ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಪತ್ನಿ ಮೈತ್ರಾದೇವಿ ಅವರ ಅಸಹಜ ಸಾವಿನ ಪ್ರಕರಣ ಇದೀಗ ಮತ್ತೆ ಸಾರ್ವಜನಿಕ ಚರ್ಚೆಯ ಸಂಗತಿಯಾಗಿದ್ದು, ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಚನ್ನಪಟ್ಟಣದ ಸಾರ್ವಜನಿಕ ಸಮಾರಂಭವೊಂದರಲ್ಲಿ ಈ ವಿಷಯವನ್ನು ಪ್ರಸ್ತಾಪಿಸುವ ಮೂಲಕ ಒಂದೂವರೆ ದಶಕದ ಹಿಂದಿನ ಪ್ರಕರಣವನ್ನು ಮತ್ತೆ ಮುನ್ನೆಲೆಗೆ ತಂದಿದ್ದಾರೆ.
ಹದಿನೈದು ವರ್ಷಗಳ ಹಿಂದೆ, ಯಡಿಯೂರಪ್ಪ ವಿಧಾನಸಭಾ ಪ್ರತಿಪಕ್ಷ ನಾಯಕರಾಗಿದ್ದ ಸಂದರ್ಭದಲ್ಲಿ ಶಿವಮೊಗ್ಗ ನಗರದ ವಿನೋಬನಗರದ ಅವರ ನಿವಾಸದಲ್ಲಿ ಪತ್ನಿ ಮೈತ್ರಾದೇವಿ ಅವರು ನಿಗೂಢ ರೀತಿಯಲ್ಲಿ ಅಸಹಜ ಸಾವು ಕಂಡಿದ್ದರು. ಮನೆಯ ನೀರಿನ ಸಂಪು(ತೊಟ್ಟಿ)ವಿನಲ್ಲಿ ಬಿದ್ದು ಅವರು ಸಾವುಕಂಡಿದ್ದಾರೆ ಎಂದು ಕುಟುಂಬವರ್ಗದವರು ಹೇಳಿದ್ದರಾದರೂ, ಆ ದಿಢೀರ್ ಸಾವಿನ ಬಗ್ಗೆ ಹಲವು ಅನುಮಾನಗಳು ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದ್ದವು. ಅಷ್ಟೇ ಅಲ್ಲದೆ, ನ್ಯಾಯಾಲಯದಲ್ಲಿಯೂ ಆ ಬಗ್ಗೆ ಪ್ರಶ್ನಿಸಲಾಗಿತ್ತು. ಅಲ್ಲದೆ, ಯಡಿಯೂರಪ್ಪ ಮತ್ತು ಬಿಜೆಪಿ ನಾಯಕಿ ಶೋಭಾ ಕರಂದ್ಲಾಜೆ ಅವರ ನಡುವಿನ ಆಪ್ತ ನಂಟಿನೊಂದಿಗೂ ಮೈತ್ರಾದೇವಿ ಅಸಹಜ ಸಾವು ಪ್ರಕರಣವನ್ನು ತಳಕುಹಾಕಿ ಹಲವು ರಾಜಕಾರಣಿಗಳು ಮತ್ತು ಸಾಮಾಜಿಕ ಕಾರ್ಯಕರ್ತರು ಗಂಭೀರ ಆರೋಪಗಳನ್ನು ಕೂಡ ಮಾಡಿದ್ದರು. ಶಿವಮೊಗ್ಗದ ವಕೀಲರೊಬ್ಬರು ಆ ಸಾವು ಅನುಮಾನಾಸ್ಪದವಾಗಿದ್ದು, ಮರು ತನಿಖೆಗೆ ಆದೇಶಿಸಬೇಕು ಎಂದು ನ್ಯಾಯಾಲಯದ ಮೊರೆಹೋಗಿದ್ದಾರೆ ಕೂಡ.
