ದೇಶದಲ್ಲಿ ಪ್ರವಾಹ ಸಂತ್ರಸ್ತರ ಪರಿಹಾರ, ಪುನರ್ವಸತಿಗೆ ಹಣವಿಲ್ಲ. ರೈತರ ಕೃಷಿ ಬಿಕ್ಕಟ್ಟು ನಿವಾರಣೆಗೆ ಉತ್ತೇಜನಕಾರಿ ಯೋಜನೆ ರೂಪಿಸಲು ದುಡ್ಡಿಲ್ಲ, ಬಿಎಸ್ ಎನ್ ಎಲ್ ನಂತಹ ಸರ್ಕಾರಿ ಸಂಸ್ಥೆಗಳ ಪುನರುಜ್ಜೀವನಕ್ಕೆ ಅನುದಾನವಿಲ್ಲ. ಕಡುಬಡವರ ಉದ್ಯೋಗಖಾತ್ರಿ ಸಂಬಳ ಸಕಾಲಕ್ಕೆ ಪಾವತಿಸಲು ಕಾಸಿಲ್ಲ. ಹೀಗೆ ಇಲ್ಲಗಳ ಪಟ್ಟಿ ಬೆಳೆಯುತ್ತಲೇ ಇರುವಾಗಲೇ, ಕಡುಬಡವರಿಗಿಂತ ಬಡವರಾದ ದೇಶದ 980 ಮಂದಿ ಕಾರ್ಪೊರೇಟ್ ಕುಳಗಳ ನೂರಾರು ಕೋಟಿ ಸಾಲ ಮನ್ನಾ ಮಾಡಲು ಮಾತ್ರ ಯಾವುದೇ ಕೊರತೆ ಇಲ್ಲ!
ಹೌದು, ‘ದೇಶಕ್ಕಾಗಿ ಮೋದಿ, ಮೋದಿಗಾಗಿ ನಾವು’ ಎಂದು ಕಳೆದ ಚುನಾವಣೆಯಲ್ಲಿ ಸಾರಾಸಗಟಾಗಿ ಕಮಲದ ಗುರುತಿಗೆ ಮತ ಒತ್ತಿ 25 ಮಂದಿ ಸಂಸದರನ್ನು ಬಿಜೆಪಿಗೆ ಕೊಡುಗೆ ಕೊಟ್ಟ ಉತ್ತರ ಕರ್ನಾಟಕದ ಮಂದಿ ಪ್ರವಾಹದಲ್ಲಿ ಸಿಲುಕಿ ಹೊತ್ತಿನ ಗಂಜಿಗೂ ಗತಿ ಇಲ್ಲದೆ, ತುಂಡು ಸೂರಿನ ಆಸರೆ ಇಲ್ಲದೆ ಬೀದಿಯ ಮೇಲೆ ತಿಂಗಳುಗಟ್ಟಲೆ ಕಳೆಯುತ್ತಿರುವಾಗ ಅದೇ ಮೋದಿಯವರು ಕಣ್ಣೆತ್ತಿಯೂ ನೋಡಲಿಲ್ಲ. ಸ್ವತಃ ತಮ್ಮದೇ ಪಕ್ಷದ ಸಿಎಂ ಬಂದು ದಮ್ಮಯ್ಯ ಹಾಕಿದರೂ ಎರಡು ತಿಂಗಳವರೆಗೆ ಬಿಡಿಗಾಸಿನ ನೆರವು ಕೊಡಲಿಲ್ಲ. ಆದರೆ, ತಲಾ ಕನಿಷ್ಠ 100ರಿಂದ 500 ಕೋಟಿ ಬಾಕಿ ಉಳಿಸಿಕೊಂಡಿದ್ದ ದೇಶದ ದೊಡ್ಡ ದೊಡ್ಡ ಕಾರ್ಪೊರೇಟ್ ಉದ್ಯಮಿಗಳ ಬರೋಬ್ಬರಿ 2.75 ಲಕ್ಷ ಕೋಟಿ(ಎರಡೂ ಮುಕ್ಕಾಲು ಲಕ್ಷ ಕೋಟಿ) ರೂಪಾಯಿ ಸಾಲವನ್ನು ಉದಾರವಾಗಿ ಮನ್ನಾ ಮಾಡುವ ಮೂಲಕ ಮೋದಿಯವರು ತಾವೆಷ್ಟು ಬಡವರ ಪರ ಎಂಬುದನ್ನು ಸಾಬೀತುಮಾಡಿದ್ದಾರೆ.
