ಹೆಸರಾಂತ ಪತ್ರಕರ್ತ ರವೀಶ್ ಕುಮಾರ್ ಅವರು 2019ರ ಸಾಲಿನ ಪ್ರತಿಷ್ಠಿತ ರಾಮೋನ್ ಮ್ಯಾಗ್ಸೆಸೆ ಪ್ರಶಸ್ತಿಗೆ ಭಾಜನರಾಗಿದ್ದಾರೆ. “ಧ್ವನಿ ಇಲ್ಲದವರಿಗೆ ಧ್ವನಿ ನೀಡಲು ಪತ್ರಿಕೋದ್ಯಮವನ್ನು ಸಾಧನವಾಗಿ ಬಳಸಿಕೊಂಡ” ಕಾರಣಕ್ಕೆ ಅವರಿಗೆ ಈ ಪ್ರಶಸ್ತಿ ನೀಡಲಾಗಿದೆ ಎಂದು ಮ್ಯಾಗ್ಸೆಸೆ ಫೌಂಡೇಶನ್ ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಏಶಿಯಾದ ನೊಬೆಲ್ ಎಂದೇ ಹೆಸರಾಗಿರುವ ಈ ಪ್ರಶಸ್ತಿಗೆ ರವೀಶ್ ಕುಮಾರ್ ಅವರಲ್ಲದೇ ಮ್ಯಾನ್ಮಾರ್, ಥೈಲ್ಯಾಂಡ್, ಫಿಲಿಪ್ಪೀನ್ಸ್ ಮತ್ತು ದಕ್ಷಿಣ ಕೊರಿಯಾದ ಒಬ್ಬೊಬ್ಬ ಸಾಧಕರನ್ನು ಆಯ್ಕೆ ಮಾಡಲಾಗಿದೆ.
“ರವೀಶ್ ಕುಮಾರ್ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡುವಲ್ಲಿ ಟ್ರಸ್ಟಿಗಳ ಮಂಡಳಿಯು ರವೀಶ್ ಅವರು ಅತ್ಯುನ್ನತ ಗುಣಮಟ್ಟದ ವೃತ್ತಿಪರ ಹಾಗೂ ನೈತಿಕ ಪತ್ರಿಕೋದ್ಯಮಕ್ಕೆ ಹೊಂದಿರುವ ಬದ್ಧತೆಯನ್ನು; ಸತ್ಯ ಹೇಳುವಲ್ಲಿ ಅವರಿಗಿರುವ ನೈತಿಕ ಧೈರ್ಯ, ಸಮಗ್ರ ಮತ್ತು ಸ್ವತಂತ್ರ ಮನೋಭಾವಗಳನ್ನು; ಇವುಗಳೊಂದಿಗೆ ದನಿಯಿಲ್ಲದ ಜನರಿಗೆ ಗೌರವಯುತ ದನಿ ನೀಡುವುದರಲ್ಲಿ ಹಾಗೂ ಅಧಿಕಾರಸ್ತರ ಕುರಿತು ನಿರ್ಭಿಡೆಯಿಂದ ಮಾತನಾಡುವ ಛಾತಿ ತೋರುವ ಮೂಲಕವೇ ಪತ್ರಿಕೋದ್ಯಮವು ಪ್ರಜಾಪ್ರಭುತ್ವವನ್ನು ಮುನ್ನಡೆಸುವಲ್ಲಿ ತನ್ನ ಗುರಿಯನ್ನು ಈಡೇರಿಸಲು ಸಾಧ್ಯ ಎಂಬ ರವೀಶ್ ಅವರ ತತ್ವನಿಷ್ಟ ನಂಬಿಕೆ”ಯನ್ನು ಪರಿಗಣಿಸಲಾಗಿದೆ ಎಂದು ತಿಳಿಸಿದೆ.
NDTVಯಲ್ಲಿ ರವೀಶ್ ಕುಮಾರ್ ನಡೆಸಿ ಕೊಡುವ ಸುದ್ದಿ ಕಾರ್ಯಕ್ರಮವಾದ “ಪ್ರೈಮ್ ಟೈಮ್” ಕಾರ್ಯಕ್ರಮವನ್ನು ಉಲ್ಲೇಖಿಸಿರುವ ಮ್ಯಾಗ್ಸೆಸೆ ಫೌಂಡೇಶನ್ ಈ ಕಾರ್ಯಕ್ರಮವು ನಿಜ-ಜೀವನವನ್ನು ಕುರಿತು ಹಾಗೂ ಅಷ್ಟಾಗಿ ವರದಿಯಾಗದ ಸಾಮಾನ್ಯ ಜನರ ಸಮಸ್ಯೆಗಳ ಕುರಿತು ಮಾತನಾಡುತ್ತದೆ” ಎಂದು ತಿಳಿಸಿದೆ. “ನೀವು ಜನರ ಧ್ವನಿಯಾಗಿದ್ದೀರಿ ಎಂದರೆ ನೀವೊಬ್ಬ ಪತ್ರಕರ್ತರಾಗಿದ್ದೀರಿ” ಎಂದೂ ಪ್ರಶಸ್ತಿ ಸಮಿತಿ ಹೇಳಿದೆ.
"Sober, incisive and well informed": Ramon Magsaysay award winner Ravish Kumar's citation says. #RavishKumar #2019RamonMagsaysayaward #RamonMagsaysayAward pic.twitter.com/Vl0WWqwlAs
— NDTV (@ndtv) August 2, 2019
ರವೀಶ್ ಕುಮಾರ್ ಯಾರು?
ಬಿಹಾರ ರಾಜ್ಯದ ಜಿತ್ವಾರ್ಪುರದಲ್ಲಿ ಹುಟ್ಟಿ ಬೆಳೆದ ರವೀಶ್ ಕುಮಾರ್ ದೆಹಲಿ ವಿಶ್ವವಿದ್ಯಾಲಯದಲ್ಲಿ ಇತಿಹಾಸ ಮತ್ತು ಸಾರ್ವಜನಿಕ ವ್ಯವಹಾರಗಳ ಅಧ್ಯಯನ ನಡೆಸಿದ್ದರು. 1996ರಿಂದಲೂ NDTVಯಲ್ಲಿ ಕೆಲಸ ಮಾಡುತ್ತಿರುವ ಅವರು 2014ರಲ್ಲಿ ಮೋದಿ ನೇತೃತ್ವದ ಎನ್ ಡಿ ಎ ಸರ್ಕಾರ ಅಧಿಕಾರಕ್ಕೆ ಬಂದ ನಂತರದಲ್ಲಿ ಹೆಚ್ಚು ಚಿರಪರಿಚಿತರಾದರು. ಮೋದಿ ಸರ್ಕಾರದಲ್ಲಿ ಹೊಡಿಬಡಿ ಗುಂಪುಗಳ ಹಲ್ಲೆ, ದೌರ್ಜನ್ಯ, ದೈಹಿಕ ಮಾನಸಿಕ ದಬ್ಬಾಳಿಕೆಗಳು ಹೆಚ್ಚತೊಡಗಿದಂತೆ ಅವುಗಳ ಕುರಿತು ಮಾತನಾಡುವ ಧೈರ್ಯ ತೋರಿದವರಲ್ಲಿ ರವೀಶ್ ಕುಮಾರ್ ಪ್ರಮುಖರು. ಈ ಕಾರಣದಿಂದಾಗಿಯೇ ಅವರ ಮೇಲೆ ದಿನನಿತ್ಯ ಜೀವ ಬೆದರಿಕೆ ಕರೆಗಳು ಬರಲಾರಂಭಿಸಿದವು, ಕೆಲವೊಮ್ಮೆ ದೈಹಿಕ ಹಲ್ಲೆಗಳೂ ನಡೆದವು, ವಾಟ್ಸಾಪ್ ಫೇಸ್ಬುಕ್ ಗಳಲ್ಲಿ ಅವ್ಯಾಹತ ದಾಳಿಗಳು ಅವರ ಮೇಲೆ ನಡೆದವಲ್ಲದೇ, ಅವರ ವೈಯಕ್ತಿಕ ಫೋನ್ ನಂಬರ್ ಸಾರ್ವಜನಿಕಗೊಳಿಸಿ ಬೆದರಿಕೆ ಒಡ್ಡುವಂತೆ ತಿಳಿಸಲಾಗಿತ್ತು. ಇದೆಲ್ಲವನ್ನೂ ಎದುರಿಸಿ ನಿಂತಿರುವ ರವೀಶ್ ಕುಮಾರ್ ಪ್ರಧಾನಿ ಮೋದಿಯವರಿಗೆ ಬರೆದಿದ್ದ ಬಹಿರಂಗ ಪತ್ರವೊಂದು ಜನಪ್ರಿಯವಾಗಿತ್ತು. ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಾದ ನಂತರದಲ್ಲಿ ಪ್ರಧಾನಿ ಮೋದಿಯವರಿಂದ ಟ್ವಿಟರ್ ನಲ್ಲಿ ಅನುಸರಿಸಲ್ಪಡುವ ಕೆಲವರು ಗೌರಿ ಲಂಕೇಶ್ ಕುರಿತು ಬಳಸಿದ ಅವಾಚ್ಯ ಶಬ್ದಗಳು ಮತ್ತು ಆಡಿತ ಮಾತುಗಳಿಂದ ತೀವ್ರ ನೊಂದಿದ್ದ ರವೀಶ್ ಕುಮಾರ್ ಈ ಕುರಿತು ಮೋದಿಯವರನ್ನು ತರಾಟೆಗೆ ತೆಗೆದುಕೊಂಡಿದ್ದರು.
c
ರವೀಶ್ ಕುಮಾರ್ ಭಾರತದ ಸಮಕಾಲೀನ ಸವಾಲುಗಳು, ಪ್ರಜಾಪ್ರಭುತ್ವ ಮತ್ತು ಸಂಸ್ಕೃತಿಗಳ ಕುರಿತು ಬರೆದಿರುವ “ಫ್ರೀ ವಾಯ್ಸ್” ಎಂಬ ಕೃತಿಯು “ಮಾತಿಗೆ ಏನು ಕಡಿಮೆ?” ಎಂಬ ಹೆಸರಿನಲ್ಲಿ ಕನ್ನಡಕ್ಕೆ ಅನುವಾದಗೊಂಡಿದ್ದು ಅಹರ್ನಿಶಿ ಪ್ರಕಾಶನ ಇದನ್ನು ಪ್ರಕಟಿಸಿದೆ.
ಮ್ಯಾಗ್ಸೇಸೆ ಪ್ರಶಸ್ತಿಯ ಹಿನ್ನೆಲೆ
ಫಿಲಿಪ್ಪೀನ್ಸ್ ದೇಶದ 3ನೇ ರಾಷ್ಟ್ರಾಧ್ಯಕ್ಷ ರಾಮೋನ್ ಎಫ್ ಮ್ಯಾಗ್ಸೇಸ್ ಅವರ ಹೆಸರಿನಲ್ಲಿ 1957ರಲ್ಲಿ ರಾಮೋನ್ ಮ್ಯಾಗ್ಸೆಸೆ ಪ್ರಶಸ್ತಿಯನ್ನು ಸ್ಥಾಪಿಸಲಾಯಿತು. ಅಮೆರಿಕದ ರಾಕ್ಫೆಲ್ಲರ್ ಉದ್ದಿಮೆಪತಿ ಸಹೋದರರು ಹಾಗೂ ಫಿಲಿಪ್ಪೀನ್ಸ್ ಸರ್ಕಾರದ ಜಂಟಿ ಸಹಯೋಗದಲ್ಲಿ ಇದು ಸ್ಥಾಪನೆಗೊಂಡಿತ್ತು. ಪ್ರಜಾಪ್ರಭುತ್ವ ದೇಶವೊಂದರಲ್ಲಿ ಆಡಳಿತದಲ್ಲಿ ಬದ್ಧತೆ ತೋರಿದವರಿಗೆ, ಜನರಿಗೆ ಸೇವೆ ಸಲ್ಲಿಸುವಲ್ಲಿ ವಿಶೇಶ ಛಾತಿ ತೋರಿದವರಿಗೆ ಹಾಗೂ ಪ್ರಾಯೋಗಿಕ ಆದರ್ಶವಾದದ ಮೂಲಕ ವಿಶೇಶ ಸಾಧನೆ ಮಾಡಿವರಿಗೆ ಪ್ರತಿವರ್ಷ ಈ ಪ್ರಶಸ್ತಿ ನೀಡಲಾಗುತ್ತದೆ. ಏಷ್ಯಾ ಖಂಡದಲ್ಲಿ ವ್ಯಕ್ತಿಗಳಿಗೆ ಮತ್ತು ಸಂಘಟನೆಗಳಿಗೆ ನೀಡುವ ಮ್ಯಾಗ್ಸೆಸೆ ಪ್ರಶಸ್ತಿಯನ್ನು ಏಷಿಯಾದ ಅತ್ಯುನ್ನತ ನಾಗರಿಕ ಪುರಸ್ಕಾರ ಎಂದು ಪರಿಗಣಿಸಲಾಗಿದೆ. ಫಲಕ, ನಗದು ಬಹುಮಾನ ಹಾಗೂ ಪಶಸ್ತಿ ಪತ್ರಗಳನ್ನು ಇದು ಒಳಗೊಂಡಿರುತ್ತದೆ.
