ಒಕ್ಕೂಟ ವ್ಯವಸ್ಥೆಯಲ್ಲಿ ಒಂದು ಕೇಂದ್ರ ಸರ್ಕಾರವನ್ನು ಆಯ್ಕೆಮಾಡುವಾಗ ಮತದಾರ ತನ್ನ ಪ್ರಾದೇಶಿಕ ಹಿತ, ಕಣದಲ್ಲಿರುವ ಪಕ್ಷ ಮತ್ತು ಅಭ್ಯರ್ಥಿಯ ನೀತಿ, ನಿಲುವು ಮತ್ತು ಕಾರ್ಯದಕ್ಷತೆಯನ್ನು ಪರಿಗಣಿಸದೆ ಯಾವುದೋ ಭಾವನಾತ್ಮಕ ಅಲೆಯ ಮೇಲೆ, ಒಬ್ಬ ವ್ಯಕ್ತಿಯ ಮೋಡಿ ಮಾತಿನ ಮೇಲೆ ಮತ ಚಲಾಯಿಸಿದರೆ ಏನಾಗುತ್ತದೆ ಎಂಬುದಕ್ಕೆ ಈ ಬಾರಿಯ ಮಹಾ ಪ್ರವಾಹ ರಾಜ್ಯದ ಜನತೆಗೆ ತೋರಿಸಿಕೊಟ್ಟಿದೆ.
ರಾಜ್ಯದ ಬರೋಬ್ಬರಿ 90 ತಾಲೂಕುಗಳಲ್ಲಿ ಹಿಂದೆಂದೂ ಕಂಡು ಕೇಳರಿಯದ ಪ್ರಮಾಣದ ಪ್ರವಾಹ ಪರಿಸ್ಥಿತಿ ಉಂಟಾಗಿ ಸುಮಾರು ನೂರು ಮಂದಿ ಜಲಸಮಾಧಿಯಾಗಿದ್ದಾರೆ, 900ಕ್ಕೂ ಹೆಚ್ಚು ಹಳ್ಳಿಗಳು ಬಹುತೇಕ ಕೊಚ್ಚಿಹೋಗಿವೆ, ಅಪಾರ ಪ್ರಮಾಣದ ಖಾಸಗೀ ಆಸ್ತಿಪಾಸ್ತಿ, ಸಾರ್ವಜನಿಕ ರಸ್ತೆ, ಸೇತುವೆ, ಕಟ್ಟಡಗಳು ನಾಮಾವಶೇಷವಾಗಿವೆ. ಉತ್ತರಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಸತತ ಹದಿನೈದು ದಿನಗಳ ಬಳಿಕವೂ ಪ್ರವಾಹದ ಪ್ರಕೋಪ ಪೂರ್ಣ ತಗ್ಗಿಲ್ಲ. ಮಲೆನಾಡು ಮತ್ತು ಕರಾವಳಿಯಲ್ಲಿ ಕೂಡ ನಿರಂತರ ಮಳೆ ಮತ್ತು ಗುಡ್ಡ ಕುಸಿತ, ಪ್ರವಾಹ ಪರಿಸ್ಥಿತಿ ಸಂಪೂರ್ಣ ನಿಯಂತ್ರಣಕ್ಕೆ ಬಂದಿಲ್ಲ. ರಾಜ್ಯದ 60-70 ವರ್ಷಗಳ ಇತಿಹಾಸದಲ್ಲೇ ಅತ್ಯಂತ ಪ್ರವಾಹ ಪರಿಸ್ಥಿತಿ ಇದು.
