ಕರ್ನಾಟಕದಲ್ಲಿ ಅಭಿವೃದ್ಧಿಯ ಪರ್ವವನ್ನೇ ಆರಂಭಿಸುವ ಭರಪೂರ ಭರವಸೆಯ ಮೇಲೆ ಆಪರೇಷನ್ ಕಮಲದ ಮೂಲಕ ಅಧಿಕಾರ ಹಿಡಿದ ಬಿ ಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ, ಕೇವಲ ಎರಡೂವರೆ ತಿಂಗಳಲ್ಲೇ ‘ತಂತಿ ಮೇಲಿನ ನಡಿಗೆ’ ಆರಂಭಿಸಿದೆ!
ಒಂದು ತಿಂಗಳು ಕಾದುನೋಡಿ ರಾಜ್ಯವನ್ನು ಅಭಿವೃದ್ಧಿಯ ಹಳಿಗೆ ತರುತ್ತೇನೆ ಎಂದಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಅಧಿಕಾರದ ಚುಕ್ಕಾಣಿ ಹಿಡಿದು ಮೂರು ತಿಂಗಳಲ್ಲೇ ಅಭಿವೃದ್ಧಿಯ ಹಳಿಯ ಬದಲಾಗಿ, ಸರ್ಕಾರದ ಹಣಕಾಸು ಪರಿಸ್ಥಿತಿ ಸರಿ ಇಲ್ಲ, ಪ್ರವಾಹ ಸಂತ್ರಸ್ತರ ಪುನರ್ವಸತಿಗೆ ನೀಡಲು ಕೂಡ ಹಣವಿಲ್ಲ; ಜನರು ಸಂಕಷ್ಟದಲ್ಲಿರುವ ಜನರ ನೆರವಿಗೆ ಬರಬೇಕು ಎಂದು ಗೋಗರೆದರು. ಅದು ಸಾಲದು ಎಂಬಂತೆ ಇದೀಗ ಮತ್ತೆ ಈಗ ಮುಖ್ಯಮಂತ್ರಿಯಾಗಿ ತಮ್ಮದು ‘ತಂತಿ ಮೇಲಿನ ನಡಿಗೆ’ ಎಂದಿದ್ದಾರೆ!
ಅವರ ಈ ಮಾತು ಏಕಕಾಲಕ್ಕೆ 2008ರಲ್ಲಿನ ಮುಖ್ಯಮಂತ್ರಿಯಾಗಿ ಬಿಎಸ್ ವೈ ಅವರ ಮೊದಲ ಅವಧಿ ಹಾಗೂ 2019ರ ನಡುವೆ ಹಲವು ಮಳೆಗಾಲಗಳು ಬಂದುಹೋಗಿವೆ ಎಂಬುದನ್ನೂ, ಭಾರೀ ಪ್ರವಾಹಕ್ಕೆ ಸಿಲುಕಿ ಕೊಚ್ಚಿಹೋಗಿರುವ ರಾಜ್ಯದ ಸಂತ್ರಸ್ತರ ಪರಿಹಾರ ಮತ್ತು ಪುನರ್ವಸತಿಗೆ ನೀಡಲು ಬಿಡಿಗಾಸೂ ಕೊಡದ ತಮ್ಮದೇ ಕೇಂದ್ರ ಸರ್ಕಾರ ತಮ್ಮನ್ನು ನಡೆಸಿಕೊಳ್ಳುತ್ತಿರುವ ವರಸೆಯ ಪ್ರಮಾಣಪತ್ರವಾಗಿಯೂ ಕಾಣುತ್ತಿದೆ. ಇದು ಮೇಲ್ನೋಟಕ್ಕೆ ಕಾಣುತ್ತಿರುವ ರಾಜ್ಯದ ಮುಖ್ಯಮಂತ್ರಿಯ ಅಸಹಾಯಕತೆ. ಆದರೆ, ಈ ಕಣ್ಣಿಗೆ ರಾಚುವ ಸಂಗತಿಯ ಹಿಂದೆ ತೆರೆಮರೆಯ ಹುನ್ನಾರುಗಳು ಬಹಳಷ್ಟಿವೆ ಮತ್ತು ಯಡಿಯೂರಪ್ಪ ಅವರೇ ಹೇಳಿಕೊಂಡಂತೆ ಅವರ ತಂತಿ ಮೇಲಿನ ನಡಿಗೆಯ ದೈನೇಸಿ ಸ್ಥಿತಿಗೆ ನಿಜವಾದ ಕಾರಣ ಕೂಡ ಈ ತೆರೆಮರೆಯ ಹುನ್ನಾರಗಳೇ ಎಂಬುದು ಒಳಗುಟ್ಟು!