ಚುನಾವಣಾ ಭಾಷಣಗಳಲ್ಲಿ, ಪತ್ರಿಕಾಗೋಷ್ಠಿಗಳಲ್ಲಿ ಯಡಿಯೂರಪ್ಪ ವಿರುದ್ಧದ ವಾಗ್ದಾಳಿಯ ಅಸ್ತ್ರವಾಗಿ ಪ್ರತಿಪಕ್ಷಗಳ ಕೆಲವು ನಾಯಕರಿಗೆ ಮತ್ತು ಸಣ್ಣಪುಟ್ಟ ಪಕ್ಷಗಳ ಮುಖಂಡರಿಗೆ ಮೈತ್ರಾದೇವಿ ನಿಗೂಢ ಸಾವು ಪ್ರಕರಣ ಆಗಾಗ ಒದಗಿಬರುತ್ತಲೇ ಇತ್ತು. ಆದರೆ, ಯಡಿಯೂರಪ್ಪ ಬಳಿಕ ಹಲವು ಮುಖ್ಯಮಂತ್ರಿಗಳು, ಹಲವು ಕೆಲವು ಸರ್ಕಾರಗಳು ಅಧಿಕಾರಕ್ಕೆ ಬಂದಿದ್ದರೂ, ಆ ಪ್ರಕರಣವನ್ನು ರಾಜಕೀಯ ಅಸ್ತ್ರವಾಗಿ ಬಳಸಿಕೊಂಡು ಗಂಭೀರ ತನಿಖೆ ನಡೆಸುವ ಮಟ್ಟಿಗೆ ಯಾರೂ ಪ್ರಯತ್ನಿಸಿರಲಿಲ್ಲ. ಆದರೆ, ಇದೀಗ ಕುಮಾರಸ್ವಾಮಿ ಅವರು ಕಾಂಗ್ರೆಸ್ ಡಿ ಕೆ ಶಿವಕುಮಾರ್ ಅವರು ಯಡಿಯೂರಪ್ಪ ಅವರನ್ನು ಇಂಧನ ಇಲಾಖೆ ಅವ್ಯವಹಾರದ ವಿಷಯದಲ್ಲಿ ಹೇಗೆ ರಕ್ಷಿಸಿದ್ದರು ಎಂಬುದನ್ನು ಪ್ರಸ್ತಾಪಿಸುತ್ತಲೇ, ಮೈತ್ರಾದೇವಿ ಪ್ರಕರಣವನ್ನೂ ಎತ್ತಿದ್ದಾರೆ. ಆ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ, ಹೈಕೋರ್ಟಿನಲ್ಲಿ ವಿಚಾರಣೆಗೆ ಬಾಕಿ ಇರುವ ಈ ಪ್ರಕರಣ ತೆಗೆದುಕೊಳ್ಳಬಹುದಾದ ರಾಜಕೀಯ ತಿರುವಿನ ಬಗ್ಗೆ ಕುತೂಹಲ ಮೂಡಿದೆ.