ಆದರೆ, ಈವರೆಗೆ ಇಂತಹ ಮಹಾ ಪ್ರವಾಹ ಪರಿಸ್ಥಿತಿಯನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಲು ಕೇಂದ್ರದ ಬಿಜೆಪಿ ಸರ್ಕಾರ ಮೀನಾಮೇಷ ಎಣಿಸುತ್ತಿದೆ. ರಾಜ್ಯದ ಒಟ್ಟು 28 ಲೋಕಸಭಾ ಸ್ಥಾನಗಳ ಪೈಕಿ 25 ಕ್ಷೇತ್ರಗಳಲ್ಲಿ “ದೇಶಕ್ಕಾಗಿ ಮೋದಿ, ಮೋದಿಗಾಗಿ ನಾವು” ಎಂದು ಜಪಿಸುತ್ತಾ ಬಿಜೆಪಿ ಸಂಸದರನ್ನು ಆರಿಸಿ ಬಿಜೆಪಿಯ ‘ಮತ್ತೊಮ್ಮೆ ಮೋದಿ’ ಘೋಷಣೆಗೆ ಬಲತುಂಬಿದ ರಾಜ್ಯದ ಜನತೆಯನ್ನು ಕೇಂದ್ರದ ಮೋದಿ ಸರ್ಕಾರ ಎಷ್ಟು ಗಂಭೀರವಾಗಿ ಪರಿಗಣಿಸಿದೆ? ಸಂಕಷ್ಟದ ಹೊತ್ತಲ್ಲಿ ಎಷ್ಟರಮಟ್ಟಿಗೆ ಜನರ ಕಾಳಜಿ ವಹಿಸುತ್ತಿದೆ ಎಂಬುದಕ್ಕೆ ಈ ನಿರ್ಲಕ್ಷ್ಯ ನಿದರ್ಶನವಲ್ಲವೆ?
ಒಂದು ಅಂದಾಜಿನ ಪ್ರಕಾರ ರಾಜ್ಯದಲ್ಲಿ ಈ ಮಹಾಪ್ರವಾಹದಿಂದಾಗಿ ಸುಮಾರು 50 ಸಾವಿರ ಕೋಟಿ ರೂಪಾಯಿಯಷ್ಟು ಆಸ್ತಿಪಾಸ್ತಿ ನಷ್ಟ ಸಂಭವಿಸಿದೆ. ಸ್ವತಃ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರೇ ಸುಮಾರು 35-40 ಸಾವಿರ ಕೋಟಿ ನಷ್ಟ ಸಂಭವಿಸಿರಬಹುದು ಎಂದಿದ್ದಾರೆ. ಆ ಹಿನ್ನೆಲೆಯಲ್ಲಿಯೇ ಅವರು ಕೇಂದ್ರ ಸರ್ಕಾರಕ್ಕೆ ಸುಮಾರು 10 ಸಾವಿರ ಕೋಟಿ ರೂ. ಪರಿಹಾರ ಘೋಷಿಸುವಂತೆ ಕೋರಿದ್ದರು. ಅಲ್ಲದೆ ಆ ಪೈಕಿ ಕನಿಷ್ಠ ಮೂರು ಸಾವಿರ ಕೋಟಿಯಷ್ಟು ನೆರವನ್ನು ಕೂಡಲೇ ನೀಡುವಂತೆಯೂ ಕೋರಿದ್ದರು.
ಅದೇ ಬೇಡಿಕೆಯನ್ನು ಮುಂದಿಟ್ಟುಕೊಂಡೇ ಅವರು ಕಳೆದ ಹದಿನೈದು ದಿನದಲ್ಲಿ ಇದೀಗ ಮೂರನೇ ಬಾರಿಗೆ ದೆಹಲಿಗೆ ಹೋಗಿ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅವರ ಮುಂದೆ ಅಂಗಾಲಾಚಿದ್ದಾರೆ. ಆದರೆ, ಸ್ವತಃ ಗೃಹ ಸಚಿವ ಅಮಿತ್ ಶಾ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಪ್ರತ್ಯೇಕವಾಗಿ ನೆರೆ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿ ಹೋದ ಬಳಿಕವೂ, ರಾಜ್ಯ ಸರ್ಕಾರದಿಂದ ಅಂದಾಜು ಹಾನಿಯ ವರದಿ ನೀಡಿದ ಬಳಿಕವೂ, ಅಷ್ಟೇ ಅಲ್ಲ, ರಾಜ್ಯದಲ್ಲಿ ಪ್ರವಾಹ ರಕ್ಷಣಾ ಕಾರ್ಯಾಚರಣೆ ನಡೆಸಿದ ಸ್ವತಃ ಎನ್ ಡಿಆರ್ ಎಫ್ ವರದಿ ಸಲ್ಲಿಸಿದ ಬಳಿಕವೂ ಪ್ರಧಾನಿ ಮೋದಿಯವರು, ಮಳೆ ಹಾನಿ ಅಧ್ಯಯನಕ್ಕೆ ಮತ್ತೆ ಕೇಂದ್ರದ ಪ್ರತ್ಯೇಖ ತಂಡವನ್ನು ಕಳಿಸಿ, ಅದು ವರದಿ ನೀಡಿದ ಬಳಿಕ ಪರಿಹಾರದ ಬಗ್ಗೆ ತೀರ್ಮಾನಿಸುವುದಾಗಿ ಹೇಳಿದ್ದಾರೆ!
ಮಳೆ, ಪ್ರವಾಹ, ಚಂಡಮಾರುತದಂತಹ ದಿಢೀರ್ ವಿಪತ್ತಿನ ಸಂದರ್ಭದಲ್ಲಿ ಅರ್ಧ ತಿಂಗಳುಗಟ್ಟಲೆ ಒಂದು ರಾಜ್ಯದ ಮುಖ್ಯಮಂತ್ರಿಯನ್ನು; ಅದೂ ಏಕವ್ಯಕ್ತಿ ಸಚಿವ ಸಂಪುಟದ ಮುಖ್ಯಸ್ಥರನ್ನು ಹೀಗೆ ಪದೇಪದೇ ಅಲೆದಾಡಿಸುವುದು ಮತ್ತು ಅದೇ ಹೊತ್ತಿಗೆ ಬಿಡಿಗಾಸಿನ ನೆರವನ್ನೂ ಘೋಷಿಸದೇ ಸತಾಯಿಸುವುದು ಇತಿಹಾಸದಲ್ಲೇ ಇದೇ ಮೊದಲು ಎಂಬ ಆಕ್ರೋಶ ರಾಜ್ಯದ ಸಂತ್ರಸ್ತರಲ್ಲಿ ಮೂಡಿದೆ. 2009-10ರಲ್ಲಿ ರಾಜ್ಯದಲ್ಲಿ ಇದೇ ಯಡಿಯೂರಪ್ಪ ಸರ್ಕಾರ ಅಧಿಕಾರದಲ್ಲಿದ್ದಾಗ ಕೂಡ ಪ್ರವಾಹ ಪರಿಸ್ಥಿತಿ ಉಂಟಾದಾಗ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರು ಸ್ವತಃ ರಾಜ್ಯಕ್ಕೆ ಬಂದು ವೈಮಾನಿಕ ಸಮೀಕ್ಷೆ ನಡೆಸಿ ತಮ್ಮದೇ ಪಕ್ಷದ ಸರ್ಕಾರವಿಲ್ಲದೇ ಹೋದರು, ಬಿಜೆಪಿ ಸರ್ಕಾರವಿದ್ದರೂ ನಿಂತ ಹೆಜ್ಜೆಯಲ್ಲೇ 1600 ಕೋಟಿ ಪರಿಹಾರ ಪ್ಯಾಕೇಜ್ ಘೋಷಣೆ ಮಾಡಿ ದಿಲ್ಲಿಗೆ ವಾಪಸು ಹೋಗಿದ್ದರು!