ಆದರೆ, ಈ ಒಳಗುಟ್ಟು ಇಷ್ಟಿಷ್ಟೇ ಬೆತ್ತಲಾಗಲು ಬಹಳ ಸಮಯವೇನೂ ಹಿಡಿಯಲಾರದು. ಏಕೆಂದರೆ, ಈಗಾಗಲೇ ಆ ಗುಟ್ಟಿ ನ ಒಂದೊಂದೇ ರೆಕ್ಕೆಗಳು ಬಿಚ್ಚಿಕೊಳ್ಳತೊಡಗಿವೆ. ಒಂದು ಕಡೆ ಯಡಿಯೂರಪ್ಪ ವಿರುದ್ಧ ಎರಡು ವರ್ಷಗಳ ಹಿಂದೆ ಬಹಿರಂಗವಾಗಿಯೇ ತೊಡೆತಟ್ಟಿದ್ದ, ಬಿ ಎಲ್ ಸಂತೋಷ್ ನಿಷ್ಠರಾದ ಇಬ್ಬರನ್ನು ಪಕ್ಷದ ನೂತನ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲು ರಾಜ್ಯ ಉಪಾಧ್ಯಕ್ಷರನ್ನಾಗಿ ನೇಮಿಸಿದ್ದಾರೆ. ಯಡಿಯೂರಪ್ಪ ಈ ಮೊದಲು ಪಕ್ಷದ ಅಧ್ಯಕ್ಷರಾಗಿದ್ದಾಗ ಅವರ ವಿರುದ್ಧವೇ ದನಿ ಎತ್ತಿ ಉಪಾಧ್ಯಕ್ಷ ಸ್ಥಾನ ಕಳೆದುಕೊಂಡಿದ್ದ ಎಂ ಬಿ ಭಾನುಪ್ರಕಾಶ್ ಮತ್ತು ಮಾಜಿ ಶಾಸಕ ನಿರ್ಮಲ್ ಕುಮಾರ್ ಸುರಾನಾ ಅವರನ್ನು ಮತ್ತೆ ಅದೇ ಸ್ಥಾನಕ್ಕೆ ನೇಮಿಸಲಾಗಿದೆ. ಈ ನೇಮಕ ಯಡಿಯೂರಪ್ಪ ಕಣ್ಣು ಕೆಂಪಗಾಗಿಸಿತ್ತು.
