ಶಿವಮೊಗ್ಗದ ಸಕ್ರೆಬೈಲು ಆನೆ ಬಿಡಾರ ಎಂದರೆ ರಾಜ್ಯಾದ್ಯಂತ ಜನಪ್ರಿಯ. ಆನೆ ಸಫಾರಿ, ಆನೆಗಳ ಆಟೋಟದ ಕಾರಣಕ್ಕೆ ರಾಜ್ಯಾದ್ಯಂತ ಪ್ರವಾಸಿಗರ ಮನಸೆಳೆದ ತಾಣ ಇದು. ಅಷ್ಟೇ ಅಲ್ಲ; ರಾಜ್ಯದ ಏಕೈಕ ಆನೆ ತರಬೇತಿ ಕೇಂದ್ರವಾಗಿಯೂ ಸಕ್ರೆಬೈಲು ಪ್ರಸಿದ್ಧ. ವಿವಿಧ ಸಂದರ್ಭಗಳಲ್ಲಿ ಸೆರೆಸಿಕ್ಕ ಕಾಡಾನೆಗಳನ್ನು ಪಳಗಿಸಿ, ಅವುಗಳಿಗೆ ಸೂಕ್ತ ತರಬೇತಿ ನೀಡುವ ಅನುಭವಿ ಮಾವುತರು ಕೂಡ ಅಲ್ಲಿದ್ದು, ಒಂದು ರೀತಿಯಲ್ಲಿ ಇದು ರಾಜ್ಯದ ಏಕೈಕ ಆನೆ ಪಾಠಶಾಲೆ.
ಆದರೆ, ಈಗ ಈ ಆನೆ ಬಿಡಾರ ಸುದ್ದಿಯಾಗುತ್ತಿರುವುದು ಅಲ್ಲಿನ ಹೆಚ್ಚುಗಾರಿಕೆಗಳ ಕಾರಣಕ್ಕಲ್ಲ. ಬದಲಾಗಿ, ಅಲ್ಲಿನ ಆನೆಗಳ ಸರಣಿ ಸಾವಿನ ಕಾರಣಕ್ಕೆ ಎಂಬುದು ಆಘಾತಕಾರಿ ಸಂಗತಿ. ಕಳೆದು ಒಂದು ವರ್ಷದದಲ್ಲೇ ನಾಲ್ಕು ಆನೆಗಳು ಅಕಾಲಿಕ ಸಾವಿಗೀಡಾಗಿವೆ. ಅಲ್ಲದೆ, ಕಳೆದ ಎರಡು ವರ್ಷದ ಅವಧಿಯಲ್ಲಿ ಬರೋಬ್ಬರಿ ಎಂಟು ಆನೆಗಳು ಸಾವು ಕಂಡಿವೆ. ಇದೀಗ ಮತ್ತೊಂದು ಆನೆ ದಿಢೀರ್ ಸಾವೀಗೀಡಾಗಿದ್ದು, ಮದಗಜನಗಳ ಬೀಡಿನಲ್ಲಿ ಸೂತಕದ ಛಾಯೆ ಆವರಿಸಿದೆ.
ಆನೆಗಳ ಆರೋಗ್ಯ ಮತ್ತು ಆರೈಕೆಯ ನೆಲೆಯಾಗಬೇಕಾಗಿದ್ದ ಸಕ್ರೆಬೈಲು ಆನೆ ಬಿಡಾರ ಹೀಗೆ ಇದ್ದಕ್ಕಿದ್ದಂತೆ ಸಾವಿನ ಮನೆಯಾಗಿ ಬದಲಾಗಿರುವುದು ವನ್ಯಜೀವಿ ಪ್ರೇಮಿಗಳಲ್ಲಷ್ಟೇ ಅಲ್ಲದೆ, ಸ್ವತಃ ಬಿಡಾರದ ಮಾವುತರು, ಕಾವಡಿಗಳಲ್ಲೂ ಆತಂಕ ಮೂಡಿಸಿದೆ. ಒಂದು ಕಡೆ ತಾವೇ ಸಾಕಿ, ತಿದ್ದಿತೀಡಿ ಬೆಳೆಸಿದ ಮೂರು ಮರಿಯಾನೆಗಳು ಸಾವು ಕಂಡ ನೋವು ಆರುವ ಮುನ್ನ ಇದೀಗ ಸದೃಢವಾಗಿದ್ದ ವಯಸ್ಕ ಆನೆ ನಾಗಣ್ಣನ ಅಕಾಲಿಕ ಅಗಲಿಕೆ ಆನೆಬಿಡಾರದ ಸಿಬ್ಬಂದಿಯನ್ನು ದಿಕ್ಕುಗೆಡಿಸಿದೆ.
