ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ‘ದೇಶಕ್ಕಾಗಿ ಮೋದಿ, ಮೋದಿಗಾಗಿ ನಾವು’ ಎಂಬ ಒಕ್ಕೊರಲ ಕೋರಸ್ ನಿಧಾನಕ್ಕೆ ಮೆತ್ತಗಾಗತೊಡಗಿದೆ. ಅದರಲ್ಲೂ ಚುನಾವಣೆ ಮತ್ತು ಆ ಮುನ್ನ ಭರ್ಜರಿ ಜೋಶ್ನಲ್ಲಿ ಕೋರಸ್ ಹೇಳುತ್ತಿದ್ದ ದೇಶದ ಕಾರ್ಪೊರೇಟ್ ಉದ್ಯಮ ವಲಯದಲ್ಲಿ ಪ್ರಭುತ್ವದ ಕಿವಿಗೆ ಇಂಪಾದ ಆ ಕೋರಸ್ಸಿನ ಬದಲು ನಿಧಾನಕ್ಕೆ ಅಪಸ್ವರ ಕೇಳಿಬರತೊಡಗಿದೆ. ಆದರೆ, ನಮ್ಮ ಎಲೆಕ್ಟ್ರಾನಿಕ್ ಮಾಧ್ಯಮವೂ ಸೇರಿದಂತೆ ಬಹುತೇಕ ಮುಖ್ಯವಾಹಿನಿ ಮಾಧ್ಯಮಗಳಲ್ಲಿ ಮಾತ್ರ ಮೋದಿ ಭಜನೆ ಅನೂಚಾನವಾಗಿ ಮುಂದುವರಿದಿದೆ!
ಒಂದು ಕಡೆ ದಿನದಿಂದ ದಿನಕ್ಕೆ ಪ್ರಪಾತಕ್ಕೆ ಕುಸಿಯುತ್ತಿರುವ ಷೇರುಪೇಟೆ, ವಿದೇಶಿ ಬಂಡವಾಳ ಹಿಂತೆಗೆತ, ಮಾರಾಟ ಕುಸಿತ ಮತ್ತಿತರ ಕಾರಣಗಳಿಂದಾಗಿ ದೇಶದ ಉದ್ಯಮ ವಲಯ ತಲೆ ಮೇಲೆ ಕೈಹೊತ್ತು ಕೂತಿದ್ದರೆ, ಮತ್ತೊಂದು ಕಡೆ ದೇಶದ ಅರ್ಥವ್ಯವಸ್ಥೆಯನ್ನು ಸರಿದಾರಿಗೆ ತರುವ ನಿಟ್ಟಿನಲ್ಲಿ ಗಂಭೀರ ಪ್ರಯತ್ನ ಮಾಡುವ ಬದಲಾಗಿ, ಪ್ರಧಾನಿ ಮೋದಿ ಮತ್ತು ಅವರ ಸರ್ಕಾರ ಮಾಹಿತಿ ಹಕ್ಕು ಕಾಯ್ದೆ, ಭಯೋತ್ಪಾದನೆ ನಿಗ್ರಹ ಕಾಯ್ದೆ, ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಾಯ್ದೆ ಸೇರಿದಂತೆ ನಿರ್ಣಾಯಕ ಕಾಯ್ದೆ-ಕಾನೂನು ತಿದ್ದುಪಡಿಯ ಮೂಲಕ ಕೇಸರೀಕರಣದ ಅಜೆಂಡಾ ಹೇರಿಕೆಯ ದಾರಿಗಳನ್ನು ಸುಗಮಗೊಳಿಸಿಕೊಳ್ಳುವುದರಲ್ಲಿ ಮುಳುಗಿದ್ದಾರೆ.
