ಬಿ ಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಮೂರು ತಿಂಗಳಲ್ಲೇ ರಾಜ್ಯ ಬಿಜೆಪಿಯಲ್ಲಿ ಚುನಾವಣೆಯ ಮಾತುಗಳು ಕೇಳುವಷ್ಟರಮಟ್ಟಿಗೆ ಪಕ್ಷದ ಆಂತರಿಕ ಭಿನ್ನಮತ ಭುಗಿಲೆದ್ದಿದೆ.
ಒಂದು ಕಡೆ ಪ್ರವಾಸ ಸಂತ್ರಸ್ತರಿಗೆ ಬಿಡಿಗಾಸು ಪರಿಹಾರ ನೀಡದೇ ಸತಾಯಿಸುತ್ತಿರುವ ಕೇಂದ್ರದ ನಾಯಕರು, ಮತ್ತೊಂದು ಕಡೆ ಬಿಬಿಎಂಪಿ ಚುನಾವಣೆಯಿಂದ ಪಕ್ಷದ ಪದಾಧಿಕಾರಿಗಳ ನೇಮಕದವರೆಗೆ ತಮ್ಮನ್ನು ಮೂಲೆಗುಂಪು ಮಾಡಿ ಏಕಪಕ್ಷೀಯ ನಿರ್ಧಾರಕೈಗೊಳ್ಳುತ್ತಿರುವ ಪಕ್ಷದ ರಾಜ್ಯ ಅಧ್ಯಕ್ಷರು. ಇದು ಸಾಲದು ಎಂಬಂತೆ ಪಕ್ಷ ಸಂಘಟನೆಯಿಲ್ಲದೆ ತಮ್ಮದೇನೂ ನಡೆಯದು ಎನ್ನುತ್ತಲೇ, ಚುನಾವಣೆಯ ಮಾತು ತೆಗೆಯುತ್ತಿರುವ ಪರ್ಯಾಯ ನಾಯಕರು! ಹೀಗೆ, ಪಕ್ಷದ ಆಂತರಿಕ ಷಢ್ಯಂತ್ರಗಳಿಂದ ರೋಸಿಹೋಗಿರುವ ಬಿ ಎಸ್ ಯಡಿಯೂರಪ್ಪ, ತಮ್ಮನ್ನು ಇನ್ನಿಲ್ಲದಂತೆ ಹೀನಾಯವಾಗಿ ನಡೆಸಿಕೊಳ್ಳುತ್ತಿರುವ ಹೈಕಮಾಂಡ್ ವಿರುದ್ಧ ಸಿಡಿದೆದ್ದಿದ್ದು, ದೆಹಲಿ ಮತ್ತು ಸ್ಥಳೀಯ ನಾಯಕರಿಗೆ ತಮ್ಮ ಬಲ ತೋರಿಸಲು 40ಕ್ಕೂ ಹೆಚ್ಚು ತಮ್ಮ ನಿಷ್ಠ ಶಾಸಕರ ಸಭೆ ನಡೆಸಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ. ಪಕ್ಷದ ಹೈಕಮಾಂಡ್ ಮತ್ತು ಅದರ ಆಣತಿಯಂತೆ ತಮ್ಮ ಮೇಲೆ ಸವಾರಿ ಮಾಡುತ್ತಿರುವ ತಮ್ಮ ಪ್ರತಿಸ್ಪರ್ಧಿ ಬಿ ಎಲ್ ಸಂತೋಷ್ ಅವರ ಶಿಷ್ಯರ ವಿಷಯದಲ್ಲಿ ಯಡಿಯೂರಪ್ಪ ಎಷ್ಟು ಕೆರಳಿಹೋಗಿದ್ದಾರೆ ಎಂಬುದಕ್ಕೆ ಬಸನಗೌಡ ಪಾಟೀಲ್ ಯತ್ನಾಳ್ ಮತ್ತಿತರ ಅವರ ಆಪ್ತರ ಹೇಳಿಕೆಗಳೇ ಸಾಕ್ಷಿ.
ಆದರೆ, ಬಿ ಎಲ್ ಸಂತೋಷ್ ಕೈಗೆ ರಾಜ್ಯದ ಚುಕ್ಕಾಣಿ ಕೊಡುವ ತಂತ್ರಗಾರಿಕೆಯ ಭಾಗವಾಗಿ ಯಡಿಯೂರಪ್ಪಅವರ ಮೇಲೆ ಪ್ರಯೋಗಿಸಿದ ಬಾಣ, ಇದೀಗ ತಿರುಗುಬಾಣವಾಗುತ್ತಿರುವ ಸೂಚನೆ ಸಿಗುತ್ತಲೇ ಹೈಕಮಾಂಡ್ ಎಚ್ಚೆತ್ತುಕೊಂಡಿದೆ. ಸಂಘಪರಿವಾರ ಕೂಡ ದಿಢೀರ್ ನಡೆ ಬದಲಿಸಿದೆ. ತಮ್ಮ ಬೆಂಬಲಿಗ ಶಾಸಕರ ಸಭೆಗೆ ಯಡಿಯೂರಪ್ಪ ಸೂಚನೆ ಕೊಡುತ್ತಲೇ, ಸಂಘಪರಿವಾರ ಈಗ ಇಡೀ ವಿಷಯದಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ತಮ್ಮ ನಿಯತ್ತಿನ ಭಾಷಣಕಾರ ಚಕ್ರವರ್ತಿ ಸೂಲಿಬೆಲೆ ಅವರನ್ನು ಅಟ್ಟಿದೆ. ಅತ್ತ ಸರ್ಕಾರದ ಪ್ರಮುಖ ಸಚಿವರು, ನಾಯಕರುಗಳೇ ಯಡಿಯೂರಪ್ಪ ಪರ ವಿರುದ್ಧದ ಹೇಳಿಕೆ- ಪ್ರತಿಹೇಳಿಕೆಗಳಲ್ಲಿ ತೊಡುಗುತ್ತಲೇ, ಇಡೀ ರಾಜ್ಯದ ಜನ ಪ್ರವಾಹ ಮತ್ತು ಬರದ ನಡುವೆ ನಲುಗುತ್ತಿರುವಾಗ ಆ ಬಗ್ಗೆ ತಲೆಕೆಡಿಸಿಕೊಳ್ಳದ ಬಿಜೆಪಿ ವರಿಷ್ಠರು, ಕುರ್ಚಿಗಾಗಿ ಕಚ್ಚಾಡತೊಡಗಿದ್ದನ್ನು ಕಂಡು ಜನರ ಉಗಿಯತೊಡಗಿದರು. ರಾಜಕೀಯವಾಗಿ ರಾಜ್ಯದಲ್ಲಿ ಬಿಜೆಪಿಗೆ ತೀರಾ ಇರಿಸುಮುರಿಸಿನ ಪರಿಸ್ಥಿತಿ ಎದುರಾಯಿತು. ಜೊತೆಗೆ, ಸರ್ಕಾರಕ್ಕೇ ಸಂಚಕಾರ ತರುವಮಟ್ಟಿಗೆ ರಾಜಕೀಯ ಕೆಸರೆರಚಾಟ ತೀವ್ರ ಸ್ವರೂಪಕ್ಕೆ ಹೋಯಿತು, ಇದರಿಂದ ಸದ್ಯಕ್ಕೆ ಪಾರಾಗುವ ಉಪಾಯವಾಗಿ ಚಕ್ರವರ್ತಿ ಅವರನ್ನು ಈಗ ಫೀಲ್ಡಿಗಿಳಿಸಲಾಗಿದೆ.
ರಾಜ್ಯದ ಇತಿಹಾಸದಲ್ಲೇ ಕಂಡುಕೇಳರಿಯದ ಪ್ರವಾಹ ಬಂದು ಬರೋಬ್ಬರಿ 120 ತಾಲೂಕುಗಳು ಕೊಚ್ಚಿಕೊಂಡುಹೋಗಿ 60 ದಿನ ಕಳೆದರೂ ಬಿಡಿಗಾಸಿನ ಪರಿಹಾರ ನೀಡದೆ ಕರ್ನಾಟಕದ ಜನರ ಸಂಕಷ್ಟದ ಬಗ್ಗೆ ಅಸೀಮ ಉದಾಸೀನ ತಳೆದಿರುವ ಪ್ರಧಾನಿ ಮೋದಿ ಮತ್ತು ಗೃಹಸಚಿವ ಅಮಿತ್ ಶಾ ಜೋಡಿಯ ಬಗ್ಗೆಯಾಗಲೀ, ಸ್ವತಃ ಸಂತ್ರಸ್ತರ ಮತ ಪಡೆದು ಗೆದ್ದುಹೋಗಿ, ಜನರ ಸಂಕಷ್ಟದ ಬಗ್ಗೆ ತುಟಿಬಿಚ್ಚದೆ, ಪರಿಹಾರ ಕೇಳದೆ ಸಂಸತ್ತಿನಲ್ಲಿ ಬೆಚ್ಚಗೆ ಕೂತು ಎದ್ದುಬರುತ್ತಿರುವ 26 ಮಂದಿ ಬಿಜೆಪಿ ಸಂಸದರ ಬಗ್ಗೆಯಾಗಲೀ ಇಷ್ಟು ದಿನ ಮಾತನಾಡದ ಚಕ್ರವರ್ತಿ ಈಗ ದಿಢೀರನೆ ಮೈಮೇಲೆ ಬಂದವರಂತೆ ಬಡಬಡಿಸತೊಡಗಿದ್ದಾರೆ. ಕೇಂದ್ರ ಸಚಿವ ಸದಾನಂದ ಗೌಡರೂ ಸೇರಿದಂತೆ ಬಿಜೆಪಿಯ ಸಂಸದರು ಮತ್ತು ಸ್ವತಃ ಪ್ರಧಾನಿ ಮೋದಿಯವರು ರಾಜ್ಯದ ವಿಷಯದಲ್ಲಿ ಮಲತಾಯಿ ಧೋರಣೆ ತಳೆದಿದ್ದಾರೆ. ನಮ್ಮ ಸಂಸದರು ಈಗಲೂ ಜನರ ಪರ ಪ್ರಧಾನಿ ಎದುರು ಮಾತನಾಡುವುದಿಲ್ಲ ಎಂದರೆ ಏನರ್ಥ ಎಂಬ ಚಕ್ರವರ್ತಿ ಹೇಳಿಕೆಗೆ ಪ್ರತಿಯಾಗಿ, ಸದಾನಂದ ಗೌಡರು ಜನರನ್ನು ದಿಕ್ಕುತಪ್ಪಿಸುವ ಸುಳ್ಳು ಮಾಹಿತಿ ನೀಡುವವರೇ ದೇಶದ್ರೋಹಿಗಳು ಎನ್ನುವ ಮೂಲಕ ಸ್ವಘೋಷಿತ ದೇಶಭಕ್ತರ ಪರಮಗುರು ಚಕ್ರವರ್ತಿಗೇ ‘ದೇಶದ್ರೋಹ’ದ ಹಣೆಪಟ್ಟಿ ಹಚ್ಚಿದ್ದಾರೆ. ಈ ನಡುವೆ, ಮೈಸೂರು ಸಂಸದ ಪ್ರತಾಪ ಸಿಂಹ ಕೂಡ ಚಕ್ರವರ್ತಿ ವಿರುದ್ಧ ಕಿಡಿಕಾರಿದ್ದಾರೆ. ಹಾಗೇ ಹಾವೇರಿ ಸಂಸದ ಶಿವಕುಮಾರ ಉದಾಸಿ, ಧಾರವಾಡದ ಸಂಸದ ಹಾಗೂ ಕೇಂದ್ರ ಸಚಿವ ಪ್ರಹ್ಲಾದ ಜೋಷಿ ಮತ್ತಿತರು ಕೂಡ ಚಕ್ರವರ್ತಿ ಹೇಳಿಕೆಯ ವಿರುದ್ಧ ಕಿಡಿಕಾರಿದ್ದಾರೆ.
ಅದು ಸಾಲದು ಎಂಬಂತೆ ರಾಜ್ಯದ ಟಿವಿ ಮಾಧ್ಯಮಗಳು ದಿನವಿಡೀ ಚಕ್ರವರ್ತಿ ಸೂಲಿಬೆಲೆಯ ಪ್ರಶ್ನೆ ಮತ್ತು ಅವರಿಗೆ ಸದಾನಂದ ಗೌಡರು ದೇಶದ್ರೋಹಿ ಎಂದು ಕರೆದಿರುವುದನ್ನೆ ಚರ್ಚಿಸುತ್ತಿವೆ. ಜೊತೆಗೆ ಕೆಲವು ಮಾಧ್ಯಮಗಳು ದಿಢೀರ್ ಸಾಮಾಜಿಕ ಕಾಳಜಿಯನ್ನು ನೆನಪಿಸಿಕೊಂಡು ನಿದ್ದೆಗಣ್ಣಲ್ಲಿ ಎದ್ದುಕೂತಂತೆ ರಾಜ್ಯದ ಸಂಸದರ ಹೊಣೆಗೇಡಿತನದ ಬಗ್ಗೆ ಮಾತನಾಡತೊಡಗಿವೆ. ಪ್ರವಾಹ ತಗ್ಗಿದ ಮೂಲಕ ಆ ಬಗ್ಗೆ ಗಮನವನ್ನೇ ಹರಿಸದೆ ಮೋದಿ ಭಜನೆಯ ಪ್ಯಾಕೇಜ್, ಹೌಡಿ ಮೋದಿಯ ಹರಿಕಥೆಗಳಲ್ಲೇ ಮುಳುಗಿದ್ದ ಮಾಧ್ಯಮಗಳು ಸೋಮವಾರದಿಂದ ದೀಢೀರ್ ವರಸೆ ಬದಲಿಸಿವೆ.
