ಕಳೆದ ವಾರಷ್ಟೇ ಘೋಷಣೆಯಾಗಿದ್ದ ರಾಜ್ಯದ 15 ಕ್ಷೇತ್ರಗಳ ಉಪ ಚುನಾವಣೆಗೆ ಸುಪ್ರೀಂಕೋರ್ಟ್ ತಡೆಯೊಡ್ಡುವ ಮೂಲಕ ಮೇಲ್ನೋಟಕ್ಕೆ ಆಪರೇಷನ್ ಕಮಲದ ಫಲಾನುಭವಿ ಅನರ್ಹ ಶಾಸಕರು ನಿರಾಳರಾದಂತೆ ಕಾಣುತ್ತಿದೆ. ತಮ್ಮ ಅನರ್ಹತೆ ಪ್ರಶ್ನಿಸಿರುವ ಅರ್ಜಿ ವಿಚಾರಣೆಗೆ ಮುಂಚೆಯೇ ಚುನಾವಣಾ ಪ್ರಕ್ರಿಯೆ ಆರಂಭದಾದರೆ ತಮಗೆ ಚುನಾವಣಾ ಕಣಕ್ಕಿಳಿಯುವ ಅವಕಾಶವೇ ಕೈತಪ್ಪಬಹುದು ಎಂಬ ಆತಂಕದಲ್ಲಿ ಅವರಿಗೆ, ನ್ಯಾಯಾಲಯದ ಇಂದಿನ ಆದೇಶ ದೊಡ್ಡ ರಿಲೀಫ್ ನೀಡಿದೆ ಎಂಬುದು ಸ್ವತಃ ಅನರ್ಹರೂ ಸೇರಿದಂತೆ ಬಹುತೇಕ ರಾಜಕೀಯ ಆಸಕ್ತರ ಲೆಕ್ಕಾಚಾರ ಕೂಡ ಆಗಿದೆ.
ಆದರೆ, ವಾಸ್ತವವಾಗಿ ಸುಪ್ರೀಂಕೋರ್ಟಿನ ಈ ಐತಿಹಾಸಿಕ ಆದೇಶದಿಂದಾಗಿ ನಿಜವಾಗಿಯೂ ಲಾಭವಾಗಿರುವುದು ಅನರ್ಹರಿಗಲ್ಲ; ಬದಲಾಗಿ ಬಿಜೆಪಿಗೆ. ಏಕೆಂದರೆ, ನ್ಯಾಯಾಲಯದ ಈ ಒಂದು ಆದೇಶ, ಬಿಜೆಪಿಯ ಮುಂದಿದ್ದ ಹಲವು ಸವಾಲುಗಳನ್ನು ಏಕಕಾಲಕ್ಕೆ ನಿವಾಳಿಸಿ ಒಗೆದಿದೆ.
ಆ ಪೈಕಿ ಮೊದಲನೆಯದು; ದಿಢೀರ್ ಉಪ ಚುನಾವಣೆ ಘೋಷಣೆಯಾಗುತ್ತಲೇ ಹದಿನೈದೂ ವಿಧಾನಸಭಾ ಕ್ಷೇತ್ರಗಳಲ್ಲಿ ಅನರ್ಹ ಶಾಸಕರು ಇಲ್ಲವೇ ಅವರ ಮನೆಮಂದಿಯಲ್ಲಿ ಯಾರಿಗಾದರೂ ಟಿಕೆಟ್ ನೀಡಿ ಕಣಕ್ಕಿಳಿಸಲು ಬಿಜೆಪಿ ನಾಯಕರು ಮಾತುಕತೆ ನಡೆಸುವ ಹೊತ್ತಿಗಾಗಲೇ ಬಹುತೇಕ ಎಲ್ಲಾ ಕಡೆ ದೊಡ್ಡ ಮಟ್ಟದಲ್ಲಿ ಕಾರ್ಯಕರ್ತರು ಮತ್ತು ಸ್ಥಳೀಯ ನಾಯಕರ ಪ್ರತಿರೋಧ ವ್ಯಕ್ತವಾಗಿತ್ತು. ಈ ಬಂಡಾಯವನ್ನು ಶಮನ ಮಾಡುವುದು ಬಿಜೆಪಿ ವರಿಷ್ಠರಿಗೆ ದೊಡ್ಡ ತಲೆನೋವಾಗಿತ್ತು. ಆ ಹಿನ್ನೆಲೆಯಲ್ಲಿಯೇ ಕಳೆದ ಮೂರು ದಿನಗಳಿಂದ ಮೇಲಿಂದ ಮೇಲೆ ಸಭೆ ನಡೆಸಿದರೂ ಅಭ್ಯರ್ಥಿಗಳ ಪಟ್ಟಿ ಅಂತಿಮದ ವಿಷಯದಲ್ಲಿ ಯಾವುದೇ ನಿರ್ಧಾರ ಕೈಗೊಳ್ಳದೆ, ನ್ಯಾಯಾಲಯದ ಆದೇಶಕ್ಕಾಗಿ ಕಾಯಲಾಗಿತ್ತು. ಇದೀಗ ನ್ಯಾಯಾಲಯ ಚುನಾವಣೆಗೇ ಬ್ರೇಕ್ ಹಾಕಿರುವುದರಿಂದ ಸಹಜವಾಗೇ ಬಂಡಾಯದ ಬೆಂಕಿಗೆ ತಣ್ಣೀರು ಸುರಿದಂತಾಗಿದ್ದು, ಬಿಜೆಪಿ ವರಿಷ್ಠರು ನಿರಾಳರಾಗಿದ್ದಾರೆ.
