ಒಂದು ಕಡೆ, ರಾಜ್ಯದ ಜನ ಭೀಕರ ಪ್ರವಾಹ, ಆಸ್ತಿಪಾಸ್ತಿ ನಷ್ಟ, ಕೈತಪ್ಪಿದ ಬೆಳೆ ಮುಂತಾದ ಸಾಲು ಸಾಲು ಸಂಕಷ್ಟಗಳ ನಡುವೆ ನಾಳೆಯ ಬದುಕಿನ ಚಿಂತೆಯಲ್ಲಿ ನಿಡುಸುಯ್ಯುತ್ತಿದ್ದರೆ, ಮತ್ತೊಂದು ಕಡೆ ಜನರ ಕಷ್ಟ ಆಲಿಸಬೇಕಾದ, ಅವರ ನೆರವಿಗೆ ಧಾವಿಸಬೇಕಾಗಿದ್ದ ಸರ್ಕಾರ ಶೈತ್ಯಾಗಾರದಲ್ಲಿ ಶಿಥಿಲಗೊಂಡಿರುವ ಸ್ಥಿತಿಯಲ್ಲಿದೆ. ಬರೋಬ್ಬರಿ ಒಂದೂವರೆ ತಿಂಗಳು ಗತಿಸಿದರೂ ಬೀದಿ ಪಾಲಾಗಿರುವ ಸಂತ್ರಸ್ತರಿಗೆ ಪರಿಹಾರ ವಿತರಣೆಯಾಗಲೀ, ಪುನರ್ವಸತಿಯಾಗಲೀ ಸಮರ್ಪಕವಾಗಿ ಜಾರಿಯಾಗಿಲ್ಲ. ಪರಿಹಾರದ ಅಭಯವಿರಲಿ, ಕನಿಷ್ಠ ಆತಂಕಿತ ಬಡವರಿಗೆ ಭರವಸೆಯ ಮಾತುಗಳನ್ನು ಆಡುವವರೂ ಇಲ್ಲದಾಗಿದೆ.
ನೂರು ದಿನದಲ್ಲಿ ಅಭಿವೃದ್ಧಿಯ ಪರ್ವವನ್ನೇ ಧರೆಗಿಳಿಸುವ ಭರವಸೆ ಮೇಲೆ ಅಧಿಕಾರಕ್ಕೆ ಬಂದ ಆಡಳಿತ ಪಕ್ಷ ಬಿಜೆಪಿಯ ಸ್ಥಿತಿ ಇದಾದರೆ, ಇನ್ನು ಕನಿಷ್ಠ ಜನರ ಪರ ಸರ್ಕಾರವನ್ನು ಬಡಿದೆಚ್ಚರಿಸಬೇಕಿದ್ದ ಪ್ರತಿಪಕ್ಷಗಳು ಕೂಡ ಜನರ ನಡುವೆ ಗೈರಾಗಿವೆ. ಜನರ ಸಂಕಷ್ಟವನ್ನೇ ಮುಂದಿಟ್ಟುಕೊಂಡು ಆಡಳಿತ ಪಕ್ಷ, ಮುಖ್ಯಮಂತ್ರಿಯನ್ನು ತರಾಟೆಗೆ ತೆಗೆದುಕೊಳ್ಳಬೇಕಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳೆರಡೂ, ಆ ಹೊಣೆಗಾರಿಕೆ ಮರೆತು ತಮ್ಮದೇ ಕುರ್ಚಿ ಕಾದಾಟದಲ್ಲಿ ಮೈಮರೆತಿವೆ ಎಂಬುದು ಕಟುವಾಸ್ತವ.
ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್ ನಲ್ಲಿ ಪಕ್ಷದ ಮೇಲಿನ ಹಿಡಿತಕ್ಕಾಗಿ ಮೂಲ ಕಾಂಗ್ರೆಸ್ಸಿಗರು ಮತ್ತು ಹೊಸಬರ ನಡುವಿನ ಗುಟ್ಟಿನ ಗುದಮುರಗಿ ಇದೀಗ ಒಂದು ರೀತಿಯ ಕ್ಲೈಮ್ಯಾಕ್ಸ್ ಹಂತ ತಲುಪಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅನಿರೀಕ್ಷಿತ ಸೋಲು ಕಂಡ ಬಳಿಕ, ಪ್ರತಿಷ್ಠೆ ಮರೆತು ಪಕ್ಷ ಕಟ್ಟಿ ಮತ್ತೆ ಸಂಘಟನೆಯನ್ನು ಸದೃಢಗೊಳಿಸುವ ಮತ್ತು ಅದೇ ಹೊತ್ತಿಗೆ ಒಂದು ರಚನಾತ್ಮಕ ಪ್ರಬಲ ಪ್ರತಿಪಕ್ಷವಾಗಿ ಕೆಲಸ ಮಾಡಲು ಸಜ್ಜಾಗುವ ಬದಲು, ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಒಂದಂಶದ ನೆಲೆಯಲ್ಲಿ ಜೆಡಿಎಸ್ ಜೊತೆ ಸೇರಿ ಮೈತ್ರಿ ಸರ್ಕಾರ ರಚಿಸಿತು. ಆದರೆ, ಆ ಸರ್ಕಾರವನ್ನು ಕೂಡ ಸುಸೂತ್ರವಾಗಿ ನಡೆಸದೆ, ತನ್ನದೇ ಶಾಸಕರನ್ನು ಹಿಡಿದಿಟ್ಟುಕೊಳ್ಳುವ ಛಾತಿಯನ್ನೂ ತೋರದೆ, ಕೇವಲ ಒಂದೇ ವರ್ಷದಲ್ಲೇ ಸರ್ಕಾರವನ್ನು ಮಕಾಡೆ ಮಲಗಿಸಿ, ರಾಜ್ಯದ ಜನರ ಮುಂದೆ ನಗೆಪಾಟಲಿಗೀಡಾಯಿತು. ಕನಿಷ್ಠ ಸರ್ಕಾರ ಪತನವಾದ ಬಳಿಕವಾದರೂ, ಬುದ್ಧಿ ಕಲಿತು ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಪ್ರಬಲ ಪ್ರತಿಪಕ್ಷವಾಗಿ ಸಂಕಷ್ಟದ ಹೊತ್ತಲ್ಲಿ ಜನರ ನಡುವೆ ಸಕ್ರಿಯವಾಗುವ ಪ್ರಯತ್ನವನ್ನು ಕೂಡ ಕಾಂಗ್ರೆಸ್ ಮಾಡಲಿಲ್ಲ ಎಂಬ ಅಸಮಾಧಾನದ ಮಾತುಗಳು ಜನರ ನಡುವೆಯಷ್ಟೇ ಅಲ್ಲ, ಸ್ವತಃ ಕಾಂಗ್ರೆಸ್ ಪಡಸಾಲೆಯಲ್ಲೇ ಕೇಳಿಬರುತ್ತಿವೆ.
ನೂರಕ್ಕೂ ಹೆಚ್ಚು ಜನರನ್ನು ಬಲಿತೆಗೆದುಕೊಂಡ, ಸುಮಾರು ಒಂದು ಲಕ್ಷ ಕೋಟಿ ರೂ.