ಸದ್ಯದ ಕರ್ನಾಟಕ ಸರ್ಕಾರದ ಪರಿಸ್ಥಿತಿಯನ್ನು ನೋಡಿದರೆ, ‘ನಿಮಗೆ ಹತ್ತು ಸಾವಿರ ಕೊಟ್ಟಿದ್ದೇ ಹೆಚ್ಚಾಗಿದೆ’ ಎಂದು ಸಚಿವ ಕೆ ಎಸ್ ಈಶ್ವರಪ್ಪ ಉತ್ತರಕರ್ನಾಟಕದ ಪ್ರವಾಹ ಸಂತ್ರಸ್ತರಿಗೆ ಹೇಳಿದ್ದ ಮಾತೇ ನಿಜವಾಗುವಂತೆ ಕಾಣುತ್ತಿದೆ!
ಹೌದು, ಭೀಕರ ಪ್ರವಾಹ ಬಹುತೇಕ ಮುಕ್ಕಾಲು ರಾಜ್ಯವನ್ನೇ ಕೊಚ್ಚಿ ಒಯ್ದು ಲಕ್ಷಾಂತರ ಮಂದಿ ಮನೆಮಾರು, ಆಸ್ತಿಪಾಸ್ತಿ ಕಳೆದುಕೊಂಡು ಬೀದಿಪಾಲಾಗಿ ಎರಡು ತಿಂಗಳೇ ಕಳೆದವು. ಆದರೂ, ಪರಿಹಾರದ ಮೊದಲ ಹಂತದಲ್ಲಿ, ಸಂಪೂರ್ಣ ಮನೆ ಕಳೆದುಕೊಂಡ ಕೆಲವೇ ಕೆಲವು ಮಂದಿ ಸಂತ್ರಸ್ತರಿಗೆ ತಲಾ ಹತ್ತು ಸಾವಿರ ರೂ. ಪರಿಹಾರ ನೀಡಿರುವುದನ್ನು ಹೊರತುಪಡಿಸಿ ನಯಾಪೈಸೆ ನೆರವು ಸಂತ್ರಸ್ತರ ಕೈಸೇರಿಲ್ಲ. ಜಮೀನು, ತೋಟ, ಬೆಳೆ ಕಳೆದುಕೊಂಡವರಿಗೆ ಈವರೆಗೆ ಬಿಡಿಗಾಸು ಸಿಕ್ಕಿಲ್ಲ. ಕನಿಷ್ಟ ಸೂರು ಕೂಡ ಇಲ್ಲದೆ ಬೀದಿಗೆ ಬಿದ್ದವರಿಗೂ ಮೊದಲ ಹಂತದ ಹತ್ತು ಸಾವಿರ ರೂ. ಕೂಡ ಎಲ್ಲರಿಗೂ ತಲುಪಿಲ್ಲ.
ಅಷ್ಟರಲ್ಲೇ ರಾಜ್ಯ ಸರ್ಕಾರದ ಖಜಾನೆ ಬರಿದಾಗಿದೆ. ಪರಿಹಾರ ಮತ್ತು ಪುನರ್ವಸತಿ ಕಾರ್ಯಕ್ಕೆ ಸರ್ಕಾರದ ಬಳಿ ಹಣವಿಲ್ಲ ಎಂಬುದನ್ನು ಸ್ವತಃ ಮುಖ್ಯಮಂತ್ರಿಗಳೇ ಹೇಳಿದ್ದಾರೆ. ಆಪರೇಷನ್ ಕಮಲದ ಫಲಾನುಭವಿಗಳಾದ ಅನರ್ಹ ಶಾಸಕರ ಕ್ಷೇತ್ರಗಳಿಗೆ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಭಾನುವಾರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ ಸಿಎಂ ಯಡಿಯೂರಪ್ಪ, ಬಳಿಕ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ‘ಪ್ರವಾಹ ಪರಿಹಾರವಾಗಿ ಕೇಂದ್ರ ಸರ್ಕಾರ ಈವರೆಗೆ ರಾಜ್ಯಕ್ಕೆ ಹಣ ಬಿಡುಗಡೆ ಮಾಡಿಲ್ಲ. ರಾಜ್ಯದ ಹಣಕಾಸು ಸ್ಥಿತಿ ಕೂಡ ಉತ್ತಮವಾಗಿಲ್ಲ. ಹಾಗಾಗಿ ಕೂಡಲೇ 2 ಸಾವಿರ ಕೋಟಿ ಪರಿಹಾರ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದೇವೆ’ ಎಂದಿದ್ದಾರೆ.
