ಪ್ರಶ್ನೆ: ಕಳೆದ ನಾಲ್ಕು ವರ್ಷಗಳಲ್ಲಿ ಭಾರತದ ಮಾಧ್ಯಮಗಳಿಗೆ ಏನಾಯಿತೆಂದು ನಿಮಗನಿಸುತ್ತಿದೆ?
ರವೀಶ್ ಕುಮಾರ್: ದುರಾದೃಷ್ಟವಶಾತ್ ಮಾಧ್ಯಮಗಳು ಆಳುವವರ ಸೇವೆಯಲ್ಲೇ ನಿರತವಾಗಿಬಿಟ್ಟಿವೆ ಮತ್ತು ಅವರ ಉದ್ದೇಶಗಳನ್ನು ಈಡೇರಿಸುವಂತಹ ವಿವಾದಗಳನ್ನೇ ಸೃಷ್ಟಿಸುತ್ತಿವೆ. ಜನರ ಗಮನವನ್ನು ಗಹನವಾದ ವಿಷಯಗಳಿಂದ ಬೇರೆಡೆಗೆ ಸೆಳೆಯುವ ಸಲುವಾಗಿ ಹಾದಿ ತಪ್ಪಿಸಲಾಗುತ್ತಿದೆ. ಇಂತಹದೊಂದು ಪ್ರಕರಣವೇ ಆಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದ ವಿವಾದ. ಇದೊಂದು ಹೆಣೆಯಲಾದ ವಿವಾದವಾಗಿತ್ತು. ಜೆಎನ್ಯು ಸುತ್ತುವರಿದಿದ್ದ ವಿವಾದವೂ ಸಹ ಅದರಂತೆಯೇ ಆಗಿತ್ತು.
“ರಾಷ್ಟ್ರವಾದ” ಮತ್ತು “ಜಿನ್ನಾವಾದ”ಗಳ ನಡುವೆ ಇತ್ತೀಚೆಗೆ ಆಜ್ ತಕ್ ವಾಹಿನಿ ಹುಟ್ಟುಹಾಕಿದ ಚರ್ಚಾ ಕಾರ್ಯಕ್ರಮವನ್ನೇ ತೆಗೆದುಕೊಳ್ಳೋಣ. ವಿವಾದದ ಬಗ್ಗೆ ಸೂಕ್ತ ತಿಳಿವು ಮೂಡಿಸಲು ಪ್ರಯತ್ನಿಸುತ್ತಿದ್ದ ಕೆಲವು ವಿದ್ವಾಂಸರನ್ನು ಸಂದೇಹಾಸ್ಪದವಾದ ಹಾಲಿ ಸರ್ಕಾರದ ಬೆಂಬಲಿಗರ ವಿರುದ್ಧ ಎತ್ತಿ ಕಟ್ಟಲಾಯಿತು. ಒಂದೇ ಒಂದು ಮಾತನ್ನಾಡುವ ಮೊದಲೇ “ರಾಷ್ಟ್ರವಾದಿಗಳು” ಮತ್ತು ಜಿನ್ನಾ ಬೆಂಬಲಿಗರ ನಡುವೆ ಒಂದು ಕಥನವನ್ನು ರೂಪಿಸಲಾಗಿತ್ತು. ಅದನ್ನು ಸೃಷ್ಟಿಸಿದ್ದೆಂದೇ ನಾನು ಹೇಳುತ್ತೇನೆ. ಯಾರಿಗೂ ಯಾರು ಏನು ಮಾತನಾಡಿದ್ದರೆಂದು ನೆನಪಿರಲಿಕ್ಕಿಲ್ಲ. ಆದರೆ ಬಹುತೇಕ ವೀಕ್ಷಕರ ಮನಸ್ಸುಗಳಲ್ಲಿ ಜಿನ್ನಾ ಬೆಂಬಲಿಗರು ಅಚ್ಚಿಳಿದಿರಬಹುದು. ಟಿವಿ ಚಾನೆಲ್ಗಳಲ್ಲಿ ಚರ್ಚೆಯಾಗುತ್ತಿರುವ ಎಲ್ಲಾ ವಿಷಯಗಳನ್ನು ಪಟ್ಟಿಮಾಡಿ ನೋಡಿ. ಅಲ್ಲಿ ಯಾರ ಹಿತಾಸಕ್ತಿಯನ್ನು ಕಾಪಾಡಲಾಗುತ್ತಿದೆ ಎಂದು ಆಗ ತಿಳಿಯುತ್ತದೆ.
ಪ್ರಶ್ನೆ: ರಾಜಕಾರಣದಲ್ಲಿ ಟಿವಿ ಮಾಧ್ಯಮ ಎಂದೂ ಪಾತ್ರ ವಹಿಸಿದ್ದಿಲ್ಲವೇ?