ಗೂ ಅಧಿಕ ನಷ್ಟ ಉಂಟುಮಾಡಿದ, ಅರ್ಧ ರಾಜ್ಯವನ್ನೇ ಕೊಚ್ಚಿ ಒಯ್ದ ಭೀಕರ ಪ್ರವಾಹವನ್ನು ಬಿಜೆಪಿಯ ಕೇಂದ್ರ ಸರ್ಕಾರ ರಾಷ್ಟ್ರೀಯ ವಿಪತ್ತು ಎಂದು ಘೋಷಿಸಲಿಲ್ಲ. ಪ್ರಧಾನಿ ಮೋದಿ ಕನಿಷ್ಠ ಸಮೀಕ್ಷೆ ನಡೆಸಲೂ ಬರಲಿಲ್ಲ. ಪ್ರವಾಹದ ನಡುವೆಯೇ ಬೆಂಗಳೂರಿಗೆ ಬಂದುಹೋದರೂ ರಾಜ್ಯದ ಸಂಕಷ್ಟದ ಬಗ್ಗೆ ಅರೆಗಳಿಗೆ ಮಾತನಾಡುವ ಸೌಜನ್ಯ ತೋರಲಿಲ್ಲ. ರಾಜ್ಯ ಸರ್ಕಾರ ಕೇಳಿದ ಪ್ರವಾಹ ಪರಿಹಾರದಲ್ಲಿ ಬಿಡಿಗಾಸಿನ ಹಣವನ್ನೂ ಬಿಡುಗಡೆ ಮಾಡಲಿಲ್ಲ. ಇತ್ತ ರಾಜ್ಯದಲ್ಲೂ ಅಧಿಕಾರದಲ್ಲಿರುವ ಬಿಜೆಪಿ, ಸಚಿವ ಸಂಪುಟ ರಚನೆ, ಉಸ್ತುವಾರಿ ಸಚಿವರ ನೇಮಕದಂತಹ ಸರ್ಕಸ್ಸಿನಲ್ಲೇ ತಿಂಗಳುಗಟ್ಟಲೆ ಸಮಯ ಕಳೆಯುತ್ತಾ ಪರಿಹಾರ ಮತ್ತು ಪುನರ್ವಸತಿ ಕಾರ್ಯಗಳನ್ನು ಸಂಪೂರ್ಣ ನಿರ್ಲಕ್ಷಿಸಿ ಕೈಚೆಲ್ಲಿ ಕೂತಿತು. ಇಷ್ಟಾದರೂ, ರಾಜ್ಯ ಕಾಂಗ್ರೆಸ್ ನಾಯಕರು, ಮೈಕೊಡವಿ ಎದ್ದು ಸರ್ಕಾರದ ಜುಟ್ಟು ಹಿಡಿದು ಜನರ ಬಳಿಗೆ ಎಳೆದುತರುವ ಕೆಲಸ ಮಾಡುವ ಬದಲು, ಪ್ರತಿಪಕ್ಷ ನಾಯಕನ ಕುರ್ಚಿಗಾಗಿ ಕಾದಾಟ ನಡೆಸತೊಡಗಿದ್ದಾರೆ.
ಪ್ರಮುಖವಾಗಿ ಮಾಜಿ ಮುಖ್ಯಮಂತ್ರಿ ಹಾಗೂ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಪರ ಮತ್ತು ವಿರೋಧಿ ಬಣಗಳ ನಡುವೆ ಕಾಂಗ್ರೆಸ್ ಆಂತರಿಕ ಸಂಘರ್ಷ ತಲೆದೋರಿದ್ದು, ಮುಖ್ಯವಾಗಿ ಇದೀಗ ಪ್ರತಿಪಕ್ಷ ನಾಯಕನ ಸ್ಥಾನಕ್ಕಾಗಿ ಸಿದ್ದರಾಮಯ್ಯ ಪ್ರಯತ್ನ ನಡೆಸಿರುವುದು ಅವರ ವಿರೋಧಿ ಬಣದ ನಾಯಕರನ್ನು ಕೆರಳಿಸಿದೆ. ಪಕ್ಷಕ್ಕೆ ಬಂದಾಗಿನಿಂದಲೂ ಒಂದು ದಶಕದಿಂದಲೂ ಪ್ರತಿಪಕ್ಷ ನಾಯಕ, ಶಾಸಕಾಂಗ ಪಕ್ಷದ ನಾಯಕ, ಸಮನ್ವಯ ಸಮಿತಿ ಅಧ್ಯಕ್ಷ ಮತ್ತು ಮುಖ್ಯಮಂತ್ರಿ ಸೇರಿದಂತೆ ಸದಾ ಅಧಿಕಾರದಲ್ಲಿರುವ ಸಿದ್ದರಾಮಯ್ಯ, ಇದೀಗ ಮತ್ತೆ ಪಕ್ಷದ ಎಲ್ಲಾ ಅಧಿಕಾರ ಸ್ಥಾನಗಳನ್ನೂ ಆಕ್ರಮಿಸಲು ಹವಣಿಸುತ್ತಿದ್ದಾರೆ. ಆ ಮೂಲಕ ಪಕ್ಷದಲ್ಲಿನ ತಮ್ಮ ಹಿಡಿತವನ್ನು ಇನ್ನಷ್ಟು ಗಟ್ಟಿಗೊಳಿಸುವುದು ಮತ್ತು ಅಂತಿಮವಾಗಿ ಪಕ್ಷವನ್ನು ಇಡಿಯಾಗಿ ತಮ್ಮ ಕಬ್ಜಕ್ಕೆ ತೆಗೆದುಕೊಳ್ಳುವುದು ಅವರ ಉದ್ದೇಶ. ಆ ಕಾರಣಕ್ಕಾಗಿಯೇ ಅವರು ತಮ್ಮ ಮುಖ್ಯಮಂತ್ರಿ ಅವಧಿಯಲ್ಲಿ ಬಹಳಷ್ಟು ಪ್ರಭಾವಿ ಹಿರಿಯ ನಾಯಕರನ್ನು ಮೂಲೆಗುಂಪು ಮಾಡಿದ್ದರು. ಜೊತೆಗೆ ತಮ್ಮದೇ ಪಟಾಲಂ ಕಟ್ಟಿಕೊಂಡು, ತಮ್ಮ ಸ್ವಹಿತಾಸಕ್ತಿ ಕಾಯಲು ಪ್ರಯತ್ನಿಸಿದರೇ ಹೊರತು, ಇಡಿಯಾಗಿ ಪಕ್ಷವನ್ನು ಕಟ್ಟುವ, ಸದೃಢಗೊಳಿಸುವ ಯತ್ನ ಮಾಡಲಿಲ್ಲ. ಹಾಗಾಗಿಯೇ ಕಳೆದ ಚುನಾವಣೆಯಲ್ಲಿ ಮತ್ತು ಇತ್ತೀಚಿನ ಆಪರೇಷನ್ ಕಮಲದ ಸಂದರ್ಭದಲ್ಲಿ ಪಕ್ಷಕ್ಕೆ ದೊಡ್ಡ ಹಿನ್ನಡೆಯಾಯಿತು ಎಂಬುದು ಮೂಲ ಕಾಂಗ್ರೆಸ್ಸಿಗರು ಎಂದುಕೊಳ್ಳುತ್ತಿರುವ ಹಿರಿಯ ನಾಯಕರ ವಾದ.
ಆ ಹಿನ್ನೆಲೆಯಲ್ಲಿಯೇ ಕಳೆದ ಎರಡು ತಿಂಗಳಿನಿಂದ ಪ್ರತಿಪಕ್ಷ ನಾಯಕನ ಆಯ್ಕೆ ಕಗ್ಗಂಟಾಗಿ ಪರಿಣಮಿಸಿದ್ದು, ಪಕ್ಷದ ಹೈಕಮಾಂಡ್ ಪಾಲಿಗೆ ಇಕ್ಕಟ್ಟಿನ ಸ್ಥಿತಿ ನಿರ್ಮಾಣವಾಗಿದೆ. ಒಂದು ಕಡೆ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ ಸದನದ ಒಳಹೊರಗೆ ಪ್ರಬಲ ದನಿ ಎತ್ತಲು ಸಿದ್ದರಾಮಯ್ಯ ಅವರಂಥ ಸಂಸದೀಯ ಪಟು ವಿರೋಧ ಪಕ್ಷದ ನಾಯಕನ ಸ್ಥಾನದಲ್ಲಿರುವುದು ಅನಿವಾರ್ಯ. ಮತ್ತೊಂದು ಕಡೆ, ಪಕ್ಷಕ್ಕಿಂತ ದೊಡ್ಡದಾಗಿ ಬೆಳೆಯುತ್ತಿರುವ ಸಿದ್ದರಾಮಯ್ಯ ಪ್ರಭಾವನ್ನೂ ನಿಯಂತ್ರಣದಲ್ಲಿಟ್ಟು, ಅವರ ವಿರೋಧಿ ಬಣದ ನಾಯಕರಿಗೆ ಹೊಣೆಗಾರಿಕೆ ಕೊಟ್ಟು ಸಮದೂಗಿಸಬೇಕಾಗಿದೆ. ಆದರೆ, ವಿರೋಧಿ ಬಣದಲ್ಲಿ ಕೂಡ ಪ್ರಶ್ನಾತೀತ ಏಕ ನಾಯಕ ಎಂಬ ಸ್ಥಿತಿ ಇಲ್ಲ. ಮಾಜಿ ಡಿಸಿಎಂ ಡಾ ಜಿ ಪರಮೇಶ್ವರ್, ಮಾಜಿ ಸಚಿವ ಎಚ್ ಕೆ ಪಾಟೀಲ್ ನಡುವೆ ಆ ಬಣದಲ್ಲಿಯೂ ಪೈಪೋಟಿ ಇದೆ. ಈ ನಡುವೆ, ಡಿ ಕೆ ಶಿವಕುಮಾರ್ ಕೂಡ ಪ್ರತಿಪಕ್ಷ ನಾಯಕ ಅಥವಾ ಪಕ್ಷದ ಅಧ್ಯಕ್ಷಗಿರಿಗೆ ಪ್ರಬಲ ಲಾಬಿ ನಡೆಸಿದ್ದರು. ಆದರೆ, ಇದೀಗ ಅವರು ಇಡಿ-ಐಟಿ ಬಲೆಯಲ್ಲಿ ಸಿಲುಕಿ ಜೈಲುಪಾಲಾಗಿರುವುದರಿಂದ ಪಕ್ಷದ ಹೈಕಮಾಂಡ್ ಅವರ ಹೆಸರನ್ನು ಸದ್ಯಕ್ಕೆ ಬದಿಗಿಟ್ಟಿದೆ ಎನ್ನಲಾಗಿದೆ.
