ಒಂದು ಕಡೆ ರಾಜ್ಯ ಸರ್ಕಾರದಲ್ಲಿ ಹಣವಿಲ್ಲ ಎನ್ನುವ ಮೂಲಕ ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪ ರಾಜ್ಯದ ಪ್ರವಾಹ ಸಂತ್ರಸ್ತರ ಪರಿಹಾರ, ಪುನರ್ವಸತಿಗೆ ಹಿಡಿದ ಗ್ರಹಣ ಬಿಡುವ ಸೂಚನೆ ಇಲ್ಲ ಎಂಬ ಸಂದೇಶ ನೀಡಿದ್ದಾರೆ. ಅದೇ ಹೊತ್ತಿಗೆ, ಪ್ರವಾಹದಲ್ಲಿ ಅರ್ಧ ರಾಜ್ಯವೇ ಕೊಚ್ಚಿಹೋಗಿ ಬರೋಬ್ಬರಿ ಎರಡು ತಿಂಗಳು ಕಳೆದರೂ, ಸ್ವತಃ ಮುಖ್ಯಮಂತ್ರಿಯೇ ಮತ್ತೆಮತ್ತೆ ಗೋಗರೆದರೂ ಬಿಡಿಗಾಸಿನ ಪರಿಹಾರ ನೀಡದ ಪ್ರಧಾನಿ ನರೇಂದ್ರ ಮೋದಿಯವರು, ವಾರಕ್ಕೊಂದು ದೇಶಕ್ಕೆ ಹೋಗಿ ಅವರಿಗೆ ಬಿಲಿಯನ್ ಗಟ್ಟಲೆ ಸಾಲ ಕೊಡುವುದಾಗಿ ಘೋಷಿಸುತ್ತಲೇ ಇದ್ದಾರೆ!
ತಮ್ಮದೇ ಪಕ್ಷ ಸರ್ಕಾರವಿರುವ, ಹಿಂದಿನ ಸಮ್ಮಿಶ್ರ ಸರ್ಕಾರವನ್ನು ಆಪರೇಷನ್ ಕಮಲದ ಮೂಲಕ ಕೆಡವಿ ಅಧಿಕಾರಕ್ಕೇರಿದ ತಮ್ಮದೇ ನಾಯಕ ಯಡಿಯೂರಪ್ಪ ಸಿಎಂ ಆಗಿರುವ ಕರ್ನಾಟಕ ಜುಲೈ ಮೊದಲ ವಾರದಿಂದಲೇ ನೂರು ವರ್ಷಗಳಲ್ಲೇ ಕಂಡರಿಯದ ಪ್ರಮಾಣದ ಭೀಕರ ಪ್ರವಾಹಕ್ಕೆ ತುತ್ತಾಗಿದೆ. ಸಿಎಂ ಯಡಿಯೂರಪ್ಪ ಸ್ವತಃ ಐದು ಬಾರಿ ದೆಹಲಿಗೆ ಬಂದು ತಮ್ಮ ಬಂಗಲೆಯ ಬಾಗಿಲು ಕಾದು ಪ್ರವಾಹ ಪರಿಹಾರ ಘೋಷಣೆ ಮಾಡಿ ಎಂದು ಅಂಗಾಲಾಚಿದ್ದಾರೆ. ಗೃಹ ಸಚಿವ ಹಾಗೂ ತಮ್ಮ ಮಿತ್ರ ಅಮಿತ್ ಶಾ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಖುದ್ದು ಪ್ರವಾಹ ಪ್ರದೇಶ ಸಮೀಕ್ಷೆ ಮಾಡಿ ವರದಿ ನೀಡಿದ್ದಾರೆ. ಸಾಲದು ಎಂಬಂತೆ ಎನ್ ಡಿಆರ್ ಎಫ್ ತಂಡ ತನ್ನದೆ ಹಾನಿ ಅಂದಾಜು ವರದಿ ಸಲ್ಲಿಸಿದೆ. ಅದೂ ಸಾಲದೆಂಬಂತೆ ಕೇಂದ್ರದ ವಿಶೇಷ ತಂಡ ಪ್ರವಾಸ ಮಾಡಿ ಅಧ್ಯಯನ ನಡೆಸಿ ಹಾನಿ ವರದಿ ಸಲ್ಲಿಸಿದೆ. ಅಲ್ಲದೆ, ಸಹಜವಾಗೇ ಕರ್ನಾಟಕ ಸರ್ಕಾರ ಕೂಡ ತನ್ನದೇ ಸಮೀಕ್ಷೆ ನಡೆಸಿ ಹಾನಿ ವರದಿ ತಯಾರಿಸಿ ಬರೋಬ್ಬರಿ 38 ಸಾವಿರ ಕೋಟಿ ನಷ್ಟವಾಗಿದೆ ಎಂದು ವರದಿ ಸಲ್ಲಿಸಿ ಪರಿಹಾರ ಪ್ಯಾಕೇಜ್ ಘೋಷಣೆಗೆ ದಮ್ಮಯ್ಯ ಹಾಕಿದೆ!