ವರ್ಷದ ಆರಂಭದಲ್ಲೇ ಕೆಲವೇ ತಿಂಗಳ ಅಂತರದಲ್ಲಿ ಬಾಲಾಜಿ, ಭಾರತಿ ಹಾಗೂ ಶಾರದಾ ಎಂಬ ಮರಿಯಾನೆಗಳು ಮೃತಪಟ್ಟಿದ್ದವು. ಆ ಪೈಕಿ ಎರಡು ಬಿಡಾರದಲ್ಲೇ ಜನಿಸಿದ ಮರಿಗಳಾದರೆ, ಒಂದು ಕಳೆದ ವರ್ಷ ದಾಂಡೇಲಿಯಲ್ಲಿ ಸೆರೆಸಿಕ್ಕ ಹೆಣ್ಣಾನೆಯ ಮರಿಯಾಗಿತ್ತು. ಸಾಲು ಸಾಲು ಮರಿಯಾನೆಗಳ ಸಾವೇ ಸಕ್ರೆಬೈಲು ಆನೆ ಬಿಡಾರದಲ್ಲಿ ಆನೆಗಳ ಜೀವಕ್ಕೆ ಸರಿಯಾದ ಸುರಕ್ಷತೆ ಇಲ್ಲವೇ? ಎಂಬ ಅನುಮಾನ ಹುಟ್ಟುಹಾಕಿತ್ತು. ಅದರ ಬೆನ್ನಲ್ಲೇ ಇದೀಗ ಸದೃಢವಾಗಿದ್ದ 35 ವರ್ಷದ ಗಂಡಾನೆ ನಾಗಣ್ಣ ದಿಢೀರ್ ಸಾವು ಕಂಡಿರುವುದು ಅಂತಹ ಅನುಮಾನಗಳನ್ನು ಮತ್ತಷ್ಟು ಗಟ್ಟಿಗೊಳಿಸಿದೆ.
“ಶುಕ್ರವಾರ ಬೆಳಗ್ಗೆ ಸಿನಿಮಾವೊಂದರ ಶೂಟಿಂಗ್ ನಲ್ಲಿ ಭಾಗವಹಿಸಿದ್ದ ಆನೆ ಸಂಜೆ ಹೊತ್ತಿಗೆ ದೀಢೀರ್ ಸಾವು ಕಂಡಿದೆ. ಕೆಲವು ದಿನಗಳ ಹಿಂದೆ ಕಾಡಿಗೆ ಮೇಯಲು ಹೋದಾಗ ಕೆಸರುಗುಂಡಿಯಲ್ಲಿ ಸಿಕ್ಕಿಬಿದ್ದಿದ್ದ ಆನೆಯನ್ನು ರಕ್ಷಿಸಿ ಬಿಡಾರದಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆ ಬಳಿಕ ಆರೋಗ್ಯವಾಗೇ ಇದ್ದ ಆನೆ ಶುಕ್ರವಾರ ಸಿನಿಮಾವೊಂದರ ಶೂಟಿಂಗ್ ನಲ್ಲಿ ಭಾಗವಹಿಸಿತ್ತು. ಆ ನಂತರವೂ ಸಹಜವಾಗೇ ಮೇವು ತಿಂದು, ಆರೋಗ್ಯವಾಗೇ ಇತ್ತು. ಆದರೆ, ಸಂಜೆ ಹೊತ್ತಿಗೆ ದಿಢೀರನೇ ಸಾವು ಕಂಡಿದೆ” ಎಂಬುದು ಬಿಡಾರದ ಮೂಲಗಳ ಮಾಹಿತಿ.
