ಮಧ್ಯಂತರ ಚುನಾವಣೆಯ ಜಪ ಮತ್ತೊಮ್ಮೆ ಆರಂಭವಾಗಿದೆ. ಈ ಹಿಂದಿನ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರ್ಕಾರದ ಹೊತ್ತಲ್ಲಿ ಮಿತ್ರಪಕ್ಷಗಳ ನಡುವಿನ ಪರಸ್ಪರ ಕಾಲೆಳೆಯುವ ರಾಜಕಾರಣ ಬಯಲಿಗೆ ಬಂದಾಗೆಲ್ಲಾ ಸ್ವತಃ ಉಭಯ ಪಕ್ಷಗಳ ಮುಖಂಡರೇ ಮಧ್ಯಂತರ ಚುನಾವಣೆಯ ಮಾತನ್ನಾಡುತ್ತಿದ್ದರು. ವಿಪರ್ಯಾಸವೆಂದರೆ, ಆಗ ಪ್ರತಿಪಕ್ಷವಾಗಿ ಮಧ್ಯಂತರ ಚುನಾವಣೆಯ ತಯಾರಿಯ ಮಾತನಾಡುತ್ತಿದ್ದ ಬಿಜೆಪಿ, ಆಪರೇಷನ್ ಕಮಲದ ಮೂಲಕ ಮೈತ್ರಿ ಸರ್ಕಾರ ಕೆಡವಿ ಅಧಿಕಾರ ಹಿಡಿದ ಬಳಿಕವೂ ಮಧ್ಯಂತರ ಚುನಾವಣೆಯ ಮಾತು ನಿಂತಿಲ್ಲ!
ಕಾಂಗ್ರೆಸ್ ನಾಯಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಧ್ಯಂತರ ಚುನಾವಣೆಯ ಮಾತನಾಡಿರುವುದು ಸಹಜವೇ. ಆಪರೇಷನ್ ಕಮಲದ ಮೂಲಕ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರ ರಾಜೀನಾಮೆ ಕೊಡಿಸುವ ಮೂಲಕ ಮೈತ್ರಿ ಸರ್ಕಾರವನ್ನು ಕೆಡವಿದ ಬಳಿಕ ಕಳೆದ ಒಂದೂವರೆ ತಿಂಗಳಲ್ಲಿ ಬಿಜೆಪಿಯ ನಡವಳಿಕೆ ಮತ್ತು ಮುಖ್ಯವಾಗಿ ಖಾತೆ ಹಂಚಿಕೆ ವಿಷಯದಲ್ಲಿ ಬಿಜೆಪಿ ಹಿರಿಯ ನಾಯಕರೇ ಬಹಿರಂಗ ಅಸಮಾಧಾನ ವ್ಯಕ್ತಪಡಿಸಿರುವುದು ಮತ್ತು ಅತೃಪ್ತ ನಾಯಕರ ಕ್ಷೇತ್ರಗಳಲ್ಲಿ ಭುಗಿಲೆದ್ದಿರುವ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಮಧ್ಯಂತರ ಚುನಾವಣೆಯ ಮಾತು ಹೇಳಿರುವುದಾಗಿ ಸ್ವತಃ ಸಿದ್ದರಾಮಯ್ಯ ಅವರೇ ಸ್ಪಷ್ಟಪಡಿಸಿದ್ದಾರೆ.
ಆದರೆ, ಈಗ ಮಧ್ಯಂತರ ಚುನಾವಣೆ ಸನ್ನಿಹಿತ ಎಂಬ ಅವರ ಆ ಮಾತನ್ನು ಸಮರ್ಥಿಸುವ ಬೆಳವಣಿಗೆಗಳು ಸ್ವತಃ ಬಿಜೆಪಿಯ ಪಾಳೆಯದಲ್ಲಿಯೇ ಎಲ್ಲರ ಕಣ್ಣಿಗೆ ಎರಚುವಂತೆ ನಡೆಯುತ್ತಿವೆ ಎಂಬುದು ವಿಶೇಷ. ಹಾಗೆ ನೋಡಿದರೆ, ಮಧ್ಯಂತರ ಚುನಾವಣೆಯ ಬಗ್ಗೆ ಬಿಜೆಪಿ ಹೈಕಮಾಂಡ್ ಒಲವು ಹೊಂದಿರಬಹುದು ಎಂಬ ಮಾತುಗಳು, ಮೈತ್ರಿ ಸರ್ಕಾರದ ಪತನದ ಬಳಿಕ ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಪ್ರಮಾಣವಚನ ಸ್ವೀಕಾರಕ್ಕೆ ಅಸ್ತು ಎನ್ನಲು ವಿಳಂಬ ಮಾಡಿದಾಗಲೇ ಕೇಳಿಬಂದಿದ್ದವು. ಆಗಲೇ ಯಡಿಯೂರಪ್ಪ ಅವರಿಗೆ ನಾಲ್ಕೈದು ದಿನ ಸತಾಯಿಸಿದಾಗಲೇ ಹೈಕಮಾಂಡ್ ಮನಸ್ಸಿನಲ್ಲಿ ಮಧ್ಯಂತರ ಚುನಾವಣೆಗೆ ಹೋಗುವ ಯೋಚನೆ ಇದ್ದಂತಿದೆ ಎಂಬ ಮಾತು ಬಿಜೆಪಿ ವಲಯದಲ್ಲೇ ಕೇಳಿಬಂದಿದ್ದವು.
ಆ ಬಳಿಕ ಸಂಪುಟ ವಿಸ್ತರಣೆಯ ವಿಷಯದಲ್ಲಿ ಮತ್ತದೇ ಅನುಮಾನ ವ್ಯಕ್ತವಾಯಿತು. ಭೀಕರ ಪ್ರವಾಹದಲ್ಲಿ ಮುಕ್ಕಾಲು ಪಾಲು ರಾಜ್ಯ ಕೊಚ್ಚಿಹೋಗಿ ಜನ ಸಾವುಬದುಕಿನ ನಡುವೆ ಹೈರಾಣಾಗಿರುವ ಹೊತ್ತಲ್ಲಿಯೂ ಬಿಜೆಪಿ ಹೈಕಮಾಂಡ್ ಸಚಿವ ಸಂಪುಟ ವಿಸ್ತರಣೆಯ ಮೂಲಕ ಜನರ ಸಂಕಷ್ಟಕ್ಕೆ ಸಕಾಲಿಕವಾಗಿ ಸ್ಪಂದಿಸುವ ಸಚಿವರ ಪಡೆ ಕಟ್ಟಲು ಯಡಿಯೂರಪ್ಪಗೆ ಅವಕಾಶ ನೀಡಲಿಲ್ಲ. ಹಾಗಾಗಿ ಸಚಿವ ಸಂಪುಟ ರಚನೆಯ ವಿಷಯದಲ್ಲಿ ಕೂಡ ಹೈಕಮಾಂಡ್ ಪೂರ್ಣಮನಸ್ಸಿನಿಂದ ಯಡಿಯೂರಪ್ಪಗೆ ಬೆಂಬಲವಾಗಿ ನಿಂತಿಲ್ಲ. ಯಡಿಯೂರಪ್ಪ ಸಿಎಂ ಆಗುವುದೇ ಹೈಕಮಾಂಡ್ಗೆ ಇಷ್ಟವಿಲ್ಲ. ಅವರಲ್ಲಿ ಮನಸ್ಸಿನಲ್ಲಿ ಇರುವ ಹೆಸರೇ ಬೇರೆ, ಆರ್ ಎಸ್ ಎಸ್ ಹಿನ್ನೆಲೆಯ ಬಿ ಎಲ್ ಸಂತೋಷ್ ಅವರನ್ನು ಮುಖ್ಯಮಂತ್ರಿ ಗಾದಿಗೆ ತರುವ ಮೂಲಕ ಹಿಂದುತ್ವದ ಪ್ರಬಲ ಸಂದೇಶ ರವಾನಿಸುವ ಬಗ್ಗೆ ಹೈಕಮಾಂಡ್ ಒಲವು ಹೊಂದಿದೆ. ಹಾಗಾಗಿಯೇ ಹೆಜ್ಜೆಹೆಜ್ಜೆಗೂ ಯಡಿಯೂರಪ್ಪ ಅವರನ್ನು ಸತಾಯಿಸಲಾಗುತ್ತಿದೆ. ತಿಂಗಳಲ್ಲಿ ನಾಲ್ಕು ಬಾರಿ ದೆಹಲಿಗೆ ಹೋಗಿ ಪ್ರತಿ ಬಾರಿಯೂ ಎರಡು ಮೂರು ದಿನ ನಾಯಕರ ಮನೆ ಬಾಗಿಲು ಕಾದರೂ ಕನಿಷ್ಠ ಪಕ್ಷದ ಹಿರಿಯ ನಾಯಕ ಎಂಬ ಕಾರಣಕ್ಕಲ್ಲದಿದ್ದರೂ, ಒಂದು ರಾಜ್ಯದ ಮುಖ್ಯಮಂತ್ರಿ ಎಂಬ ಕನಿಷ್ಠ ಮರ್ಯಾದೆಯನ್ನೂ ನೀಡದೆ ನಡೆಸಿಕೊಂಡರು ಎಂಬುದು ಬಿಜೆಪಿಯ ಒಳಗೇ ಹಲವರಿಗೆ ತೀವ್ರ ಅಸಮಾಧಾನ ಹುಟ್ಟಿಸಿತ್ತು.
ಅಷ್ಟು ಸಾಲದು ಎಂಬಂತೆ ಸಚಿವ ಸ್ಥಾನ ನೀಡುವಾಗ ಯಡಿಯೂರಪ್ಪ ಆಪ್ತರನ್ನು ಸಂಪೂರ್ಣ ಬದಿಗೊತ್ತಿ ಯಡಿಯೂರಪ್ಪ ಪಾಳೆಯದಿಂದ ಹೊರಗಿದ್ದವರಿಗೆ ಆಯಕಟ್ಟಿನ ಸ್ಥಾನಗಳನ್ನು ನೀಡಲಾಗಿದೆ. ಅಲ್ಲದೆ, ಎಂ ಪಿ ರೇಣುಕಾಚಾರ್ಯ, ಉಮೇಶ್ ಕತ್ತಿ, ಸಿ ಎಂ ಉದಾಸಿ, ಜಿ ಎಚ್ ತಿಪ್ಪಾರೆಡ್ಡಿ, ಹರತಾಳು ಹಾಲಪ್ಪ, ಬಾಲಚಂದ್ರ ಜಾರಕಿಹೊಳಿ, ಗೂಳಿಹಟ್ಟಿ ಶೇಖರ್, ಕೆ ಜೆ ಬೋಪಣ್ಣ ಮತ್ತಿತರಿಗೆ ಸಂಪುಟದಲ್ಲಿ ಅವಕಾಶವನ್ನೇ ನೀಡದೆ ಮೂಲೆಗುಂಪು ಮಾಡಲಾಗಿದೆ. ಯಡಿಯೂರಪ್ಪ ಪಾಳೆಯದ ಬದಲಾಗಿ, ಸಂತೋಷ್ ಪಾಳೆಯದಲ್ಲಿ ಗುರುತಿಸಿಕೊಂಡಿದ್ದವರಿಗೆ ಯಾವುದೇ ಅನುಭವವಾಗಲೀ, ಹಿರಿತನವಾಗಲೀ ಇಲ್ಲದೇ ಇದ್ದರೂ ಗೃಹ ಖಾತೆಯಂತಹ ಆಯಕಟ್ಟಿನ ಖಾತೆಗಳನ್ನು ನೀಡಲಾಗಿದೆ.
