ಒಂದು ಕಡೆ ರಾಜ್ಯದ ಬರೋಬ್ಬರಿ 103 ತಾಲೂಕುಗಳಲ್ಲಿ ಪ್ರವಾಹ ಪರಿಸ್ಥಿತಿಯಿಂದಾಗಿ ಜನ ಹೈರಾಣಾಗಿದ್ದರೆ, ಜನರ ಸಂಕಷ್ಟದ ಹೊತ್ತಲ್ಲಿ ನೆರವಿಗೆ ಧಾವಿಸಬೇಕಾದ ರಾಜ್ಯ ಸರ್ಕಾರದ ಮುಖ್ಯಸ್ಥರು ಮಂತ್ರಿಗಳ ಪಟ್ಟಿ ಹಿಡಿದುಕೊಂಡು ದೆಹಲಿಯ ಹೈಕಮಾಂಡ್ ಮನೆಯಿಂದ ಮನೆಗೆ ಅಲೆಯುತ್ತಿದ್ದಾರೆ. ಮತ್ತೊಂದು ಕಡೆ, ಬರೋಬ್ಬರಿ 50 ಸಾವಿರ ಕೋಟಿ ರೂಪಾಯಿ ಮೌಲ್ಯದ ಆಸ್ತಿಪಾಸ್ತಿ, ಬೆಳೆ ಹಾನಿ ಸಂಭವಿಸಿದ್ದರೂ ಕೇಂದ್ರ ಸರ್ಕಾರ ಕೇವಲ 140 ಕೋಟಿ ಅನುದಾನ ಘೋಷಿಸಿ ಕೈತೊಳೆದುಕೊಂಡಿದೆ!
ಇಡೀ ರಾಜ್ಯ ಹಿಂದೆಂದೂ ಕಂಡು ಕೇಳರಿಯದ ಪ್ರಮಾಣದ ಮಹಾ ಪ್ರವಾಹ ಸಂಭವಿಸಿದ್ದರೂ ರಾಜ್ಯದಲ್ಲಿ ಪರಿಸ್ಥಿತಿ ನಿಭಾಯಿಸಲು ಅಗತ್ಯ ಸಚಿವ ಸಂಪುಟವಿಲ್ಲ, ಉಸ್ತುವಾರಿ ಸಚಿವರಿಲ್ಲ. ಹಿಂದಿನ ಸಮ್ಮಿಶ್ರ ಸರ್ಕಾರವನ್ನು ಆಪರೇಷನ್ ಕಮಲದ ಮೂಲಕ ಉರುಳಿಸಿ ಬಿಜೆಪಿ ಸರ್ಕಾರವನ್ನು ರಚಿಸಿದ ಯಡಿಯೂರಪ್ಪ ಅವರು ಸಿಎಂ ಆಗಿ 22 ದಿನ ಕಳೆದರೂ, ರಾಜ್ಯ ತೀವ್ರ ವಿಕೋಪ ಪರಿಸ್ಥಿತಿಯನ್ನು ಎದುರಿಸುತ್ತಿದ್ದರೂ ಸಚಿವ ಸಂಪುಟ ರಚನೆಗೆ ದೆಹಲಿ ಹೈಕಮಾಂಡ್ ಹಸಿರು ನಿಶಾನೆ ತೋರಿಲ್ಲ. ಹಾಗಾಗಿ ಸದ್ಯಕ್ಕೆ ಪ್ರವಾಹ ಪರಿಸ್ಥಿತಿಯನ್ನು ಶಾಸಕರು, ಜಿಲ್ಲಾಧಿಕಾರಿಗಳು ಮತ್ತು ಉಸ್ತುವಾರಿ ಕಾರ್ಯದರ್ಶಿಗಳೇ ನಿರ್ವಹಿಸುತ್ತಿದ್ದು ಅಗತ್ಯ ಅನುದಾನವಿಲ್ಲದೆ ಅವರುಗಳು ಕೇವಲ ಸಮೀಕ್ಷೆ, ಭೇಟಿಗಳಿಗೆ ಮಾತ್ರ ಸೀಮಿತವಾಗಿದ್ದಾರೆ.
