ಕೊಪ್ಪಳ ನಗರದ ಬನ್ನಿಕಟ್ಟಿ ಪ್ರದೇಶದಲ್ಲಿರುವ ಡಿ.ದೇವರಾಜು ಅರಸು ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಸಂಭವಿಸಿದ್ದು ಇದರಿಂದಾಗಿ ಐವರು ವಿದ್ಯಾರ್ಥಿಗಳು ಅಸುನೀಗಿದ್ದಾರೆ.
ಅಗ್ನಿ ಸ್ಪರ್ಶಕ್ಕೆ ಬಲಿಯಾಗಿ ಮೃತರಾದ ವಿದ್ಯಾರ್ಥಿಗಳನ್ನು ಮಲ್ಲಿಕಾರ್ಜುನ, ಬಸವರಾಜ, ದೇವರಾಜ, ಗಣೇಶ ಮತ್ತು ರಮೇಶ ಎಂದು ಗುರುತಿಸಲಾಗಿದೆ. ದುರಂತಕ್ಕೆ ಬಲಿಯಾದ ಬಾಲಕರು 8, 9 ಮತ್ತು 10ನೇ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿದ್ದರೆಂದು ಹೇಳಲಾಗಿದೆ.
ದುರ್ಘಟನೆ ನಡೆದ ಸ್ಥಳಕ್ಕೆ ಕೂಡಲೇ ಪೊಲೀಸ್ ಅಧಿಕಾರಿಗಳು, ಬಿಸಿಎಂ ಇಲಾಖೆಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಧಾವಿಸಿರುವುದಾಗಿ ತಿಳಿದುಬಂದಿದೆ.
2008-2009ರಲ್ಲಿ ಈ ಸ್ಥಳದಲ್ಲಿ ಬಾಲಕರ ವಸತಿನಿಲಯವನ್ನು ತೆರಯಲಾಗಿತ್ತು. ಈ ಪ್ರದೇಶವು ಸುರಕ್ಷಿತವಲ್ಲವೆಂದು ವಿದ್ಯಾರ್ಥಿ ಸಂಘಟನೆಗಳು ಹಲವು ಬಾರಿ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದ್ದರೂ ಅದನ್ನು ಲೆಕ್ಕಿಸದ ಇಲಾಖೆಯ ಬೇಜವಾಬ್ದಾರಿತನ ಮತ್ತು ನಿರ್ಲಕ್ಷ್ಯವೇ ಇಂದಿನ ದುರಂತಕ್ಕೆ ಕಾರಣವಾಗಿದೆ ಎಂದು ವಿದ್ಯಾರ್ಥಿ ಸಂಘಟನೆಗಳ ಮುಖಂಡರು ಆರೋಪಿಸುತ್ತಾರೆ.
ಇದೀಗ ಐವರು ಬಾಲಕರ ಜೀವ ಬಲಿ ಪಡೆದ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನ ದುರ್ಘಟನೆಯನ್ನು ಖಂಡಿಸಿ ವಸತಿನಿಲಯದ ಎದುರು ವಿದ್ಯಾರ್ಥಿ ಸಂಘಟನೆಗಳು ಮಿಂಚಿನ ಪ್ರತಿಭಟನೆ ನಡೆಸುತ್ತಿರುವುದಾಗಿ ತಿಳಿದುಬಂದಿದೆ.