ಭೀಕರ ಪ್ರವಾಹ ಬಂದು ಅರ್ಧ ರಾಜ್ಯ ಕೊಚ್ಚಿಹೋಗಿ ಬರೋಬ್ಬರಿ ಎರಡು ತಿಂಗಳ ಬಳಿಕ ಕೇಂದ್ರ ಸರ್ಕಾರ ಪರಿಹಾರ ಹಣವಾಗಿ 1200 ಕೋಟಿ ರೂ. ನೆರವು ಘೋಷಿಸಿದೆ. ಆ ಮೂಲಕ ತೀವ್ರ ಒತ್ತಡಕ್ಕೆ ಸಿಲುಕಿದ್ದ ಬಿ ಎಸ್ ಯಡಿಯೂರಪ್ಪ ಅವರ ರಾಜ್ಯ ಸರ್ಕಾರ ಮತ್ತು ರಾಜ್ಯ ಬಿಜೆಪಿ ನಾಯಕರ ಮಾನ ಕಾಯಲಾಗಿದೆ. ಪ್ರವಾಹ ಸಂತ್ರಸ್ತರು ಮತ್ತು ರಾಜ್ಯದ ಜನರ ತೀವ್ರ ಆಕ್ರೋಶಕ್ಕೆ ಗುರಿಯಾಗಿದ್ದ ಬಿಎಸ್ ವೈ ಸರ್ಕಾರ ಸದ್ಯ ಬೀಸೋ ದೊಣ್ಣೆಯಿಂದ ಪಾರಾಗಿ ನಿಟ್ಟುಸಿರು ಬಿಟ್ಟಿದೆ.
ಆದರೆ, ಬರೋಬ್ಬರಿ 38 ಸಾವಿರ ಕೋಟಿ ನಷ್ಟ ಸಂಭವಿಸಿದೆ ಎಂದು ರಾಜ್ಯ ಸರ್ಕಾರವೇ ವರದಿ ಸಲ್ಲಿಸಿದ್ದರೂ, ಆ ಪೈಕಿ ಐದು ಸಾವಿರ ಕೋಟಿ ತುರ್ತು ಪರಿಹಾರ ಘೋಷಿಸುವಂತೆ ಕೋರಿದ್ದರೂ, ಕೇಂದ್ರ ಸರ್ಕಾರ ಕೇವಲ 1200 ಕೋಟಿ ರೂ. ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಆದರೆ, ಸದ್ಯ ಬಿಡುಗಡೆಯಾಗಿರುವುದು ಕೇವಲ 897 ಕೋಟಿ ರೂ. ಮಾತ್ರ. ಉಳಿದ 303 ಕೋಟಿ ನೆರವನ್ನು ಮುಂದಿನ ದಿನಗಳಲ್ಲಿ ನೀಡುವುದಾಗಿ ಹೇಳಲಾಗಿದೆ. ವಾಸ್ತವವಾಗಿ ಆ ಮೊತ್ತದ ಬಗ್ಗೆಯೂ ಸಾಕಷ್ಟು ಪ್ರಶ್ನೆಗಳು ಎದ್ದಿವೆ. ಏಕೆಂದರೆ, ಕಳೆದ ವರ್ಷದ ಬರ ಪರಿಹಾರ ಮೊತ್ತದ ಪೈಕಿ ಬಿಡುಗಡೆಗೆ ಬಾಕಿ ಉಳಿದಿದ್ದ 1029.39 ಕೋಟಿ ರೂ. ಗಳನ್ನು ಬಿಡುಗಡೆ ಮಾಡಲು ಕಳೆದ ಆಗಸ್ಟ್ ನಲ್ಲೇ ಗೃಹ ಸಚಿವ ಅಮಿತ್ ನೇತೃತ್ವದ ಉನ್ನತ ಮಟ್ಟದ ಸಮಿತಿ ನಿರ್ಧರಿಸಿದ್ದರೂ ಈವರೆಗೆ ಆ ಹಣ ಬಂದಿರುವ ಬಗ್ಗೆ ಸರ್ಕಾರ ಖಾತ್ರಿಪಡಿಸಿಲ್ಲ. ಹಾಗಾಗಿ ಈಗಿನ ಪ್ರವಾಹ ಪರಿಹಾರ ಮೊತ್ತದಲ್ಲಿ ಆ ಮೊತ್ತವೂ ಸೇರಿದೆಯೇ ಅಥವಾ ಇದು ಪ್ರತ್ಯೇಕವೇ ಎಂಬ ಬಗ್ಗೆ ಇನ್ನಷ್ಟೇ ಸರ್ಕಾರದಿಂದ ಸ್ಪಷ್ಟನೆ ಬರಬೇಕಿದೆ.
