ಸಭಿಕರ ಜೊತೆಗಿನ ಸಂವಾದದಲ್ಲಿ
ಯುವತಿ (ಎದ್ದುನಿಂತು):
“ಜೈ ಶ್ರೀರಾಮ್” … “ಕನ್ಹಯ್ಯ ಅವರೇ, ಸ್ವಾತಂತ್ರ್ಯ ದಿನಾಚರಣೆ ಸಮೀಪಿಸುತ್ತಿದ್ದು, ತಾವು ಒಂದು ಬಾರಿಯಾದರೂ ಜೈ ಹಿಂದ್ ಹೇಳುವಿರಾ? ನಿಮಗೆ ಇಷ್ಟವಿದ್ದರೆ… ದಯಮಾಡಿ ಒಂದು ಸಲ ನೀವು ಜೈ ಹಿಂದ್ ಹೇಳಿದರೆ ಅದು ಮಂಗಳೂರಿಗೇ ಹೆಮ್ಮೆ ಎನಿಸುತ್ತದೆ…” ಎಂದು ಪ್ರಶ್ನಿಸುತ್ತಾಳೆ.
ಕನ್ಹಯ್ಯ: “ನೋಡಿ, ನೀವು ಇಲ್ಲಿ ಜೈ ಶ್ರೀ ರಾಮ್ ಎನ್ನುತ್ತಿದ್ದೀರಿ… ಆದರೆ ನಮ್ಮ ಜನ ಸೀತಾರಾಮ್ ಅಂತ ಹೇಳ್ತಾರೆ…”
(ಸಭಿಕರ ಚಪ್ಪಾಳೆ ಮುಗಿಲು ಮುಟ್ಟುತ್ತದೆ…)
ಯುವತಿ: “ನೀವು ಸೀತಾರಾಮ್ ಅಂತ ಹೇಳ್ತೀರಿ, ಈ ಜನ ಇಂಕ್ವಿಲಾಬ್ ಜಿಂದಾಬಾದ್ ಅಂತಲೂ ಹೇಳ್ತಾರೆ, ನಿಮ್ಮಲ್ಲಿ ನನ್ನದೊಂದೇ ಪ್ರಶ್ನೆ…
ಕನ್ಹಯ್ಯ: “ನಾನು ನಿಮ್ಮ ಇನ್ನೊಂದು ಪ್ರಶ್ನೆಗೆ ಉತ್ತರ ಕೊಟ್ಟುಬಿಡುತ್ತೇನೆ…”
(ಅವರು ಉತ್ತರಿಸಲು ಬಿಡದ ಯುವತಿ ಪ್ರಶ್ನೆಗಳ ಸುರಿಮಳೆಗೈಯುತ್ತಾಳೆ)
ಯುವತಿ: “ನಿಮ್ಮ ಉತ್ತರ ನನಗೆ ಬೇಕಾಗಿಲ್ಲ. ಜೈ ಶ್ರೀ ರಾಮ್ ಮತ್ತು ಸೀತಾರಾಮ್ ಬೇರೆಬೇರೆ ಅಲ್ಲ ಎನ್ನುವುದಾದರೆ ನನ್ನ ಪ್ರಶ್ನೆಗೆ ಉತ್ತರ ಅಗತ್ಯವಿಲ್ಲ. ಕೆಲನಿಮಿಷಗಳ ಹಿಂದೆ ನೀವು ಭಾವನಾತ್ಮಕ ರಾಜಕಾರಣದ ಬಗ್ಗೆ ಮಾತನಾಡುತ್ತಿದ್ದಿರಿ. ಜನರನ್ನು ಭಾವನಾತ್ಮಕವಾಗಿ ನಿಯಂತ್ರಣ ಮಾಡಲಾಗುತ್ತಿದೆ ಎಂದಿರಿ. ಹೌದು, ನಾವು ಭಾವನಾಜೀವಿಗಳೇ. ಭಾವನಾತ್ಮಕವಾಗಿಯೂ ವಾಸ್ತವದಲ್ಲೂ ನಮಗೆ ಒಬ್ಬಳೇ ತಾಯಿ, ಒಬ್ಬನೇ ತಂದೆ. ‘ಒಂದ’ನ್ನೇ ನಾವು ನಂಬಿರುವುದು. ವಿದ್ಯಾರ್ಥಿಗಳನ್ನು ಪ್ರತಿನಿಧಿಸಲು ಬೇಕಿರುವುದು ‘ಒಬ್ಬ’ರೇ. ವಿದ್ಯಾರ್ಥಿ ಹಿನ್ನೆಲೆಯಿಂದ ಬಂದಿರುವ ನಾನು ಹೇಳುವುದಿಷ್ಟೇ, ಎಡಪಂಥೀಯರೂ ಬೇಡ, ಬಲಪಂಥೀಯರೂ ಬೇಡ, ಎಬಿವಿಪಿಯೂ ಬೇಡ, ಅಂತಹ ಯಾವುದೇ ರಾಜಕೀಯ ಪಕ್ಷವಾಗಲೀ ರಾಜಕೀಯವಾಗಲೀ ಬೇಕಾಗಿಲ್ಲ. ನೀವ್ಯಾಕೆ ‘ಒಂದೇ ರಾಷ್ಟ್ರ’ ಎಂಬ ನಿಲುವನ್ನು ಬೆಂಬಲಿಸಬಾರದು? ನೀವ್ಯಾಕೆ ‘ಒಂದೇ’ ವಿದ್ಯಾರ್ಥಿ ಶಕ್ತಿಯನ್ನು ಬೆಂಬಲಿಸಬಾರದು? ನಮಗೆ ಒಂದು ಕಡೆ ಇಂಕ್ವಿಲಾಬ್, ಇನ್ನೊಂದು ಕಡೆ ಜಿಂದಾಬಾದ್, ಮತ್ತೊಂದು ಕಡೆ ಜೈ ಹಿಂದ್, ಮಗದೊಂದು ಕಡೆ ನಿಮ್ಮ ಅಚ್ಚುಮೆಚ್ಚಿನ (ಪಕ್ಕದ ಮಹಿಳೆಯನ್ನು ಸಂಬೋಧಿಸುತ್ತ) ನಿಮ್ಮ ಆ ಎಲ್ಲಾ ರಾಮ್ ರಾಮ್ ಗಳೋ ಮತ್ತೊಂದೋ ಯಾಕೆ ಬೇಕು? ನೀವು ಏಕೆ ‘ಒಂದ’ನ್ನು ಪ್ರತಿನಿಧಿಸುತ್ತಿಲ್ಲ? ನೀವು ‘ಒಂದು’ ಭಾರತವನ್ನು ಪ್ರತಿನಿಧಿಸುತ್ತಿಲ್ಲವೇಕೆ? ನೀವು ‘ಒಂದು’ ಐಕ್ಯತೆಯನ್ನು ಏಕೆ ಪ್ರತಿನಿಧಿಸುತ್ತಿಲ್ಲ? ನೀವು ಇಷ್ಟೆಲ್ಲಾ ಹೇಳುವುದರ ಬದಲು ‘ಒಂದೇ’ ನೀತಿಯನ್ನು ಏಕೆ ಪ್ರಸ್ತಾಪಿಸುತ್ತಿಲ್ಲ? ನಿಮ್ಮನ್ನು ಮತ್ತು ನಿಮ್ಮ ಪಿಎಚ್ಡಿಯನ್ನು ಗೌರವಿಸುತ್ತಲೇ ಒಂದು ಪ್ರಶ್ನೆ ಕೇಳುತ್ತೇನೆ.. ‘ಒಂದೇ’ ಐಕ್ಯತೆ ಮತ್ತು ‘ಒಂದೇ’ ವಿಷಯವನ್ನು ನೀವು ಪ್ರಸ್ತಾಪಿಸುತ್ತಿಲ್ಲವೇಕೆ? ಕವಲುದಾರಿಯಲ್ಲಿ ಯುವಜನರು ಎಂದು (ನೀವು ಮಾತನಾಡಿದ) ವಿಷಯ ಹೇಳುತ್ತದೆ. ಹೌದು, ನಾವು ಯುವಜನರು ಕವಲುದಾರಿಯಲ್ಲಿದ್ದೇವೆ. ನಾವು ಯುವಜನತೆ ಗುರಿಯತ್ತ ನಮ್ಮ ದೃಷ್ಟಿಯನ್ನು ನೆಟ್ಟಿದ್ದೇವೆ ಮತ್ತು ಆ ಹಾದಿಯಲ್ಲಿ ಸಾಗುತ್ತಿದ್ದೇವೆ. ಇಡೀ ದೇಶಕ್ಕೆ ‘ಒಂದೇ’ ನೀತಿಯನ್ನು ನೀವು ಏಕೆ ಹೇಳುತ್ತಿಲ್ಲ?” ಬೋಲೋ ಭಾರತ ಮಾತಾ ಕಿ ಜೈ! ಜೈ ಹಿಂದ್!
ಕನ್ಹಯ್ಯ: “ನಿಮ್ಮ ಪ್ರಶ್ನೆಯಲ್ಲಿಯೇ ‘ಒಂದ’ರ ಸಮರ್ಥನೆಯನ್ನು ನೀವು ಮಾಡಿಕೊಳ್ಳುವುದಿಲ್ಲ. ನೋಡಿ, ನನ್ನ ಜನನವೇ ಇಬ್ಬರು ವ್ಯಕ್ತಿಗಳ ಮಿಲನದಿಂದ ಉಂಟಾಗಿದೆ. ನನ್ನ ಅಪ್ಪಅಮ್ಮಂದಿರ ಮದುವೆ ನಡೆಯದೇ ಹೋಗಿದ್ದರೆ ನಾನು ಹುಟ್ಟುವ ಮಾತೇ ಇರುತ್ತಿರಲಿಲ್ಲ! ನನ್ನ ಅಪ್ಪಅಮ್ಮಂದಿರು, ಅಂದರೆ ಇಬ್ಬರು ವ್ಯಕ್ತಿಗಳ ವಿವಾಹವಾಯಿತು. ಸಹಜವಾಗಿಯೇ ವಿವಾಹದ ನಂತರದ ಪ್ರಕ್ರಿಯೆಗಳಿಂದ ನನ್ನ ಜನನವಾಗಿರುತ್ತದೆ. ಆದ್ದರಿಂದ ‘ಇಬ್ಬರು’ ವ್ಯಕ್ತಿಗಳ ಸಮಾಗಮದಿಂದಲೇ ಇದು ಘಟಿಸಿರುವುದು!
ನಿಮ್ಮ ಇನ್ನೊಂದು ಪ್ರಶ್ನೆ, ‘ಒಂದು’ ರಾಷ್ಟ್ರದ ಪರಿಕಲ್ಪನೆಗೆ ಏಕೆ ನೀವು ಬೆಂಬಲಿಸುವುದಿಲ್ಲ ಎಂದು. ರಾಷ್ಟ್ರ ಎಂದರೆ ಅದು ‘ಒಂದೇ’ ಆಗಿರುತ್ತದೆ. ಭಾರತ ‘ಒಂದೇ’ ದೇಶವೇ! ಇದರಲ್ಲೇನೂ ಅನುಮಾನವೇ ಇಲ್ಲ. ಅಲ್ಲದೆ ಈ ‘ಒಂದು’ ಭಾರತವನ್ನು ಪ್ರತಿನಿಧಿಸುವುದು ‘ಒಂದು’ ಸಂವಿಧಾನ. ಅದರಲ್ಲಿ 300ಕ್ಕೂ ಹೆಚ್ಚು ಕಲಂಗಳಿವೆ. ಹೌದು, ಒಂದೇ ಸಂವಿಧಾನದಲ್ಲಿ 300ಕ್ಕೂ ಹೆಚ್ಚು ವಿಧಿಗಳಿವೆ. ಅಷ್ಟೇ ಅಲ್ಲ, ನೀವು ಹೇಳುತ್ತಿರುವ ‘ಒಂದು’ ರಾಷ್ಟ್ರವನ್ನು ಪ್ರತಿನಿಧಿಸಲು ‘ಒಂದು’ ಪಾರ್ಲಿಮೆಂಟಿದೆ. ಆ ಪಾರ್ಲಿಮೆಂಟಿನಲ್ಲೂ ಲೋಕಸಭೆ ಮತ್ತು ರಾಜ್ಯಸಭೆ ಎಂಬ ‘ಎರಡು’ ಸದನಗಳಿವೆ. ಅವುಗಳಲ್ಲೂ ಚುನಾಯಿತರಾಗಿ ಹೋಗುವವರು ‘ಒಬ್ಬರೇ ಅಲ್ಲ’… ಅಲ್ಲಿ 545 ಸದಸ್ಯರು ಇರುತ್ತಾರೆ. ಹೀಗಾಗಿ ಇದು ನಾವು ‘ಒಂದಾಗಿರುವುದನ್ನು’ ಸೂಚಿಸುತ್ತದೆ. ನಿಜ ಹೇಳಬೇಕೆಂದರೆ ಒಂದಾಗಿರುವುದು ವಿವಿಧತೆಯ ಸಂಕೇತವಾಗಿರುತ್ತದೆ. ಅದರಲ್ಲಿ ವೈವಿಧ್ಯತೆಯಿದೆ.
ಇನ್ನು ನೀವು ಕೇಳಿದ ಪ್ರಶ್ನೆ, ಜೈ ಶ್ರೀ ರಾಮ್ ಗೆ ಸಂಬಂಧಿಸಿದ್ದು. ನಿಮಗೆ ಇಷ್ಟವಾದರೆ ನೀವು ಜೈ ಶ್ರೀ ರಾಮ್ ಹೇಳಿರಿ… ನಿಮಗೆ ಸ್ವಾತಂತ್ರ್ಯವಿದೆ. ನೀವು ಜೈ ಶ್ರೀ ರಾಮ್ ಹೇಳಬೇಕೋ ಜೈ ಹನುಮಾನ್ ಹೇಳಬೇಕೋ ಇನ್ನೂ ಏನೇನು ಹೇಳಬೇಕೆನಿಸುತ್ತದೋ ಹೇಳಿರಿ… ನಾವು ಬಯಸಿದ್ದನ್ನು ಹೇಳುವ ಅಧಿಕಾರವನ್ನು ನಮಗೆ ನಮ್ಮ ಸಂವಿಧಾನ ನೀಡುತ್ತದೆ. ಆದ್ದರಿಂದಲೇ ನಿಮಗೆ ಹೀಗೆಲ್ಲಾ ಮಾತನಾಡಲು ಸ್ವಾತಂತ್ರ್ಯ ನೀಡಿರುವ ಈ ಸಂವಿಧಾನಕ್ಕೆ ನೀವೂ ಆಗಾಗ ಜೈ ಎನ್ನಿರಿ… ಎಂದು ನಾನು ನಿಮ್ಮಲ್ಲಿ ಆಗ್ರಹಿಸುತ್ತಿದ್ದೇನೆ!