ರವೀಶ್ ಕುಮಾರ್: ನರೇಂದ್ರ ಮೋದಿಯವರ ಅಧಿಕಾರದ ಹುಡುಕಾಟದಲ್ಲಿ ಮತ್ತು ಅಧಿಕಾರದಲ್ಲಿರುವಾಗ ತಮ್ಮ ವರ್ಚಸ್ಸನ್ನು ಉಳಿಸಿಕೊಳ್ಳುವಲ್ಲಿ ಟಿವಿ ಮಹತ್ವದ ಪಾತ್ರ ವಹಿಸಿದೆ. ಅಲ್ಲದೆ ಅವರು ಈಗ ಅಧಿಕಾರಕ್ಕೆ ಹಿಂದಿರುಗುವ ಪರದಾಟದಲ್ಲಿ ಟಿವಿ ವಾಹಿನಿಗಳು ಕೆಲಸ ಮಾಡುತ್ತಿವೆ. ಈಗ ತಮ್ಮದೇ ಆಹಾರ ಹೊಂದಿರುವ ರಾಜಕೀಯ ಪಕ್ಷಗಳು, ಅದನ್ನು ಫುಟೇಜ್ ಸಮೇತ ಚಾನೆಲ್ಗಳಿಗೆ ಒದಗಿಸುತ್ತವೆ. ಕೆಲವು ಚಾನೆಲ್ಗಳು ಫುಟೇಜ್ ತುಣುಕುಗಳನ್ನು ಪ್ರಸಾರ ಮಾಡುವಾಗ ಪಕ್ಷಗಳ ಹೆಸರನ್ನು ಉಲ್ಲೇಖಿಸಿತ್ತವಾದರೂ, ಬಹುತೇಕ ಚಾನೆಲ್ಗಳು ಹಾಗೆ ಮಾಡುವುದಿಲ್ಲ. ಈ ರೀತಿ ದೃಶ್ಯಗಳನ್ನು ನಿಯಂತ್ರಿಸಲಾಗುತ್ತಿದೆ. ಮತ್ತು ಅಲೆ ಸೃಷ್ಟಿಸಲು ಇದನ್ನು ಬಳಸಲಾಗುತ್ತಿದೆ. ಇತ್ತೀಚೆಗೆ ಕರ್ನಾಟಕದಲ್ಲಿ ಜರುಗಿದ ಚುನಾವಣೆಗಳಲ್ಲಿ ಪ್ರತಿಯೊಂದು ಪಕ್ಷಕ್ಕೂ ಎಷ್ಟು ಪ್ರಚಾರ ಸಿಕ್ಕಿತ್ತೆಂದು ನೀವೇನಾದರೂ ವಿಶ್ಲೇಷಿಸಿದರೆ ನಿಮಗೊಂದು ಸ್ಪಷ್ಟ ಚಿತ್ರಣ ಸಿಗುತ್ತದೆ. ವಿರೋಧಪಕ್ಷಗಳು ಪ್ರಜಾತಂತ್ರವನ್ನು ಸಂರಕ್ಷಿಸಬೇಕೆಂದು ಇಚ್ಛಿಸುವುದೇ ಆದಲ್ಲಿ, ಅವುಗಳು ಮೊದಲು ಟಿವಿ ಚಾನೆಲ್ಗಳ ವಿರುದ್ಧ ಹೋರಾಡಬೇಕಾಗುತ್ತದೆ.
ಪ್ರಶ್ನೆ: ಈ ರೀತಿ ಹೇಗೆ ಹೋರಾಡಬಹುದು?
ರವೀಶ್ ಕುಮಾರ್: ನೀವು ಸುದ್ದಿವಾಹಿನಿಗಳಿಗೆ ಹೇಳಬೇಕಿದೆ. ವಿಪಕ್ಷಗಳ ನಾಯಕರು ಮಾಧ್ಯಮಗಳಿಗೆ ಹೇಳಬೇಕು. “ನಮ್ಮ ಮೂರು ರ್ಯಾಲಿಗಳು ಟಿವಿಯಲ್ಲಿ ಹತ್ತು ಸೆಕೆಂಡುಗಳು ಮಾತ್ರ ಪ್ರಚಾರ ಪಡೆಯುತ್ತವೆ, ಆದರೆ ಆಳುವ ಪಕ್ಷದ ಮೂರು ರ್ಯಾಲಿಗಳು ಮೂರು ಗಂಟೆಗಳ ಪ್ರಚಾರ ಪಡೆಯುತ್ತವೆ…” ಎಂದು ವಿರೋಧಪಕ್ಷದ ನಾಯಕರು ತಮ್ಮ ರ್ಯಾಲಿಗಳಲ್ಲಿ ಮೊಟ್ಟಮೊದಲನೆಯದಾಗಿ ಹೇಳಬೇಕು. ಇದನ್ನು