ಇಷ್ಟಾದರೂ, ಈ ಎರಡು ತಿಂಗಳಲ್ಲಿ ರಷ್ಯಾದಂತಹ ಶ್ರೀಮಂತ ದೇಶಕ್ಕೆ ಬರೋಬ್ಬರಿ 1 ಬಿಲಿಯನ್ ಡಾಲರ್(ಸುಮಾರು 7,200 ಕೋಟಿ ರೂ.) ಹಾಗೂ ಪ್ಯಾಸಿಫಿಕ್ ದ್ವೀಪರಾಷ್ಟ್ರ ಸಮೂಹಕ್ಕೆ ಬರೋಬ್ಬರಿ 150 ಮಿಲಿಯನ್ ಡಾಲರ್(ಸುಮಾರು 1,065 ಕೋಟಿ ರೂ.) ನೆರವು ಘೋಷಿಸಿದ ಪ್ರಧಾನಿ ಮೋದಿ, ಸುಮಾರು ರೂ. ಒಂದು ಲಕ್ಷ ಕೋಟಿಯಷ್ಟು ಭಾರೀ ಹಾನಿ ಅನುಭವಿಸಿರುವ ‘ದಕ್ಷಿಣ ಭಾರತದಲ್ಲಿ ಕಮಲ ಅರಳಿಸಿದ’ ಕರ್ನಾಟಕಕ್ಕೆ ಕೊಟ್ಟಿದ್ದು ಬಿಡಿಗಾಸೂ ಇಲ್ಲ!
ಒಂದು ಕಡೆ, ಅದೇ ಬಿಜೆಪಿಯ ಮುಖ್ಯಮಂತ್ರಿಯೊಬ್ಬರು ಪ್ರವಾಹ ಪರಿಹಾರ ಮತ್ತು ಪುನವರ್ಸತಿ ಕಾರ್ಯಕ್ಕೆ ಸರ್ಕಾರದ ಖಜಾನೆಯಲ್ಲಿ ಹಣವಿಲ್ಲ; ಶಾಲಾ ಮಕ್ಕಳು, ಸಾರ್ವಜನಿಕರು ದೇಣಿಗೆ ನೀಡಿ, ಸರ್ಕಾರಿ ನೌಕರರು ಒಂದು ದಿನ ವೇತನ ನೀಡಿ, ಉದಾರ ದೇಣಿಗೆ ನೀಡಿ ಎಂದು ಬೇಡುತಿದ್ದಾರೆ. ಅದು ಸಾಲದು ಎಂಬಂತೆ ಇದೀಗ ಸರ್ಕಾರದ 39 ಇಲಾಖೆಗಳ ವಿವಿಧ ಯೋಜನೆ- ಯೋಜನೇತರ ಬಜೆಟ್ ಅನುದಾನವನ್ನು ಸಂತ್ರಸ್ತರ ಪರಿಹಾರಕ್ಕೆ ಡೈವರ್ಟ್ ಮಾಡುತ್ತಿದ್ದಾರೆ. ಆದರೆ, ಅದೇ ಹೊತ್ತಿಗೆ ಮತ್ತೊಂದು ಕಡೆ ಅದೇ ಬಿಜೆಪಿಯ ಕೇಂದ್ರ ಸರ್ಕಾರ, ರಾಜ್ಯದ ನೆರವಿಗೆ ಬರುವ ಕಿಂಚಿತ್ತೂ ಕಾಳಜಿ ತೋರಿಸದೆ, ನಾಲ್ಕಾರು ವರದಿಗಳು, ಸಮೀಕ್ಷೆಗಳ ಬಳಿಕವೂ, ಸ್ವತಃ ಸಿಎಂ ಐದು ಬಾರಿ ಪರಿಹಾರ ಕೋರಿ ದೆಹಲಿಗೇ ಬಂದು ಭೇಟಿ ಮಾಡಿ ಮನವರಿಕೆ ಮಾಡಿದ ಬಳಿಕವೂ ಬಿಡಿಗಾಸಿನ ಪರಿಹಾರ ಘೋಷಿಸಿಲ್ಲ; ಪರಿಹಾರ ನೀಡುವ ಕನಿಷ್ಟ ಭರವಸೆಯನ್ನೂ ನೀಡಿಲ್ಲ!