ಆದರೆ, ಈಗ ವಿಪರ್ಯಾಸ ನೋಡಿ, ಒಂದು ರಾಜ್ಯದಲ್ಲಿ ತಮ್ಮದೇ ರಾಜಕೀಯ ಪಿತೂರಿ ಮತ್ತು ನಿರ್ಲಜ್ಜ ಆಪರೇಷನ್ ಕಮಲದ ಮೂಲಕ ಒಂದು ಸದೃಢ ಸರ್ಕಾರವನ್ನು ಕೆಡವಿ, ಬರೋಬ್ಬರಿ ಒಂದು ತಿಂಗಳು ಕಳೆದರೂ ಮುಖ್ಯಮಂತ್ರಿಯೊಬ್ಬರನ್ನು ಹೊರತುಪಡಿಸಿ ಮತ್ತೊಬ್ಬ ಯಾವ ಸಚಿವ ಸಂಪುಟವೂ ಇಲ್ಲದ ಸ್ಥಿತಿಯಲ್ಲಿ ಭೀಕರ ಪ್ರವಾಹ ಎದುರಾಗಿದೆ. ಕೇಂದ್ರದ ಬಿಜೆಪಿ ಹೈಕಮಾಂಡಿಗೆ ಸಕಾಲದಲ್ಲಿ ಸಚಿವ ಸಂಪುಟ ರಚಿಸಿ, ನೈಜ ಸರ್ಕಾರವನ್ನು ಸ್ಥಾಪಿಸಿ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಬೇಕು. ಆ ಮೂಲಕ ಸಂಕಷ್ಟದಲ್ಲಿರುವ ಜನಸಮುದಾಯಕ್ಕೆ ಸ್ಪಂದಿಸಬೇಕು ಮತ್ತು ಅದೇ ಹೊತ್ತಿಗೆ ಜನರಲ್ಲಿ ವ್ಯವಸ್ಥೆಯ ಬಗ್ಗೆ ಭರವಸೆ ಹುಟ್ಟಿಸಬೇಕು ಎಂಬ ಕಾಳಜಿಯಂತೂ ಇಲ್ಲ. ಕನಿಷ್ಠ ಪ್ರವಾಹ ಪರಿಹಾರ ಕಾರ್ಯಕ್ಕೆ ಅಗತ್ಯ ನೆರವನ್ನು ಸಕಾಲದಲ್ಲಿ ನೀಡುವ ಮೂಲಕ ಜನರ ನೋವಿಗೆ ಮಿಡಿಯುವ ಸೌಜನ್ಯ ಕೂಡ ಕಾಣುತ್ತಿಲ್ಲ ಎಂಬುದು ರಾಜ್ಯದ ಜನರನ್ನು ಕಂಗೆಡಿಸಿದೆ.
ಅಲ್ಲದೆ, ರಾಜ್ಯದ ಪ್ರಭಾವಿ ಧುರೀಣ, ಪ್ರಬಲ ಸಮುದಾಯವೊಂದರ ಪ್ರಶ್ನಾತೀತ ಧುರೀಣ ಯಡಿಯೂರಪ್ಪ ಅವರನ್ನು ಬಿಜೆಪಿ ಹೈಕಮಾಂಡ್ ನಡೆಸಿಕೊಳ್ಳುತ್ತಿರುವ ರೀತಿ ಕೂಡ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಯಡಿಯೂರಪ್ಪ ಅವರು ಶುಕ್ರವಾರ ಬೆಳಗ್ಗೆಯೇ ದೆಹಲಿಯಲ್ಲಿ ಮೋದಿಯವರನ್ನು ಭೇಟಿಯಾಗಿ ಪ್ರವಾಹ ಪರಿಸ್ಥಿತಿಯ ಬಗ್ಗೆ ವಿವರಿಸಿ, ಪರಿಹಾರ ಘೋಷಿಸುವಂತೆ ಪರಿಪರಿಯಾಗಿ ಕೇಳಿಕೊಂಡಿದ್ದಾರೆ. ಆ ಬಳಿಕ ಗೃಹ ಸಚಿವ ಹಾಗೂ ಪಕ್ಷದ ಹೈಕಮಾಂಡ್ ಅಮಿತ್ ಶಾ ಭೇಟಿಗಾಗಿ ದಿನವೆಲ್ಲಾ ಕಾದಿದ್ದಾರೆ. ಆದರೆ, ಒಂದು ರಾಜ್ಯದ ಮುಖ್ಯಮಂತ್ರಿ ಪ್ರವಾಹ ಮತ್ತು ಪ್ರವಾಹ ಪರಿಸ್ಥಿತಿ ನಿಭಾಯಿಸಲು ಪೂರಕವಾಗಿ ತುರ್ತಾಗಿ ಆಗಬೇಕಿರುವ ಸಚಿವ ಸಂಪುಟ ರಚನೆಯ ಬಗ್ಗೆ ಚರ್ಚಿಸಲು ಬಂದರೆ, ಅವರನ್ನು ಭೇಟಿಯಾಗಿ ಅಂತಿಮಗೊಳಿಸಿ ಬೇಗನೇ ರಾಜ್ಯಕ್ಕೆ ಕಳಿಸಬೇಕು, ಅಲ್ಲಿನ ಪರಿಸ್ಥಿತಿ ನಿಭಾಯಿಸಲು ಮತ್ತೊಬ್ಬರು ಗತಿಯಿಲ್ಲ ಎಂಬ ಸಣ್ಣ ವಿವೇಚನೆ ಕೂಡ ನಾಯಕರಿಗಿಲ್ಲದೇ ಹೋಯಿತೆ? ಎಂಬ ಪ್ರಶ್ನೆಗಳೂ ಬಿಜೆಪಿ ಹೈಕಮಾಂಡ್ ಕರ್ನಾಟಕದ ಬಗ್ಗೆ ಎಂತಹ ಧೋರಣೆ ಹೊಂದಿದೆ ಎಂಬುದನ್ನು ಬಿಂಬಿಸುತ್ತಿವೆ.
ಈ ನಡುವೆ, ಬಿಜೆಪಿಯೊಳಗೆ ಯಡಿಯೂರಪ್ಪ ಅವರನ್ನು ಹಣಿಯುವ ಯತ್ನಗಳನ್ನು ಈಗಾಗಲೇ ಹೈಕಮಾಂಡ್ ಮಾಡಿದೆ ಎನ್ನಲಾಗುತ್ತಿದ್ದು, ಬಿಎಸ್ ವೈ ತೆಗೆದುಕೊಂಡಿರುವ ಸಚಿವರ ಪಟ್ಟಿಯನ್ನು ನೋಡುವ ಮುನ್ನವೇ ತಮ್ಮ ಭೇಟಿಗೆ ಮೊದಲು ಆ ಪಟ್ಟಿಯನ್ನು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್ ಅವರಿಗೆ ತೋರಿಸಿ ಅವರೊಂದಿಗೆ ಚರ್ಚಿಸಿ ಅಂತಿಮಗೊಳಿಸಿಕೊಂಡು ಬನ್ನಿ ಎಂದು ಅಮಿತ್ ಶಾ ಹೇಳಿದ್ದಾರೆ ಎಂದು ವರದಿಯಾಗಿದೆ. ಅಂದರೆ, ಯಡಿಯೂರಪ್ಪ ಅವರ ಜುಟ್ಟನ್ನು ಸಂತೋಷ್ ಕೈಗೆ ಕೊಡುವ ಮೂಲಕ ಹೈಕಮಾಂಡ್ ಕೇವಲ ಯಡಿಯೂರಪ್ಪ ಅವರಿಗಷ್ಟೇ ಅಲ್ಲ; ರಾಜ್ಯ ಬಿಜೆಪಿಯ ಇತರ ನಾಯಕರಿಗೂ ಒಂದು ಸ್ಪಷ್ಟ ಸಂದೇಶ ರವಾನಿಸಿದೆ.