ಅದರ ಬೆನ್ನಲ್ಲೇ ಬಿಬಿಎಂಪಿ ಮೇಯರ್ ಚುನಾವಣೆಯ ವಿಷಯದಲ್ಲಿಯೂ ಮುಖ್ಯಮಂತ್ರಿ ಮತ್ತು ಪಕ್ಷದ ರಾಜ್ಯಾಧ್ಯಕ್ಷರ ನಡುವಿನ ಭಿನ್ನಮತ ಬಹಿರಂಗಗೊಂಡಿತ್ತು. ಯಡಿಯೂರಪ್ಪ ಮೇಯರ್ ಚುನಾವಣೆ ಉಸ್ತುವಾರಿಗೆ ಸಮಿತಿ ರಚಿಸಿದ ಬೆನ್ನಲ್ಲೇ ನಳೀನ್ ಕುಮಾರ್ ಪ್ರತಿಕ್ರಿಯಿಸಿ ಪಕ್ಷ ಅಂತಹ ಯಾವುದೇ ಸಮಿತಿ ರಚಿಸಿಲ್ಲ ಎಂದು ಹೇಳಿಕೆ ನೀಡಿದ್ದರು. ಹೀಗೆ ಪಕ್ಷ ಮತ್ತು ಸರ್ಕಾರದ ಮೇಲಿನ ಹಿಡಿತಕ್ಕಾಗಿ ಯಡಿಯೂರಪ್ಪ ಪ್ರತಿ ಹಂತದಲ್ಲೂ ಪ್ರಯತ್ನ ಮುಂದುವರಿಸಿದ್ದರೆ, ಅವರ ಪ್ರತಿ ಹೆಜ್ಜೆಗೂ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಸೇರಿದಂತೆ ಬಿ ಎಲ್ ಸಂತೋಷ್ ಬಣ ಅಡ್ಡಗಾಲು ಹಾಕುತ್ತಲೇ ಇದೆ.
ಬಿ ಎಲ್ ಸಂತೋಷ್ ಎಂಬ ಯಡಿಯೂರಪ್ಪ ಪಾಲಿನ ನಕ್ಷತ್ರಿಕನ ಕುತಂತ್ರಗಳು ಅಷ್ಟಕ್ಕೇ ನಿಲ್ಲಲಿಲ್ಲ. ಬಿಬಿಎಂಪಿ ಮೇಯರ್ ವಿಷಯದ ಬೆನ್ನಲ್ಲೇ ಸ್ವತಃ ಬಿಜೆಪಿಯ ಹಿರಿಯ ನಾಯಕ ಮತ್ತು ಹಿಂದಿನ ಬಾರಿಯ ಮುಖ್ಯಮಂತ್ರಿ ಅವಧಿಯಲ್ಲಿ ಬಿಎಸ್ ವೈ ಪಾಲಿಗೆ ಮಗ್ಗುಲಮುಳ್ಳಾಗಿ ಕಾಡಿದ್ದ ಕೆ ಎಸ್ ಈಶ್ವರಪ್ಪ ಫೀಲ್ಡಿಗಿಳಿದರು. ಮುಖ್ಯಮಂತ್ರಿಗಳು ತಮ್ಮ ಬಳಿ ಇದ್ದ ಹೆಚ್ಚುವರಿ ಖಾತೆಗಳನ್ನು ಇತರ ಸಚಿವರಿಗೆ ಹೆಚ್ಚುವರಿ ಹೊಣಗಾರಿಕೆಯಾಗಿ ವಹಿಸಿದ ಬೆನ್ನಲ್ಲೇ ಈಶ್ವರಪ್ಪ, ತಮಗೆ ಆದ ಅನ್ಯಾಯದಿಂದ ಕುದ್ದುಹೋಗಿದ್ದರು. ಅದೇ ಬಿಸಿಯಲ್ಲೇ ಮಾಧ್ಯಮದವರ ಮುಂದೆ, “ಯಡಿಯೂರಪ್ಪ ಆಗಲೀ ಸಿದ್ದರಾಮಯ್ಯ ಆಗಲೀ ಪಕ್ಷ, ಸಂಘಟನೆ ಇಲ್ಲದೆ ಏನೂ ಅಲ್ಲ, ಹೊಸ ಪಕ್ಷ ಕಟ್ಟಿ ಯಡಿಯೂರಪ್ಪ ಎಷ್ಟು ಸ್ಥಾನ ಗೆದ್ದಿದ್ದರು? ಮೂರು ಮತ್ತೊಂದು… ಅಧಿಕಾರವಿದ್ದಾಗ ಪಕ್ಷಕ್ಕಾಗಿ ದುಡಿದವರನ್ನು ಸರಿಯಾಗಿ ನೋಡಿಕೊಳ್ಳದೇ ಹೋದರೆ, ಪಕ್ಷವನ್ನು ನಿರ್ಲಕ್ಷಿಸಿದರೆ ಯಾವ ಅಧಿಕಾರವೂ ಉಳಿಯೊಲ್ಲ.. ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ..” ಎಂದು ಹೊಸ ಬಾಂಬ್ ಹಾಕಿದರು.
