2009ರ ಬ್ಯಾಚಿನ ಐಎಎಸ್ ಅಧಿಕಾರಿಯಾಗಿ ಲೋಕಸೇವಾ ಹುದ್ದೆಗೆ ಸೇರ್ಪಡೆಗೊಂಡು ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ದಕ್ಷ ಅಧಿಕಾರಿ ಎಸ್.ಶಶಿಕಾಂತ್ ಸೆಂಥಿಲ್ ತಮ್ಮ ರಾಜೀನಾಮೆಗೆ ಇರುವ ಕಾರಣಗಳನ್ನು ಈ ಸಂದರ್ಶನದಲ್ಲಿ ಸ್ಪಷ್ಟಪಡಿಸಿದ್ದಾರೆ. ಈ ಸಂದರ್ಶನವನ್ನು ಹಿಂದೂಸ್ತಾನ್ ಟೈಮ್ಸ್ ಪತ್ರಿಕೆ ನಡೆಸಿದ್ದು, ಇದನ್ನು ಕನ್ನಡೀಕರಿಸಿ ಟ್ರುಥ್ ಇಂಡಿಯಾ ಕನ್ನಡ ಪ್ರಕಟಿಸುತ್ತಿದೆ.
ನೀವು ರಾಜೀನಾಮೆ ನೀಡಲು ಇರುವ ನಿರ್ದಿಷ್ಟ ಕಾರಣ ಏನು?
ನಾನು ಈಗಾಗಲೇ ನನ್ನ ರಾಜಿನಾಮೆ ಪತ್ರದಲ್ಲಿ ತಿಳಿಸಿರುವಂತೆ ರಾಷ್ಟ್ರಮಟ್ಟದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ನನ್ನನ್ನು ಐಎಎಸ್ ಸೇವೆಯಿಂದ ಹೊರಕ್ಕೆ ಕಾಲಿಡುವಂತೆ ಮಾಡಿವೆ. ಇದು ರಾಜ್ಯದೊಳಗಿನ ವಿಷಯಗಳಿಗೆ ಸಂಬಂಧಿಸಿದ್ದಲ್ಲ, ಇಂದು ದೇಶದ ಮೇಲೆ ಹೇರಲಾಗುತ್ತಿರುವ ಒಟ್ಟಾರೆ ರಾಜಕೀಯ ಚೌಕಟ್ಟಿದೆಯಲ್ಲಾ, ಅದು ಬಹಳ ಸಮಸ್ಯಾತ್ಮಕವೆನಿಸಿದೆ. ಕಾಶ್ಮೀರದಲ್ಲಿ 370ನೇ ವಿಧಿಯನ್ನು ನಿಷ್ಕ್ರಿಯಗೊಳಿಸಿದ್ದು ಇದೆಲ್ಲದರ ಕ್ಲೈಮ್ಯಾಕ್ಸ್ ಎನಿಸುತ್ತಿದೆ.
ಇಂತಹ ಆಲೋಚನೆಗಳೆಲ್ಲ ನಿಮ್ಮಲ್ಲಿ ಹೆಚ್ಚಾಗುತ್ತಾ ಇದ್ದವೇ?