ಇದಕ್ಕಿಂತಲೂ ಬಿಜೆಪಿ ವರಿಷ್ಠರಿಗೆ ನಿರಾಳ ತಂದ ಮತ್ತೊಂದು ಸಂಗತಿಯೆಂದರೆ; ಅದು ಅನರ್ಹ ಶಾಸಕರಿಗೆ ಸಂಪುಟದಲ್ಲಿ ಸ್ಥಾನ ಕೊಡಬೇಕಾದ ತಲೆನೋವು ತಪ್ಪಿರುವುದು. ಹೌದು, ಆಪರೇಷನ್ ಕಮಲದ ಮೂಲಕ ಕಾಂಗ್ರೆಸ್ ಮತ್ತು ಜೆಡಿಎಸ್ ನ 17 ಮಂದಿ ಶಾಸಕರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಆಡಳಿತ ಮೈತ್ರಿಯನ್ನು ಅಲ್ಪಮತಕ್ಕೆ ಕುಸಿಯುವಂತೆ ಮಾಡಿದ್ದರು. ಅವರ ಆ ಕೃತ್ಯದ ಹಿನ್ನೆಲೆಯಲ್ಲಿಯೇ ಬಿ ಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಈ ವಿಧಾನಸಭೆಯ ಅವಧಿಯಲ್ಲಿ ಎರಡನೇ ಬಾರಿಗೆ ಸರ್ಕಾರ ರಚನೆ ಮಾಡಿ, ಬಹಮತ ಸಾಬೀತುಪಡಿಸುವಲ್ಲಿಯೂ ಯಶಸ್ವಿಯಾಗಿದ್ದರು. ಆದರೆ, ಅನರ್ಹ ಶಾಸಕರ ಆ ಕೊಡುಗೆಯ ಋಣ ತೀರಿಸಲು ಅವರೊಂದಿಗೆ ಮಾಡಿಕೊಂಡ ಒಪ್ಪಂದದಂತೆ ಅವರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಬೇಕಾದ ಇಕ್ಕಟ್ಟು ಬಿಜೆಪಿಗಿತ್ತು. ಆದರೆ, ಇದೀಗ ಅವರ ಅನರ್ಹತೆಯ ಅರ್ಜಿ ವಿಚಾರಣೆಗೆ ಮುಂಚೆಯೇ ಚನಾವಣೆಗೇ ತಡೆಯಾಜ್ಞೆ ಬಿದ್ದಿರುವುದರಿಂದ ಸದ್ಯಕ್ಕೆ ಬೀಸೋ ದೊಣ್ಣೆಯಿಂದ ಬಿಜೆಪಿ ಪಾರಾಗಿದೆ.
