ಮತೀಯ ಮತ್ತು ಕೋಮುವಾದಿ ರಾಷ್ಟ್ರೀಯತೆಯ ಅಲೆಯ ಮೇಲೆ ಪಡೆದ ಒಂದು ಭರ್ಜರಿ ಜನಾದೇಶ ಆಳುವ ಪಕ್ಷವನ್ನು ಎಂತಹ ಸರ್ವಾಧಿಕಾರಿ ಮಟ್ಟಕ್ಕೆ ಕೊಂಡೊಯ್ಯುತ್ತದೆ ಎಂಬುದಕ್ಕೆ ಇಡೀ ದೇಶ ಈಗ ಬಹುತೇಕ ಮೂಕಪ್ರೇಕ್ಷಕನಾಗಿದೆ. ಅಂತಹ ಸರ್ವಾಧಿಕಾರಿ ಅಟ್ಟಹಾಸ ಕೇವಲ ಉನ್ನತಮಟ್ಟಕ್ಕೆ ಮಾತ್ರ ಸೀಮಿತವಾಗಿಲ್ಲ; ಬದಲಾಗಿ ದಿಲ್ಲಿಯಿಂದ ಹಳ್ಳಿಯವರೆಗೂ ಅದು ವಿಸ್ತರಿಸಿದೆ; ವಿಸ್ತರಿಸುತ್ತಲೇ ಇದೆ ಎಂಬುದಕ್ಕೆ ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳಲ್ಲಿ ನಡೆದಿರುವ ಮೂರು ಘಟನೆಗಳೇ ನಿದರ್ಶನ.
ಕೇಂದ್ರದಲ್ಲಿ ತಮ್ಮದೇ ಪಾರುಪತ್ಯವಿದ್ದರೂ, ರಾಜ್ಯದಲ್ಲಿ ಕಾಂಗ್ರೆಸ್- ಜೆಡಿಎಸ್ ಸರ್ಕಾರವಿದ್ದ ಕಾರಣ, ಜೂನ್ ಅಂತ್ಯದವರೆಗೆ ರಾಜ್ಯದ ಬಿಜೆಪಿ ಮತ್ತು ಅದರ ಪರಿವಾರದ ಪಾಲಿಗೆ ಎಲ್ಲವೂ ತಮ್ಮದೇ ಎಂಬ ಸ್ಥಿತಿ ಇರಲಿಲ್ಲ. ಆದರೆ, ಯಾವಾಗ ಆಪರೇಷನ್ ಕಮಲಕ್ಕೆ ಸಮ್ಮಿಶ್ರ ಸರ್ಕಾರ ಉರುಳಿತೋ, ಪಂಚಾಯ್ತಿ ಮಟ್ಟದಿಂದ ಪಾರ್ಲಿಮೆಂಟ್ ವರೆಗೆ ತಮ್ಮದೇ ಪಾರುಪತ್ಯ ನಡೆಸಬೇಕು ಎಂಬ ಬಿಜೆಪಿಯ ಕನಸು ಹಠಾತ್ತನೇ ನೆರವೇರಿಬಿಟ್ಟಿತು. ಕೇಸರಿಪಡೆಯ ಸರ್ಕಾರ ಅಧಿಕಾರಕ್ಕೇರಿ ತಿಂಗಳು ಉರುಳುವ ಮುನ್ನವೇ ರಾಜ್ಯದ ಮೂಲೆಮೂಲೆಯಲ್ಲಿ ‘ಕೇಸರಿ ಕಲಿ’ಗಳ ರಣಕೇಕೆ ಮಾರ್ದನಿಸತೊಡಗಿದೆ.
ಅದು ಕೇವಲ ತಮ್ಮ ರಾಜಕೀಯ ವಿರೋಧಿಗಳ ವಿರುದ್ಧದ ಹಗೆತನಕ್ಕೆ, ಪ್ರತಿಪಕ್ಷ ನಾಯಕರು, ಕಾರ್ಯಕರ್ತರ ವಿರುದ್ಧದ ಸೇಡಿನ ಕ್ರಮಕ್ಕೆ ಅಥವಾ ಭಿನ್ನ ಸಿದ್ಧಾಂತದ ಹೋರಾಟಗಾರರ ವಿರುದ್ಧದ ಬೆದರಿಕೆಗಳಿಗೆ ಮಾತ್ರ ಸೀಮಿತವಾಗಿಲ್ಲ. ಸರ್ಕಾರಿ ಅಧಿಕಾರಿಗಳ ವಿರುದ್ಧ ಕೂಡ ಬೆದರಿಕೆ ಹಾಕುವ ಮಟ್ಟಕ್ಕೆ ಬೆಳೆದುನಿಂತಿದೆ ಎಂಬುದಕ್ಕೆ ಮಲೆನಾಡಿನ ಈ ಮೂರು ಘಟನೆಗಳೇ ಸಾಕ್ಷಿ. ಅದರಲ್ಲೂ ಸ್ವತಃ ಶಾಸಕರು, ಸಂಸದರ ಪರಮಾಪ್ತರುಗಳೇ ಪ್ರತಿಪಕ್ಷ ಮುಖಂಡರ ಮೇಲೆ, ಸರ್ಕಾರಿ ಅಧಿಕಾರಿಗಳ ಮೇಲೆ ಕಳೆದ ಎರಡು ತಿಂಗಳಿಂದ ಮಲೆನಾಡ ಜಿಲ್ಲೆಯಲ್ಲಿ ನಡೆಸುತ್ತಿರುವ ಅಟ್ಟಹಾಸಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವಮಟ್ಟಿಗೆ ಭಯಾನಕವಾಗಿವೆ.