ನನ್ನ ವೈಯಕ್ತಿಕ ವಿಷಯ ಒಂದನ್ನ ನಾನು ನಿಮಗೆ ಹೇಳಬೇಕು. ಅದೇನೆಂದರೆ ಮಿಥಿಲೆಯಲ್ಲಿ ನಾನು ಜನ್ಮ ತಳೆದಿದ್ದು. ನನ್ನ ಊರು ಬೆಗೂಸರಾಯ್ ಜಿಲ್ಲೆಯಲ್ಲಿದೆ. ಅದು ಅಂದಿನ ಮಿಥಿಲೆಯ ಭಾಗವೇ. ನಿಮಗೆ ಅಚ್ಚರಿಯಾಗಬಹುದು, ನಮ್ಮ ಹಳ್ಳಿಗೆ ಪ್ರತಿ ವರ್ಷವೂ ಹಿಂದಿಯ ಅಗಹನ್ ಮಾಸದಲ್ಲಿ (ಆಗಸ್ಟ್ ತಿಂಗಳು) ಅಯೋಧ್ಯೆಯಿಂದ ಮದುವೆಯ ದಿಬ್ಬಣ ಆಗಮಿಸುತ್ತದೆ. ಹುಡುಗರು ಮೆರವಣಿಗೆಯಲ್ಲಿ ಬರುತ್ತಾರೆ, ರಾಮ ಮತ್ತು ಲಕ್ಷ್ಮಣ ಮದುಮಕ್ಕಳಾಗಿರುತ್ತಾರೆ. ನಮ್ಮ ಹಳ್ಳಿಯಲ್ಲಿ ಜಾನಕೀರಾಮನ ಮಂದಿರವಿದೆ. ಅಲ್ಲಿ ಪ್ರತಿ ವರ್ಷವೂ ರಾಮನ ವಿವಾಹ ನೆರವೇರುತ್ತದೆ. ಇನ್ನೊಂದು ತಮಾಷೆಯನ್ನ ಹೇಳುತ್ತೇನೆ ಕೇಳಿ, ಮಿಥಿಲೆಯ ಜನರು ರಾಮನನ್ನು ನಿಂದಿಸುತ್ತಾರೆ. ಏಕೆ ಗೊತ್ತೇ? ಏಕೆಂದರೆ ಮಿಥಿಲೆಗೆ ಶ್ರೀ ರಾಮ ಅಳಿಯನಾಗುವುದರಿಂದ ಅವರು ರಾಮನಿಗೆ ಕೀಟಲೆ ಮಾಡುತ್ತಾರೆ. ನಮ್ಮ ಸಂಸ್ಕೃತಿಯಲ್ಲಿ ಮದುವೆಯ ಸಂದರ್ಭದಲ್ಲಿ ದಿಬ್ಬಣ ಬಂದಾಗ ಮೆರವಣಿಗೆಯಲ್ಲಿರುವವರಿಗೆ ಬೈಗುಳಗಳ ಸುರಿಮಳೆ ಸುರಿಸಲಾಗುತ್ತದೆ. ನೀವೇನಾದರೂ ನಮ್ಮ ಕಡೆ ಬಂದರೆ ಇದು ನಿಮಗೆ ತೀರಾ ಆಶ್ಚರ್ಯ ಎನಿಸದಿರದು. ದೈವ ಸ್ವರೂಪನಾದ ರಾಮನನ್ನು ಜನ ಸ್ವಾಗತಿಸುವುದ ಬಿಟ್ಟು ನಿಂದಿಸುತ್ತಿದ್ದಾರಲ್ಲಾ… ಇದು ಹೇಗೆ ಎಂದು! ಹೌದು, ಇದು ನಮ್ಮ ಸಂಪ್ರದಾಯ. ಇಂತಹ ಸಂಸ್ಕೃತಿಯಲ್ಲಿ ಬೆಳೆದ ನಾವು ಎಂದೂ ಯಾವುದೇ ದೇವರನ್ನು ಒಂಟಿಯಾಗಿ ಸ್ಮರಿಸುವುದೇ ಇಲ್ಲ. ನೀವು ಹೇಳಿದಿರಲ್ಲಾ ‘Oneness’ (ಎಲ್ಲವೂ ಒಂದೇ ಇರಬೇಕೆಂಬ ಭಾವ)… ಅದು ಇಲ್ಲವೇ ಇಲ್ಲ, ಅವರನ್ನು ಒಂಟಿಯಾಗಿ ನೆನೆಸಿಕೊಳ್ಳುವುದಿಲ್ಲ. ಯಾವಾಗಲೂ ರಾಮನನ್ನು ಸೀತೆಯ ಜೊತೆಗೆ, ರಾಧೆಯನ್ನು ಕೃಷ್ಣನ ಜೊತೆಯಲ್ಲಿ ಸ್ಮರಿಸಲಾಗುತ್ತದೆ. ಇದು ನಮ್ಮ ಪರಂಪರೆ.