ಹೇಳದ ನಾಯಕನನ್ನು ನಾನು ಗೌರವಿಸುವುದಿಲ್ಲ, ಏಕೆಂದರೆ ಅವನು ಪ್ರಜಾಪ್ರಭುತ್ವವನ್ನು ಅರ್ಥಮಾಡಿಕೊಂಡಿಲ್ಲ ಇಲ್ಲವೇ ತಾನು ಮಾಡುತ್ತಿರುವ ಹೋರಾಟವನ್ನೇ ಅವನು ಅರ್ಥೈಸಿಕೊಂಡಿಲ್ಲ ಎಂಬುದು ಇದರರ್ಥ. ಎಲ್ಲರೂ ಇದನ್ನು ತಮಾಷೆ ಎಂದು ಪರಿಗಣಿಸುತ್ತಾರೆ. ಆದರೆ ಇದು ಖಂಡಿತಾ ತಮಾಷೆಯ ಮಾತಲ್ಲ. ಕರ್ನಾಟಕದ ಚುನಾವಣೆಗಳ ಸಂದರ್ಭದಲ್ಲಿ ನಡೆಸಿದ ಸಮೀಕ್ಷೆಗಳ ಸಂಖ್ಯೆಯನ್ನೊಮ್ಮೆ ಗಮನಿಸಿ. ಒಂದು ರಾಜ್ಯದಲ್ಲಿ ನಡೆಯುವ ಒಂದೇ ಚುನಾವಣೆಗೆ ಅದೆಷ್ಟು ಸಮೀಕ್ಷೆಗಳು ಬೇಕು? ಜನತೆಯ ನಿಜ ಕಾಳಜಿಗಳನ್ನು, ನೈಜ ಸಮಸ್ಯೆಗಳನ್ನು ಮುಚ್ಚಿಹಾಕಲು ಈ ಸಮೀಕ್ಷೆಗಳನ್ನು ಬಳಸಲಾಗುತ್ತದೆ.
ಪ್ರಶ್ನೆ: ಮಾಧ್ಯಮ ಸಂಸ್ಥೆಗಳ ಮಾಲೀಕರು ಸರ್ಕಾರ ಇಲ್ಲವೇ ಪತ್ರಕರ್ತರ ಜೊತೆಗೂ ಸಲಿಗೆ ಬೆಳೆಸುತ್ತಿದ್ದಾರೆಯೇನು?
ರವೀಶ್ ಕುಮಾರ್: ಸರ್ಕಾರವನ್ನು ಬೆಂಬಲಿಸಲು ಆಯ್ದುಕೊಳ್ಳುವ ಪತ್ರಕರ್ತರಿಗೆ ಇದು ಸುಸಮಯ. ಸರ್ಕಾರ ಮತ್ತು ಸಚಿವಾಲಯಗಳು ಅವರಿಗೆ ಕಳುಹಿಸುವ ಸುದ್ದಿಗಳನ್ನು ವರದಿ ಮಾಡುವುದಷ್ಟೇ ಅವರಿಂದ ಅಪೇಕ್ಷಿಸಿರುವುದು. ಟಿವಿಯಲ್ಲಿ ಅವರ ರ್ಯಾಲಿಗಳನ್ನು ತೋರಿಸಬೇಕು ಮತ್ತು ಸರ್ಕಾರದ ಬಗ್ಗೆ ಹೊಗಳಿಕೆಯ ಮಳೆ ಸುರಿಸಬೇಕು ಅಷ್ಟೆ. ಕರ್ನಾಟಕದಲ್ಲಿ ನರೇಂದ್ರ ಮೋದಿಯವರು ಪ್ರಚಾರಕಾರ್ಯ ಶುರು ಮಾಡಿದಾಗ ಟಿವಿ ಚಾನೆಲ್ಗಳು ಅದನ್ನು ಸಚಿನ್ ತೆಂಡುಲ್ಕರ್ ಕ್ರೀಸ್ ತಲುಪಿದಂತೆಯೇ ಚಿತ್ರಿಸಿಬಿಟ್ಟವು. ಬಿಜೆಪಿಗೋಸ್ಕರ ಚುನಾವಣೆಯನ್ನು ನರೇಂದ್ರಮೋದಿ ತಾವೊಬ್ಬರೇ ಏಕಾಂಗಿಯಾಗಿ ಗೆದ್ದುಬಿಡುವಂತೆ ಮಾಧ್ಯಮಗಳು ಬಿಂಬಿಸಿದವು.
ಪ್ರಶ್ನೆ: ಮಾಧ್ಯಮಗಳು ಸರ್ಕಾರದ ಜೊತೆ ಸಂಘರ್ಷಮಯ ಸಂಬಂಧ ಹೊಂದಿಲ್ಲವೆಂದು ತಾವು ಸೂಚಿಸುತ್ತಿರುವಿರಾ?
