ರಾಜ್ಯದ ಉತ್ತರ ಭಾಗದಲ್ಲಿ ವಿವಿಧ ಜಲಾಶಯಗಳ ನೀರು ಸೃಷ್ಟಿಸಿದ ಪ್ರವಾಹ ಒಂದು ಕಡೆಯಾದರೆ, ಮಲೆನಾಡು ಮತ್ತು ಕರಾವಳಿಯಲ್ಲಿ ಕಂಡುಕೇಳರಿಯದ ಪ್ರಮಾಣದ ಭೀಕರ ಮಳೆ ಸೃಷ್ಟಿಸಿದ ಸಾಲು ಸಾಲು ಅನಾಹುತಗಳು ಮತ್ತೊಂದು ಕಡೆ. ಶಿವಮೊಗ್ಗ, ಉತ್ತರಕನ್ನಡ, ಚಿಕ್ಕಮಗಳೂರು, ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಅತಿವೃಷ್ಟಿಯ ಅನಾಹುತಗಳು ಹೆಚ್ಚಿದ್ದರೂ, ಮುಖ್ಯವಾಗಿ ಉತ್ತರಕನ್ನಡ ಮತ್ತು ಶಿವಮೊಗ್ಗ ತತ್ತರಿಸಿಹೋಗಿವೆ.
ಸರಿಸುಮಾರು ಅರ್ಧ ಶತಮಾನದ ಅವಧಿಯಲ್ಲಿ ಕಂಡಿರದ ಪ್ರಮಾಣದಲ್ಲಿ ತುಂಗಾ ನದಿ ಉಕ್ಕೇರಿದ ಹಿನ್ನೆಲೆಯಲ್ಲಿ ಅರ್ಧ ಶಿವಮೊಗ್ಗ ನಗರವೇ ಜಲಾವೃತವಾಗಿದೆ. ಜಿಲ್ಲೆಯ ಹೊಸನಗರ, ತೀರ್ಥಹಳ್ಳಿ, ಸಾಗರ ಮತ್ತು ಸೊರಬ ತಾಲೂಕುಗಳಲ್ಲಿ ಭಾರೀ ಹಾನಿ ಸಂಭವಿಸಿದ್ದು ಸಾವಿರಾರು ಎಕರೆ ಬೆಳೆ ಜಲಸಮಾಧಿಯಾಗಿದೆ. ಅಪಾರ ಪ್ರಮಾಣದ ಖಾಸಗಿ ಮತ್ತು ಸಾರ್ವಜನಿಕ ಆಸ್ತಿ; ಮನೆಮಠ, ರಸ್ತೆ, ಸೇತುವೆಗಳು ಕುಸಿದುಬಿದ್ದಿವೆ. ಶಿವಮೊಗ್ಗ, ಭದ್ರಾವತಿ, ಶಿಕಾರಿಪುರದಲ್ಲಿ ಕೂಡ ಸಾಕಷ್ಟು ಹಾನಿ ಸಂಭವಿಸಿದೆ.
ಈ ಪ್ರವಾಹ ಮತ್ತು ಮಹಾ ಮಳೆಯ ಹಾನಿ, ಅನಾಹುತ, ಸಂತ್ರಸ್ತರ ಸಂಕಟ, ಸಂಕಷ್ಟಗಳ ಜೊತೆಗೇ ನಮ್ಮ ವ್ಯವಸ್ಥೆ ಮತ್ತು ರಾಜಕೀಯ ನಾಯಕರ ಹಲವು ಮುಖಗಳನ್ನೂ ಬೆತ್ತಲುಮಾಡಿದೆ. ಒಂದು ಕಡೆ ನೀರಿನಲ್ಲಿ ಸಿಲುಕಿದ ಜನರನ್ನು ಪ್ರಾಣ ಒತ್ತೆ ಇಟ್ಟು ರಕ್ಷಿಸಿದ, ಜನರಿಗೆ ಆಶ್ರಯ ನೀಡಿದ, ನೀರು, ಊಟ-ತಿಂಡಿ ನೀಡಿದ ಮಾನವೀಯ ಮುಖಗಳಾದರೆ, ಮತ್ತೊಂದು ಕಡೆ ಪ್ರವಾಹದಂತಹ ವಿಪತ್ತಿನ ಹೊತ್ತಲ್ಲೂ ಪ್ರಚಾರ, ರಾಜಕಾರಣ ಮತ್ತು ಸ್ವಾರ್ಥದ ನೀಚತನ ಮೆರೆದ ಮುಖಗಳು.
ಶಿವಮೊಗ್ಗದ ಹಿಂದಿನ ಅಂಗಳಯ್ಯನ ಕೆರೆ ಪ್ರದೇಶವಾದ ಬಾಪೂಜಿನಗರ ಭಾಗದಲ್ಲಿ ರಾಜಕಾಲುವೆಯ ನೀರು ನುಗ್ಗಿ ಹಲವು ಮನೆಗಳು ಜಲಾವೃತವಾಗಿದ್ದವು. ಬಹುತೇಕ ದುಡಿಯುವ ವರ್ಗದ ಹಿಂದೂ ಮತ್ತು ಮುಸ್ಲಿಂ ಎರಡೂ ಸಮುದಾಯದ ಜನ ನೆರೆಹೊರೆಯವರಾಗಿ ಇರುವ ಈ ಪ್ರದೇಶದಲ್ಲಿ ಕಳೆದ ಮೂರು ದಿನಗಳಿಂದಲೂ ನೀರು ನುಗುತ್ತಲೇ ಇತ್ತು. ಆದರೆ, ಶುಕ್ರವಾರ ರಾತ್ರಿ ಇಡೀ ಪ್ರದೇಶದ ಮನೆಗಳಿಗೆ ನೀರು ನುಗ್ಗಿ ಅನಾಹುತವಾಗಿತ್ತು. ಆ ಸಂದರ್ಭದಲ್ಲಿ ನಗರಾಡಳಿತ ಆ ಬಡಾವಣೆಯಲ್ಲಿಯೇ ಗಂಜಿ ಕೇಂದ್ರ ತೆರೆದು ಕೆಲವರನ್ನು ಸ್ಥಳಾಂತರಿಸಿತು. ಮತ್ತೆ ಕೆಲವರು ಮನೆ ಬಿಟ್ಟು ಬರಲೊಪ್ಪದೇ ಅಲ್ಲಿಯೇ ರಾತ್ರಿ ಕಳೆದರು.
ಅವರುಗಳ ನೆರವಿಗೆ ಬಂದ ಅಲ್ಲಿನ ಮುಸ್ಲಿಂ ಯುವ ಸಂಘಟನೆ, ಬೆಳಗಿನ ಜಾವದಿಂದಲೇ ಅವರಿಗೆ ಕುಡಿಯುವ ನೀರು, ಉಪಾಹಾರ, ಟೀ- ಕಾಫಿ ವಿತರಿಸಿತು. ಮಕ್ಕಳಿಗೆ ಕುಡಿಯಲು ಹಾಲನ್ನೂ ನೀಡಿ ಮಾನವೀಯತೆ ಮೆರೆಯಿತು. ಮಾಧ್ಯಮಗಳ ಮುಂದೆ ಮಾತನಾಡಿದ ಆ ಬೀದಿಗಳ ಸಂತ್ರಸ್ತರು, ಜಿಲ್ಲಾಡಳಿತ ತಮಗೆ ನೀರು, ಆಹಾರ ನೀಡಲು ಮರೆತರೂ, ಹಿಂದೂ ಮುಸ್ಲಿಮರೆಂದು ನೋಡದೆ ಮುಸ್ಲಿಂ ಯುವಕರು ಬಂದು ತಮಗೆ ನೀರು- ತಿಂಡಿ ನೀಡಿದರು. ಜಾತಿ-ಧರ್ಮದ ಹೆಸರಲ್ಲಿ ಓಟು ಕೇಳುವ ಮಂದಿ ಬಂದು ನಮ್ಮನ್ನು ಏನೆಂದು ಕೇಳಲಿಲ್ಲ. ಆದರೆ, ಈ ಹುಡುಗರು ಅಣ್ಣತಮ್ಮಂದಿರಂತೆ ಬಂದು ನಮ್ಮನ್ನು ನೋಡಿಕೊಂಡರು ಎನ್ನುವಾಗ ಅವರ ಕಣ್ಣಂಚಲ್ಲಿ ನೀರಾಡಿತು.
