆದು ದುಡಿಯುತ್ತಿರುವ ಬಡ ಕೂಲಿಕಾರ್ಮಿಕರ ಕುರಿತು.

ದಯಾಳುವಾಗಿದ್ದ ಶ್ರೀ ಸಿದ್ದಾರ್ಥ ಅವರ ಗಮನಕ್ಕೆ ಈ ಕೂಲಿ ಸಪ್ಲೈ ಮಾಫಿಯಾ ಬಂದಿತ್ತೋ ಇಲ್ಲವೋ ಹೇಳಲಾಗದು. “ನಾವು ಬಂದು ಐದು ವರ್ಷವಾದರೂ ಅವರ ಮುಖಾನೇ ನೋಡಿದ್ದಿಲ್ರೀ, ಇವತ್ತೇ ಟೀವೀನಾಗೆ ಅವರ ಬಗ್ಗೆ ಬಂದ ಮ್ಯಾಗೇ ನೋಡ್ತಿರೋದು” ಎಂದು ಹೇಳುವ ಚಂದ್ರಾಪುರ ಎಸ್ಟೇಟ್ ಕೂಲಿ ಕಾರ್ಮಿಕರೊಬ್ಬರ ಮಾತು ಕೇಳಿದರೆ ಬಹುಶಃ ಸಿದ್ದಾರ್ಥ ಅವರಿಗೆ ಈ ಬಡಕಾರ್ಮಿಕರ ಶೋಚನೀಯ ಸ್ಥಿತಿಗತಿಗಳ ಕುರಿತು ಏನೂ ತಿಳಿದಿರಲಿಲ್ಲ ಎನಿಸುತ್ತದೆ. “ಕಾರ್ ರೇಸ್ ಇದ್ದಾಗ ಮಾತ್ರ ಬಂದು ಹೋಗುತ್ತಿದ್ದರು” ಎಂದು ಕಮ್ಮರಗಟ್ಟ ಎಸ್ಟೇಟ್ ಯುವಕರೊಬ್ಬರು ಹೇಳಿದ್ದು ಸಹ ಇದಕ್ಕೆ ಪೂರಕವಾಗಿದೆ. ಆದರೆ ಒಟ್ಟಾರೆ ವ್ಯವಸ್ಥೆಯಲ್ಲಿ ಅವರೂ ಸಹ ಪಾಲುದಾರರೇ ಆಗುತ್ತಾರೆ. ಯೂನಿಯನ್ ಕಟ್ಟಿಕೊಂಡು ತಮ್ಮ ಹಕ್ಕುಗಳನ್ನು ಕೇಳಿದ ಕಾರ್ಮಿಕರ ಬೇಡಿಕೆಗಳನ್ನು ಸಿದ್ದಾರ್ಥ ಅವರು ಎಲ್ಲರಿಗಿಂತ ಮುಂಚಿತವಾಗಿ ಈಡೇರಿಸುತ್ತಿದ್ದರು ಎಂದೂ ಹೇಳಲಾಗುತ್ತದೆ. ಆದರೆ ಈಗ ಸಾಲದ ಬಲೆಯಲ್ಲಿ ಸಿಕ್ಕಿಕೊಂಡು ಕಾಫಿ ತೋಟಗಳಲ್ಲಿ ಬಂಧಿಗಳಾಗಿರುವ ಬಡಪಾಯಿ ಕೂಲಿಕಾರ್ಮಿಕರಿಗಂತೂ ಅವರ ದಯಾಳುತನದ ಭಾಗ್ಯ ಲಭಿಸಿಲ್ಲವೆಂಬುದು ಮಾತ್ರ ಸತ್ಯ.
ಪ್ರಮುಖವಾಗಿ ಕಾಫಿ ಡೇ ಉದ್ಯಮವನ್ನೇ ಬೆಳೆಸುತ್ತಾ, ಇತರ ಹತ್ತಾರು ಉದ್ಯಮಗಳನ್ನು ಕಟ್ಟಿ ಬೆಳೆಸುತ್ತಿದ್ದ ಸಿದ್ದಾರ್ಥ ಅವರಿಗೆ ತಾವು ಮಾಲೀಕರಾಗಿದ್ದ ಕಾಫಿ ಎಸ್ಟೇಟುಗಳಲ್ಲಿ ಹೀಗೆ ಸಾಲದ ವಿಷಚಕ್ರಕ್ಕೆ ಸಿಲುಕಿ ಬಂದು ಕೂಲಿಕಾರ್ಮಿಕರಾಗಿ ಶ್ರಮಿಸುತ್ತಿದ್ದ ಜನರ ಸಂಕಟಗಳು, ವಾರಕ್ಕೆ ಕೇವಲ ಇನ್ನೂರು ರೂಪಾಯಿಗಳಲ್ಲಿ ಅವರು ಲೈನ್ ಮನೆಗಳಲ್ಲಿ ಜೀವನ ನಡೆಸಬೇಕಾಗಿದ್ದ ಕುರಿತು ವಿಚಾರಿಸಲು ಪುರುಸೊತ್ತು ಇರಲೂ ಸಾಧ್ಯವಿಲ್ಲ ಬಿಡಿ. ಆದರೆ, ದಿನನಿತ್ಯ ಕೋಟ್ಯಾಂತರ ರೂಪಾಯಿ ಆದಾಯದ ಕಾಫಿ ಡೇ ಮಳಿಗೆಗಳಿಗೆ ಕಾಫಿ ಬೀಜ ಸರಬರಾಜು ಆಗುತ್ತಿರುವುದು ಇದೇ ಕಾಫಿ ತೋಟಗಳ ಕಾರ್ಮಿಕರ ಶ್ರಮದಿಂದ ಎಂಬುದನ್ನು ಮರೆಯುವಂತಿಲ್ಲ. ವಿಪರ್ಯಾಸದ ಸಂಗತಿ ಏನೆಂದರೆ ಒಂದೆಡೆ ಸಿದ್ದಾರ್ಥ ಅವರೂ ಖಾಸಗಿ ಬ್ಯಾಂಕುಗಳಲ್ಲಿ ಸಾವಿರಾರು ಕೋಟಿ ರೂಪಾಯಿ ಸಾಲದ ಹೊರೆ ಹೊತ್ತು ಒತ್ತಡ ಅನುಭವಿಸಿದ್ದರು, ಮತ್ತೊಂದೆಡೆ ಬಯಲುಸೀಮೆಯ ಕಡುಬಡವರು ತಾವೂ ಖಾಸಗಿ ಲೇವಾದೇವಿಗಾರರ ಬಳಿ ಕೈಸಾಲ ಪಡೆದು, ಸಾಲ ತೀರಿಸಲೇಬೇಕಾದ ಒತ್ತಡದಿಂದಾಗಿ ಕಾಫಿ ತೋಟಗಳಲ್ಲಿ ಚೆಂಗೂಲಿಗೆ ಸೇರಿಕೊಂಡು ದಾರುಣ ಬದುಕು ದೂಡುವಂತಾಗಿದೆ.
ಬರೆಹ: ಹರ್ಷಕುಮಾರ್ ಕುಗ್ವೆ
6 Comments
ಸಾಲದ ಶೂಲಕ್ಕೆ ತನ್ನ ಕಾಫಿ ತೋಟಗಳಲ್ಲಿ ದುಡಿಯುತ್ತಿರುವ ಕಾರ್ಮಿಕರ ಜೀವನದ ಬಗ್ಗೆ ಒಂಚೂರು ತಿಳಿದುಕೊಂಡಿದ್ದರೂ ಸಿದ್ಧಾರ್ಥ ಅವರಿಗೆ ದೊಡ್ಡ ಪಾಠವಾಗುತ್ತಿತ್ತು. ಬದುಕುವುದನ್ನು ಕಲಿಯುತ್ತಿದ್ದರು. ಈ ರೀತಿ ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿ ಬರುತ್ತಿರಲಿಲ್ಲ.
ತೋಟ ಕಾರ್ಮಿಕರ ಬದುಕಿನ ಇನ್ನೊಂದು ಮುಖದ ಅನಾವರಣ .ಶೋಷಣೆಗೆ ಹಿಡಿದ. ಕನ್ನಡಿ ಮಾಲಕರ ಜಾಣ ಕುರುಡು .
ಅಸ್ಸಾಂ ಒರಿಸ್ಸಾ ಪಶ್ಚಿಮ ಬಂಗಾಳದ ಕಾರ್ಮಿಕರು ಬಂದು ದಿನಕ್ಕೆ 150.ರೂ ಗಳಿಗೆ ದುಡಿಯುತಿದ್ದಾರೆ. ಚಂಗೂಲಿ,ಹಂಗಾಮಿ ಕಾರ್ಮಿಕರು ಹೆಚ್ಚಾಗಿದ್ದು ಕಾರ್ಮಿಕ ಕಾನೂನಿನ ಪ್ರಕಾರ ಯಾವುದೇ ರೀತಿಯ ಸೌಲಭ್ಯಗಳನ್ನು ಪಡೆಯುವಲ್ಲಿ ವಂಚಿತರಾಗಿದ್ದಾರೆ. ಸರ್ಕಾರದ ಆದೇಶದಂತೆ ಕನಿಷ್ಠ ವೇತನ ದಿನಕ್ಕೆ 324 ರೂ ಆಗಿದೆ. ಇವತ್ತಿನ ಬೆಲೆ ಏರಿಕೆಯ ದಿನದಲ್ಲಿ 150-250 ರೂ ಸಂಬಳದಲ್ಲಿ ಜೀವನ ನಡೆಸುವುದದಾದರೂ ಹೇಗೆ?.
ಸತ್ ಮೇಲೆ ಎಲ್ರೂ ಒಳ್ಳೆಯವ್ರೆ ಅನ್ನೋದು ಈಗಿನ ಮಾಧ್ಯಮಗಳ ಮೂಢನಂಬಿಕೆ.. ಒಳಹೊಕ್ಕು ನೋಡೋ ದರ್ದು ಯಾರ್ಗೂ ಇಲ್ಲ..
Where did you do this research? . Which era are you living in. 20-30 RS is insane. The normal amount is 200-250 days per day. So get to some real research journalism. Don’t write fake articles. This isn’t truth India this is lame reporting.
ಇವೆಲ್ಲವೂ ಕೂಡ ಬಹು ಮುಖ್ಯ ಸಂಗತಿಗಳು..