“ರಾಜಕೀಯ ವ್ಯಕ್ತಿಗಳ ಬಗ್ಗೆ ಮಾತನಾಡಿದರೆ ಅವರ ಹಿಂದೆ ಸಮುದಾಯ, ಜಾತಿ, ಮಠಗಳು ಬೆಂಬಲಕ್ಕೆ ನಿಲ್ಲುತ್ತಿವೆ. ತಮ್ಮವನ ಬಗ್ಗೆ ಮಾತನಾಡಿದರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ ಎಂಬ ಬೆದರಿಕೆ ಹಾಕಲಾಗುತ್ತದೆ. ಆದರೆ, ಎಂಥೆಂಥದ್ದೆಲ್ಲಾ ನಡೀತಿದೇರ್ರಿ ಈ ಜಗತ್ತಿನೊಳಗೆ. ಒಂದಡಿ ಒಂದಡಿ ನೀರಿನ ಟ್ಯಾಂಕಿನಲ್ಲಿ ಕಾಲುಜಾರಿ ಬಿದ್ದು ಸಾಯೋದು ಎಲ್ಲಾದರೂ ಉಂಟೇನ್ರಿ. ಅಂತಹದ್ದನ್ನೇ ಈ ಜನ ಮೆಚ್ಚಿಕೊಂಡಿದ್ದಾರೆ ಈ ರಾಜ್ಯದೊಳಗೆ..” ಎಂದು ಹೇಳಿರುವ ಕುಮಾರಸ್ವಾಮಿ, ಬಳಿಕ, ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಬಿಎಸ್ ವೈ ಇಂಧನ ಇಲಾಖೆಯನ್ನು ಲೂಟಿ ಮಾಡಿದ್ದರು. ಅದನ್ನು ತನಿಖೆ ನಡೆಸುವಂತೆ ಡಿ ಕೆ ಶಿವಕುಮಾರ್ ಗೆ ಹೇಳಿದ್ದೆ. ಆದರೆ, ಅವರು ಮಾಡಲಿಲ್ಲ. ಅದೇ ಯಡಿಯೂರಪ್ಪ ಐಟಿ ಇಲಾಖೆಗೆ ಪತ್ರ ಬರೆದು ಶಿವಕುಮಾರ್ ವಿರುದ್ಧ ತನಿಖೆ ನಡೆಸುವಂತೆ ಹೇಳಿದ್ದರು.’’ ಎಂದಿದ್ದಾರೆ. ಆ ಮೂಲಕ ಯಡಿಯೂರಪ್ಪ ಪತ್ನಿ ಸಾವು ಪ್ರಕರಣ ಹಾಗೂ ಇಂಧನ ಇಲಾಖೆ ಅವ್ಯವಹಾರ ಪ್ರಕರಣಗಳಲ್ಲಿ ಡಿ ಕೆ ಶಿವಕುಮಾರ್ ಯಡಿಯೂರಪ್ಪ ಅವರನ್ನು ರಕ್ಷಿಸಿದರು. ಆದರೆ, ಯಡಿಯೂರಪ್ಪ ಅವರು ಡಿ ಕೆ ಶಿವಕುಮಾರ್ ವಿರುದ್ಧ ತನಿಖೆಗೆ ಸೂಚಿಸಿ, ಅವರು ಈಗ ಜೈಲು ಪಾಲಾಗುವಂತೆ ಮಾಡಿದ್ದಾರೆ ಎಂಬ ಅವರ ಮಾತು, ಡಿ ಕೆ ಶಿವಕುಮಾರ್ ಪ್ರಕರಣಕ್ಕೆ ಪ್ರತಿಯಾಗಿ ಮೈತ್ರಾದೇವಿ ಸಾವಿನ ಪ್ರಕರಣವನ್ನು ಕೆದಕುವ ಸೂಚನೆ ನೀಡಿದೆ.
ಹಾಗೆ ನೋಡಿದರೆ, 2004ರ ಅಕ್ಟೋಬರ್ 16ರಂದು ಮೈತ್ರಾದೇವಿ ಸಾವು ಸಂಭವಿಸಿದ ದಿನದಿಂದಲೂ ಬಿ ಎಸ್ ಯಡಿಯೂರಪ್ಪ ಪಾಲಿಗೆ ಈ ಪ್ರಕರಣ ಬೆಂಬಿಡದ ಭೂತವಾಗಿ ಕಾಡುತ್ತಲೇ ಇದೆ. 2004ರಲ್ಲಿಯೇ ಶಿವಮೊಗ್ಗದ ಕೆಲವು ಸಂಘಟನೆಗಳು ಮತ್ತು ರಾಜಕೀಯ ಪಕ್ಷಗಳು ಈ ಅಸಹಜ ಸಾವಿನ ತನಿಖೆಯಾಗಬೇಕು ಎಂಬ ದನಿ ಎತ್ತಿದ್ದರು. ಅಲ್ಲದೆ, ಆ ಬಳಿಕ ಕೂಡ ಶಿವಮೊಗ್ಗದ ಹಿರಿಯ ವಕೀಲ ಶೇಶಾದ್ರಿ ಅವರು ಪ್ರಕರಣದ ಮರುತನಿಖೆಗೆ ಆದೇಶಿಸುವಂತೆ 2009ರಲ್ಲಿ ಶಿವಮೊಗ್ಗ ಜಿಲ್ಲಾ ಸತ್ರ ನ್ಯಾಯಾಲಯದ ಮೆಟ್ಟಿಲೇರಿದ್ದರು. ಸದ್ಯ ಪ್ರಕರಣ ರಾಜ್ಯ ಹೈಕೋರ್ಟ್ ಮುಂದಿದ್ದು, ವಿಚಾರಣೆ ಹಂತದಲ್ಲಿದೆ.
