ರಾಜ್ಯದ ಭೀಕರ ಪ್ರವಾಹ ಪರಿಸ್ಥಿತಿಗೆ ಕಿಂಚಿತ್ತೂ ಸ್ಪಂದಿಸದ ತಮ್ಮದೇ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನಗೊಂಡಿರುವ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು, ಇದೀಗ ಆ ಅಸಮಾಧಾನವನ್ನು ಬಹಿರಂಗವಾಗಿ ತೋರಿಸಲೂ ಆಗದ, ಕೇಂದ್ರದ ನಾಯಕರ ನಿರ್ಲಕ್ಷ್ಯವನ್ನು ಸಹಿಸಿಕೊಂಡಿರಲೂ ಆಗದ ಸಂದಿಗ್ಧತೆಯಲ್ಲಿದ್ದಾರೆ.
ನೂರು ವರ್ಷಗಳಲ್ಲೇ ಕಂಡಿರದ ಶತಮಾನದ ಮಹಾ ಪ್ರವಾಹಕ್ಕೆ ಸಿಲುಕಿ 18 ಜಿಲ್ಲೆಗಳ 110ಕ್ಕೂ ಹೆಚ್ಚು ತಾಲೂಕುಗಳು ಅಕ್ಷರಶಃ ಕೊಚ್ಚಿಹೋಗಿವೆ. ಕರಾವಳಿ, ಮಲೆನಾಡು ಭಾಗದಲ್ಲಿ ಇಡೀ ಇಡೀ ಗುಡ್ಡಗಳೇ ಕುಸಿದು ಹಳ್ಳಿಹಳ್ಳಿಗಳೇ ಕೊಚ್ಚಿಹೋಗಿದ್ದರೆ, ಉತ್ತರಕರ್ನಾಟಕದ ಒಂದೆರಡು ಜಿಲ್ಲೆಗಳನ್ನು ಹೊರತುಪಡಿಸಿ ಉಳಿದಂತೆ ಎಲ್ಲಾ ಕಡೆ ಊರು-ಮನೆ, ಹೊಲ-ಗದ್ದೆಗಳು ಕೊಚ್ಚಿ ನೆಲಸಮವಾಗಿವೆ. ಮಹಾಪ್ರವಾಹ ಬಂದುಹೋಗಿ ಐವತ್ತು ದಿನಗಳೇ ಉರುಳಿದರೂ ಸಂತ್ರಸ್ತರು ಗಂಜಿಕೇಂದ್ರಗಳಿಂದ ಸ್ವಂತ ನೆಲೆಗೆ ಹೋಗಲಾಗಿಲ್ಲ. ಲಕ್ಷಾಂತರ ಮಂದಿಗೆ ವಾಪಸು ಹೋಗಲು ಮನೆಗಳೇ ಉಳಿದಿಲ್ಲ. ಹಾಕಿದ ಬೆಳೆ ಕೊಚ್ಚಿಹೋಗಿದೆ. ಇರಲು ನೆಲೆ ಇಲ್ಲ, ಬದುಕಲು ಬೆಳೆ ಇಲ್ಲ ಎಂಬ ನಿರ್ಗತಿಕ ಸ್ಥಿತಿ ಸಂತ್ರಸ್ತರದ್ದು.
