ರಾಜ್ಯಕ್ಕೆ ಬಿಡಿಗಾಸಿನ ಪ್ರವಾಹ ಪರಿಹಾರ ಘೋಷಿಸದೇ ಕಣ್ಣುಮುಚ್ಚಿ ಕೂತಿರುವ ಪ್ರಧಾನಿ ಮೋದಿ ಮತ್ತು ರಾಜ್ಯದ ಪರಿಸ್ಥಿತಿಯ ಬಗ್ಗೆ ಕೇಂದ್ರ ಸರ್ಕಾರದ ಮುಂದೆ ತುಟಿಬಿಚ್ಚದ ರಾಜ್ಯದ ಸಂಸದರ ವಿರುದ್ಧ ಕಳೆದ ಎರಡು ದಿನಗಳಿಂದ ರಾಜ್ಯಾದ್ಯಂತ ಆಕ್ರೋಶ ಭುಗಿಲೆದ್ದಿದೆ. ಬೆಳಗಾವಿಯ ಬೀದಿಯಿಂದ ಬೆಂಗಳೂರಿನ ಟಿವಿ ಸ್ಟುಡಿಯೋಗಳವರೆಗೆ ಎಲ್ಲೆಡೆ ಬಿಜೆಪಿ ಸರ್ಕಾರ ಮತ್ತು ಸಂಸದರ ಹೊಣೆಗೇಡಿತನಕ್ಕೆ ಛೀಮಾರಿ ಹಾಕಲಾಗುತ್ತಿದೆ.
ಈ ನಡುವೆ ಬಿಜೆಪಿ ಮತ್ತು ಅದರ ಪರಿವಾರದ ನಡುವೆಯೇ ಪ್ರವಾಹ ಪರಿಹಾರದ ವಿಷಯ ಪರಸ್ಪರ ಕೆಸರೆರಚಾಟದ ಸಂಗತಿಯಾಗಿದ್ದು, ರಾಜ್ಯ ಸರ್ಕಾರ ಮತ್ತು ಸಿಎಂ ಹಾಗೂ ಕೇಂದ್ರ ಸರ್ಕಾರದ ವಿರುದ್ಧದ ಜನಾಕ್ರೋಶವನ್ನು ದಿಕ್ಕುತಪ್ಪಿಸುವ ತಂತ್ರಗಾರಿಕೆಯ ಭಾಗವಾಗಿ ಚಕ್ರವರ್ತಿ ಸೂಲಿಬೆಲೆ, ಬಸನಗೌಡ ಪಾಟೀಲ್ ಯತ್ನಾಳರಂಥವರು ಹೊಸ ದಾಳಗಳನ್ನು ಉರುಳಿಸಿದ್ದಾರೆ. ಪ್ರವಾಹ ಬಂದು ಅರ್ಧ ರಾಜ್ಯವನ್ನೇ ಕೊಚ್ಚಿ ಓಯ್ದು ಎರಡು ತಿಂಗಳು ಕಳೆದರೂ ನಯಾಪೈಸೆ ನೆರವು ನೀಡದ ಕೇಂದ್ರದ ಬಿಜೆಪಿ ಸರ್ಕಾರ ಮತ್ತು ನರೇಂದ್ರ ಮೋದಿಯವರನ್ನು ಸಮರ್ಥಿಸಿಕೊಳ್ಳುವ ಮತ್ತು ಸಿಎಂ ಯಡಿಯೂರಪ್ಪ ಅವರನ್ನು ಸಮರ್ಥಿಸಿಕೊಂಡು ಮೋದಿ ಟೀಕಿಸುವ ಇಬ್ಬರೂ ಬಿಜೆಪಿಯವರೇ, ಬಿಜೆಪಿಯ ಪರಿವಾರದವರೇ ಎಂಬುದು ಗಮನಾರ್ಹ. ಹಾಗಾಗಿಯೇ ಈ ನಾಯಕರ, ಬಿಜೆಪಿ ಭಾಷಣಕಾರರ ಟೀಕೆ, ಆಕ್ರೋಶಗಳು, ದೇಶದ್ರೋಹದ ಪಟ್ಟಗಳು ಕೂಡ ತಂತ್ರಗಾರಿಕೆಯ ಭಾಗವೇ ಎಂಬ ಅನುಮಾನಗಳು ಜನಸಾಮಾನ್ಯರನ್ನು ಕಾಡತೊಡಗಿವೆ.
