ಒಂದು ಕಡೆ ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್ಸಿಗೆ ಪಕ್ಷವನ್ನು ಮುನ್ನಡೆಸುವ ಸಮರ್ಥ ನಾಯಕರೇ ಇಲ್ಲದ ಹೀನಾಯ ಸ್ಥಿತಿ ಎದುರಾಗಿದ್ದರೆ, ಮತ್ತೊಂದು ಕಡೆ ರಾಜ್ಯದಲ್ಲಿ ಸಿದ್ದರಾಮಯ್ಯ ಬಿಟ್ಟರೆ ಇಡೀ ರಾಜ್ಯದಲ್ಲಿ ಜನ ಸಮುದಾಯವನ್ನು ಸೆಳೆಯುವಂತಹ ಮತ್ತೊಬ್ಬರಿಲ್ಲ ಎಂಬ ಅನಿವಾರ್ಯತೆ. ಹಾಗಾಗಿಯೇ ಒಲ್ಲದ ಮನಸ್ಸಿನಿಂದಲೇ ಪಕ್ಷದ ಹಿರಿಯ ನಾಯಕರು ಸಿದ್ದರಾಮಯ್ಯ ಅವರನ್ನು ಪ್ರತಿಪಕ್ಷ ನಾಯಕರನ್ನಾಗಿ ಒಪ್ಪಿಕೊಳ್ಳಬೇಕಾಗಿದೆ.
ಹಾಗೆ ನೋಡಿದರೆ ಸಿದ್ದರಾಮಯ್ಯ ಅವರಿಗೆ ಪರ್ಯಾಯ ಮುಖಗಳೇ ವಿರಳವಾಗಿರುವುದರಿಂದ ಹೈಕಮಾಂಡಿಗೆ ಕೂಡ ಅವರು ಅನಿವಾರ್ಯ ಆಯ್ಕೆ. ಹಾಗಾಗಿಯೇ ಇದೀಗ ಹೊಸ ಜವಾಬ್ದಾರಿಯೊಂದಿಗೆ, ಉಪ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವ ಹೊಣೆಗಾರಿಕೆಯೂ ಅವರ ಹೆಗಲೇರಿದೆ. ಡಿಸೆಂಬರ್ ಮೊದಲ ವಾರದಲ್ಲಿ ಅನರ್ಹ ಶಾಸಕರ ಒಟ್ಟು 17 ಕ್ಷೇತ್ರಗಳ ಪೈಕಿ 15 ಕ್ಷೇತ್ರಗಳಿಗೆ ನಡೆಯಲಿರುವ ಉಪ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಸವಾಲು ಈಗ ಸಿದ್ದರಾಮಯ್ಯ ಮುಂದಿದೆ. ಪ್ರತಿಪಕ್ಷ ನಾಯಕನ ಸ್ಥಾನದ ಹೆಗ್ಗಳಿಕೆಯೊಂದಿಗೇ ಅವರ ಮುಂದಿದೆ ಈ ಬಿಗ್ ಟಾಸ್ಕ್!