ಅಲ್ಲದೆ, ಸಂಪುಟ ಸಚಿವರ ಆಯ್ಕೆಯ ವಿಷಯದಲ್ಲಿ ಯಡಿಯೂರಪ್ಪ ಅವರಿಗೆ ಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ ಎಂಬ ಹೇಳಿಕೆ ನೀಡುವ ಮೂಲಕ ಅಮಿತ್ ಶಾ, ಬಿಎಸ್ ವೈ ಮತ್ತು ಅವರ ಅನುಯಾಯಿಗಳ ನಡುವೆಯೇ ಹುಳಿ ಹಿಂಡುವ ತಂತ್ರಗಾರಿಕೆಯನ್ನೂ ಮಾಡಿದ್ದಾರೆ. ಆ ಮೂಲಕ ಆಪ್ತರಲ್ಲಿ ಅಸಹನೆ ಹುಟ್ಟಿಸಿ, ಅವರನ್ನು ದೂರವಾಗಿಸುವುದು, ಪಕ್ಷದ ಒಳಗೇ ಯಡಿಯೂರಪ್ಪ ಪರ ಇರುವ ಬಲ ಕುಗ್ಗಿಸುವ ಮೂಲಕ ಅವರನ್ನು ದುರ್ಬಲಗೊಳಿಸುವ ತಂತ್ರಗಾರಿಕೆ ಅದು ಎಂಬ ವಿಶ್ಲೇಷಣೆಗಳೂ ಕೇಳಿಬರುತ್ತಿವೆ. ಇದೀಗ ಒಂದು ವಾರದಲ್ಲಿ ಯಡಿಯೂರಪ್ಪ ಸಂಪೂರ್ಣ ಏಕಾಂಗಿಯಾಗಿ, ಅವರ ಎಡಬಲದಲ್ಲಿ ಕಾಣಿಸಿಕೊಳ್ಳುತ್ತಿದ್ದ ಪ್ರಮುಖ ಶಾಸಕರು ದೂರವಾಗಿರುವುದನ್ನು ಗಮನಿಸಿದೆ ಆ ತಂತ್ರಗಾರಿಕೆ ಈಗಾಗಲೇ ಸಾಕಷ್ಟು ಕೆಲಸ ಮಾಡಿದಂತಿದೆ.
ಇನ್ನು ಡಿಸಿಎಂ ನೇಮಕ ವಿಷಯದಲ್ಲಿಯೂ ಇದೇ ದಾಳ ಹೂಡಿದ್ದು, ಸ್ವತಃ ಕೆ ಎಸ್ ಈಶ್ವರಪ್ಪ, ಶ್ರೀರಾಮುಲು ಅವರಂತಹ ಪ್ರಭಾವಿ ನಾಯಕರನ್ನು ಬದಿಗೊತ್ತಿ, ಸದನದಲ್ಲಿ ನೀಲಿ ಚಿತ್ರ ನೋಡಿದ ಗುರುತರ ಆರೋಪ ಹೊತ್ತ ಮತ್ತು ಕನಿಷ್ಠ ಶಾಸಕ ಕೂಡ ಅಲ್ಲದ ಲಕ್ಷ್ಮಣ ಸವದಿಯಂಥವರಿಗೆ ಡಿಸಿಎಂ ಹುದ್ದೆ ಜೊತೆಗೆ ಆಯಕಟ್ಟಿನ ಖಾತೆಯನ್ನೂ ಕೊಡುಗೆಯಾಗಿ ನೀಡಲಾಗಿದೆ. ಸವದಿಯವರ ಈ ಅನಿರೀಕ್ಷಿತ ಅದೃಷ್ಟದ ಹಿಂದೆ ನೇರವಾಗಿ ಹೈಕಮಾಂಡ್ ಪ್ರಭಾವ ಇರುವುದು ಸುಳ್ಳಲ್ಲ. ಆಪರೇಷನ್ ಕಮನಕ್ಕೆ ದುಡಿದವರು, ಮುಂದಿನ ಉಪಚುನಾವಣೆ ಮುಂತಾಗಿ ನೆಪಗಳನ್ನು ಒಡ್ಡಿ ಸವದಿಯ ದಿಢೀರ್ ಸ್ಥಾನಮಾನವನ್ನು ಸಮರ್ಥಿಸುವ ಪ್ರಯತ್ನ ಮುಖ್ಯವಾಹಿನಿ ಮಾಧ್ಯಮಗಳ ಮೂಲಕ ಮಾಡಿಸಲಾಗುತ್ತಿದೆ. ಆದರೆ, ವಾಸ್ತವವಾಗಿ, ಇದು ಯಡಿಯೂರಪ್ಪ ಅವರಿಗೆ ಪರ್ಯಾಯವಾಗಿ ಲಿಂಗಾಯತ ನಾಯಕನನ್ನು ಬೆಳೆಸುವ ಮತ್ತು ಬಿಂಬಿಸುವ ತಂತ್ರ ಎಂಬುದನ್ನು ತಳ್ಳಿಹಾಕಲಾಗದು.
