ರಾಜ್ಯದ ಬಹುತೇಕ ಉತ್ತರಕರ್ನಾಟಕ, ಮಲೆನಾಡು ಮತ್ತು ಕರಾವಳಿಯಲ್ಲಿ ಕೇವಲ ತಿಂಗಳ ಅಂತರದಲ್ಲಿ ಎರಡೆರಡು ಬಾರಿ ಪ್ರವಾಹ ಪರಿಸ್ಥಿತಿ ಉಂಟಾಗಿ ಜನರ ಬದುಕು ಮೂರಾಬಟ್ಟೆಯಾಗಿದೆ. ಒಂದು ತಿಂಗಳ ಹಿಂದೆ, ಆಗಸ್ಟ್ ಮೊದಲ ವಾರದಲ್ಲಿ ಸುರಿದ ಮಹಾ ಮಳೆ ಬಹುತೇಕ ಅರ್ಧ ರಾಜ್ಯವನ್ನೇ ಮುಳುಗಿಸಿತ್ತು. ಸುಮಾರು ಹತ್ತು ದಿನಗಳ ಕಾಲ ನಿರಂತರ ಸುರಿದ ಮಳೆಗೆ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಜನ ಹೊಲ-ಮನೆ ಕಳೆದುಕೊಂಡು ಅಕ್ಷರಶಃ ಬೀದಿಗೆ ಬಿದ್ದಿದ್ದಾರೆ. ಈ ನಡುವೆ ಕೇವಲ ಹದಿನೈದು ದಿನಗಳ ಅಂತರದಲ್ಲೇ ಮತ್ತೊಂದು ಸುತ್ತಿನ ಪ್ರವಾಹ ಎರಗಿ ಅಳಿದುಳಿದ ಬದುಕನ್ನೂ ಕೊಚ್ಚಿ ಒಯ್ದಿದೆ.
ರಾಜ್ಯದ 18 ಜಿಲ್ಲೆಗಳ ಸುಮಾರು 110ಕ್ಕೂ ಹೆಚ್ಚು ತಾಲೂಕುಗಳಲ್ಲಿ ಭೀಕರ ಪ್ರವಾಹದಿಂದಾಗಿ ಸುಮಾರು ರೂ. 40 ಸಾವಿರ ಕೋಟಿಗೂ ಅಧಿಕ ಮೌಲ್ಯದ ಆಸ್ತಿಪಾಸ್ತಿ ಹಾನಿ ಸಂಭವಿಸಿದೆ ಎಂದು ಸ್ವತಃ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರೇ ಮೊದಲ ಸುತ್ತಿನ ಪ್ರವಾಹ ಪ್ರದೇಶ ಸಮೀಕ್ಷೆಯ ಬಳಿಕ ಹೇಳಿದ್ದರು. ಆಗಸ್ಟ್ ಎರಡನೇ ವಾರವೇ ಪರಿಹಾರ ಕಾರ್ಯಕ್ಕೆ ತುರ್ತಾಗಿ ಮೂರು ಸಾವಿರ ಕೋಟಿ ಬಿಡುಗಡೆ ಮಾಡುವಂತೆ, ಮೊದಲ ಹಂತದಲ್ಲಿ ಸುಮಾರು ಹತ್ತು ಸಾವಿರ ಕೋಟಿ ನೀಡುವಂತೆಯೂ ತಮ್ಮದೇ ಕೇಂದ್ರದ ಬಿಜೆಪಿ ಸರ್ಕಾರಕ್ಕೆ ಮನವಿ ಮಾಡಿರುವುದಾಗಿಯೂ, ಒಂದೆರಡು ದಿನಗಳಲ್ಲಿ ರಾಜ್ಯದ ನೆರವಿಗೆ ಕೇಂದ್ರದ ಅನುದಾನ ದೊರೆಯಲಿದೆ ಎಂದೂ ಯಡಿಯೂರಪ್ಪ ಹೇಳಿದ್ದರು. ಜೊತೆಗೆ ಪ್ರವಾಹವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕು ಎಂದು ಮನವಿ ಮಾಡುವುದಾಗಿಯೂ ಹೇಳಿದ್ದರು.