ಅವರ ‘ಹಿಂದೂ ರಾಷ್ಟ್ರ ನಿರ್ಮಾಣ’ದ ಹುಸಿ ಕನಸಿನ ರಾಗಕ್ಕೆ ದೇಶದ ಬಹುಪಾಲು ಮಾಧ್ಯಮಗಳು ಕೂಡ ಎಂದಿನಂತೆ ಕೋರಸ್ ಹಾಡುತ್ತಿವೆ. ಕನಿಷ್ಠ ಮಾಹಿತಿ ಹಕ್ಕು ಕಾಯ್ದೆ, ಭಯೋತ್ಪಾದನಾ ನಿಗ್ರಹ ಕಾಯ್ದೆಯಂತಹ ವಿಷಯದಲ್ಲಿ ಕೂಡ ಸರ್ಕಾರದ ನಡೆಯ ಭವಿಷ್ಯದ ಅಪಾಯಗಳ ಬಗ್ಗೆ ತುಟಿಬಿಚ್ಚುತ್ತಿಲ್ಲ. ಅಷ್ಟೇ ಅಲ್ಲ; ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಈ ತಿದ್ದುಪಡಿಗಳ ಬಗ್ಗೆ ಪ್ರತಿಪಕ್ಷಗಳು ಎತ್ತಿರುವ ಪ್ರಶ್ನೆ, ನಡೆದ ಚರ್ಚೆಯ ಬಗ್ಗೆ ಕೂಡ ಮಾಧ್ಯಮಗಳು ಬಹುತೇಕ ಜಾಣಕುರುಡು ಪ್ರದರ್ಶಿಸುತ್ತಿವೆ ಮತ್ತು ಆ ಮೂಲಕ ಮೋದಿ ಮತ್ತು ಅಮಿತ್ ಶಾ ಜೋಡಿಯ ಕ್ರಮಗಳಿಗೆ ಜೈ ಹೇಳುತ್ತಿವೆ.
ಯಾರದೋ ದುಡ್ಡಿನಲ್ಲಿ ಸಂಬಳ ಪಡೆದು ಧಣಿಗಳ ಮೆಚ್ಚಿಸಲೋ, ಪ್ರಶಸ್ತಿ- ಪುರಸ್ಕಾರ, ಸ್ಥಾನ-ಮಾನಗಳ ಆಮಿಷಕ್ಕೋ, ಸಿದ್ಧಾಂತ, ವಾದಗಳ ಅಮಲಿಗೋ ಮಾಧ್ಯಮದ ಮಂದಿ ಕೋರಸ್ ಹಾಡಬಹುದು. ಆದರೆ, ಸಾವಿರಾರು ಕೋಟಿ ಬಂಡವಾಳ ಹೂಡಿ ಕೈಸುಟ್ಟುಕೊಳ್ಳುತ್ತಿರುವ ಮಂದಿ ಎಷ್ಟು ದಿನ ತಾನೆ ತಾಳತಟ್ಟಲು ಸಾಧ್ಯ? ತೀರಾ ಸುಟ್ಟು ಕರಕಲಾದ ಕೈಗುಳ್ಳೆಗಳು ಒಡೆದು ಕೊಳೆಯತೊಡಗಿದಾಗಲಾದರೂ ಅವರು ಭಜನೆಯನ್ನು ನಿಲ್ಲಿಸಿ ಅಪಸ್ವರದ ದನಿ ಹೊರಡಿಸಲೇಬೇಕಲ್ಲವೇ?
ಈಗ ದೇಶದ ಉದ್ಯಮ ವಲಯದಲ್ಲಿ ಕೇಳಿಬರುತ್ತಿರುವುದು ಕೂಡ ಅದೇ ಅಪಸ್ವರದ ಆರ್ತನಾದವೇ. ಮುಖ್ಯವಾಗಿ ಬ್ಯಾಂಕಿಂಗ್ ವಲಯದ ಬಳಿಕ ಆಟೋಮೊಬೈಲ್, ನಿರ್ಮಾಣ(ರಿಯಾಲ್ಟಿ) ಮತ್ತು ಬ್ಯಾಂಕೇತರ ಹಣಕಾಸು ವಲಯ ಸೇರಿದಂತೆ ದೇಶದ ಒಂದೊಂದೇ ಉತ್ಪಾದನಾ ಮತ್ತು ಸೇವಾ ವಲಯಗಳು ಹಿಂದೆಂದೂ ಕಾಣದ ಪ್ರಮಾಣದ ಕುಸಿತವನ್ನು ಕಾಣತೊಡಗಿದಂತೆ ಇನ್ನೊಂದೆಡೆ ಷೇರು ಮಾರುಕಟ್ಟೆ ಕೂಡ ಪ್ರಪಾತಕ್ಕೆ ಕುಸಿಯತೊಡಗಿದೆ. ಈ ಪೆಟ್ಟುಗಳು ಎಷ್ಟು ಬಿಸಿ ಮುಟ್ಟಿಸಿವೆ ಎಂದರೆ, ಇಷ್ಟು ದಿನ ಮೋದಿಯವರ ಭಜನೆಯಲ್ಲಿ ಮೈಮರೆತಿದ್ದ ದೇಶದ ಕಾರ್ಪೊರೇಟ್ ವಲಯ ಇದೀಗ ತಣ್ಣೀರು ಸೋಕಿದಂತೆ ಬೆಚ್ಚಿಬಿದ್ದಿದೆ.