“ಪ್ರಮುಖವಾಗಿ ಅಂದು ವಿಧಾನಸಭಾ ಪ್ರತಿಪಕ್ಷ ನಾಯಕರಾಗಿದ್ದ ಬಿ ಎಸ್ ಯಡಿಯೂರಪ್ಪ ಅವರಂತಹ ಗಣ್ಯ ವ್ಯಕ್ತಿಯ ಪತ್ನಿ ಅಸಹಜ ಸಾವು ಕಂಡಾಗ ತೆಗೆದುಕೊಳ್ಳಬೇಕಾದ ಕಾನೂನು ಕ್ರಮಗಳನ್ನು ತೆಗೆದುಕೊಳ್ಳುವಲ್ಲಿ ಮಾಡಿರುವ ಲೋಪಗಳು ಸಾವಿನ ಬಗ್ಗೆ ಅನುಮಾನ ಹುಟ್ಟಿಸಿವೆ. ಕೇವಲ ಒಂದೂಕಾಲು ಅಡಿ ಸುತ್ತಳತೆಯ ಬಾಯಿ(ಕ್ಯಾಪ್) ಇರುವ ಮತ್ತು ಆ ಸಂದರ್ಭದಲ್ಲಿ ಕೇವಲ ಮೂರೂವರೆ ಅಡಿ ನೀರು ಇದ್ದ ಸಂಪಿಗೆ ದೃಢಕಾಯ ಮಹಿಳೆ ಬಿದ್ದು ಸಾವು ಸಂಭವಿಸುವುದು ಹೇಗೆ ಎಂಬುದು ಮೊದಲ ಪ್ರಶ್ನೆಯಾದರೆ, ಎರಡನೆಯದಾಗಿ ಮೃತ ದೇಹದ ಮರಣೋತ್ತರ ಪರೀಕ್ಷೆಯಲ್ಲಿ ಸಾಕಷ್ಟು ಲೋಪಗಳಾಗಿವೆ. ಎರಡೆರಡು ಬಾರಿ ಮರಣೋತ್ತರ ಪರೀಕ್ಷೆ, ಮಹಜರು ನಡೆದರೂ ಘಟನೆಯ ವಿಡಿಯೋ ಚಿತ್ರೀಕರಣ ಮಾಡಿಲ್ಲ. ಮೃತ ದೇಹದ ಒಂದೇ ಒಂದು ಫೋಟೋ ಕೂಡ ತೆಗೆದಿಲ್ಲ. ಅಲ್ಲದೆ, ತಮ್ಮ ಪತ್ನಿ ತೀರಿಕೊಂಡ ದಿನವೇ ಬಿಎಸ್ ವೈ ಶಾಸಕರಾಗಿ ನಿಗದಿಯಾಗಿದ್ದ ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ ಭಾಗಿಯಾದ ಬಗ್ಗೆ ದಾಖಲೆಗಳಿವೆ. ಆ ಎಲ್ಲಾ ಹಿನ್ನೆಲೆಯಲ್ಲಿಯೇ ಮರು ತನಿಖೆಗೆ ಕೋರಿ ನ್ಯಾಯಾಲಯದ ಮೊರೆಹೋಗಿದ್ದೇವೆ” ಎಂದು ವಕೀಲ ಪಿ ಶೇಶಾದ್ರಿ ಅವರು ‘ಟ್ರೂಥ್ಇಂಡಿಯಾ’ಗೆ ಮಾಹಿತಿ ನೀಡಿದರು.