ಜುಲೈ ಎರಡನೇ ವಾರದಿಂದ ಈವರೆಗೆ ಭೀಕರ ಪ್ರವಾಹದಲ್ಲಿ ಇಡೀ ರಾಜ್ಯವೇ ತತ್ತರಿಸಿಹೋಗಿದ್ದರೂ, ಈ ಮಹಾ ದುರಂತವನ್ನು ಒಂದು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಲಾಗಲೀ, ಕನಿಷ್ಠ ರಾಜ್ಯದ ಸಿಎಂ ಅವರನ್ನು ಭೇಟಿಯಾಗಿ ಪರಿಸ್ಥಿತಿಯ ಬಗ್ಗೆ ಚರ್ಚಿಸಿ, ಅಗತ್ಯ ನೆರವು ನೀಡುವ ಬಗ್ಗೆಯಾಗಲೀ ಕೇಂದ್ರದ ಬಿಜೆಪಿ ಸರ್ಕಾರ ಮತ್ತು ಸ್ವತಃ ಪ್ರಧಾನಿ ಹಾಗೂ ಅಮಿತ್ ಶಾ ಅವರು ಆಸಕ್ತಿ ತೋರಿಸಿರಲಿಲ್ಲ. ಸ್ವತಃ ಸಿಎಂ ಮೂರ್ನಾಲ್ಕು ಬಾರಿ ಭೇಟಿಗೆ ಅವಕಾಶ ಕೋರಿದ್ದರೂ ಅವಕಾಶ ನೀಡಿರಲಿಲ್ಲ. ಕಳೆದ ವಾರ ಕೂಡ ದೆಹಲಿಗೆ ಹೊರಟುನಿಂತಿದ್ದ ಸಿಎಂ ಅವರಿಗೆ ದೆಹಲಿಗೆ ಬರುವುದು ಬೇಡ ಎಂದು ಹೈಕಮಾಂಡ್ ತಡೆದಿತ್ತು. ಆದರೆ, ಇದೀಗ ಅನರ್ಹ ಶಾಸಕರ ಕ್ಷೇತ್ರಗಳ ಉಪ ಚುನಾವಣೆ ಘೋಷಣೆಯಾಗುತ್ತಲೇ ಸಿಎಂ ಯಡಿಯೂರಪ್ಪ ಅವರಿಗೆ ರತ್ನಗಂಬಳಿ ಹಾಸಿ ಕರೆಸಿಕೊಂಡು ಮಾತನಾಡಿದ್ದು, ಈ ಭೇಟಿಯ ಬಗ್ಗೆ ಮತ್ತು ಭೇಟಿ ವೇಳೆಯ ಮಾತುಕತೆಯ ಬಗ್ಗೆಯೇ ಅನುಮಾನ ಹುಟ್ಟಿಸಿದೆ.