ಇದೀಗ ಶನಿವಾರ ಬೆಳಗ್ಗೆ ಶಾ ಮತ್ತು ಯಡಿಯೂರಪ್ಪ ಭೇಟಿ ನಿರೀಕ್ಷೆಯಿದ್ದು, ಆ ಮೊದಲು ಸಂತೋಷ್ ಅವರು ಸಚಿವರ ಪಟ್ಟಿಯನ್ನು ಅಂತಿಮಗೊಳಿಸಲಿದ್ದಾರೆ. ಅದೇ ಪಟ್ಟಿಯನ್ನು ಶಾ ಅನುಮೋದಿಸುವ ಸಾಧ್ಯತೆ ಹೆಚ್ಚಿದೆ. ಹಾಗಾಗಿ ಯಡಿಯೂರಪ್ಪ ಆಪ್ತರಲ್ಲಿ ಹಲವರಿಗೆ ಸಚಿವ ಸ್ಥಾನ ಕೈತಪ್ಪುವ ಸಾಧ್ಯತೆ ಇದ್ದು, ಬಹುತೇಕ ಪಕ್ಷನಿಷ್ಠೆ, ಸಂಘದ ಹಿನ್ನೆಲೆ ಮತ್ತು ಹಿರಿತನದ ಆಧಾರದ ಮೇಲೆ ಮೊದಲ ಸುತ್ತಿನಲ್ಲಿ 12-15 ಮಂದಿ ಸೋಮವಾರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇನ್ನುಳಿದವರಿಗೆ ಎರಡನೇ ಹಂತದಲ್ಲಿ ಅವಕಾಶ ನೀಡಬಹುದು.
ಆದರೆ, ಯಡಿಯೂರಪ್ಪ 16ಕ್ಕೂ ಹೆಚ್ಚು ಮಂದಿ ತಮ್ಮ ಈ ಹಿಂದಿನ ಕೆಜೆಪಿ ಪ್ರಯೋಗಕ್ಕೆ ತಮ್ಮೊಂದಿಗೆ ಸಾಥ್ ನೀಡಿದ ರೇಣುಕಾಚಾರ್ಯ, ಆರ್ ಅಶೋಕ್, ಉಮೇಶ್ ಕತ್ತಿ ಸೇರಿದಂತೆ ಸುಮಾರು 16 ಮಂದಿಗೆ ಸಚಿವ ಸ್ಥಾನ ಕೊಡಲೇಬೇಕು ಎಂದು ಪಟ್ಟು ಹಿಡಿದಿದ್ದಾರೆ. ಅಲ್ಲದೆ, ಈಶ್ವರಪ್ಪ ಅವರನ್ನು ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಬೇಕು ಎಂಬ ಬೇಡಿಕೆಯನ್ನೂ ಹೈಕಮಾಂಡ್ ಮುಂದಿಟ್ಟಿದ್ದಾರೆ. ಆದರೆ, ಆ ಬೇಡಿಕೆಗೆ ಸಂತೋಷ್ ಅಡ್ಡಗಾಲಾಗಿದ್ದು, ಅವರು ತಮ್ಮದೇ ಪ್ರತ್ಯೇಕ ಪಟ್ಟಿಯನ್ನು ಇಟ್ಟುಕೊಂಡು ಅದಕ್ಕೆ ಯಡಿಯೂರಪ್ಪ ಕಡೆಯಿಂದ ಒಂದೆರಡು ಹೆಸರು ಸೇರಿಸಿ ಅಂತಿಮಗೊಳಿಸುವ ಸಾಧ್ಯತೆಯೇ ಹೆಚ್ಚಿದೆ ಎಂಬ ಮಾತುಗಳೂ ಇವೆ.