ರವೀಶ್ ಕುಮಾರ್: ಈ ತಿಂಗಳ ಅಂತ್ಯದಲ್ಲಿ ಸರ್ಕಾರವು ನಾಲ್ಕು ವರ್ಷಗಳ ಆಡಳಿತವನ್ನು ಪೂರೈಸಲಿದೆ. ಅನೇಕ ಸಮಾವೇಶಗಳನ್ನು ಹಮ್ಮಿಕೊಳ್ಳಲು ಈಗಾಗಲೇ ತಯಾರಿ ನಡೆದಿದೆ. ಈ ಎಲ್ಲಾ ಸಮಾವೇಶಗಳಲ್ಲಿ ಜನಸಾಮಾನ್ಯರ ಕುರಿತಾಗಿ ಏನೊಂದೂ ಇರದು. ಎಲ್ಲರೂ ಸರ್ಕಾರದ ಬಗ್ಗೆ ಒಳ್ಳೆಯ ಮಾತುಗಳನ್ನೇ ಆಡುತ್ತಾರೆ. ಬಹುತೇಕ ಈ ಸಮಾವೇಶಗಳನ್ನು ಮಾಧ್ಯಮ ಸಂಸ್ಥೆಗಳು ಆಯೋಜಿಸಲಿವೆ ಮತ್ತು ಅವುಗಳ ಪ್ರಾಯೋಜಕರು ಆಳುವವರಿಗೆ ನಿಕಟ ಸಂಪರ್ಕದಲ್ಲಿರುವ ಕಂಪನಿಗಳೇ ಆಗಿರುತ್ತವೆ.
ಭಾರತದಲ್ಲಿ ಸುದ್ದಿವಾಹಿನಿಗಳನ್ನು ಪ್ರಜಾತಂತ್ರದ ದಮನಕ್ಕೆ ಬಳಸಲಾಗುತ್ತಿರುವುದು ಅತ್ಯಂತ ವಿಷಾದನೀಯ ಸಂಗತಿಯಾಗಿದೆ. ಇದಕ್ಕಿಂತ ಹೆಚ್ಚು ಬೇಸರ ಉಂಟುಮಾಡುವ ವಿಷಯ ಮತ್ತೊಂದಿಲ್ಲ. ನಾವು ಪ್ರಜಾತಂತ್ರವನ್ನು ವರವಾಗಿಯೂ ಪಡೆದಿಲ್ಲ, ಉಚಿತವಾಗಿಯೂ ಗಳಿಸಿಲ್ಲ. ಹಮೇ ವರದಾನ್ ಮೇ ನಹಿ ಮಿಲಾ (ನಮಗದು ವರದಾನವಾಗಿ ಸಿಕ್ಕಿಲ್ಲ). ಅದಕ್ಕಾಗಿ ನಾವು ಬೆಲೆ ತೆತ್ತಿದ್ದೇವೆ. ವರ್ಷಗಟ್ಟಲೆ ಸಹಸ್ರಾರು ಜನರನ್ನು ಸೆರೆಮನೆಗೆ ತಳ್ಳಲಾಗಿತ್ತು. ನೂರಾರು ಸಾವಿರಾರು ಜನ ಪ್ರಜಾತಂತ್ರ ಮತ್ತು ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದಾರೆ. ಈಗ ಸುಮಾರು 600-700 ಟಿವಿ ಚಾನೆಲ್ಗಳು ಎಲ್ಲವನ್ನೂ ನಾಶಮಾಡಲು ನಾವು ಬಿಟ್ಟುಬಿಡಬೇಕೆ?
ಪ್ರಶ್ನೆ: ಆದರೆ ಜನರು ಈಗ ನಡೆಯುತ್ತಿರುವ ವಿದ್ಯಮಾನಗಳನ್ನು ತುರ್ತು ಪರಿಸ್ಥಿತಿಯ ಜೊತೆಗೆ ಹೋಲಿಸಿ ಅವುಗಳ ಬಗ್ಗೆ ಅನಗತ್ಯ ಗೊಂದಲ ಸೃಷ್ಟಿಸಲಾಗುತ್ತಿದೆ ಎಂದೇ ನಂಬಿದ್ದಾರಲ್ಲಾ…?