ಇದು ಪ್ರವಾಹ ಬಿಚ್ಚಿಟ್ಟ ಜಾತಿ, ಕೋಮು ಮೀರಿದ ಮಾನವೀಯತೆಯ ಮುಖ.
ಶಿವಮೊಗ್ಗ ನಗರದ ಹಳೇ ಭಾಗದ ಕುಂಬಾರಗುಂಡಿ, ಇಮಾಮಬಾಡ, ಸೀಗೆಹಟ್ಟಿಯಂತಹ ಸಾಮಾನ್ಯವಾಗಿ ಅತಿ ಮಳೆಯ ಸಂದರ್ಭಗಳಲ್ಲಿ ತುಂಗಾ ನೀರು ನುಗ್ಗುತ್ತಿದ್ದ ಪ್ರದೇಶಗಳಷ್ಟೇ ಅಲ್ಲದೆ, ಈ ಬಾರಿ ಗಾಂಧಿ ಬಜಾರ್, ಕೆ ಆರ್ ಪುರಂ, ಕೋಟೆ, ವಿದ್ಯಾನಗರ ಭಾಗ ಸಂಪೂರ್ಣ ಜಲಾವೃತವಾಗಿ ಸಾವಿರಾರು ಜನ ಆಹೋರಾತ್ರಿ ನೀರಿನಲ್ಲಿ ಸಿಲುಕಿದ ಹೊತ್ತಲ್ಲಿ ನಗರಸಭೆಯ ಆಡಳಿತ ವರ್ಗ ತೋರಿದ ಜನಪರ ಕಾಳಜಿ ಮತ್ತು ಕರ್ತವ್ಯಪ್ರಜ್ಞೆ ಎಲ್ಲರ ಪ್ರಶಂಸೆಗೊಳಗಾಯಿತು. ಮುಖ್ಯವಾಗಿ ನಗರಸಭಾ ಆಯುಕ್ತ ಚಾರುಲತಾ ಸೊಮಾಲ್ ಮತ್ತು ಅವರ ತಂಡ ಸತತ ನಾಲ್ಕು ದಿನಗಳ ಕಾಲ ಆಹೋರಾತ್ರಿ ಖುದ್ದು ಪ್ರತಿ ರಕ್ಷಣಾ ಕಾರ್ಯದ ಉಸ್ತುವಾರಿ ವಹಿಸಿ, ಪ್ರತಿ ಗಂಜಿಕೇಂದ್ರಕ್ಕೆ ಮತ್ತೆ ಮತ್ತೆ ಭೇಟಿ ನೀಡಿ ಅಲ್ಲಿನ ಕುಂದುಕೊರತೆ ಪರಿಶೀಲಿಸಿ, ಸಂತ್ರಸ್ತರಿಗೆ ಧೈರ್ಯ ಹೇಳುತ್ತಿದ್ದ ರೀತಿ ಒಬ್ಬ ಅಧಿಕಾರಿ ಇಂತಹ ಸಂಕಷ್ಟದ ಹೊತ್ತಲ್ಲಿ ತೋರಬೇಕಾದ ಕಾಳಜಿ ಮತ್ತು ಹೊಣೆಗಾರಿಕೆಗೆ ಮಾದರಿಯಂತಿತ್ತು.