ಹಿಂದಿನ ಮಾನದಂಡಗಳಂತೆ ಒಂದು ರಾಷ್ಟ್ರೀಯ ವಿಪತ್ತು ಎಂಬ ಘೋಷಣೆಗೆ ಎಲ್ಲಾ ಬಗೆಯಲ್ಲಿಯೂ ಅರ್ಹವಾಗಿದ್ದರೂ, ಮೋದಿಯವರ ನೇತೃತ್ವದ ಬಿಜೆಪಿ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಳಿಕ ರಾಷ್ಟ್ರೀಯ ವಿಪತ್ತು ಘೋಷಣೆ ಮಾನದಂಡಗಳನ್ನು ಅವಾಸ್ತವಿಕವಾಗಿ ಬದಲಾಯಿಸಿದ ಹಿನ್ನೆಲೆಯಲ್ಲಿ ಈ ಮಹಾ ದುರಂತ ಕೂಡ ರಾಷ್ಟ್ರೀಯ ವಿಪತ್ತು ಎಂಬ ಘೋಷಣೆಗೆ ಈಗ ಅರ್ಹವಾಗಿಲ್ಲ. ಜೊತೆಗೆ ಪ್ರವಾಹ ಮತ್ತಿತರ ನೈಸರ್ಗಿಕ ವಿಪತ್ತು ಪರಿಹಾರ ಮಾನದಂಡಗಳನ್ನು ಕೂಡ ಬದಲಾಯಿಸಲಾಗಿದೆ. 2015-16ರಲ್ಲಿ ಈ ಮಾನದಂಡಗಳ ಬದಲಾವಣೆಗೆ ಮುಂದಾದಾಗ ಪ್ರತಿಪಕ್ಷಗಳು ಸೇರಿದಂತೆ ಹಲವು ರಾಜಕೀಯ ಮತ್ತು ರಾಜಕೀಯೇತರ ಸಂಘಟನೆಗಳು ಕೇಂದ್ರ ಸರ್ಕಾರದ ನಡೆಯನ್ನು ವಿರೋಧಿಸಿದ್ದವು. ಆದರೆ, ಎಂದಿನಂತೆ ಮೊಂಡುತನದ ಧೋರಣೆಗೆ ಅಂಟಿಕೊಂಡ ಮೋದಿ ಮತ್ತು ಅಮಿತ್ ಶಾ ಜೋಡಿ ತಮ್ಮ ಮೂಗಿನ ನೇರಕ್ಕೆ ಎಲ್ಲವನ್ನೂ ಅಂದುಕೊಂಡಂತೆ ಮಾಡಿಮುಗಿಸಿದ್ದರು.
ಪರಿಣಾಮ, ಇದೀಗ ಭಾರೀ ಬಹುಮತದೊಂದಿಗೆ ಅತಿ ಹೆಚ್ಚು ಲೋಕಸಭಾ ಮತ್ತು ವಿಧಾನಸಭಾ ಸ್ಥಾನಗಳನ್ನು ಕೊಟ್ಟು ಬಿಜೆಪಿಯನ್ನು ಅಧಿಕಾರಕ್ಕೆ ತಂದ ಕರ್ನಾಟಕದ ಜನಸಾಮಾನ್ಯರು ಅಕ್ಷರಶಃ ಅನಾಥರಾಗಿದ್ದಾರೆ. ಬರೋಬ್ಬರಿ 38 ಸಾವಿರ ಕೋಟಿ ರೂಪಾಯಿ ಅಂದಾಜು ನಷ್ಟವಾಗಿದೆ ಎಂದು ವರದಿ ಸಲ್ಲಿಸಿ, ಪ್ರವಾಹ ಪರಿಹಾರ ಘೋಷಿಸುವಂತೆ ಕಳೆದ ಒಂದೂವರೆ ತಿಂಗಳಿನಿಂದ ಮುಖ್ಯಮಂತ್ರಿಯಾದಿಯಾಗಿ ಎಲ್ಲರೂ ಗೋಗರೆಯುತ್ತಿದ್ದರೂ, ಅಚ್ಛೇದಿನದ ಮಂತ್ರಪಠಿಸುತ್ತಿರುವ ಪ್ರಧಾನಿ ಮೋದಿಯವರಾಗಲೀ, ಒಂದು ರಾಷ್ಟ್ರ, ಒಂದು ಭಾಷೆ, ಒಂದು ಧರ್ಮ, ಒಂದು ಸಂಸ್ಕೃತಿಯ ಜಪ ಮಾಡುತ್ತಿರುವ ಗೃಹ ಸಚಿವ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಾಗಲೀ ತುಟಿಬಿಚ್ಚುತ್ತಿಲ್ಲ.