ಚನ್ನಗಿರಿಯ ಉಬ್ರಾಣಿ ಭಾಗದಲ್ಲಿ ಉಪಟಳ ನೀಡುತ್ತಿದ್ದ ನಾಗಣ್ಣನನ್ನು, ಆ ಹಿನ್ನೆಲೆಯಲ್ಲೇ 2017ರ ಡಿಸೆಂಬರಿನಲ್ಲಿ ಕಾರ್ಯಾಚರಣೆ ನಡೆಸಿ ಸೆರೆ ಹಿಡಿದು ಸಕ್ರೆಬೈಲಿಗೆ ತರಲಾಗಿತ್ತು. ಆ ಬಳಿಕ ಆನೆ ಬಿಡಾರದಲ್ಲೇ ಅದನ್ನು ಪಳಗಿಸಿ ತರಬೇತಿ ನೀಡಿ ಪಳಗಿಸಲಾಗಿತ್ತು ಮತ್ತು ವಿಶೇಷ ದಂತದ ಕಾರಣಕ್ಕೆ ಇಡೀ ಬಿಡಾರದ ಆನೆಗಳಲ್ಲೇ ಅತ್ಯಂತ ಜನಾಕರ್ಷಣೆಯ ಆನೆಯಾಗಿ ಹೆಸರಾಗಿತ್ತು. ಸಹಜವಾಗೇ ಆನೆಯ ಸಾವು ಬಿಡಾರದಲ್ಲಷ್ಟೇ ಅಲ್ಲದೆ ಗ್ರಾಮದ ಜನರಲ್ಲೂ ವಿಷಾದ ಮೂಡಿಸಿದೆ.
ಮೂರು ಮರಿಯಾನೆಗಳ ಸಾವಿಗೆ ಹೆಪ್ಟಿಕ್ ವೈರಸ್ ಕಾರಣವೆಂದು ಮರಣೋತ್ತರ ಪರೀಕ್ಷೆಯ ಬಳಿಕ ತಿಳಿದುಬಂದಿರುವುದಾಗಿ ಅರಣ್ಯ ಇಲಾಖೆ ತಿಳಿಸಿತ್ತು. ಇದೀಗ ನಾಗಣ್ಣ ಆನೆಯ ಸಾವಿಗೆ ಹೊಟ್ಟೆನೋವು ಕಾರಣವಿರಬಹುದು ಎಂದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಆದರೆ, ನಿಖರ ಕಾರಣ ಮರಣೋತ್ತರ ಪರೀಕ್ಷೆಯ ವರದಿ ಕೈಸೇರಿದ ಬಳಿಕವೇ ತಿಳಿದುಬರಲಿದೆ ಎಂದು ಇಲಾಖೆಯ ಉನ್ನತಾಧಿಕಾರಿಗಳು ಮಾಧ್ಯಮಗಳಿಗೆ ನೀಡಿರುವ ಪ್ರತಿಕ್ರಿಯೆಯಲ್ಲಿ ಹೇಳಿದ್ದಾರೆ.
ಆದರೆ, ಹೊಟ್ಟೆನೋವಿನಿಂದ ಬಳಲುತ್ತಿತ್ತು ಎಂಬುದು ನಿಜವೇ ಆದಲ್ಲಿ, ಅದಕ್ಕೆ ಸಕಾಲಕ್ಕೆ ಸೂಕ್ತ ಚಿಕಿತ್ಸೆ ನೀಡಲಾಗಿತ್ತೆ? ಚಿಕಿತ್ಸೆ ನೀಡಿದ ಇಲಾಖೆಯ ವೈದ್ಯರು ಏನೆನ್ನುತ್ತಾರೆ? ಎಂಬ ಮಾಹಿತಿ ಮಾತ್ರ ಮಾಧ್ಯಮಗಳಿಗೆ ಲಭ್ಯವಿಲ್ಲ. ಏಕೆಂದರೆ, ಆನೆ ಬಿಡಾರದಲ್ಲಿ ಇಂತಹ ಅನಾಹುತಗಳು ಸಂಭವಿಸಿದಾಗ ಅಲ್ಲಿನ ಯಾವುದೇ ಹಂತದ ನೌಕರ, ಅಧಿಕಾರಿಗಳಾಗಲೀ, ವೈದ್ಯರಾಗಲೀ ಮಾಧ್ಯಮಗಳಿಗೆ ಮಾಹಿತಿ ನೀಡುವಂತಿಲ್ಲ ಎಂಬ ಕಟ್ಟಾಜ್ಞೆ ಹೊರಡಿಸಲಾಗಿದೆ. ಅಷ್ಟೇ ಅಲ್ಲ, ಜಿಲ್ಲಾಮಟ್ಟದಲ್ಲಿ ಆನೆ ಬಿಡಾರವೂ ಸೇರಿದಂತೆ ವನ್ಯಜೀವಿ ವಿಭಾಗದ ಡಿಎಫ್ ಒ ಗಳು ಕೂಡ ಮಾಧ್ಯಮಗಳಿಗೆ ಮಾಹಿತಿ ನೀಡದಂತೆ ಸೂಚಿಸಲಾಗಿದೆ. ಹಾಗಾಗಿ ಕಳೆದ ಒಂದೆರಡು ವರ್ಷಗಳಿಂದ ಸ್ಥಳೀಯವಾಗಿ ಮಾಧ್ಯಮಗಳಿಂದ ಎಲ್ಲಾ ಮಾಹಿತಿಯನ್ನು ಮುಚ್ಚಿಡುವ ಪ್ರಯತ್ನ ಅರಣ್ಯ ಇಲಾಖೆ ಮಾಡಿಕೊಂಡುಬರುತ್ತಿದೆ.