ಈಶ್ವರಪ್ಪ ಅವರ ಹೇಳಿಕೆ ಸಂಚಲನ ಸೃಷ್ಟಿಸಿ, ವಾದ-ವಿವಾದದ ಸ್ವರೂಪ ಪಡೆಯುತ್ತಿದ್ದಂತೆ ಅವರು ಮಾರನೆ ದಿನ ಮತ್ತೊಂದು ಸ್ಪಷ್ಟನೆ ನೀಡಿ, ಯಡಿಯೂರಪ್ಪ ಮತ್ತು ತಮ್ಮ ಮಧ್ಯೆ ಹುಳಿ ಹಿಂಡಲು ಮಾಧ್ಯಮಗಳು ಪ್ರಯತ್ನಿಸುತ್ತಿವೆ ಎಂದು ಹೇಳುತ್ತಾ, ತುರ್ತುಪರಿಸ್ಥಿತಿಯ ಹೊತ್ತಲ್ಲಿ ಮಾಧ್ಯಮ ಸ್ವಾತಂತ್ರ್ಯಕ್ಕಾಗಿ ತಾವು ಜೈಲಿಗೆ ಹೋಗಿದ್ದೆವು. ಈಗ ಅದೇ ಮಾಧ್ಯಮಗಳು ತಮ್ಮ ವಿರುದ್ಧವೇ ಷಢ್ಯಂತ್ರ ನಡೆಸುತ್ತಿವೆ ಎನ್ನುವ ಮೂಲಕ ಮಾಧ್ಯಮಗಳು ಉಪಕಾರ ಮರೆತು ಕೃತಘ್ನರಾಗಿವೆ ಎಂದು ದೂರಿದರು. ಆದರೆ, ಅವರು ಅಂದು ಜೈಲಿಗೆ ಹೋಗಿದ್ದ ಸರ್ಕಾರ ಮತ್ತು ಆಡಳಿತ ವ್ಯವಸ್ಥೆಯ ವಿರುದ್ಧ ನಿಂತ ಮಾಧ್ಯಮಗಳ ಪರ. ಇಂದು ಇಡೀ ಮುಖ್ಯವಾಹಿನಿ ಮಾಧ್ಯಮವೇ ಅಧಿಕಾರಸ್ಥರ ಮುಂದೆ ವಂದಿಮಾಗದರಾಗಿ ನಡುಬಗ್ಗಿಸಿ ನಿಂತಿವೆ ಎಂಬುದನ್ನು ಈಶ್ವರಪ್ಪ ಅವರಿಗೆ ನೆನಪಿಸಬೇಕಿದೆ!
ಈಶ್ವರಪ್ಪ ಹೇಳಿಕೆಯ ಬೆನ್ನಲ್ಲೇ, ಅದೇ ಬಿ ಎಲ್ ಸಂತೋಷ್ ಅವರ ಆಪ್ತ ಬಳಗದಲ್ಲಿರುವ, ಸಂಘಪರಿವಾರದ ಭಾಷಣಕಾರ ಚಕ್ರವರ್ತಿ ಸೂಲಿಬೆಲೆ ಎಂಬುವವರು ಕೂಡ ಪ್ರವಾಹ ಸಂತ್ರಸ್ತರ ನೆರವಿಗೆ ಬಾರದ ಸಂಸದರನ್ನು ಟೀಕಿಸಿ ಹೇಳಿಕೆ ನೀಡಿದರು. ಆ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯಿತು. ಪಕ್ಷ ಮೀರಿ ಸೂಲಿಬೆಲೆ ಜನರ ಪರ ಮಾತನಾಡಿದ್ದಾರೆ ಎಂದು ಕೆಲವರು ಅವರ ಪರವಹಿಸಿದರೆ, ಉಪಚುನಾವಣೆಯಲ್ಲಿ ಟಿಕೆಟ್ ಆಸೆ ಇರಬಹುದು, ಇಲ್ಲವೇ ಬಿಜೆಪಿ ಕಡೆಯಿಂದ ಬರಬೇಕಿದ್ದ ಪಾವತಿ ಬಂದಿಲ್ಲವೆಂದು ರೊಚ್ಚಿಗೆದ್ದಿರಬಹುದು ಎಂದು ಅವರ ವಿರೋಧಿಗಳು ಟೀಕಿಸಿದರು.