ಈ ನಡುವೆ, ಪ್ರವಾಹ ಪರಿಹಾರ ಕೋರಿ ನಷ್ಟ ಅಂದಾಜು ವರದಿ ಹಿಡಿದುಕೊಂಡು ತಿಂಗಳಲ್ಲಿ ನಾಲ್ಕು ಬಾರಿ ದೆಹಲಿಯ ಆಡಳಿತದ ಪಡಸಾಲೆಯ ಕಂಬ ಸುತ್ತಿದ ಯಡಿಯೂರಪ್ಪ ಅವರಿಗೆ ವರಿಷ್ಠರು ಭರವಸೆಯ ಮಾತನಾಡುವ ಬದಲು, ಮತ್ತೊಮ್ಮೆ ಪರಿಹಾರ ಬೇಡಿ ದೆಹಲಿಗೆ ಬರಲೇಬೇಡಿ ಎಂದು ಎಚ್ಚರಿಕೆ ಕೊಟ್ಟು ಸಾಗಹಾಕಿದ್ದರು. ಇದೀಗ ಮತ್ತೊಮ್ಮೆ ಗುರುವಾರ ಭೇಟಿಗೆ ಪ್ರಧಾನಿ ಮೋದಿಯವರಿಗೆ ಸಮಯ ಕೋರಿ, ಬುಧವಾರ ಸಂಜೆಯೇ ದೆಹಲಿಗೆ ಹೊರಟುನಿಂತಿದ್ದ ಯಡಿಯೂರಪ್ಪ ಅವರಿಗೆ ಮತ್ತೊಮ್ಮೆ ಮುಖಭಂಗವಾಗಿದೆ. ಕೇವಲ ಹದಿನೈದು ದಿನದಲ್ಲಿ ಎರಡನೇ ಬಾರಿಗೆ ಪ್ರಧಾನಿ ಮೋದಿಯವರು ಸಿಎಂ ಭೇಟಿ ಮಾಡಲು ನಿರಾಕರಿಸಿದ್ದಾರೆ ಮತ್ತು ಪ್ರವಾಸ ಸಂತ್ರಸ್ತರ ಪರಿಹಾರ ವಿಷಯದ ಬಗ್ಗೆ ಮಾತನಾಡಲು ತಮಗೆ ಸಮಯವಿಲ್ಲ ಎಂದು ಪ್ರಧಾನಿ ಮೋದಿ ಖಡಾಖಂಡಿತವಾಗಿ ಬಿಎಸ್ ವೈ ಪ್ರಸ್ತಾಪವನ್ನು ತಳ್ಳಿಹಾಕಿದ್ದಾರೆ.
ಒಂದು ಕಡೆ ಸುಮಾರು ಒಂದು ಲಕ್ಷ ಕೋಟಿಗೂ ಹೆಚ್ಚಿನ ನಷ್ಟ ಸಂಭವಿಸಿರುವ ಭೀಕರ ಪ್ರವಾಹ ಪರಿಸ್ಥಿತಿ ನಿಭಾಯಿಸಲು ರಾಜ್ಯದ ಬೊಕ್ಕಸದಲ್ಲಿ ಹಣವಿಲ್ಲ, ಮತ್ತೊಂದು ಕಡೆ ನೆರವಿನ ಹಸ್ತ ಚಾಚಬೇಕಾಗಿದ್ದ ತಮ್ಮದೇ ಪಕ್ಷದ ಕೇಂದ್ರ ಸರ್ಕಾರ ಬಿಡಿಗಾಸಿನ ಪರಿಹಾರ ಹಣ ನೀಡಲು ಸುತಾರಾಂ ಒಪ್ಪುತ್ತಿಲ್ಲ. ಹಣ ನೀಡುವುದಿರಲಿ, ಕನಿಷ್ಠ ರಾಜ್ಯದ ಪ್ರವಾಹ ಪರಿಸ್ಥಿತಿಯ ವಾಸ್ತವಾಂಶಗಳ ಬಗ್ಗೆ ಒಬ್ಬ ಮುಖ್ಯಮಂತ್ರಿಯಾಗಿ ತಮ್ಮ ಜೊತೆ ಮಾತನಾಡುವ ಸೌಜನ್ಯವನ್ನೂ ತೋರುತ್ತಿಲ್ಲ. ಒಂದು ಕಡೆ ಪಕ್ಷವನ್ನು ರಾಜ್ಯದಲ್ಲಿ ಕಟ್ಟಿಬೆಳೆಸಿದ ಹಿರಿಯ ನಾಯಕರಾಗಿ ತಮ್ಮನ್ನು ಹೈಕಮಾಂಡ್ ನಡೆಸಿಕೊಳ್ಳುತ್ತಿರುವ ಹೀನಾಯ ರೀತಿ, ಮತ್ತೊಂದು ಕಡೆ ಇಡೀ ರಾಜ್ಯದಲ್ಲಿ ಅಭಿವೃದ್ಧಿಯ ಐರಾವತವನ್ನೇ ಇಳಿಸುತ್ತೇನೆ ಎಂದು ಹೇಳಿಕೊಂಡು ಹಿಂದಿನ ಮೈತ್ರಿ ಸರ್ಕಾರವನ್ನು ಆಪರೇಷನ್ ಕಮಲದ ಮೂಲಕ ಕೆಡವಿ, ಬಿಜೆಪಿ ಸರ್ಕಾರ ತಂದ ತಮಗೆ, ಕನಿಷ್ಠ ಸಂತ್ರಸ್ತರಿಗೆ ಬಿಡಿಗಾಸಿನ ನೆರವು ನೀಡಲಾಗದ ದೈನೇಸಿ ಸ್ಥಿತಿ ನಿರ್ಮಾಣ ಮಾಡಿರುವುದರಿಂದ ಯಡಿಯೂರಪ್ಪ ಈಗ ಹೇಳಲೂ ಆಗದ, ಅನುಭವಿಸಲೂ ಆಗದ ಇಕ್ಕಟ್ಟಿಗೆ ಸಿಲುಕಿದ್ದಾರೆ.