ಈ ನಡುವೆ, ಯಾವುದೇ ಭೀಕರ ಪ್ರವಾಹ ಮುಂತಾದ ದಿಢೀರ್ ನೈಸರ್ಗಿಕ ವಿಪತ್ತಿನ ಸಂದರ್ಭದಲ್ಲಿ ತತಕ್ಷಣಕ್ಕೆ, ಸಮೀಕ್ಷೆ, ವರದಿಗಳಿಗೆ ಮುಂಚೆ, ತುರ್ತು ಪರಿಹಾರ ನೀಡಿ ಸಂತ್ರಸ್ತರಿಗೆ ತಕ್ಷಣಕ್ಕೆ ಬೇಕಾದ ತುರ್ತು ನೆರವು, ಸೌಲಭ್ಯ, ಸೌಕರ್ಯ ನೀಡಲು ಸಹಕರಿಸುವುದು ವಾಡಿಕೆ. ಈ ಹಿಂದೆ ಬೇರೆ ಬೇರೆ ಸರ್ಕಾರಗಳು ಇದ್ದಾಗಲೂ, ಕರ್ನಾಟಕ ಮಾತ್ರವಲ್ಲ, ಬೇರೆ ಬೇರೆ ರಾಜ್ಯಗಳಲ್ಲಿ ಇಂತಹ ಪರಿಸ್ಥಿತಿ ಉಂಟಾದಾಗಲೂ ಹಾಗೆ ತುತ್ತು ನೆರವು ನೀಡಲಾಗಿತ್ತು. 2009ರಲ್ಲಿ ಇದೇ ಬಿ ಎಸ್ ವೈ ಸಿಎಂ ಆಗಿದ್ದಾಗ ಉಂಟಾಗಿದ್ದ ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕದ ಪ್ರವಾಹ ಪರಿಸ್ಥಿತಿಯ ಖುದ್ದು ವೈಮಾನಿಕ ಸಮೀಕ್ಷೆ ನಡೆಸಿದ್ದ ಅಂದಿನ ಪ್ರಧಾನಿ ಮನಮೋಹನ ಸಿಂಗ್ ಅಂದೇ 1600 ಕೋಟಿ ರೂ. ತತಕ್ಷಣದ ನೆರವು ಘೋಷಿಸಿದ್ದರು. ಸ್ವತಃ ಪ್ರಧಾನಿ ಮೋದಿಯವರು ತಮ್ಮ ಮೊದಲ ಅವಧಿಯಲ್ಲಿ ತಮ್ಮ ತವರು ರಾಜ್ಯ ಗುಜರಾತ್ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾದಾಗ ತತಕ್ಷಣಕ್ಕೆ ನೆರವು ಘೋಷಿಸಿದ್ದರು. ಸ್ವತಃ ಹೋಗಿ ವೈಮಾನಿಕ ಸಮೀಕ್ಷೆ ನಡೆಸಿದ್ದರು.