ಅಲ್ಲದೆ, ಸುಮಾರು 25 ಆನೆಗಳಿರುವ ಮತ್ತು ಪ್ರತಿ ಒಂದೆರಡು ತಿಂಗಳಿಗೆ ಒಂದಲ್ಲಾ ಒಂದು ಕಾಡಾನೆ ಸೇರ್ಪಡೆಯಾಗುತ್ತಲೇ ಇರುವ ಬಿಡಾರಕ್ಕೆ ಪೂರ್ಣಾವಧಿ ವನ್ಯಜೀವಿ ವೈದ್ಯರಿಲ್ಲ. ಇರುವ ಒಬ್ಬ ವೈದ್ಯರಿಗೆ ಏಳು ಜಿಲ್ಲೆಗಳ ಹೊಣೆ ವಹಿಸಲಾಗಿದ್ದು, ಅವರು ಆನೆ ಬಿಡಾರದ ಬಗ್ಗೆ ಸೂಕ್ತ ಗಮನಹರಿಸಲು ಆಗುತ್ತಿಲ್ಲ. ಜೊತೆಗೆ, ಬಿಡಾರವನ್ನು ರಾಜ್ಯದ ಏಕೈಕ ಆನೆ ತರಬೇತಿ ಕೇಂದ್ರವೆಂದು ಘೋಷಿಸಿದ್ದರೂ, ಆನೆ ಬಿಡಾರದ ಆನೆ ಸಫಾರಿ, ಆನೆ ಆಟೋಟ, ಆನೆ ವೀಕ್ಷಣೆ ಮುಂತಾದ ಚಟುವಟಿಕೆಗಳ ಮೂಲಕ ಸಾಕಷ್ಟು ಪ್ರವಾಸಿಗಳನ್ನು ಸೆಳೆಯುತ್ತಿದ್ದರೂ, ಸಾಕಷ್ಟು ಆದಾಯವಿದ್ದರೂ ಅಲ್ಲಿಗೆ ಪ್ರತ್ಯೇಕವಾದ ಒಂದು ವನ್ಯಜೀವಿ ಆಸ್ಪತ್ರೆ ಕೂಡ ಈವರೆಗೆ ಇಲ್ಲ. ಹಾಗಾಗಿ ವೈದ್ಯರ ಕೆಲಸದೊತ್ತಡ, ಆಸ್ಪತ್ರೆ ಮತ್ತು ವೈದ್ಯಕೀಯ ಸೌಲಭ್ಯಗಳ ಕೊರತೆ ಕೂಡ ಇಂತಹ ಅನಾಹುತಗಳಿಗೆ ಕಾರಣವಾಗುತ್ತಿದೆ ಎಂಬ ಮಾತುಗಳೂ ಕೇಳಿಬರುತ್ತಿವೆ.