ಇದನ್ನು ಹೇಗೆ ಅರ್ಥಮಾಡಿಕೊಳ್ಳಬೇಕು ಎಂಬುದು ಸಂತ್ರಸ್ತರಿಗಷ್ಟೇ ಅಲ್ಲ; ಸ್ವತಃ ರಾಜ್ಯ ಸರ್ಕಾರಕ್ಕೂ ಅರ್ಥವಾಗುತ್ತಿಲ್ಲ. ಹಾಗಾಗಿಯೇ ಸ್ವತಃ ಸಿಎಂ ಯಡಿಯೂರಪ್ಪ ಇದೀಗ ರಾಜ್ಯದ ಬಳಿ ಹಣವಿಲ್ಲ, ಕೇಂದ್ರಕ್ಕೆ ಕೇಳುತ್ತಲೇ ಇದ್ದೇವೆ, ಈವರೆಗೆ ಮೊದಲ ಹಂತದ ಹಣವನ್ನೂ ಘೋಷಿಸಿಲ್ಲ. ಎರಡು ತಿಂಗಳಾದರೂ ಅಲ್ಲಿಂದ ಯಾವುದೇ ನೆರವು ಬಂದಿಲ್ಲ ಎಂಬರ್ಥದಲ್ಲಿ ಮಾಧ್ಯಮಗಳ ಮುಂದೆ ತಮ್ಮ ಅಸಹಾಯಕತೆ ತೋಡಿಕೊಂಡಿದ್ದಾರೆ.
ಪ್ರವಾಹದಿಂದಾಗಿ 38 ಸಾವಿರ ಕೋಟಿ ರೂ.ಗಳಷ್ಟು ಹಾನಿಯಾಗಿದೆ ಎಂದು ಕೇಂದ್ರಕ್ಕೆ ಸಲ್ಲಿಸಿರುವ ಹಾನಿ ವರದಿಯಲ್ಲಿ ಸರ್ಕಾರ ಹೇಳಿದ್ದರೂ, ವಾಸ್ತವವಾಗಿ ಹಾನಿಯ ಪ್ರಮಾಣ ಸುಮಾರು ಒಂದು ಲಕ್ಷ ಕೋಟಿಯಷ್ಟಿರಬಹುದು ಎಂಬುದು ಸರ್ಕಾರದ ಮೂಲಗಳೇ ಹೇಳುತ್ತಿರುವ ಅಂದಾಜು. ಆದರೆ, ರಾಜ್ಯ ಸರ್ಕಾರ ಈವರೆಗೆ ಮುಖ್ಯಮಂತ್ರಿ ಪರಿಹಾರ ನಿಧಿ ಸೇರಿದಂತೆ ವಿವಿಧ ಮೂಲಗಳಿಂದ ಈವರೆಗೆ ಪ್ರವಾಹ ಪರಿಹಾರಕ್ಕೆ ನೀಡಿರುವ ಒಟ್ಟು ಮೊತ್ತ ಕೇವಲ 2500 ಕೋಟಿ ರೂ ಮಾತ್ರ. ಆ ಮೊತ್ತದಲ್ಲಿ ಈವರೆಗೆ ತುರ್ತು ರಸ್ತೆ ದುರಸ್ತಿ, ಸೇತುವೆ ರಿಪೇರಿ, ಕೆರೆಕಟ್ಟೆ, ಕಾಲುವೆ ದುರಸ್ತಿ, ಸಂತ್ರಸ್ತರಿಗೆ ಗಂಜಿಕೇಂದ್ರ, ಮತ್ತು ಮುಖ್ಯವಾಗಿ ಮನೆ ಕಳೆದುಕೊಂಡವರಿಗೆ ತಲಾ ಹತ್ತು ಸಾವಿರ ರೂ. ತುರ್ತು ಪರಿಹಾರ ಧನ ವಿತರಿಸಲಾಗಿದೆ.