ಆದರೆ, ಅಸಲಿಗೆ ಚಕ್ರವರ್ತಿ ಹೇಳಿಕೆಗೂ, ಸರಿಸುಮಾರು ಎರಡು ತಿಂಗಳು ಕಳೆದರೂ ರಾಜ್ಯಕ್ಕೆ ಬಿಡಿಗಾಸು ನೀಡದಿರುವ ಕೇಂದ್ರ ಬಿಜೆಪಿ ನಾಯಕತ್ವದ ಧೋರಣೆಗೂ ಇರುವ ನಂಟು ಬೇರೆಯದ್ದೇ. ಆ ನಂಟಿನ ಮರ್ಮ ಅರ್ಥವಾಗಬೇಕಾದರೆ, ಯಡಿಯೂರಪ್ಪ ಅಧಿಕಾರಕ್ಕೆ ಬಂದ ದಿನದಿಂದಲೂ (ಸಿಎಂ ಆಗಿ ಪ್ರಮಾಣವಚನ ಸ್ವೀಕಾರಕ್ಕೆ ಗ್ರೀನ್ ಸಿಗ್ನಲ್ ನೀಡಲು ಕಾಯಿಸಿದ್ದೂ ಸೇರಿ) ಈವರೆಗೆ ಪಕ್ಷದ ಹೈಕಮಾಂಡ್ ಅವರ ಬಗ್ಗೆ ತಳೆದಿರುವ ನಿರ್ಲಕ್ಷ್ಯ, ಉದಾಸೀನ ಧೋರಣೆಯನ್ನು ಅರ್ಥಮಾಡಿಕೊಳ್ಳಬೇಕಿದೆ.
ಬಿಹಾರದಲ್ಲಿ ಎರಡು ದಿನಗಳಿಂದ ಉಂಟಾಗಿರುವ ಪ್ರವಾಹ ಪರಿಸ್ಥಿತಿ ಬಗ್ಗೆ ದಿಢೀರ್ ಟ್ವೀಟ್ ಮಾಡಿರುವ ಪ್ರಧಾನಿ ಮೋದಿಯವರು, ‘ನಿತೀಶ್ ಕುಮಾರ್ ಅವರೇ ನಿಮ್ಮೊಂದಿಗೆ ನಾವಿದ್ದೇವೆ. ನಿಮ್ಮ ನೆರವಿಗೆ ಕೇಂದ್ರ ಸರ್ಕಾರವಿದೆ. ಅರೆಸೇನಾ ಪಡೆಗಳಿವೆ. ಯಾವುದೇ ಹಂತದಲ್ಲಿ ಯಾವುದೇ ನೆರವು ನೀಡಲು ನಾವು ಸಿದ್ಧ’ ಎಂದು ಹೇಳಿದ್ದಾರೆ. ಆದರೆ, ಅವರದೇ ಪಕ್ಷದ ಸರ್ಕಾರವಿರುವ ಕರ್ನಾಟಕ 120 ತಾಲೂಕುಗಳಲ್ಲಿ ಭೀಕರ ಪ್ರವಾಹ ಬಂದು ಹೊಲ-ಮನೆ ಬದುಕನ್ನು ಕೊಚ್ಚಿ ಓಯ್ದರೂ ಪ್ರಧಾನಿ ಮೋದಿಯವರು ಈವರೆಗೆ ರಾಜ್ಯ ಸರ್ಕಾರದ ಎಲ್ಲ ಪ್ರಯತ್ನದ ಹೊರತಾಗಿಯೂ ಬಿಡಿಗಾಸು ನೀಡಿಲ್ಲ. ಕನಿಷ್ಠ ಮುಖ್ಯಮಂತ್ರಿಗೆ, ಸಂತ್ರಸ್ತ ಜನರಿಗೆ ಭಯಬೇಡ, ಎದೆಗುಂದಬೇಡಿ, ನಾವಿದ್ದೇವೆ ಎಂಬ ಒಂದು ಸಾಂತ್ವನ ಮಾತನ್ನೂ ಆಡಲು ಸಮಯ ಸಿಕ್ಕಿಲ್ಲ! ಅಂದರೆ ಕರ್ನಾಟಕದ ಪ್ರವಾಹದ ವಿಷಯದಲ್ಲಿ ಪ್ರಧಾನಿ ಮೋದಿ ಮತ್ತು ಗೃಹ ಸಚಿವರೂ ಆಗಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗೆ ಇರುವುದು ನಿರ್ಲಕ್ಷ್ಯವೋ ಅಥವಾ ಯಡಿಯೂರಪ್ಪ ಬಗೆಗಿನ ಅವರ ಉದಾಸೀನ ಭಾವನೆಯಾ? ಎಂಬುದು ಪ್ರಶ್ನೆ.
ಒಂದು ಕಡೆ ಕೇಂದ್ರ ಸರ್ಕಾರದ ಅಸೀಮ ನಿರ್ಲಕ್ಷ್ಯ, ಐದು ಬಾರಿ ದೆಹಲಿಗೆ ಹೋಗಿ ಮನವಿ ಮಾಡಿದರೂ ಬಿಡಿಗಾಸಿನ ಪರಿಹಾರ ಘೋಷಿಸದೇ ಇರುವಮಟ್ಟಿಗಿನ ಉದಾಸೀನ ಧೋರಣೆ. ಮೂರು ಬಾರಿ ಮಾತುಕತೆಗೆ ಬರಲು ಸಮಯ ಕೇಳಿದರೂ ಕೊಡದೇ ದೆಹಲಿಗೆ ಬರುವುದೇ ಬೇಡ ಎಂದು ಕಟ್ಟಾಜ್ಞೆ ಹೊರಡಿಸುವ ವರಸೆ. ಮತ್ತೊಂದು ಕಡೆ, ತೇಜಸ್ವಿ ಸೂರ್ಯ, ಚಕ್ರವರ್ತಿ ಸೂಲಿಬೆಲೆಯಂತಹವರ ಹಾಸ್ಯಾಸ್ಪದ ಹೇಳಿಕೆಗಳು. ಮಗದೊಂದು ಕಡೆ ಕಟೀಲು, ಈಶ್ವರಪ್ಪ ಮುಂತಾದವರ ಪ್ರಹಾರ! ಬಿಜೆಪಿಯ ಒಳಗೇ ಬಿಎಸ್ ವೈ ವಿರುದ್ಧದ ಸಂತೋಷ್ ಬಣ ಎಷ್ಟು ಪ್ರಬಲ ಕಾರ್ಯಾಚರಣೆಗೆ ಇಳಿದಿದೆ ಮತ್ತು ಅದಕ್ಕೆ ಸಂಘಪರಿವಾರ ಮತ್ತು ಕೇಂದ್ರ ನಾಯಕರ ಆಶೀರ್ವಾದ ಎಷ್ಟರಮಟ್ಟಿಗೆ ಇದೆ ಎಂಬುದಕ್ಕೆ ಕಳೆದ ಒಂದು ತಿಂಗಳ ಅವಧಿಯಲ್ಲಿ ಬಿಎಸ್ ವೈ ನಿರ್ಧಾರಗಳು ಮತ್ತು ಆಡಳಿತ ಹಾಗೂ ರಾಜ್ಯದ ಪ್ರವಾಹ ಪರಿಹಾರದ ವಿಷಯದಲ್ಲಿ ನಡೆದಿರುವ ವಿದ್ಯಮಾನಗಳೇ ಸಾಕ್ಷಿ. ಸದ್ಯಕ್ಕೆ ಬಿಎಸ್ ವೈ ದೆಹಲಿಯಿಂದ ಮಂಗಳೂರಿನ ಕಟೀಲುವರೆಗೆ ಬೇಡದ ಕೂಸು. ಹಾಗಾಗಿಯೇ ಪಕ್ಷದ ಆಂತರಿಕ ವಿಷಯಗಳಿಂದ ಹಿಡಿದು, ಪ್ರವಾಹದ ಪರಿಹಾರದಂತಹ ಆಡಳಿತಾತ್ಮಕ ವಿಷಯದವರೆಗೆ ಪ್ರತಿ ಹೆಜ್ಜೆಗೂ ಅವರನ್ನು ಕಟ್ಟಿಹಾಕುವ ಪ್ರಯತ್ನಗಳು ನಡೆಯುತ್ತಲೇ ಇವೆ.
ತಮ್ಮ ವಿರುದ್ಧದ ಸ್ವಪಕ್ಷೀಯರ ಈ ವರಸೆಗಳು ಬಿಎಸ್ ವೈಗೆ ಕೊಡಬೇಕಾದ ಸಂದೇಶವನ್ನು ಕೊಟ್ಟಿವೆ. ಹಾಗಾಗಿಯೇ ಅವರು ಹೇಳಿದ್ದು, ತಮ್ಮದು ತಂತಿ ಮೇಲಿನ ನಡಿಗೆ ಎಂದು! ಅಷ್ಟೇ ಅಲ್ಲ; ಅವರ ಆ ತಂತಿ ಮೇಲಿನ ನಡಿಗೆಯ ಅಪಾಯವನ್ನು ಅರಿತೇ ಈಗಾಗಲೇ ಬಿಎಸ್ ವೈ ಕಟ್ಟಾ ಬೆಂಬಲಿಗರು ದನಿ ಎತ್ತಿದ್ದಾರೆ. ಬಸನಗೌಡ ಪಾಟೀಲ್ ಯತ್ನಾಳ್, ಜೆ ಮಾಧುಸ್ವಾಮಿ ಮತ್ತಿತರು ಈಗಾಗಲೇ ಕೇಂದ್ರ ನಾಯಕರ ವಿರುದ್ಧ ಅಸಮಾಧಾನ ಹೊರಹಾಕಲಾರಂಭಿಸಿದ್ದಾರೆ. ಅವರ ಹತಾಶೆಯ ಮಟ್ಟ ಯಾವಸ್ಥಿತಿಗೆ ಹೋಗಿದೆ ಎಂದರೆ, ಮಾಧುಸ್ವಾಮಿ ಅಂತಹ ಸಚಿವರು ಮಾಧ್ಯಮದವರ ಮೇಲೆಯೇ ಹರಿಹಾಯ್ದು, ಪ್ರವಾಹ ಸಂತ್ರಸ್ತರ ವಿಷಯ ಯಾವ ಘನಂದಾರಿ ವಿಷಯಯಾರೀ ಎಂದಿದ್ದಾರೆ. ಇನ್ನು ಯತ್ನಾಳ್ ಅಂತೂ ತಮ್ಮ ಎಂದಿನ ವರಸೆಯಲ್ಲೇ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ವಿರುದ್ಧವೇ ಕೆಂಡಕಾರಿದ್ದಾರೆ. ‘ಯಡಿಯೂರಪ್ಪ ಅವರನ್ನು ಜನರ ಕಣ್ಣಲ್ಲಿ ಕೆಟ್ಟವರಾಗಿ ಮಾಡಲೆಂದೇ ಪರಿಹಾರ ಘೋಷಿಸಿಲ್ಲ. ಆದರೆ, ಅವರಿಲ್ಲದೆ ಪಕ್ಷವನ್ನು ಅಧಿಕಾರಕ್ಕೆ ತರಲಿ ನೋಡೋಣ..’ ಎನ್ನುವ ಮೂಲಕ ತಮ್ಮ ನಾಯಕನನ್ನು ಹಣಿಯಲೆಂದೇ ಕೇಂದ್ರ ನಾಯಕರು ಹಣ ನೀಡುತ್ತಿಲ್ಲ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಒಟ್ಟಾರೆ, ಯಡಿಯೂರಪ್ಪ ಒಂದರ್ಥದಲ್ಲಿ ಈಗ ಏಕಾಂಗಿಯಾಗಿದ್ದಾರೆ. ಕೆಲವೇ ಮಂದಿ ಸಚಿವರು, ಶಾಸಕರನ್ನು ಹೊರತುಪಡಿಸಿ ಇಡೀ ಬಿಜೆಪಿ, ಸಂಘಪರಿವಾರ, ಕೇಂದ್ರ ನಾಯಕರು ಅವರ ವಿರುದ್ಧ ನಿಂತಿದ್ದಾರೆ. ಬಿ ಎಲ್ ಸಂತೋಷ್ ಅವರಿಗೆ ಪಟ್ಟಾಭಿಷೇಕದ ದಿಕ್ಕಿನಲ್ಲಿ ಇಡೀ ಬಿಜೆಪಿ ಮತ್ತು ಪರಿವಾರ ದಾಪುಗಾಲು ಇಡುತ್ತಿದ್ದು, ಆ ರಾಜಕೀಯ ಗುರಿ ಸಾಧನೆಗೆ ರಾಜ್ಯದ ಪ್ರವಾಹ ಸಂತ್ರಸ್ತರ ಕಣ್ಣೀರಿನಲ್ಲೆ ರಹದಾರಿ ಮಾಡಿಕೊಳ್ಳುವ ನಿಟ್ಟಿನಲ್ಲಿ ಈಗಾಗಲೇ ದಿಲ್ಲಿಯ ನಾಯಕರು ತಂತ್ರಗಾರಿಕೆ ಆರಂಭಿಸಿದ್ದಾರೆ. ಆ ಹಿನ್ನೆಲೆಯಲ್ಲೇ, ಕೆ ಎಸ್ ಈಶ್ವರಪ್ಪ ಅವರು ಮಂಗಳವಾರ ಕೂಡ, ಈಗಲೇ ಚುನಾವಣೆ ನಡೆದರೆ ಬಿಜೆಪಿಗೆ ಸಂಪೂರ್ಣ ಬಹುಮತ ಬರಲಿದೆ ಎಂದಿದ್ದಾರೆ. ಅಂದರೆ, ಯಡಿಯೂರಪ್ಪ ನಾಲ್ಕು ವರ್ಷದಲ್ಲಿ ರಾಜ್ಯವನ್ನೇ ಬದಲಾಯಿಸುವ ಮಾತನಾಡುತ್ತಿದ್ದರೆ, ಬಿಜೆಪಿ ಚುನಾವಣೆಯ ದಿಕ್ಕಿನಲ್ಲಿ ಯೋಚಿಸತೊಡಗಿದೆ. ಅವರು ಮುಖ್ಯಮಂತ್ರಿ ಗಾದಿಯಲ್ಲಿ ಕೂರುತ್ತಲೇ ಆರಂಭವಾಗಿದ್ದ, ಯಡಿಯೂರಪ್ಪ ಅವರನ್ನೇ ಬದಲಾಯಿಸುವ ಗಂಭೀರ ಪ್ರಯತ್ನಗಳು ಬಿಜೆಪಿಯಲ್ಲಿ ಈಗ ಬಿರುಸುಗೊಂಡಿವೆ!