ಡಿಕೆಶಿ ಬದಿಗೆ ಸರಿದ ಹಿನ್ನೆಲೆಯಲ್ಲಿ ತಮ್ಮ ಪ್ರಯತ್ನವನ್ನು ಬಿರುಸುಗೊಳಿಸಿರುವ ಡಾ ಪರಮೇಶ್ವರ್ ಅವರು, ದೆಹಲಿಗೆ ಹೋಗಿ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಸೇರಿದಂತೆ ಪ್ರಮುಖರನ್ನು ಭೇಟಿ ಮಾಡಿ ಸಿದ್ದರಾಮಯ್ಯ ಅವರು ಪಕ್ಷದಲ್ಲಿ ಈಗಾಗಲೇ ಪಕ್ಷವನ್ನು ಮೀರಿ ಬೆಳೆದಿದ್ದಾರೆ. ಇನ್ನೂ ಅವರಿಗೆ ಅಧಿಕಾರ ನೀಡಿದಲ್ಲಿ ಅದು ಮೂಲ ಕಾಂಗ್ರೆಸ್ಸಿಗರ ಪಾಲಿಗೆ ಅಪಾಯಕಾರಿ ಸಂದೇಶ ರವಾನಿಸಲಿದೆ. ರಾಜ್ಯ ಸರ್ಕಾರ ಕೂಡ ಅವಧಿ ಪೂರ್ಣಗೊಳಿಸುವ ಸಾಧ್ಯತೆ ಇಲ್ಲ. ಆ ಹಿನ್ನೆಲೆಯಲ್ಲಿ ಯಾವುದೇ ಸಂದರ್ಭದಲ್ಲಿ ಚುನಾವಣೆ ಎದುರಾಗಬಹುದು ಎಂದುಕೊಂಡೇ ಪಕ್ಷ ಸಂಘಟನೆ ಮಾಡಬೇಕಿದೆ. ಅದಕ್ಕೆ ಪಕ್ಷದ ಹಿರಿಯ-ಕಿರಿಯರೆಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸಂಘಟನೆ ಕಾರ್ಯ ಮಾಡಬೇಕಿದೆ. ಆ ಹಿನ್ನೆಲೆಯಲ್ಲಿ ಶಾಸಕಾಂಗ ಪಕ್ಷದ ನಾಯಕರಾಗಿ ಸಿದ್ದರಾಮಯ್ಯ ಮುಂದುವರಿಯುವುದರಿಂದ ಪ್ರತಿಪಕ್ಷ ನಾಯಕನ ಸ್ಥಾನವನ್ನು ತಮಗೆ ನೀಡುವಂತೆ ಕೋರಿದ್ದಾರೆ ಎನ್ನಲಾಗಿದೆ.
ಈ ನಡುವೆ ಎಚ್ ಕೆ ಪಾಟೀಲ್ ಕೂಡ ತಮ್ಮದೇ ಜಾಲದ ಮೂಲಕ ದೆಹಲಿ ಮಟ್ಟದಲ್ಲಿ ಲಾಬಿ ನಡೆಸಿದ್ದು, ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ಉತ್ತರಕರ್ನಾಟಕದ ಪ್ರಭಾವಿ ನಾಯಕರಾಗಿ, ಸದನದಲ್ಲಿ ಸಕ್ರಿಯವಾಗಿರುವ ಮತ್ತು ಬಿಜೆಪಿಗೆ ಪ್ರಬಲ ಪಟ್ಟುಗಳ ಮೂಲಕ ಸವಾಲೊಡ್ಡುವ ಛಾತಿ ಇರುವ ತಮಗೇ ಅವಕಾಶ ನೀಡುವಂತೆ ಕೋರಿದ್ದಾರೆ. ಜೊತೆಗೆ ಪರಮೇಶ್ವರ್ ಮತ್ತು ಪಾಟೀಲ್ ಇಬ್ಬರೂ ಪ್ರತಿಪಕ್ಷ ನಾಯಕನ ಸ್ಥಾನ ಕೈತಪ್ಪಿದ್ದಲ್ಲಿ ತಮಗೇ ಪಕ್ಷದ ಅಧ್ಯಕ್ಷ ಸ್ಥಾನವನ್ನು ನೀಡಬೇಕು ಎಂಬ ಷರತ್ತನ್ನೂ ಹೈಕಮಾಂಡ್ ಮುಂದಿಟ್ಟಿದ್ದಾರೆ ಎಂಬ ಮಾತೂ ಇದೆ.