ಮಲೆನಾಡಿನಲ್ಲಂತೂ ಪರಿಸ್ಥಿತಿ ಎಷ್ಟು ಹೀನಾಯವಾಗಿದೆ ಎಂದರೆ, ಸೇತುವೆ, ರಸ್ತೆಗಳು ಕೊಚ್ಚಿಹೋಗಿ ಹೊರಜಗತ್ತಿನ ಸಂಪರ್ಕ ಕಡಿದುಕೊಂಡು ದ್ವೀಪಗಳಾಗಿರುವ ಕುಗ್ರಾಮಗಳಿಗೆ ಸಂಪರ್ಕ ವ್ಯವಸ್ಥೆ ಸರಿಪಡಿಸುವುದು, ವಿದ್ಯುತ್ ಸಂಪರ್ಕ ಒದಗಿಸುವುದು ಸೇರಿದಂತೆ ತಾತ್ಕಾಲಿಕ ಕಾಮಗಾರಿಗಳಿಗೂ ಹಣವಿಲ್ಲದ ಸ್ಥಿತಿ ಇದೆ. ಜೊತೆಗೆ ಪೂರ್ಣ ಪ್ರಮಾಣದ ಸರ್ಕಾರ, ಉಸ್ತುವಾರಿ ಸಚಿವರ ಮೇಲುಸ್ತುವಾರಿ ಇಲ್ಲದೆ ಅಧಿಕಾರಿಗಳಿಗೂ ಸ್ಪಷ್ಟ ನಿರ್ದೇಶನ, ಮಾರ್ಗದರ್ಶನವಿಲ್ಲದಂತಾಗಿದೆ. ಬಿಜೆಪಿ ಹೈಕಮಾಂಡ್ ಮತ್ತು ರಾಜ್ಯ ನಾಯಕರ ಹೊಣೆಗೇಡಿತನದ ಇಂತಹ ದುರವಸ್ಥೆಯ ಫಲ ಅನುಭವಿಸುವುದು ಮಾತ್ರ ಈಗಾಗಲೇ ಮಹಾ ಪ್ರವಾಹಕ್ಕೆ ತುತ್ತಾಗಿ ಮನೆಮಠ, ತೋಟ-ತುಡಿಕೆ ಕಳೆದುಕೊಂಡು ಬೀದಿಪಾಲಾಗಿರುವ ಸಂತ್ರಸ್ತರು!
ಇದಕ್ಕೊಂದು ತಾಜಾ ಉದಾಹರಣೆ; ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಶರಾವತಿ ಹಿನ್ನೀರು ದ್ವೀಪ ಪ್ರದೇಶ ತುಮರಿ ಪಂಚಾಯ್ತಿ ವ್ಯಾಪ್ತಿಯ ಹಳ್ಳಿಗಳು. ದಟ್ಟ ಕಾಡು ಮತ್ತು ಕಣಿವೆಯ ಈ ಪ್ರದೇಶದಲ್ಲಿ ಸಹಜ ಸ್ಥಿತಿಯಲ್ಲೇ ತಾಲೂಕು ಕೇಂದ್ರ ಸಾಗರಕ್ಕೆ ಸಂಪರ್ಕ ಸಾಧಿಸುವುದು ದುಸ್ತರ. ಅಂತಹ ಸ್ಥಿತಿಯಲ್ಲಿ ಮಹಾಪ್ರವಾಹದಿಂದಾಗಿ ಪ್ರತಿ ಕಣಿವೆ, ಹಳ್ಳಕೊಳ್ಳಗಳ ಸಂಪರ್ಕ ಸೇತುವೆಗಳು, ಕಚ್ಛಾ ರಸ್ತೆಗಳೂ ಕೊಚ್ಚಿ ಹೋದರೆ ಅಲ್ಲಿನ ಜನ ಎಂತಹ ಸ್ಥಿತಿ ಎದುರಿಸಬೇಕಾಗಬಹುದು ಎಂಬುದು ಊಹಿಸಬಹುದು. ಅಂತಹದ್ದೇ ಕುಗ್ರಾಮ ಬ್ರಾಹ್ಮಣ ಕೆಪ್ಪಿಗೆ. ಆ ಹಳ್ಳಿಯೊಂದಿಗೆ ಕಲ್ಕಟ್ಟು ಎಂಬ ಕುಗ್ರಾಮ(ಹ್ಯಾಮ್ಲೆಟ್)ಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಮಳೆಯಲ್ಲಿ ಕೊಚ್ಚಿಹೋಗಿತ್ತು. ಸುಮಾರು 14 ಮನೆಗಳ, 90 ಮಂದಿ (ಮೂವರು ದಿವ್ಯಾಂಗರು ಸೇರಿ) ಹೊರಜಗತ್ತಿನ ಸಂಪರ್ಕ ಕಡಿದುಕೊಂಡು ಬಹುತೇಕ ಹತ್ತು ದಿನಗಳೇ ಕಳೆದಿದ್ದವು.