ಸರ್ಕಾರ ಎಷ್ಟು ಮಂದಿಗೆ ತಲಾ ಹತ್ತು ಸಾವಿರ ವಿತರಿಸಲಾಗಿದೆ ಎಂಬ ಬಗ್ಗೆ ಸ್ಪಷ್ಟ ಅಂಕಿಅಂಶ ನೀಡಿಲ್ಲ. ಆದರೆ, ಒಂದು ಅಂದಾಜಿನ ಪ್ರಕಾರ ಉತ್ತರ ಕರ್ನಾಟಕ ಭಾಗದಲ್ಲಿ ಈ ತುರ್ತು ಪರಿಹಾರ, ಮನೆ ಕಳೆದುಕೊಂಡು ಬೀದಿಪಾಲಾಗಿರುವ ಅರ್ಧದಷ್ಟು ಮಂದಿಗೂ ಇನ್ನೂ ತಲುಪಿಲ್ಲ. ಇನ್ನು ಮನೆ-ಕೊಟ್ಟಿಗೆ ಪುನರ್ ನಿರ್ಮಾಣ, ಕೆಲವು ಕಡೆ ಇಡೀ ಊರಿಗೆ ಊರೇ ಕೊಚ್ಚಿಹೋಗಿದ್ದು, ಹೊಸದಾಗಿ ಕಾಲೊನಿಗಳ ನಿರ್ಮಾಣ, ಬೆಳೆ ಹಾನಿ ಪರಿಹಾರ, ಜನ-ಜಾನುವಾರು ಜೀವ ಹಾನಿಗೆ ಪರಿಹಾರ, ಕೆರೆ ಕಟ್ಟೆ ಸಂಪೂರ್ಣ ದುರಸ್ತಿ, ರಸ್ತೆ- ಸೇತುವೆ ನಿರ್ಮಾಣ ಮುಂತಾದ ಪರಿಹಾರ ಕಾರ್ಯಗಳಿಗೆ ಬೇಕಾಗುವ ಮೊತ್ತಕ್ಕೆ ಸರ್ಕಾರದ ಖಜಾನೆಯಲ್ಲಿ ನಿಧಿ ಇಲ್ಲ! ಹಾಗಾಗಿ ಮುಖ್ಯಮಂತ್ರಿ ಪದೇಪದೇ ಕೇಂದ್ರದ ಮುಂದೆ ದಮ್ಮಯ್ಯಾ ಗುಡ್ಡೆಹಾಕುತ್ತಿದ್ದಾರೆ.