ಈ ನಡುವೆ, ಹಣಕಾಸು ಸಚಿವೆ ಹಾಗೂ ರಾಜ್ಯಸಭೆಯಲ್ಲಿ ನಮ್ಮದೇ ರಾಜ್ಯವನ್ನು ಪ್ರತಿನಿಧಿಸುವ ನಿರ್ಮಲಾ ಸೀತಾರಾಮನ್ ಹಾಗೂ ಗೃಹ ಸಚಿವ ಮತ್ತು ಕೇಂದ್ರ ಸರ್ಕಾರದ ಸೂತ್ರಧಾರ ಅಮಿತ್ ಶಾ ಕೂಡ ಪ್ರವಾಹಪೀಡಿತ ಉತ್ತರಕರ್ನಾಟಕದ ಜಿಲ್ಲೆಗಳಲ್ಲಿ ವೈಮಾನಿಕ ಸಮೀಕ್ಷೆಯನ್ನೂ ನಡೆಸಿ ಹೋಗಿದ್ದರು. ಇಬ್ಬಿಬ್ಬರು ಪ್ರಭಾವಿ ಸಚಿವರು ಸಮೀಕ್ಷೆ ನಡೆಸಿದ ಬಳಿಕ, ಮತ್ತೆ ಕೇಂದ್ರದ ಸಮೀಕ್ಷಾ ತಂಡವೇ ರಾಜ್ಯದಾದ್ಯಂತ ಪ್ರವಾಸ ಮಾಡಿ ತನ್ನದೇ ವರದಿ ಸಿದ್ಧಪಡಿಸಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿತ್ತು. ಜೊತೆಗೆ ಪ್ರವಾಹ ಪರಿಹಾರ ಕಾರ್ಯಾಚರಣೆಗೆ ಬಂದಿದ್ದ ಎನ್ ಡಿಆರ್ ಎಫ್ ತಂಡ ಕೂಡ ಎಂದಿನಂತೆ ಪ್ರವಾಹ ಹಾನಿ ಕುರಿತ ತನ್ನದೇ ಸಮೀಕ್ಷಾ ವರದಿಯನ್ನು ಕೂಡ ಗೃಹ ಇಲಾಖೆಗೆ ಸಲ್ಲಿಸಿತ್ತು.
ಅದು ಸಾಲದು ಎಂಬಂತೆ ಸ್ವತಃ ರಾಜ್ಯ ಸರ್ಕಾರ ಕೂಡ ಬರೋಬ್ಬರಿ ಒಂದು ತಿಂಗಳ ಬಳಿಕ ಪ್ರವಾಹ ಪರಿಸ್ಥಿತಿ ತಗ್ಗಿದ ಬಳಿಕ ಸಮಗ್ರವಾಗಿ ಸಮೀಕ್ಷೆ ನಡೆಸಿ, ಹಾನಿಯ ಕುರಿತ ಸಮಗ್ರ ವರದಿ ತಯಾರಿಸಿ ಕೇಂದ್ರಕ್ಕೆ ಸಲ್ಲಿಸಿತ್ತು. ಸುಮಾರು 38 ಸಾವಿರ ಕೋಟಿ ರೂ. ನಷ್ಟ ಸಂಭವಿಸಿದ್ದು, ಪರಿಹಾರ ಘೋಷಣೆ ಮಾಡುವಂತೆ ಕೋರಲಾಗಿತ್ತು. ಈ ನಡುವೆ, ಕಳೆದ ಒಂದು ತಿಂಗಳ ಅವಧಿಯಲ್ಲಿ ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ನಾಲ್ಕು ಬಾರಿ ದೆಹಲಿಗೆ ಹೋಗಿ ಪ್ರಧಾನಿ ಮತ್ತು ಗೃಹ ಸಚಿವರನ್ನು ಭೇಟಿ ಮಾಡಿ ಪರಿಹಾರ ಘೋಷಣೆಗೆ ಅಂಗಾಲಾಚಿದ್ದರು. ಆದರೆ, ಎನ್ ಡಿ ಆರ್ ಎಫ್ ನಿಯಮದ ಪ್ರಕಾರ ಕೇವಲ 3800 ಕೋಟಿ ಸಿಗಬಹುದು ಎಂದು ಸ್ವತಃ ಕಂದಾಯ ಸಚಿವರೇ ಹೇಳಿದ್ದಾರೆ. ಅಂದರೆ, ಕೇಳಿದ್ದು 38 ಸಾವಿರ ಕೋಟಿ, ಸಿಗುವ ನಿರೀಕ್ಷೆ ಇರುವುದು ಕೇವಲ 3800 ಕೋಟಿ! ಆ ಚಿಕ್ಕಾಸಿನ ಪರಿಹಾರ ಘೋಷಣೆಗೂ ಬರೋಬ್ಬರಿ ಒಂದೂವರೆ ತಿಂಗಳು ಕಳೆದರೂ ಕಾಲಕೂಡಿಬಂದಿಲ್ಲ!