ಹೌದು ಬಹಳ ಸಮಯದಿಂದ ನನ್ನಲ್ಲಿ ಈ ಯೋಚನೆಗಳು ಬರುತ್ತಿದ್ದವು. ನಾನು ಜನರ ಸೇವೆಯಲ್ಲಿ ತಳಮಟ್ಟದಲ್ಲಿ ಒಂದಷ್ಟು ಅನುಭವ ಪಡೆದಿರುವುದರಿಂದ ಹೀಗಾಗಿದೆ. ನಾನು ರಾಜಕೀಯ ಅಜೆಂಡಾಗಳನ್ನು ಮತ್ತು ನಡೆಗಳನ್ನು ಗಮನಿಸುತ್ತಲೇ ಬಂದಿದ್ದೇನೆ. ನನ್ನ ಅಭಿಪ್ರಾಯದಲ್ಲಿ ಈಗ ದೇಶದಲ್ಲಿ ನಡೆಯುತ್ತಿರುವುದು ಫ್ಯಾಸಿಸ್ಟ್ ದಾಳಿಯೇ ಆಗಿದೆ. ಜನರು ಹೈಪರ್ ನ್ಯಾಶನಲಿಸ್ಟುಗಳಾಗಿದ್ದಾರೆ. ಬೌದ್ಧಿಕ ಚರ್ಚೆಗಳನ್ನು ಜನರು ಬೆಂಬಲಿಸುತ್ತಲೇ ಇಲ್ಲ. ಇವನ್ನೆಲ್ಲ ಮೌನವಾಗಿ ನೋಡುತ್ತಾ ಅಧಿಕಾರದ ಸ್ಥಾನದಲ್ಲಿ ಕುಳಿತುಕೊಳ್ಳುವುದು ನನ್ನಿಂದಂತೂ ಸಾಧ್ಯವಿಲ್ಲ. ಇದರ ಬಗ್ಗೆ ನಾನು ಏನಾದರೂ ಮಾಡಬೇಕು ಎಂದರೆ ಮೊದಲು ನಾನು ಸೇವೆಯಿಂದ ಹೊರಕ್ಕೆ ಬರಬೇಕಿತ್ತು. ಈ ಕಾರಣದಿಂದಲೇ ನಾನು ರಾಜೀನಾಮೆ ನೀಡಿದೆ.
ಹಾಗಿದ್ದರೆ ನಿಮ್ಮ ನಿರ್ಧಾರ ವೈಯಕ್ತಿಕವಾದದ್ದು ಎಂದು ಯಾಕೆ ಹೇಳಿದಿರಿ?
ಸರ್ಕಾರ ತಾನು ಏನು ಮಾಡಬೇಕೋ, ತನಗೆ ಏನು ಸರಿ ಅನಿಸುತ್ತಿದೆಯೋ ಅದನ್ನು ಮಾಡುತ್ತಿದೆ. ಆದರೆ ನಾವು ನಮ್ಮ ದೇಶವನ್ನು ಕಟ್ಟಿರುವ ಸ್ಪೂರ್ತಿಯಲ್ಲಿ ಅದು ನಡೆಯುತ್ತಿಲ್ಲ ಎನ್ನುವುದು ನನ್ನ ಸಮಸ್ಯೆ. ನಾನು ವೈಯಕ್ತಿಕವಾಗಿ ನಂಬಿಕೊಂಡಿರುವ ಮೌಲ್ಯಗಳಿಗೂ, ನಮ್ಮ ದೇಶದ ಸಂವಿಧಾನವನ್ನು ನಾನು ಅರ್ಥ ಮಾಡಿಕೊಂಡಿರುವ ರೀತಿಗೂ ದೇಶದಲ್ಲಿ ಈಗ ನಡೆಯುತ್ತಿರುವುದಕ್ಕೂ ತಾಳ ಮೇಳವಿಲ್ಲ ಎನಿಸುತ್ತಿದೆ. ಸರ್ಕಾರ ಇವನ್ನೆಲ್ಲ ಕಾನೂನುಬದ್ಧವಾಗಿ ಮಾಡುತ್ತಿರಬಹುದು. ಆದರೆ ಸಂವಿಧಾನದ ಪೀಠಿಕೆ ಎಂಬುದಿದೆಯಲ್ಲ. ಅದುವೇ ಜನರ ಆಶೋತ್ತರಗಳನ್ನು ಮತ್ತು ಸಂವಿಧಾನದ ತಳಪಾಯವನ್ನು ಎತ್ತಿಹಿಡಿಯುವುದು. ಅದರ ದೃಷ್ಟಿಯಿಂದ ಮತ್ತು ನಾನು ಹೊಂದಿರುವ ಮೌಲ್ಯಗಳ ದೃಷ್ಟಿಯಿಂದ ನೋಡಿದಾಗ ನನಗೆ ಇದು ವೈಯಕ್ತಿಕ ಕಾರಣವಾಗಿ ತೋರುತ್ತಿದೆ. ಈಗ ನನ್ನ ಅಭಿಪ್ರಾಯಗಳು ಸರಿಯೋ ತಪ್ಪೋ ಎನ್ನುವುದು ಚರ್ಚೆಗೆ ಬಿಟ್ಟ ವಿಷಯ. ನನ್ನ ಚಿಂತನೆಗಳು ಹೊಂದಿಕೆಯಾಗದಿದ್ದಾಗ ನನಗೆ ಎರಡು ಆಯ್ಕೆಗಳಿದ್ದವು, ಒಂದೋ ನಾನು ನನ್ನ ಚಿಂತನೆಗಳನ್ನು ಬದಲಿಸಿಕೊಳ್ಳುವುದು ಇಲ್ಲವೇ ನನ್ನ ಕೆಲಸ ಬದಲಿಸಿವುದು. ಹೀಗಾಗಿ ನಾನು ನನ್ನ ಕೆಲಸವನ್ನು ತೊರೆದಿದ್ದೇನೆ.
ಚುನಾವಣಾ ರಾಜಕೀಯಕ್ಕೆ ಜಿಗಿಯುವ ಉದ್ದೇಶವೇನಾದರೂ ಇದೆಯಾ?
ನಾನು ಕೆಲಸದಿಂದ ಹೊರ ಬರುವುದೇ ನನಗಿರುವ ದಾರಿ ಎಂದು ನನಗೆ ಅನಿಸಿತ್ತು. ಹಾಗೆಯೇ ಇಂದು ನಡೆಯುತ್ತಿರುವುದು ನನ್ನ ಆತ್ಮಸಾಕ್ಷಿಗೆ ಸರಿಹೊಂದುತ್ತಿಲ್ಲ ಎನ್ನುವುದು ಇದಕ್ಕೆ ಕಾರಣವಾಗಿತ್ತು. ಅದು ಸರಿಯೋ ತಪ್ಪೋ ಎಂದು ತೀರ್ಮಾನಿಸುವುದು ದೇಶಕ್ಕೆ ಬಿಟ್ಟ ವಿಷಯ, ಆದರೆ ದೇಶದಲ್ಲಿ ಏನು ನಡೆಯುತ್ತಿದೆ ಎಂಬುದು ನನ್ನ ಮಟ್ಟಿಗೆ ಸ್ಪಷ್ಟವಿದೆ.
ಮತ್ತೆ ಮುಂದೇನು?
ನಾನು ಅನೇಕ ಸಮೂಹಗಳು ಮತ್ತು ಜನರೊಂದಿಗೆ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಪ್ರಯತ್ನಿಸುತ್ತೇನೆ. ಇಂದು ನಮ್ಮ ಕಣ್ಣೆದುರಿಗೆ ಇರುವ ಫ್ಯಾಸಿಸ್ಟ್ ಚೌಕಟ್ಟಿನಲ್ಲಿ ಇರುವ ಒಂದು ಮುಖ್ಯ ಅಜೆಂಡಾ ಎಂದರೆ ಯಾವುದೇ ಬೌದ್ಧಿಕ ಸಂವಾದ ಮತ್ತು ಅದಕ್ಕಿರುವ ಸಂಸ್ಥೆಗಳನ್ನು ಹೊಸಕಿ ಹಾಕುವುದೇ ಆಗಿದೆ. ಇತಿಹಾಸದಲ್ಲಿ ಇಂತಹ ಘಟನೆಗಳು ಎಷ್ಟೋ ನಡೆದಿವೆ. ಇದು ಹೊಸ ಸಂಗತಿಯೇನಲ್ಲ.
ಕಾಶ್ಮೀರದಲ್ಲಿ ಶಾ ಫೈಸಲ್ ಕೂಡ ಐಎಎಸ್ ತೊರೆದು ರಾಜಕೀಯ ಪಕ್ಷವೊಂದನ್ನು ಕಟ್ಟಲು ಮುಂದಾದರು. ಅದೇ ರೀತಿ ಏನಾದರೂ ನೀವು ಆಲೋಚಿಸುತ್ತಿದ್ದೀರಾ?
ಸಧ್ಯ ನಾನು ಅಂತಹ ನಾಯಕತ್ವದ ಕುರಿತು ಯೋಚಿಸಿಲ್ಲ. ನಾನು ನನ್ನ ಗ್ರಹಿಕೆಯ ಮೂಲಕ ದೇಶದಲ್ಲಿ ಏನು ನಡೆಯುತ್ತಿದೆ ಎಂದು ಜನರಿಗೆ ತಿಳಿಸುವ ಪ್ರಯತ್ನ ಮಾಡುವ ಇರಾದೆ ಇಟ್ಟುಕೊಂಡಿದ್ದೇನೆ. ಅಷ್ಟೆ. ದೇಶದಲ್ಲಿ ಏನು ನಡೆಯುತ್ತಿದೆ ಎಂದು ಬಹಳಷ್ಟು ಜನಕ್ಕೆ ಅರ್ಥ ಮಾಡಿಕೊಳ್ಳಲು ಆಗುತ್ತಿಲ್ಲ ಎಂಬುದು ಮಾತ್ರ ನನಗೆ ಖಾತ್ರಿಯಿದೆ. ನೀವು ರಾಜಕೀಯದ ಬಗ್ಗೆ ಕೇಳಿದರೆ ನನ್ನ ಉತ್ತರ ಇಲ್ಲ ಎಂದೇ ಆಗಿದೆ.
ನಿಮ್ಮ ರಾಜಿನಾಮೆ ಪತ್ರದಲ್ಲಿ ನಿಮ್ಮ ನಿಲುವು ಸ್ಪಷ್ಟವಿಲ್ಲದ ಕಾರಣ ಹಲವರಿಗೆ ನೀವು ರಾಜಿನಾಮೆ ನೀಡಿದ್ದು ವೇತನ ಹೆಚ್ಚಳ, ಅಭಿವೃದ್ಧಿಯ ನಿಧಾನಗತಿ ಮುಂತಾದ ಅಧಿಕಾರಶಾಹಿ ವ್ಯವಸ್ಥೆಯಲ್ಲಿರುವ ಸಮಸ್ಯೆ ಇರಬಹುದೇ ಎಂಬ ಅನುಮಾನ ಬಂದಿತ್ತು. ಅಥವಾ ಅದು ಕೇವಲ 370ನೇ ವಿಧಿ ಮಾತ್ರವೇ?