ಅಲ್ಲದೆ, ಮೈತ್ರಾದೇವಿ ಸಾವಿನ ಪ್ರಕರಣದ ಕುರಿತು ಕೆಜೆಪಿ ಪಕ್ಷದ ಸಂಸ್ಥಾಪಕ ಅಧ್ಯಕ್ಷ ಪದ್ಮನಾಭ ಪ್ರಸನ್ನಕುಮಾರ್ ಕೂಡ ಹಲವು ಬಾರಿ ಪ್ರಸ್ತಾಪಿಸಿದ್ದರು. ಒಮ್ಮೆ ಬೆಂಗಳೂರಿನಲ್ಲಿ ಈ ವಿಷಯ ಪ್ರಸ್ತಾಪಿಸುವ ಹೊತ್ತಲ್ಲೇ ಪತ್ರಿಕಾಗೋಷ್ಠಿಗೆ ನುಗ್ಗಿದ ಕೆಲವರು ಅವರ ಮೇಲೆ ಹಲ್ಲೆ ನಡೆಸಿದ್ದರು. ಅಲ್ಲದೆ, ತೀರ್ಥಹಳ್ಳಿಯ ನಂದಿತಾ ಎಂಬ ಶಾಲಾ ವಿದ್ಯಾರ್ಥಿನಿಯ ಸಾವಿನ ಪ್ರಕರಣವನ್ನು ಬಿಜೆಪಿ ಕೋಮು ದ್ವೇಷ ಮತ್ತು ಲವ್ ಜಿಹಾದ್ ಪ್ರಕರಣವೆಂದು ವ್ಯಾಪಕ ಪ್ರತಿಭಟನೆ, ಬಂದ್ ನಡೆಸಿದ್ದಾಗ ಕೂಡ ಪದ್ಮನಾಭ ಪ್ರಸನ್ನ ಅವರು ಶೋಭಾ ಕರಂದ್ಲಾಜೆ ಅವರ ವಿರುದ್ಧ ಮೈತ್ರಾದೇವಿ ಪ್ರಕರಣವನ್ನು ಪ್ರಸ್ತಾಪಿಸಿ, “ಹೆಣ್ಣು ಮಕ್ಕಳ ಪರ ಮಾತನಾಡಲು ಶೋಭಾ ಅವರಿಗೆ ನೈತಿಕ ಹಕ್ಕಿಲ್ಲ. ಶೋಭಾ ಅವರೇ ಮಹಿಳೆಯರ ಮೊದಲ ಶತ್ರು ಎಂಬುದು ಮೈತ್ರಾದೇವಿ ಸಾವಿನ ಘಟನೆಯಲ್ಲಿ ಗೊತ್ತಾಗಿದೆ” ಎಂದು ಗಂಭೀರ ಆರೋಪ ಮಾಡಿದ್ದರು.
