ಲಂಡನ್: ಯುನೈಟೆಡ್ ಕಿಂಗ್ಡಂನ ರಾಜಧಾನಿ ಲಂಡನ್ ನಗರದಲ್ಲಿ ಬಾಬಾಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ಅವರು ವಾಸವಿದ್ದ ಮನೆಯನ್ನು ಮ್ಯೂಸಿಯಂ ಆಗಿ ಮಾರ್ಪಡಿಸಲು ಮಹಾರಾಷ್ಟ್ರ ಸರ್ಕಾರ ನಡೆಸುತ್ತಿದ್ದ ಪ್ರಯತ್ನಕ್ಕೆ ಸ್ಥಳೀಯ ಆಡಳಿತ ತಡೆಯೊಡ್ಡಿದೆ. ಮಾತ್ರವಲ್ಲ ಅಂಬೇಡ್ಕರ್ ನೆನಪಿನ ಮನೆಯನ್ನು ಈಗ ಇದ್ದ ಸ್ಥಳದಿಂದ ಬೇರೆಡೆಗೆ ಸ್ಥಳಾಂತರಿಸುವ ಪ್ರಯತ್ನದಲ್ಲಿ ಸ್ಥಳೀಯ ಆಡಳಿತ ತೊಡಗಿದೆ. ಅದನ್ನು ಇದ್ದಲ್ಲಿಯೇ ಉಳಿಸಿಕೊಳ್ಳಲು ಮಹಾರಾಷ್ಟ್ರ ಸರ್ಕಾರ ಹಾಗೂ ಕೇಂದ್ರ ಸರ್ಕಾರಗಳು ಜಂಟಿಯಾಗಿ ಪ್ರಯತ್ನ ನಡೆಸಿವೆ.
ಭಾರತದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು 1921-22ರಲ್ಲಿ ಲಂಡನ್ನಿನ ಸ್ಕೂಲ್ ಆಫ್ ಎಕನಾಮಿಕ್ಸ್ ನಲ್ಲಿ ವಿದ್ಯಾರ್ಥಿಯಾಗಿದ್ದ ಸಂದರ್ಭದಲ್ಲಿ ಉತ್ತರ ಲಂಡನ್ನಿನ ನಂ10, ಕಿಂಗ್ ಹೆನ್ರಿ ರಸ್ತೆಯಲ್ಲಿರುವ ಮನೆಯೊಂದರಲ್ಲಿ ವಾಸವಾಗಿದ್ದರು. ಆ ಮನೆಯನ್ನು ಬಾಬಾಸಾಹೇಬರ ನೆನಪಿನಲ್ಲಿ ಹಾಗೇ ಉಳಿಸಿಕೊಂಡು ಅದನ್ನೊಂದು ಮ್ಯೂಸಿಯಂ ಆಗಿ ಮಾರ್ಪಡಿಸಿ, ಶೈಕ್ಷಣಿಕ ಉಪಯೋಗಕ್ಕೆ ಬಳಸಿಕೊಳ್ಳಲು ಭಾರತವು ಪ್ರಯತ್ನ ನಡೆಸುತ್ತಿತ್ತು. 2014ರಲ್ಲಿ ಈ ಮನೆಯನ್ನು ಮಾರಾಟಕ್ಕೆ ಇಡಲಾಗಿದ್ದ ಸಂದರ್ಭದಲ್ಲಿ ಲಂಡನ್ ಮೂಲದ ಅಂಬೇಡ್ಕರ್ ಮತ್ತು ಬೌದ್ಧ ಸಂಘಟನೆಗಳ ಒಕ್ಕೂಟವು (ಫ್ಯಾಬೋ) ಭಾರತ ಸರ್ಕಾರಕ್ಕೆ ಪತ್ರ ಬರೆದು ಇದನ್ನು ಅಂಬೇಡ್ಕರ್ ನೆನಪಿನ ಮೆನಯಾಗಿ ಉಳಿಸುವ ದೃಷ್ಟಿಯಿಂದ ಸರ್ಕಾರವೇ ಖರೀದಿ ಮಾಡಬೇಕೆಂದು ಒತ್ತಾಯಿಸಿತ್ತು. ಅದರಂತೆ ಮಹಾರಾಷ್ಟ್ರ ಸರ್ಕಾರ ಈ ಮನೆಯನ್ನು 31 ಕೋಟಿ ರೂಪಾಯಿ ನೀಡಿ ಖರೀದಿಸಿತ್ತು. 2015ರಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವಿಂದರ್ ಫಡ್ನವಿಸ್ ಅವರೊಂದಿಗೆ ಲಂಡನ್ನಿಗೆ ತೆರಳಿ ಡಾ.ಬಿ.ಆರ್.ಅಂಬೇಡ್ಕರ್ ನೆನಪಿನ ಮನೆಯನ್ನು ಲೋಕಾರ್ಪಣೆಗೊಳಿಸಿದ್ದರು. 2018ರ ಫೆಭ್ರವರಿಯಲ್ಲಿ ಮಹಾರಾಷ್ಟ್ರ ಸರ್ಕಾರವು ಸ್ಥಳೀಯ ಆಡಳಿತಕ್ಕೆ ಅರ್ಜಿ ಸಲ್ಲಿಸಿ ಮನೆಯನ್ನು ಮ್ಯೂಸಿಯಂ ಆಗಿ ಮಾರ್ಪಡಿಸಲು ಅನುಮತಿ ಕೇಳಿತ್ತು.