ಆ ಹಿನ್ನೆಲೆಯಲ್ಲಿ ಉಪ ಚುನಾವಣೆ ಘೋಷಣೆ ಹಿನ್ನೆಲೆಯಲ್ಲಿ ರೊಚ್ಚಿಗೆದ್ದಿರುವ ಅನರ್ಹ ಶಾಸಕರ ಅಹವಾಲಿನ ಬಗ್ಗೆ ಚರ್ಚಿಸಲು ಯಡಿಯೂರಪ್ಪ ಅವರು ಪಕ್ಷದ ಅಧ್ಯಕ್ಷರೂ ಆಗಿರುವ ಅಮಿತ್ ಶಾ ಅವರನ್ನು ಭೇಟಿಯಾಗಿದ್ದೇ ವಿನಃ ಪ್ರವಾಹ ಸಂತ್ರಸ್ತರ ಬಗ್ಗೆ ಮಾತನಾಡಲು ಅಲ್ಲ, ವಾಸ್ತವವಾಗಿ ಚರ್ಚೆಯಾಗಿದ್ದು ಉಪಚುನಾವಣೆಯಲ್ಲಿ ಅನರ್ಹ ಶಾಸಕರಿಗೆ ಕಣಕ್ಕಿಳಿಯಲು ಇರುವ ತೊಡಕುಗಳನ್ನು ನಿವಾರಿಸುವುದು ಹೇಗೆ ಎಂಬ ಬಗ್ಗೆ. ಆದರೆ, ಪ್ರವಾಹ ಪರಿಹಾರದ ವಿಷಯದಲ್ಲಿ ಸಿಎಂ ಜೊತೆ ಮಾತನಾಡಲು ನಿರಾಕರಿಸಿದ ಮತ್ತು ಬಿಡಿಗಾಸನ್ನೂ ಬಿಡುಗಡೆ ಮಾಡದ ಕೇಂದ್ರದ ನಾಯಕರು, ಇದೀಗ ದಿಢೀರ್ ಉಪಚುನಾವಣೆ ಬಗ್ಗೆ ಚರ್ಚಿಸಲು ಸಿಎಂರನ್ನು ಕರೆಸಿಕೊಂಡಿದ್ದರು ಎಂಬ ಸಂದೇಶ ಹೋದರೆ, ಜನರ ಆಕ್ರೋಶಕ್ಕೆ ಕಾರಣವಾಗಬಹುದು ಎಂದು ಆ ವಿಷಯವನ್ನು ಮರೆಮಾಚಿ, ಸಂತ್ರಸ್ತರ ಪರಿಹಾರ ವಿಷಯವನ್ನು ಮುಂದೆಮಾಡಲಾಗುತ್ತಿದೆ ಎಂಬ ಮಾತುಗಳನ್ನು ತಳ್ಳಿಹಾಕಲಾಗದು.
ಅದೇನೇ ಇರಲಿ; ಈ ಭೇಟಿಯ ಬಳಿಕ ಸ್ವತಃ ಮುಖ್ಯಮಂತ್ರಿಗಳೇ ಕೇಂದ್ರದಿಂದ ಬಿಡಿಗಾಸಿನ ಪರಿಹಾರವೂ ಬಂದಿಲ್ಲ ಮತ್ತು ರಾಜ್ಯದ ಸದ್ಯದ ಹಣಕಾಸು ಸ್ಥಿತಿ ಸರಿ ಇಲ್ಲ ಎಂಬ, ಸಂತ್ರಸ್ತರ ಪಾಲಿಗೆ ಆತಂಕ ತರುವಂತಹ ಎರಡು ಸಂಗತಿಗಳನ್ನು ಹೇಳಿದ್ದಾರೆ. ಈಗಾಗಲೇ ಮೂಡಿಗೆರೆ, ಬಾಗಲಕೋಟೆ ಸೇರಿದಂತೆ ಹಲವು ಕಡೆ ಕೆಲವು ಸಂತ್ರಸ್ತರು ದಿಕ್ಕೆಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇಂತಹ ಹೊತ್ತಲ್ಲಿ ಸಂತ್ರಸ್ತರಲ್ಲಿ ಭರವಸೆ ಹುಟ್ಟಿಸಿ, ದುಡುಕಿನ ನಿರ್ಧಾರ ಕೈಗೊಳ್ಳದಂತೆ ನೋಡಿಕೊಳ್ಳಬೇಕಾಗಿದ್ದ ಸರ್ಕಾರ ಹೀಗೆ ಕೈಚೆಲ್ಲುವುದು ತೀರಾ ಹೊಣೆಗೇಡಿತನದ ಅಪಾಯಕಾರಿ ವರಸೆ.
ಈ ನಡುವೆ, ಸಂತ್ರಸ್ತರ ಪರಿಹಾರ ಮತ್ತು ಪುನರ್ವಸತಿಗೆ ಅಗತ್ಯ ಹಣಕಾಸಿನ ತೀವ್ರ ಕೊರತೆ ಎದುರಿಸುತ್ತಿದ್ದೇವೆ ಎಂದು ಹೇಳಿರುವ ಸಿಎಂ ಯಡಿಯೂರಪ್ಪ, ಸೆ.20ರಂದು ಹಣಕಾಸಿನ ಕ್ರೋಢೀಕರಣಕ್ಕಾಗಿ ರಾಜ್ಯದ 39 ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿ, ಕನಿಷ್ಠ ಬೀದಿಪಾಲಾಗಿರುವ ದಲಿತರು ಮತ್ತು ಬುಡಕಟ್ಟು ಜನರ ಮನೆ ನಿರ್ಮಾಣಕ್ಕೆ ಸುಮಾರು 1100 ಕೋಟಿ ಹಣಕಾಸಿನ ಅಗತ್ಯವಿದೆ. ನಿಮ್ಮ ನಿಮ್ಮ ಇಲಾಖೆಗಳ ತೀರಾ ತುರ್ತು ವೆಚ್ಚಗಳನ್ನು ಹೊರತುಪಡಿಸಿ ಉಳಿಕೆ ಹಣವನ್ನು ಈ ಉದ್ದೇಶಕ್ಕೆ ಬಳಸಲು ನೀಡಿ ಎಂದು ಕೇಳಿದ್ದಾರೆ. ಅಂದರೆ, ತೀರಾ ಅನಿವಾರ್ಯ ಎನಿಸಿದ ಯೋಜನೆ, ಕಾರ್ಯಕ್ರಮಗಳನ್ನು ಹೊರತುಪಡಿಸಿ ಉಳಿದಂತೆ ಕಳೆದ ಬಜೆಟ್ ನಲ್ಲಿ ಇಲಾಖಾವಾರು ಮೀಸಲಿಟ್ಟಿದ್ದ ಅನುದಾನವನ್ನು ಕೂಡ ಬಳಸಿಕೊಳ್ಳಲು ಸರ್ಕಾರ ಮುಂದಾಗಿದೆ. ಅಷ್ಟರಮಟ್ಟಿಗೆ ಸರ್ಕಾರ ದಿವಾಳಿಯಾಗಿದೆ ಮತ್ತು ಕೇಂದ್ರದ ತಮ್ಮದೇ ಪಕ್ಷದ ಸರ್ಕಾರದಿಂದ ನೆರವು ಬರಲಿದೆ ಎಂಬ ವಿಶ್ವಾಸ ಕೂಡ ಸರ್ಕಾರಕ್ಕೆ ಇಲ್ಲ ಎಂಬುದು ಖಾತ್ರಿಯಾಗುತ್ತಿದೆ.
ಈ ನಡುವೆ ಕಟ್ಟಡ ಕಾರ್ಮಿಕರ ಕಲ್ಯಾಣ ನಿಧಿಗೂ ಕೈಹಾಕಿದ್ದು, ಸುಮಾರು ಮೂರು ಸಾವಿರ ಕೋಟಿ ರೂಪಾಯಿಗಳನ್ನು ಆ ನಿಧಿಯಿಂದ ನೆರೆ ಸಂತ್ರಸ್ತರ ಪುನರ್ವಸತಿಗೆ ಬಳಸಲು ಕೊಡಿ ಎಂದು ಉನ್ನತ ಅಧಿಕಾರಿಯೊಬ್ಬರು ಒತ್ತಡ ಹೇರಿದ್ದರು. ಆದರೆ, ಕಟ್ಟಡ ಕಾರ್ಮಿಕರ ಕಲ್ಯಾಣ ಯೋಜನೆಯಡಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಪರಿಣಾಮಕಾರಿಯಾಗಿ ಜಾರಿಗೆ ತರಲು ಪ್ರಯತ್ನಿಸುತ್ತಿದ್ದ ದಕ್ಷ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರು ಆ ಪ್ರಸ್ತಾಪಕ್ಕೆ ಒಪ್ಪಲಿಲ್ಲ. ಆ ಹಿನ್ನೆಲೆಯಲ್ಲಿ ಅವರನ್ನು ದಿಢೀರನೇ ಯಾವುದೇ ಮುಂದಿನ ಹುದ್ದೆ ತೋರಿಸದೇ ವರ್ಗಾವಣೆ ಮಾಡಲಾಗಿದೆ ಎನ್ನಲಾಗಿದ್ದು, ಅವರು ಸಿಎಂ ಆಪ್ತ ಕಾರ್ಯದರ್ಶಿಯಾಗಿರುವ ಹಿರಿಯ ಅಧಿಕಾರಿ ರವಿ ಕುಮಾರ್ ಅವರೊಂದಿಗೆ ವಾಸ್ತವಾಂಶ ಹೇಳಿಕೊಂಡರೂ ಯಾರೂ ಅವರ ದೂರಿಗೆ ಸ್ಪಂದಿಸಿಲ್ಲ ಎಂಬ ವರದಿಗಳಿವೆ. ಕೇಂದ್ರದಿಂದ ಹಣ ತರಲಾಗದ ತನ್ನ ವೈಫಲ್ಯವನ್ನು ಮುಚ್ಚಿಕೊಳ್ಳಲು ಹೀಗೆ ಬಡಪಾಯಿ ಕಾರ್ಮಿಕರ ಭವಿಷ್ಯಕ್ಕಾಗಿ ಕಾಯ್ದಿಟ್ಟ ಹಣವನ್ನೂ ಬಾಚಿಕೊಳ್ಳಲು ಮುಂದಾಗಿರುವ ಸರ್ಕಾರದ ಕ್ರಮವನ್ನು ಪ್ರಶ್ನಿಸಿದ್ದಕ್ಕೆ ಪ್ರಾಮಾಣಿಕ ಅಧಿಕಾರಿಗಳಿಗೆ ವರ್ಗಾವಣೆಯ ಶಿಕ್ಷೆ ನೀಡಲಾಗಿದೆ!
ಇನ್ನೊಂದು ಸ್ವಾರಸ್ಯಕರ ಸಂಗತಿಯೆಂದರೆ; ಆಗಸ್ಟ್ ಮೊದಲ ವಾರ ಪ್ರವಾಹ ಪರಿಸ್ಥಿತಿ ತೀವ್ರವಾಗಿದ್ದಾಗ ಕೇಂದ್ರದಿಂದ ದೊರೆತಿದೆ ಎನ್ನಲಾದ 140 ಕೋಟಿ ಪ್ರವಾಹ ಪರಿಹಾರ ಕೂಡ ಈ ವರ್ಷದ ಪ್ರವಾಹಕ್ಕೆ ಸಂಬಂಧಿಸಿದ್ದಲ್ಲ. ಬದಲಾಗಿ ಅದು ಕಳೆದ ವರ್ಷದ ಪ್ರವಾಹ ಪರಿಹಾರ ನಿಧಿಯ ಕಂತು ಎಂಬುದು. ಅಲ್ಲದೆ, ಕಳೆದ ಬಾರಿಯ ಘೋಷಿತ ಪರಿಹಾರದ ಪೈಕಿಯೇ ಇನ್ನೂ 1029.39 ಕೋಟಿ ರೂ. ಕೇಂದ್ರದಿಂದ ಬಿಡುಗಡೆಯಾಗಬೇಕಿದೆ. ಆ ಹಣ ಬಿಡುಗಡೆಯ ಬಗ್ಗೆ ಆಗಸ್ಟ್ 20ರಂದು ಅಮಿತ್ ಶಾ ನೇತೃತ್ವ ಉನ್ನತ ಸಮಿತಿ ನಿರ್ಧಾರ ಕೈಗೊಂಡು ತಿಂಗಳು ಕಳೆದರೂ ಇನ್ನೂ ಹಣ ಬಿಡುಗಡೆಯಾಗಿಲ್ಲ. ಈ ನಡುವೆ, ಈ ಬಾರಿಯ ಭೀಕರ ಪ್ರವಾಹದ ಅಂದಾಜು ನಷ್ಟ 38 ಸಾವಿರ ಕೋಟಿ ರೂ ಎಂದು ರಾಜ್ಯ ಸರ್ಕಾರ ವರದಿ ಸಲ್ಲಿಸಿದ್ದರೂ, ಸಿಎಂ ಯಡಿಯೂರಪ್ಪ ಸದ್ಯಕ್ಕೆ ಕನಿಷ್ಠ ಎರಡು ಸಾವಿರ ಕೋಟಿಯಷ್ಟಾದರೂ ಬಿಡುಗಡೆ ಮಾಡಿ ಎಂದು ದೈನೇಸಿಯಾಗಿ ಬೇಡಿಕೊಂಡಿದ್ದಾರೆ. ಆದರೆ, ಕಳೆದ ವರ್ಷದ ಪ್ರವಾಹ ಪರಿಹಾರ ಘೋಷಣೆಯ ಹಣವನ್ನೇ ಇನ್ನೂ ನೀಡದೇ ಇರುವ ಕೇಂದ್ರದ ಬಿಜೆಪಿ ಸರ್ಕಾರ ಈ ಬಾರಿಯ ಹಣವನ್ನು ನೀಡುತ್ತದೆಯೇ ? ಎಂಬ ಪ್ರಶ್ನೆ ಎದ್ದಿದೆ.