ರವೀಶ್ ಕುಮಾರ್: ನಾನು ವರ್ತಮಾನವನ್ನು ಚರಿತ್ರೆಯ ಕಂಗಳಿಂದ ನೋಡುವುದಿಲ್ಲ. ತುರ್ತು ಪರಿಸ್ಥಿತಿಯನ್ನು ಹೊಗಳುತ್ತಾ ಜನರು ಜನಪದ ಗೀತೆ ಹಾಡುತ್ತಿದ್ದರೇನು? ತುರ್ತು ಪರಿಸ್ಥಿತಿಯನ್ನು ಮೆಚ್ಚಿಕೊಂಡು ಜನ ಪುಸ್ತಕಗಳನ್ನು ಬರೆದರೇನು? ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಮತ್ತು ಅದನ್ನು ತೆರವುಗೊಳಿಸಿದ ಮೇಲೂ ಜನ ಅದನ್ನು ಕುರಿತು ಟೀಕೆ-ವಿಮರ್ಶೆಗಳನ್ನು ಮಾಡುತ್ತಲೇ ಇದ್ದರು. ಅಲ್ಲದೆ ವಿಪಕ್ಷಗಳು ತುರ್ತು ಪರಿಸ್ಥಿತಿಯನ್ನು ಪ್ರತಿರೋಧಿಸಿ ನಿರಂತರವಾಗಿ ಹೋರಾಟ ನಡೆಸಿದ್ದವು, ಅವು ಇಂದಿನ ವಿರೋಧಪಕ್ಷಗಳಂತಿರಲಿಲ್ಲ. ಮಾಧ್ಯಮಗಳು ಕೂಡ ಈ ಹೆಜ್ಜೆಯನ್ನು ಖಂಡಿಸಿದ್ದವು. ಅಂದು ಸಂಭವಿಸಿದ್ದ ಘಟನೆಯ ಹೆಸರಿನಲ್ಲಿ ಈಗ ನಡೆಯುತ್ತಿರುವುದನ್ನು ನಾವು ಹಗುರವಾಗಿ ಹೇಗೆ ಪರಿಗಣಿಸುವುದು? ನಾವು ಪ್ರಜಾತಂತ್ರವನ್ನು ಬಹಳ ಹಗುರವಾಗಿ ಪರಿಗಣಿಸಿದ್ದೇವೆ.
ಈಗ ಟಿವಿ ವಾಹಿನಿಗಳು ಮಾಡುತ್ತಿರುವುದಾದರೂ ಏನು? ಅವು ಪ್ರತಿರೋಧವನ್ನು ಹೀಯಾಳಿಸಿ ಕ್ಷೀಣಿಸುವಂತೆ ಮಾಡುತ್ತಿವೆ. ಪ್ರತಿರೋಧವೆಂದರೆ ನಾನು ರಾಜಕೀಯ ಪ್ರತಿರೋಧದ ಬಗ್ಗೆ ಮಾತ್ರ ಹೇಳುತ್ತಿಲ್ಲ. ಒಂದು ಆಳುವ ವ್ಯವಸ್ಥೆಗೆ ಮೊಟ್ಟಮೊದಲ ಪ್ರತಿರೋಧವೇ ಅದರ ಜನಸಮೂಹ ಮತ್ತು ನಾಗರಿಕ ಸಮಾಜ.
ಎಲೆಕ್ಟ್ರಾನಿಕ್ ಮಾಧ್ಯಮವು ಈ ಪ್ರತಿರೋಧವನ್ನು ಅಣುಕಿಸುತ್ತಿದೆ ಮತ್ತು ಅವರು ತಮ್ಮ ತವಕ ತಲ್ಲಣಗಳನ್ನು ವ್ಯಕ್ತಪಡಿಸಲು ಯಾವುದೇ ಅವಕಾಶ ಒದಗಿಸುತ್ತಿಲ್ಲ. ಟಿವಿ ವಾಹಿನಿಗಳು ಒಂದು ಮಾಧ್ಯಮವಾಗಿ ಕೇವಲ ಪ್ರಜಾತಂತ್ರವಿರೋಧಿ ಮಾತ್ರವಾಗಿಲ್ಲ, ಸಂಪೂರ್ಣವಾಗಿ ಪ್ರಜಾವಿರೋಧಿ ಕೂಡ ಆಗಿವೆ.
ಪ್ರಶ್ನೆ: ಮಾಧ್ಯಮಗಳನ್ನು ಅದರಲ್ಲೂ ವಿಶೇಷವಾಗಿ ಸಾಮಾಜಿಕ ಮಾಧ್ಯಮದ ಮೇಲೆ ನಿಯಂತ್ರಣ ಹೇರುವ ಅಗತ್ಯವಿದೆ ಎಂದು ಸ್ಮೃತಿ ಇರಾನಿ ಅಭಿಪ್ರಾಯಪಟ್ಟಿದ್ದಾರೆ. ಇದರ ಬಗ್ಗೆ ತಾವೇನು ಹೇಳುತ್ತೀರಿ?