ಸುಮಾರು ಎರಡು ತಿಂಗಳ ಕಾಲ ನಿರಂತರ ಪ್ರಯತ್ನದ ಹೊರತಾಗಿಯೂ ಕೇಂದ್ರದ ತಮ್ಮದೇ ಸರ್ಕಾರದಿಂದ, ತಮ್ಮದೇ ನಾಯಕರಿಂದ ಯಾವುದೇ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ಇದೀಗ ಕಳೆದ ಮೂರ್ನಾಲ್ಕು ದಿನಗಳಿಂದ ಸಿಎಂ ಮಾಧ್ಯಮಗಳ ಮುಂದೆ ತಮ್ಮ ಅಸಹಾಯಕತೆ ತೋಡಿಕೊಳ್ಳತೊಡಗಿದ್ದಾರೆ. ಕೇಂದ್ರ ನಾಯಕರ ವಿರುದ್ಧ ಅವರು ಆಡಲೂ ಆಗದ, ಅನುಭವಿಸಲೂ ಆಗದ ಅಡಕತ್ತರಿಯಲ್ಲಿ ಸಿಲುಕಿರುವುದು ಅವರ ಮಾತುಗಳಲ್ಲೇ ವ್ಯಕ್ತವಾಗುತ್ತಿದೆ.
ಈ ನಡುವೆ, ಬಿಜೆಪಿ ಕೇಂದ್ರ ನಾಯಕರು ರಾಜ್ಯಕ್ಕೆ ನಯಾಪೈಸೆ ಪರಿಹಾರ ನೀಡದೇ ಇರುವುದರ ಹಿಂದೆ ಯಾವ ಲೆಕ್ಕಾಚಾರಗಳಿವೆ ಅಥವಾ ತಂತ್ರಗಾರಿಕೆ ಇರಬಹುದು ಎಂಬ ಬಗ್ಗೆ ಕೂಡ ಸ್ವತಃ ಬಿಜೆಪಿಯ ಒಳಗೇ ಲೆಕ್ಕಾಚಾರಗಳು ಆರಂಭವಾಗಿವೆ. ಮೂಲತಃ ಯಡಿಯೂರಪ್ಪ ಅವರು ಇನ್ನೇನು ಪರಸ್ಪರ ಕಚ್ಚಾಟದಲ್ಲಿ ತಾನಾಗಿಯೇ ಬಿದ್ದುಹೋಗುವ ಹಂತದಲ್ಲಿದ್ದ ಕಾಂಗ್ರೆಸ್- ಜೆಡಿಎಸ್ ಸರ್ಕಾರದ ಪತನದವರೆಗೆ ಕಾಯದೆ, ತಮ್ಮ ಒಪ್ಪಿಗೆ ಇಲ್ಲದೆಯೂ ಆಪರೇಷನ್ ಕಮಲ ಮಾಡಿ ಶಾಸಕರ ರಾಜೀನಾಮೆ ಕೊಡಿಸಿ ಸರ್ಕಾರ ರಚನೆಗೆ ಇನ್ನಿಲ್ಲದ ಅವಸರ ಮಾಡಿದರು. ಅದರಿಂದಾಗಿ ಪಕ್ಷಕ್ಕೆ ರಾಷ್ಟ್ರಮಟ್ಟದಲ್ಲಿ ಕಳಂಕ ಅಂಟಿತು. ಜೊತೆಗೆ ಇದೀಗ ಭೀಕರ ಪ್ರವಾಹ ಪರಿಸ್ಥಿತಿಯನ್ನು ನಿಭಾಯಿಸಲಾಗದೆ ಜನರ ಆಕ್ರೋಶ ಎದುರಿಸಬೇಕಾಗಿದೆ ಎಂಬ ಅಸಮಾಧಾನ ಪಕ್ಷದ ಮೋದಿ-ಶಾ ಜೋಡಿಯದ್ದು ಎನ್ನಲಾಗುತ್ತಿದೆ.