ಈಗ ಬಂದಿರುವ ತಕರಾರೇನು?
ಅಂದಿನಿಂದಲೂ ಭಾರತದ ಹಲವು ಗಣ್ಯ ವ್ಯಕ್ತಿಗಳು ಈ ಅಂಬೇಡ್ಕರ್ ನೆನಪಿನ ಮನೆಗೆ ಭೇಟಿ ನೀಡಿದ್ದಾರೆ. ಬಾಬಾಸಾಹೇಬರ ಪುಸ್ತಕಗಳು ಹಾಗೂ ಕೆಲವು ವಸ್ತುಗಳನ್ನು ಅಲ್ಲಿ ಇರಿಸಲಾಗಿದೆ. ಈ ಮನೆಯ ಕೊಠಡಿಗಳ ಗೋಡೆಗಳ ಮೇಲೆ ಅಂಬೇಡ್ಕರ್ ಅವರ ಪ್ರಸಿದ್ಧ ಹೇಳಿಕೆಗಳನ್ನು ಬರೆಯಲಾಗಿದೆ. ಅಂಬೇಡ್ಕರ್ ಅವರ ನೆನಪಿನ ಮನೆಯನ್ನು ನೋಡಿಕೊಂಡು ಬರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. “ಈ ಮನೆಯು ಇರುವ ಜಾಗವು ನಾಗರಿಕ ವಸತಿ ಸ್ಥಳವಾಗಿರುವುದರಿಂದ ಇಲ್ಲಿಗೆ ಬರುವ ಜನರು ಗೌಜು ಗದ್ದಲ ಎಬ್ಬಿಸುವುದರಿಂದ ಸ್ಥಳೀಯರಿಗೆ ನೆಮ್ಮದಿ ಇಲ್ಲದಂತಾಗಿದೆ” ಎಂದು ಸ್ಥಳೀಯ ಕೇಮ್ಡನ್ ಕೌನ್ಸಿಲ್ ಆರೋಪಿಸಿದೆ. “ದಿನವೂ ಇಲ್ಲಿ ವೀಕ್ಷಕರು ವಾಹನಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಬರುವುದು, ಕ್ಯಾಮೆರಾ ಮೊಬೈಲುಗಳಲ್ಲಿ ಫೋಟೋ, ಸೆಲ್ಫೀ ತೆಗೆದುಕೊಳ್ಳುವುದು, ಇತ್ಯಾದಿಗಳು ಸ್ಥಳೀಯರ ನೆಮ್ಮದಿ ಕೆಡಿಸಿದೆ” ಎಂದು ಸ್ಥಳೀಯರು ದೂರಿದ್ದಾರೆ. ಈ ದೂರಿನ ಆಧಾರದಲ್ಲಿ ಈ ಮನೆಯನ್ನು ಮ್ಯೂಸಿಯಂ ಆಗಿ ಪರಿವರ್ತಿಸಬೇಕು ಎಂಬ ಭಾರತ ಸರ್ಕಾರದ ಕೋರಿಕೆಯನ್ನು ಸಹ ಕೌನ್ಸಿಲ್ ತಿರಸ್ಕರಿಸಿದೆ.
ನಾಲ್ಕು ಮಹಡಿ ಇರುವ ಅಂಬೇಡ್ಕರ್ ನೆನಪಿನ ಮನೆಗೆ ಸಧ್ಯ ಮ್ಯೂಸಿಯಂ ಆಗಿ ಸಾರ್ವಜನಿಕ ಪ್ರದರ್ಶನಕ್ಕೆ ಕಾನೂನಾತ್ಮಕ ಅನುಮತಿ ಇಲ್ಲವಾಗಿದೆ. ಇದಕ್ಕೆ ಅನುಮತಿ ನೀಡುವುದು ಕೌನ್ಸಿಲ್ ವ್ಯಾಪ್ತಿಗೆ ಬರುತ್ತದೆಯಾದರೂ ಅದರಿಂದ ಸುತ್ತಲಿನ ಪ್ರದೇಶವು ನಾಗರಿಕರಿಗೆ ವಸತಿ ಸೌಕರ್ಯ ನೀಡುವ ಅವಕಾಶ ಕಳೆದುಕೊಳ್ಳುತ್ತದೆ ಎಂಬ ಆತಂಕ ಸ್ಥಳೀಯ ಆಡಳಿತದ್ದಾಗಿದೆ. ಈ ಕಾರಣದಿಂದ ಅಂಬೇಡ್ಕರ್ ನೆನಪಿನ ಮನೆಯನ್ನು ಬೇರೆಡೆಗೆ ಸ್ಥಳಾಂತರಿಸಲು ಕ್ಯಾಮ್ಡೆನ್ ಕೌನ್ಸಿಲ್ ಇಚ್ಛಿಸಿದೆ.