ಅದಕ್ಕೆ ತಾಜಾ ಉದಾಹರಣೆ; ಡಾ ಮೋಹನ್ ದಾಸ್ ಪೈ. ಇತ್ತೀಚಿನ ವರ್ಷಗಳಲ್ಲಿ ಬಿಜೆಪಿಯ ವಕ್ತಾರರಿಗಿಂತ ಒಂದು ಕೈ ಜಾಸ್ತಿಯೇ ಎಂಬಷ್ಟು ಮೋದಿ ಅವರ ಆಡಳಿತವನ್ನು ಸಮರ್ಥಿಸಿಕೊಳ್ಳುತ್ತಿದ್ದ, ಅಸಹಿಷ್ಣುತೆ, ಕೋಮುವಾದ, ಪ್ರಜಾಪ್ರಭುತ್ವಕ್ಕೆ ಅಪಾಯ ಎಂಬ ಮಾತುಗಳು ಕೇಳಿಬಂದಾಗೆಲ್ಲಾ ಸರ್ಕಾರದ ಟೀಕಾಕಾರರ ವಿರುದ್ಧ ದೊಡ್ಡ ದೊಡ್ಡ ಟೀಕಾಸ್ತ್ರಗಳನ್ನು ಪ್ರಯೋಗಿಸುವ ಮೂಲಕವೇ ಸುದ್ದಿಯಲ್ಲಿದ್ದ ಪೈ, ಇದೀಗ ಟ್ಯಾಕ್ಸ್ ಟೆರರಿಸಂ ಬಗ್ಗೆ ಆಕ್ರೋಶದ ಮಾತನಾಡತೊಡಗಿದ್ದಾರೆ. ತೆರಿಗೆ ಅಧಿಕಾರಿಗಳ ಕಿರುಕುಳದಿಂದ ಬೇಸತ್ತು ತಾವು ಜೀವ ತೆಗೆದುಕೊಳ್ಳುತ್ತಿರುವುದಾಗಿ ಡೆತ್ ನೋಟ್ ಬರೆದಿದ್ದು ಸಾವಿಗೆ ಶರಣಾದ ಕೆಫೆ ಕಾಫಿ ಡೇ ಬಹುಕೋಟಿ ಉದ್ಯಮದ ಮಾಲೀಕ ಸಿದ್ಧಾರ್ಥ ಪ್ರಕರಣದ ಬಳಿಕ ಪೈ ‘ದ ಕ್ವಿಂಟ್’ ವೆಬ್ ಮಾಧ್ಯಮಕ್ಕೆ ನೀಡಿರುವ ಸಂದರ್ಶನದಲ್ಲಿ ಮೋದಿ ಸರ್ಕಾರದ ತೆರಿಗೆ ನೀತಿಯ ವಿರುದ್ಧ ಹರಿಹಾಯ್ದಿದ್ದಾರೆ.
