ಈ ಚಂದಕ್ಕೆ ಅಸ್ತಿತ್ವದಲ್ಲಿದ್ದ ಒಂದು ಸರ್ಕಾರವನ್ನು ಆಪರೇಷನ್ ಮಾಡಿ ಕೆಡವಿ ಅಧಿಕಾರಕ್ಕೆ ಬರಬೇಕಿತ್ತಾ?
ಇದು ಮೂರು ತಿಂಗಳ ಹಿಂದೆ ಬಿಜೆಪಿ ಸರ್ಕಾರ ರಾಜ್ಯದ ಅಧಿಕಾರದ ಗದ್ದುಗೆ ಏರಿದಾಗ ಸಂಭ್ರಮಿಸಿದ್ದ ಆ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳೇ ಈಗ ಕೇಳುತ್ತಿರುವ ಪ್ರಶ್ನೆ. ಹಾಗೆ ನೋಡಿದರೆ, ಕಳೆದ ಮೂರು ತಿಂಗಳಲ್ಲಿ ಬಿ ಎಸ್ ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ಮತ್ತು ನಳೀನ್ ಕುಮಾರ್ ಕಟೀಲು ನೇತೃತ್ವದ ರಾಜ್ಯ ಬಿಜೆಪಿ ನಡುವಿನ ಎತ್ತು ಏರಿಗೆಳೆದರೆ, ಕೋಣ ನೀರಿಗೆಳೆಯುವ ಪ್ರಹಸನಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು, ಪ್ರತಿಪಕ್ಷಗಳಿಗಿಂತ ಸ್ವಪಕ್ಷೀಯ ಎರಡು- ಮೂರನೇ ಹಂತದ ಮುಖಂಡರು ಮತ್ತು ಕಾರ್ಯಕರ್ತರೇ ಬಹಿರಂಗವಾಗಿಯೇ ಛೀಮಾರಿ ಹಾಕತೊಡಗಿದ್ದಾರೆ.
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಆರಂಭಿಸಿದ ಈ ಅಭಿಯಾನಕ್ಕೆ ದಿನದಿಂದ ದಿನಕ್ಕೆ ಹೊಸಬರು ಸೇರುತ್ತಲೇ ಇದ್ದು, ಸರ್ಕಾರ ಮತ್ತು ಪಕ್ಷದ ನಡುವಿನ ಹಗ್ಗಜಗ್ಗಾಟ ಈಗ ಬಹುತೇಕ ಬೀದಿಗೆ ಬಿದ್ದಿದೆ. ಅದರಲ್ಲೂ ರಾಜ್ಯ ಬಿಜೆಪಿ ಕೇಂದ್ರ ಕಚೇರಿಯ ಸಿಬ್ಬಂದಿಗಳನ್ನು ‘ಜಾತಿ ಆಧಾರದ ಮೇಲೆ’ ವಜಾ ಮಾಡಿ, ಆ ಸ್ಥಾನಕ್ಕೆ ಹೊಸಬರನ್ನು ನೇಮಕಮಾಡಿದ ಬಳಿಕವಂತೂ ಸ್ವತಃ ಕೆಲಸ ಕಳೆದುಕೊಂಡವರೇ ಸಾಮಾಜಿಕ ಜಾಲತಾಣದಲ್ಲಿ ‘ಬಿಜೆಪಿಯಲ್ಲಿ ಈಗ ಪ್ರಭಾವಿ ಜಾತಿಗಳ ನಡುವಿನ ಗುದ್ದಾಟ ತಮ್ಮಂಥ ನಿಷ್ಠಾವಂತ ಕಾರ್ಯಕರ್ತರನ್ನು ಬಲಿತೆಗೆದುಕೊಳ್ಳುತ್ತಿದೆ’ ಎಂದು ಜಗಜ್ಜಾಹೀರು ಮಾಡಿದ್ದಾರೆ.