ಇಬ್ಬಿಬ್ಬರು ಸಚಿವರು, ಕೇಂದ್ರ ಪ್ರವಾಹ ಪರಿಸ್ಥಿತಿ ಅಧ್ಯಯನ ವಿಶೇಷ ತಂಡ, ರಾಜ್ಯದ ಮುಖ್ಯಮಂತ್ರಿ, ರಾಜ್ಯದ ಸಮೀಕ್ಷಾ ತಂಡ, ವಿವಿಧ ಸಚಿವರು ಮತ್ತು ಶಾಸಕರ ಪ್ರವಾಹ ಸಮೀಕ್ಷೆಗಳೆಲ್ಲಾ ಮುಗಿದ ಇದೀಗ ಬರೋಬ್ಬರಿ ಒಂದೂವರೆ ತಿಂಗಳು ಗತಿಸಿದೆ. ಐವತ್ತು ದಿನಗಳು ಕಳೆದರೂ ಕೇಂದ್ರ ಸರ್ಕಾರದಿಂದ ಕನಿಷ್ಠ 50 ಕೋಟಿ ಪರಿಹಾರ ಕೂಡ ರಾಜ್ಯದ ಸಂತ್ರಸ್ತರ ಕೈ ಸೇರಿಲ್ಲ. ಈ ನಡುವೆ, ಭೀಕರ ಪ್ರವಾಹದ ನಡುವೆಯೇ ರಾಜ್ಯದ ಪ್ರವಾಹಪೀಡಿತ ಪ್ರದೇಶಗಳ ಸಮೀಕ್ಷೆಗೆ ಬರಲು ಪುರುಸೊತ್ತಿಲ್ಲ ಎಂದು ಹೇಳಿದ್ದ ಪ್ರಧಾನಿ ಮೋದಿಯವರು ಆಗ ವಿದೇಶ ಪ್ರವಾಸಕ್ಕೆ ಹೋಗಿದ್ದರು. ಅಲ್ಲಿಂದ ಬಂದ ಬಳಿಕ ಕೂಡ ಅವರಿಗೆ ರಾಜ್ಯದ ಸಂತ್ರಸ್ತರ ನೆನಪಾಗಿರಲಿಲ್ಲ. ಕಳೆದ ವಾರ ಖುದ್ದು ಬೆಂಗಳೂರಿಗೆ ಬಂದು ಚಂದ್ರಯಾನ್-2ರ ಉಡಾವಣೆಯ ಸಂದರ್ಭದಲ್ಲಿ ಇಸ್ರೋ ಕಚೇರಿಯಲ್ಲಿದ್ದರೂ, ಆ ಭೇಟಿಯ ವೇಳೆ ಕನಿಷ್ಟ ಒಂದು ತಾಸು ಕೂಡ ಬಿಡುವು ಮಾಡಿಕೊಂಡು ಪ್ರವಾಹ ಪರಿಸ್ಥಿತಿಯ ಬಗ್ಗೆ ಕನಿಷ್ಠ ಮುಖ್ಯಮಂತ್ರಿ ಮತ್ತು ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸುವ ಸೌಜನ್ಯವನ್ನೂ ಮೋದಿ ಅವರು ತೋರಲಿಲ್ಲ. ಇನ್ನು ಸಮೀಕ್ಷೆಯ ಮಾತು ದೂರವೇ ಉಳಿಯಿತು.