ಆದರೆ, ಕರ್ನಾಟಕದ ವಿಷಯದಲ್ಲಿ ಯಾಕೆ ಈ ಬಾರಿ ತಮ್ಮದೇ ಸರ್ಕಾರವಿದ್ದರೂ, ದಕ್ಷಿಣದ ರಾಜ್ಯಗಳಲ್ಲೇ ಅತಿ ಹೆಚ್ಚು ಸಂಸದರನ್ನು ನೀಡಿದ್ದರೂ ಕೇಂದ್ರ ಸರ್ಕಾರ ಮತ್ತು ಪ್ರಧಾನಿ ಮೋದಿಯವರು ಈ ಪರಿ ನಿರ್ಲಕ್ಷ್ಯ ವಹಿಸಿದ್ದಾರೆ? ನಾಲ್ಕೈದು ಸಮೀಕ್ಷಾ ವರದಿಗಳು, ಸ್ವತಃ ಅಮಿತ್ ಶಾ ಮತ್ತು ನಿರ್ಮಲಾ ಸೀತಾರಾಮನ್ ಅವರು ಸಮೀಕ್ಷೆ ನಡೆಸಿದರೂ ಯಾಕೆ 60 ದಿನಗಳವರೆಗೆ ಒಂದೇ ಒಂದು ನಯಾಪೈಸೆ ನೆರವು ಕೊಡಲಿಲ್ಲ? ರಾಜ್ಯದ ಪ್ರವಾಹ ಮತ್ತು ಸಂತ್ರಸ್ತರ ಗೋಳಿನ ನಡುವೆಯೇ ರಷ್ಯಾಕ್ಕೆ, ಪ್ಯಾಸಿಫಿಕ್ ದ್ವೀಪರಾಷ್ಟ್ರಗಳಿಗೆ ಮತ್ತು ಮಾರಿಷಸ್ ಗೆ ಸಾವಿರಾರು ಕೋಟಿ ನೆರವು ಘೋಷಿಸಿದ ಪ್ರಧಾನಿ, ಕರ್ನಾಟಕದ ಅರ್ಧ ಭಾಗ ಕೊಚ್ಚಿಹೋಗಿದೆ. ಬರೋಬ್ಬರಿ ಹತ್ತು ಲಕ್ಷಕ್ಕೂ ಅಧಿಕ ಸಂಖ್ಯೆಯ ಸಂತ್ರಸ್ತರು ಬೀದಿಗೆಬಿದ್ದಿದ್ದಾರೆ. ಸುಮಾರು 2.5 ಲಕ್ಷ ಮನೆಗಳ ಸಂಪೂರ್ಣ ಕೊಚ್ಚಿಹೋಗಿವೆ, ಸುಮಾರು 20 ಲಕ್ಷ ಎಕರೆ ಬೆಳೆ ಹಾನಿಯಾಗಿದೆ ಎಂಬ ವಿವರಗಳು ಗೊತ್ತಿದ್ದೂ ಯಾಕೆ ಮೋದಿ, ‘ದೇಶಕ್ಕಾಗಿ ಮೋದಿ ಮೋದಿಗಾಗಿ ನಾವು’ ಎಂದು ಎದೆತಟ್ಟಿಕೊಂಡು ತಮ್ಮನ್ನು ಗೆಲ್ಲಿಸಿದ ಕನ್ನಡಿಗರತ್ತ ಕಣ್ಣೆತ್ತಿಯೂ ನೋಡಲಿಲ್ಲ?.
ದೇಶದಲ್ಲೇ ಅತಿಹೆಚ್ಚು ತೆರಿಗೆ ಪಾವತಿಸುವ ರಾಜ್ಯಗಳಲ್ಲಿ ನಾವು ಮುಂದಿದ್ದೇವೆ. ಬಿಜೆಪಿಗೆ ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಗಳಲ್ಲಿ ಕಳೆದ ಎರಡು ದಶಕದಿಂದ ದೊಡ್ಡ ಮಟ್ಟದ ಸ್ಥಾನಗಳನ್ನು ಗೆಲ್ಲಿಸಿಕೊಟ್ಟಿದ್ದೇವೆ. ಕಳೆದ ಚುನಾವಣೆಯಲ್ಲಂತೂ ಮೋದಿಯವರೇ ಹೇಳಿದಂತೆ ‘ಮೋದಿ ಮತ್ತೊಮ್ಮೆ’ ಘೋಷಣೆ ಕೂಗಿ ಅವರ ಮುಖ ನೋಡಿ, ಹಲವಾರು ಮಂದಿ ರಾಜಕಾರಣದ ಗಂಧಗಾಳಿ ಗೊತ್ತಿಲ್ಲದ ಎಳಸುಗಳನ್ನೂ ಆರಿಸಿಕಳಿಸಿದ್ದೇವೆ. ಪಂಚಾಯ್ತಿಯಿಂದ ಪಾರ್ಲಿಮೆಂಟ್ ವರೆಗೆ ಕೇಸರಿ ಧ್ವಜ ಹಾರಿಸಿದ್ದೇವೆ. ದಕ್ಷಿಣ ರಾಜ್ಯಗಳಲ್ಲೇ ಅತಿ ಹೆಚ್ಚು ಭಕ್ತಮಂಡಳಿಗಳನ್ನು ಹೊಂದಿರುವ ರಾಜ್ಯ ಎಂಬ ಹೆಗ್ಗಳಿಕೆ ಕೂಡ ನಮ್ಮದು. ಹಾಗಿದ್ದರೂ ಯಾಕೆ ನೀವು ನಮ್ಮತ್ತ ತಿರುಗಿಯೂ ನೋಡಲಿಲ್ಲ. ಪ್ರವಾಹ ಪರಿಸ್ಥಿತಿಯ ನಡುವೆಯೇ ಬೆಂಗಳೂರಿಗೆ ಬಂದುಹೋದರೂ ಚುನಾವಣೆಯ ಹೊತ್ತಲ್ಲಿ ನೀವೇ ಹಾಡಿಹೊಗಳಿದ ನಾಯಕ, ‘ಕರ್ನಾಟಕದ ಹೆಬ್ಬುಲಿ’ ಸಿಎಂ ಯಡಿಯೂರಪ್ಪ ಅವರು ಪರಿಪರಿಯಾಗಿ ಬೇಡಿಕೊಂಡರೂ, ಒಂದು ಅರ್ಧ ತಾಸು ಕೂಡ ಅವರೊಂದಿಗೆ ನೆರೆ ಪರಿಸ್ಥಿತಿಯ ಬಗ್ಗೆ ಮಾತನಾಡಲಿಲ್ಲ ಏಕೆ?
ಹೀಗೆ ಸಾಲು ಸಾಲು ಪ್ರಶ್ನೆಗಳು ಈಗ ಉತ್ತರಕ್ಕೆ ಕಾದಿವೆ. ಈ ಪ್ರಶ್ನೆಗಳಿಗೆ ಉತ್ತರ ಕೊಡಬೇಕಾದ ರಾಜ್ಯದ ಸಂಸದರು ಮತ್ತು ಶಾಸಕರುಗಳು ಹೋದಹೋದಲ್ಲಿ ಹತಾಶ ಜನರ ಆಕ್ರೋಶ ಶಮನದ ಮಾತನಾಡುವ ಬದಲು ಉಡಾಫೆಯ, ಹೀಯಾಳಿಸುವ ಮಾತನ್ನಾಡುತ್ತಿದ್ದಾರೆ. ಪ್ರತಿದಿನ ಒಂದಿಲ್ಲೊಂದು ಕಡೆ ಪ್ರವಾಹ ಸಂತ್ರಸ್ತರನ್ನು, ಅವರ ಪರ ಪ್ರಶ್ನಿಸುವ ಮಾಧ್ಯಮದವರನ್ನು, ಪ್ರತಿಪಕ್ಷಗಳನ್ನು ಹೆದರಿಸುವ, ಬೆದರಿಸುವ ಇಲ್ಲವೇ ಉಡಾಫೆಯ ಉತ್ತರ ಕೊಡುವ ಪ್ರಕರಣಗಳು ವರದಿಯಾಗುತ್ತಲೇ ಇವೆ. ಜನ ತಮ್ಮ ಮನೆಮಠ, ಆಸ್ತಿಮನೆ ಕಳೆದುಕೊಂಡು ಅಕ್ಷರಶಃ ಬೀದಿಪಾಲಾಗಿ ನಾಳೆಯ ಬದುಕಿನ ಬಗ್ಗೆ, ಹೊತ್ತಿನ ಗಂಜಿಯ ಬಗ್ಗೆ ಯೋಚಿಸುತ್ತಿದ್ದಾಗ ಅವರಿಗೆ ಧೈರ್ಯಹೇಳುವ, ಸಾಂತ್ವನ ಹೇಳುವ ಕೆಲಸ ಮಾಡದೇ ದೆಹಲಿ, ಮುಂಬೈನಲ್ಲಿ ಮೋಜು ಮಾಡುತ್ತಿದ್ದ ಜನಪ್ರತಿನಿಧಿಗಳು, ಕನಿಷ್ಠ ಪ್ರಧಾನಿ ಮತ್ತು ತಮ್ಮ ಹೈಕಮಾಂಡ್ ಮುಂದೆ ತಲೆ ಎತ್ತಿ ನಿಂತು ಎರಡು ತಿಂಗಳಾದರೂ ಯಾಕೆ ನಯಾ ಪೈಸೆ ನೀಡಿಲ್ಲ ಎಂದು ಕೇಳುವ ಕನಿಷ್ಠ ಎದೆಗಾರಿಕೆ ತೋರಲಿಲ್ಲ.