ಈ ದಿಢೀರ್ ಬಡಬಡಿಕೆಯ ಹಿಂದೆ ಕೆಲಸ ಮಾಡುತ್ತಿರುವುದು ತಾರಕಕ್ಕೇರಿರುವ ರಾಜ್ಯ ಬಿಜೆಪಿಯ ಆಂತರಿಕ ಕಚ್ಚಾಟದಿಂದ ಜನರ ಗಮನವನ್ನು ಪ್ರವಾಹ ಸಂತ್ರಸ್ತರೆಡೆಗೆ ಹರಿಸುವ ತಂತ್ರಗಾರಿಕೆ ವಿನಃ ಅಸಲೀ ಜನಪರ ಕಾಳಜಿಯೂ ಅಲ್ಲ; ಅಥವಾ ಹೊಣೆಗೇಡಿ ಸಂಸದರು ಮತ್ತು ಕೇಂದ್ರದ ನಾಯಕರ ವಿರುದ್ಧದ ನೈಜ ಆಕ್ರೋಶವೂ ಅಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕಿದೆ. ಹಾಗಾಗಿಯೇ ಒಂದು ಕಡೆ ಸೂಲಿಬೆಲೆ ಕಣಕ್ಕಿಳಿದರೆ, ಮತ್ತೊಂದು ಕಡೆ ಮುಖ್ಯವಾಹಿನಿ ಮಾಧ್ಯಮಗಳೂ ದಿಢೀರನೇ ಪ್ರವಾಹ ಸಂತ್ರಸ್ತರ ಗೋಳು ನೆನಪಿಸಿಕೊಂಡು ಸಂಸದರ ಬೆನ್ನು ಬಿದ್ದಿವೆ.
ಆದರೆ, ಈ ಮಾಧ್ಯಮಗಳು ಮತ್ತು ಸೂಲಿಬೆಲೆ ಕೇಳುತ್ತಿರುವ ಪ್ರಶ್ನೆಗಳನ್ನು; ಬಿಹಾರದ ವಿಷಯದಲ್ಲಿ ದಿಢೀರ್ ಟ್ವೀಟ್ ಮಾಡಿ ಸಾಂತ್ವನ ಹೇಳುವ, ಹಣ ಬಿಡುಗಡೆ ಮಾಡುವ ಪ್ರಧಾನಿ ಮೋದಿಯವರಿಗೆ ಕರ್ನಾಟಕದ ಪ್ರವಾಹ ಸಂತ್ರಸ್ತರ ಸಂಕಟ ಎರಡು ತಿಂಗಳು ಕಳೆದರೂ ಕಾಣಲಿಲ್ಲ ಏಕೆ? ಎಂಬುದೂ ಸೇರಿ ಮತ್ತಿತರ; ‘ಟ್ರೂಥ್ ಇಂಡಿಯಾ- ಕನ್ನಡ’ ಪ್ರವಾಹ ಬಂದಂದಿನಿಂದಲೂ ಕೇಳುತ್ತಲೇ ಇದೆ. ಸಂಸದರ ಮೌನ, ಸಿಎಂ ಅಸಹಾಯಕತೆ, ಬಿಜೆಪಿ ಸಚಿವರು, ನಾಯಕರ ಬೇಜವ್ದಾರಿ ಹೇಳಿಕೆಗಳು ಮತ್ತು ನಡವಳಿಕೆ, ಸಂಕಷ್ಟದಲ್ಲಿರುವ ಸಂತ್ರಸ್ತರನ್ನು ಕಣ್ಣೆತ್ತಿಯೂ ನೋಡದ ಮೋದಿಯ ಅಮೆರಿಕ ಯಾತ್ರೆ, ಬೆಂಗಳೂರಿಗೆ ಚಂದ್ರಯಾನ್ -2ರ ಉಡ್ಡಯನಕ್ಕೆ ಬಂದೂ ಪ್ರವಾಹ ಪ್ರದೇಶ ಸಮೀಕ್ಷೆ ಇರಲಿ, ಕನಿಷ್ಠ ಆ ಬಗ್ಗೆ ಸಿಎಂ ಜೊತೆ ಒಂದು ಸಭೆಯನ್ನೂ ನಡೆಸದೇ ಹೋದ ಬಗ್ಗೆ ಸೇರಿದಂತೆ ಕೇಂದ್ರ ಸರ್ಕಾರ ಮತ್ತು ಬಿಜೆಪಿಯ ಧೋರಣೆಯ ಬಗ್ಗೆ ನಾವು ನಿರಂತರ ವರದಿಗಳನ್ನು ಮಾಡಿದ್ದೇವೆ. ಪ್ರಶ್ನೆಗಳನ್ನು ಎತ್ತಿದ್ದೇವೆ.