ಪೈ ಬೆನಲ್ಲೇ ಇನ್ನೂ ಕೆಲವು ಪ್ರಮುಖ ಕಂಪನಿಗಳ ಸಿಇಒ ಮತ್ತು ಮುಖ್ಯಸ್ಥರುಗಳು ತೆರಿಗೆ ಭಯೋತ್ಪಾದನೆ ಮತ್ತು ಆರ್ಥಿಕ ಕುರಿತದ ಬಗ್ಗೆ ಮಾತನಾಡಿದ್ದಾರೆ. ಅವರಲ್ಲಿ ಪ್ರಮುಖವಾಗಿ ಎಲ್ ಅಂಡ್ ಟಿಯ ಮುಖ್ಯಸ್ಥ ಎ ಎಂ ನಾಯಕ್ ಕೂಡ ಒಬ್ಬರು. ಕಠಿಣವಾಗುತ್ತಿರುವ ಆರ್ಥಿಕ ಪರಿಸ್ಥಿತಿಯ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಅವರು, “ಪರಿಸ್ಥಿತಿ ತೀರಾ ಸವಾಲಿನದ್ದಾಗಿದೆ” ಎಂದಿದ್ದಾರೆ. ಜೊತೆಗೆ, ಈ ಬಾರಿಯ ಜಿಡಿಪಿ ದರ ಶೇ.7ಕ್ಕೂ ಅಧಿಕವಾಗಲಿದೆ ಎಂದು ಸರ್ಕಾರ ಹೇಳುತ್ತಿದ್ದರೂ, ವಾಸ್ತವವಾಗಿ ಅದನ್ನು ಶೇ.6.5ರಷ್ಟು ಇರುವಂತೆ ನೋಡಿಕೊಂಡರೆ ಅದೇ ದೊಡ್ಡ ಸಾಧನೆ” ಎಂದೂ ಅವರು ಜಿಡಿಪಿ ವಿಷಯದಲ್ಲಿ ಸರ್ಕಾರದ ಹೇಳಿಕೆಗಳಿಗೂ ದೇಶ ಎದುರಿಸುತ್ತಿರುವ ಅಪಾಯಕಾರಿ ಕುಸಿತವನ್ನೂ ಸೂಚ್ಯವಾಗಿ ಹೇಳಿದ್ದಾರೆ.
ಅವರ ಮಾತಿಗೆ ದನಿಗೂಡಿಸಿರುವ ಎಚ್ ಡಿಎಫ್ ಸಿ ಮುಖ್ಯಸ್ಥ ದೀಪರ್ ಪಾರೇಖ್ ಕೂಡ, ಬಹಳ ಸ್ಪಷ್ಟವಾದ ಆರ್ಥಿಕ ಹಿಂಜರಿಕೆ ಈ ಬಾರಿ ಉಂಟಾಗಿದೆ. ಅದರಲ್ಲೂ ಬ್ಯಾಂಕಿಂಗ್ ಮತ್ತು ಬ್ಯಾಂಕಿಂಗೇತರ ಹಣಕಾಸು ಕಂಪನಿ ಹಾಗೂ ಗೃಹ ನಿರ್ಮಾಣ ಹಣಕಾಸು ಸಂಸ್ಥೆಗಳು ಹಣಕಾಸಿನ ಬಿಕ್ಕಟ್ಟು ಎದುರಿಸುತ್ತಿವೆ. ಬಂಡವಾಳದಾರರಲ್ಲಿ ಬೆಳವಣಿಗೆಯ ವಿಶ್ವಾಸ ಮೂಡಿಸುವ ಕೆಲಸ ಜರೂರಾಗಿ ಆಗಬೇಕಾಗಿದೆ. ಬ್ಯಾಂಕುಗಳು ಸಾಲ ನೀಡಲು ಹಿಂಜರಿಯುತ್ತಿವೆ ಎಂದಿದ್ದಾರೆ.
ಅವರ ಆತಂಕಕ್ಕೆ ಪೂರಕವೆಂಬಂತೆ ಕಳೆದ ಒಂದು ತಿಂಗಳಿನಿಂದ ಷೇರು ಮಾರುಕಟ್ಟೆ ಸತತ ಪತನದ ಹಾದಿಯಲ್ಲೇ ಸಾಗುತ್ತಿದ್ದು, ಇಂಧನ, ಆಟೋಮೊಬೈಲ್, ಉತ್ಪಾದನೆ, ರಿಯಲ್ ಎಸ್ಟೇಟ್, ಮೂಲಸೌಕರ್ಯ, ಬ್ಯಾಂಕಿಂಗ್, ಫಾರ್ಮ್ ಸೇರಿದಂತೆ ಆರ್ಥಿಕತೆಯ ಪ್ರಮುಖ ವಲಯದ ಷೇರುಗಳು ಹೂಡಿಕೆದಾರರಿಗೆ ಭಾರಿ ನಷ್ಟ ತಂದಿದೆ.