ರವೀಶ್ ಕುಮಾರ್: ಅವರ ಹೇಳಿಕೆಯನ್ನು ನಾನು ಹೆಚ್ಚು ಗಮನಿಸಿಲ್ಲ. ಆದರೆ ಕೆಲವು ವಿಚಾರಗಳಿಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಜನತೆ ಸರ್ಕಾರವನ್ನು ಪ್ರಶ್ನಿಸಿ ಟೀಕಿಸಲು ಶುರುಮಾಡಿದಾಗ ಸಂದರ್ಭಗಳು ತಮ್ಮ ಕೈತಪ್ಪಿ ಹೋಗುತ್ತವೆಂದು ಅವರಿಗೆ ಅನಿಸುತ್ತದೆ. ಟಿವಿಯಂತೂ ಯಾರದ್ದೋ ಪರ ಅಂಟಿಕೊಂಡುಬಿಟ್ಟಿರುತ್ತದೆ. ಆದರೆ ಇಲ್ಲಿ ಯಾವುದೂ ನಿಶ್ಚಿತವಲ್ಲ, ಸಾಮಾಜಿಕ ಮಾಧ್ಯಮದಲ್ಲಿ ಇನ್ನೂ ಸ್ವಲ್ಪ ಅವಕಾಶವಿದೆ. ಏಕೆಂದರೆ ಜನ ಬರೆಯುತ್ತಾರೆ ಮತ್ತು ಹಾಸ್ಯ ಬರಹಗಳನ್ನು ಹಂಚುತ್ತಾರೆ. ಉದಾಹರಣೆಗೆ, ಪ್ರಧಾನಿಯವರು ಪಕೋಡಾ ಹೇಳಿಕೆ ನೀಡಿದ ನಂತರ ಸಾಮಾಜಿಕ ಮಾಧ್ಯಮವು ಕುಚೋದ್ಯಗಳಿಂದ ತುಂಬಿಹೋಗಿತ್ತು. ಆದ್ದರಿಂದ ಸಾಮಾಜಿಕ ಮಾಧ್ಯಮವನ್ನು ನಿಯಂತ್ರಿಸುವುದೂ ಸಹ ಅದರ ಅನಿರೀಕ್ಷಿತತೆಯನ್ನು ನಿಗ್ರಹಿಸಿದಂತೆಯೇ. ದ್ವೇಷ ಮತ್ತು ಅಂಧಶ್ರದ್ಧೆ ಹರಡುತ್ತಿರುವವರ ವಿರುದ್ಧ ಸರ್ಕಾರ ಏನು ಕ್ರಮ ಕೈಗೊಂಡಿದೆ? ಯಾರೂ ಸುಳ್ಳು ಸುದ್ದಿಗಳ ಬಗ್ಗೆ ಮಾತನಾಡುತ್ತಿಲ್ಲ. ಅದರ ಬದಲಿಗೆ ತಾವಾಗಿಯೇ ತಮ್ಮ ರ್ಯಾಲಿಗಳಲ್ಲಿ ಆ ಸುಳ್ಳು ಸುದ್ದಿಗಳಲ್ಲಿರುವ ವಿಷಯವನ್ನು ಪ್ರಚಾರ ಮಾಡುತ್ತಾರೆ. ಆದರೆ ಯಾರೂ ಅವುಗಳ ಬಗ್ಗೆ ಧ್ವನಿ ಎತ್ತುವುದಿಲ್ಲ. ಯಾವ ಚಾನೆಲ್ ಕೂಡ ಪ್ರಶ್ನೆಗಳನ್ನು ಕೇಳುವುದಿಲ್ಲ.
ಪ್ರಶ್ನೆ: 2019ರಲ್ಲಿ ಏನಾದರೂ ಬದಲಾವಣೆ ಕಾಣಬಹುದೆಂದು ನಿಮಗನಿಸುತ್ತದೆಯೇ?
ರವೀಶ್ ಕುಮಾರ್: ಈಗ ನಾವು 2018ರಲ್ಲಿದ್ದೇವೆ. ಈವರೆಗೂ ನನಗೆ ಯಾವ ಬದಲಾವಣೆಯೂ ಕಾಣುತ್ತಿಲ್ಲ. ಆದರೆ ಟಿವಿ ಚಾನೆಲ್ಗಳು ಈಗಾಗಲೇ 2019ರಲ್ಲಿವೆ. ಭಾರತದಲ್ಲಿ ನೀವೇನಾದರೂ ಟಿವಿ ಹಾಕಿದ್ದೇ ಆದರೆ, ನಿಮಗೆ 2019ರಲ್ಲಿ ಬದುಕಿರುವಂತೆ ಭಾಸವಾಗುತ್ತದೆ ಮತ್ತು 2018 ಕಳೆದು ಹೋಗಿರುವಂತೆ ಅನಿಸುತ್ತದೆ. ಈಗಾಗಲೇ ‘ಮಿಷನ್ 2019’ ಹೆಸರಿನ ಕಾರ್ಯಕ್ರಮಗಳನ್ನು ಬಿತ್ತರಿಸಲಾಗುತ್ತಿದೆ. ರಾಜಕೀಯ ಪಕ್ಷಗಳು ತಮ್ಮ ಪ್ರಚಾರಾಂದೋಲನವನ್ನು ಆರಂಭಿಸಿಲ್ಲವಾದರೂ ಸುದ್ದಿ ವಾಹಿನಿಗಳಂತೂ ಈಗಾಗಲೇ 2019ಕ್ಕೆ ಬ್ಯಾಟ್ ಮಾಡಲು ಶುರು ಮಾಡಿಕೊಂಡಿವೆ.