ಇಂತಹ ಬೃಹತ್ ಮೊತ್ತದ ಕಾರ್ಪೊರೇಟ್ ಸಾಲವನ್ನು ಯಾವ ಸಾರ್ವಜನಿಕ ಚರ್ಚೆ ಇಲ್ಲದೆ, ಪ್ರತಿಪಕ್ಷಗಳ ಅಭಿಪ್ರಾಯ ಕೂಡ ಕೇಳದೆ ಮನ್ನಾ ಮಾಡಲಾಗಿದೆ. ಆದರೆ, ಪ್ರವಾಹ, ಉಪ ಚುನಾವಣೆ, ಸದನ ಕಲಾಪದಂತಹ ಸಂಗತಿಗಳ ನಡುವೆ ಈ ಆಘಾತಕಾರಿ ಸಂಗತಿ ಮಾಧ್ಯಮಗಳಲ್ಲೂ ಕಾಣಿಸದೆ ಮರೆಮಾಚಿಹೋಗಿದೆ.
ಅಷ್ಟೇ ಅಲ್ಲ; ಬಡವನೊಬ್ಬ ತಾನು ಪಡೆದ ಹತ್ತಿಪ್ಪತ್ತು ಸಾವಿರ ರೂ. ಕೃಷಿ ಸಾಲವನ್ನೋ, 50 ಸಾವಿರ ರೂ. ಬೈಕ್ ಸಾಲದ ಕಂತನ್ನು ಸಕಾಲದಲ್ಲಿ ಕಟ್ಟದೇ ಹೋದರೆ, ದಾಂಡಿಗರನ್ನು ಮನೆ ಬಾಗಿಲಿಗೆ ಕಳಿಸಿ ಧಮಕಿ ಹಾಕುವ, ವಾಹನವನ್ನೇ ಎತ್ತಿಕೊಂಡು ಹೋಗುವ ಬ್ಯಾಂಕುಗಳು, ಜಮೀನು ಹರಾಜು ಹಾಕಲು ನೋಟೀಸ್ ನೀಡುವ ರಾಷ್ಟ್ರೀಕೃತ ಬ್ಯಾಂಕುಗಳು, ನೂರಾರು ಕೋಟಿ ಸಾಲ ಕಟ್ಟದೆ, ಬಡ್ಡಿಯನ್ನೂ ಕಟ್ಟದೆ ನಿತ್ಯ ತಮ್ಮೊಂದಿಗೆ ಸಂಪರ್ಕದಲ್ಲಿಯೂ ಇರುವ ಕಾರ್ಪೊರೇಟ್ ಕುಳಗಳಿಗೆ ಮಾತ್ರ ಏಕಾಏಕಿ ಬಾಕಿ ಸಾಲವನ್ನು ವಸೂಲಿಯಾಗದ ಸಾಲ ಎಂದು ಘೋಷಿಸಿ, ಮನ್ನಾ ಮಾಡಿವೆ.
ಮಾಹಿತಿ ಹಕ್ಕು ಕಾಯ್ದೆಯಡಿ ಪಡೆದ ಮಾಹಿತಿಯೊಂದರ ಪ್ರಕಾರ, ಒಟ್ಟು ಹನ್ನೊಂದು ವಿವಿಧ ಸಾರ್ವಜನಿಕ ಮತ್ತು ಖಾಸಗೀ ಬ್ಯಾಂಕುಗಳು ಈ ಭಾರೀ ಮೊತ್ತವನ್ನು ಮನ್ನಾ ಮಾಡಿದ್ದು, ಅದೆಲ್ಲದೂ ಬಹುತೇಕ ಸಾರ್ವಜನಿಕರ ಹಣವೇ ಎಂಬುದನ್ನು ಮರೆತು ತಮ್ಮ ಜೇಬಿನ ಕಾಸು ಎಂಬಂತೆ ಬೃಹತ್ ಉದ್ಯಮಿಗಳಿಗೆ ದಾನ ಎರೆದುಕೊಟ್ಟಿವೆ. ಕಳೆದ ಮೂರು ವರ್ಷಗಳ ಅವಧಿಯಲ್ಲಿ ಸೃಷ್ಟಿಯಾಗಿರುವ ವಸೂಲಾಗದ, ತಲಾ 100 ಕೋಟಿಯಿಂದ 500 ಕೋಟಿ ಮೊತ್ತದ ಸಾಲ ಇದಾಗಿದೆ. ಒಟ್ಟು 980 ಮಂದಿ ಕಾರ್ಪೊರೇಟ್ ಕುಳಗಳು ಬ್ಯಾಂಕುಗಳ ಈ ಪುಗಸಟ್ಟೆ ಔದಾರ್ಯದ ಲಾಭ ಪಡೆದಿದ್ದು, ಸರಾಸರಿ ಒಬ್ಬೊಬ್ಬರಿಗೆ 348 ಕೋಟಿ ರೂ. ಸಾಲ ಮನ್ನಾ ಆದಂತಾಗಿದೆ.