ಅದರಲ್ಲೂ ಶಿವಮೊಗ್ಗದ ಸಂಸದ ಬಿ ವೈ ರಾಘವೇಂದ್ರ ಅವರು ಶುಕ್ರವಾರ ಬೆಳಗಿನವರೆಗೆ ದೆಹಲಿಯಲ್ಲಿ, ಶಾಸಕ ಕೆ ಎಸ್ ಈಶ್ವರಪ್ಪ ಅವರು ಮಡಿಕೇರಿಯಲ್ಲಿ ಇದ್ದು, ಜನಪ್ರತಿನಿಧಿಗಳ ಗೈರು ಹಾಜರಿಯಲ್ಲಿಯೂ ತಮ್ಮ ಕರ್ತವ್ಯದಲ್ಲಿ ಚ್ಯುತಿ ಬಾರದಂತೆ ಆಹೋರಾತ್ರಿ ಶ್ರಮಿಸಿದ ಈ ಅಧಿಕಾರಿಗಳ ತಂಡದ ಬಗ್ಗೆ ಎಲ್ಲೆಡೆ ಸಂತ್ರಸ್ತರ ಮೆಚ್ಚುಗೆಯ ಮತ್ತು ಕೃತಜ್ಞತೆಯ ಮಾತುಗಳು ಕೇಳುತ್ತಿದ್ದವು. ಇದು ಕೂಡ ಪ್ರವಾಹದ ಮತ್ತೊಂದು ಮಾನವೀಯ ಮುಖ.
ಹಾಗೇ, ಕಳೆದ ಚುಣಾವಣೆಯಲ್ಲಿ ತಮ್ಮನ್ನು ಸೋಲಿಸಿದ ಮತದಾರರ ಬಗ್ಗೆ ಬೇಸರವಿಲ್ಲದೆ, ಎಂಭತ್ತೆಂಟರ ಇಳಿ ವಯೋಮಾನದಲ್ಲಿ, ಅನಾರೋಗ್ಯದ ನಡುವೆಯೂ ಬಿರುಮಳೆಯ ನಡುವೆಯೂ ಊರೂರು ಸುತ್ತಿ ಪರಿಹಾರ ಕಾರ್ಯಾಚರಣೆಗೆ ಮಾರ್ಗದರ್ಶನ ಮಾಡಿದ ಹಿರಿಯ ನಾಯಕ ಕಾಗೋಡು ತಿಮ್ಮಪ್ಪ ಅವರ ಜನಪರ ಕಾಳಜಿ ಕೂಡ ಸಾಕಷ್ಟು ಜನಮೆಚ್ಚುಗೆಗೆ ಪಾತ್ರವಾಯಿತು. ಕ್ಷೇತ್ರದ ಶಾಸಕರು ಮಂತ್ರಿಗಿರಿಗಾಗಿ ಬೆಂಗಳೂರಿನ ಪಕ್ಷದ ನಾಯಕ ಮನೆ ಬಾಗಿಲು ಕಾಯುತ್ತಾ, ಜಲಸಮಾಧಿಯಾಗುತ್ತಿರುವ ಮತದಾರರನ್ನು ಮರೆತು, ತಡವಾಗಿ ಕ್ಷೇತ್ರಕ್ಕೆ ಬಂದರೂ, ಕಾಗೋಡು ತಾಲೂಕಿನ ಜನರ ಸಂಕಷ್ಟದ ಹೊತ್ತಲ್ಲಿ ಜೊತೆಗಿದ್ದೇನೆ ಎಂಬ ಭರವಸೆ ತುಂಬಿದರು. ಅಧಿಕಾರಿಗಳಿಗೆ ಮಾರ್ಗದರ್ಶನ ಮಾಡಿದರು. ಚಳಿಗಾಳಿ, ಭೋರ್ಗರೆವ ಮಳೆಯ ನಡುವೆಯೂ ಅವರು ಹಳ್ಳಿಮೂಲೆಗಳನ್ನು ಸುತ್ತಿ ಸಂತ್ರಸ್ತರ ನೋವಿಗೆ ಮಿಡಿದು, ಅವರಿಗೆ ಧೈರ್ಯ ತುಂಬಿದ ರೀತಿ ಸಾಮಾಜಿಕ ಜಾಲತಾಣಗಳಲ್ಲೂ ವ್ಯಾಪಕ ಶ್ಲಾಘನೆಗೊಳಗಾಯಿತು.