ಪ್ರಧಾನಿ ಸ್ವತಃ ಸಮೀಕ್ಷೆ ನಡೆಸುವುದು ಬೇಡ, ಸಮಾಲೋಚನೆ ನಡೆಸುವುದೂ ಬೇಡ, ಕನಿಷ್ಠ ಮಾತಿಗಾದರೂ ಒಮ್ಮೆ ಹೇಗಿದೆ ರಾಜ್ಯದ ಪ್ರವಾಹ ಪರಿಸ್ಥಿತಿ ಎಂದು ತಮ್ಮದೇ ಪಕ್ಷದ ಮುಖ್ಯಮಂತ್ರಿಯೊಂದಿಗಾದರೂ ವೈಯಕ್ತಿಕವಾಗಿ ವಿಚಾರಿಸಿದರೆ? ಎಂದರೆ ಅದೂ ಇಲ್ಲ. ಹೋಗಲಿ, ಕೇಂದ್ರದ ಇಬ್ಬರು ಪರಮಾಪ್ತ ಸಚಿವರು ಸಮೀಕ್ಷೆ ನಡೆಸಿ, ತಮ್ಮದೇ ಕೇಂದ್ರ ತಂಡ ಅಧ್ಯಯನ ನಡೆಸಿ ಸಲ್ಲಿಸಿದ ವರದಿಯನ್ನಾದರೂ ನೆಚ್ಚಿ ಕನಿಷ್ಠ ಮಧ್ಯಂತರ ತುರ್ತು ಪರಿಹಾರವನ್ನಾದರೂ ಘೋಷಿಸಿದರೆ? ಎಂದರೆ ಅದೂ ಇಲ್ಲ. ರಾಜ್ಯ ಸರ್ಕಾರ ಸಲ್ಲಿಸಿದ ವರದಿಯನ್ನಾದರೂ ಪರಿಗಣಿಸಿ ಪರಿಹಾರ ಘೋಷಿಸಿದರಾ? ಮುಖ್ಯಮಂತ್ರಿ ಸ್ವತಃ ನಾಲ್ಕೈದು ಬಾರಿ ಬಂದು ತಮ್ಮ ಮನೆ ಬಾಗಿಲು ಕಾದಿದ್ದಕ್ಕಾದರೂ ಮರ್ಯಾದೆ ಕೊಟ್ಟು ಬಿಡಿಗಾಸು ಕೊಟ್ಟರಾ? ಊಹೂಂ… ಯಾವುದಕ್ಕೂ ಮನಸ್ಸು ಕರಗಲೇ ಇಲ್ಲ!
ಹಾಗಾದರೆ, ರಾಜ್ಯದ ಜನ ಕೇಂದ್ರ ಸರ್ಕಾರ ಅಥವಾ ಆಡಳಿತಾರೂಢ ಬಿಜೆಪಿಯ ಈ ಮಟ್ಟಿಗಿನ ಅವಕೃಪೆಗೆ, ತಾತ್ಸಾರಕ್ಕೆ, ಅವಗಣನೆಗೆ ಗುರಿಯಾಗುವಂತಹ ತಪ್ಪು ಮಾಡಿದ್ದಾದರೂ ಏನು? ಎಂಬ ಪ್ರಶ್ನೆ ಈಗ ಎಲ್ಲರ ಕುತೂಹಲದ ಚರ್ಚೆಯ ಸಂಗತಿಯಾಗಿದೆ. ಕಳೆದ ವರ್ಷ ಗುಜರಾತ್ ಪ್ರವಾಹದ ವೇಳೆ ತತಕ್ಷಣಕ್ಕೆ, ಯಾವುದೇ ಸಮೀಕ್ಷೆ, ವರದಿಗಳಿಗೂ ಮುನ್ನವೇ 12 ಸಾವಿರ ಕೋಟಿ ರೂ. ಪರಿಹಾರ ಘೋಷಿಸಿದ್ದ ಪ್ರಧಾನಿ ಮೋದಿಯವರು, ಈ ಬಾರಿ ಗುಜರಾತ್ ಪ್ರವಾಹಕ್ಕೂ ನೂರಾರು ಪಟ್ಟು ಅಧಿಕ ಹಾನಿ ಸಂಭವಿಸಿರುವ ರಾಜ್ಯದ ವಿಷಯದಲ್ಲಿ ಕನಿಷ್ಟ ಒಂದು ಸಾವಿರ ಕೋಟಿ ರೂ. ಕೂಡ ನೀಡದೇ ಇರಲು ಕಾರಣವೇನು?