ಸ್ಥಳೀಯ ತುಮರಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಜಿ ಟಿ ಸತ್ಯನಾರಾಯಣ ಮತ್ತು ಆಡಳಿತ ಆ ಹಳ್ಳಿಗೆ ಹೋಗಿ ಖುದ್ದು ಪರಿಶೀಲಿಸಿ ತಾತ್ಕಾಲಿಕ ಸಂಪರ್ಕ ವ್ಯವಸ್ಥೆ ಮಾಡಲು ಕ್ರಮಕೈಗೊಂಡರು. ಅಲ್ಲಿಯೇ ಸಮೀಪದಲ್ಲಿ ಹೊಳೆಯಲ್ಲಿ ಮುಳುಗಿದ್ದ ಹಳೆಯ ಪೈಪುಗಳನ್ನು ಬಳಸಿ ತಾತ್ಕಾಲಿಕ ವ್ಯವಸ್ಥೆ ಮಾಡಲು ನಡೆಸಿದ ಯತ್ನ ಕೈಗೂಡಲಿಲ್ಲ. ಹಾಗಾಗಿ ಸ್ಥಳೀಯ ಬಿಜೆಪಿ ಶಾಸಕ ಹರತಾಳು ಹಾಲಪ್ಪ ಅವರನ್ನೂ ಕೋರಿದರು. ಶಾಸಕರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ವಾರ ಕಳೆದರೂ ಯಾವುದೇ ಪ್ರಯೋಜನವಾಗಲಿಲ್ಲ. ತುಮರಿ ಪ್ರದೇಶವೇ ದ್ವೀಪದಂತಿದೆ. ಅದರಲ್ಲೂ ಹೊರಜಗತ್ತಿನ ಸಂಪರ್ಕ ಕಡಿದುಕೊಂಡ ಈ ಕುಗ್ರಾಮ ಅಕ್ಷರಶಃ ದ್ವೀಪವೇ ಆಗಿತ್ತು. ಆದರೆ, ತಾಲೂಕು ಆಡಳಿತವಾಗಲೀ, ಜಿಲ್ಲಾಡಳಿತವಾಗಲೀ ಆ ಜನರಿಗೆ ತುರ್ತು ಸಂಪರ್ಕ ಕಲ್ಪಿಸುವ ಪ್ರಯತ್ನವನ್ನೇ ಮಾಡಲಿಲ್ಲ. ಆಗ ತಾಳ್ಮೆ ಕಳೆದುಕೊಂಡ ಜನ ಆಡಳಿತ ವ್ಯವಸ್ಥೆಗೆ ಸೆಡ್ಡು ಹೊಡೆದು ತಾವೇ ತಾತ್ಕಾಲಿಕ ಬಿದಿರಿನ ಕಾಲು ಸಂಕ ನಿರ್ಮಾಣಕ್ಕೆ ಮುಂದಾದರು. ಗ್ರಾಮ ಪಂಚಾಯ್ತಿ ಅಧ್ಯಕ್ಷರು ಸುಮಾರು 15 ಸಾವಿರ ರೂ. ಅನುದಾನ ನೀಡಿದ್ದಲ್ಲದೆ, ಸ್ವತಃ ಹೋಗಿ ಜನರನ್ನು ಒಟ್ಟುಗೂಡಿಸಿ ಸಂಕ ನಿರ್ಮಾಣ ಮಾಡಿದರು.
ಹೊಣೆಗೇಡಿ ಸರ್ಕಾರ ಮತ್ತು ಆಡಳಿತಕ್ಕೆ ಪ್ರತ್ಯುತ್ತರವಾಗಿ ಸ್ಥಳೀಯ ಪಂಚಾಯ್ತಿ ಮಟ್ಟದಲ್ಲಿ ಕ್ರಿಯಾಶೀಲ ನಾಯಕತ್ವ ಹೇಗೆ ಕೆಲಸ ಮಾಡಬಹುದು ಎಂಬುದಕ್ಕೂ, ಜನ ಸಂಕಷ್ಟಕ್ಕೆ ಸ್ಪಂದಿಸದ ಸರ್ಕಾರಕ್ಕೆ ಮಲೆನಾಡಿನ ಕುಗ್ರಾಮದ ಜನ ಹೇಗೆ ಸ್ವಾಭಿಮಾನದ ಪ್ರತ್ಯುತ್ತರ ನೀಡುತ್ತಾರೆ ಎಂಬುದಕ್ಕೂ ಈ ಕಾಲು ಸಂಕದ ಯಶೋಗಾಥೆ ಒಂದು ಉದಾಹರಣೆ.