ಪ್ರಶ್ನೆ: ನೀವು ನಿಮ್ಮ ಪುಸ್ತಕದಲ್ಲಿ ಜಗತ್ತಿನ ಎಲ್ಲಾ ಭಾಗಗಳಲ್ಲೂ ‘Mob Culture’ (ಗಲಭೆಕೋರ ಸಂಸ್ಕೃತಿ) ಮತ್ತು ಸುಳ್ಳು ಸುದ್ದಿಗಳ ಪ್ರಚಾರದ ಬಗ್ಗೆ ಉಲ್ಲೇಖಿಸಿರುತ್ತೀರಿ. ಯಾವುದಾದರೂ ದೇಶ ಇವುಗಳ ವಿರುದ್ಧ ಯಶಸ್ವಿಯಾಗಿ ಹೋರಾಡಿರುವುದರ ಬಗ್ಗೆ ನಿಮಗೆ ಅರಿವಿದೆಯೇ?
ರವೀಶ್ ಕುಮಾರ್: ವಿವಿಧ ಕಾಲಘಟ್ಟಗಳಲ್ಲಿ, ವಿವಿಧ ದೇಶಗಳು ಸುಳ್ಳು ಸುದ್ದಿಗಳು ಮತ್ತು ಅದರ ಪ್ರಚಾರವನ್ನು ಹಿಮ್ಮೆಟ್ಟಿಸಲು ಸಾಧ್ಯವಾಗಿದೆ. 1920 ಮತ್ತು 1930ರ ದಶಕಗಳಲ್ಲಿ ಫ್ಯಾಸಿಸಂ ಉಚ್ಛ್ರಾಯ ಸ್ಥಿತಿಯಲ್ಲಿದ್ದಾಗ ಸ್ವೀಡನ್, ಬೆಲ್ಜಿಯಂ, ಫಿನ್ಲ್ಯಾಂಡ್ ಮತ್ತು ಇತರ ಹಲವು ದೇಶಗಳು ಅವುಗಳನ್ನು ಎದುರಿಸಲು ಸಾಧ್ಯವಾಗಿತ್ತು. ಸ್ವೀಡನ್ ನ ಒಂದು ರಾಜಕೀಯ ಪಕ್ಷಕ್ಕೆ, ತನ್ನ ಯುವಜನ ಸಂಘಟನೆಯ ಅಧ್ಯಕ್ಷನೊಬ್ಬ ಹಿಟ್ಲರ್ ನಿಂದ ತೀವ್ರ ಪ್ರಭಾವಿತನಾಗಿ ಅವನಿಂದ ಹಣ ಪಡೆದಿದ್ದಾಗಿ ತಿಳಿಯಿತು. ಆಗ ಆ ಪಕ್ಷವು ಪೂರ್ಣವಾಗಿ ತನ್ನ ಯುವಜನ ಸಂಘಟನೆಯನ್ನೇ ಕಿತ್ತೆಸೆಯಿತು. ಇದರಿಂದಾಗಿ ಆ ಪಕ್ಷವು ಮುನಿಸಿಪಲ್ ಚುನಾವಣೆಯಲ್ಲಿ ಸೋಲನುಭವಿಸಬೇಕಾಯಿತು. ಆದರೆ ಆ ಪಕ್ಷ ಯಾವುದೇ ರೀತಿಯಲ್ಲೂ ಗೊಂದಲಕ್ಕೊಳಗಾಗದೆ ತನ್ನ ದ್ವಾರ ಕಾಯುವ ಕೆಲಸವನ್ನು ಆರಂಭಿಸಿತು.
ಪ್ರಶ್ನೆ: ಹಿಟ್ಲರ್ನ ಜರ್ಮನಿ ಮತ್ತು ಮೋದಿಯ ಭಾರತ ಇವೆರಡರ ನಡುವೆ ಸಾಮ್ಯತೆ ಇದೆಯೇ?
ರವೀಶ್ ಕುಮಾರ್: ಒಂದೇ ರೀತಿಯ ಗಲಭೆಕೋರ ಸಂಸ್ಕೃತಿ ಮತ್ತು ಅಪಪ್ರಚಾರದ ರಾಜಕಾರಣ ಈಗ ಭಾರತದಲ್ಲಿ ಚಾಲ್ತಿಯಲ್ಲಿದೆ. ನಾನು ‘ರಾಷ್ಟ್ರೀಯ ಪಠ್ಯಕ್ರಮ’ ಎಂದು ಕರೆಯುವ ವಿಷಯಗಳಾದ ತ್ರಿವಳಿ ತಲಾಕ್, ಜಿನ್ನಾ ಮತ್ತು ನಮಾಜ್, ಇತ್ಯಾದಿಗಳನ್ನು ಹರಡಲಾಗುತ್ತಿದೆ. ಒಂದು ವಾರದ ಹಿಂದೆ ಗುರುಗ್ರಾಮದಲ್ಲಿ ಅದೆಷ್ಟು ಜನ ನಮಾಜ್ ಮಾಡಿದರೆಂದು ಯಾರಿಗೂ ಗೊತ್ತಿಲ್ಲ. ಗುರುಗ್ರಾಮದಲ್ಲಿ ಈಗ ರಾಷ್ಟ್ರೀಯ ಪಠ್ಯಕ್ರಮವನ್ನು ಬಿಡುಗಡೆಗೊಳಿಸಲಾಗಿದೆ. ಮತೀಯ ದುರಭಿಮಾನಕ್ಕೆ ಇದೊಂದು ಸೇರ್ಪಡೆಯಷ್ಟೆ.