ಈ ನಡುವೆ, ಸಂತ್ರಸ್ತ ವಿಷಯದಲ್ಲಿ ತಮ್ಮನ್ನು ಜನರ ಕಣ್ಣಲ್ಲಿ ಸಣ್ಣವನನ್ನಾಗಿ ಮಾಡಿರುವುದು ಸಾಲದು ಎಂಬಂತೆ, ಹಿಂದಿ ಭಾಷೆ ಹೇರಿಕೆ ವಿಷಯದಲ್ಲಿಯೂ ಮೇಲಿಂದ ಮೇಲೆ ಕನ್ನಡಿಗರನ್ನು ಕೆಣಕುವ ಹೇಳಿಕೆಗಳನ್ನು ನೀಡುವ ಮೂಲಕ ಸ್ವತಃ ಪಕ್ಷದ ಹೈಕಮಾಂಡ್ ಅಮಿತ್ ಶಾ ಯಡಿಯೂರಪ್ಪ ಅವರಿಗೆ ಸಾರ್ವಜನಿಕವಾಗಿ ಮುಜಗರ ಒಡ್ಡುತ್ತಿದ್ದಾರೆ. ಜೊತೆಗೆ ತಾವೇ ರಾಜೀನಾಮೆ ಕೊಡಿಸಿ, ಆಪರೇಷನ್ ಮಾಡಿದ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರ ಅಮಾನತು ಪ್ರಕರಣದ ವಿಷಯದಲ್ಲಿಯೂ ಹೈಕಮಾಂಡ್ ತಮ್ಮ ನೆರವಿಗೆ ಬರುತ್ತಿಲ್ಲ. ಆ ಶಾಸಕರ ಕಣ್ಣಲ್ಲೂ ತಮ್ಮನ್ನು ವಿಲನ್ ಮಾಡಲಾಗುತ್ತಿದೆ ಎಂಬ ಅಸಮಾಧಾನ ಕೂಡ ಬಿಎಸ್ ವೈಗೆ ಇದೆ ಎನ್ನಲಾಗುತ್ತಿದೆ.
ಸಂತ್ರಸ್ತರ ಪರಿಹಾರ ವಿಶೇಷ ಪ್ಯಾಕೇಜ್ ತರುವುದಾಗಿ ಒಂದೂವರೆ ತಿಂಗಳಿನಿಂದ ರಾಜ್ಯದ ಜನತೆಗೆ ಭರವಸೆ ನೀಡುತ್ತಲೇ ಇದ್ದ ಯಡಿಯೂರಪ್ಪ ಅವರಿಗೆ, ಪ್ರಧಾನಿ ಮೋದಿಯವರು ಎರಡೆರಡು ಸಲ ತಮ್ಮ ಭೇಟಿಗೆ ನಿರಾಕರಿಸಿದ ಬಳಿಕ ಈಗ ಅಂತಹ ಯಾವುದೇ ಭರವಸೆ ಉಳಿದಿಲ್ಲ. ಹೈಕಮಾಂಡ್ ಮತ್ತು ಕೇಂದ್ರ ಸರ್ಕಾರ ತಮ್ಮ ನೆರವಿಗೆ ಬರಲಿದೆ ಎಂಬ ಬಗ್ಗೆ ನಂಬಿಕೆ ಇಲ್ಲ. ತಾವು ಬರೋಬ್ಬರಿ 38 ಸಾವಿರ ಕೋಟಿ ಪರಿಹಾರ ಘೋಷಣೆಗೆ ಕೋರಿದ್ದರೂ ಎನ್ ಡಿಆರ್ ಎಫ್ ನಿಯಮಾವಳಿ ಪ್ರಕಾರ ಕೇವಲ 3800 ಕೋಟಿ ಪರಿಹಾರ ಸಿಗುವುದು ಕೂಡ ಅನುಮಾನಾಸ್ಪದ. ಅದನ್ನು ಘೋಷಿಸಲು ಕೂಡ ಮೋದಿ ಮತ್ತು ಶಾ ಜೋಡಿ ಸತಾಯಿಸುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಯಾವ ಮುಖ ಹೊತ್ತುಕೊಂಡು ಉತ್ತರಕರ್ನಾಟಕದ ಸಂತ್ರಸ್ತರನ್ನು ಎದುರುಗೊಳ್ಳುವುದು ಎಂಬ ಒಂದೇ ಕಾರಣದಿಂದ, ರೂಢಿಯಂತೆ ಬೆಳಗಾವಿಯಲ್ಲಿ ನಿಗಧಿಯಾಗಿದ್ದ ವಿಧಾನಮಂಡಲದ ಚಳಿಗಾಲದ ಅಧಿವೇಶನವನ್ನು ಕೂಡ ಬೆಂಗಳೂರಿಗೆ ಬದಲಾಯಿಸಿದ್ದಾರೆ. ಆ ಮೂಲಕ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ತೀವ್ರ ನಿರ್ಲಕ್ಷ್ಯ ಮತ್ತು ಹೊಣೆಗೇಡಿತನದ ವಿರುದ್ಧ ಆಕ್ರೋಶಗೊಂಡಿರುವ ಉತ್ತರಕರ್ನಾಟಕದ ಸಂತ್ರಸ್ತರ ಪ್ರತಿಭಟನೆಯಿಂದ ಪಾರಾಗುವ ಪ್ರಯತ್ನ ಮಾಡಿದ್ದಾರೆ.
ಆದರೆ, ವಾಸ್ತವವಾಗಿ ಉತ್ತರಕರ್ನಾಟಕದ ಸಮಸ್ಯೆಗಳಿಗೆ ರಾಜ್ಯದ ಆಡಳಿತ ಸ್ಪಂದಿಸಬೇಕು ಮತ್ತು ಕನಿಷ್ಟ ವರ್ಷಕ್ಕೆ ಒಂದು ವಿಧಾನಮಂಡಲಗಳ ಅಧಿವೇಶನವನ್ನು ಬೆಳಗಾವಿಯಲ್ಲಿ ನಡೆಸುವ ಮೂಲಕ ಆ ಭಾಗದ ಸಮಸ್ಯೆಗಳನ್ನು ಅಲ್ಲಿಯೇ ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕು ಎಂಬ ಉದ್ದೇಶದಿಂದಲೇ ಸಾವಿರಾರು ಕೋಟಿ ರೂ. ಸಾರ್ವಜನಿಕ ತೆರಿಗೆ ಹಣದಲ್ಲಿ ಬೆಳಗಾವಿ ಸುವರ್ಣ ಸೌಧ ನಿರ್ಮಾಣ ಮಾಡಲಾಗಿದೆ. ಅಲ್ಲದೆ ಆ ಭಾಗದ ಜನ ಶತಮಾನದ ಮಹಾ ಪ್ರವಾಹ ಪರಿಸ್ಥಿತಿಯಲ್ಲಿ ಬದುಕನ್ನೇ ಕಳೆದುಕೊಂಡು ಬೀದಿಪಾಲಾಗಿರುವಾಗ ಅವರ ಸಮಸ್ಯೆ ಚರ್ಚೆಗೆ ಅಲ್ಲಿಯೇ ಅಧಿವೇಶನ ನಡೆಸುವ ಬದಲು ಬೆಂಗಳೂರಿಗೆ ಸ್ಥಳಾಂತರಿಸುವ ಸಿಎಂ ನಿರ್ಧಾರ ಈಗ ಆ ಭಾಗದ ಜನರ ಆಕ್ರೋಶಕ್ಕೆ ತುಪ್ಪ ಸುರಿದಂತಾಗಿದೆ. ಯಡಿಯೂರಪ್ಪ ಅವರೇನೋ ಬೀಸೋ ದೊಣ್ಣೆಯಿಂದ ಪಾರಾಗುವ ಪಲಾಯನವಾದದ ಹಾದಿ ತುಳಿದಿದ್ದಾರೆ. ಆದರೆ, ಜನ ಸಾವುಬದುಕಿನ ನಡುವೆ ಹೋರಾಡುತ್ತಿರುವಾಗ ಕೂಡ ಅವರ ಆರ್ತನಾದಕ್ಕೆ ಕಿವಿಯಾಗದೇ ಇದ್ದರೆ ಬೆಳಗಾವಿಯಲ್ಲಿ ಸುವರ್ಣಸೌಧವಿದ್ದು ಪ್ರಯೋಜನವೇನು? ಎಂಬ ಪ್ರಶ್ನೆ ಬೆಳಗಾವಿ ಸೇರಿದಂತೆ ಉತ್ತರಕರ್ನಾಟಕದ ಸಂತ್ರಸ್ತರದ್ದು.