ತಮ್ಮದೇ ಆದ ರೀತಿಯ ‘ಸಾಗರೋಲ್ಲಂಘನೆ’ಯ ಈ ಸಾಹಸಗಾಥೆಯನ್ನು ಪಂಚಾಯ್ತಿ ಅಧ್ಯಕ್ಷ ಜಿ ಟಿ ಸತ್ಯನಾರಾಯಣ ಅವರು ತಮ್ಮದೇ ಮಾತುಗಳಲ್ಲೇ ಹೇಳಿದ್ದಾರೆ;
“ಕಟ್ಟಿದ್ದೇವೆ….ದುಡಿವ ಜನರ ಬಂಡಾಯದ ಕಾಲುಸಂಕವನ್ನ. ನಿಜ…ಮೂರು ದಿನ ಹಿಂದೆ ನಮ್ಮ ಜನ ಹೇಳಿದ್ದರು.. “ಇನ್ನು ಒಂದು ದಿನ ಕಾಯುತ್ತೇವೆ ಸರಕಾರ ನಮಗೆ ನದಿ ದಾಟಲು ಬದಲಿ ವ್ಯವಸ್ಥೆ ಮಾಡದೇ ಇದ್ದರೆ ನಾವೇ ಕಟ್ಟುತ್ತೇವೆ, ನೀವು ಜತೆ ಇರಬೇಕು”.
“ಉಹುಂ… ಯಾರೂ ಬರಲಿಲ್ಲ…14 ಮನೆಗಳ ತುಮರಿ ಪಂಚಾಯ್ತಿ ವ್ಯಾಪ್ತಿಯ ಕಲ್ಕಟ್ಟು ಭಾಗ ಸೇತುವೆ ಕುಸಿದು ಸಂಪರ್ಕ ಕಳೆದುಕೊಂಡ ಸ್ಥಳಕ್ಕೆ ದೊಡ್ಡ ಜನಪ್ರತಿನಿಧಿಗಳು ಬಂದು ಹೋಗಿ ವಾರ ಕಳೆದರೂ ಯಾವ ಎಂಜಿನಿಯರ್ ಕೂಡಾ ಬರಲಿಲ್ಲ… ಕರೆ ಮಾಡಿದರೆ ಕಥೆ ಹೇಳಿದರು. ಕೊನೆಗೂ ಬರಲಿಲ್ಲ”.
“ಇಂದು(ಶನಿವಾರ) ಬೆಳಿಗ್ಗೆಯಿಂದ ಕಾಲು ಸಂಕ ನಿರ್ಮಾಣ ಕೈಗೆತ್ತಿಕೊಂಡು ಕೆಲಸ ಶುರು ಆಯಿತು. ಮೊನ್ನೆ ಗ್ರಾ ಪಂ ಆಡಳಿತ ಈ ಕೆಲಸ ಮಾಡಲು ಒಂದು ಕುಶಲ ಕೂಲಿ ಗಳ ತಂಡ ರಚನೆ ಮಾಡಿತ್ತು. ಆ ತಂಡ ನಿನ್ನೆ ಸಲಕರಣೆ ಸಿದ್ದ ಮಾಡಿಕೊಂಡಿತ್ತು. ಇಂದು ದುಡಿಯುವ ಜನ ಎದ್ದು ಬಂದರು. ಮರದ ದಿಮ್ಮಿಗಳು ಹಾಕಿ ಅದಕ್ಕೆ ಬಿಗಿತ ಮಾಡಿ ಶುದ್ದ ಹಳ್ಳಿಯ ಶೈಲಿಯಲ್ಲಿ ಮೂರು ಸಂಕ ಹಾಕಿ, ಅಡಿಕೆ ದಬ್ಬೆ ಅಡ್ಡ ಜೋಡಿಸಿ, ಸಂಜೆ ಹೊತ್ತಿಗೆ 75 ಅಡಿ ಉದ್ದದ ಕಾಲು ಸಂಕ ಮಾಡಿದರು”.