ರಾಜಕೀಯ ತಂತ್ರಗಾರಿಕೆಯ ಭಾಗವಾಗಿಯೋ, ಯಾವುದೋ ವ್ಯಕ್ತಿ ಅಥವಾ ಸಿದ್ಧಾಂತರ ಮುಖವಾಣಿಯಾಗಿಯೋ ದನಿ ಎತ್ತುವ ಮಾಧ್ಯಮಗಳಿಗಿಂತ ಭಿನ್ನವಾಗಿ ನಾವು ಜನರ ಪರ ದನಿ ಎತ್ತಿದ್ದೇವೆ. ಅಂತಹ ನಮ್ಮ ಬದ್ಧತೆಗೆ ಸಾಕ್ಷಿಯಾಗಿ ಇಲ್ಲಿವೆ, ಪ್ರವಾಹ ಪರಿಸ್ಥಿತಿ ನಿಭಾಯಿಸುವಲ್ಲಿ ಸರ್ಕಾರದ ವೈಫಲ್ಯ ಕುರಿತ ನಮ್ಮ ಸರಣಿ ವರದಿಗಳ ಲಿಂಕ್ ಇಲ್ಲಿವೆ.. ಗಮನಿಸಿ.
- ವಿದೇಶಗಳಿಗೆ ಸಾಲ ಕೊಡುವ ಪ್ರಧಾನಿಗಳೇ ಕರ್ನಾಟಕ ಭಾರತದ ಭಾಗವಲ್ಲವಾ?
https://kannada.truthindia.news/2019/09/25/does-karnataka-belongs-to-india-or-not-mr-pm/
- ಕೇಂದ್ರದಿಂದ ಪರಿಹಾರ ತರಲಾಗದ ಸರ್ಕಾರ, ಇಲಾಖಾ ಅನುದಾನಕ್ಕೇ ಕೈಹಾಕಿತು!
https://kannada.truthindia.news/2019/09/24/unable-to-get-central-fund-state-govt-grabs-dept-funds/
- ನೆರೆ ಸಂತ್ರಸ್ತರ ನೆರವಿಗೆ ಬಾರದ ಕೇಂದ್ರ ಕಾರ್ಪೊರೆಟ್ ವಲಯಕ್ಕೆ ಕೊಟ್ಟಿದ್ದು ₹1.45 ಲಕ್ಷ ಕೋಟಿ
- ಶಿಥಿಲ ಸರ್ಕಾರ, ಪ್ರತಿಪಕ್ಷಗಳ ಕುರ್ಚಿ ಕಾದಾಟದ ನಡುವೆ ಸಂತ್ರಸ್ತರ ಗತಿ ಅಯೋಮಯ!
- ಮತ್ತೆ ಸಿಎಂ ಭೇಟಿಗೆ ಪ್ರಧಾನಿ ಮೋದಿ ನಕಾರ, ಬಿಎಸ್ ವೈಗೆ ತೀವ್ರ ಮುಖಭಂಗ
https://kannada.truthindia.news/2019/09/18/again-pm-modi-shows-red-flag-to-cms-delhi-visit/
- ಸಂತ್ರಸ್ತರು ಬೀದಿಗೆ ಬಿದ್ದು ಐವತ್ತು ದಿನವಾದರೂ ಬಿಡಿಗಾಸಿನ ಪರಿಹಾರವಿಲ್ಲ ಏಕೆ?
- ಇತ್ತ ಗಂಜಿಕೇಂದ್ರದಲ್ಲಿ ಜನ ಗೋಳಿಡುತ್ತಿರುವಾಗ, ಅತ್ತ ದಿಲ್ಲಿಯಲ್ಲಿ ರಾಜ್ಯ ಸಂಪುಟ ಸರ್ಕಸ್?
https://kannada.truthindia.news/2019/08/16/karnataka-flood-and-apathy-of-bjp-highcommand/
- ಜನನಾಯಕರ ಹಲವು ಮುಖ ಬಿಚ್ಚಿಟ್ಟ ಕಂಡುಕೇಳರಿಯದ ಮಹಾಪ್ರವಾಹ!
https://kannada.truthindia.news/2019/08/10/one-flood-and-many-faces-of-political-leaders/