ಒಟ್ಟಾರೆ, ಒಂದು ಕಡೆ ತಮಗೆ ಕವಡೆ ಕಿಮ್ಮತ್ತು ನೀಡದೇ ಇರುವ ಹೈಕಮಾಂಡ್ ಮತ್ತು ಪ್ರಧಾನಿ ಮೋದಿ, ಮತ್ತೊಂದು ಕಡೆ ಸ್ವರ್ಗವನ್ನೇ ಧರೆಗಿಳಿಸುವ ಭರವಸೆ ನೀಡಿ ವಾಮಮಾರ್ಗದ ಮೂಲಕ ಅಧಿಕಾರ ಹಿಡಿದು ಈಗ ತಾವು ಆತ್ಮಹತ್ಯೆಯ ದಾರಿ ಹಿಡಿದಿರುವಾಗಲೂ ಗೋಳು ಕೇಳಲಾರದ, ದುಗ್ಗಾಣಿ ನೆರವು ನೀಡಲಾಗದ ತಮ್ಮ ವೈಫಲ್ಯದ ಬಗ್ಗೆ ಆಕ್ರೋಶಗೊಂಡಿರುವ ಸಂತ್ರಸ್ತರು. ಹೀಗೆ ಅತ್ತ ಧರಿ, ಇತ್ತ ಪುಲಿ ಎಂಬ ಸ್ಥಿತಿಯಲ್ಲಿ ಸಿಲುಕಿರುವ ಸಿಎಂ ಯಡಿಯೂರಪ್ಪ, ಪದೇಪದೆ ಮುಖಭಂಗ, ಮುಜುಗರ, ಅವಮಾನದಿಂದಾಗಿ ತೀವ್ರ ಒತ್ತಡಕ್ಕೆ ಸಿಲುಕಿದ್ದಾರೆ.
ಆ ಹಿನ್ನೆಲೆಯಲ್ಲಿ ರಾಜಕೀಯ ಜೀವನದುದ್ದಕ್ಕೂ, ಒತ್ತಡ, ಅವಮಾನಗಳ ಸಂದರ್ಭದಲ್ಲಿ ಸಿಡಿದೇಳುವ ಸ್ವಭಾವಕ್ಕೆ ಹೆಸರಾಗಿರುವ ಬಿಎಸ್ ವೈ ಅವರ ಮುಂದಿನ ನಡೆ ಕುತೂಹಲ ಮೂಡಿಸಿದೆ! ಈಗಲೂ ಸಿಡಿದೇಳುವ ಛಾತಿ ಜನನಾಯಕನಿಗೆ ಉಳಿದಿದೆಯೇ? ಅಥವಾ ಪ್ರತಿಪಕ್ಷಗಳ ನಾಯಕರನ್ನು ಬಗ್ಗುಬಡಿಯುತ್ತಿರುವ ಹೈಕಮಾಂಡಿನ ಇಡಿ, ಐಟಿ, ಸಿಬಿಐ ಮತ್ತು ಹಳೆಯ ಪ್ರಕರಣಗಳ ಅಸ್ತ್ರಗಳು ಇವರನ್ನೂ ಬೆಚ್ಚಿಬೀಳಿಸಿವೆಯೇ? ಎಂಬುದಕ್ಕೆ ಕೆಲವೇ ದಿನಗಳಲ್ಲಿ ಉತ್ತರಸಿಗಲಿದೆ!