ಆದರೆ, ಯಾವಾಗ ಜನ ತಾಳ್ಮೆಗೆಟ್ಟು ಬೀದಿಗಿಳಿದರೋ ಆಗ ಈ ನಾಯಕರುಗಳೆಲ್ಲಾ ಅನಿವಾರ್ಯವಾಗಿ ಜನರ ನಡುವೆ ಕಾಣಿಸಿಕೊಳ್ಳಲಾರಂಭಿಸಿದ್ದಾರೆ. ಆದರೆ, ಈಗಲೂ ಕೂಡ ಅವರು ಜನರ ನೋವಿಗೆ ಮಿಡಿಯವ ಬದಲು, ನೊಂದವರ ಮುಂದೆ ದುರಹಂಕಾರದ ಮಾತುಗಳನ್ನಾಡುತ್ತಿದ್ದಾರೆ. ಅದಕ್ಕೆ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಸಚಿವ ಜೆ ಸಿ ಮಾಧುಸ್ವಾಮಿ, ಸಂಸದ ತೇಜಸ್ವಿ ಸೂರ್ಯ, ಪ್ರತಾಪ ಸಿಂಹ, ಸುಮಲತಾ ಅಂಬರೀಶ್ ಮತ್ತಿತರರ ಉಡಾಫೆಯ ಮಾತುಗಳೇ ಸಾಕ್ಷಿ. ಪ್ರವಾಹ ಪರಿಹಾರ ಮತ್ತು ಪುನರ್ವಸತಿಯ ವಿಷಯದಲ್ಲಿ ತಮ್ಮ ಹೊಣೆಗೇಡಿತನ, ಬೇಜವಾಬ್ದಾರಿತನಗಳಿಗೆ ನೊಂದವರ ಮುಂದೆ ಮಂಡಿಯೂರಿ ಕ್ಷಮೆ ಯಾಚಿಸಬೇಕಾದವರು, ಜನರ ಮೇಲೆಯೇ ಪ್ರಹಾರ ಮಾಡುತ್ತಿರುವುದರ ಹಿಂದಿನ ಕಾರಣವೇನು?