“ಸಂಜೆ ಹೊತ್ತಿಗೆ ಸುರಕ್ಷಿತ ಕಾಲು ಸಂಕ ಸಿದ್ದವಾಯ್ತು.. ಹಿಡಿದ ಕೆಲಸ ಮುಗಿಸಿದ ಖುಷಿ ಹಳ್ಳಿಮಕ್ಕಳದ್ದಾಯ್ತು. ಕಾಲು ಸಂಕಕ್ಕಾಗಿ ದಿನವಿಡೀ ಕೆಲಸ ಮಾಡಿದ ಹಳ್ಳಿಯ ಮಕ್ಕಳು, ಮಹಿಳೆಯರು ಸೇರಿ ಎಲ್ಲರೂ ಅಂದುಕೊಂಡ ಕೆಲಸ ಸಾಧಿಸಿದ ಖುಷಿಯಲ್ಲಿ ಸಿಹಿ ಹಂಚಿ ಸಂಭ್ರಮ ಪಟ್ಟೆವು”.
“ಮನುಷ್ಯನ ನಿತ್ಯ ಜೀವನ ಈ ರೀತಿ ನೈಸರ್ಗಿಕ ಅವಘಡ ಸಿಕ್ಕಾಗ, ನಿಯಮಾವಳಿಗಳು ಎಂದು ಕಥೆ ಹೇಳುತ್ತಾ ಕೂರಲು ಸಾಧ್ಯ ಇಲ್ಲ..15 ಸಾವಿರ ರೂಪಾಯಿ ಅಂದಾಜಿನ ಕೆಲಸ ಪಂಚಾಯ್ತಿ ನಿಯಮ ಪ್ರಕಾರ ನಡೆಯುವುದಾದರೆ ತಿಂಗಳು ಬೇಕು. ನೋ…. ಇದು ತುರ್ತು… ಜನರಿಗೆ ನ್ಯಾಯ ನೀಡಬೇಕು… ಮಾಡಲೇಬೇಕು. ಮಾಡಿದ್ದೇವೆ. ಇದು ಜಿಲ್ಲಾ ಆಡಳಿತ ಮಾಡಬೇಕಾದ ಕೆಲಸ ಮತ್ತು ಅವರ ಹೊಣೆಗಾರಿಕೆ ಕೂಡ. ಕೇವಲ ಎರಡು ಲಕ್ಷ ರೂಪಾಯಿ ವೆಚ್ಚದಲ್ಲಿ ಕಬ್ಬಿಣದ ಕಾಲು ಸೇತುವೆ ಮಾಡಿ ತುರ್ತಾಗಿ ಮುಗಿಸುವ ಕೆಲಸ ಆಗಿತ್ತು. ಮಾಡಲಿಲ್ಲ. ಇದೇ ಹೊಣೆಗೇಡಿತನದ ಕಾರಣಕ್ಕೆ ಇಂದೂ ಕೂಡಾ ಜನ ಕಿವುಡು ಸರಕಾರ ಎಂದು ಮಾತಾಡಿಕೊಂಡರು. ನಿಜ ಕೂಡಾ”.
“ಇಂದಿನ ಕಟ್ಟುವಿಕೆ ಕಾರ್ಯಕ್ಕೆ ನೂರಾರು ಮನಸ್ಸುಗಳು ಜತೆ ಆಗಿವೆ, ಹಿರಿಯ ಮುಖಂಡ ಕೆ ಸಿ ರಾಮಚಂದ್ರರವರು ಜತೆ ಜತೆ ಇದ್ದು ಮಧ್ಯಾಹ್ನ ಊಟದ ವ್ಯವಸ್ಥೆ ಮಾಡಿದರು, ಪ್ರಕಾಶ್ ಮತ್ತು ಪ್ರಸನ್ನ ತಂಡ ನೇತೃತ್ವದಲ್ಲಿ ಕೆಲಸ ಸಾಗಿತು. ಗ್ರಾ ಪಂ ಸದಸ್ಯ ಲೋಕಣ್ಣ ತಮ್ಮ ಅನುಭವ ಮಾರ್ಗದರ್ಶನ ನೀಡಿದರು. ನಮಗೆ ಸಹಕಾರ ನೀಡಿದ ಎಲ್ಲರಿಗೂ ಋಣಿ”.
“ಕಟ್ಟುತೇವ… ನಾವು ಕಟ್ಟುತ್ತೇವ ನಾವು ಕಟ್ಟೆ ಕಟ್ಟುತ್ತೇವ…..”
– ಜಿ ಟಿ ಸತ್ಯನಾರಾಯಣ. ಕರೂರು.
ಗ್ರಾ ಪಂ ಅಧ್ಯಕ್ಷ ರು. ತುಮರಿ.