ಒಂದು ಕಡೆ ಇಡೀ ದೇಶದ ಆರ್ಥಿಕ ಬಿಕ್ಕಟ್ಟು ಒಂದೊಂದೆ ವಲಯದಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸುತ್ತಿದೆ. ಅದನ್ನು ನಿಭಾಯಿಸುವುದೇ ದೊಡ್ಡ ಸವಾಲಾಗಿದ್ದು, ಸರ್ಕಾರಿ ಖಜಾನೆ ಖಾಲಿಯಾಗಿ ಆರ್ ಬಿಐನಿಂದ ಅದರ ಮೀಸಲು ನಿಧಿಯಲ್ಲೇ 1.76 ಲಕ್ಷ ಕೋಟಿ ರೂಪಾಯಿಗಳನ್ನು ಒತ್ತಾಯಪೂರ್ವಕವಾಗಿ ಪಡೆಯಲಾಗಿದೆ. ಇಂತಹ ಸ್ಥಿತಿಯಲ್ಲಿ ಪ್ರವಾಹ ಪರಿಹಾರ ಘೋಷಣೆಗೂ ಖಜಾನೆಯಲ್ಲಿ ಹಣವಿಲ್ಲದ ಪರಿಸ್ಥಿತಿ ಇದೆ. ಹಾಗಾಗಿ ಯಡಿಯೂರಪ್ಪ ತಾಳ್ಮೆಯಿಂದ ಒಂದೆರಡು ತಿಂಗಳು ಕಾದಿದ್ದರೆ, ಪ್ರವಾಹ ಪರಿಸ್ಥಿತಿ ನಿಭಾಯಿಸಲಾಗದೆ ಜನರ ಆಕ್ರೋಶ ಎದುರಿಸುವ ಸರದಿ ಮೈತ್ರಿ ಸರ್ಕಾರದ್ದೇ ಆಗುತ್ತಿತ್ತು. ಆಗ, ಅವರ ವೈಫಲ್ಯವನ್ನೇ ಮುಂದಿಟ್ಟುಕೊಂಡು ರಾಜ್ಯಾದ್ಯಂತ ಜನಾಂದೋಲ ಮಾಡಿ ಸರ್ಕಾರವನ್ನು ಕೆಡವುವ ಅವಕಾಶವೂ ಇತ್ತು. ಅದನ್ನು ಕಳೆದುಕೊಂಡರು ಎಂಬ ಮಾತುಗಳೂ ದೆಹಲಿ ಮಟ್ಟದಲ್ಲಿವೆ ಎನ್ನಲಾಗುತ್ತಿದೆ.
ಅಲ್ಲದೆ, ಮತ್ತೊಂದು ವಾದದ ಪ್ರಕಾರ; ನೆರೆ ಸಂತ್ರಸ್ತರಿಗೆ ಪರಿಹಾರ ಘೋಷಿಸಲು ಉಪ ಚುನಾವಣೆಗಾಗಿ ಕಾಯುತ್ತಿದ್ದಾರೆ. ಚುನಾವಣೆ ಘೋಷಣೆಯಾಗಿದ್ದರೂ ಪ್ರವಾಹ ಪರಿಹಾರ ಮತ್ತು ಪುನರ್ವಸತಿಗೆ ನೀತಿ ಸಂಹಿತಿ ಅನ್ವಯವಾಗುವುದಿಲ್ಲ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿರುವುದರಿಂದ, ಈ ವಾರದಲ್ಲಿ ಪ್ರಧಾನಿ ವಿದೇಶ ಪ್ರವಾಸದಿಂದ ವಾಪಸು ಬರುತ್ತಲೇ ದೊಡ್ಡ ಮೊತ್ತದ ಪರಿಹಾರ ಪ್ಯಾಕೇಜ್ ಘೋಷಣೆ ಮಾಡಲಿದ್ದಾರೆ. ಆ ಮೂಲಕ ಪ್ಯಾಕೇಜ್ ವಿಷಯವನ್ನೇ ಮುಂದಿಟ್ಟುಕೊಂಡು ಉಪಚುನಾವಣೆಯಲ್ಲಿ ಮತ ಬಾಚುವ ಲೆಕ್ಕಾಚಾರ ಕೂಡ ಬಿಜೆಪಿಯ ವರಿಷ್ಠ ಜೋಡಿಯ ತಂತ್ರಗಾರಿಕೆ ಎಂಬುದು.