ಅಸಲೀ ಜನನಾಯಕನೊಬ್ಬನಿಗೆ ತನ್ನ ಜನರ ಸಂಕಷ್ಟದ ಹೊತ್ತಲ್ಲಿ ಅನಾರೋಗ್ಯ, ವಯಸ್ಸು, ಮಳೆಗಾಳಿ ಚಳಿ ಯಾವುದೂ ಅಡ್ಡಿಯಾಗದು ಎಂಬುದನ್ನು ಕಾಗೋಡು ಅವರ ಈ ನಡವಳಿಕೆ ನಿದರ್ಶನವಾಯಿತು. ಇದು ಕೂಡ ಪ್ರವಾಹ ತೋರಿಸಿದ ಮತ್ತೊಂದು ಮಾನವೀಯ ಮುಖ.
ಅದೇ ಹೊತ್ತಿಗೆ ಜನನಾಯಕರ ನೀಚತನದ, ಕೀಳು ಪ್ರಚಾರದ ಹುಚ್ಚನ್ನೂ ಈ ಪ್ರವಾಹ ಅನಾವರಣ ಮಾಡಿತು ಎಂಬುದನ್ನು ಮರೆಯಲಾಗದು.
ಹೊನ್ನಾಳಿಯ ಹಲವೆಡೆ ತುಂಗಭದ್ರಾ ನದಿಯ ಪ್ರವಾಹದಿಂದ ಜನ ಗೋಳಾಡುತ್ತಿದ್ದರೆ, ಅಲ್ಲಿನ ಬಿಜೆಪಿ ಶಾಸಕ ಎಂ ಪಿ ರೇಣುಕಾಚಾರ್ಯ ಒಂದು ತೆಪ್ಪವನ್ನು ಅರ್ಧ ಅಡಿ ಆಳದಲ್ಲಿಟ್ಟುಕೊಂಡು ಅದನ್ನು ಹುಟ್ಟುಹಾಕಿ ನಡೆಸುತ್ತಿರುವಂತೆ ಅಭಿನಯಿಸುತ್ತಾ ಫೋಟೋ ಶೋಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಸ್ವತಃ ಸಂತ್ರಸ್ತರನ್ನು ತೆಪ್ಪದಲ್ಲಿ ಹೋಗಿ ರಕ್ಷಿಸಿ ಕರೆತಂದಿರುವುದಾಗಿ ಹೇಳಿಕೊಂಡ ವಿಷಯ ಭಾರೀ ಅಪಹಾಸ್ಯಕ್ಕೀಡಾಯಿತು. ಅದರಲ್ಲೂ ಸ್ವತಃ ಅವರ ಪಕ್ಷದ ಕಾರ್ಯಕರ್ತರು, ಹಿಂಬಾಲಕರೇ ಶಾಸಕರಿಗೆ ಸಾರ್ವಜನಿಕವಾಗಿ ಛೀಮಾರಿ ಹಾಕುವ ಮಟ್ಟಿಗೆ ಈ ನಿರ್ಲಜ್ಜ, ನಾಚಿಕೆಗೇಡಿನ ವರ್ತನೆ ಸಾರ್ವಜನಿಕ ಖಂಡನೆಗೆ ಗುರಿಯಾಯಿತು.