ಆ ಹಿನ್ನೆಲೆಯಲ್ಲಿಯೇ ಬುಧವಾರ ಸಿಎಲ್ ಪಿ ನಾಯಕ ಸಿದ್ದರಾಮಯ್ಯ ಕರೆದಿದ್ದ ಶಾಸಕಾಂಗ ಪಕ್ಷದ ಸಭೆಗೆ ಡಾ ಪರಮೇಶ್ವರ್, ಸತೀಶ್ ಜಾರಕಿಹೊಳಿ ಸೇರಿದಂತೆ ಕೆಲವು ಹಿರಿಯ ನಾಯಕರು ಗೈರಾಗಿದ್ದರು. ಆ ಮೂಲಕ ಸಿದ್ದರಾಮಯ್ಯ ಅವರ ಏಕಪಕ್ಷೀಯ ನಿರ್ಧಾರಗಳು ಮತ್ತು ಪಕ್ಷವನ್ನು ಸಂಪೂರ್ಣ ತಮ್ಮ ಆಡುಂಬೊಲವನ್ನಾಗಿ ಮಾಡಿಕೊಳ್ಳುವ ಯತ್ನಕ್ಕೆ ಈ ನಾಯಕರು ಪ್ರತಿರೋಧ ವ್ಯಕ್ತಪಡಿಸಿದ್ದಾರೆ. ಈ ಬೆಳವಣಿಗೆಗಳನ್ನು ಗಮನಿಸುತ್ತಿರುವ ಪಕ್ಷದ ನಾಯಕಿ ಸೋನಿಯಾ, ಒಂದೆರಡು ದಿನದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ. ರಾಹುಲ್ ಗಾಂಧಿಯವರೇ ಅಧ್ಯಕ್ಷರಾಗಿರುತ್ತಿದ್ದರೆ, ಸಿದ್ದರಾಮಯ್ಯ ಅವರ ದಾರಿ ಸುಗಮವಾಗುತ್ತಿತ್ತು. ತಮ್ಮ ಆಪ್ತ ಕೆ ಸಿ ವೇಣುಗೋಪಾಲ್ ಮೂಲಕ ಸಿದ್ದರಾಮಯ್ಯ ತಮ್ಮ ಕಾರ್ಯಸಾಧಿಸಿಕೊಳ್ಳುತ್ತಿದ್ದರು. ಆದರೆ, ಈಗ ಸೋನಿಯಾ ಅವರು ಯಾವುದೇ ನಿರ್ಧಾರವನ್ನು ಕೈಗೊಳ್ಳುವ ಮುನ್ನ ಪಕ್ಷದ ಹಿರಿಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಮುಂದುವರಿಯುವುದಿಲ್ಲ. ಹಾಗಾಗಿ ಈ ಬಾರಿ ಡಾ ಪರಮೇಶ್ವರ್ ಅಥವಾ ಎಚ್ ಕೆ ಪಾಟೀಲ್ ಅವರಿಗೆ ಪ್ರತಿಪಕ್ಷ ನಾಯಕ ಅಥವಾ ಪಕ್ಷದ ಅಧ್ಯಕ್ಷ ಸ್ಥಾನ ಒಲಿಯುವ ಸಾಧ್ಯತೆಯನ್ನು ತಳ್ಳಿಹಾಕಲಾಗದು.