ಅದು ಸಾಗರ ತಾಲೂಕು ಪಂಚಾಯ್ತಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ಯುವ ನಾಯಕ ಮಲ್ಲಿಕಾರ್ಜುನ ಹಕ್ರೆ ಪ್ರಕರಣವಿರಬಹುದು, ಅದೇ ಸಾಗರ ತಾಲೂಕಿನ ತುಮರಿ ಪಂಚಾಯ್ತಿಯ ರಸೀದಿ ಪುಸ್ತಕ ಪ್ರಕರಣವಿರಬಹುದು ಅಥವಾ ಇದೀಗ ತಾಜಾ ಆಗಿರುವ ಬಿಜೆಪಿಯ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಗಿರಿರಾಜ್ ಎಂಬುವರು ವಲಯ ಅರಣ್ಯಾಧಿಕಾರಿಯೊಬ್ಬರಿಗೆ ಬೆದರಿಕೆ ಹಾಕಿರುವ ಪ್ರಕರಣವೇ ಇರಬಹುದು. ಅವೆಲ್ಲವೂ ಕೇವಲ ಬಿಡಿ ಘಟನೆಗಳಲ್ಲ. ಬದಲಾಗಿ ತಮಗೆ ಶರಣಾಗದ ಸರ್ಕಾರಿ ಅಧಿಕಾರಿಗಳೂ ಸೇರಿದಂತೆ ಪ್ರತಿಪಕ್ಷಗಳ ಮುಖಂಡರು ಮತ್ತು ಕಾರ್ಯಕರ್ತರ ವಿರುದ್ಧ ಬಿಜೆಪಿ ನಾಯಕರು ಮತ್ತು ಅವರ ಕೇಸರಿಪಡೆ ಹೇಗೆ ಬೆದರಿಕೆಯ, ಷಢ್ಯಂತ್ರದ, ಹುನ್ನಾರದ ಅಸ್ತ್ರಗಳನ್ನು ಪ್ರಯೋಗಿಸುತ್ತಿದ್ದಾರೆ ಎಂಬುದರ ಒಟ್ಟೂ ಚಿತ್ರಣದ ಬಿಡಿಬಿಡಿ ದೃಶ್ಯಗಳು ಮಾತ್ರ.
ಸಾಗರ ಸರ್ಕಾರಿ ಆಸ್ಪತ್ರೆಯ ಹಂಗಾಮಿ ನೌಕರರ ವಿಷಯದಲ್ಲಿ ಡಾ ಬೋಸ್ಲೆ ಅವರು, ಏಕಪಕ್ಷೀಯ ನಿರ್ಧಾರ ಕೈಗೊಂಡು ಅವರನ್ನು ಕೆಲಸದಿಂದ ಕೈಬಿಡುವ ತೀರ್ಮಾನ ಕೈಗೊಂಡಾಗ ಆ ಬಗ್ಗೆ ಚರ್ಚಿಸಲು ತಮ್ಮ ಕಚೇರಿಗೆ ಬಂದಿದ್ದ ತಾ ಪಂ ಅಧ್ಯಕ್ಷ ಹಕ್ರೆ ಅವರು ತಮ್ಮ ಮೇಲೆ ಹಲ್ಲೆ ನಡೆಸಿದರು ಎಂಬುದು ಡಾ ಬೋಸ್ಲೆ ಆರೋಪವಾಗಿತ್ತು. ಆದರೆ, ವಾಸ್ತವವಾಗಿ ತಾವು ಅವರೊಂದಿಗೆ ಮಾತುಕತೆ ನಡೆಸಿದ್ದು, ಮಾತುಕತೆ ವೇಳೆ ಬಿಸಿಬಿಸಿ ಚರ್ಚೆ ನಡೆದಿತ್ತು ವಿನಃ ಅವರು ಹೇಳುವಂತಹ ಯಾವುದೇ ಘಟನೆ ನಡೆದಿಲ್ಲ ಎಂದು ಹಕ್ರೆ ಸ್ಪಷ್ಟಪಡಿಸಿದ್ದರು. ಈ ನಡುವೆ, ಬಿಜೆಪಿಯೊಂದಿಗೆ ಗುರುತಿಸಿಕೊಂಡಿರುವ ತಾಲೂಕು ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷರೊಬ್ಬರು ಇಡೀ ಪ್ರಕರಣವನ್ನು ಸರ್ಕಾರಿ ನೌಕರರು ವರ್ಸಸ್ ತಾ ಪಂ ಅಧ್ಯಕ್ಷರ ಮಟ್ಟಕ್ಕೆ ಕೊಂಡೊಯ್ದರು ಮತ್ತು ಅದರ ಬೆನ್ನಲ್ಲೇ ಹಕ್ರೆ ವಿರುದ್ದ ಬೋಸ್ಲೆ ಅವರು ಪೊಲೀಸರಿಗೆ ದೂರು ನೀಡಿದರು. ಆ ಬಳಿಕ ಬೋಸ್ಲೆ ಪರ ಬಿಜೆಪಿ ಬೆಂಬಲಿತ ಪ್ರತಿಭಟನೆ, ಹಕ್ರೆ ಪರ ಕಾಂಗ್ರೆಸ್ ಬೆಂಬಲಿತ ಪ್ರತಿಭಟನೆಗಳು ನಡೆದವು. ಆದರೆ, ಒಬ್ಬ ಜನಪ್ರತಿನಿಧಿ ಮತ್ತು ಒಬ್ಬ ಸರ್ಕಾರಿ ನೌಕರನ ನಡುವಿನ ಈ ಆರೋಪ, ಪ್ರತ್ಯಾರೋಪ ಪ್ರಕರಣ ಅಂತಿಮವಾಗಿ ಸಾಗರದ ಬಿಜೆಪಿ ಶಾಸಕ ಹರತಾಳು ಹಾಲಪ್ಪ ವರ್ಸಸ್ ಸ್ಥಳೀಯ ಕಾಂಗ್ರೆಸ್ಸಿನ ಉತ್ಸಾಹಿ ನಾಯಕ ಮಲ್ಲಿಕಾರ್ಜುನ ಹಕ್ರೆ ನಡುವಿನ ರಾಜಕೀಯ ಸಂಘರ್ಷದ ಸ್ವರೂಪ ತಾಳಿತು. ಆಗ ಕೇಳಿಬಂದದ್ದೇ, ಬಿಜೆಪಿ ಶಾಸಕರು, ತಮ್ಮದೇ ಸರ್ಕಾರ ಬರುತ್ತಲೇ ತಮ್ಮ ರಾಜಕೀಯ ವಿರೋಧಿಗಳನ್ನು, ಟೀಕಾಕಾರರನ್ನು, ಭವಿಷ್ಯದ ಸವಾಲಾಗಬಲ್ಲ ಯುವ ನಾಯಕರನ್ನು ಹಣಿಯಲು ಪೊಲೀಸ್ ಮತ್ತು ಸರ್ಕಾರಿ ವ್ಯವಸ್ಥೆಯನ್ನು ಬಳಸಿಕೊಳ್ಳುತ್ತಿದ್ದಾರೆ ಎಂಬ ಮಾತು.
ಆ ಘಟನೆ ಇನ್ನೇನು ತಣ್ಣಗಾಗಿತು. ನ್ಯಾಯಾಲಯದ ಕಟಕಟೆಗೆ ಏರಿತು ಎನ್ನುವ ಹೊತ್ತಿಗೆ, ಅದೇ ಸಾಗರದಲ್ಲಿ ಇಂತಹದ್ದೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿತು. ಶರಾವತಿ ನದಿ ದಾಟಿ ಹೋಗಬೇಕಾದ ಆ ಪಂಚಾಯ್ತಿಯ ದಾರಿಯಲ್ಲಿ ನದಿ ದಂಡೆಯ ಎರಡೂ ಕಡೆಗೆ ಪ್ರವಾಸಿಗರ ವಾಹನಗಳಿಂದ ಪಂಚಾಯ್ತಿಗಳು ಪ್ರವೇಶ ಶುಲ್ಕ ವಸೂಲಿ ಮಾಡುತ್ತಿವೆ. ಆ ಪೈಕಿ ತುಮರಿ ಪಂಚಾಯ್ತಿ ವ್ಯಾಪ್ತಿಯ ದಂಡೆಯಲ್ಲಿ ನಕಲಿ ರಸೀದಿ ಪುಸ್ತಕ ಮಾಡಿ, ಪ್ರವಾಸಿಗರಿಂದ ಹಣ ಪಡೆಯುತ್ತಿರುವ ಒಂದು ಪ್ರಕರಣ ಬಯಲಿಗೆ ಬಂದಿತು. ಸರ್ಕಾರಿ ನೌಕರರೊಬ್ಬರು ಗಮನ ಸೆಳೆದ ಆ ವಿಷಯದ ಕುರಿತು ತಾಲೂಕು ಪಂಚಾಯ್ತಿಯ ನೌಕರರೊಬ್ಬರು ತಪಾಸಣೆ ನಡೆಸಿದಾಗ, ತಲಾ 30 ರೂ. ಬೆಲೆಯ ನೂರು ಹಾಳೆಗಳನ್ನು ಒಳಗೊಂಡ ಒಂದು ನಕಲಿ ರಸೀದಿ ಪುಸ್ತಕ ಸಿಕ್ಕಿತ್ತು. ಆ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯ್ತಿಯಿಂದ ನೇಮಕವಾಗಿದ್ದ ಶುಲ್ಕು ವಸೂಲಿ ಸಿಬ್ಬಂದಿಗಳಿಬ್ಬರು ಮತ್ತು ಪಂಚಾಯ್ತಿಯ ಪಿಡಿಒ ವಿರುದ್ಧ ತಾ.ಪಂ ಕಾರ್ಯನಿರ್ವಹಣಾಧಿಕಾರಿ ಪೊಲೀಸ್ ದೂರು ದಾಖಲಿಸಿದರು.
ಆದರೆ, ಒಟ್ಟು ಮೂರು ಸಾವಿರ ರೂಪಾಯಿ ಮೌಲ್ಯದ ರಸೀದಿ ಪುಸ್ತಕವೊಂದನ್ನು ಸೀಜ್ ಮಾಡಿದ ತಾ.ಪಂ ಆ ಕುರಿತು ಸರಿಯಾದ ಕಾನೂನು ರೀತ್ಯಾ ಪ್ರಕ್ರಿಯೆಗಳನ್ನು ದಾಖಲಿಸಿಲ್ಲ. ರಸೀದಿ ಪುಸ್ತಕ ತಪಾಸಣೆ ವೇಳೆ ನಕಲಿ ಪುಸ್ತಕದೊಂದಿಗೆ ಸಿಕ್ಕಿಬಿದ್ದಿರುವಾತ ಕೂಡ ಪಂಚಾಯ್ತಿ ನೇಮಿಸಿದ ವ್ಯಕ್ತಿಯಲ್ಲ, ಬದಲಾಗಿ ಮೂರನೇಯವ. ಪಂಚಾಯ್ತಿ ಅಧಿಕಾರಿ ಮತ್ತು ಹಂಗಾಮಿ ಸಿಬ್ಬಂದಿ ವಿರುದ್ಧ, ಆದ ಅಕ್ರಮದ ಕುರಿತು ರೂಢಿಯಂತೆ ಇಲಾಖಾ ತನಿಖೆ ನಡೆಸುವ ಬದಲು ಏಕಾಏಕಿ ಪೊಲೀಸ್ ದೂರು ದಾಖಲಿಸಿ, ಎಫ್ ಐ ಆರ್ ಮಾಡಲಾಗಿದೆ. ಪಂಚಾಯ್ತಿಯ ಪಿಡಿಒ ಮತ್ತು ಶುಲ್ಕ ಸಂಗ್ರಾಹಕರಲ್ಲದೆ, ಪಂಚಾಯ್ತಿ ಅಧ್ಯಕ್ಷರ ವಿರುದ್ಧವೂ ಪೊಲೀಸ್ ದೂರು ಕೊಡುವ ಪ್ರಯತ್ನವಾಗಿತ್ತು. ಆದರೆ, ಕೊನೇ ಕ್ಷಣದಲ್ಲಿ ಅಧ್ಯಕ್ಷರನ್ನು ಬಿಟ್ಟು ಉಳಿದವರ ಮೇಲೆ ಎಫ್ ಐಆರ್ ದಾಖಲಿಸಲಾಯಿತು. ಆದರೂ ಸಾಗರ ಪೊಲೀಸರು, ಯಾವ ಕೇಸು ಇಲ್ಲದೆ, ಎಫ್ ಐಆರ್ ನಲ್ಲಿ ಹೆಸರು ಕೂಡ ಇಲ್ಲದೆ ಇದ್ದರೂ ಪಂಚಾಯ್ತಿ ಅಧ್ಯಕ್ಷ ಜಿ ಟಿ ಸತ್ಯನಾರಾಯಣ ಅವರ ಬಂಧನಕ್ಕೆ ಭಾರೀ ಯತ್ನ ನಡೆಸಿದರು. ಸತತ ಒಂದು ವಾರ ಕಾಲ ಪೊಲೀಸರು ಪಂಚಾಯ್ತಿ ಅಧ್ಯಕ್ಷರ ಬೇಟೆಗೆ ನಿಂತಿದ್ದರು. ಭಾರೀ ಪೊಲೀಸ್ ಪಡೆಯೊಂದಿಗೆ ಮನೆಗೆ ಆಹೋರಾತ್ರಿ ನುಗ್ಗಿ ತಪಾಸಣೆ ನಡೆಸಿದ್ದರು. ಪಂಚಾಯ್ತಿ ಅಧ್ಯಕ್ಷರು ನಿರೀಕ್ಷಣಾ ಜಾಮೀನು ಪಡೆಯುವವರೆಗೆ ಸಾಗರ ಪೊಲೀಸರು, ಈ ಪ್ರಕರಣದಲ್ಲಿ ಭಯೋತ್ಪಾದಕರ ಶೋಧ ಕಾರ್ಯಾಚರಣೆಯೋಪಾದಿಯಲ್ಲಿ ನಡೆದುಕೊಂಡರು ಎಂಬ ಪಂಚಾಯ್ತಿ ವ್ಯಾಪ್ತಿಯ ನಾಗರಿಕರ ಮಾತುಗಳಲ್ಲಿ ಅತಿಶಯೋಕ್ತಿಯೇನಿಲ್ಲ.