ಅಷ್ಟೇ ಅಲ್ಲದೆ, ಸುಮಾರು 67,600 ಕೋಟಿ ರೂ. ಬೃಹತ್ ಮೊತ್ತದ ತಲಾ 500 ಕೋಟಿ ರೂ.ಗೂ ಅಧಿಕ ಮೊತ್ತದ ಸಾಲವನ್ನು ವಸೂಲಿಯಾಗದ ಸಾಲ ಎಂದು ಕೂಡ ಘೋಷಿಸಲಾಗಿದ್ದು, ಆ ಮೊತ್ತ ಕೂಡ ಸದ್ಯದಲ್ಲೇ ಮನ್ನಾ ಆಗಲಿದೆ.
ಜನರ ದುಡ್ಡಲ್ಲಿ ಔದಾರ್ಯ ಮೆರೆದ ಈ ಮಹಾ ದಾನಶೂರ ಬ್ಯಾಂಕುಗಳ ಪಟ್ಟಿಯಲ್ಲಿ ದೇಶದ ನಂಬರ್ ಒನ್ ಬ್ಯಾಂಕ್ ಮತ್ತು ಬಡವರ ಸಾಲದ ವಿಷಯದಲ್ಲಿ ಅತ್ಯಂತ ಕಠಿಣ ಕಾನೂನು ಜಾರಿ ಮಾಡುವ ಕುಖ್ಯಾತಿಯ ಎಸ್ ಬಿ ಐ ಮೊದಲ ಸ್ಥಾನದಲ್ಲಿದೆ. ಅದು ಸುಮಾರು 220 ಮಂದಿ ತನ್ನ ‘ಅತಿ ಗೌರವಾನ್ವಿತ’ ಕಾರ್ಪೊರೇಟ್ ಗ್ರಾಹಕರ ಒಟ್ಟು 76,600 ಕೋಟಿ ರೂ. ಸಾಲವನ್ನು ಮನ್ನಾ ಮಾಡಿದೆ. ಅದೂ ಕೂಡ ತಲಾ 100-500 ಕೋಟಿ ರೂ. ಸಾಲವನ್ನು ಮುಪತ್ತಾಗಿ ಅವರಿಗೆ ದಾನ ಮಾಡಿ ಕೈತೊಳೆದುಕೊಂಡಿದೆ. ಇದೂ ಕೂಡ 2019ರ ಮಾರ್ಚ್ 31ಕ್ಕೆ ಅಂತ್ಯದವರೆಗಿನ ಮಾಹಿತಿ. ಆ ಬಳಿಕ ಈ ಆರು ತಿಂಗಳಲ್ಲಿ ಹೀಗೆ ಬ್ಯಾಂಕ್ ಸಾಲ ಮನ್ನಾದ ಫಲಾನುಭವಿಗಳಾದ ಕಡುಬಡವ ಕಾರ್ಪೊರೇಟ್ ಕುಳಗಳ ಪಟ್ಟಿ ಇನ್ನಷ್ಟು ಬೆಳೆಯಬಹುದು.
ಆ ಪೈಕಿ ತಲಾ 500 ಕೋಟಿ ರೂ.ಗಿಂತ ಅಧಿಕ ಬಾಕಿ ಉಳಿಸಿಕೊಂಡಿದ್ದ 33 ಮಂದಿ ಕುಳಗಳಿಗೆ ಸಾಲ ಮನ್ನಾದಿಂದ ಆದ ಉಳಿತಾಯ ಮೊತ್ತ ಬರೋಬ್ಬರಿ 37,700 ಕೋಟಿ ರೂ.!