ನೀವು ತರುಣಿಯಿದ್ದೀರಿ, (ಹೀಗೆ ಚಿಂತಿಸುವುದು) ನನಗೆ ಆಶ್ಚರ್ಯವಾಗುತ್ತಿದೆ. ನಾನು ಪಿಎಚ್ಡಿ ಮಾಡಿದ್ದೇನೆ, ನೀವೂ ಪಿಎಚ್ಡಿ ಮಾಡಬಹುದೆಂದು ಆಶಿಸುತ್ತೇನೆ. ಈ ದೇಶದಲ್ಲಿ ಅದೆಷ್ಟು ರಾಮಾಯಣಗಳನ್ನು ಬರೆಯಲಾಗಿದೆ ಎಂದು ತಿಳಿಯಿರಿ, ಹೋಗಲಿ ಅವುಗಳ ಬಗ್ಗೆಯೇ ಪಿಎಚ್ಡಿ ಮಾಡಿಬಿಡಿ ಎಂಬ ಆಗ್ರಹ ನನ್ನದು. ಭಾರತದಲ್ಲಿ ಕಡಿಮೆಯೆಂದರೂ 300 ರಾಮಾಯಣಗಳನ್ನು ಬರೆಯಲಾಗಿದೆ. ನಾನು ಒಮ್ಮೆ ಹಿಮಾಚಲ್ ಪ್ರದೇಶಕ್ಕೆ ಹೋಗಿದ್ದೆ. ಅಲ್ಲಿ ತ್ರಿಲೋಕನಾಥ ಮಂದಿರವಿದೆ. ಈ ದೇಶವನ್ನು ಒಮ್ಮೆ ಸುತ್ತಾಡಿ ಬನ್ನಿ ಎಂದು ಕೇಳಿಕೊಳ್ಳುತ್ತೇನೆ. ಈ ದೇಶ ಎಷ್ಟೊಂದು ವಿಶಾಲವಾಗಿದೆ. ಅದು ನಿಮ್ಮ ಕಲ್ಪನೆಗೂ ಮೀರಿದ್ದು. ಅಷ್ಟೇ ಅಲ್ಲ, ನಮಗೇ ಒಮ್ಮೊಮ್ಮೆ ಈ ದೇಶದ ಮುಂದೆ ನಾವೆಷ್ಟು ಸಣ್ಣವರು ಮತ್ತು ಅಲ್ಪರು ಎಂದೆನಿಸಿಬಿಡುತ್ತದೆ.
ನೀವು ತ್ರಿಲೋಕನಾಥ ಮಂದಿರಕ್ಕೆ ಹೋದರೆ ಅಲ್ಲಿ ಭಗವಾನ್ ಬುದ್ಧನ ವಿಗ್ರಹವಿದೆ. ಮತ್ತು ಅದೇ ಭಗವಾನ್ ಬುದ್ಧನ ತಲೆಯ ಮೇಲೆ ಶಿವನ ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿದೆ. ಆ ದೇವಾಲಯದಲ್ಲಿ ಮೊದಲು ಹಿಂದೂ ಸಂತರು ಬಂದು ಪ್ರಾರ್ಥನೆ ಮಾಡುತ್ತಾರೆ. ಅದಾದ ನಂತರ ಬೌದ್ಧ ಸನ್ಯಾಸಿಗಳು ಬಂದು ಪರಿಕ್ರಮ ನಡೆಸುತ್ತಾರೆ. ಇದೇ ಹಿಂದುಸ್ತಾನದ ವೈಶಿಷ್ಟ್ಯ! ನಾನೇನಾದರೂ ತಪ್ಪು ಹೇಳಿದ್ದರೆ ತಾವು ತಿದ್ದಬಹುದು. ಭಾರತದ ವಿಶೇಷತೆ ಏನೆಂದರೆ ಈ ಮಂದಿರವಿರುವ ಲಾಹೋಲ್ ಜಿಲ್ಲೆಯಲ್ಲಿ ಲಾಹೋಲಿ ಭಾಷೆ ಮಾತನಾಡುತ್ತಾರೆ. ಲಾಹೋಲಿ ಭಾಷೆಯಲ್ಲಿ ಬರೆದಿರುವ ರಾಮಾಯಣದಲ್ಲಿ ರಾವಣ ಸೀತೆಯ ಅಪಹರಣವನ್ನು ಮಾಡುವುದಿಲ್ಲ. ಆದರೆ ಆ ರಾಮಾಯಣದ ಪ್ರಕಾರ ರಾವಣ ಸೀತೆಯ ತಂದೆಯಾಗಿರುತ್ತಾನೆ. ಲಾಹೋಲಿ ರಾಮಾಯಣದಲ್ಲಿ ಸೀತೆ ರಾವಣನ ಮಗಳಾಗಿರುತ್ತಾಳೆ, ರಾಮ ಸೀತೆಯನ್ನು ಪ್ರೀತಿಸಿ ವಿವಾಹವಾಗುತ್ತಾನೆ. ಈ ಕಾರಣದಿಂದಲೇ ರಾಮರಾವಣರ ನಡುವೆ ಯುದ್ಧವಾಗುತ್ತದೆ. ಇದೇ ಹಿಂದುಸ್ತಾನದ ವಿಶೇಷತೆ…
ನೋಡಿ, ನಿಮ್ಮ ಮನಸ್ಸಿನೊಳಗೆ ಯಾರು ಮತ್ತು ಯಾಕೆ ಇಂತಹ ವಿಷಯಗಳನ್ನೆಲ್ಲಾ ತುಂಬಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಆದರೆ ನಾನಂತೂ ಒಂದು ಮಾತು ಹೇಳುತ್ತೇನೆ, ಈ ದೇಶದಲ್ಲಿ ಹುಟ್ಟಿರುವ ಜನರಿಗೆ ಇದಕ್ಕಿಂತ ಹೆಮ್ಮೆಯ ವಿಷಯ ಬೇರಾವುದೂ ಇರಲಾರದು. ತಾವೇನಾದರೂ ಹಿಮಾಚಲ್ ಪ್ರದೇಶಕ್ಕೆ ಹೋದಿರೆಂದರೆ ಸ್ವಿಟ್ಜರ್ಲ್ಯಾಂಡ್ ನಲ್ಲಿರುವಂತೆಯೇ ಭಾಸವಾಗುತ್ತದೆ. ನೀವೇನಾದರೂ ಮಂಗಳೂರು ಮತ್ತು ಗೋವಾ ಮಧ್ಯೆ ಇದ್ದದ್ದೇ ಆದಲ್ಲಿ, ಆಗ ಮಿಯಾಮಿ ದಂಡೆಯಲ್ಲಿದ್ದಂತೆ ಅನಿಸುತ್ತದೆ. ದೇಶದ ಭೂಪ್ರದೇಶಗಳಲ್ಲಿ ಸುತ್ತಾಡಿದರೆ ಅಮೆರಿಕೆಯ ಹಸಿರು ಮೈದಾನಕ್ಕಿಂತ ಅತಿ ದೊಡ್ಡ ಮೈದಾನ ನಮ್ಮಲ್ಲಿರುವುದು ನಿಮ್ಮ ಅರಿವಿಗೆ ಬರುತ್ತದೆ. ಹಾಗೊಮ್ಮೆ ದಕ್ಷಿಣದ ಪ್ರಸ್ಥಭೂಮಿಯಲ್ಲಿ ಅಲೆದಾಡಿದಿರೆಂದರೆ ಅಲ್ಲೊಂದು ವಿಶೇಷತೆಯಿದೆ. ಛೋಟಾ ನಾಗಪುರದ (ಛತ್ತೀಸಗಢ, ಮೊದಲಾದ ಭಾಗಗಳು) ಪ್ರದೇಶಗಳಲ್ಲಿ ಸುತ್ತಾಡಿದರೆ ಖನಿಜ ಸಂಪನ್ಮೂಲಗಳಿಂದ ಸಮೃದ್ಧವಾಗಿರುವುದನ್ನು ಕಾಣಬಹುದು.