ಇದು ಮೇಲ್ನೋಟಕ್ಕೆ ಸಾಗರ ಪೊಲೀಸರು ಮತ್ತು ತಾಲೂಕು ಪಂಚಾಯ್ತಿ ಹೇಗೆ ಬಾಹ್ಯ ಒತ್ತಡಕ್ಕೆ ಮಣಿದು ಕೇವಲ ಮೂರು ಸಾವಿರ ರೂಪಾಯಿಗಳ ಮೊತ್ತದ ಒಂದು ಪ್ರಕರಣದ ವಿಷಯದಲ್ಲಿ ಅಂತಾರಾಷ್ಟ್ರೀಯ ಹಣಕಾಸು ಅಕ್ರಮ ಅಥವಾ ಒಂದು ಭಾರೀ ಭಯೋತ್ಪಾದನಾ ಕೃತ್ಯದ ತನಿಖೆ ಮಾದರಿಯಲ್ಲಿ ನಡೆದುಕೊಂಡರು ಎಂಬುದಕ್ಕೆ ಸಾಕ್ಷಿ. ಹಾಗಾದರೆ ಪೊಲೀಸರ ಮೇಲೆ ಯಾರು ಹಾಗೆ ಒತ್ತಡ ಹಾಕಿದ್ದು ಎಂದರೆ ಶಾಸಕರು ಮತ್ತು ಬಿಜೆಪಿಯತ್ತ ಬೆರಳೂ ತೋರುತ್ತವೆ ಪ್ರಕರಣದ ಹಿನ್ನೆಲೆಯ ವಿದ್ಯಮಾನಗಳು.
ಈ ನಕಲಿ ರಸೀದಿ ಪುಸ್ತಕ ಸಿಗುವ ಕೇವಲ ಒಂದು ತಿಂಗಳ ಹಿಂದಷ್ಟೇ ಇದೇ ಶುಲ್ಕ ವಸೂಲಿ ವಿಷಯದಲ್ಲಿ ಶಾಸಕರ ಆಪ್ತರು ಮತ್ತು ಶುಲ್ಕ ಸಂಗ್ರಾಹಕರ ನಡುವೆ ಮಾತಿನ ಚಕಮಕಿ ನಡೆದಿತ್ತು. ಆ ವೇಳೆ ಮೊಬೈಲ್ ಕರೆ ಮಾಡಿದ್ದ ಶಾಸಕರು, ಒಂದು ತಿಂಗಳಲ್ಲಿ ನಿನ್ನನ್ನು ಮನೆಗೆ ಕಳಿಸ್ತೀನಿ ಎಂದು ಆ ಹಂಗಾಮಿ ನೌಕರನಿಗೆ ಎಚ್ಚರಿಸಿದ್ದರು. ಅದಾಗಿ ಸರಿಯಾಗಿ ಒಂದು ತಿಂಗಳಲ್ಲೇ ನಕಲಿ ರಸೀದಿ ಪುಸ್ತಕ ಪ್ರಕರಣ ಬೆಳಕಿಗೆ ಬಂದಿದೆ. ಆ ಹಂಗಾಮಿ ನೌಕರನ ಮೇಲೆ ಪೊಲೀಸ್ ದೂರು, ಎಫ್ ಐ ಆರ್ ದಾಖಲಾಗಿದೆ. ಮುಸ್ಲಿಂ ಸಮುದಾಯದ ಪಂಚಾಯ್ತಿ ಪಿಡಿಒ ವಿರುದ್ಧ ಕೂಡ ಇಲಾಖಾ ತನಿಖೆಯೇ ಇಲ್ಲದೆ ನೇರ ಎಫ್ ಐಆರ್ ದಾಖಲಾಗಿದೆ. ಸಾಗರ ಪೊಲೀಸರು ಅವರು ಭಯೋತ್ಪಾದನಾ ಕೃತ್ಯ ಎಸಗಿದ್ದಾರೆ ಎಂಬಂತೆ ನಾಲ್ಕೂರು ಜೀಪುಗಳಲ್ಲಿ ಸತತ ಹದಿನೈದು ದಿನಗಳ ಕಾಲ(ಅವರಿಗೆ ಜಾಮೀನು ದೊರೆಯುವವರೆಗೆ) ತುಮರಿಯ ಮನೆಮನೆಯಲ್ಲೂ ತಪಾಸಣೆ ನಡೆಸಿದ್ದಾರೆ. ಹಗಲೂರಾತ್ರಿ ಕಾರ್ಯಾಚರಣೆ ನಡೆಸಿದ್ದಾರೆ ಎಂಬ ಸ್ಥಳೀಯರ ಮಾತಿನಲ್ಲಿ ನಿಜವಿಲ್ಲದೇ ಇಲ್ಲ. ಪೊಲೀಸರ ಮೇಲೆ ಇಲಾಖೆಯ ಅತ್ಯುನ್ನತ ಹುದ್ದೆಯಿಂದಲೇ ಒತ್ತಡ ಬಂದಿತ್ತು ಎಂಬ ಮಾತೂ ಕೇಳಿಬರುತ್ತಿದೆ.