ಹಾಗೇ, ಅದೇ ಬಿಜೆಪಿಯ ಮತ್ತೊಬ್ಬ ನಾಯಕ ಮೊಳಕಾಲ್ಮುರು ಶಾಸಕ ಶ್ರೀರಾಮುಲು, ರಾಜ್ಯದ ಜನರ ಸಂಕಟದ ನಡುವೆ ಕಬ್ಬಡಿ ಆಡಿ ಜನರ ಟೀಕೆಗೆ ಗುರಿಯಾದರು. ರಾಜ್ಯದ ಜನ ಆಸ್ತಿಪಾಸ್ತಿ ಕಳೆದುಕೊಂಡು, ಸಾವು ಬದುಕಿನ ನಡುವೆ ಹೊಯ್ದಾಡುತ್ತಿರುವಾಗ ಉಪಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಯಾದ ಈ ನಾಯಕ ಹೀಗೆ ಹೊಣೆಗೇಡಿಯಾಗಿ ಕಬ್ಬಡಿಯಾಡಿಕೊಂಡು ಕಾಲ ಕಳೆಯುತ್ತಿರುವುದು ಕೂಡ ಬಿಜೆಪಿ ಮತ್ತು ಅದರ ನಾಯಕರ ಜನಪರ ಕಾಳಜಿ ಎಷ್ಟು ಎಂಬುದಕ್ಕೆ ಒಂದು ತಾಜಾ ಉದಾಹರಣೆ ಎಂಬ ವ್ಯಾಪಕ ಟೀಕೆಗೆ ಗುರಿಯಾಯಿತು.
ಇನ್ನು ಸ್ವತಃ ಸಿಎಂ ಯಡಿಯೂರಪ್ಪ ಪುತ್ರ ಹಾಗೂ ಶಿವಮೊಗ್ಗ ಸಂಸದ ಬಿ ವೈ ರಾಘವೇಂದ್ರ ಅವರು ತಮ್ಮ ಕ್ಷೇತ್ರದ ಜನರ ಬಗ್ಗೆ ಹೊಂದಿರುವ ಕಾಳಜಿಯನ್ನೂ ಈ ಪ್ರವಾಹ ಬಯಲುಮಾಡಿತು. ಶಿವಮೊಗ್ಗ ಮತ್ತು ಸುತ್ತಮುತ್ತಲ ತಾಲೂಕುಗಳಲ್ಲಿ ಆ.5ರಿಂದಲೇ ತೀವ್ರ ಅತಿವೃಷ್ಟಿಯಿಂದಾಗಿ ಜನಜೀವನ ಅಸ್ತವ್ಯವಸ್ಥವಾಗಿದ್ದರೂ, ಅಪಾರ ಆಸ್ತಿಪಾಸ್ತಿ ಹಾನಿಯಾಗಿದ್ದರೂ, ಹಲವು ಜೀವ ಹಾನಿಯಾಗಿದ್ದರೂ ಸಂಸದರು ದೆಹಲಿಯಿಂದ ಕ್ಷೇತ್ರದ ಕಡೆ ಮುಖ ಮಾಡಿರಲಿಲ್ಲ. ಆ.9ರ ಬೆಳಗ್ಗೆ ಜಿಲ್ಲೆಗೆ ಕಾಲಿಟ್ಟರಾದರೂ ಅವರು ತಮ್ಮ ಊರು ಶಿಕಾರಿಪುರವನ್ನು ಬಿಟ್ಟು ಹೊರಬರಲಿಲ್ಲ. ಶಿವಮೊಗ್ಗ ನಗರಕ್ಕೆ ನೀರು ನುಗ್ಗಿ ಭಾರೀ ಅನಾಹುತ ಸಂಭವಿಸಿದ ಬಳಿಕ ಆ.10ರಂದು ಬಂದು ಒಂದು ಭೇಟಿ ನೀಡಿ ವಾಪಸು ಹೋದರು.