ಬೆಂಗಳೂರಿನ ಮುನಿರತ್ನ ಪ್ರತಿನಿಧಿಸಿದ್ದ ರಾಜರಾಜೇಶ್ವರಿ ನಗರ ಹಾಗೂ ಪಕ್ಷೇತರರಾಗಿ ಗೆದ್ದು ಬಳಿಕ ಕಾಂಗ್ರೆಸ್ ಸೇರಿದ್ದ ಆರ್ ಶಂಕರ್ ಪ್ರತಿನಿಧಿಸಿದ್ದ ಹಾವೇರಿ ಜಿಲ್ಲೆ ರಾಣೇಬೆನ್ನೂರು ವಿಧಾನಸಭಾ ಕ್ಷೇತ್ರಗಳನ್ನು ಹೊರತುಪಡಿಸಿ, ಉಳಿದಂತೆ 15 ಕ್ಷೇತ್ರಗಳ ಪೈಕಿ ಈ ಹಿಂದೆ ಜೆಡಿಎಸ್ ಮೂರು ಕಡೆ ಜಯ ಗಳಿಸಿದ್ದರೆ, ಉಳಿದ 12 ಕಡೆ ಕಾಂಗ್ರೆಸ್ ಶಾಸಕರೇ ಜಯಗಳಿಸಿದ್ದರು. ಆದರೆ, ಆಪರೇಷನ್ ಕಮಲಕ್ಕೆ ಬಲಿಯಾಗಿ ಆ ಶಾಸಕರು ಪಕ್ಷಾಂತರ ಮಾಡಿದ ಬಳಿಕ ಸ್ಪೀಕರ್ ಅವರನ್ನು ಅನರ್ಹಗೊಳಿಸಿದ್ದಾರೆ. ಹಾಗಾಗಿ ತನ್ನ 12 ಕ್ಷೇತ್ರಗಳ ಪೈಕಿ ಕನಿಷ್ಠ ಹತ್ತು ಕಡೆಯಾದರೂ ಗೆಲುವು ಪಡೆಯಲೇಬೇಕು ಎಂಬುದು ಕಾಂಗ್ರೆಸ್ ಗುರಿ.
ಆ ಗುರಿಯೊಂದಿಗೇ ಸ್ವತಃ ಸಿದ್ದರಾಮಯ್ಯ ಅವರಿಗೇ ಉಪಚುನಾವಣೆಯ ಹೊಣೆ ವಹಿಸಲಾಗಿದ್ದು, ಸಿದ್ದರಾಮಯ್ಯ ಕೂಡ ಹತ್ತು ಸ್ಥಾನ ಗೆಲ್ಲುವ ಗುರಿ ಇಟ್ಟುಕೊಂಡೇ ತಂತ್ರಗಾರಿಕೆ ಹೆಣೆಯುತ್ತಿದ್ದಾರೆ. ಆದರೆ, ಬಿಜೆಪಿಯ ಹಣ, ಅಧಿಕಾರ ಮತ್ತು ಇಡಿ, ಐಟಿ, ಸಿಬಿಐನಂತಹ ವ್ಯವಸ್ಥೆಯ ವ್ಯವಸ್ಥಿತ ಬಳಕೆಯ ಚುನಾವಣಾ ತಂತ್ರಗಾರಿಕೆಯ ಮುಂದೆ ಸಿದ್ದರಾಮಯ್ಯ ಈ ಬಾರಿ ಬಹುತೇಕ ಏಕಾಂಗಿಯಾಗಿ ಈ ಉಪಚುನಾವಣೆಯನ್ನು ಎದುರಿಸಬೇಕಾಗಿದೆ ಎಂಬುದು ವಾಸ್ತವ. ಏಕೆಂದರೆ, ಕಳೆದ ಎರಡು ಚುನಾವಣೆಗಳಲ್ಲಿ ಕಾಂಗ್ರೆಸ್ ಪಾಲಿಗೆ ಟ್ರಬಲ್ ಶೂಟರ್ ಎಂದೇ ಬಿಂಬಿತವಾಗಿದ್ದ ಮತ್ತು ಸಿದ್ದರಾಮಯ್ಯ ಜೊತೆ ಸರಿಸಮನಾಗಿ ನಿಂತು ತಂತ್ರಗಾರಿಕೆ, ಪ್ರಚಾರದಲ್ಲಿ ಭಾಗಿಯಾಗಿದ್ದ ಡಿ ಕೆ ಶಿವಕುಮಾರ್ ಆದಾಯ ತೆರಿಗೆ ವಂಚನೆ ಪ್ರಕರಣದಲ್ಲಿ ತಿಹಾರ್ ಜೈಲು ಪಾಲಾಗಿದ್ದಾರೆ. ಮತ್ತೊಬ್ಬ ಪ್ರಮುಖ ನಾಯಕ ಮತ್ತು ಪ್ರತಿಪಕ್ಷ ನಾಯಕ ಸ್ಥಾನಕ್ಕೆ ತೀವ್ರ ಪೈಪೋಟಿ ನಡೆಸಿದ್ದ ಡಾ ಜಿ ಪರಮೇಶ್ವರ್ ಕೂಡ ಅದೇ ಆರೋಪದಡಿ ಸಿಲುಕಿ ವಿಚಾರಣೆ ನಡೆಸುತ್ತಿದ್ದಾರೆ. ಜೊತೆಗೆ ಪ್ರತಿಪಕ್ಷ ನಾಯಕನ ಸ್ಥಾನಕ್ಕಾಗಿ ತೀವ್ರ ಪ್ರಯತ್ನ ನಡೆಸಿದ ಎಚ್ ಕೆ ಪಾಟೀಲ್ ಹಾಗೂ ಕೆ ಎಚ್ ಮುನಿಯಪ್ಪ, ವ್ಯವಹಾರ ರಕ್ಷಣೆಯ ಕಾರಣಕ್ಕೆ ಬಿಜೆಪಿಯೊಂದಿಗೆ ಒಳಸಂಬಂಧ ಬೆಳೆಸಿರುವ ಆರ್ ವಿ ದೇಶಪಾಂಡೆ ಮುಂತಾದ ಹಿರಿಯ ನಾಯಕರು ಸಿದ್ದರಾಮಯ್ಯ ಜೊತೆ ಎಷ್ಟರಮಟ್ಟಿಗೆ ಕೈಜೋಡಿಸುತ್ತಾರೆ ಎಂಬ ಬಗ್ಗೆ ಅನುಮಾನಗಳಿವೆ.
ಇನ್ನುಳಿದಂತೆ ತಮ್ಮದೇ ತಂಡದ ಭಾಗವಾದ ದಿನೇಶ್ ಗುಂಡೂರಾವ್, ಎಸ್ ಆರ್ ಪಾಟೀಲ್, ಎಂ ಬಿ ಪಾಟೀಲ್, ಯು ಟಿ ಖಾದರ್ ಅವರಂಥ ನಾಯಕರನ್ನೇ ಕಟ್ಟಿಕೊಂಡು ಉಪಚುನಾವಣೆಯ ಕಿರುಸಮರವನ್ನು ಜಯಿಸಬೇಕಾಗಿದೆ. ಅದೂ ಮೋದಿ, ಅಮಿತ್ ಶಾ, ಬಿ ಎಸ್ ಯಡಿಯೂರಪ್ಪ ಅವರಂಥ ಘಟಾಘಟಿ ನಾಯಕರು ಮತ್ತು ಅವರ ಕೈಯಲ್ಲಿರುವ ಅಧಿಕಾರ ಮತ್ತು ಇಡೀ ಆಡಳಿತ ವ್ಯವಸ್ಥೆಯ ಅನುಕೂಲಗಳ ಎದುರು ಅತ್ತ ನಾಯಕತ್ವದ ಬಲವೂ ಇಲ್ಲದೆ, ಇತ್ತ ಅಧಿಕಾರ-ಹಣಬಲವೂ ಇಲ್ಲದೆ ಸೆಣೆಸಬೇಕಾಗಿದೆ. ಆ ಅರ್ಥದಲ್ಲಿ ಇದು ನಿಜಕ್ಕೂ ಸಿದ್ದರಾಮಯ್ಯ ಅವರ ರಾಜಕೀಯ ಬದುಕಿನ ಮತ್ತೊಂದು ಅಗ್ನಿಪರೀಕ್ಷೆಯೇ.