ಹಾಗೇ ಯಡಿಯೂರಪ್ಪ ಪಾಳೆಯದಲ್ಲಿ ಗುರುತಿಸಿಕೊಂಡಿದ್ದ ಆರ್ ಅಶೋಕ್ ಅವರನ್ನು ಮೂಲೆಗುಂಪು ಮಾಡುವ ತಂತ್ರದ ಭಾಗವಾಗಿ ಪಕ್ಷದ ಸಂಘಟನೆಯಲ್ಲಾಗಲೀ, ಹೊರ ಜಗತ್ತಿನಲ್ಲಾಗಲೀ ಯಾವುದೇ ಪ್ರಭಾವ, ಪ್ರಬಲ ನಾಯಕತ್ವದ ಬಲ ಇರದ ಡಾ ಅಶ್ವಥನಾರಾಯಣ ಅವರಿಗೆ ಮತ್ತೊಂದು ಡಿಸಿಎಂ ಹುದ್ದೆಯೊಂದಿಗೆ ಪ್ರಭಾವಿ ಖಾತೆಯನ್ನೂ ನೀಡಲಾಗಿದೆ. ಆ ಮೂಲಕ ಬೆಂಗಳೂರಿನಲ್ಲಿ ಪ್ರಭಾವ ಹೊಂದಿದ್ದ ಆರ್ ಅಶೋಕ್ ಅವರ ರೆಕ್ಕೆಪುಕ್ಕ ಕತ್ತರಿಸುವ ಮೂಲಕ ಪರೋಕ್ಷವಾಗಿ ಬೆಂಗಳೂರಿನಲ್ಲಿ ಯಡಿಯೂರಪ್ಪ ನೆಲೆ ಕುಸಿಯುವಂತೆ ಮಾಡಲಾಗಿದೆ. ಇನ್ನು ಗೋವಿಂದ ಕಾರಜೋಳ ಅವರೊಬ್ಬರೇ ಯಡಿಯೂರಪ್ಪ ಪಾಳೆಯದಿಂದ ಡಿಸಿಎಂ ಆಗಿದ್ದಾರೆ ಎಂಬ ಸಮಾಧಾನ ಬಿಎಸ್ ವೈ ಬಣಕ್ಕಿದ್ದರೂ, ಅವರನ್ನು ಕೂಡ ಆಯ್ಕೆ ಮಾಡಿರುವುದು ಯಡಿಯೂರಪ್ಪ ಆಪ್ತ ಎಂಬ ಕಾರಣಕ್ಕಲ್ಲದೆ ದಲಿತ ಸಮುದಾಯದ ನಾಯಕ, ಭವಿಷ್ಯದಲ್ಲಿಯೂ ಸಮುದಾಯವನ್ನು ಬಿಜೆಪಿಯ ಜೊತೆ ಉಳಿಸಿಕೊಳ್ಳುವ ಅನಿವಾರ್ಯತೆಯ ಕಾರಣಕ್ಕಾಗಿ ಎಂಬುದು ಗಮನಾರ್ಹ.
