ನವದೆಹಲಿ/ಪಿಟಿಐ ಸುದ್ದಿ: ಸ್ವಾಮಿ ಚಿನ್ಮಯಾನಂದ ನನ್ನ ಮೇಲೆ ಒಂದು ವರ್ಷ ಕಾಲ ಸತತವಾಗಿ ಅತ್ಯಾಚಾರ ನಡೆಸಿದ್ದಾನೆ, ಹಿಂಸಿಸಿದ್ದಾನೆ, ಜೀವ ಬೆದರಿಕೆ ಒಡ್ಡಿದ್ದಾನೆ ಎಂದು ಶಹಜಾನ್ಪುರದ ಕಾನೂನು ವಿದ್ಯಾರ್ಥಿನಿ ಹೇಳಿಕೆ ನೀಡಿದ್ದಾಳೆ.
ಕೆಲವು ದಿನಗಳ ಹಿಂದೆ ಫೇಸ್ಬುಕ್ ಲೈವ್ ಮೂಲಕ ಕಾಣಿಸಿಕೊಂಡು ತನಗೆ ಹಾಗೂ ತನ್ನಂತೆ ಇರುವ ಅನೇಕ ವಿದ್ಯಾರ್ಥಿನಿಯರಿಗೆ ಬಿಜೆಪಿ ಮುಖಂಡ, ಮಾಜಿ ಕೇಂದ್ರ ಸಚಿವ ಹಾಗೂ ಸಂತನ ವೇಷ ಧರಿಸಿರುವ ಸ್ವಾಮಿ ಚಿನ್ಮಯಾನಂದನಿಂದ ಕಿರುಕುಳುವಾಗುತ್ತಿದೆ, ತನ್ನ ಜೀವ ಅಪಾಯದಲ್ಲಿದೆ ಎಂದು ಯುವತಿ ದೂರಿದ್ದಳು. ಈ ವಿಡಿಯೋ ವೈರಲ್ ಆಗಿತ್ತು. ಇದಾದ ಮರುದಿನವೇ ಆ ಯುವತಿ ನಾಪತ್ತೆಯಾಗಿದ್ದಳು. ನಾಲ್ಕು ದಿನಗಳ ಬಳಿಕ ರಾಜಾಸ್ತಾನದಲ್ಲಿರುವ ಸ್ವಾಮಿ ಚಿನ್ಮಯಾನಂದನ ಆಶ್ರಮದಲ್ಲಿ ಆಕೆ ಪತ್ತೆಯಾಗಿದ್ದಳು. ಈ ವಿಷಯವನ್ನು ದೆಹಲಿಯ ನ್ಯಾಯವಾದಿಗಳು ಸುಪ್ರೀಂ ಕೋರ್ಟಿನ ಗಮನಕ್ಕೆ ತಂದಿದ್ದರು. ನ್ಯಾಯಾಲಯವು ಈ ಯುವತಿಯ ಆರೋಪದ ವಿಷಯದಲ್ಲಿ ಪ್ರಕರಣ ದಾಖಲಿಸಿಕೊಂಡು ಸೂಕ್ತ ತನಿಖೆ ನಡೆಸುವಂತೆ ಪೊಲೀಸರಿಗೆ ತಿಳಿಸಿತ್ತು.
“ದೆಹಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಉತ್ತರ ಪ್ರದೇಶದ ಶಹಜಾನ್ ಪುರದ ಪೊಲೀಸರಿಗೆ ವರ್ಗಾಯಿಸಿದ್ದಾರೆ. ಆದರೆ ಶಹಜಾನ್ಪುರದ ಪೊಲೀಸರು ಚಿನ್ಮಯಾನಂದನ ಮೇಲೆ ಅತ್ಯಾಚಾರ ಪ್ರಕರಣ ದಾಖಲಿಸಿಲ್ಲ, ಸೂಕ್ತ ಕ್ರಮ ಕೈಗೊಂಡಿಲ್ಲ” ಎಂದು ಕಾನೂನು ವಿದ್ಯಾರ್ಥಿನಿ ದೂರಿದ್ದಾಳೆ.
ಸ್ವಾಮಿ ಚಿನ್ಮಯಾನಂದ ತನ್ನ ಮೇಲೆ ಅತ್ಯಾಚಾರ ನಡೆಸಿರುವುದೇ ಅಲ್ಲದೇ ದೈಹಿಕ ಹಿಂಸೆ ನೀಡಿದ್ದಾನೆ ಎಂದು ಸಹ ಯುವತಿ ತಿಳಿಸಿದ್ದಾಳೆ.
ಕಳೆದ ಭಾನುವಾರ ವಿಶೇಷ ತನಿಖಾ ತಂಡ ತನ್ನನ್ನು ವಿಚಾರಣೆ ಮಾಡಿದ ಸಂದರ್ಭದಲ್ಲಿ ತನ್ನ ಮೇಲಿನ ಅತ್ಯಾಚಾರದ ಕುರಿತು ದೂರು ನೀಡಿದ್ದರೂ ಸಹ ಆರೋಪಿಯನ್ನು ಬಂಧಿಸಲಾಗಿಲ್ಲ ಎಂದು ಆಕೆ ಹೇಳಿದ್ದಾಳೆ. “ಭಾನುವಾರ ನನ್ನನ್ನು ಎಸ್ಐಟಿ 11 ಗಂಟೆಗಳ ಕಾಲ ವಿಚಾರಣೆ ನಡೆಸಿದೆ. ಆಗ ನನ್ನ ಮೇಲೆ ನಡೆದಿರುವ ಅತ್ಯಾಚಾರದ ಕುರಿತು ತನಿಖಾಧಿಕಾರಿಗಳಿಗೆ ತಿಳಿಸಿದ್ದೇನೆ. ಪ್ರತಿಯೊಂದು ಸಂಗತಿಯನ್ನು ತಿಳಿಸಿದ ಮೇಲೆಯೂ ಅವರು ಚಿನ್ಮಯಾನಂದನನ್ನು ಬಂಧಿಸಿಲ್ಲ” ಎಂದು ಯುವತಿ ದೂರಿದ್ದಾಳೆ.
ಆಗಸ್ಟ್ 27ರಂದು ಶಜಜಾನ್ಪುರದ ಪೊಲೀಸರು ಚಿನ್ಮಯಾನಂದನ ಮೇಲೆ ಎಫ್ ಐ ಆರ್ ದಾಖಲಿಸಿದ್ದಾರೆ. ಕಾನೂನು ವಿದ್ಯಾರ್ಥಿನಿಯ ಪೋಷಕರು ಪೊಲೀಸರಿಗೆ ದೂರು ನೀಡಿ ತಮ್ಮ ಮಗಳನ್ನು ಸ್ವಾಮಿ ಚಿನ್ಮಯಾನಂದ ಅಪಹರಿಸಿದ್ದಾನೆ ಎಂದು ದೂರು ಸಲ್ಲಿಸಿದ್ದರು. ಈ ಕುರಿತು ಬಿಜೆಪಿಗೆ ಮುಖಭಂಗವಾದ ನಂತರದಲ್ಲಿ ಮಾಜಿ ಕೇಂದ್ರ ಸಚಿವ ಚಿನ್ಮಯಾನಂದ ಇದು “ಸುಳ್ಳು ಆರೋಪ”ವಾಗಿದ್ದು ತನ್ನನ್ನು ಬ್ಲಾಕ್ ಮೇಲ್ ಮಾಡಲು ನಡೆಸಿರುವ “ಸಂಚು” ಎಂದು ಹೇಳಿದ್ದ.