ಆದರೆ, ಈ ಸವಾಲಿನ ಪರಿಸ್ಥಿತಿಯಲ್ಲೂ ಸಿದ್ದರಾಮಯ್ಯಗೆ ಅನುಕೂಲಕರವಾಗಿರುವುದು ಆಡಳಿತಾರೂಢ ಬಿಜೆಪಿಯಲ್ಲಿ ಭುಗಿಲೆದ್ದಿರುವ ಟಿಕೆಟ್ ಆಕಾಂಕ್ಷಿಗಳ ನಡುವಿನ ಪೈಪೋಟಿ ಮತ್ತು ಅದು ಹುಟ್ಟಿಸಲಿರುವ ಅಸಮಾಧಾನದ ಅಲೆ. ತಮ್ಮ ಸರ್ಕಾರ ರಚಿಸಲು ಕಾರಣರಾದ ಅನರ್ಹ ಶಾಸಕರಿಗೆ ಪಕ್ಷದ ಟಿಕೆಟ್ ನೀಡಿ, ಅವರಿಗೆ ನೀಡಿರುವ ವಾಗ್ದಾನದಂತೆ ಅವರನ್ನು ಸಚಿವರನ್ನಾಗಿ ಮಾಡುವ ಅನಿವಾರ್ಯತೆಗೆ ಸಿಲುಕಿರುವ ಬಿ ಎಸ್ ಯಡಿಯೂರಪ್ಪ ಮತ್ತು ಬಿಜೆಪಿ, 15 ಕ್ಷೇತ್ರಗಳಲ್ಲೂ ಅನರ್ಹರು ಅಥವಾ ಅವರು ಹೇಳಿದವರಿಗೆ ಟಿಕೆಟ್ ನೀಡಲಿವೆ ಎಂಬುದು ಖಚಿತವಾಗಿದೆ. ಆ ಹಿನ್ನೆಲೆಯಲ್ಲಿ ಬಹುತೇಕ ಕ್ಷೇತ್ರಗಳಲ್ಲಿ ಈ ಹಿಂದಿನ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಸೋಲು ಕಂಡಿದ್ದ ಬಿಜೆಪಿಯ ಮಾಜಿ ಶಾಸಕರು ಸೇರಿದಂತೆ ಇತರ ಆಕಾಂಕ್ಷಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಿಜೆಪಿ ನಾಯಕರ ಮತ್ತು ಕಾರ್ಯಕರ್ತರ ಆ ಅಸಮಾಧಾನವನ್ನೇ ಬಳಸಿಕೊಂಡು ಅವರನ್ನೇ ಪಕ್ಷಕ್ಕೆ ಸೆಳೆದು ಟಿಕೆಟ್ ನೀಡುವ ಲೆಕ್ಕಾಚಾರ ಕೂಡ ಸಿದ್ದರಾಮಯ್ಯ ಅವರದ್ದಾಗಿದೆ ಎನ್ನಲಾಗುತ್ತಿದೆ.
ಹದಿನೈದು ಕ್ಷೇತ್ರಗಳ ಪೈಕಿ ಈಗಾಗಲೇ ಬೆಂಗಳೂರು ನಗರ ವ್ಯಾಪ್ತಿಯ ಕ್ಷೇತ್ರಗಳಿಗೆ ಕಣಕ್ಕಿಳಿಯುವ ಅಭ್ಯರ್ಥಿಗಳ ಪಟ್ಟಿ ಬಹುತೇಕ ಅಂತಿಮವಾಗಿದ್ದು, ಬುಧವಾರ ಹೈಕಮಾಂಡ್ ಭೇಟಿ ವೇಳೆ ಈ ಬಗ್ಗೆ ಚರ್ಚಿಸಿ ಸಂಪೂರ್ಣ ಪಟ್ಟಿಗೆ ಒಪ್ಪಿಗೆ ಪಡೆಯಲಾಗಿದೆ ಎಂದು ಕಾಂಗ್ರೆಸ್ ಮೂಲಗಳು ಹೇಳಿವೆ. ಆ ಪೈಕಿ ಶಿವಾಜಿನಗರ, ಯಶವಂತಪುರ, ಮಹಾಲಕ್ಷ್ಮಿ ಲೇಔಟ್, ಹೊಸಕೋಟೆ, ಕೆಆರ್ ಪುರ, ಚಿಕ್ಕಬಳ್ಳಾಪುರ ಕ್ಷೇತ್ರಗಳಿಗೆ ಪಕ್ಷದ ನಾಯಕರನ್ನೇ ಕಣಕ್ಕಿಳಿಸಲು