ಈ ಪ್ರಶ್ನೆಗೆ ಸ್ವತಃ ಸಂತ್ರಸ್ತರೂ ಉತ್ತರ ಹುಡುಕುತ್ತಿದ್ದಾರೆ. ರಾಜ್ಯದ ಸಂಸದರು ಮತ್ತು ಕೆಲವು ಸಚಿವರ ವರ್ತನೆಗಳು ಜನರನ್ನು ರೊಚ್ಚಿಗೇಳಿಸಿವೆ ಮತ್ತು ಬಿಜೆಪಿಗೆ ಮತ ಹಾಕಿ ಮೋಸಹೋದೆವು. ಇಂತಹದ್ದನ್ನು ಜನದ್ರೋಹಿ ಸರ್ಕಾರವನ್ನು ಆಯ್ಕೆಮಾಡಿ ಮೂರ್ಖರಾದೆವು ಎಂದು ಸ್ವತಃ ಸಂತ್ರಸ್ತರು ಹಣೆಹಣೆ ಚಚ್ಚಿಕೊಳ್ಳತೊಡಗಿದ್ದಾರೆ. ಕಳೆದ ನಾಲ್ಕೈದು ದಿನಗಳಿಂದ ಉತ್ತರಕರ್ನಾಟಕದ ಜನ ರಸ್ತೆಗಿಳಿದು ಹೋರಾಟ ಆರಂಭಿಸಿದ್ದಾರೆ. ಬಿಹಾರ ಪ್ರವಾಹದ ವಿಷಯದಲ್ಲಿ ಪ್ರಧಾನಿ ಮೋದಿಯವರು, ಅಲ್ಲಿನ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಉದ್ದೇಶಿಸಿ, ನಿಮ್ಮೊಂದಿಗೆ ನಾವಿದ್ದೇವೆ, ಯಾವುದೇ ನೆರವು ನೀಡಲು ಯಾವ ಕ್ಷಣದಲ್ಲಿಯೂ ಸಿದ್ಧ ಎಂದು ಮಾಡಿದ ಟ್ವೀಟ್ ಕನ್ನಡಿಗರ ಆಕ್ರೋಶದ ಕಟ್ಟೆಯೊಡೆಯುವಂತೆ ಮಾಡಿದೆ. ಕೇವಲ ಚುನಾವಣೆಯೊಂದೇ ಬಿಜೆಪಿ ಸರ್ಕಾರದ ಗುರಿಯೇ? ಈ ಸರ್ಕಾರಗಳು ಇರುವುದು ಚುನಾವಣೆಗಳನ್ನು ಗೆಲ್ಲಲು ಮಾತ್ರವೇ? ಪ್ರಹಾರದಂತಹ ವಿಷಯದಲ್ಲೂ ರಾಜಕೀಯ ಬೇಳೆ ಬೇಯಿಸಿಕೊಳ್ಳುವವರು ಜನನಾಯಕರಾಗಲು ಹೇಗೆ ಸಾಧ್ಯ? ಎಂಬ ಪ್ರಶ್ನೆಗಳನ್ನು ಸ್ವತಃ ಜನ ಕೇಳತೊಡಗಿದ್ದಾರೆ.
ಆದರೂ, ಇಷ್ಟೆಲ್ಲಾ ಆಕ್ರೋಶ, ಆತಂಕಗಳ ನಡುವೆಯೂ ಪ್ರಧಾನಿ ಕರ್ನಾಟಕದ ಪ್ರವಾಹದ ವಿಷಯದಲ್ಲಿ ತುಟಿಬಿಚ್ಚಿಲ್ಲ. ಹಾಗಾದರೆ, ಜನಾಕ್ರೋಶದ ಹೊತ್ತಲ್ಲೂ ರಾಜಕೀಯ ಪಕ್ಷ ಮತ್ತು ನಾಯಕರಿಗೆ ಜನರನ್ನು ನಿರ್ಲಕ್ಷಿಸಿ, ಸಂಕಷ್ಟದ ಹೊತ್ತಲ್ಲಿ ಉದಾಸೀನ ಮೆರೆದು ನಾಳೆ ಚುನಾವಣೆಗಳನ್ನು ಗೆಲ್ಲಬಲ್ಲೆವು ಎಂಬ ವಿಶ್ವಾಸ ಹೇಗೆ ಬರುತ್ತದೆ?. ಅದಕ್ಕೆ ಉತ್ತರ ಸರಳ. ಕೋಮು ಭಾವನೆ ಕೆರಳಿಸುವುದು, ಕಾಶ್ಮೀರದ ಬಿಕ್ಕಟ್ಟನ್ನು ವೈಭವೀಕರಿಸುವುದು ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಪಾಕಿಸ್ತಾನದ ಭೂತವನ್ನು ಜನರ ಮಂದೆ ಹುಲಿವೇಷ ಹಾಕಿಸಿ ಕುಣಿಸುವುದು! ಅಷ್ಟು ಮಾಡಿದರೆ, ಜನ ಎಲ್ಲ ಅನ್ಯಾಯ, ಅವಮಾನ, ಅನಾದರ, ನಿರ್ಲಕ್ಷಗಳನ್ನೂ ಮರೆತು ಕುರಿಮಂದೆಯಂತೆ ಸಾಲುಗಟ್ಟಿ ಇವಿಎಂನಲ್ಲಿ ಕಮಲದ ಬಟನ್ ಒತ್ತುತ್ತಾರೆ ಎಂಬ ವಿಶ್ವಾಸ ಬಿಜೆಪಿಗೆ ಇದೆ.