ಜೊತೆಗೆ ಕೆಲವು ತಿಂಗಳ ಹಿಂದೆ ‘ಕ್ಯಾರವಾನ್’ ಎಂಬ ಇಂಗ್ಲಿಷ್ ಸುದ್ದಿತಾಣ ಪ್ರಕಟಿಸಿದ ತನಿಖಾ ವರದಿಯಲ್ಲಿ ಕೂಡ ‘ಮೈತ್ರಾದೇವಿ ಸಾವಿನ ವಿಷಯ ಸ್ವತಃ ಬಿ ಎಸ್ ಯಡಿಯೂರಪ್ಪ ಅವರ ಹಸ್ತಾಕ್ಷರದ ಡೈರಿಯಲ್ಲಿ ಪ್ರಸ್ತಾಪವಾಗಿದೆ. ತಮ್ಮ ಪತ್ನಿ ತೀರಿಕೊಂಡ ಬಳಿಕ ತಾವು ಒಂಟಿತನದಿಂದ ಹೊರಬರಲು ಶೋಭಾ ಕರಂದ್ಲಾಜೆ ಅವರನ್ನು ವಿವಾಹವಾಗಿರುವುದಾಗಿ ಹೇಳಿಕೊಂಡಿದ್ದಾರೆ’ ಎಂದು ಹೇಳಲಾಗಿತ್ತು. ಆದಾಯ ತೆರಿಗೆ ಇಲಾಖೆಯ ವಶದಲ್ಲಿರುವ ಡೈರಿಯಲ್ಲಿ ಯಡಿಯೂರಪ್ಪ ಸ್ವಹಸ್ತಾಕ್ಷರದಲ್ಲಿ ಬರೆದಿದ್ದಾರೆ ಎನ್ನಲಾಗಿದ್ದ ಪುಟಗಳನ್ನು ಕ್ಯಾರವಾನ್ ಪ್ರಕಟಿಸಿತ್ತು. ಅದರ ಪ್ರಕಾರ, ಯಡಿಯೂರಪ್ಪ ಅವರ ಖಾಸಗಿ ಡೈರಿಯ ಪುಟಗಳಲ್ಲಿ, “ನನ್ನ ಪತ್ನಿ ಮೈತ್ರಾದೇವಿ ಅವರು ನಿಧನರಾದ ಬಳಿಕ ಒಂಟಿತನ ತೀವ್ರವಾಗಿ ಬಾಧಿಸುತ್ತಿತ್ತು. ಅದಕ್ಕಾಗಿಯೇ ಶೋಭಾ ಕರಂದ್ಲಾಜೆಯನ್ನು ಕೇರಳದಲ್ಲಿರುವ ಚೊಟ್ಟಾಣಿಕ್ಕರ ಭಗವತಿ ದೇವಸ್ಥಾನದಲ್ಲಿ ಹಿಂದೂ ಸಂಪ್ರದಾದಂತೆ ಮದುವೆಯಾದೆ. ಯಡಿಯೂರು ಸಿದ್ಧಲಿಂಗ ಸ್ವಾಮಿ ಹೆಸರಿನಲ್ಲಿ ಆಕೆಯನ್ನು ಕಾಯಾ, ವಾಚಾ, ಮನಸಾ ಪತ್ನಿ ಎಂದು ಒಪ್ಪಿಕೊಂಡೆ” ಎಂದು ಬರೆಯಲಾಗಿದೆ.
ಒಟ್ಟಾರೆ, ಕಳೆದ ಒಂದೂವರೆ ದಶಕದಿಂದಲೂ ಸಿಎಂ ಯಡಿಯೂರಪ್ಪ ಅವರಿಗೆ ಒಂದಲ್ಲಾ ಒಂದು ರೀತಿಯಲ್ಲಿ ಕಾಡುತ್ತಲೇ ಇರುವ ಅವರ ಪತ್ನಿ ಸಾವಿನ ಪ್ರಕರಣ, ಇದೀಗ ಮಾಜಿ ಮುಖ್ಯಮಂತ್ರಿ ಎಚ್ ಡಿ ಕೆಯ ಪ್ರಸ್ತಾಪದೊಂದಿಗೆ ಸಾರ್ವಜನಿಕ ಜೀವನದಲ್ಲಿ ಮತ್ತೊಮ್ಮೆ ಮುಜಗರದ ಪ್ರಶ್ನೆಯಾಗಿ ಎದುರಾಗಿದೆ. ಮುಂದಿನ ದಿನಗಳಲ್ಲಿ ಈ ಆರೋಪ- ಪ್ರತ್ಯಾರೋಪಗಳು ಪಡೆದುಕೊಳ್ಳುವ ರಾಜಕೀಯ ತಿರುವು ಸದ್ಯಕ್ಕಂತೂ ಕುತೂಹಲ ಮೂಡಿಸಿದೆ.