ಇದೀಗ ಸಮಸ್ಯೆಯು ಜಟಿಲವಾಗುತ್ತಿದ್ದಂತೆ ಇಂಗ್ಲೆಂಡ್ನಲ್ಲಿರುವ ಭಾರತದ ರಾಯಭಾರ ಕಚೇರಿಯು ಸಿಂಘಾನಿಯಾ ಅಂಡ್ ಕೊ ಸಾಲಿಸಿಟರ್ಸ್ ನ್ಯಾಯವಾದಿಗಳನ್ನು ಕೌನ್ಸಿಲ್ ತೀರ್ಮಾನದ ವಿರುದ್ಧ ಮೊರೆ ಹೋಗಲು ನೇಮಕ ಮಾಡಿದೆ. ಸೆಪ್ಟೆಂಬರ್ 24ರಂದು ಈ ಕುರಿತು ಅಪೀಲು ಸಲ್ಲಿಸಲು ಅವಕಾಶವಿದ್ದು “ಅಪೀಲು ಹೋಗಲು ಸಾಕಷ್ಟು ಬಲವಾದ ಅಂಶಗಳಿವೆ” ಎಂದು ಲಂಡನ್ ಮೂಲದ ಸಂಸ್ಥೆಯ ವಕೀಲ ರವಿಕುಮಾರ್.
ಮಹಾರಾಷ್ಟ್ರ ಸರ್ಕಾರದ ಸಾಮಾಜಿಕ ನ್ಯಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ದಿನೇಶ್ ವಾಘ್ಮಾರೆ ಅವರು, “ಮಹಾರಾಷ್ಟ್ರ ಸರ್ಕಾರವು ಲಂಡನ್ನಲ್ಲಿರುವ ಭಾರತೀಯ ಹೈಕಮಿಶನ್ ಮುಖಾಂತರ ಕಾನೂನು ಸಂಸ್ಥೆಯೊಂದನ್ನು ನೇಮಿಸಿದ್ದೇವೆ. ಕಟ್ಟಡದ ಬದಲಾವಣೆಗೆ ಪಕ್ಕದಲ್ಲಿರುವ ನರ್ಸರಿಯೊಂದರ ಮಾಲೀಕರು ತಕರಾರು ಸಲ್ಲಿಸಿದ್ದಾರೆ. ಆದರೆ ಅಲ್ಲೇ ಇರುವ ಕೆಲವು ಕೆನಡಿಯನ್ನರು ಮಹಾರಾಷ್ಟ್ರ ಸರ್ಕಾರದ ಯೋಜನೆಗೆ ಬೆಂಬಲ ಸೂಚಿಸಿದ್ದಾರೆ” ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಭಾರತೀಯರು ಸಾಕಷ್ಟು ಸಂಖ್ಯೆಯಲ್ಲಿರುವ ಯುಕೆಯಲ್ಲಿ ಈಗ ಇರುವ ಸ್ಥಳದಲ್ಲೇ ಅಂಬೇಡ್ಕರ್ ಅವರ ಸ್ಮಾರಕವನ್ನು ಉಳಿಸಿಕೊಳ್ಳುವುದು ಮುಂದಿನ ಪೀಳಿಗೆಗಳ ದೃಷ್ಟಿಯಿಂದ ಮುಖ್ಯವಾಗಿದೆ. ಇದೊಂದು ಪಾರಂಪರಿಕ ಹೆಮ್ಮೆಯ ಮನೆಯಾಗಿದ್ದು ಈ ಜಾಗದಲ್ಲಿ ಜಗತ್ತಿನ ಮಹಾನ್ ವ್ಯಕ್ತಿಗಳಲ್ಲಿ ಒಬ್ಬರಾಗಿರುವ ಡಾ.ಬಿ.ಆರ್.ಅಂಬೇಡ್ಕರ್ ವಾಸವಿದ್ದರು ಎಂಬುದು ಪ್ರತಿಯೊಬ್ಬ ಭಾರತೀಯನಿಗೆ ಹೆಮ್ಮೆಯ ಸಂಗತಿ ಎಂಬುದು ಭಾರತದ ವಾದವಾಗಿದೆ.
Please save and protect the ambedkar house