ಅದೂ, ಕಳೆದ ವಾರ ಪಕ್ಷದ ಕಚೇರಿಯ ಟೈಪಿಸ್ಟ್, ಛಾಯಾಗ್ರಾಹಕರು, ಅಡುಗೆಯವರು ಸೇರಿದಂತೆ ಏಳು ಮಂದಿ ಸಿಬ್ಬಂದಿಯನ್ನು ಏಕಾಏಕಿ ತೆಗೆದುಹಾಕಿದ ಬಳಿಕ ಬಿಜೆಪಿಯಲ್ಲಿ ಕಳೆದ ಕೆಲವು ತಿಂಗಳಿಂದ ಬೂದಿಮುಚ್ಚಿದ ಕೆಂಡದಂತಿದ್ದ ಲಿಂಗಾಯತ ವರ್ಸಸ್ ಬ್ರಾಹ್ಮಣ ಜಾತಿ ಸಂಘರ್ಷ ಉಲ್ಬಣಗೊಂಡಿದೆ. ಆ ಏಳು ಮಂದಿ ವಜಾಗೊಂಡವರೆಲ್ಲರೂ ಯಡಿಯೂರಪ್ಪ ಅವರೇ ನೇಮಕ ಮಾಡಿದವರು ಮತ್ತು ಇದೀಗ ಯಡಿಯೂರಪ್ಪ ವಿರುದ್ಧದ ತಂತ್ರಗಾರಿಕೆಯ ಭಾಗವಾಗಿಯೇ ಅವರೆಲ್ಲರನ್ನೂ ಕಚೇರಿಯಿಂದ ಹೊರಗಟ್ಟಲಾಗಿದೆ ಎಂಬುದು ವಜಾಗೊಂಡವರ ವಾದ.
ಹಾಗೆ ನೋಡಿದರೆ ಯಡಿಯೂರಪ್ಪ ನಿರೀಕ್ಷೆ ಮತ್ತು ಪ್ರಯತ್ನವನ್ನೂ ಮೀರಿ ಅವರ ಕಡೆಯವರನ್ನೆಲ್ಲಾ ಬದಿಗೆ ಸರಿಸಿ ನಳೀನ್ ಕುಮಾರ್ ಕಟೀಲು ಅವರ ಕೈಗೆ ಪಕ್ಷದ ಚುಕ್ಕಾಣಿ ವಹಿಸಿದ ಕ್ಷಣದಿಂದಲೇ ಈ ಸಂಘರ್ಷಕ್ಕೆ ಚಾಲನೆ ಸಿಕ್ಕಿತ್ತು. ಯಡಿಯೂರಪ್ಪ ಅವರನ್ನು ಅವರೇ ಹೇಳಿಕೊಂಡಂತೆ ‘ತಂತಿ ಮೇಲಿನ ನಡಿಗೆ’ ನಡೆಯುವಂತೆ ಮಾಡುವುದೇ ಪಕ್ಷದ ಹೈಕಮಾಂಡ್ ಲೆಕ್ಕಾಚಾರವಾಗಿತ್ತು. ಆ ಲೆಕ್ಕಾಚಾರದ ಸೂತ್ರವಾಗಿಯೇ ನೇಮಕವಾದವರು ಕಟೀಲು. ಹಾಗಾಗಿ, ಸ್ವತಃ ಯಡಿಯೂರಪ್ಪ ಅವರಿಗೂ ಮುಂದಿನ ದಿನಗಳಲ್ಲಿ ಎದುರಾಗಬಹುದಾದ ಕೈಕಾಲು ಕಟ್ಟಿಸಿಕೊಂಡು ತಂತಿ ಮೇಲೆ ನಡೆಯುವ ಸವಾಲಿನ ಸುಳಿವು ಸಿಕ್ಕಿತ್ತು. ಆದರೆ, ಆ ಸರ್ಕಸ್ಸು ಇಷ್ಟು ಜರೂರಾಗಿ ಕ್ಲೈಮ್ಯಾಕ್ಸ್ ತಲುಪುತ್ತೆ ಅನ್ನೋದನ್ನು ಅವರು ಊಹಿಸಿರಲಿಕ್ಕಿಲ್ಲ. ಆದರೆ, ಯಾವಾಗ ನೆರೆ ಪರಿಹಾರದ ವಿಷಯದಲ್ಲಿ ಯಡಿಯೂರಪ್ಪ ಅವರನ್ನು ಹಣಿಯಲೆಂದೇ ಕೇಂದ್ರ ಸರ್ಕಾರ ಪರಿಹಾರ ಹಣ ನೀಡುತ್ತಿಲ್ಲ ಎಂದು ಯಡಿಯೂರಪ್ಪ ಆಪ್ತ ಬಸನಗೌಡ ಪಾಟೀಲ್ ನೇರ ಆರೋಪ ಮಾಡಿದರೋ ಆಗ ಸರ್ಕಸ್ಸಿನ ಜೋಕರ್ ಪ್ರವೇಶ ಆಗಿ ಹೋಗಿತ್ತು!