ಈ ಹಾದಿರಂಪ, ಬೀದಿರಂಪದ ನಡುವೆ ಬಿಜೆಪಿಯ ಬಣಗಳು, ಬಣಗಳ ನಾಯಕರು ಸಂತ್ರಸ್ತರ ಹೆಸರಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿರುವಾಗಲೇ ಅಸಲೀ ಸಂತ್ರಸ್ತರು ದಿಕ್ಕೆಟ್ಟು ಆತ್ಮಹತ್ಯೆಯ ಹಾದಿ ಹಿಡಿದಿದ್ದಾರೆ. ಗುರುವಾರ ಕೂಡ ಚಿಕ್ಕಮಗಳೂರು ಜಿಲ್ಲೆಯ ಕಳಸ ಸಮೀಪದ ಎಸ್ ಕೆ ಮೇಗಲ್ ಎಂಬ ಹಳ್ಳಿಯ ಚಂದ್ರೇಗೌಡ(55) ಎಂಬ ರೈತ ಪ್ರವಾಹದಿಂದ ಗುಡ್ಡುಕುಸಿತ ಉಂಟಾಗಿ ಕೊಚ್ಚಿಹೋದ ತನ್ನ ಒಂದು ಎಕರೆ ತೋಟ-ಗದ್ದೆಯನ್ನು ಮತ್ತೆ ಸರಿಪಡಿಸಲಾಗದೆ ಹತಾಶನಾಗಿ ವಿಷ ಸೇವಿಸಿ ಜೀವಬಿಟ್ಟಿದ್ದಾನೆ. ಸುಮಾರು ಇಪ್ಪತ್ತು ದಿನದ ಅಂತರದಲ್ಲಿ ಜಿಲ್ಲೆಯಲ್ಲಿ ಪ್ರವಾಹ ಸಂತ್ರಸ್ತ ರೈತನ ಎರಡನೇ ಆತ್ಮಹತ್ಯೆ ಇದು. ಸೆಪ್ಟೆಂಬರ್ ಎರಡನೇ ವಾರ ಕೂಡ ಅದೇ ಕಳಸ ಸಮೀಪದ ಕಾರ್ಗದ್ದೆಯ ಚನ್ನಪ್ಪಗೌಡ(65) ಎಂಬ ರೈತ ಕೂಡ ಇದ್ದ ಐದು ಎಕರೆ ಕಾಫಿತೋಟ ಪೂರಾ ಕೊಚ್ಚಿಹೋಗಿ ಗುಂಡು ಹಾರಿಸಿಕೊಂಡು ಭೀಕರವಾಗಿ ಜೀವ ತೆಗೆದುಕೊಂಡಿದ್ದ.