ಅಲ್ಲದೆ, ಸದ್ಯದ ವಿಧಾನಸಭಾ ಸ್ಥಾನಬಲದ ಮೇಲೆ ಸರಳ ಬಹುಮತ ಹೊಂದಿರುವ ಬಿಜೆಪಿ ಸರ್ಕಾರ ಈಗಲೂ ಅಪಾಯದಲ್ಲೇ ಇದ್ದರೂ, ಸದ್ಯ ಬಂಡಾಯ ಅಥವಾ ಭಿನ್ನಮತದ ಆತಂಕವಿಲ್ಲ. ಒಂದು ವೇಳೆ 15 ಸ್ಥಾನಗಳಿಗೆ ಚುನಾವಣೆ ನಡೆದಲ್ಲಿ ಆಗ ವಿಧಾನಸಭಾ ಸ್ಥಾನಬಲಕ್ಕೆ ತಕ್ಕಂತೆ ಬಿಜೆಪಿ ಸ್ವಂತ ಬಲವೇ 111ಕ್ಕೆ ಏರಬೇಕಾಗುತ್ತದೆ. ಜೊತೆಗೆ ಬಿಎಸ್ ಪಿ ಶಾಸಕರ ಬೆಂಬಲದೊಂದಿಗೆ ಅಗತ್ಯ ಸರಳ ಬಹುಮತ ಹೊಂದಲಿದೆ. ಅದು ಸಾಧ್ಯವಾಗದೇ ಬಿಜೆಪಿ 15ರ ಪೈಕಿ ಕೇವಲ ಐದು ಕಡೆ ಜಯಗಳಿಸಿದರೆ ಆಗ ಸರ್ಕಾರ ಅಲ್ಪ ಮತಕ್ಕೆ ಕುಸಿಯಲಿದೆ. ಒಂದು ವೇಳೆ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗಳಿಸಿ ಸರ್ಕಾರ ಉಳಿದರೂ ಅನರ್ಹ ಶಾಸಕರು ಮತ್ತು ಪಕ್ಷದ ನಿಷ್ಠಾವಂತ ಹಿರಿಯ ಶಾಸಕರ ನಡುವೆ ಸಂಪುಟ ಸೇರ್ಪಡೆ ಮತ್ತು ಖಾತೆ ಹಂಚಿಕೆ ವಿಷಯದಲ್ಲಿ ಮತ್ತೆ ಬಿಕ್ಕಟ್ಟು ತಲೆದೋರಬಹುದು. ಈಗಾಗಲೇ ತಮಗೆ ಸಚಿವ ಸ್ಥಾನ ನೀಡಲಿಲ್ಲ, ಆಯಕಟ್ಟಿನ ಸ್ಥಾನಮಾನ ಕೊಡಲಿಲ್ಲ ಎಂದು ದಶಕಗಳ ಕಾಲ ಇದ್ದ ಪಕ್ಷವನ್ನೇ ಬಿಟ್ಟುಬಂದು ಸಚಿವ ಸ್ಥಾನಕ್ಕಾಗಿ, ಹಣದ ಆಮಿಶಕ್ಕೆ ಒಳಗಾಗಿ ಬಂದವರು ನಾಳೆ ಇಲ್ಲೂ ಸ್ಥಾನಮಾನ ಸಿಗಲಿಲ್ಲವೆಂದರೆ ಆಗಲೂ ಅದನ್ನೇ ಮಾಡುವುದಿಲ್ಲ ಎಂಬ ಗ್ಯಾರಂಟಿಯೇನಿಲ್ಲ. ಹಾಗಾಗಿ ಹೆಚ್ಚು ಸ್ಥಾನ ಗೆದ್ದರೂ ಸರ್ಕಾರ ಪೂರ್ಣಾವಧಿ ಪೂರೈಸುವ ವಿಶ್ವಾಸ ಬಿಜೆಪಿ ವರಿಷ್ಠರಿಗೇ ಇಲ್ಲ.
ಹಾಗಾಗಿಯೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಆರಂಭದಿಂದಲೂ ಅನರ್ಹ ಶಾಸಕರ ವಿಷಯದಲ್ಲಿ ಉದಾಸೀನ ಧೋರಣೆಯನ್ನೇ ಹೊಂದಿದ್ದರು. ಬಾರಿ ಬಾರಿ ತಮ್ಮನ್ನು ಭೇಟಿ ಮಾಡಲು ದೆಹಲಿಯವರೆಗೆ ಬಂದ ಅವರಿಂದ ಅಂತರ ಕಾಯ್ದುಕೊಂಡಿದ್ದರು. ಈಗಲೂ ಅವರಿಗೆ ಅನರ್ಹರಿಗೆ ಟಿಕೆಟ್ ನೀಡಿ, ಪಕ್ಷದ ಮೂಲ ಕಾರ್ಯಕರ್ತರು ಮತ್ತು ಸ್ಥಳೀಯ ನಾಯಕರ ಆಕ್ರೋಶಕ್ಕೆ, ಬಂಡಾಯಕ್ಕೆ ಪಕ್ಷ ಮತ್ತು ಸಂಘಟನೆಯನ್ನು ಬಲಿಕೊಡಲು ಸಿದ್ಧರಿಲ್ಲ. ಹಾಗಾಗಿ ಈಗ ಚುನಾವಣೆಗೆ ಸುಪ್ರೀಂಕೋರ್ಟ್ ಬ್ರೇಕ್ ಬಿದ್ದಿರುವುದು ಬಿಜೆಪಿಯ ಪಾಲಿಗೆ ಒಂದು ರೀತಿಯಲ್ಲಿ ವರವಾಗಿ ಪರಿಣಮಿಸಿದ್ದು, ಯಡಿಯೂರಪ್ಪ ಆಡಳಿತದ ವರಸೆ ನೋಡಿಕೊಂಡು ಶಾಸಕರ ಅನರ್ಹತೆ ವಿಚಾರಣೆ ಮುಕ್ತಾಯಗೊಂಡು ತೀರ್ಪು ಹೊರಬೀಳುತ್ತಿದ್ದಂತೆ ಫೆಬ್ರವರಿ ಮಾರ್ಚ್ ವೇಳೆಗೆ ಶಾಲಾಕಾಲೇಜು ಪರೀಕ್ಷೆಗಳಿಗೆ ಮನ್ನವೇ ಪೂರ್ಣ ಚುನಾವಣೆಗೆ ಹೋಗುವ ಲೆಕ್ಕಾಚಾರ ಬಿಜೆಪಿ ನಾಯಕರದ್ದು ಎನ್ನಲಾಗುತ್ತಿದೆ.
ಒಟ್ಟಾರೆ ಹೇಗೆ ನೋಡಿದರೂ ಚುನಾವಣೆಗೆ ತಡೆ ನೀಡಿದ ನ್ಯಾಯಾಲಯದ ಆದೇಶ, ವಾಸ್ತವವಾಗಿ ಅನರ್ಹರಿಗೆ ವ್ಯತಿರಿಕ್ತವಾಗಿ, ಬಿಜೆಪಿಗೆ ಪೂರಕವಾಗುವ ಸಾಧ್ಯತೆಗಳೇ ಹೆಚ್ಚಿವೆ. ಆದರೆ, ಬಿಜೆಪಿ ಹೈಕಮಾಂಡ್ ಯೋಚಿಸುವ ಮತ್ತು ಹೆಣೆಯುವ ತಂತ್ರಗಾರಿಕೆಗಳ ಒಳಸುಳಿಯ ಅರಿವಿಲ್ಲದ ಅನರ್ಹರು ಸದ್ಯಕ್ಕೆ ತಡೆಯಾಜ್ಞೆಯನ್ನು ಸಂಭ್ರಮಿಸುತ್ತಿದ್ದು, ಇನ್ನೇನು ಒಂದೆರಡು ದಿನದಲ್ಲೇ ಅವರಿಗೆ ತಮ್ಮ ಸಂಭ್ರಮಕ್ಕೆ ಆಯಸ್ಸು ಹೆಚ್ಚಿಲ್ಲ ಎಂಬುದು ಗೊತ್ತಾಗಲಿದೆ. ಅಷ್ಟರಲ್ಲಿ ಬಿಜೆಪಿ ಹೈಕಮಾಂಡ್ ಅನರ್ಹತೆಯ ಅರ್ಜಿ ವಿಚಾರಣೆಯನ್ನು ಕನಿಷ್ಠ ಇನ್ನು ನಾಲ್ಕು ತಿಂಗಳಾದರೂ ತಳ್ಳಲು ಬೇಕಾದ ಏರ್ಪಾಡು ವ್ಯವಸ್ಥೆ ಮಾಡಲಿದೆ.
ಈ ನಡುವೆ, ಒಮ್ಮೆ ಚುನಾವಣಾ ಆಯೋಗ ಚುನಾವಣೆಯನ್ನು ಘೋಷಿಸಿದ ಬಳಿಕ ನ್ಯಾಯಾಲಯ ಮಧ್ಯ ಪ್ರವೇಶಿಸಿ ತಡೆಯಾಜ್ಞೆ ನೀಡಿರುವ ದೇಶದ ಮೊಟ್ಟಮೊದಲ ಪ್ರಕರಣ ಇದಾಗಿದ್ದು, ಈ ಬಗ್ಗೆ ದೇಶಾದ್ಯಂತ ವ್ಯಾಪಕ ಚರ್ಚೆಗಳು ಆರಂಭವಾಗಿವೆ.