ಅದು ನಿಜವೆ ಆಗಿದ್ದರೆ, ಪ್ರವಾಹದಲ್ಲಿ ಬದುಕು ಕೊಚ್ಚಿಹೋಗಿ ಜನ ಬೀದಿಪಾಲಾಗಿರುವಾಗ, ಮುಂದಿನ ಬದುಕಿನ ದಿಕ್ಕುಕಾಣದೆ ಸಂತ್ರಸ್ತರು ಆತ್ಮಹತ್ಯೆಯ ಹಾದಿ ಹಿಡಿದಿರುವಾಗ, ಅವರ ನೆರವಿಗೆ ಧಾವಿಸುವ, ಅವರಿಗೆ ಧೈರ್ಯ ತುಂಬುವ ನಿಟ್ಟಿನಲ್ಲಿ ಕೆಲಸ ಮಾಡಬೇಕಾದ ಸರ್ಕಾರಗಳು, ‘ಉರಿವ ಮನೆಯಲ್ಲಿ ಗಳ ಹಿರಿಯುವ ಕೆಲಸ’ ಮಾಡುತ್ತಿರುವುದು ಹೀನಾಯ. ಭಾರತೀಯರಿಗಿಂತ ಬರೋಬ್ಬರಿ ಐದು ಪಟ್ಟು ಹೆಚ್ಚು ತಲಾ ಜಿಡಿಪಿ($10,961 ವರ್ಸಸ್ $ 2,014) ಹೊಂದಿರುವ ರಷ್ಯಾದಂತಹ ದೇಶಕ್ಕೆ ಸಾಲ ಕೊಡಲು ಕೇಂದ್ರ ಸರ್ಕಾರದ ಬಳಿ ಹಣವಿದೆ. ನಮಗಿಂತ ಹೆಚ್ಚು ಐಷಾರಾಮಿ ಜೀವನ ಮಟ್ಟ ಹೊಂದಿರುವ ಪ್ಯಾಸಿಫಿಕ್ ದ್ವೀಪ ಸಮೂಹ ರಾಷ್ಟ್ರಗಳಿಗೆ ಆರ್ಥಿಕ ನೆರವು(ಸಾಲ) ಘೋಷಿಸಲು ಸರ್ಕಾರಿ ಖಜಾನೆ ತುಂಬಿದೆ. ಆದರೆ, ಅದೇ ಹೊತ್ತಿಗೆ ತನ್ನದೇ ದೇಶದ ಅತಿ ಹೆಚ್ಚು ತೆರಿಗೆ ಕೊಡುಗೆ ನೀಡುವ ರಾಜ್ಯವೊಂದರಲ್ಲಿ ಭೀಕರ ಪ್ರವಾಹದಿಂದ ಜನ ಬೀದಿಗೆ ಬಿದ್ದರೆ ಅವರ ಕಣ್ಣೀರು ಒರೆಸಲು ಬಿಡಿಗಾಸಿನ ನೆರವು ಕೊಡಲೂ ಖಜಾನೆ ಬರಿದಾಗಿದೆ ಎಂದರೆ, ಇದನ್ನು ಏನೆಂದು ಕರೆಯುವುದು? ಜನರ ಕಣ್ಣೀರಿನಲ್ಲೂ ರಾಜಕೀಯ ಲಾಭನಷ್ಟದ ಲೆಕ್ಕಾಚಾರದಲ್ಲಿ ಮುಳುಗಿರುವ, ತನ್ನದೇ ಜನಗಳ ಕಣ್ಣೀರು ಒರೆಸಲು ಕನಿಷ್ಟ ಒಂದೆರಡು ಸಾವಿರ ಕೋಟಿ ನೆರವು ನೀಡದ ಸರ್ಕಾರ, ತನಗೆ ಸಂಬಂಧವೇ ಪಡದ ಶ್ರೀಮಂತ ದೇಶಗಳಿಗೆ ಸಾವಿರಾರು ಕೋಟಿ ನೆರವು, ಸಾಲ ಘೋಷಣೆ ಮಾಡುತ್ತಿರುವುದಕ್ಕಿಂತ ಅಮಾನವೀಯ, ಜನದ್ರೋಹದ ಕೃತ್ಯ ಇನ್ನೇನಿದೆ ಹೇಳಿ.