ಮತಾಂಧತೆಯ ಅಮಲಿನ ಮೇಲೆ ಚುನಾವಣೆಗಳನ್ನು ಗೆಲ್ಲುವುದು ಸರಳ ಇರುವಾಗ ನೆರೆ ಬರಲಿ, ಬರ ಬರಲಿ ಜನರ ಕಷ್ಟಕ್ಕೆ ಸ್ಪಂದಿಸುವ, ಸಕಾಲಿಕ ನೆರವು ನೀಡುವ, ಕನಿಷ್ಠ ಸಾಂತ್ವನದ ಮಾತನಾಡುವ ಜರೂರು ಏನಿದೆ ಎಂಬುದು ಬಿಜೆಪಿಯ ಧೋರಣೆ. ಪ್ರಬಲ ಪ್ರತಿಪಕ್ಷ ಕೂಡ ಇರಲಾರದ, ಪ್ರಬಲ ಸಾಮಾಜಿಕ, ರಾಜಕೀಯ ಚಳವಳಿಗಳೂ ತಲೆ ಎತ್ತಲಾರದ ಒಂದು ವ್ಯವಸ್ಥೆಯಲ್ಲಿ ಸರ್ಕಾರವೊಂದು ಹೇಗೆ ಜನದ್ರೋಹಿಯಾಗಿ, ತನ್ನನ್ನು ಆರಿಸಿ ಕಳಿಸಿದ ಮತದಾರನ್ನೇ ಜೀತದಾಳುಗಳಂತೆ ನಡೆಸಿಕೊಳ್ಳುತ್ತದೆ. ಕುರಿಗಳಂತೆ ಜನರನ್ನು ಕಾಣುತ್ತದೆ ಎಂಬುದಕ್ಕೆ ಕರ್ನಾಟಕದ ಈ ಪ್ರವಾಹ ಪರಿಸ್ಥಿತಿಗೆ ಕೇಂದ್ರ ಸರ್ಕಾರ ಸ್ಪಂದಿಸಿದ ರೀತಿಯೇ ಜ್ವಲಂತ ಉದಾಹರಣೆ.
ಕರ್ನಾಟಕದ ವಿಷಯದಲ್ಲಿ ತೋರುವ ಈ ಧೋರಣೆಯನ್ನು ಇತರ ದಕ್ಷಿಣ ರಾಜ್ಯಗಳ ವಿಷಯದಲ್ಲಿ ಬಿಜೆಪಿ ತೋರುವುದಿಲ್ಲ. ನೆರೆಯ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಮತ್ತು ಕೇರಳದ ವಿಷಯದಲ್ಲಿ ಅಲ್ಲಿನ ಆ ಪಕ್ಷದ ನೆಲೆಯೇ ಇಲ್ಲದೇ ಹೋದರೂ ಇಂತಹ ನಿರ್ಲಕ್ಷ್ಯ ತಾಳುವುದಿಲ್ಲ. ಅದಕ್ಕೆ ಕಳೆದ ಮತ್ತು ಈ ವರ್ಷದ ಬರ ಮತ್ತು ಪ್ರವಾಹದ ವಿಷಯದಲ್ಲಿ ಕೇರಳ ಮತ್ತು ಆಂಧ್ರ-ತೆಲಂಗಾಣಕ್ಕೆ ಕೇಂದ್ರದ ಇದೇ ಮೋದಿಯವರ ಸರ್ಕಾರದ ಸ್ಪಂದಿಸಿದ ರೀತಿಯೇ ಉದಾಹರಣೆ. ಆ ದೃಷ್ಟಿಯಿಂದ ನೋಡಿದರೆ, ಬಿಜೆಪಿಯ ಕೇಂದ್ರ ಸರ್ಕಾರ, ಕರ್ನಾಟಕದ ವಿಷಯದಲ್ಲಿ ಪ್ರವಾಹ ಸಂತ್ರಸ್ತರ ವಿಷಯದಲ್ಲಿ ಮಾತ್ರವಲ್ಲ, ಹಿಂದಿ ಹೇರಿಕೆ ಸೇರಿದಂತೆ ಹಲವು ವಿಷಯಗಳಲ್ಲಿ ರಾಜ್ಯದ ಹಿತಾಸಕ್ತಿಗೆ ವಿರುದ್ಧವಾಗಿ ಸಾಕಷ್ಟು ಬಾರಿ ನಡೆದುಕೊಂಡಿದೆ. ಕನ್ನಡಿಗರ ತಾಳ್ಮೆ ಪರೀಕ್ಷೆಯ ಯತ್ನಗಳು ಮೋದಿಯವ ಹಿಂದಿನ ಅವಧಿಯಲ್ಲಿಯೂ ನಡೆದಿದ್ದವು.