ಈ ಹಿಂದೆ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ಕರ್ನಾಟಕದ ಹೆಗ್ಗೋಡಿನ ನೀನಾಸಂ ಸಂಸ್ಥೆಯ ಕೆ ವಿ ಸುಬ್ಬಣ್ಣನವರು ಹಾಗೂ ಅನಿಷ್ಟ ಮಲ ಹೊರುವ ಪದ್ಧತಿ ವಿರುದ್ಧ ಸಫಾಯಿ ಕರ್ಮಚಾರಿಗಳನ್ನು ರಾಷ್ಟ್ರಮಟ್ಟದಲ್ಲಿ ಸಂಘಟಿಸಿ ಹೋರಾಡುತ್ತಿರುವ ಕೋಲಾರದ ಬೆಜವಾಡ ವಿಲ್ಸನ್ ಅವರು ಈ ಪ್ರಶಸ್ತಿಗೆ ಭಾಜನರಾಗಿರುವ ಕನ್ನಡಿಗರಾಗಿದ್ದಾರೆ. ದೇಶದ ಮಟ್ಟದಲ್ಲಿ ಖ್ಯಾತ ಪತ್ರಕರ್ತ ಪಿ ಸಾಯಿನಾಥ್, ಇಂಡಿಯನ್ ಎಕ್ಸ್ಪ್ರೆಸ್ನಲ್ಲಿದ್ದ ಅರುಣ್ ಶೌರಿ (ನಂತರ ವಾಜಪೇಯಿ ಸರ್ಕಾರದಲ್ಲಿ ಸಚಿವರಾಗಿದ್ದರು) ಈ ಪ್ರಶಸ್ತಿ ಪಡೆದ ಭಾರತೀಯ ಪತ್ರಕರ್ತರು.
ಪತ್ರಕರ್ತ ರವೀಶ್ ಕುಮಾರ್ ಅವರು ಪ್ರತಿಷ್ಟಿತ ರಾಮೋನ್ ಮ್ಯಾಗ್ಸೆಸೆ ಪ್ರಶಸ್ತಿಗೆ ಆಯ್ಕೆ ಆಗಿರುವ ಹಿನ್ನೆಲೆಯಲ್ಲಿ ದೇಶದ ಹಲವು ಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ.
Delighted to hear the great news of Ravish Kumar being announced 2019 Ramon Magsaysay award.
I welcome Ravish to the club of Magsaysay awardees and hope to see his brave journalism go from strength to strength in these difficult times.
Many congratulations my friend
Well done— Arvind Kejriwal (@ArvindKejriwal) August 2, 2019
Breaking news this morning: NDTV’s @ravishndtv to receive the Ramon Magsaysay award for journalism.. a tribute to his courageous spirit and unique story telling.. many many congrats to a friend and former colleague..
— Rajdeep Sardesai (@sardesairajdeep) August 2, 2019
k