ನವದೆಹಲಿ: “ಭಾರತವು ಎಂತಹ ಹಣಕಾಸು ಬಿಕ್ಕಟ್ಟನ್ನು ಎದುರಿಸುತ್ತಿದೆ ಎಂದರೆ ಇಂತಹ ಬಿಕ್ಕಟ್ಟು ಕಳೆದ 70 ವರ್ಷಗಳಲ್ಲೇ ಎದುರಾಗಿರಲಿಲ್ಲ” ಎಂದು ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್ ತಿಳಿಸಿದ್ದಾರೆ. ಅವರು ನವದೆಹಲಿಯಲ್ಲಿ ಹೀರೋ ಮೈಂಡ್ಮೈನ್ ಸಮ್ಮೇಳನದಲ್ಲಿ ಮಾತನಾಡುತ್ತಾ ಸಧ್ಯದ ಭಾರತದ ಆರ್ಥಿಕ ಪರಿಸ್ಥಿತಿಯ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
“ದೇಶದ ಹಣಕಾಸು ಕ್ಷೇತ್ರದಲ್ಲಿ ಯಾರೂ ಯಾರನ್ನೂ ನಂಬದಿರುವ ಸ್ಥಿತಿ ಎದುರಾಗಿದೆ. ಸರ್ಕಾರ ಮತ್ತು ಖಾಸಗಿ ರಂಗದ ನಡುವಿನ ವಿಶ್ವಾಸಾರ್ಹತೆಗೆ ಮಾತ್ರ ಧಕ್ಕೆಯಾಗಿಲ್ಲ, ಖಾಸಗಿ ಕ್ಷೇತ್ರದ ಒಳಗಡೆಯೂ ಯಾರನ್ನೂ ನಂಬಿ ಯಾರೂ ಸಾಲ ಕೊಡದಂತಹ ಸ್ಥಿತಿ ಎದುರಾಗಿದೆ. ಖಾಸಗಿ ಕ್ಷೇತ್ರದಲ್ಲಿ ವಿಶ್ವಾಸಾರ್ಹತೆ ಮೂಡಿಸಲು ಸರ್ಕಾರ ಏನೇನು ಸಾಧ್ಯವೋ ಎಲ್ಲವನ್ನೂ ಮಾಡಲು ಮುಂದಾಗಬೇಕಿದೆ” ಎಂದು ರಾಜೀವ್ ಕುಮಾರ್ ಹೇಳಿದ್ದಾರೆ.
2004ರಿಂದ 2011ರ ನಡುವೆ ಹೆಚ್ಚಿನ ಮಟ್ಟದಲ್ಲಿ ಸಾಲ ನೀಡಿದ್ದು ಸೇರಿದಂತೆ ಕೇಂದ್ರ ಸರ್ಕಾರ ಕಳೆದ ನಾಲ್ಕು ವರ್ಷಗಳಲ್ಲಿ ಕೈಗೊಂಡಿರುವ ಅಪನಗದೀಕರಣ (ಡಿಮಾನೆಟೈಸೇಶನ್), GST ಮೊದಲಾದುವು ಹಣಕಾಸು ವ್ಯವಸ್ಥೆಯಲ್ಲಿ ಹಣಕಾಸಿನ ಹರಿವು ಕುಸಿತಗೊಳ್ಳುವಂತೆ ಮಾಡಿವೆ” ಎಂದಿರುವ ರಾಜೀವ್ ಕುಮಾರ್, ಇಂದು ಹಣಸಕಾಸು ವ್ಯವಸ್ಥೆ ಅತ್ಯಂತ ಸಂಕೀರ್ಣ ಪರಿಸ್ಥಿತಿಯನ್ನು ಎದುರಿಸುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
2018-19ರ ಸಾಲಿನಲ್ಲಿ ಆರ್ಥಿಕ ಬೆಳವಣಿಗೆಯು 6.8%ಗೆ ಕುಸಿದಿದ್ದು ಕಳೆದ ಐದು ವರ್ಷಗಳಲ್ಲಿ ಆಗಿರುವ ಅತ್ಯಂತ ಕಡಿಮೆ ಬೆಳವಣಿಗೆಯಾಗಿದೆ. ಇದನ್ನು ಎದುರಿಸಲು ಕೇಂದ್ರ ಬಜೆಟ್ನಲ್ಲಿ ಕೆಲವು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ರಾಜೀವ್ ಕುಮಾರ್ ಮಾತನಾಡಿರುವ ವಿಡಿಯೋ ಇಲ್ಲಿದೆ:
#WATCH: Rajiv Kumar,VC Niti Aayog says,"If Govt recognizes problem is in the financial sector… this is unprecedented situation for Govt from last 70 yrs have not faced this sort of liquidity situation where entire financial sector is in churn &nobody is trusting anybody else." pic.twitter.com/Ih38NGkYno
— ANI (@ANI) August 23, 2019