28 ಲೋಕಸಭಾ ಕ್ಷೇತ್ರಗಳ ಪೈಕಿ ಬರೋಬ್ಬರಿ 25 ಕ್ಷೇತ್ರಗಳಲ್ಲಿ ಕಳೆದ ಮೇನಲ್ಲಿ ಕಮಲ ಅರಳಿಸಿದ ರಾಜ್ಯದ ಮತದಾರರು, ಅದರಲ್ಲೂ ಪ್ರಮುಖವಾಗಿ ಈಗ ಪ್ರವಾಹದಲ್ಲಿ ಕೊಚ್ಚಿ ಹೋಗಿರುವ ಉತ್ತರಕರ್ನಾಟಕದ ಮತದಾರರು, ಬಿಜೆಪಿಗೆ ಜೈಕಾರ ಹಾಕಿದ ತಪ್ಪಿಗೆ ತಮಗೆ ಈ ಶಿಕ್ಷೆಯೇ ಎಂದು ಕೇಳತೊಡಗಿದ್ದಾರೆ. ರಾಜ್ಯದಲ್ಲೂ ಮತ್ತು ಕೇಂದ್ರದಲ್ಲೂ ಎರಡೂ ಕಡೆ ಅಧಿಕಾರದಲ್ಲಿರುವ ಬಿಜೆಪಿಗೆ ಇಡೀ ದಕ್ಷಿಣ ಭಾರತದಲ್ಲಿಯೇ ಅಧಿಕಾರದ ಗದ್ದುಗೆಗೆ ಅವಕಾಶ ನೀಡಿದ್ದು ಕರ್ನಾಟಕ. ಅದರಲ್ಲೂ ಕಳೆದ ಎರಡು ದಶಕದಿಂದ ರಾಜ್ಯದಲ್ಲಿ ಬಿಜೆಪಿಗೆ ಭದ್ರ ನೆಲೆಯಾಗಿರುವುದು ಉತ್ತರಕರ್ನಾಟಕ ಮತ್ತು ಕರಾವಳಿ-ಮಲೆನಾಡು ಪ್ರದೇಶ. ಆದರೆ, ಇದೀಗ ಭೀಕರ ಪ್ರವಾಹದಲ್ಲಿ ನಲುಗಿರುವ ಈ ಪ್ರದೇಶದ ಜನರ ಸಂಕಷ್ಟಕ್ಕೆ ಬಿಜೆಪಿ ಎಷ್ಟರಮಟ್ಟಿಗೆ ಸ್ಪಂದಿಸುತ್ತಿದೆ ಎಂಬುದಕ್ಕೆ ಈಗಿನ ಆ ಪಕ್ಷದ ಮೇರು ನಾಯಕರ ಧೋರಣೆಯೇ ನಿದರ್ಶನ.
ಹಿಂದಿನ ಯುಪಿಎ ಅವಧಿಯಲ್ಲಿ ಇದೇ ರೀತಿಯ ಪ್ರವಾಹ ಪರಿಸ್ಥಿತಿ ಉಂಟಾದಾಗ, ಅಂದಿನ ಪ್ರಧಾನಿ ಮನಮೋಹನ ಸಿಂಗ್ ಅವರು ಸ್ವತಃ ವೈಮಾನಿಕ ಸಮೀಕ್ಷೆ ನಡೆಸಿ, ನಿಂತ ಹೆಜ್ಜೆಯಲ್ಲಿ 6 ಸಾವಿರ ಕೋಟಿ ಪರಿಹಾರ ಪ್ಯಾಕೇಜ್ ಘೋಷಿಸಿದ್ದರು. ಆ ಮೂಲಕ ಜನರ ಸಂಕಷ್ಟಕ್ಕೆ ಮಿಡಿದಿದ್ದರು. ಆದರೆ, ಈಗಿನ ಸರ್ಕಾರ ಮತ್ತು ಪ್ರಧಾನಿ ಅರ್ಧ ರಾಜ್ಯವೇ ಕೊಚ್ಚಿಹೋಗುವಂತಹ ಭೀಕರ ಪ್ರವಾಹದ ಬಳಿಕವೂ ದುರಂತವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಲು ಸಿದ್ಧವಿಲ್ಲ, ಕನಿಷ್ಠ ತುರ್ತುಪರಿಹಾರವೂ ಇಲ್ಲ, 50 ದಿನಗಳ ಬಳಿಕವೂ ಬಿಡಿಗಾಸಿನ ಪರಿಹಾರದ ಮಾತೇ ಇಲ್ಲ. ರಾಜ್ಯದ ಇತಿಹಾಸದಲ್ಲೇ ಹಿಂದೆಂದೂ ಇಂತಹ ಸಂಕಷ್ಟದ ಹೊತ್ತಲ್ಲಿ ಕೇಂದ್ರದ ಸರ್ಕಾರ(ರಾಜ್ಯ ಮತ್ತು ಕೇಂದ್ರದಲ್ಲಿ ಬೇರೆ ಬೇರೆ ಪಕ್ಷಗಳು ಅಧಿಕಾರದಲ್ಲಿದ್ದಾಗಲೂ) ಇಷ್ಟು ಅಮಾನವೀಯವಾಗಿ, ಹೊಣೆಗೇಡಿಯಾಗಿ ಮತ್ತು ರಾಜ್ಯದ ಜನರನ್ನು ಇಷ್ಟು ಕನಿಷ್ಠವಾಗಿ ನಡೆಸಿಕೊಂಡ ಉದಾಹರಣೆಯೇ ಇಲ್ಲ.