ಹಾಗಾಗಿ ರಾಜ್ಯದಲ್ಲಿ ಪಕ್ಷಕ್ಕೆ ನೆಲೆಯಾಗಿರುವ ಲಿಂಗಾಯತ ಸಮುದಾಯದ ಪ್ರಶ್ನಾತೀತ ನಾಯಕ, ಸಾಕಷ್ಟು ಶಾಸಕರ ಮತ್ತು ಬಿಜೆಪಿ ನಾಯಕರ ಬೆಂಬಲ ಹೊಂದಿರುವ ಪ್ರಭಾವಿ ಹಾಗೂ ಆಪರೇಷನ್ ಕಮಲದ ಮೂಲಕ ಮೈತ್ರಿ ಸರ್ಕಾರವನ್ನು ಉರುಳಿಸಿದ ತಂತ್ರಗಾರ ಎಂಬ ಹಿನ್ನೆಲೆಯಲ್ಲಿ ಬಿಎಸ್ ವೈಗೆ ಸಿಎಂ ಪಟ್ಟ ತಪ್ಪಿಸುವುದು ಹೈಕಮಾಂಡ್ಗೆ ಸಾಧ್ಯವಾಗಲಿಲ್ಲ. ಆದರೆ, ಭವಿಷ್ಯದಲ್ಲಿ ಯಡಿಯೂರಪ್ಪ ಹೊರತುಪಡಿಸಿದ ಬಿಜೆಪಿ ಪಕ್ಷ ಕಟ್ಟುವುದು ಅವರ ಮುಂದಿರುವ ಸವಾಲು. ಹಾಗಾಗಿ ಅದಕ್ಕೆ ವೇದಿಕೆ ಸಿದ್ಧಪಡಿಸಲು ಈ ಬಾರಿಯ ಸರ್ಕಾರ ರಚನೆ, ಸಚಿವ ಸಂಪುಟ ಮತ್ತು ಡಿಸಿಎಂ ಹುದ್ದೆ ನೇಮಕ ಪ್ರಕ್ರಿಯೆಗಳನ್ನು ಹೈಕಮಾಂಡ್ ಸಮರ್ಥವಾಗಿ ಬಳಸಿಕೊಂಡಿದೆ.
ಈ ತಂತ್ರಗಾರಿಕೆ, ತಯಾರಿ ಹಿನ್ನೆಲೆಯಲ್ಲಿ ಬಿಜೆಪಿ ಹೈಕಮಾಂಡ್ ಇನ್ನಾರು ತಿಂಗಳಲ್ಲಿ ಯಾವುದೇ ಸಂದರ್ಭದಲ್ಲಿ ಸರ್ಕಾರ ಚುಕ್ಕಾಣಿಯನ್ನು ಬಿಎಸ್ ವೈ ಕೈಯಿಂದ ಕಿತ್ತು ಬಿ ಎಲ್ ಸಂತೋಷ್ ಕೈಗಿಡಬಹುದು. ಸಂತೋಷ್ ಪಡೆಗೆ ಈಗಾಗಲೇ ಸರ್ಕಾರದ ಆಯಕಟ್ಟಿನ ಖಾತೆಗಳನ್ನು ನೀಡಿ ಭೂಮಿಕೆ ಸಜ್ಜುಗೊಳಿಸಿರುವುದರಿಂದ ಅಂತಹ ಸಂದರ್ಭ ಬಂದಲ್ಲಿ ಯಡಿಯೂರಪ್ಪ ಬಂಡಾಯವೆದ್ದರೂ ಅವರೊಂದಿಗೆ ಪಕ್ಷ ತೊರೆದು ಹೋಗುವವರ ಸಂಖ್ಯೆ ಕೂಡ ಹೆಚ್ಚಿರಲಾರದು. ಏಕೆಂದರೆ, ಸಂಪುಟ ವಿಸ್ತರಣೆಯ ವೇಳೆ ಸಚಿವ ಸ್ಥಾನ ಕೈತಪ್ಪಿಸುವ ಮೂಲಕ ಈಗಾಗಲೇ ಅವರ ಆಪ್ತರನ್ನೇ ಅವರ ವಿರುದ್ಧ ಎತ್ತಿಕಟ್ಟಲಾಗಿದೆ. ಹಾಗಾಗಿ ನಾಳೆಯ ಬಂಡಾಯವನ್ನು ಮೆಟ್ಟಿನಿಲ್ಲಲು ಈಗಲೇ ಎಲ್ಲವೂ ಸಜ್ಜಾಗಿದೆ.