ಆದರೆ, ಬಹುತೇಕ ರಾಜ್ಯ ಬಿಜೆಪಿಯ ಸಂಪೂರ್ಣ ಹಿಡಿತ ಈಗ ನಳೀನ್ ಕುಮಾರ್ ಕಟೀಲು ಮೂಲಕ ಬಿ ಎಲ್ ಸಂತೋಷ್ ಅವರ ಕೈಸೇರಿದೆ. ಸಂತೋಷ್ ಅವರು ಬಿಜೆಪಿ ಪಕ್ಷ ಮತ್ತು ಸಂಘಟನೆಯಲ್ಲಷ್ಟೇ ಅಲ್ಲದೆ, ಸರ್ಕಾರದ ಮೇಲೂ ಸಂಪೂರ್ಣ ಹಿಡಿತ ಸ್ಥಾಪಿಸುವ ಯತ್ನದಲ್ಲಿದ್ದು, ಆ ಪ್ರಯತ್ನಕ್ಕೆ ಅಡ್ಡಿಯಾಗಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಎಡಬಲದ ರೆಕ್ಕೆಗಳನ್ನು ಕತ್ತರಿಸುವ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ. ಹಾಗಾಗಿಯೇ ಸಿಎಂ ಆಗಿ ಒಂದೇ ವಾರದಲ್ಲೇ ಯಡಿಯೂರಪ್ಪ ಪುತ್ರರ ವರ್ಗಾವಣೆ ದಂಧೆಗೆ ಕಡಿವಾಣ ಹಾಕಿ, ಮಕ್ಕಳನ್ನು ಸಿಎಂ ಕಚೇರಿಯ ಹತ್ತಿರಬಿಟ್ಟುಕೊಳ್ಳದಂತೆ ವರಿಷ್ಠರಿಂದ ತಾಕೀತು ಮಾಡಿಸುವಲ್ಲಿ ಸಂತೋಷ್ ಯಶಸ್ವಿಯಾದರು. ಜೊತೆಗೆ, ಬಿಬಿಎಂಪಿ ಮೇಯರ್ ಚುನಾವಣೆಯಲ್ಲೂ ಯಡಿಯೂರಪ್ಪ ಆಟ ನಡೆಯದಂತೆ ವ್ಯವಸ್ಥಿತವಾಗಿ ತಂತ್ರ ರೂಪಿಸಿ ತಮಗೆ ಬೇಕಾದವರನ್ನು ರಾಜಧಾನಿಯ ಮೇಯರ್ ಕುರ್ಚಿಯ ಮೇಲೆ ಕೂರಿಸಿದರು.
ಇದೀಗ ಮತ್ತೊಂದು ಹೆಜ್ಜೆ ಮುಂದೆ ಹೋಗಿ ರಾಜ್ಯ ಕಚೇರಿಯ ಬಿಎಸ್ ವೈ ಖಾಸಗೀ ಮಾಹಿತಿದಾರರಾಗಿ ಕೆಲಸ ಮಾಡುತ್ತಿದ್ದಾರೆ ಎಂಬ ಹಿನ್ನೆಲೆಯಲ್ಲಿ ಕಚೇರಿಯಲ್ಲಿದ್ದ ಸಿಎಂ ಆಪ್ತ ಸಿಬ್ಬಂದಿಯನ್ನು ಹೊರ ಹಾಕಲಾಗಿದೆ. ಆ ಮೂಲಕ ಯಡಿಯೂರಪ್ಪ ಅವರಿಗೆ ಪಕ್ಷದ ಕಚೇರಿಯ ಆಂತರಿಕ ಮಾಹಿತಿ ಮೂಲಗಳನ್ನು ಕಡಿತಗೊಳಿಸಲಾಗಿದೆ ಎಂದೇ ಬಿಜೆಪಿ ವಲಯದಲ್ಲಿ ಈ ಬೆಳವಣಿಗೆಯನ್ನು ವಿಶ್ಲೇಷಿಸಲಾಗುತ್ತಿದೆ.