ಜಿಲ್ಲೆಯಲ್ಲಿಯೇ ಬಹಳ ಕ್ರಿಯಾಶೀಲರಾಗಿ, ಪಂಚಾಯ್ತಿಯ ವ್ಯಾಪ್ತಿಯಲ್ಲಿ ಬಹಳ ಜನಪರವಾಗಿ ಕೆಲಸ ಮಾಡಿ ಅತ್ಯಂತ ಹಿಂದುಳಿದ ಪ್ರದೇಶದಲ್ಲಿ ಬದಲಾವಣೆಯ ಪರ್ವ ಆರಂಭಿಸಿದ್ದು, ಪಂಚಾಯ್ತಿ ಸಭೆ- ಗ್ರಾಮ ಸಭೆಗಳನ್ನು ಕೂಡ ಸಿಸಿಟಿವಿ ರೆಕಾರ್ಡಿಂಗ್ ಮೂಲಕ ಫಲಾನುಭವಿಗಳ ಆಯ್ಕೆ ಸೇರಿದಂತೆ ದೈನಂದಿನ ಚಟುವಟಿಕೆಗಳಲ್ಲು ಪಾರದರ್ಶಕತೆ ಕಾಯ್ದುಕೊಂಡಿದ್ದ, ಎಫ್ ಬಿ ಲೈವ್ ಮೂಲಕ ಡಿಜಿಟಲ್ ಟಚ್ ನೀಡಿದ ಪಂಚಾಯ್ತಿ ಅಧ್ಯಕ್ಷ ಜಿ ಟಿ ಸತ್ಯನಾರಾಯಣ ಪರ ಸ್ಥಳೀಯ ಪಂಚಾಯ್ತಿಯ ಎಲ್ಲರೂ ಪಕ್ಷಬೇಧ ಮರೆತು ಮೆಚ್ಚುಗೆಯ ಮಾತನಾಡುತ್ತಾರೆ.
ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಕೋಮುವಾದದ ವಿರುದ್ಧದ, ಮತೀಯ ರಾಜಕಾರಣದ ವಿರುದ್ಧದ ಹಾಗೂ ಜನಪರ, ಪ್ರಗತಿಪರ ನಿಲುವು, ಚರ್ಚೆಗಳ ಮೂಲಕ ಸತ್ಯ ಗಮನ ಸೆಳೆದಿದ್ದಾರೆ. ಸಮಾಜವಾದಿ ನಾಯಕ ಕಾಗೋಡು ತಿಮ್ಮಪ್ಪ ಅವರ ಶಿಷ್ಯರಾಗಿ ಹೊಸ ತಲೆಮಾರಿನ ಯುವ ರಾಜಕಾರಣಿಗಳಲ್ಲಿ ಭರವಸೆಯ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಶರಾವತಿ ನದಿ ಉಳಿಸಿ ಹೋರಾಟ, ಸಾರಾಯಿ ವಿರುದ್ಧದ ಚಳವಳಿ ಸೇರಿದಂತೆ ಮಲೆನಾಡಿನ ಹಲವು ಚಳವಳಿಗಳಲ್ಲಿ ಮುಂಚೂಣಿಯಲ್ಲಿದ್ದು ಸಾಮಾಜಿಕ, ಪರಿಸರ ಕಾಳಜಿ ಮೆರೆದಿದ್ದಾರೆ. ಅಂತಹವರ ವಿರುದ್ಧ ಅವರಿಗೆ ನೇರವಾಗಿ ಸಂಬಂಧಪಡದೇ ಇರುವ, ಶುದ್ಧ ಪಂಚಾಯ್ತಿ ನೌಕರ ವರ್ಗಕ್ಕೆ ಸಂಬಂಧಿಸಿದ ವಿಷಯದಲ್ಲಿ ಅವರನ್ನು ಸಿಲುಕಿಸುವ ಪ್ರಯತ್ನಗಳ ಹಿಂದೆ ರಾಜಕೀಯವಾಗಿ ಅವರನ್ನು ಮುಗಿಸುವ, ಸೇಡಿನ ರಾಜಕಾರಣ ಕಾಣುತ್ತಿದೆ ಎಂಬುದು ಮೇಲ್ನೋಟಕ್ಕೆ ಕಾಣುವ ಸಂಗತಿ.