ಮತ್ತು ಉಳಿದ ಕಡೆಗಳ ಪೈಕಿ ಪ್ರಮುಖವಾಗಿ ಹೊಸಕೋಟೆ, ಕಾಗವಾಡ, ಹಿರೇಕೆರೂರು ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಜಡಿಎಸ್ ನಿಂದ ಬರುವವರಿಗೆ ಟಿಕೆಟ್ ನೀಡಲು ನಿರ್ಧರಿಸಲಾಗಿದೆ ಎನ್ನಲಾಗಿದೆ. ಈ ನಡುವೆ, ಸ್ವತಃ ಅನರ್ಹ ಶಾಸಕರಲ್ಲೇ ಕೆಲವರು ಮತ್ತೆ ಕಾಂಗ್ರೆಸ್ ಕದ ತಟ್ಟುತ್ತಿದ್ದು, ಈಗಾಗಲೇ ಸಿದ್ದರಾಮಯ್ಯ ಅವರೊಂದಿಗೆ ಮಾತುಕತೆಯನ್ನೂ ನಡೆಸಿದ್ದಾರೆ. ಹಾಗಾಗಿ ಬಿಜೆಪಿಯನ್ನು ಹಣಿಯಲು ಸಿದ್ದರಾಮಯ್ಯ ಕೈಗೆ ಪ್ರಬಲ ಅಸ್ತ್ರಗಳೇ ಸಿಕ್ಕಿವೆ ಎಂಬ ಮಾತುಗಳೂ ಕೇಳಿಬರುತ್ತಿವೆ.
ಈ ನಡುವೆ, ಈ ಉಪಚುನಾವಣೆಯಲ್ಲಿ ಬಿಜೆಪಿಗೆ ಭಾರೀ ಹಿನ್ನಡೆಯಾಗಲಿದೆ. ಒಟ್ಟು 15 ಕ್ಷೇತ್ರಗಳ ಪೈಕಿ ಆಡಳಿತ ಪಕ್ಷ ಕೇವಲ 3-4 ಕಡೆ ಮಾತ್ರ ಗೆಲುವು ಪಡೆಯಬಹುದು ಎಂದು ಸ್ವತಃ ಬಿಜೆಪಿಯ ಆಂತರಿಕ ಸಮೀಕ್ಷೆಯೇ ಹೇಳಿದೆ ಎಂಬ ವರದಿಗಳಿವೆ. ಹಾಗಾಗಿ, ಈ ಅಂಶ ಕೂಡ ಸಿದ್ದರಾಮಯ್ಯ ಅವರಿಗೆ ಅನುಕೂಲಕರವಾಗಿ ಒದಗಿಬರಬಹುದು. ಅಲ್ಲದೆ, ಈ ಚುನಾವಣೆಯಲ್ಲಿ ಬಿಜೆಪಿ ಕನಿಷ್ಠ ಆರು ಕ್ಷೇತ್ರಗಳಲ್ಲಿ ಗೆದ್ದರೆ ಮಾತ್ರ ಅದರ ಸರ್ಕಾರ ಉಳಿಯಲಿದೆ. ಇಲ್ಲವಾದಲ್ಲಿ ಸರ್ಕಾರ ಉರುಳುತ್ತದೆ. ಹಾಗಾಗಿ ಬಿಜೆಪಿಯನ್ನು ಕೇವಲ ಎರಡು-ಮೂರು ಸ್ಥಾನಕ್ಕೆ ಕಟ್ಟಿಹಾಕಿ, ಸರ್ಕಾರಕ್ಕೇ ಸಂಚಕಾರ ತರಬೇಕು ಎಂಬುದು ಸಿದ್ದರಾಮಯ್ಯ ಲೆಕ್ಕಾಚಾರ. ಹಾಗಾಗಿಯೇ ಮಂಗಳವಾರದ ಎಐಸಿಸಿ ರಾಜ್ಯ ಉಸ್ತುವಾರಿ ಕೆ ಸಿ ವೇಣುಗೋಪಾಲ್ ಅವರೊಂದಿಗಿನ ಸಭೆಯಲ್ಲಿ ಕೂಡ ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿ ಸರ್ಕಾರವನ್ನು ಬಿಕ್ಕಟ್ಟಿಗೆ ಸಿಲುಕಿಸಲು ಮಾಡಬೇಕಾದ ತಂತ್ರಗಾರಿಕೆಯ ಬಗ್ಗೆಯೇ ಪ್ರಮುಖವಾಗಿ ಚರ್ಚಿಸಲಾಗಿದೆ.