ಆ ಹಿನ್ನೆಲೆಯಲ್ಲಿ ಕರ್ನಾಟಕ ಮತ್ತು ಕನ್ನಡದ ಹಿತಾಸಕ್ತಿಯ ನೆಲೆಯಲ್ಲಿ ಒಂದು ಪ್ರಬಲ ಪ್ರಾದೇಶಿಕ ರಾಜಕೀಯ ಪಕ್ಷ ಹಿಂದೆಂದಿಗಿಂತಲೂ ಈಗ ಹೆಚ್ಚು ಅಗತ್ಯವಿದೆ. ಕನ್ನಡದ ನೆಲ-ಜಲದೊಂದಿಗೆ ಕನ್ನಡಿಗರ ಹಿತ ಕಾಯುವ ನಿಟ್ಟಿನಲ್ಲಿ ನೆರೆಯ ರಾಜ್ಯಗಳ ಮಾದರಿಯಲ್ಲಿ ಪ್ರಬಲ ಪ್ರಾದೇಶಿಕ ರಾಜಕೀಯ ಪಕ್ಷವೊಂದು ಎಷ್ಟು ಅನಿವಾರ್ಯ ಎಂಬುದನ್ನು ಈ ಪ್ರವಾಹ ಕನ್ನಡಿಗರಿಗೆ ತೋರಿಸಿಕೊಟ್ಟಿದೆ. ಪ್ರತಿಸ್ಪರ್ಧಿಗಳೇ ಇಲ್ಲದ, ರಾಜಕೀಯ ಪ್ರತಿರೋಧವೇ ಇಲ್ಲದ ಪ್ರಬಲ ರಾಷ್ಟ್ರೀಯ ಪಕ್ಷಗಳು ಪ್ರಾದೇಶಿಕ ಹಿತಾಸಕ್ತಿಯ ವಿಷಯದಲ್ಲಿ ಮತ್ತು ಜನರ ಸಂಕಷ್ಟದ ಹೊತ್ತಲ್ಲಿ ಹೇಗೆ ಅಮಾನುಷವಾಗಿ ನಡೆದುಕೊಳ್ಳುತ್ತವೆ ಎಂಬುದಕ್ಕೆ ಈಗಾಗಲೇ ಕನ್ನಡಿಗರು ಸಾಕ್ಷಿಯಾಗಿದ್ದಾರೆ. ಕಳೆದ ಒಂದು ವಾರದ ಬಿಜೆಪಿಯ ನಾಯಕರ ಉದ್ಧಟತನದ ನಡವಳಿಕೆಗಳಂತೂ ಜನರು ಪದೇ ಪದೇ ನೆರೆಯ ಕೇರಳ, ತಮಿಳುನಾಡು, ಆಂಧ್ರ-ತೆಲಂಗಾಣಗಳನ್ನು ನೆನೆಸಿಕೊಳ್ಳುವಂತೆ ಮಾಡಿವೆ. ಆ ಹಿನ್ನೆಲೆಯಲ್ಲಿ ಒಂದು ಪ್ರಾದೇಶಿಕ ರಾಜಕೀಯ ಶಕ್ತಿಯನ್ನು ಜನ ಈಗ ಎದುರುನೋಡುತ್ತಿದ್ದಾರೆ ಎಂದರೆ ಅತಿಶಯೋಕ್ತಿಯಾಗಲಾರದು.