ಇನ್ನು ಕಾರ್ಪೊರೇಟ್ ಕುಳಗಳನ್ನು ಕಡುಬಡವರೆಂದು ಭಾವಿಸಿ ಅವರ ಹೊತ್ತಿನ ಊಟಕ್ಕೆ ತಾತ್ವಾರವಾಗದಂತೆ ನೆರವಾಗಲು ಬ್ಯಾಂಕುಗಳ ಪ್ರದರ್ಶಿಸಿರುವ ಈ ಮಹಾನ್ ಔದಾರ್ಯದ ವಿಷಯದಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್(ಪಿಎನ್ ಬಿ) ಎರಡನೇ ಸ್ಥಾನದಲ್ಲಿದೆ. ಅದು ತನ್ನ ಗ್ರಾಹಕರ ಪೈಕಿ ಕನಿಷ್ಟ ನೂರು ಕೋಟಿಗೂ ಅಧಿಕ ಸಾಲಪಡೆದು ವಾಪಸು ಮಾಡದೇ ಇರುವ ‘ಕಡುಬಡವರ’ನ್ನು ಗುರುತಿಸಿ, ಒಟ್ಟು 94 ಮಂದಿಯ ಬರೋಬ್ಬರಿ 27,024 ಕೋಟಿ ರೂ. ಒಟ್ಟು ಸಾಲ ಮನ್ನಾ ಮಾಡಿದೆ. ಅಂದರೆ ತಲಾ ಸರಾಸರಿ 287 ಕೋಟಿಯಷ್ಟು ಸಾಲ ಮನ್ನಾದ ಲಾಭ ಆ ಕಡುಬಡವ ಕಾರ್ಪೊರೇಟ್ ಕುಳಗಳ ಪಾಲಾಗಿದೆ. ಹಾಗೇ 500 ಕೋಟಿ ರೂ.ಗೂ ಅಧಿಕ ಮೊತ್ತದ ಬಾಕಿ ಸಾಲ ಉಳಿಸಿಕೊಂಡಿದ್ದ 12 ಮಂದಿಗೆ ಬರೋಬ್ಬರಿ ಒಟ್ಟು 9,037 ಕೋಟಿ ರೂ.ಗಳನ್ನು ಮುಫತ್ತಾಗಿ ನೀಡಲಾಗಿದೆ.
ಸಾರ್ವಜನಿಕ ವಲಯದ ಬ್ಯಾಂಕುಗಳ ಪೈಕಿ ಎಸ್ ಬಿಐ ಮತ್ತು ಪಿಎನ್ ಬಿ ಅಗ್ರಸ್ಥಾನದಲ್ಲಿದ್ದರೆ, ಖಾಸಗೀ ವಲಯದ ಬ್ಯಾಂಕುಗಳ ಪೈಕಿ ಐಡಿಬಿಐ ಮೊದಲ ಸ್ಥಾನದಲ್ಲಿದ್ದು, ಅದು ತಲಾ ನೂರು ಕೋಟಿಗೂ ಅಧಿಕ ಬಾಕಿ ಬಾಕಿ ಉಳಿಸಿಕೊಂಡಿದ್ದ ತನ್ನ 71 ಮಂದಿ ‘ಪ್ರಾಮಾಣಿಕ’ ಗ್ರಾಹಕರ ಒಟ್ಟು 26,219 ಕೋಟಿ ರೂ. ಸಾಲವನ್ನು ಮನ್ನಾ ಮಾಡಿದೆ. ಕರ್ನಾಟಕ ಮೂಲದ ಕೆನರಾ ಬ್ಯಾಂಕ್ ಕೂಡ ಈ ಔದಾರ್ಯ ಮೆರೆಯುವಲ್ಲಿ ಹಿಂದೆ ಬಿದ್ದಿಲ್ಲ. ಅದೂ ಕೂಡ 100 ರಿಂದ 500 ಕೋಟಿಗೂ ಅಧಿಕ ಮೊತ್ತದ ಸಾಲ ಬಾಕಿ ಉಳಿಸಿಕೊಂಡಿದ್ದ ತನ್ನ ಒಟ್ಟು 70 ಮಂದಿ ‘ಕಡುಬಡವ’ ಕಾರ್ಪೊರೇಟ್ ಕುಳಗಳ ಸಾಲ ಮನ್ನಾ ಮಾಡಿದ್ದು, ಸುಮಾರು 27 ಸಾವಿರ ಕೋಟಿ ರೂ.ನಷ್ಟು ಬೃಹತ್ ಮೊತ್ತವನ್ನು ಬಾಕಿದಾರರಿಗೆ ಮುಫತ್ತಾಗಿ ನೀಡಿ ಕೈತೊಳೆದುಕೊಂಡಿದೆ.