“ಈ ಹಿಂದೆ ಬಿಜೆಪಿ ಸರ್ಕಾರವಿದ್ದಾಗ ಕೂಡ ಕೇಂದ್ರದ ಕಾಂಗ್ರೆಸ್ ಪ್ರಧಾನಿಗಳು ಉದಾರವಾಗಿ ಪ್ರವಾಹ ಪರಿಹಾರ ನೀಡಿದ್ದರು. ಆದರೆ, ಈಗ ನಮ್ಮದೇ ಸರ್ಕಾರಗಳು ಎರಡೂ ಕಡೆ ಇರುವಾಗ ಕೂಡ, ನಮ್ಮೆಲ್ಲಾ ಮನವಿ, ಕೋರಿಕೆ, ವರದಿ, ಪ್ರಸ್ತಾವನೆಗಳ ಹೊರತಾಗಿಯೂ ಕೇಂದ್ರ ನಮ್ಮನ್ನು ಇಷ್ಟು ನಿರ್ಲಕ್ಷ್ಯದಿಂದ ಕಾಣುತ್ತಿರುವುದು ಏಕೆ ಎಂದು ಅರ್ಥವಾಗುತ್ತಿಲ್ಲ” ಎಂಬುದನ್ನು ಸ್ವತಃ ಬಿಜೆಪಿ ನಾಯಕರೇ ಹೇಳುತ್ತಾರೆ.
ಇದು ತಮ್ಮದೇ ಸಿಎಂ ಯಡಿಯೂರಪ್ಪ ಅವರನ್ನು ಜನರ ಕಣ್ಣಲ್ಲಿ ಕೆಟ್ಟದಾಗಿ ಚಿತ್ರಿಸುವ ಮೂಲಕ ಅವರನ್ನು ಕುರ್ಚಿಯಿಂದ ಇಳಿಸಿ ಆರ್ ಎಸ್ ಎಸ್ ಹಿನ್ನೆಲೆಯ ಬಿ ಎಲ್ ಸಂತೋಷ್ ಅವರನ್ನು ಅಧಿಕಾರಕ್ಕೆ ತರುವ ಷಢ್ಯಂತ್ರದ ಭಾಗವೇ? ಅಥವಾ ದಕ್ಷಿಣ ರಾಜ್ಯಗಳ ವಿಷಯದಲ್ಲಿ ಮೋದಿ ಮತ್ತು ಶಾ ಜೋಡಿಗೆ ಹಿಂದಿನಿಂದಲೂ ಇರುವ ಅಸಡ್ಡೆ, ತಾರತಮ್ಯದ ಮುಂದುವರಿದ ಭಾಗವೇ? ಅಥವಾ ಕನಿಷ್ಠ ವಿಪತ್ತು ಪರಿಹಾರಕ್ಕೂ ಹಣ ನೀಡಲಾಗದ ಮಟ್ಟಿಗೆ ಕೇಂದ್ರದ ಖಜಾನೆ ಖಾಲಿಯಾಗಿದೆಯೇ? ಎಂಬ ಪ್ರಶ್ನೆಗಳು ಕೂಡ ಈಗ ಸ್ವತಃ ಬಿಜೆಪಿ ಪಡಸಾಲೆಯಲ್ಲೇ ಕೇಳಿಬರತೊಡಗಿವೆ. ಎರಡು ತಿಂಗಳ ಈಚೆಯ ಬೆಳವಣಿಗೆಗಳನ್ನು ಗಮನಿಸಿದರೆ; ಈ ಎಲ್ಲಾ ಪ್ರಶ್ನೆಗಳನ್ನೂ ಸಮರ್ಥಿಸುವ ಅಂಶಗಳು ಕಣ್ಣಿಗೆ ರಾಚದೇ ಇರವು. ಹಾಗಾಗಿ ಈ ಪ್ರಶ್ನೆಗಳು ಕೇವಲ ಊಹೆ ಎಂದು ತಳ್ಳಿಹಾಕಲಾಗದವು ಎಂಬುದು ಸ್ವತಃ ಬಿಜೆಪಿ ನಾಯಕರಿಗೂ ಗೊತ್ತು.