ಒಂದು ಕಡೆ ಹತ್ತಾರು ವರ್ಷಗಳ ಕಾಲ ಹೊಟ್ಟೆಬಟ್ಟೆ ಕಟ್ಟಿ ನಿರ್ಮಿಸಿದ ತೋಟ, ಗದ್ದೆಗಳು ಸಂಪೂರ್ಣ ಕುಸಿದು, ಮಣ್ಣಿನ ರಾಶಿ ತುಂಬಿ ಹೋದರೆ, ಮತ್ತೊಂದು ಕಡೆ ಮುಳುಗುವವನಿಗೆ ಹುಲ್ಲುಕಡ್ಡಿಯ ಆಸರೆಯಂತೆ ಒದಗಿ ಬರಬೇಕಾಗಿದ್ದ ಸರ್ಕಾರದ ಪರಿಹಾರ ಕೂಡ ಸಕಾಲಕ್ಕೆ ಈ ನತದೃಷ್ಟರ ಕೈಸೇರಿಲ್ಲ. ಬಹುಶಃ ಒಂದಿಷ್ಟು ನೆರವು ಕೈಸೇರಿದ್ದರೆ, ಊಟ- ವಸತಿಗೆ ಕೂಡಲೇ ವ್ಯವಸ್ಥೆಯಾಗಿದ್ದರೆ ಈ ಅನ್ನದಾತರು ಹೀಗೆ ಮನೆಮಂದಿಯನ್ನು ಮರೆತು ಜೀವ ತೆಗೆದುಕೊಳ್ಳುವ ಮಟ್ಟಿಗೆ ಹತಾಶರಾಗುತ್ತಿರಲಿಲ್ಲ. ಜನರಿಂದ ಆರಿಸಿಹೋದ ಜನಪ್ರತಿನಿಧಿಗಳು, ಸರ್ಕಾರ, ಆಡಳಿತ ವ್ಯವಸ್ಥೆ ಇಂತಹ ನಿರಾಶೆಯ ಹೊತ್ತಲ್ಲಿ, ಎಲ್ಲವನ್ನೂ ಕಳೆದುಕೊಂಡು, ಇನ್ನೇನೂ ಮುಗಿದೇಹೋಯಿತು ಎಂಬ ನಿರಾಶೆಯ ಹತಾಶೆಯ ಕ್ಷಣದಲ್ಲಿ, ನಾವಿದ್ದೇವೆ ನಿನ್ನ ನೋವು ಕೇಳಲು ಎಂದು ಒಂದು ಕನಿಷ್ಠ ಭರವಸೆ ಹುಟ್ಟಿಸಿದ್ದರೂ ಈ ಸಾವುಗಳನ್ನು ತಡೆಯುವುದು ಸಾಧ್ಯವಿತ್ತು. ಆದರೆ, ಅಚ್ಛೇದಿನ ಧರೆಗಿಳಿಸುತ್ತೇವೆ ಎಂದವರಾಗಲೀ, ಅಭಿವೃದ್ಧಿಯ ಪರ್ವವನ್ನೇ ಆರಂಭಿಸುತ್ತೇವೆ ಎಂದವರಾಗಲೀ ಯಾರೂ ಜನರ ಸಂಕಷ್ಟದ ಹೊತ್ತಲ್ಲಿ ನೆರವಿಗೆ ಬರಲಿಲ್ಲ. ಸ್ವತಃ ಸಂಸದರು, ಸಚಿವರು, ಶಾಸಕರು ಕೂಡ ಮುಗ್ಧ ರೈತರ ಪಾಲಿಗೆ ಭರವಸೆಯ ಮಾತನಾಡಲಿಲ್ಲ.
ಹಾಗೆ ನೋಡಿದರೆ ಚಿಕ್ಕಮಗಳೂರು ಮಾತ್ರವಲ್ಲ; ರಾಜ್ಯದ ಭೀಕರ ಪ್ರವಾಹಕ್ಕೆ ಸಿಕ್ಕು ನಲುಗಿರುವ ಉತ್ತರಕರ್ನಾಟಕದ ಭಾಗದಲ್ಲೀ ಪರಿಸ್ಥಿತಿ ಭಿನ್ನವಾಗೇನೂ ಇಲ್ಲ. ಕೇವಲ 20 ದಿನಗಳ ಹಿಂದೆ, ಸೆಪ್ಟೆಂಬರ್ ಎರಡನೇ ವಾರ ಬೆಳಗಾವಿಯ ರಾಮದುರ್ಗದ ಹಲಗತ್ತಿಯ ಸಂತ್ರಸ್ತ ರೈತ ರಮೇಶ್ ನೀಲಕಂಠಪ್ಪ ಹವಳಕೋಡ(47) ನೇಣಿಗೆ ಶರಣಾಗಿದ್ದರು. ನೇಕಾರನಾಗಿದ್ದ ಆತನ ಮನೆ ಮತ್ತು ಮಗ್ಗ ಎರಡೂ ಸಂಪೂರ್ಣ ಪ್ರವಾಹದಲ್ಲಿ ಕೊಚ್ಚಿಹೋಗಿದ್ದವು. ಕುಸಿದ ಮನೆಯಲ್ಲೇ ಆತ ನೇಣಿಗೆ ಕೊರಳೊಡ್ಡಿದ್ದ. ಅದೇ ಬೆಳಗಾವಿಯ ಚಿಕ್ಕೋಡಿ ತಾಲೂಕಿನ ಕಾಲೋಲ್ ಎಂಬ ಹಳ್ಳಿಯ ಅಪ್ಪಾಸಾಬ್ ಕಾಳಪ್ಪ ಮಂಗವಟ್ಟಿ(50) ಎಂಬ ರೈತ ಕಬ್ಬಿನ ಬೆಳೆಗಾರ ಕೂಡ ಆಗಸ್ಟ್ ನಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದ. ಆತನ ಕಬ್ಬಿನ ಬೆಳೆ ಸಂಪೂರ್ಣ ಕೊಚ್ಚಿಹೋಗಿ, ದಿಕ್ಕುಗಾಣದೆ ಹತಾಶನಾಗಿ ಈ ಕೃತ್ಯ ಎಸಗಿದ್ದ.
ಅಂದರೆ, ಈವರೆಗೆ ಎರಡು ತಿಂಗಳಲ್ಲಿ ಪ್ರವಾಹದಿಂದ ಹೊಲ-ಮನೆ, ತೋಟ ಕಳೆದುಕೊಂಡು ಬೀದಿಗೆ ಬಿದ್ದಿದ್ದ ಮತ್ತು ಅದೇ ಹೊತ್ತಿಗೆ ಸರ್ಕಾರದಿಂದ ಬಿಡಿಗಾಸಿನ ನೆರವು ಸಿಗದೇ ಅಧೀರರಾದ ನಾಲ್ವರು ಸಂತ್ರಸ್ತರು ಜೀವ ಕಳೆದುಕೊಂಡಿದ್ದಾರೆ. ಹೀಗೆ ಸಂತ್ರಸ್ತರು ಸಾಲುಸಾಲಾಗಿ ಆತ್ಮಹತ್ಯೆಯ ದಾರಿ ಹಿಡಿದಿರುವ ಹೊತ್ತಲ್ಲಿ ಕೂಡ ಭರವಸೆ ತುಂಬಬೇಕಾದ ಜನನಾಯಕರು ಪರಸ್ಪರ ಆರೋಪ ಪ್ರತ್ಯಾರೋಪ, ‘ವಿಶ್ವಗುರು’ವಿನ ಭಜನೆಯಲ್ಲಿ ಮುಳುಗಿದ್ದಾರೆ.
ಆತ್ಮಹತ್ಯೆ ಹಾದಿ ಹಿಡಿದಿರುವ ಸಂತ್ರಸ್ತರಿಗೆ ಧೈರ್ಯತುಂಬಿ, ಭರವಸೆ ಮೂಡಿಸುವ ಮಾತನಾಡುವ ಬದಲು, ಬಿಜೆಪಿ ಸಂಸದರು, ಸಚಿವರುಗಳು ಕೇಂದ್ರದಿಂದ ಪರಿಹಾರ ಹಣ ನೀಡದೇ ಇದ್ದರೆ ಏನೂ ಜಗತ್ತು ತಲೆಕೆಳಗಾಗಿಲ್ಲ ಎಂಬ ವಾದ ಮುಂದಿಡುತ್ತಿದ್ದಾರೆ. ಕರ್ನಾಟಕವೊಂದರಲ್ಲೇ ಪ್ರವಾಹ ಬಂದಿಲ್ಲ, ದೇಶದ 16 ರಾಜ್ಯಗಳಲ್ಲಿ ಪ್ರವಾಹ ಇದೆ. ಆ ರಾಜ್ಯಗಳಿಗೂ ಪರಿಹಾರ ನೀಡುವಾಗ ರಾಜ್ಯಕ್ಕೂ ರಾಜ್ಯದ ಪಾಲು ಸಿಗಲಿದೆ ಎನುತ್ತಿದ್ದಾರೆ. ಆದರೆ, ಈ ಹೊಣೆಗೇಡಿ ಸಂಸದರಿಗೆ ಗೊತ್ತಿರಲಿ, ರಾಜ್ಯದಲ್ಲಿ ಪ್ರವಾಹ ಉಂಟಾಗಿದ್ದು ಎರಡು ತಿಂಗಳ ಹಿಂದೆ. ಅದೂ ಶತಮಾನದ ಭೀಕರ ಪ್ರವಾಹ. ಯಾವುದೇ ನೈಸರ್ಗಿಕ ವಿಕೋಪ ಪರಿಸ್ಥಿತಿ ಎದುರಾದಾಗ ಹಾನಿಯ ಅಂದಾಜು ವರದಿ ತರಿಸಿಕೊಂಡು ಹಣ ಬಿಡುಗಡೆ ಮಾಡುವುದು ಎರಡನೆಯದ್ದು. ಆದರೆ, ಅದಕ್ಕೆ ಮುನ್ನ ಪ್ರವಾಹ ಪರಿಸ್ಥಿತಿ ನಿಭಾಯಿಸಲು ತತಕ್ಷಣಕ್ಕೆ ತುರ್ತು ಪರಿಹಾರ ಘೋಷಿಸುವುದು ಯಾವುದೇ ಜವಾಬ್ದಾರಿಯುತ ಸರ್ಕಾರದ ಹೊಣೆ ಮತ್ತು ಅದೇ ದೇಶದ ಸಂಪ್ರದಾಯ ಕೂಡ.
ರಾಜ್ಯ ಸರ್ಕಾರದ ವರದಿ ಪ್ರಕಾರವೇ ರಾಜ್ಯದ 22 ಜಿಲ್ಲೆಗಳ ಒಟ್ಟು 120 ತಾಲೂಕುಗಳ ಸುಮಾರು 8 ಲಕ್ಷ ಮಂದಿ ಮನೆ ಕಳೆದುಕೊಂಡು ಬೀದಿಪಾಲಾಗಿದ್ದಾರೆ. ಒಟ್ಟಾರೆ 20 ಲಕ್ಷ ಎಕರೆ ಬೆಳೆ ನಷ್ಟವಾಗಿದೆ. ಸುಮಾರು 100 ಮಂದಿ ಜೀವ ಕಳೆದುಕೊಂಡಿದ್ದಾರೆ. ಆದರೆ, ಈವರೆಗೆ ರಾಜ್ಯ ಸರ್ಕಾರದಿಂದ ಸುಮಾರು 2500 ಕೋಟಿ ರೂಪಾಯಿಗಳನ್ನು ಸಂತ್ರಸ್ತರಿಗೆ ತಲಾ ಹತ್ತು ಸಾವಿರ ತುರ್ತು ಪರಿಹಾರ ನೀಡಲು ಮತ್ತು ಮನೆ ನಿರ್ಮಾಣಕ್ಕೆ ಒಂದು ಸಾವಿರ ಕೋಟಿ ರೂ. ಬಿಡುಗಡೆ ಮಾಡಿರುವುದಾಗಿ ಸರ್ಕಾರ ಹೇಳಿದ್ದು ಹೊರತುಪಡಿಸಿದರೆ, ಇನ್ನಾವುದೇ ಅನುದಾನ ಬಂದಿಲ್ಲ. ತಲಾ ಹತ್ತು ಸಾವಿರ ತುರ್ತು ಪರಿಹಾರ ಕೂಡ ಎಲ್ಲ ಸಂತ್ರಸ್ತರಿಗೆ ತಲುಪಿಲ್ಲ ಎಂಬುದು ವಾಸ್ತವ. ಇನ್ನು ಹೆಚ್ಚಿನ ಹಣ ಕೊಡಲು ರಾಜ್ಯ ಸರ್ಕಾರದ ಖಜಾನೆಯಲ್ಲೂ ಹಣವಿಲ್ಲ ಎಂದು ಸ್ವತಃ ಸಿಎಂ ಹೇಳಿದ್ದಾರೆ.