ಅಲ್ಲದೆ, ಸ್ವತಃ ಡಿಎಫ್ ಒ ಮತ್ತು ವನ್ಯಜೀವಿ ವೈದ್ಯರು ಸ್ಥಳದಲ್ಲಿ ವಾಸವಿಲ್ಲ. ಅವರುಗಳು 15 ಕಿ.ಮೀ ದೂರದ ನಗರದಲ್ಲಿ ವಾಸವಿದ್ದಾರೆ. ಜೊತೆಗೆ ಆನೆಗಳ ಆಹಾರ ಮತ್ತು ದುಬಾರಿ ಬೆಲೆಯ ಔಷಧಿಗಳನ್ನು ಕೂಡ ಸಮರ್ಪಕವಾಗಿ ಸರಬರಾಜು ಮಾಡುತ್ತಿಲ್ಲ. ಔಷಧಿಗಳ ದುರುಪಯೋಗ ಕೂಡ ಆಗುತ್ತಿರುವ ಶಂಕೆ ಇದೆ. ಒಟ್ಟಾರೆ ಆನೆಗಳಿಗೆ ನೀಡಬೇಕಾದ ಪ್ರಮಾಣದ ಸೂಕ್ತ ಚಿಕಿತ್ಸೆ ಸಕಾಲಕ್ಕೆ ದೊರೆತಿದ್ದರೆ ಸತ್ತ ಆನೆಗಳ ಪೈಕಿ ಕೆಲವನ್ನಾದರೂ ಉಳಿಸಿಕೊಳ್ಳಬಹುದಿತ್ತು. ಮಾವುತರು ಮತ್ತು ಕಾವಡಿಗಳು ತಮ್ಮ ಮಕ್ಕಳಂತೆ ಜತನ ಮಾಡಿದರೂ, ಉನ್ನತ ವ್ಯವಸ್ಥೆಯ ಲೋಪ ಮತ್ತು ನಿರ್ಲಕ್ಷ್ಯಕ್ಕೆ ಖುಷಿ, ಸಂಭ್ರಮದ ನೆಲೆಯಾಗಬೇಕಾಗಿದ್ದ ಸಕ್ರೆಬೈಲು ಆನೆ ಬಿಡಾರ ಇತ್ತೀಚಿನ ದಿನಗಳಲ್ಲಿ ಸಾವಿನ ನೆಲೆಯಾಗುತ್ತಿದೆ. ಸೂತಕ ಮನೆಯಾಗುತ್ತಿದೆ ಎಂಬುದು ಹೆಸರು ಹೇಳಲಿಚ್ಛಿಸದ ಬಿಡಾರದ ಸಿಬ್ಬಂದಿಯೊಬ್ಬರ ಅಳಲು.
ಕಳೆದ ಎರಡು ವರ್ಷಗಳಲ್ಲೇ ಮೂರು ಮರಿಯಾನೆ ಮತ್ತು ಈಗಿನ ನಾಗಣ್ಣ ಅಲ್ಲದೆ ಐದು ಆನೆಗಳು ಸಾವು ಕಂಡಿದ್ದು, ಆ ಪೈಕಿ ವಯೋಮಾನದ ಕಾರಣಕ್ಕೆ ಸಾವು ಕಂಡ ಆನೆಗಳು ಕೇವಲ ಎರಡು ಮಾತ್ರ. ಉಳಿದಂತೆ ಆರು ಆನೆಗಳು ವಿವಿಧ ರೋಗ, ಪರಸ್ಪರ ದಾಳಿಯಿಂದಲೇ ಸಾವು ಕಂಡಿವೆ ಎಂಬುದು ಬಿಡಾರದಲ್ಲಿ ಆನೆಗಳ ಜೀವಕ್ಕೆ ಅಪಾಯವಿದೆ ಎಂಬುದನ್ನು ಹೇಳದೇ ಇರದು. ಕಪಿಲ ಮತ್ತು ಕುಂತಿ ಎಂಬ ಎರಡು ಹೆಣ್ಣಾನೆಗಳು ವಯಸ್ಸಾಗಿ ಸಾವು ಕಂಡಿದ್ದರೆ, ಟಸ್ಕರ್ ಮತ್ತು ರಾಜೇಂದ್ರ ಇತರ ಆನೆಗಳ ದಾಳಿಯಿಂದ ಸಾವು ಕಂಡಿವೆ. ಆ ಪೈಕಿ ಟಸ್ಕರ್ ಆನೆಗೆ ಕಾಡಿನಲ್ಲಿ ಮೇವಿಗೆ ಹೋದಾಗ ಕಾಡಾನೆಯೊಂದು ದಾಳಿ ಮಾಡಿ, ಆ ಗಾಯ ವಾಸಿಯಾಗದೆ ಬಲಿಯಾದರೆ, ಮತ್ತೊಂದು ಗಂಡಾನೆ ರಾಜೇಂದ್ರ ಬಿಡಾರದಲ್ಲೇ ಮತ್ತೊಂದು ಆನೆಯಿಂದ ದಾಳಿಗೊಳಗಾಗಿ ಜೀವ ಕಳೆದುಕೊಂಡಿತ್ತು. ಈ ದಾಳಿಗೊಳಗಾಗಿ ಬಲಿಯಾದ ಆನೆಗಳ ವಿಷಯದಲ್ಲಿಯೂ ಅವುಗಳಿಗೆ ಸೂಕ್ತ ಚಿಕಿತ್ಸೆ ಮತ್ತು ಆರೈಕೆ ಸಿಕ್ಕಿಲ. ಹಾಗಾಗಿಯೇ ಅವುಗಳನ್ನು ಕಳೆದುಕೊಳ್ಳಬೇಕಾಯಿತು ಎಂಬ ಮಾತೂ ಕೂಡ ಇದೆ.