ಇನ್ನು ಸಿಎಂ ಯಡಿಯೂರಪ್ಪ ಕೂಡ ಶಿವಮೊಗ್ಗದ ಆಘಾತಕಾರಿ ವಿಪತ್ತಿನ ಹೊತ್ತಲ್ಲೂ ಜಿಲ್ಲೆಗೆ ಕಾಲಿಡಲಿಲ್ಲ! ಎರಡು ದಿನಗಳ ಬೆಳಗಾವಿ ಮಳೆ ಹಾನಿ ಸಮೀಕ್ಷೆಯ ಬಳಿಕ ಬೆಂಗಳೂರಿಗೆ ಮರಳಿದ ಬಿಎಸ್ ವೈ, ತವರು ಜಿಲ್ಲೆಯ ಸಂಕಷ್ಟದ ಕಡೆ ಗಮನ ಹರಿಸುವ ಬದಲು, ಸಚಿವ ಸಂಪುಟ ವಿಸ್ತರಣೆ, ತಮ್ಮವರಿಗೆ ಸಚಿವ ಸ್ಥಾನ ಕೊಡಿಸುವ ಚೌಕಾಸಿಯಲ್ಲಿ ಬ್ಯುಸಿಯಾಗಿದ್ದರು. ಕೇಂದ್ರದ ಹೈಕಮಾಂಡ್ ನಾಯಕರೊಂದಿಗೆ ಮಾತುಕತೆ ನಡೆಸಿ ತಮ್ಮವರಿಗೆಲ್ಲಾ ಸಚಿವ ಸ್ಥಾನ ಖಾತ್ರಿಪಡಿಸಿಕೊಳ್ಳುವ ಜರೂರು ಅವರ ಮುಂದಿತ್ತು. ಉತ್ತರಕರ್ನಾಟಕದ ಮಳೆಹಾನಿಯ ವಿಷಯದಲ್ಲಿಯೂ ಅವರು, ಮಾಧ್ಯಮಗಳು ಹಾನಿಯ ಬಗ್ಗೆ ವರದಿಮಾಡಲಾರಂಭಿಸಿದ ಬಳಿಕವಷ್ಟೇ ದೆಹಲಿಯ ಹೈಕಮಾಂಡ್ ಸೂಚನೆ ಮೇಲೆ ಓಡೋಡಿ ಬಂದರು ಮತ್ತು ಬಂದ ಬಳಿಕ ಕೂಡ ಸಂತ್ರಸ್ತರೊಂದಿಗೆ ಸಮಾಧಾನದಿಂದ ನೋವು ಕೇಳುವ ವ್ಯವಧಾನ ತೋರಲಿಲ್ಲ. ನೋವು ಹೇಳಿಕೊಳ್ಳಲು ಬಂದವರ ಮೇಲೆಯೇ ಲಾಠಿ ಪ್ರಹಾರವನ್ನೂ ಮಾಡಿಸಿದರು ಎಂಬುದು ಕೂಡ ವಿಪರ್ಯಾಸ.
ಸಂತ್ರಸ್ತರಿಗೆ ಜಾತಿ-ಧರ್ಮ, ಮೇಲು-ಕೀಳು ಮರೆತು ನೆರವಿಗೆ ಧಾವಿಸುವ, ಔದಾರ್ಯ ಮೆರೆಯುವ ಜನ ಸಾಮಾನ್ಯರು ಒಂದು ಕಡೆಯಾದರೆ, ಅಧಿಕಾರ, ದರ್ಪ, ಪ್ರಚಾರದ ಲಾಲಸೆಯ, ನೀಚತನದ ಪರಮಾವಧಿಯ ಪ್ರದರ್ಶನ ಮತ್ತೊಂದು ಕಡೆ. ಹೀಗೆ ಒಟ್ಟಾರೆ, ಒಂದು ಭೀಕರ ಪ್ರವಾಹ ಕೂಡ ಮನುಷ್ಯನ ಒಳಗಿನ ದೈವತ್ವವನ್ನು ಹೊರಗಿಟ್ಟಂತೆಯೇ, ಆತನೊಳಗಿನ ನೀಚತನವನ್ನೂ ಬೀದಿಗಿಟ್ಟಿದೆ ಎಂಬುದು ಸತ್ಯ!