ಒಟ್ಟಾರೆ, ಸಂಪುಟ, ಡಿಸಿಎಂ ನೇಮಕ ವಿಷಯದಲ್ಲಿ ಯಡಿಯೂರಪ್ಪ ಪಾಳೆಯವನ್ನು ಬದಿಗೆ ಸರಿಸಿರುವುದು ಸದ್ಯಕ್ಕೆ ಯಡಿಯೂರಪ್ಪ ಅವರನ್ನು ಕಟ್ಟಿಹಾಕುವ ಎಲ್ಲರೂ ಬಲ್ಲ ತಂತ್ರವಷ್ಟೇ ಅಲ್ಲದೆ, ಭವಿಷ್ಯದಲ್ಲಿ ಅವರನ್ನು ಬದಿಗೆ ಸರಿಸುವ ಮೂಲಕ ಅವರನ್ನು ಹೊರತುಪಡಿಸಿದ ಬಿಜೆಪಿ ಭದ್ರಪಡಿಸುವ ದೂರಗಾಮಿ ಲೆಕ್ಕಾಚಾರಗಳೂ ಕೆಲಸ ಮಾಡಿವೆ ಎಂಬುದು ಗಮನಾರ್ಹ. ಹಾಗಾಗಿಯೇ ರಾಜ್ಯದ ಭೀಕರ ಬರವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸುವ ವಿಷಯದಲ್ಲಾಗಲೀ, ಕೂಡಲೇ ತುರ್ತು ಪರಿಹಾರ ಬಿಡುಗಡೆಯ ವಿಷಯದಲ್ಲಾಗಲೀ ಕೇಂದ್ರದ ಬಿಜೆಪಿ ಸರ್ಕಾರ ನಿರಾಸಕ್ತಿ ತಾಳಿದೆ. ಆ ಮೂಲಕ ಜನರ ಕಣ್ಣಲ್ಲಿ ಬಹಳ ಹಠವಾದಿ ಸಿಎಂ ಎಂಬ ಛಾಪು ಮೂಡಿಸಿದ್ದ ಬಿಎಸ್ ವೈ ಅವರ ಇಮೇಜಿಗೆ ಪೆಟ್ಟುಕೊಟ್ಟು, ಅವರ ಮಾತೂ ಈಗೇನು ನಡೆಯದು, ಅವರು ಈಗ ಒಬ್ಬ ಅಸಮರ್ಥ ಸಿಎಂ ಎಂಬ ಭಾವನೆಯನ್ನು ಬಿತ್ತುವ ತಂತ್ರ ಕೂಡ ಆಗಿರಬಹುದು ಎಂಬ ವಾದವನ್ನು ಕೂಡ ತಳ್ಳಿಹಾಕುವಂತಿಲ್ಲ. ಹಾಗಾಗಿ ಇನ್ನು ಕೆಲವೇ ದಿನಗಳಲ್ಲಿ ಯಡಿಯೂರಪ್ಪ ವಿರುದ್ಧ ವಿವಿಧ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳ ಉರುಳು ಬಿಗಿಯತೊಡಗಿದರೂ ಅಚ್ಚರಿ ಇಲ್ಲ!
ಭೂಮಿ ಮೇಲಿನ ಎಲ್ಲಾ ಸಂಗತಿಯನ್ನು ರಾಜಕೀಯ ತಂತ್ರಗಾರಿಕೆಯ ಅಸ್ತ್ರವಾಗಿ ಬಳಸಿಕೊಳ್ಳುವ, ಜನರ ಸಾವು- ನೋವು, ಸಂಕಟ, ಹೆದರಿಕೆ, ಭೀತಿ-ಭಯಗಳನ್ನೂ, ಭಾವನೆ- ಕಣ್ಣೀರನ್ನೂ ರಾಜಕೀಯ ಲಾಭದ ಬ್ರಹ್ಮಾಸ್ತ್ರಗಳನ್ನಾಗಿ ಬಳಸಿಕೊಳ್ಳುವ ಮೂಲಕವೇ ಪ್ರವರ್ಧಮಾನಕ್ಕೆ ಬಂದ ಇಬ್ಬರು ನಾಯಕರ ಕೈಯಲ್ಲಿ, ಸಿಕ್ಕಿರುವ ಅಂತಹದ್ದೇ ರಾಜಕೀಯ ಅಜೆಂಡಾದ ಪಕ್ಷದಲ್ಲಿ ಯಾವುದೂ ಅಸಾಧ್ಯವಲ್ಲ ಎಂಬುದು ಬಡ ಬೋರೇಗೌಡನ ಕನಿಷ್ಟ ವಿವೇಕ!