ಅದೂ, ಸಬ್ ಕಾ ಸಾಥ್ ಸಬ್ ಕಾ ವಿಕಾಸ್, ಅಚ್ಛೇದಿನ, ದೇಶಪ್ರೇಮ, ಹಿಂದುತ್ವದ ಮಾತುಗಳನ್ನೇ ಬಂಡವಾಳ ಮಾಡಿಕೊಂಡು ಅದೇ ಅಲೆಯ ಮೇಲೆ ಅಧಿಕಾರಕ್ಕೆ ಬಂದ ಪಕ್ಷವೇ ತನ್ನ ಜನರ ವಿರುದ್ಧ ಇಂತಹ ಕಠಿಣ ನಿಲುವು ತಳೆಯುವುದನ್ನು ಯಾವ ರೀತಿಯ ದೇಶಪ್ರೇಮ ಎನ್ನಬಹುದು? ಯಾವ ರೀತಿಯ ಅಚ್ಛೇದಿನ್ ಇದು? ರಷ್ಯಾದಲ್ಲಿ, ಪ್ಯಾಸಿಫಿಕ್ ದ್ವೀಪಗಳಲ್ಲಿ ಹೋಗಿ ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ಎನ್ನುವ ಪ್ರಧಾನಿ ಮೋದಿಯವರಿಗೆ, ತಮ್ಮದೇ ಕರ್ನಾಟಕದ ಜನ ತಮ್ಮವರು ಎನಿಸಲಿಲ್ಲವೇ? ಕನ್ನಡಿಗರ ವಿಷಯದಲ್ಲಿ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಭಾವನೆ ಬರಲಿಲ್ಲವೇಕೆ? ಕರ್ನಾಟಕ ಭಾರತದ ಭಾಗವಲ್ಲವಾ? ‘ದೇಶಕ್ಕಾಗಿ ಮೋದಿ, ಮೋದಿಗಾಗಿ ನಾವು’ ಎಂದು ಚುನಾವಣೆಯಲ್ಲಿ ಸನ್ನಿಗೆ ಬಿದ್ದವರಂತೆ ಮತ ಹಾಕಿ, ಒಟ್ಟು 28 ಲೋಕಸಭಾ ಕ್ಷೇತ್ರಗಳ ಪೈಕಿ 25 ಸ್ಥಾನಗಳನ್ನು ಬಿಜೆಪಿಗೆ ಗೆಲ್ಲಿಸಿಕೊಟ್ಟ ಕರ್ನಾಟಕದ ಜನರ ವಿಷಯದಲ್ಲಿ, ‘ದೇಶಕ್ಕಾಗಿ ನಾನು, ನಿಮಗಾಗಿ ನಾವು’ ಎಂದು ಬಿಜೆಪಿ ಪಕ್ಷ ನಿಲ್ಲಲಿಲ್ಲ ಏಕೆ?
ಇಂತಹ ಪ್ರಶ್ನೆಗಳು ಕೊಚ್ಚಿಹೋಗಿರುವ ಊರುಗಳ ಓಣಿ-ಓಣಿಗಳಲ್ಲಿ ಮಾರ್ದನಿಸುತ್ತಿವೆ. ಆದರೆ, ಆ ಪ್ರಶ್ನೆಗಳಿಗೆ ಉತ್ತರ ನೀಡಬೇಕಾದವರು, ಪ್ರಶ್ನೆಗಳಿಗೂ ಕಿವುಡಾಗಿದ್ದಾರೆ. ಮತ ಹಾಕಿದ ಜನರ ಸಂಕಷ್ಟಕ್ಕೂ ಕುರುಡಾಗಿದ್ದಾರೆ. ಆದರೆ, ರಷ್ಯಾ ಮತ್ತು ಪ್ಯಾಸಿಫಿಕ್ ದೇಶಗಳ ಜನರ ಉದ್ಧಾರದ ಬಗ್ಗೆ ಅತೀವ ಕಾಳಜಿಯಿಂದ ಮಿಡಿಯುತ್ತಿರುವ ಪ್ರಧಾನಿ ಮೋದಿಯವರು, ಇದೀಗ ಅಂತಾರಾಷ್ಟ್ರೀಯ ಮಟ್ಟಕ್ಕೆ ತಮ್ಮ ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ಘೋಷಣೆಯನ್ನು ವಿಸ್ತರಿಸಿದ್ದಾರೆ!