ಅದೇನೇ ಇರಲಿ, ಯಾರಿಗೆ ಕೆಂಪು ಗೂಟದ ಕಾರು ಕೊಡಬೇಕು, ಕೊಡಬಾರದು ಎಂಬ ಬಗ್ಗೆ ಬಿಜೆಪಿ ಹೈಕಮಾಂಡ್ ಚರ್ಚೆ ಮಾಡುತ್ತಾ ಬಹುತೇಕ 20 ದಿನ ಕಳೆದಿವೆ. ದೇಶಭಕ್ತಿ, ಜನಸೇವೆ, ಸಚ್ಛಾರಿತ್ರ್ಯ, ಅಚ್ಛೇದಿನ, ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಬಲಿಷ್ಠ ಭಾರತದಂತಹ ಘೊಷಣೆಗಳನ್ನು ಹೇಳುವ ಬಿಜೆಪಿಯನ್ನು ನಂಬಿ ಮತ ಹಾಕಿ ದೇಶದಲ್ಲೇ ಅತಿ ಹೆಚ್ಚಿನ ಜನಾದೇಶವನ್ನು ನೀಡಿದ ಕನ್ನಡಿಗರು ಇದೀಗ ಸಾವು-ಬದುಕಿನ ನಡುವೆ ಹೊಯ್ದಾಡುತ್ತಿರುವಾಗ, ಆ ಪಕ್ಷದ ನಾಯಕರು ಕುರ್ಚಿ ಮೇಲೆ ಟವೆಲ್ ಹಾಕುವುದರಲ್ಲಿ ಬ್ಯುಸಿಯಾಗಿದ್ದಾರೆ. ಒಂದು ಸಚಿವ ಸಂಪುಟ ರಚಿಸಲಾಗದೆ ಸರ್ಕಸ್ ಮಾಡುತ್ತಿದ್ಧಾರೆ. ಜನರ ಸಂಕಟದ ಬಗ್ಗೆ ಕಿಂಚಿತ್ತೂ ಕಾಳಜಿ ವಹಿಸದೆ, ತುರ್ತು ಗಮನ ಹರಿಸದೆ, ತಮ್ಮದೇ ಸಂಪುಟ ರಚನೆಯ ಸರ್ಕಸ್ಸಿನಲ್ಲೇ ಮೈಮರೆತಿದ್ದಾರೆ.
ಮತದಾರ ಮತ ಹಾಕಿದ ತಪ್ಪಿಗೆ, ಕಾಲ ಕೆಳಗೆ ಕೊಚ್ಚಿ ಒಯ್ಯವ ಪ್ರವಾಹ, ನೆತ್ತಿನ ಮೇಲೆ ಎಡಬಿಡದೆ ಸುರಿವ ಮಳೆಯ ನಡುವೆ, ಚೂರು ಸೂರಿಗಾಗಿ, ತುತ್ತು ಅನ್ನಕ್ಕಾಗಿ ಕೈಯೊಡ್ಡಿ ಗಂಜಿಕೇಂದ್ರಗಳಲ್ಲಿ ಗೋಳಿಡುತ್ತಿದ್ದಾನೆ. ದೇಶಕ್ಕಾಗಿ ಮೋದಿ, ಮೋದಿಗಾಗಿ ನಾವು ಎಂದು ಮತ ಹಾಕಿದ ತಪ್ಪಿಗೆ, ಈಗ ಸ್ಥಳೀಯ ಇತರ ನಾಯಕರನ್ನೂ ಕೊರಳಪಟ್ಟಿ ಹಿಡಿದು ಕೇಳಲಾರದ ಅಸಹಾಯಕತೆ ಅವರದ್ದು!
ಈ ನಡುವೆ, ಸದ್ಯಕ್ಕೆ ದಿಲ್ಲಿಯಿಂದ ಒಂದು ಕಡೆ ಪರಿಹಾರದ ಬಿಡಿಗಾಸು ಬರುವ ಸೂಚನೆಯೂ ಇಲ್ಲ ಮತ್ತು ಸಚಿವ ಸಂಪುಟ ಕೂಡ ಪೂರ್ಣಪ್ರಮಾಣದಲ್ಲಿ ಅಸ್ತಿತ್ವಕ್ಕೆ ಬರುವ ಸಾಧ್ಯತೆಯೂ ಇಲ್ಲ. ಹಾಗಾಗಿ ಸಂತ್ರಸ್ತರ ಗಂಜಿಕೇಂದ್ರ ವಾಸಕ್ಕೆ ಸದ್ಯಕ್ಕೆ ತೆರೆಬೀಳುವುದು ಕೂಡ ಅನುಮಾನಾಸ್ಪದವೇ!