ಇಂತಹ ಪರಿಸ್ಥಿತಿಯಲ್ಲಿ ಯಾವ ಮುಖ ಹೊತ್ತುಕೊಂಡು ಜನರ ಮುಂದೆ ಹೋಗುವುದು ಎಂಬ ಭೀತಿ ಬಿಜೆಪಿ ಸಚಿವರು ಮತ್ತು ಶಾಸಕರ ಮುಂದಿದೆ. ಪ್ರವಾಹ ಪರಿಸ್ಥಿತಿ ಆರಂಭದ ಹೊತ್ತಲ್ಲಿ ಕೇವಲ 140 ಕೋಟಿ ರೂ. ಪರಿಹಾರ ನೀಡಿದ್ದನ್ನು ಕೇಂದ್ರ ಸರ್ಕಾರದಿಂದ ಈವರೆಗೆ ನಯಾಪೈಸೆ ಪ್ರವಾಹ ಪರಿಹಾರ ಬಿಡುಗಡೆಯಾಗಿಲ್ಲ. ಈ ನಡುವೆ ರಾಜ್ಯ ಸರ್ಕಾರದ ಬೊಕ್ಕಸವೂ ಖಾಲಿಯಾಗಿದ್ದು, ಈಗಾಗಲೇ ಸಂತ್ರಸ್ತರಿಗೆ ತಾತ್ಕಾಲಿಕ ಪರಿಹಾರವಾಗಿ ಘೋಷಿಸಿರುವ ತಲಾ ಹತ್ತು ಸಾವಿರ ರೂ. ಪರಿಹಾರ ನೀಡಲೂ ಅನುದಾನದ ಕೊರತೆ ಇದೆ ಎನ್ನಲಾಗುತ್ತಿದೆ. ಆ ಹಿನ್ನೆಲೆಯಲ್ಲಿ ಸಚಿವ ಕೆ ಎಸ್ ಈಶ್ವರಪ್ಪ ಅವರು ಪ್ರವಾಹ ಸಮೀಕ್ಷೆ ಪ್ರವಾಸದ ವೇಳೆ, ನಿಮಗೆ ಈಗಾಗಲೇ ಹತ್ತು ಸಾವಿರ ಕೊಟ್ಟಿರುವುದೇ ಹೆಚ್ಚಾಯಿತು ಎಂದು ಸಂತ್ರಸ್ತರ ಮೇಲೆ ಹರಿಹಾಯ್ದಿದ್ದರು ಎನ್ನಲಾಗುತ್ತಿದೆ.
ಜನ ಆಸ್ತಿ, ಮನೆ, ಬೆಳೆ, ಭವಿಷ್ಯ ಕಳೆದುಕೊಂಡು ಅಕ್ಷರಶಃ ಬೀದಿಗಳಲ್ಲಿ ಮಲಗೇಳುತ್ತಿದ್ದರೂ ಅವರಿಗೆ ಕನಿಷ್ಠ ಸೂರು, ದೈನಂದಿನ ಅಗತ್ಯಗಳನ್ನು ಕೂಡ ಪೂರೈಸಲಾಗದ ದೈನೇಸಿ ಸ್ಥಿತಿಯಲ್ಲಿ ಸರ್ಕಾರವಿದೆ. ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ತಮ್ಮನ್ನು ಹೀನಾಯವಾಗಿ ನಡೆಸಿಕೊಳ್ಳುತ್ತಿರುವ ಕೇಂದ್ರದ ನಾಯಕರ ವಿರುದ್ಧ ಕುದಿಯುತ್ತಿದ್ದಾರೆ. ಆದರೆ, ಕೇವಲ ಅಧಿಕಾರದ ಮೋಹದಿಂದಾಗಿ ಎಲ್ಲ ಅವಮಾನ, ಅಪಮಾನಗಳನ್ನು ಸಹಿಸಿಕೊಂಡಿದ್ದಾರೆ. ಅಲ್ಲದೆ, ತಮ್ಮ ವಿರುದ್ಧದ ಹಲವು ಪ್ರಕರಣಗಳ ಭಯ ಕೂಡ ಅವರಿಗಿದೆ. ಹೈಕಮಾಂಡ್ ವಿರುದ್ಧ ಗಟ್ಟಿ ದನಿ ಎತ್ತಿದರೆ, ಸಾಲು ಸಾಲು ಕೇಸುಗಳನ್ನು ಎತ್ತಿಕಟ್ಟಿ ತಮ್ಮನ್ನು ರಾಜಕೀಯವಾಗಿ ಮುಗಿಸಬಹುದು ಎಂಬ ಭೀತಿ ಸ್ವತಃ ಸಿಎಂಗೇ ಇದೆ ಎನ್ನಲಾಗುತ್ತಿದೆ.