“ಸಮಾಜವಾದಿ ರಾಜಕಾರಣದ ಸಾಗರದ ನೆಲದಲ್ಲಿ ಅನ್ಯ ಕ್ಷೇತ್ರಗಳಿಂದ ವಲಸೆ ಬಂದ ನಾಯಕರು ಇದೀಗ ಹಗೆತನದ, ಹೇಯ ರಾಜಕಾರಣವನ್ನು ಪರಿಚಯಿಸುತ್ತಿದ್ದಾರೆ. ಇಂತಹ ಸೇಡಿನ, ಕ್ಷುಲ್ಲಕ ರಾಜಕಾರಣ ಸಾಗರದಲ್ಲಿ ಹಿಂದೆಂದೂ ಕಂಡಿರಲಿಲ್ಲ. ಸೊರಬದಲ್ಲಿ ಕೂಡ ಇದೇ ಶಾಸಕರು ಒಮ್ಮೆ ಜನಪ್ರತಿನಿಧಿಯಾಗಿದ್ದಾಗಲೂ ಇಂತಹ ಕ್ರಿಮಿನಲ್ ರಾಜಕಾರಣ ತಲೆಎತ್ತಿತ್ತು ಎಂಬುದಕ್ಕೆ ಶೋಟ್ ಔಟ್ ಪ್ರಕರಣವೇ ನಿದರ್ಶನ. ಇದೀಗ ಸಾಗರದಲ್ಲೂ ಅದನ್ನೇ ಮುಂದುವರಿಸುವ ಪ್ರಯತ್ನಗಳು ಆರಂಭವವಾಗಿವೆ. ಆದರೆ, ಸಾಗರದ ಜನ ಇಂತಹದ್ದನ್ನು ಒಪ್ಪಿಕೊಳ್ಳಲಾರರು ಎಂಬುದನ್ನು ಬಿಜೆಪಿ ಮತ್ತು ಶಾಸಕರು ಅರ್ಥಮಾಡಿಕೊಳ್ಳಬೇಕಿದೆ” ಎಂಬುದು ಈ ಬೆಳವಣಿಗೆಗಳನ್ನು ಹತ್ತಿರದಿಂದ ಬಲ್ಲ ಸಾಗರದ ಹಿರಿಯ ಸಾಮಾಜಿಕ ಕಾರ್ಯಕರ್ತರೊಬ್ಬರ ಕಿವಿಮಾತು.
ಇದೀಗ ಶಿವಮೊಗ್ಗ ತಾಲೂಕಿನ ಗಾಜನೂರಿನಲ್ಲಿ ತುಂಗಾ ನಾಲೆ ಕಾಮಗಾರಿಗಾಗಿ ಮಾವಿನ ಮರ ಕಡಿದ ಬಗ್ಗೆ ಕಾನೂನು ಪ್ರಕಾರ ಕ್ರಮಕೈಗೊಂಡ ಶಂಕರ ವಲಯ ಅರಣ್ಯಾಧಿಕಾರಿಗೆ ಸಂಸದ ಬಿ ವೈ ರಾಘವೇಂದ್ರ ಅವರ ಆಪ್ತ ಹಾಗೂ ಬಿಜೆಪಿ ಜಿಲ್ಲಾ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಗಿರಿರಾಜ್ ಗಾಜನೂರು ಎಂಬುವರು ಬೆದರಿಕೆ ಹಾಕಿ ಹೀನಾಯವಾಗಿ ನಿಂದಿಸಿರುವ ಆಡಿಯೋ ತುಣುಕು ವೈರಲ್ ಆಗಿದೆ. ಇಲಾಖೆ ಅನುಮತಿ ಇಲ್ಲದೆ ಮರ ಕಡಿದ ನೀರಾವರಿ ಇಲಾಖೆಯ ಎಂಜಿಯರ್ ವಿರುದ್ಧ ಕೇಸು ದಾಖಲಿಸಿದ್ದೇ ವಲಯ ಅರಣ್ಯಾಧಿಕಾರಿ ಮಾಡಿದ ದೊಡ್ಡ ತಪ್ಪು ಎಂಬಂತೆ, ಗಿರಿರಾಜ್, ಅವರಿಗೆ “ನೀವು ಯೂನಿಫಾರಂ ಹಾಕೊಂಡೇ ಬಾ, ಏನು ಕಿತ್ಕೋತಿಯಾ ನೋಡ್ತೀನಿ. ಸಾವಿರ ಮರ ನಾನೇ ಕಡೀತೀನಿ, ವೀಡಿಯೋ ಮಾಡಿ ಹಾಕ್ತೀನಿ, ಧಮ್ಮಿದ್ರೆ ನನ್ನ ಮೇಲೆ ಕೇಸು ಹಾಕು. ಮನಸ್ಸು ಮಾಡಿದ್ರೆ ನಾನು ಏನು ಬೇಕಾದರೂ ಮಾಡಬಲ್ಲೆ. ನಿನ್ನ ಮೇಲೆ ಕೈಮಾಡಿ ಜೈಸಿಕೊಳ್ಳೋ ತಾಕತ್ತು ಇದೆ. ಯೂನಿಫಾರಂನಲ್ಲೇ ಬಾ ನೋಡೋಣ..” ಎಂದು ನೇರವಾಗಿ ಆ ಅಧಿಕಾರಿಗೇ ಕರೆ ಮಾಡಿ ಧಮಕಿ ಹಾಕಿದ್ದಾರೆ.