ಈ ನಡುವೆ ಹದಗೆಟ್ಟಿರುವ ದೇಶದ ಆರ್ಥಿಕ ಪರಿಸ್ಥಿತಿ, ಮುಚ್ಚುತ್ತಿರುವ ಸಾಲುಸಾಲು ಬ್ಯಾಂಕುಗಳು, ಸರ್ಕಾರಿ ಸ್ವಾಮ್ಯದ ಬೃಹತ್ ಕೈಗಾರಿಕೆಗಳು, ಹೆಚ್ಚುತ್ತಿರುವ ನಿರುದ್ಯೋಗ, ಏರುತ್ತಿರುವ ದಿನಬಳಕೆ ವಸ್ತುಗಳ ಬೆಲೆ, ದುಸ್ತರವಾಗುತ್ತಿರುವ ಬಡವರ ಬದುಕು, ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ರಾಜ್ಯದ ಭೀಕರ ಪ್ರವಾಹ ಪರಿಸ್ಥಿತಿ ನಿಭಾಯಿಸುವಲ್ಲಿ ಮತ್ತು ಸಕಾಲಕ್ಕೆ ಪರಿಹಾರ ನೀಡುವಲ್ಲಿ ಬಿಜೆಪಿಯ ವೈಫಲ್ಯಗಳನ್ನು ಎಷ್ಟು ಪರಿಣಾಮಕಾರಿ ಕಾಂಗ್ರೆಸ್ ಜನರ ಮುಂದಿಡಲಿದೆ ಮತ್ತು ಈ ವಿಷಯಗಳು ಜನರಿಗೆ ಎಷ್ಟರಮಟ್ಟಿಗೆ ಆಕ್ರೋಶ ತಂದಿವೆ ಎಂಬುದರ ಮೇಲೆ ಪಕ್ಷಗಳತ್ತ ಜನರ ಒಲವು ನಿಲುವು ನಿರ್ಧಾರವಾಗಲಿದೆ.
ಸಿದ್ದರಾಮಯ್ಯ ಪಾಲಿಗೆ ಈ ಬಾರಿ ಚುನಾವಣಾ ಕಣದಲ್ಲಿ ತಮ್ಮೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ನಿಲ್ಲುವ ಅತಿರಥ ಮಹಾರಥರ ಸಂಖ್ಯೆ ಕಡಿಮೆಯಾಗಲಿದೆ. ಅದೇ ಹೊತ್ತಿಗೆ, ಕಳೆದ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಗಿಂತಲೂ ಹೆಚ್ಚು ಪರಿಣಾಮಕಾರಿಯಾದ ಮತ್ತು ಜನರ ನಿತ್ಯದ ಬದುಕಿಗೆ ತಟ್ಟಿದ ಬಿಜೆಪಿಯ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಾಲುಸಾಲು ವೈಫಲ್ಯಗಳು ಅವರಿಗೆ ಅನುಕೂಲಕರವಾಗಿ ಒದಗಿಬರಲಿವೆ. ಆ ಹಿನ್ನೆಲೆಯಲ್ಲಿ ಈ ಉಪ ಚುನಾವಣೆ ಸಿದ್ದರಾಮಯ್ಯ ಅವರ ಸಾಮರ್ಥ್ಯವನ್ನು ಒರೆಗೆ ಹಚ್ಚುವ ಚುನಾವಣೆಯಂತೆಯೇ ಬಿಜೆಪಿಯ ವೈಫಲ್ಯಗಳು ದೇಶದ ಜನರನ್ನು ಎಷ್ಟರಮಟ್ಟಿಗೆ ಕಾಡಿವೆ ಎಂಬುದನ್ನು ಕೂಡ ಸೂಚಿಸುವ ಮಾನದಂಡವೂ ಆಗಿರಲಿದೆ.