ಈ ನಡುವೆ, ರಾಜ್ಯದ ಪ್ರವಾಹ ಪರಿಸ್ಥಿತಿಯನ್ನು ತಮ್ಮ ಕೇಂದ್ರದ ನಾಯಕರಿಗೆ ವಿವರಿಸಿ, ಭೀಕರ ಪರಿಸ್ಥಿತಿಯ ಹಿನ್ನೆಲೆಯಲ್ಲಿ ದುರಂತವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸುವಂತೆ ಅಥವಾ ಪರಿಹಾರ ಮತ್ತು ಪುನರ್ವಸತಿಗೆ ಅನುಕೂಲವಾಗುವಂತೆ ಹಾಲಿ ಇರುವ ಕಠಿಣ ರಾಷ್ಟ್ರೀಯ ವಿಪತ್ತು ಪರಿಹಾರ ನಿಯಮಗಳನ್ನು ಸಡಿಲಿಸಿ ಹೆಚ್ಚಿನ ನೆರವು ಘೋಷಿಸುವಂತೆ ಒತ್ತಡ ಹೇರಬೇಕಿದ್ದ ರಾಜ್ಯದ ಸಂಸದರು, ಬಹುತೇಕ ಎರಡು ತಿಂಗಳಿನಿಂದಲೂ ಈ ವಿಷಯದಲ್ಲಿ ಮೌನಕ್ಕೆ ಶರಣಾಗಿದ್ದಾರೆ.
ಅದರಲ್ಲೂ 28 ಸಂಸದರ ಪೈಕಿ 25 ಮಂದಿಯನ್ನು ಹೊಂದಿರುವ ಬಿಜೆಪಿಯ ಸರ್ಕಾರವೇ ರಾಜ್ಯ ಮತ್ತು ಕೇಂದ್ರದಲ್ಲಿ ಅಧಿಕಾರದಲ್ಲಿದ್ದರೂ, ಅತಿಹೆಚ್ಚು ಸ್ಥಾನಗಳನ್ನು ತಮಗೆ ನೀಡಿದ ರಾಜ್ಯದ ಜನರ ಬದುಕು ಕೊಚ್ಚಿಹೋಗಿರುವಾಗ 25 ಮಂದಿ ಸಂಸದರ ಪೈಕಿ ಯಾರೊಬ್ಬರೂ ಜನರ ಪರ ಗಟ್ಟಿ ದನಿ ಎತ್ತಿದ್ದೇ ಇಲ್ಲ. ತಮಗೆ ಮತ ಹಾಕಿ ಕಳಿಸಿ ಜನರ ಮತ್ತು ರಾಜ್ಯದ ಪರ ಕೇಂದ್ರದ ಮುಂದೆ ವಕಾಲತು ವಹಿಸಬೇಕಿದ್ದ ಬಿಜೆಪಿ ಸಂಸದರು, ಅದಕ್ಕೆ ಬದಲಾಗಿ ಕೇಂದ್ರದ ಪರವೇ ವಕಾಲತು ವಹಿಸಿ, ರಾಜ್ಯ ಸರ್ಕಾರಕ್ಕೆ ಕೇಂದ್ರ ನೆರವು ನೀಡಬೇಕಿಲ್ಲ. ರಾಜ್ಯದಲ್ಲೇ ಬೇಕಾದಷ್ಟು ಹಣವಿದೆ ಎಂದು ಹೇಳಿಕೆ ನೀಡುತ್ತಿದ್ದಾರೆ. ಅದಕ್ಕೆ ಬೆಂಗಳೂರು ಸಂಸದ ತೇಜಸ್ವಿ ಸೂರ್ಯ ಅವರ ಇತ್ತೀಚಿನ ಹೇಳಿಕೆಯೇ ನಿದರ್ಶನ. ಹಾಗೇ ಉಪಮುಖ್ಯಮಂತ್ರಿ ಡಾ ಅಶ್ವಥನಾರಾಯಣ ಕೂಡ, ಶತಮಾನದಲ್ಲೇ ಭೀಕರ ಪ್ರವಾಹಕ್ಕೆ ತುತ್ತಾಗಿರುವ ರಾಜ್ಯದ ನೆರವಿಗೆ ಧಾವಿಸುವಂತೆ ತಮ್ಮದೇ ಕೇಂದ್ರ ಸರ್ಕಾರವನ್ನು ಒತ್ತಾಯಿಸುವ ಬದಲು, ಶಾಲಾ ಮಕ್ಕಳು ಬೀದಿಬೀದಿ ಅಲೆದು ಸಂತ್ರಸ್ತರಿಗೆ ಪರಿಹಾರ ಹಣ ಸಂಗ್ರಹಿಸಲಿ ಎಂದು ಹೇಳಿದ್ದಾರೆ. ಇದು ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಮಾತನಾಡುವ ಬಿಜೆಪಿ ಸಂಸದರು ಮತ್ತು ಸಚಿವರ ಮನಸ್ಥಿತಿ!
ಇನ್ನು ಮುಖ್ಯಮಂತ್ರಿ ಯಡಿಯೂರಪ್ಪ ಕೂಡ ಈ ವಿಷಯದಲ್ಲಿ ಹಿಂದೆ ಬಿದ್ದಿಲ್ಲ. ‘ಸಂತ್ರಸ್ತರಿಗೆ ಕೂಡಲೇ ಪರಿಹಾರ ನೀಡಲು ನಾವೇನು ನೋಟ್ ಪ್ರಿಂಟಿಂಗ್ ಮಷೀನ್ ಇಟ್ಕೊಂಡಿಲ್ಲ’ ಎಂಬ ಅವರ ಹೇಳಿಕೆ ಈಗಾಗಲೇ ಸಾಕಷ್ಟು ಟೀಕೆ- ಅಪಹಾಸ್ಯಕ್ಕೆ ಈಡಾಗಿದೆ. ಇಂತಹ ಹಾಸ್ಯಾಸ್ಪದ ಹೇಳಿಕೆಗಳ ನಡುವೆ, ಸಂತ್ರಸ್ತರಿಗೆ ಪರಿಹಾರ ನೀಡಲು ಖಜಾನೆ ಖಾಲಿಯಾಗಿದೆ ಎಂದು ವಿವಿಧ ರಾಜ್ಯ ಸರ್ಕಾರಿ ಇಲಾಖೆಗಳ ಅನುದಾನವನ್ನೇ ಪರಿಹಾರ ನಿಧಿಗೆ ಡೈವರ್ಟ್ ಮಾಡುತ್ತಿರುವ ಹೊತ್ತಿನಲ್ಲೇ, ಅನುಭವ ಮಂಟಪ ಸ್ಥಾಪನೆಗೆ ಬರೋಬ್ಬರಿ ಐವತ್ತು ಕೋಟಿ ರೂ. ಅನುದಾನ ಬಿಡುಗಡೆ ಮಾಡಿರುವುದಾಗಿ ಸಿಎಂ ಕಳೆದ ವಾರ ಘೋಷಿಸಿದರು. ಒಂದು ಕಡೆ ನೆರೆ ಸಂತ್ರಸ್ತರು ಎಲ್ಲವನ್ನೂ ಕಳೆದುಕೊಂಡು ಇರಲು ಒಂದು ಅಂಗೈಯಗಲದ ಸೂರು ಕೂಡ ಇಲ್ಲದೆ ಬೀದಿಯಲ್ಲಿ ಬದುಕುತ್ತಿರುವ ಹೊತ್ತಲ್ಲಿ ಅವರಿಗೆ ಕನಿಷ್ಠ ಗುಡಿಸಲು ಕಟ್ಟಲು ಕೂಡ ಸರ್ಕಾರದ ಬಳಿ ಹಣವಿಲ್ಲ ಎಂದು ವಿವಿಧ ಇಲಾಖೆಗಳ ಬಜೆಟ್ ಗೇ ಕೈಹಾಕಿ ಬಾಚಿಕೊಳ್ಳುತ್ತಿರುವ ಹೊತ್ತಲ್ಲಿ ಉಪಚುನಾವಣೆಯ ಜಾತಿ ಓಲೈಕೆಯ ಭಾಗವಾಗಿ ವಾಸ್ತವವಾಗಿ ಜನರ ಬದುಕಿನ ಮೇಲೆ ಯಾವ ಪರಿಣಾಮವನ್ನೂ ಮಾಡದ ಅನುಭವ ಮಂಟಪ ಕಟ್ಟಲು ಭಾರೀ ಅನುದಾನ ಘೋಷಿಸುವ ಮಟ್ಟಿಗಿನ ನಿರ್ಲಜ್ಜ ನಡೆಯನ್ನು ಏನೆಂದು ಕರೆಯುವುದು ಎಂಬುದು ಸಂತ್ರಸ್ತರ ಆಕ್ರೋಶದ ಪ್ರಶ್ನೆ!