ಅದೇ ರೀತಿಯಲ್ಲಿ ಬ್ಯಾಂಕ್ ಆಫ್ ಇಂಡಿಯಾ ಸುಮಾರು 59 ಮಂದಿ ಸುಸ್ತಿದಾರರ ಒಟ್ಟು 14 ಸಾವಿರ ಕೋಟಿ ರೂ., ಕಾರ್ಪೊರೇಷನ್ ಬ್ಯಾಂಕ್ ಸುಮಾರು 52 ಮಂದಿಯ ಒಟ್ಟು 12800 ಕೋಟಿ ರೂ, ಬ್ಯಾಂಕ್ ಆಫ್ ಬರೋಡಾದ ಒಟ್ಟು 46 ಕಾರ್ಪೊರೇಟ್ ಕುಳಗಳ ಒಟ್ಟು 10,300 ಕೋಟಿ ರೂ. ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ 49 ಕಾರ್ಪೊರೇಟ್ ಗ್ರಾಹಕರ ಒಟ್ಟು 13,500 ಕೋಟಿ ರೂ., ಆಕ್ಸಿಸ್ ಬ್ಯಾಂಕಿನ ಒಟ್ಟು 43 ಕಾರ್ಪೊರೇಟ್ ಗ್ರಾಹಕರ ಒಟ್ಟು 12,274 ಕೋಟಿ ರೂ., ಐಸಿಐಸಿಐನ 37 ಗ್ರಾಹಕರ ೊಟ್ಟು 17,440 ಕೋಟಿ ರೂ. ಹಾಗೂ ಇಂಡಿಯನ್ ಓವರ್ ಸೀಸ್ ಬ್ಯಾಂಕ್ 37 ಕಾರ್ಪೊರೇಟ್ ಕುಳಗಳ ಒಟ್ಟು 10.350 ಕೋಟಿ ರೂ. ಸಾಲವನ್ನು ಮನ್ನಾ ಮಾಡಿವೆ.
ಒಂದು ಕಡೆ ದೇಶದ ಬೆನ್ನುಲುಬು ಎನ್ನುತ್ತಲೇ ಹತ್ತಿಪ್ಪತ್ತು ಸಾವಿರ ಸಾಲ ಕಟ್ಟದ ರೈತರಿಗೆ ನೋಟೀಸ್ ನೀಡಿ, ಮನೆ- ಜಮೀನು, ಟ್ರ್ಯಾಕ್ಟರ್ ಹರಾಜು ಮಾಡಿ ಮಗ್ಗಲುಮುರಿಯುವ ಬ್ಯಾಂಕುಗಳು ಮತ್ತೊಂದು ಕಡೆ ನೂರಾರು ಕೋಟಿ ಬಾಕಿ ಉಳಿಸಿಕೊಂಡವರ ಸಾಲವನ್ನು ವಸೂಲಿ ಮಾಡದೆ, ಸಾಲ ನೀಡುವಾಗ ಸರಿಯಾದ ಗ್ಯಾರಂಟಿಯನ್ನೂ ಪಡೆಯದೇ, ಕೊನೆಗೆ ದಿಢೀರನೇ ವಸೂಲಾಗದ ಸಾಲವೆಂದು ಹಣೆಪಟ್ಟಿ ಕಟ್ಟಿ ಸಾಲ ಮನ್ನಾ ಮಾಡಿ ಶ್ರೀಮಂತರನ್ನು ಇನ್ನಷ್ಟು ಕೊಬ್ಬಿಸುತ್ತಿವೆ. ಅದಕ್ಕಾಗಿ ಎನ್ ಪಿಎ(ವಸೂಲಾಗದ ಸಾಲ) ಮೊತ್ತವನ್ನು ತೋರಿಸಿ, ಬ್ಯಾಂಕ್ ವಹಿವಾಟು ಮುಗ್ಗಟ್ಟು ತೋರಿಸಿ ಸರ್ಕಾರಗಳಿಂದ ಸಾರ್ವಜನಿಕ ತೆರಿಗೆ ಹಣದಲ್ಲಿ ಉತ್ತೇಜನಾ ನಿಧಿ ಬಾಚಿಕೊಳ್ಳುತ್ತಿವೆ.
ಖಾತ್ರಿ ಇಲ್ಲದೆ ಭಾರೀ ಮೊತ್ತದ ಸಾಲ ನೀಡುವುದು, ಬಳಿಕ ಅದನ್ನು ವಸೂಲಾಗದ ಸಾಲ ಎಂದು ಘೋಷಿಸುವುದು, ನಂತರ ಸರ್ಕಾರದಿಂದ ಉತ್ತೇಜನಾ ನಿಧಿ ಪಡೆಯುವುದು,.. ಇದೆಲ್ಲವೂ ಬಿಡಿಬಿಡಿಯಾಗಿ ನೋಡಿದರೆ ಅರ್ಥವ್ಯವಸ್ಥೆಯ ಅನಿವಾರ್ಯ ಪ್ರಕ್ರಿಯೆಯಾಗಿ ಕಾಣಬಹುದು. ಆದರೆ, ಭಾರತದ ಸದ್ಯದ ಸ್ಥಿತಿಯಲ್ಲಿ ಇದು ಕೇವಲ ಸಹಜ, ಅನಿವಾರ್ಯ ಪ್ರಕ್ರಿಯೆ ಎನಿಸುತ್ತಿಲ್ಲ. ಬೃಹತ್ ಕಾರ್ಪೊರೇಟ್ ಕುಳಗಳು, ಬ್ಯಾಂಕುಗಳು ಮತ್ತು ಸರ್ಕಾರದ ಆಯಕಟ್ಟಿನ ಸ್ಥಾನದಲ್ಲಿರುವ ಮಂದಿ ಸೇರಿ ಸಾರ್ವಜನಿಕ ತೆರಿಗೆ ಹಣವನ್ನು ಲೂಟಿ ಹೊಡೆಯುವ ಒಂದು ವ್ಯವಸ್ಥಿತ ಜಾಲದಂತೆ ತೋರುತ್ತಿದೆ. ಈ ಮಾತನ್ನು ಈಗಾಗಲೇ ಹಲವು ಅರ್ಥಶಾಸ್ತ್ರಜ್ಞರು ಮತ್ತು ಮುತ್ಸದ್ಧಿ ನಾಯಕರೂ ಹೇಳಿದ್ದಾರೆ.
ಆದಾಗ್ಯೂ ಕಳೆದ ಒಂದು ತಿಂಗಳಲ್ಲೇ ಪಿಎಂಸಿ, ಲಕ್ಷ್ಮಿ ವಿಲಾಸ್ ಸೇರಿದಂತೆ ಮೂರಕ್ಕೂ ಹೆಚ್ಚು ಬ್ಯಾಂಕುಗಳು ದಿಢೀರನೇ ಗ್ರಾಹಕರ ವಹಿವಾಟಿಗೆ ಬ್ರೇಕ್ ಹಾಕಿರುವ ನಡುವೆಯೇ, ವಸೂಲಾಗದ ಸಾಲ ಮನ್ನಾ ಹೆಸರಲ್ಲಿ 2.75 ಕೋಟಿ ರೂ. ಮೊತ್ತದ ಬೃಹತ್ ಹಣವನ್ನು ಸಾರ್ವಜನಿಕ ವ್ಯವಸ್ಥೆಯಿಂದ ಕಾರ್ಪೊರೇಟ್ ಖಜಾನೆಗೆ ವರ್ಗಾಯಿಸುವ ಈ ಹಗರಣ ನಡೆದುಹೋಗಿದೆ. ದೇಶದ ಬಡ ಬೋರೇಗೌಡ ಮಾತ್ರ ಹತ್ತು ಸಾವಿರ ರೂ. ಕೃಷಿ ಸಾಲಕ್ಕೆ ಹತ್ತು ಲಕ್ಷ ರೂ. ಬೆಲೆಬಾಳುವ ಭೂಮಿಯನ್ನೇ ಖಾತ್ರಿಯಾಗಿ ನೀಡಿಯೂ, ಬೆದರಿಕೆ, ದಬ್ಬಾಳಿಕೆಗಳಿಗೆ ಈಡಾಗುತ್ತಲೇ ಇದ್ದಾನೆ!