ಇದು ಕೇವಲ 370ನೇ ವಿಧಿಯ ಕಾರಣವಲ್ಲ. ನಾನು ವಿಷಯವನ್ನು ಸಂಕುಚಿತಗೊಳಿಸಿ ನೋಡಲು ಬಯಸುವುದಿಲ್ಲ. ಆದರೆ ಈಗ ಪರಿಸ್ಥಿತಿ ಉತ್ತುಂಗದ ಹಂತ ತಲುಪಿದೆ. ದೇಶದಲ್ಲಿ ಭಯಾನಕ ಪರಿಸ್ಥಿತಿ ಉಂಟಾಗಿದೆ. ನಾವು ಆಡಳಿತದಲ್ಲಿ ಕೆಲವು ಪೂರ್ವನಿರೀಕ್ಷಣಾ ಅಧಿಕಾರ ಹೊಂದಿರುತ್ತೇವೆ. ಕೆಲವು ಸಂದರ್ಭಗಳಲ್ಲಿ ಕೆಲವು ಘಟನೆಗಳು ನಡೆಯುವುದನ್ನು ತಡೆಯಲು ತಪ್ಪಿಸಲು ಸೆಕ್ಷನ್ 144ನ್ನು ಜಾರಿಗೊಳಿಸುತ್ತೇವೆ. ಈ ಅಧಿಕಾರವನ್ನು ಕೇವಲ 12 ಗಂಟೆಯಷ್ಟೇ ಬಳಸಿದರೂ ಸಹ ನಮಗೆ ಜನರ ಮೂಲಭೂತ ಹಕ್ಕುಗಳನ್ನು ಹೀಗೆ ಎಷ್ಟು ಸಮಯ ಕಡಿತಗೊಳಿಸಬಹುದು ಎಂದು ಒಂದು ರೀತಿ ಉದ್ವೇಗಕ್ಕೆ ಒಳಗಾಗಿರುತ್ತೇವೆ. ಆದರೆ ಈಗ 30 ದಿನಗಳಾದವು. ಯಾವುದೇ ಸಂಪರ್ಕ ಸಂವಹನವಿಲ್ಲ ಏನೂ ಇಲ್ಲ… ನಿಮ್ಮನ್ನು ಅಂತಹ ಸ್ಥಿತಿಯಲ್ಲಿ ಕಲ್ಪಿಸಿಕೊಳ್ಳಿ. ಇಂತಹ ಒಂದು ಪರಿಸ್ಥಿತಿಯಲ್ಲಿ ನಮ್ಮ ಸಂಸ್ಥೆಗಳು ದುರ್ಬಲಗೊಳ್ಳುತ್ತವೆ ಹಾಗೂ ಇದರ ಬಗ್ಗೆ ಯಾರಾದರೂ ಮಾತಾಡಿದರೆ ಅಂತವರಿಗೆ ಬೆದರಿಕೆ ಒಡ್ಡಲಾಗುತ್ತದೆ. ನಾನಿಲ್ಲಿ ಹೇಳುತ್ತಿರುವುದು ಕೇವಲ ಕಾಶ್ಮೀರದ ಕುರಿತು ಅಲ್ಲ. ಇನ್ನು ಸೇವೆಗೆ ಸಂಬಂಧಪಟ್ಟ ವಿಷಯದ ಬಗ್ಗೆ ಹೇಳಬೇಕೆಂದರೆ ಈಗಾಗಲೇ ನಾನು ಕುರಿತು ಸ್ಪಷ್ಟಪಡಿಸಿದ್ದೇನೆ. ನನ್ನನ್ನು ಎಲ್ಲರೂ ರಾಜನಂತೆ ನೋಡಿಕೊಂಡಿದ್ದಾರೆ. ನಾನು ಮೂರು ಸರ್ಕಾರಗಳ ಅವಧಿಯಲ್ಲಿ ಮೂರು ಜಿಲ್ಲೆಗಳಲ್ಲಿ ಕೆಲಸ ಮಾಡಿದ್ದೇನೆ. ಯಾವತ್ತೂ ಯಾವ ಸರ್ಕಾರವೂ ನನಗೆ ಇಷ್ಟವಿಲ್ಲದ ಕೆಲಸ ಮಾಡಲು ಹೇಳಿಲ್ಲ. ಹಾಗೆಯೇ ವೇತನದಂತಗಹ ವಿಷಯಗಳನ್ನಿಟ್ಟುಕೊಂಡು ನಾನು ಸೇವೆ ತೊರೆಯಲಿಲ್ಲ. ಇದೆಲ್ಲವನ್ನೂ ಮೀರಿದ ವಿಷಯಗಳ ಕಾರಣ ನನಗಿದೆ. ನಿಜ ಹೇಳಬೇಕೆಂದರೆ ನಾವೆಲ್ಲ ಪಡೆಯುತ್ತಿರುವ ಸಂಬಳ ನಮ್ಮ ನಮ್ಮ ಅರ್ಹತೆಗಿಂತಲೂ ಹೆಚ್ಚೇ ಆಗಿದೆ.