ಜೊತೆಗೆ ಮಾತಿನ ನಡುವೆ ಪದೇ ಪದೇ ಸಂಸದರ ಹೆಸರು ಹೇಳಿ, ತಾವು ಅವರ ಬಲಗೈಬಂಟ ಎಂದು ಹೇಳುವ ಗಿರಿರಾಜ್, ತಮ್ಮ ಜೊತೆಗಿರುವ ಬೆಂಬಲಿಗರಿಗೆ “ನಾಳೆ ಅವರ ಮನೆ ಎಲ್ಲಿ ಹುಡುಕಿ, ಮನೆಗೆ ನುಗ್ಗಿ. ಏನ್ಮಾಡ್ತಾನೆ ನೋಡೋಣ, ಅವರ ಹೆಂಡತಿಮಕ್ಕಳ ಎದುರಲ್ಲೇ ಅವರ ಮರ್ಯಾದೆ ತೆಗೀರಿ” ಎಂದು ಕುಮ್ಮಕ್ಕು ಕೊಡುವುದು ಕೂಡ ಆ ಸಂಭಾಷಣೆಯಲ್ಲಿ ದಾಖಲಾಗಿದೆ. ಅಲ್ಲದೆ, “ನಾಳೆ(ಮಾರನೇ ದಿನ ಸಕ್ರೆಬೈಲು ಆನೆ ಬಿಡಾರದ ಕಾರ್ಯಕ್ರಮಕ್ಕೆ ಸಂಸದರು ಬರುವುದು ನಿಗದಿಯಾಗಿತ್ತು) ಸಕ್ರೆಬೈಲಿಗೆ ಬಾ ನೀನು. ನೋಡ್ಕೋತೀನಿ. ನೀನು ಸಸ್ಪೆಂಡ್ ಆಗೋದು ಗ್ಯಾರಂಟಿ” ಎಂದು ಬೆದರಿಸಿರುವುದು ಕೂಡ ದಾಖಲಾಗಿದ್ದು, ತಾನು ಸಂಸದರ ಆಪ್ತ ಎಂಬುದನ್ನೇ ಅಸ್ತ್ರವಾಗಿ ಬಳಸಿಕೊಂಡು ಈತ ಅಧಿಕಾರಿಯ ಮೇಲೆ ದರ್ಪ ಮೆರೆದಿರುವುದು ಮೇಲ್ನೋಟಕ್ಕೆ ಕಾಣುತ್ತದೆ. ಅಲ್ಲದೆ, ತಮ್ಮದೇ ಸರ್ಕಾರ ಈಗ ಎಂಬ ಮಾತನ್ನೂಆತ ಆಡಿದ್ದಾನೆ.
ಮುಖ್ಯಮಂತ್ರಿಗಳ ತವರು ಜಿಲ್ಲೆಯಲ್ಲಿ ಸ್ವತಃ ಅವರ ಪುತ್ರರೂ ಆದ ಸಂಸದರು ಮತ್ತು ಅವರ ಪರಮಾಪ್ತರಾದ ಸಾಗರದ ಶಾಸಕರ ಕ್ಷೇತ್ರಗಳಲ್ಲಿ ಅಧಿಕಾರ ಮತ್ತು ಪ್ರಭಾವದ ಬಲದ ಮೇಲೆ ಬಿಜೆಪಿ ನಾಯಕರು ಮತ್ತು ಮುಖಂಡರುಗಳು ಏನೆಲ್ಲಾ ಮಾಡುತ್ತಿದ್ದಾರೆ ಎಂಬುದಕ್ಕೆ ಈ ಮೂರು ಪ್ರಕರಣಗಳು ಎದ್ದುಕಾಣುತ್ತಿರುವ ನಿದರ್ಶನಗಳು ಮಾತ್ರ. ವರದಿಯಾಗದೇ, ಜನರ ಗಮನಕ್ಕೆ ಬಾರದೇ ಸರಿದುಹೋಗುವ ಪ್ರಕರಣಗಳು ಇನ್ನೆಷ್ಟೋ.
ಒಂದು ಕಡೆ ಐಟಿ, ಇಡಿ, ಸಿಬಿಐನಂತಹ ಅಸ್ತ್ರಗಳನ್ನು ಪ್ರಯೋಗಿಸಿ ಪ್ರತಿಪಕ್ಷಗಳು, ಪ್ರಗತಿಪರರು, ಸಾಹಿತಿ-ಬುದ್ಧಿಜೀವಿಗಳ ದನಿ ಅಡಗಿಸುವ ಕಾರ್ಯವನ್ನು ಯಶಸ್ವಿಯಾಗಿ ನಡೆಸುತ್ತಿರುವ ಬಿಜೆಪಿ, ಅಂತಹ ರಾಷ್ಟ್ರೀಯ ಅಜೆಂಡಾದ ಜೊತೆಗೆ, ಸ್ಥಳೀಯವಾಗಿಯೂ ಇಂತಹ ದಬ್ಬಾಳಿಕೆ, ಸೇಡಿನ ರಾಜಕಾರಣದ ಮೂಲಕ ಭಿನ್ನ ರಾಜಕಾರಣ, ಭಿನ್ನ ದನಿ ಮತ್ತು ಪ್ರಾಮಾಣಿಕ ಅಧಿಕಾರಿಗಳನ್ನು ದಮನ ಮಾಡುತ್ತಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕವಂತೂ ಇಂತಹ ದರ್ಪದ ನಡೆಗಳು ಇನ್ನಷ್ಟು ಬಿಡುಬೀಸಾಗಿ ಜಾರಿಗೆ ಬರತೊಡಗಿವೆ ಎಂಬದಕ್ಕೆ ಈ ಪ್ರಕರಣಗಳೇ ತಾಜಾ ಉದಾಹರಣೆ.