ಹಿಂದಿನ ದಿನವಷ್ಟೇ ಸ್ಪೀಕರ್ ಅಧಿಕಾರ ವ್ಯಾಪ್ತಿಗೆ ಸಂಬಂಧಿಸಿದಂತೆ ಕೆಲವು ಮಾರ್ಗದರ್ಶಿ ಸೂತ್ರಗಳನ್ನು ರೂಪಿಸುವಂತೆ ಸರ್ಕಾರದ ಪರವಾಗಿ ಸಾಲಿಸಿಟರ್ ಜನರಲ್ ಕೋರಿದಾಗ, ಸ್ಪೀಕರ್ ಅವರ ಸಂವಿಧಾನಿಕ ಅಧಿಕಾರದಲ್ಲಿ ತಾನು ತಲೆಹಾಕುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದ ನ್ಯಾಯಪೀಠ, ಮಾರನೇ ದಿನವೇ ಮತ್ತೊಂದು ಸಂವಿಧಾನಿಕ ಸಂಸ್ಥೆಯಾದ ಭಾರತೀಯ ಚುನಾವಣಾ ಆಯೋಗದ ಸ್ವಾಯತ್ತತೆಯನ್ನು ಬದಿಗೊತ್ತಿ ಚುನಾವಣೆಗೆ ತಡೆಯಾಜ್ಞೆ ನೀಡಿರುವುದು ಅಚ್ಚರಿ ಹುಟ್ಟುಹಾಕಿದೆ.
ನ್ಯಾಯಾಲಯ ಇಂದಿನ ತಡೆಯಾಜ್ಞೆ ದೇಶದ ಪ್ರಜಾಪ್ರಭುತ್ವದ ಎರಡು ಉನ್ನತ ಸ್ವಾಯತ್ತ ವ್ಯವಸ್ಥೆಗಳ ನಡುವಿನ ಅಧಿಕಾರ ವ್ಯಾಪ್ತಿಯ ಸಂಘರ್ಷಕ್ಕೆ, ಪರಸ್ಪರರ ಮಿತಿಗಳ ಉಲ್ಲಂಘನೆಯ ಹೊಸ ಪರಿಪಾಠಕ್ಕೆ ಮುನ್ನುಡಿ ಬರೆದಂತಾಗಿದೆ. ಸ್ಪೀಕರ್ ಅಧಿಕಾರ ವ್ಯಾಪ್ತಿಯಲ್ಲಿ ತಾನು ಹಸ್ತಕ್ಷೇಪ ಮಾಡಲಾಗದು. ಅವರು ಹೇಗೆ ವರ್ತಿಸಬೇಕು, ಏನು ಮಾಡಬೇಕು, ಮಾಡಬಾರದು ಎಂಬುದನ್ನು ತಾನು ನಿರ್ದೇಶಿಸಲಾಗದು, ಅದು ಅವರ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಎಂದು ಬುಧವಾರಷ್ಟೇ ಇದೇ ಪ್ರಕರಣದ ವಿಚಾರಣೆ ವೇಳೆ ಹೇಳಿದ್ದ ನ್ಯಾಯಪೀಠ, ಮಾರನೇ ದಿನ ಅಂತಹದ್ದೆ ಮತ್ತೊಂದು ಸ್ವಾಯತ್ತ ಸಂವಿಧಾನಿಕ ಸಂಸ್ಥೆ ಘೋಷಿಸಿದ್ದ ಚುನಾವಣೆಯನ್ನೇ ರದ್ದುಪಡಿಸಿರುವುದು ಎಲ್ಲರ ಹುಬ್ಬೇರಿಸಿದೆ.
ಒಟ್ಟಾರೆ, ರಾಜ್ಯದ ಉಪ ಚುನಾವಣೆಗೆ ಮಧ್ಯಂತರ ತಡೆಯಾಜ್ಞೆ ನೀಡಿದ ನ್ಯಾಯಾಲಯದ ಗುರುವಾರದ ಆದೇಶ, ಸದ್ಯಕ್ಕೆ ಬಿಜೆಪಿಯನ್ನು ನಿರಾಳಗೊಳಿಸಿದ್ದರೆ, ಅನರ್ಹರಿಗೆ ಆತಂಕದ ಸಂದೇಶ ನೀಡಿದೆ. ಜೊತೆಗೆ ದೇಶದ ಪ್ರಜಾಪ್ರಭುತ್ವದ ಆಧಾರ ಸ್ತಂಭಗಳಲ್ಲಿ ಪ್ರಮುಖವಾದ ಎರಡು ಸಂವಿಧಾನಿಕ ಸಂಸ್ಥೆಗಳ ನಡುವೆ(ಚುನಾವಣಾ ಆಯೋಗ ಮತ್ತು ನ್ಯಾಯಾಂಗ) ಅಧಿಕಾರ ವ್ಯಾಪ್ತಿ, ಸ್ವಾಯತ್ತತೆ ಮತ್ತು ಇತಿಮಿತಿಗಳ ಕುರಿತ ಹೊಸ ಚರ್ಚೆಗೆ ಚಾಲನೆ ನೀಡಿದೆ.