ಈ ನಡುವೆ, ಪ್ರತಿಪಕ್ಷಗಳು ಕೂಡ ಜನರ ಪರ ಗಟ್ಟಿ ದನಿ ಎತ್ತದ ಸ್ಥಿತಿ ನಿರ್ಮಾಣವಾಗಿದೆ. ಪ್ರಮುಖ ಪ್ರತಿಪಕ್ಷ ನಾಯಕರ ವಿರುದ್ಧ ಇಡಿ, ಐಟಿ ಮತ್ತು ಸಿಬಿಐಗಳನ್ನು ಬಳಸಿಕೊಂಡು ಒಂದಾದ ಮೇಲೆ ಒಂದು ಕೇಸು ಜಡಿದು ಜೈಲಿಗೆ ಅಟ್ಟುತ್ತಿರುವುದರಿಂದ ಬಹುತೇಕ ಪ್ರತಿಪಕ್ಷ ನಾಯಕರು ಬಿಜೆಪಿ ಮತ್ತು ಅದರ ಹೈಕಮಾಂಡ್ ವಿರುದ್ಧ ಬಾಯಿಬಿಡಲು ನಡುಗುತ್ತಿದ್ದಾರೆ. ಒಂದೂವರೆ ತಿಂಗಳಿಂದ ಸಂತ್ರಸ್ತರು ಬೀದಿ ಮೇಲಿದ್ದರೂ, ಅವರತ್ತ ಕಣ್ಣೆತ್ತಿಯೂ ನೋಡದ ಬಿಜೆಪಿ ಸರ್ಕಾರದ ವಿರುದ್ದ ಕಾಂಗ್ರೆಸ್ ಆಗಲೀ, ಜೆಡಿಎಸ್ ಆಗಲೀ ದೊಡ್ಡ ಮಟ್ಟದ ಹೋರಾಟಕ್ಕೂ ಮನಸ್ಸು ಮಾಡಿಲ್ಲ. ಇಡೀ ರಾಜಕೀಯ ವ್ಯವಸ್ಥೆಯಲ್ಲಿ ಭೀತಿ ಮತ್ತು ಆತಂಕ ಮನೆಮಾಡಿದೆ.
ಹಾಗಾಗಿ, ಸದ್ಯಕ್ಕಂತೂ ಸಂತ್ರಸ್ತರ ಗೋಳಿಗೆ ಕೊನೆ ಎಂಬುದು ಮರೀಚಿಕೆಯಾಗಿದೆ. ದೇಶಕ್ಕಾಗಿ ಮೋದಿ, ಮೋದಿಗಾಗಿ ನಾವು ಎಂದು ಅಚ್ಛೇದಿನದ ಕನಸಿನ ಬೆನ್ನು ಹತ್ತಿ ಮತಹಾಕಿ ಭಾರೀ ಸ್ಥಾನಗಳೊಂದಿಗೆ ಬಿಜೆಪಿಗೆ ಬಲತುಂಬಿದ ಕರ್ನಾಟಕದ ಜನತೆ ಈಗ ಕಟುವಾಸ್ತವದ ದಿನಗಳನ್ನು ಕಾಣುತ್ತಿದ್ದಾರೆ. ಅಚ್ಚೇದಿನ ಈಗ ಕನಸಲ್ಲೂ ಕಾಣಲಾರದ ದೈನೇಸಿ ಸ್ಥಿತಿ ರಾಜ್ಯದ ಪ್ರವಾಹ ಸಂತ್ರಸ್ತರದ್ದು!