ಪರಿಸ್ಥಿತಿ ಹೀಗಿರುವಾಗ, ನಿಯೋಗ ತೆರಳಿ ರಾಜ್ಯ ಸರ್ಕಾರದ ಬಳಿ ಕೂಡ ಪರಿಹಾರ ಕಾರ್ಯಕ್ಕೆ ಹಣವಿಲ್ಲ ಎಂಬುದನ್ನು ಮನವರಿಕೆ ಮಾಡಿ, ಪ್ರಧಾನಿಯ ಮೇಲೆ ಒತ್ತಡ ಹೇರಿ ತೀರಾ ವಿಳಂಬವಾಗಿಯಾದರೂ ಸರಿ ತಕ್ಷಣವೇ ಒಂದಿಷ್ಟು ಹಣ ಬಿಡುಗಡೆ ಮಾಡಿಸಿ ಜನರ ಕಷ್ಟಕ್ಕೆ ಸ್ಪಂದಿಸುವ ಬದಲು, ಎರಡು ತಿಂಗಳಿಂದ ಸಂತ್ರಸ್ತರ ಕಷ್ಟ ಕೇಳದ ತಮ್ಮನ್ನು ಪ್ರಶ್ನಿಸಿದವರನ್ನೇ ಕಟಕಟೆಯಲ್ಲಿ ನಿಲ್ಲಿಸುವ ಪ್ರಯತ್ನ ಮಾಡುತ್ತಿರುವ ರಾಜ್ಯದ 25 ಮಂದಿ ಬಿಜೆಪಿ ಸಂಸದರು ನಿಜಕ್ಕೂ ಜನಪ್ರತಿನಿಧಿಯಾಗಲು ಅರ್ಹರಾ? ಎಂಬ ಪ್ರಶ್ನೆ ಕಾಡುತ್ತಿದೆ. ತಮ್ಮನ್ನು ಆರಿಸಿ ಕಳಿಸಿದ ಜನ, ತಾವು ಪ್ರತಿನಿಧಿಸುವ ರಾಜ್ಯದ ಹಿತಕ್ಕಿಂತ ಇವರಿಗೆ ಪಕ್ಷ ಮತ್ತು ತಮ್ಮ ನಾಯಕನ ಬಾಲಬಡುಕತನವೇ ಮುಖ್ಯವಾಯಿತೆ? ಎಂಬ ಪ್ರಶ್ನೆ ಈಗ ಎದ್ದಿದೆ.
ಸಾಲು ಸಾಲು ಸಂತ್ರಸ್ತರು ಆತ್ಮಹತ್ಯೆಯ ಹಾದಿ ಹಿಡಿದಿರುವಾಗಲೂ ಕೂಡ ಪ್ರವಾಹ ಪರಿಸ್ಥಿತಿಯ ಭೀಕರತೆಯನ್ನು ಅರಿಯುವ ಮತ್ತು ಜನರ ಸಂಕಷ್ಟಕ್ಕೆ ಸ್ಪಂದಿಸುವ ಪ್ರಯತ್ನ ಮಾಡದೇ, ಕೇವಲ ತಮ್ಮ ನಾಯಕನ ‘ಭಜನೆ’ಯಲ್ಲೇ ಮುಳುಗಿರುವ ರಾಜ್ಯದ ‘ಭಕ್ತ’ ಸಂಸದರ ವರಸೆ ಇದೀಗ ಜನಸಾಮಾನ್ಯರಲ್ಲಿ ಆಕ್ರೋಶ ಮತ್ತು ಹೇಸಿಗೆ ಹುಟ್ಟಿಸಿದ್ದು, ಅಂತಿಮವಾಗಿ ಜನರ ಸಹನೆಯ ಕಟ್ಟೆಯೊಡೆದಿದೆ. ಜನ ಬೀದಿಗೆ ಇಳಿದಿದ್ದಾರೆ. ‘ಅಚ್ಛೇದಿನ’, ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’, ‘ಮತ್ತೊಮ್ಮೆ ಮೋದಿ’, ‘ದೇಶಕ್ಕಾಗಿ ಮೋದಿ, ಮೋದಿಗಾಗಿ ನಾವು’ ಮುಂತಾದ ಬಣ್ಣದ ಮಾತಿನ ಘೋಷಣೆಗಳಿಗೆ ಮರಳಾಗಿ ಮೋದಿ ಮುಖ ನೋಡಿ ತಾವು ಆರಿಸಿ ಕಳಿಸಿದ್ದು ಅಯೋಗ್ಯ ಸಂಸದರನ್ನು ಎಂಬುದು ತಡವಾಗಿ ಅರ್ಥಮಾಡಿಕೊಂಡಿರುವ ಪ್ರವಾಹ ಸಂತ್ರಸ್ತರು ಇದೀಗ ತಮ್ಮ ತಪ್ಪಿನ ಅರಿವಾಗಿ ತಮ್ಮನ್ನೇ ಶಪಿಸಿಕೊಳ್ಳತೊಡಗಿದ್ದಾರೆ.
ವಾಸ್ತವ ಬದುಕಿನ ಬದಲಾವಣೆಯ ಮಾತುಗಳಿಲ್ಲದೆ, ಕೇವಲ ಪಾಕಿಸ್ತಾನ, ಭಯೋತ್ಪಾದನೆ, ನೆಹರು, ಗಾಂಧಿ ಎಂಬ ಹುಸಿ ಮಾತುಗಳ, ಬೊಗಳೆ ಭರವಸೆಗಳ ನೆಚ್ಚಿ ಚುನಾವಣೆಯಲ್ಲಿ ಮತ ಹಾಕಿದರೆ ಜನ ಎಂತಹ ನರಕ ಅನುಭವಿಸಬೇಕಾಗುತ್ತದೆ ಮತ್ತು ಜೊತೆಗೆ ಮೂರ್ಖರನ್ನು ಆರಿಸಿಕಳಿಸಿದ ತಪ್ಪಿಗೆ ತಾವೇ ಮತ ಹಾಕಿ ದಿಲ್ಲಿಗೆ ಕಳಿಸಿದವರಿಂದಲೇ ಅಪಹಾಸ್ಯದ ಮಾತುಗಳನ್ನು ಕೇಳಬೇಕಾಗುತ್ತದೆ ಎಂಬುದಕ್ಕೆ ರಾಜ್ಯದ ಮತದಾರರು ಜ್ವಲಂತ ನಿದರ್ಶನವಾಗಿದ್ದಾರೆ. ಹುಸಿ ಭೀತಿ, ಹುಸಿ ದೇಶಪ್ರೇಮ, ಹುಸಿ ಭರವಸೆಗಳ ಮೇಲೆ ತೇಲಿಹೋಗಿದ್ದ ಮತದಾರ ಇದೀಗ ಪ್ರವಾಹದ ಸುಳಿಗೆ ಸಿಲುಕಿ ತಾನು ಮತಹಾಕಿದ ನಾಯಕರ ಅಸಲೀಮುಖ ದರ್ಶನ ಮಾಡಿಕೊಂಡಿದ್ದಾನೆ. ಒಂದು ಭೀರಕ ಪ್ರವಾಹ ಏಕಕಾಲಕ್ಕೆ ಮತದಾರರನ್ನೂ, ಮತ ಪಡೆದು ದಿಲ್ಲಿ ಸೇರಿದ ನಾಯಕರನ್ನು ಬೆತ್ತಲು ಮಾಡಿದೆ! ಸುಳ್ಳು-ಪೊಳ್ಳುಗಳ ಮುಖವಾಡ ಕಳಸಿ ಕಟುವಾಸ್ತವದ ಸುಳಿಯಲ್ಲಿ ಬದುಕು ಸಿಲುಕಿದೆ.