ಹಾಗಂತ, ಸಾರಾಸಗಟಾಗಿ ಸಿದ್ದರಾಮಯ್ಯ ಅವರನ್ನು ಬದಿಗೊತ್ತಿ ಪಕ್ಷ ಸಂಘಟಿಸುವ ಛಾತಿ ಕೂಡ ಈ ಯಾವ ನಾಯಕರಲ್ಲೂ ಇಲ್ಲ. ಮಾಜಿ ಮುಖ್ಯಮಂತ್ರಿ ಹಾಗೂ ಪ್ರಭಾವಿ ನಾಯಕನ ನಾಯಕತ್ವವಿಲ್ಲದೆ ಪಕ್ಷ ಚುನಾವಣೆಗೆ ಹೋಗುವ ಸ್ಥಿತಿ ಕೂಡ ಇಲ್ಲ ಎಂಬ ವಾಸ್ತವಾಂಶ ಕೂಡ ಹೈಕಮಾಂಡಿಗೆ ಗೊತ್ತಿದೆ. ಹಾಗಾಗಿ ಸ್ವತಃ ಹೈಕಮಾಂಡ್ ಈಗ ಇಕ್ಕಟ್ಟಿಗೆ ಸಿಲುಕಿದೆ ಎಂಬುದು ದೆಹಲಿ ವಲಯದ ಲೆಕ್ಕಾಚಾರ.
ಅದೇನೇ ಇರಲಿ, ಸದ್ಯಕ್ಕಂತೂ ಕಾಂಗ್ರೆಸ್ ಕುರ್ಚಿ ಕಚ್ಚಾಟದಲ್ಲಿ ಮುಳುಗಿದೆ. ಇತ್ತ ಜೆಡಿಎಸ್ ನಲ್ಲಿ ಕೂಡ ಪಕ್ಷ ಜನರ ನಡುವೆ ಸಕ್ರಿಯವಾಗಿದ್ದುಕೊಂಡು ಆಡಳಿತ ಪಕ್ಷದ ವೈಫಲ್ಯಗಳನ್ನು ಮುಂದಿಟ್ಟುಕೊಂಡು ಹೋರಾಟ ನಡೆಸುವ ದಿಟ್ಟತನ ಕಾಣುತ್ತಿಲ್ಲ. ಹಲವು ಪ್ರಮುಖ ನಾಯಕರು ಆಪರೇಷನ್ ಕಮಲಕ್ಕೆ ಈಗಾಗಲೇ ಬಲಿಯಾಗಿದ್ದರೆ, ಜಿ ಟಿ ದೇವೇಗೌಡ ಅವರಂಥವರು ಈಗಾಗಲೇ ಒಂದು ಕಾಲ ಹೊರಗಿಟ್ಟಾಗಿದೆ. ಹಾಗಾಗಿ, ಸದ್ಯಕ್ಕೆ ಜೆಡಿಎಸ್ ಮತ್ತೆ ಅಪ್ಪಮಕ್ಕಳ ಪಕ್ಷ ಎಂಬ ಪ್ರತಿಪಕ್ಷಗಳ ಮಾತನ್ನು ನೂರಕ್ಕೆ ನೂರು ನಿಜ ಮಾಡುವ ಹಾದಿಯಲ್ಲಿರುವಂತಿದೆ.
ಹಾಗಾಗಿ, ಸದ್ಯಕ್ಕೆ ಅಧಿಕಾರ, ಕುರ್ಚಿ ರಾದ್ಧಾಂತಗಳಲ್ಲಿ ಪ್ರತಿಪಕ್ಷಗಳು ಮುಳುಗಿದ್ದರೆ, ಇತ್ತ ರಾಜ್ಯದ ಬೊಕ್ಕಸೂ ಬರಿದು, ಅತ್ತ ಕೇಂದ್ರದಿಂದಲೂ ಬಿಡಿಗಾಸಿನ ಪರಿಹಾರ ಧನ ತರಲಾಗದ ದೈನೇಸಿ ಸ್ಥಿತಿಯಲ್ಲಿ ಆಡಳಿತ ಪಕ್ಷ, ಅಸಹಾಯಕತೆಯಿಂದ ನಿತ್ರಾಣಗೊಂಡು ಕಣ್ಣುಕಣ್ಣು ಬಿಡುವ ಸ್ಥಿತಿಯಲ್ಲಿದೆ. ಇನ್ನು ಸಂತ್ರಸ್ತರ ಗತಿ, ಅಯೋಮಯವಾಗಿದ್ದು, ಅಕ್ಷರಶಃ ಅನಾಥರಾಗಿದ್ದಾರೆ!