ಈ ಆಂತರಿಕ ಆತಂಕಗಳ ನಡುವೆ, ಶುಕ್ರವಾರ ಅಂತಾರಾಷ್ಟ್ರೀಯವಾಗಿಯೂ ಒಂದು ಆಘಾತ ಅಪ್ಪಳಿಸಿದೆ. ಜಾಗತಿಕ ಜಿಡಿಪಿ ದರದಲ್ಲಿ ದೇಶ ಕಳೆದ ವರ್ಷಕ್ಕಿಂತ ಎರಡು ಸ್ಥಾನ ಹಿಂದೆ ಸರಿದಿದ್ದು, ವಿಶ್ವ ಬ್ಯಾಂಕ್ ವರದಿಯ ಪ್ರಕಾರ, ಕಳೆದ ಬಾರಿಯ ಐದನೇ ಸ್ಥಾನದಿಂದ ಭಾರತ, ಈ ಬಾರಿ ಏಳನೇ ಸ್ಥಾನಕ್ಕೆ ಕುಸಿದಿದೆ. ವಿಶ್ವ ಬ್ಯಾಂಕ್ 2018ರ ಜಿಡಿಪಿ ರ್ಯ್ಯಾಂಕಿಂಗ್ ಬಿಡುಗಡೆ ಮಾಡಿದ್ದು, ಅಮೆರಿಕ, ಚೀನಾ, ಜಪಾನ್, ಜರ್ಮನಿ, ಬ್ರಿಟನ್ ಮತ್ತು ಫ್ರಾನ್ಸ್ ಬಳಿಕ ಏಳನೇ ಜಿಡಿಪಿ ರಾಷ್ಟ್ರವಾಗಿದೆ. ಆದರೆ, 2017ರಲ್ಲಿ ಫ್ರಾನ್ಸ್ ಮತ್ತು ಬ್ರಿಟನ್ ಎರಡೂ ದೇಶಗಳನ್ನು ಹಿಂದಿಕ್ಕಿದ್ದ ಭಾರತ, ಜಗತ್ತಿನ ಐದನೇ ಅತಿದೊಡ್ಡ ಜಿಡಿಪಿ ಪ್ರಮಾಣದ ರಾಷ್ಟ್ರವಾಗಿ ಅತಿ ವೇಗದ ಪ್ರಗತಿಯ ಆರ್ಥಿಕ ಶಕ್ತಿಯಾಗಿತ್ತು. ಆದರೆ, ಕೇವಲ ಒಂದೇ ವರ್ಷದಲ್ಲಿ ಎರಡು ಸ್ಥಾನ ಹಿಂದೆ ಸರಿದಿದ್ದು, 2019ರ ಮೊದಲ ತ್ರೈಮಾಸಿಕದಲ್ಲಿ ಜಿಡಿಪಿ ದರ ಇನ್ನಷ್ಟು ಹಿಂಜರಿಕೆ ಕಾಣುವುದು ನಿಶ್ಚಿತ.
ನೋಟು ಅಮಾನ್ಯೀಕರಣ, ಜಿಎಸ್ ಟಿ ದುಬಾರಿ ದರಗಳ ಪರಿಣಾಮಗಳ ಬಗ್ಗೆ ಅಂದು ಪ್ರತಿಪಕ್ಷಗಳಷ್ಟೇ ಅಲ್ಲದೆ, ನೈಜ ಕಾಳಜಿಯ ಅರ್ಥಶಾಸ್ತ್ರಜ್ಞರು, ಸಾಮಾಜಿಕ ಚಿಂತಕರು, ಬೆರಳೆಣಿಕೆಯ ಕೆಲವು ಪತ್ರಕರ್ತರು ಮಾತನಾಡಿದಾಗ, ಅವರನ್ನು ನಿಂದಿಸಿದ್ದು, ದೇಶದ್ರೋಹಿಗಳು ಎಂಬ ಪಟ್ಟ ಕಟ್ಟಿದ್ದ ಸಂದರ್ಭದಲ್ಲಿ ಅಂತಹ ಪ್ರಜಾಸತ್ತೆ ವಿರೋಧಿ ಧೋರಣೆಯ ಬಗ್ಗೆ ದೇಶದ ಕಾರ್ಪೊರೇಟ್ ವಲಯ ತುಟಿ ಬಿಚ್ಚಿರಲಿಲ್ಲ. ಬದಲಾಗಿ ಮೋಹನ್ ದಾಸ್ ಪೈ ಅವರಂತಹವರು ದೇಶದ ಅಭಿವೃದ್ಧಿ ಎಂಬುದು ಮೋದಿಯವರಿಂದ ಮಾತ್ರ ಸಾಧ್ಯ ಎಂಬರ್ಥದ ಮಾತುಗಳನ್ನು ಆಡಿದ್ದಲ್ಲದೆ, ಪ್ರಧಾನಿ ಟೀಕಾಕಾರರ ವಿರುದ್ಧ ವಿವಾದಾತ್ಮಕ ಹೇಳಿಕೆಯನ್ನೂ ನೀಡಿದ್ದರು. ಅದೇ ಇನ್ಫೋಸಿಸ್ ನಾರಾಯಣ ಮೂರ್ತಿ ಅವರು ಕೂಡ ಮೋದಿಯವ ಮೊದಲ ಅವಧಿಯಲ್ಲಿ ಅವರ ಆರ್ಥಿಕ ಮತ್ತು ಸಾಮಾಜಿಕ ನೀತಿಗಳ ಬಗ್ಗೆ ಮಾತನಾಡಿರಲಿಲ್ಲ. ಆದರೆ, ಇದೀಗ ಅವರೂ ತೆರಿಗೆ ನೀತಿ ಮತ್ತು ಅರ್ಥವ್ಯವಸ್ಥೆಯ ನಿರ್ವಹಣೆಯ ವಿಷಯದಲ್ಲಿ ಸರ್ಕಾರದ ವೈಫಲ್ಯಗಳನ್ನು ಬೊಟ್ಟು ಮಾಡುತ್ತಿದ್ದಾರೆ.
ಹೀಗೆ ಒಬ್ಬೊಬ್ಬರಾಗಿ ಕಾರ್ಪೊರೇಟ್ ಕುಳಗಳು ಭಜನೆಯ ವರಸೆಯಿಂದ ಬೇಸತ್ತ ಪರಿಸ್ಥಿತಿಗೆ ಬದಲಾಗುತ್ತಿರುವಾಗ, ದೇಶದ ಅರ್ಥವ್ಯವಸ್ಥೆ ಆಘಾತಕಾರಿ ವೇಗದಲ್ಲಿ ಕುಸಿಯತೊಡಗಿದೆ. ರೂಪಾಯಿ ಮೌಲ್ಯ, ತೆರಿಗೆ ಸಂಗ್ರಹ, ತ್ರೈಮಾಸಿಕ ಜಿಡಿಪಿಗಳಲ್ಲಿ ಭಾರೀ ಕುಸಿತ ಕಂಡುಬಂದಿದ್ದರೆ ಮತ್ತೊಂದೆಡೆ ವಿತ್ತೀಯ ಕೊರತೆಯಲ್ಲಿ ಭಾರೀ ಹೆಚ್ಚಳವಾಗಿದೆ. ಆಟೋಮೊಬೈಲ್ ವಲಯ ಭಾರೀ ಕುಸಿತ ಕಂಡಿದ್ದು, ದೇಶದ ನಂಬರ್ ಒನ್ ಕಾರು ಕಂಪನಿ ಮಾರುತಿ ಸುಜುಕಿ ಮಾರಾಟ ಪ್ರಮಾಣ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.33ರಷ್ಟು ಮಾರಾಟ ಕುಸಿತ ಕಂಡಿದೆ. ಹೋಂಡಾ ಕೂಡ ಶೇ.48ರಷ್ಟು ಮಾರಾಟ ಕುಸಿತ ಕಂಡಿದೆ. ಇನ್ನು ರಿಯಲ್ ಎಸ್ಟೇಟ್, ಬ್ಯಾಂಕಿಂಗ್, ಮೂಲಸೌಕರ್ಯ ಮತ್ತಿತರ ಕ್ಷೇತ್ರಗಳಲ್ಲಿ ಕೂಡ ಪರಿಸ್ಥಿತಿ ಭಿನ್ನವಾಗಿಲ್ಲ. ಈಗಾಗಲೇ ಸಾಲುಸಾಲು ರಿಯಲ್ ಎಸ್ಟೇಟ್ ಕಂಪನಿಗಳು ಮುಚ್ಚಿಕೊಂಡುಹೋಗಿದ್ದು, ಆ ಕಂಪನಿಗಳಲ್ಲಿ ಇದ್ದ ಲಕ್ಷಾಂತರ ಮಂದಿ ನೌಕರರು ಕೆಲಸ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಆಟೋಮೊಬೈಲ್ ಉದ್ಯಮವೊಂದರಲ್ಲೇ ಸುಮಾರು 10 ಲಕ್ಷ ಮಂದಿ ಯಾವುದೇ ಕ್ಷಣದಲ್ಲಿ ಕೆಲಸ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ.