ಆದರೆ, ಹೀಗೆ ಒಂದು ಕಡೆ ಸಂತ್ರಸ್ತರಿಗೆ ಪರಿಹಾರ ನೀಡಲು ಸರ್ಕಾರಿ ಇಲಾಖೆಗಳ ಬಜೆಟ್ ಅನುದಾನವನ್ನೇ ಬಾಚಿಕೊಳ್ಳುವಷ್ಟು ದಿವಾಳಿ ಎದ್ದ ಸರ್ಕಾರ, ಮತ್ತೊಂದು ಕಡೆ ಪರಿಸ್ಥಿತಿಯ ಭೀಕರತೆಯನ್ನು ಅರುಹಿ ಕೇಂದ್ರ ನಾಯಕರ ಮನವೊಲಿಸಿಯೋ, ಇಲ್ಲವೇ ಒತ್ತಡ ಹೇರಿಯೋ ಅನುದಾನ ತರಲಾಗದ ಹೊಣೆಗೇಡಿತನ ಪ್ರದರ್ಶಿಸುತ್ತಿದೆ. ಅದು ಸಾಲದು ಎಂಬಂತೆ ಆಡಳಿತ ಪಕ್ಷದ ಸಂಸದರು ಮತ್ತು ಸರ್ಕಾರದ ಭಾಗವಾಗಿರುವ ಸಚಿವರು ತಮ್ಮ ಹೊಣೆ ಮರೆತು ಉದ್ಧಟತನದ, ಧಿಮಾಕಿನ ಮತ್ತು ಅವಿವೇಕಿತನದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಈ ನಡುವೆ ಸ್ವತಃ ಸಿಎಂ, ಸಂತ್ರಸ್ತರಿಗೆ ನೀಡಲು ಹಣವಿಲ್ಲ ಎನ್ನುತ್ತಲೇ ಚುನಾವಣಾ ಗಿಮಿಕ್ ಭಾಗವಾಗಿ ಅಪ್ರಯೋಜಕ ಯೋಜನೆಯೊಂದಕ್ಕೆ ಕೋಟಿಕೋಟಿ ಅನುದಾನ ಘೋಷಿಸುತ್ತಿದ್ದಾರೆ.
ಸಂತ್ರಸ್ತರ ದುರಾದೃಷ್ಟ ಮತ್ತು ಆಡಳಿತರೂಢ ಬಿಜೆಪಿಯ ಅದೃಷ್ಟವೆಂದರೆ, ಇಂತಹ ಸರ್ಕಾರ ಮತ್ತು ಆಡಳಿತ ಪಕ್ಷದ ವರಸೆಗಳ ವಿರುದ್ಧ ಗಟ್ಟಿ ದನಿ ಎತ್ತಬೇಕಾದ ಪ್ರತಿಪಕ್ಷಗಳು ಕೂಡ ಮೆತ್ತಗಾಗಿ ಮೂಲೆ ಸೇರಿರುವುದು! ಹಾಗಾಗಿ, ಸದ್ಯಕ್ಕೆ ರಾಜ್ಯದ ಪ್ರವಾಹ ಸಂತ್ರಸ್ತರ ಬವಣೆಗಳಿಗೆ ಕೊನೆಯಿಲ್ಲ ಎಂಬಂತಾಗಿದೆ.