ನಾನು ನಿಮಗೆ ಹೇಳಬಯಸುವುದಿಷ್ಟೇ. ನಿಮ್ಮ ತಾಯಿ ನಿಮ್ಮವಳು ಎಂಬಂತೆಯೇ ನಿಮ್ಮ ದೇಶ ನಿಮ್ಮದೇ. ನೀವು ನಿಮ್ಮ ತಾಯಿಯನ್ನು ಪ್ರೀತಿಸುವುದಾದರೆ ಅದು ನಿಮ್ಮ ಆಂತರಿಕ ವಿಷಯವೇ ಆಗಿರುತ್ತದೆ. ಒಂದು ವೇಳೆ ನೀವು ರಸ್ತೆಯಲ್ಲಿ ನಡೆದು ಹೋಗುತ್ತಿರುವಾಗ, ಯಾವುದೇ ಬಣ್ಣದ ಬಾವುಟ ಹಿಡಿದು, ಇಂಕ್ವಿಲಾಬ್ ಜಿಂದಾಬಾದ್ ಹೇಳಿ, ಇಲ್ಲವೇ ಜೈ ಶ್ರೀ ರಾಮ್ ಹೇಳಿ ಯಾವುದೇ ಘೋಷಣೆ ಕೂಗುತ್ತಾ ಯಾರಾದರೂ ಬಂದರೆಂದಿಟ್ಟುಕೊಳ್ಳಿ… ಅವರು ಘೋಷಣೆ ಕೂಗುತ್ತಾ, ಬಾವುಟ ತೋರಿಸುತ್ತಾ, “ನೀನು ನಿನ್ನ ತಾಯಿಯನ್ನು ಪ್ರೀತಿಸುವುದು ನಿಜವಾದರೆ ಪ್ರೀತಿಸಿ ತೋರಿಸು” ಎಂದು ನಿಮಗೆ ಹೇಳಿದರೆ ನೀವೇನು ಉತ್ತರ ಕೊಡಬಲ್ಲಿರಿ? ಈ ದೇಶ ನಮ್ಮದು, ಈ ದೇಶವನ್ನು ನಮಗೋಸ್ಕರವೇ ಪ್ರೀತಿಸುತ್ತೇವೆ, ಇಲ್ಲಿ ನಮಗೋಸ್ಕರ ಎಂಬ ಮಾತನ್ನು ನೆನಪಿನಲ್ಲಿಟ್ಟುಕೊಳ್ಳಿ… ನಮಗಾಗಿ ಈ ಪ್ರೀತಿಯೇ ಹೊರತು ತೋರಿಕೆಗಾಗಿ ಅಲ್ಲ… ನಾವು ನಮ್ಮ ದೇಶವನ್ನು ಪ್ರೀತಿಸುತ್ತೇವೆ ಮತ್ತು ಆ ಪ್ರೀತಿಯನ್ನು ಎದೆಯೊಳಗಿಟ್ಟುಕೊಂಡೇ ಬದುಕುತ್ತೇವೆ….”
ಡಾ. ಕನ್ಹಯ್ಯ ಕುಮಾರ್ ಮುಗುಳುನಗೆಯೊಂದಿಗೆ ನುಡಿದ ಒಂದೊಂದು ಮಾತೂ ಇಂದಿನ ದೇಶದ ಯುವನತೆಗೆ ಎದೆಗಿಳಿಯುವಂತಹ, ಎದೆಗೆ ನಾಟುವಂತಹದ್ದಾಗಿವೆ. ಇವು ವೈವಿಧ್ಯತೆಯ, ಬಹುತ್ವದ ನೆಲದ ಯುವಜನರ ಎದೆಗಳಲ್ಲಿ ತುಂಬಲಾಗಿರುವ ಏಕತಾನತೆಯ ವಿಷವನ್ನು ತೆಗೆಯುವ ವೈಚಾರಿಕ ಮದ್ದಾಗಿದೆ.
ವಿಡೀಯೊ ಕೃಪೆ: ವಾರ್ತಾಭಾರತಿ