ಆದರೆ, ಇದೀಗ ಸಿಬ್ಬಂದಿಯ ವಜಾ ಕ್ರಮ ಕೇವಲ ಯಡಿಯೂರಪ್ಪ ವರ್ಸಸ್ ಬಿ ಎಲ್ ಸಂತೋಷ್ ಸಂಘರ್ಷವಾಗಿ ಮಾತ್ರವಲ್ಲದೆ, ಲಿಂಗಾಯತ ವರ್ಸಸ್ ಬ್ರಾಹ್ಮಣ ಜಾತಿ ಸಂಘರ್ಷವಾಗಿ ಬಿಂಬಿತವಾಗುತ್ತಿದ್ದು, ಬಿಜೆಪಿ ವರಿಷ್ಠರ ಪಾಲಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಪ್ರವಾಹ ಪರಿಹಾರದ ವಿಷಯದಲ್ಲಿಯೇ ಬಿಜೆಪಿ ವರಿಷ್ಠರು ಯಡಿಯೂರಪ್ಪ ಅವರನ್ನು ಹಣಿಯುವ ಉದ್ದೇಶದಿಂದಲೇ ವಿಳಂಬ ಮಾಡುತ್ತಿದ್ದಾರೆ ಎಂಬ ಹಿನ್ನೆಲೆಯಲ್ಲಿಯೇ ಲಿಂಗಾಯತ ಮಠಾಧೀಶರು ಬಹಿರಂಗವಾಗಿಯೇ ಪಕ್ಷದ ಯಡಿಯೂರಪ್ಪ ವಿರೋಧಿ ಬಣಕ್ಕೆ ಎಚ್ಚರಿಕೆ ನೀಡಿದ್ದರು. ಅದರ ಬೆನ್ನಲ್ಲೇ ಯತ್ನಾಳ್, ಸಂಸದ ಜಿ ಎಂ ಸಿದ್ದೇಶ್ವರ ಸೇರಿದಂತೆ ಹಲವರು ಕೇಂದ್ರದ ವಿರುದ್ಧ ಅಸಮಾಧಾನ ತೋಡಿಕೊಂಡಿದ್ದರು.
ಆ ಬಳಿಕ ವಿಧಾನಮಂಡಳ ಕಲಾಪ ಪ್ರಸಾರಕ್ಕೆ ಖಾಸಗೀ ಟಿವಿ ವಾಹಿನಿಗಳಿಗೆ ನಿರ್ಬಂಧಿಸಿ, ಟಿವಿ ಕ್ಯಾಮರಾಗಳಿಗೆ ಪ್ರವೇಶ ನಿರಾಕರಿಸಿದ ಸ್ಪೀಕರ್ ಕ್ರಮದ ಹಿಂದೆಯೂ ಮಾಧ್ಯಮದ ಕಣ್ಣಲ್ಲಿ ಯಡಿಯೂರಪ್ಪ ಅವರನ್ನು ವಿಲನ್ ಮಾಡುವ ಉದ್ದೇಶವಿದೆ ಎಂಬುದನ್ನು ಸ್ವತಃ ಮಾಧ್ಯಮದ ಪ್ರಮುಖರೇ ಹೇಳಿದ್ದರು. ಸ್ಪೀಕರ್ ಕ್ರಮದ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಹಿರಿಯ ಪತ್ರಕರ್ತರು ಅನೇಕರು ಪ್ರಮುಖವಾಗಿ ಯಡಿಯೂರಪ್ಪ ಅವರ ಪಾತ್ರ ಅದರಲ್ಲಿಲ್ಲ. ಅದು ಯಡಿಯೂರಪ್ಪ ವಿರುದ್ಧ ಮಾಧ್ಯಮಗಳನ್ನು ಎತ್ತಿಕಟ್ಟಲು ಪಕ್ಷದ ಕಾಣದ ಕೈ ನಡೆಸಿದ ತಂತ್ರ ಎಂದು ಬಹಿರಂಗವಾಗೇ ಹೇಳಿದ್ದರು.
ಪ್ರವಾಹ ಪರಿಹಾರ ವಿಳಂಬ, ಮುಖ್ಯಮಂತ್ರಿ ಭೇಟಿಗೆ ಪ್ರಧಾನಿ ನಕಾರ, ಬಿಬಿಎಂಪಿ ಮೇಯರ್ ಆಯ್ಕೆ, ಕಲಾಪಕ್ಕೆ ಮಾಧ್ಯಮ ನಿಷೇಧ ಮತ್ತು ಇದೀಗ ಬಿಜೆಪಿ ಕಚೇರಿ ಸಿಬ್ಬಂದಿ ವಜಾ ಸೇರಿದಂತೆ ಪ್ರತಿಯೊಂದರಲ್ಲೂ ಯಡಿಯೂರಪ್ಪ ವಿರುದ್ಧದ ಬಿಜೆಪಿಯ ಬಣವೇ ಮೇಲುಗೈ ಸಾಧಿಸುತ್ತಲೇ ಬಂದಿದೆ. ಇದೀಗ ಈ ಸಂಘರ್ಷ ರಾಜಕೀಯವಾಗಿ ವೈಯಕ್ತಿಕ ಪೈಪೋಟಿಯನ್ನು ಮೀರಿ ಜಾತಿ ಬಣ್ಣ ಪಡೆದುಕೊಂಡಿದೆ. ಆದರೆ, ರಾಜ್ಯದಲ್ಲಿ ಬಿಜೆಪಿಯ ನೆಲೆಯೇ ಯಡಿಯೂರಪ್ಪ ಅವರ ಲಿಂಗಾಯತ ಸಮುದಾಯ. ಆ ಅರಿವು ಯಡಿಯೂರಪ್ಪ ಪ್ರತಿಸ್ಪರ್ಧಿ ನಾಯಕರಿಗೂ ಮತ್ತು ಹೈಕಮಾಂಡಿಗೂ ಇದ್ದೇ ಇದೆ. ಹಾಗಾಗಿಯೇ ಲಕ್ಷಣ ಸವದಿಯಂತಹ ಉತ್ತರಕರ್ನಾಟಕದ ಲಿಂಗಾಯತ ನಾಯಕನನ್ನು ಏಕಾಏಕಿ ಡಿಸಿಎಂ ಸ್ಥಾನಕ್ಕೇರಿಸಿ ಯಡಿಯೂರಪ್ಪಗೆ ಪರ್ಯಾಯ ನಾಯಕತ್ವ ಹುಟ್ಟುಹಾಕುವ ತಂತ್ರ ಜಾರಿಗೊಳಿಸಲಾಗಿದೆ. ಆದರೆ, ಸಮಸ್ಯೆ ಇರುವುದು ಸವದಿ ಯಡಿಯೂರಪ್ಪ ಎದುರು ತಮ್ಮ ಸಮುದಾಯದ ನಾಯಕ ಎಂಬಂತೆ ಬಿಂಬಿಸಿಕೊಳ್ಳಲು ಯಾಕೋ ಹಿಂಜರಿಯುತ್ತಿರುವಂತಿದೆ.
ಹಾಗಾಗಿ ಯಡಿಯೂರಪ್ಪ ವಿರೋಧಿ ಬಣದ ನಾಯಕರ ಮುಂದಿನ ನಡೆ ಸದ್ಯಕ್ಕೆ ಕುತೂಹಲ ಮೂಡಿಸಿದೆ.