ಒಟ್ಟಾರೆ, ಸಾಲು ಸಾಲು ಆನೆಗಳು ಸಾವು ಕಾಣುತ್ತಿದ್ದರೂ ಅರಣ್ಯ ಇಲಾಖೆ ಉನ್ನತ ಅಧಿಕಾರಿಗಳು ಮಾತ್ರ ಆ ಸಾವುಗಳಿಗೆ ತಾವು ಬಾಧ್ಯಸ್ಥರಲ್ಲ ಎಂಬ ಧೋರಣೆಯನ್ನೇ ಪ್ರದರ್ಶಿಸುತ್ತಿದ್ದು, ಮಾಧ್ಯಮ ಮತ್ತು ಸಾರ್ವಜನಿಕರಿಂದ ಸತ್ಯವನ್ನು ಮುಚ್ಚಿಡುವ ಪ್ರಯತ್ನದಲ್ಲೇ ಇದ್ದಾರೆ. ಹಾಗಾಗಿ ಸರ್ಕಾರ ಕೂಡಲೇ ಈ ಸರಣಿ ಸಾವಿನ ನೈಜ ಕಾರಣಗಳ ಕುರಿತು ಉನ್ನತ ಸಮಿತಿ ಮೂಲಕ ತನಿಖೆ ನಡೆಸಿ, ಸತ್ಯಾಸತ್ಯತೆಯನ್ನು ಹೊರಗೆಳೆಯದೇ ಹೋದರೆ, ಆನೆ ಬಿಡಾರ ನಿರಂತರ ಶೋಕದ ಮನೆಯಾಗುವುದರಲ್ಲಿ ಅನುಮಾನವೇ ಇಲ್ಲ ಎಂಬುದು ವನ್ಯಜೀವಿ ಪ್ರೇಮಿಗಳ ಆಗ್ರಹ.
ಈ ನಡುವೆ ಶನಿವಾರ ಸಂಜೆ ಬನ್ನೇರುಘಟ್ಟದಿಂದ ಉನ್ನತ ವೈದ್ಯಕೀಯ ಮತ್ತು ಇಲಾಖೆ ಸಿಬ್ಬಂದಿಯನ್ನೊಳಗೊಂಡ ತಪಾಸಣಾ ತಂಡ ಸಕ್ರೆಬೈಲಿಗೆ ಆಗಮಿಸಿದ್ದು ಮರಣೋತ್ತರ ಪರೀಕ್ಷೆ ನಡೆಸಿ, ನಾಗಣ್ಣ ಆನೆಯ ಸಾವಿನ ನೈಜ ಕಾರಣವನ್ನು ಕಂಡುಹಿಡಿಯುವ ಪ್ರಯತ್ನದಲ್ಲಿದ್ದಾರೆ. ಅವರ ವರದಿಯ ಬಳಿಕ ಸಾವಿನ ಅಸಲೀ ರಹಸ್ಯ ಬಯಲಾಗಲಿದೆ ಎಂಬ ನಿರೀಕ್ಷೆ ಇದೆ. ಹಾಗಾಗುತ್ತದೆಯೇ? ನಿಜವಾಗಿಯೂ ಸಕ್ರೆಬೈಲಿನ ಅಮಾಯಕ ಆನೆಗಳ ಸಾವಿಗೆ ವಿರಾಮ ಬೀಳಲಿದೆಯೇ? ಎಂಬುದನ್ನು ಕಾದುನೋಡಬೇಕಿದೆ.