ಪ್ರಶ್ನೆ: ಸಾಮಾಜಿಕ ಮಾಧ್ಯಮದಲ್ಲಿ ಟ್ರೋಲ್ ಮಾಡುವುದು ‘ವ್ಯವಸ್ಥಿತ’ ಎಂದು ತಾವು ಹೇಳುವಿರಾ?
ರವೀಶ್ ಕುಮಾರ್: ಹೌದು, ಇದು ನೂರಕ್ಕೆ ನೂರರಷ್ಟು ವ್ಯವಸ್ಥಿತವೇ. ಟ್ರೋಲ್ ಮಾಡಲೆಂದೇ ಜನರು ವಿವಿಧ ಶಿಫ್ಟ್ಗಳಲ್ಲಿ ಕೆಲಸ ಮಾಡುವಂತಹ ಮೂಲಸೌಕರ್ಯ ವ್ಯವಸ್ಥೆ ಇದೆಯೇ ಎಂದು ನಾನು ಕೆಲವೊಮ್ಮೆ ಬೆರಗಾಗಿದ್ದೇನೆ. ಆರಂಭದಲ್ಲಿ ದಿನಕ್ಕೊಮ್ಮೆ ಅಥವಾ ಎರಡು ದಿನಗಳಿಗೊಂದು ಸಲ ಯಾವುದೋ ಒಂದು ಸಂಖ್ಯೆಯಿಂದ ನನಗೆ ಕರೆಗಳು ಬರುತ್ತಿದ್ದವು. ಕೆಲವು ಬಾರಿ ಅಂತರರಾಷ್ಟ್ರೀಯ ಕಾರ್ಡ್ ಗಳನ್ನು ಬಳಸಿಯೂ ನನಗೆ ಕರೆ ಮಾಡಲಾಗುತ್ತಿತ್ತು. ಆಗ +44 ಅಥವಾ ಇತರ ಐಎಸ್ಡಿ ಕೋಡ್ಗಳಿಂದ ಪ್ರಾರಂಭವಾಗುವ ಸಂಖ್ಯೆಗಳಿಂದ ಕರೆಗಳು ಬರುತ್ತಿದ್ದವು.
ನಾನು ನಿಮಗೆ ಹೇಳಿದಂತೆ ನನಗೆ ಕರೆ ಮಾಡುತ್ತಿದ್ದವರು ಕೆಲವು ಮತೀಯ ಸಂಘಟನೆಗಳ “ಪದಾಧಿಕಾರಿಗಳೇ”. ಈ ಸಂಘಟನೆಗಳು ಖಡ್ಗಗಳನ್ನು ಹೊತ್ತ ಮತ್ತು ಕೇಸರಿ ಪಟ್ಟಿಯನ್ನು ತೊಟ್ಟ ನೂರಾರು ಜನರನ್ನು ಮೆರವಣಿಗೆಯಲ್ಲಿ ಕರೆದುಕೊಂಡು ಕೋಮುಸಾಮರಸ್ಯವನ್ನು ಕೆಡಿಸುವುದರಲ್ಲಿ ನಂಬಿಕೆ ಇಟ್ಟಿವೆ.
ತಾವು ಗುರಿಯಿಟ್ಟವರ ವಿರುದ್ಧ ಮಾನಸಿಕ ಸಮರ ಸಾರುತ್ತ ಆದೇಶ ನೀಡುವ ಪ್ರದರ್ಶನದಂತೆ ಈ ಮೆರವಣಿಗೆಗಳು ಕಾಣುತ್ತವೆ. ಈ ಮೊದಲು ಇಂತಹ ಏನನ್ನೂ ನಾನು ಕಂಡಿರಲಿಲ್ಲ.
ಪ್ರಶ್ನೆ: ಈ “ಟ್ರೋಲ್ ಸಂಘಟನೆ” ಯಾರನ್ನು ಗುರಿಯಾಗಿಸುತ್ತದೆ?
ರವೀಶ್ ಕುಮಾರ್: ಮೋದಿ ಸರ್ಕಾರವನ್ನು ಟೀಕಿಸುವವರು, ಪ್ರಶ್ನೆ ಕೇಳುವವರು, ಧರ್ಮನಿರಪೇಕ್ಷತೆಯ ಬಗ್ಗೆ ಮಾತನಾಡುವವರು ಇವರೇ ಅದರ ಟಾರ್ಗೆಟ್ ಗಳು.
(ಕೃಪೆ: National Herald)