ಇನ್ನು ಕೃಷಿ ವಲಯದಲ್ಲಿಯಂತೂ ಸತತ ಬರದ ಹಿನ್ನೆಲೆಯಲ್ಲಿ ಈ ಬಾರಿ ದೊಡ್ಡ ಮಟ್ಟದ ಸಂಕಷ್ಟ ಎದುರಾಗಲಿದೆ. ಶೇ,50ಕ್ಕಿಂತ ಕಡಿಮೆ ಮಳೆಯಾಗಿರುವ ಹಿನ್ನೆಲೆಯಲ್ಲಿ ಮುಂಗಾರು ಸಂಪೂರ್ಣ ವಿಫಲವಾಗಿದ್ದು, ಮೊದಲೇ ಬಿಕ್ಕಟ್ಟಿನಲ್ಲಿರುವ ಕ್ಷೇತ್ರ ಈ ಬಾರಿ ದೊಡ್ಡ ಪೆಟ್ಟು ತಿನ್ನುವುದು ಬಹುತೇಕ ನಿಶ್ಚಿತ.
ಹೀಗೆ ಇಡೀ ದೇಶದ ಅರ್ಥವ್ಯವಸ್ಥೆಯೇ ತಲೆಕೆಳಗಾಗುವ ಅಪಾಯದಲ್ಲಿದೆ. ಆದರೆ, ಆ ಬಗ್ಗೆ ಕ್ರಮವಹಿಸಬೇಕಾದ ಹಣಕಾಸು ಸಚಿವರಾಗಲೀ, ಸ್ವತಃ ಪ್ರಧಾನಿಯಾಗಲೀ ಈವರೆಗೆ ತಜ್ಞರೊಂದಿಗೆ ಆ ಬಗ್ಗೆ ಗಂಭೀರ ಚರ್ಚೆ ನಡೆಸಿದ, ಕುಸಿತ ತಡೆಯುವ ನಿಟ್ಟಿನಲ್ಲಿ ನೀತಿ ನಿರೂಪಣಾ ಕ್ರಮಗಳನ್ನು ಜಾರಿಗೊಳಿಸಿದ ಬಗ್ಗೆಯಾಗಲೀ ಯಾವುದೇ ಸುದ್ದಿ ಇಲ್ಲ. ಬದಲಾಗಿ ಕಾಶ್ಮೀರದ ಪ್ರವಾಸಿಗಳನ್ನು ವಾಪಸು ಕರೆಸಿ ಅಲ್ಲಿ ಮತ್ತೊಂದು ಸರ್ಜಿಕಲ್ ಸ್ಟ್ರೈಕ್ ಗೆ ಸಿದ್ಧತೆ ನಡೆಸುತ್ತಿರುವ ವರದಿಗಳಿವೆ. ಆ ಮೂಲಕ ಮತ್ತೊಮ್ಮೆ ಪಾಕಿಸ್ತಾನದ ದ್ವೇಷದ ಮೂಲಕ ದೇಶದೊಳಗೆ ದೇಶಭಕ್ತಿಯ ಅಮಲು ಉದ್ದೀಪಿಸಿ ನಿತ್ಯ ಬದುಕಿನ ಅಸಲೀ ಸಮಸ್ಯೆಗಳಿಂದ ಜನರ ಗಮನ ಬೇರೆಡೆ ತಿರುಗಿಸುವ ಪ್ರಯತ್ನಗಳು ಬಿರುಸುಗೊಂಡಿವೆ ಎನ್ನಲಾಗುತ್ತಿದೆ. ಹಾಗಾಗಿ ದುಡಿಯುವ ಕೈಗೆ ನೌಕರಿ, ಉಣ್ಣುವ ಹೊಟ್ಟೆಗೆ ಅನ್ನ ಸಿಗದೇ ಇದ್ದರೂ ಮತ್ತೆ ‘ದೇಶಕ್ಕಾಗಿ ಮೋದಿ, ಮೋದಿಗಾಗಿ ನಾವು’ ಎಂಬ ಭಾವನಾತ್ಮಕ ಭಜನೆ ಕಾವೇರುವ ಸೂಚನೆ ಇದೆ.