ಮಹಾರಾಷ್ಟ್ರ ಮತ್ತು ಹರ್ಯಾಣ ವಿಧಾನಸಭೆ ಚುನಾವಣೆ ಕಣ ರಂಗೇರಿದೆ. ಅದೇ ಹೊತ್ತಿಗೆ ಬೆಂಗಳೂರು ಸೇರಿದಂತೆ ದೇಶದ ವಿವಿಧೆಡೆ ಭಯೋತ್ಪಾದಕರ ಶೋಧ ಕಾರ್ಯಾಚರಣೆಗಳು ಕೂಡ ಚುರುಕುಗೊಂಡಿವೆ. ಈ ನಡುವೆ ಅಯೋಧ್ಯೆ ವಿವಾದದ ತೀರ್ಪು ಹೊರಬೀಳಲು ಕ್ಷಣಗಣನೆ ಆರಂಭವಾಗಿದೆ. ಅದೇ ಹೊತ್ತಿಗೆ ಗಾಂಧಿ ಹತ್ಯೆ ಸಂಚಿನ ಆರೋಪ ಎದುರಿಸಿ ಬಳಿಕ ಆರೋಪಮುಕ್ತರಾದ ವಿ ಡಿ ಸಾವರ್ಕರ್ ಗೆ ದೇಶದ ಅತ್ಯುನ್ನತ ಪುರಸ್ಕಾರವಾದ ಭಾರತ ರತ್ನ ನೀಡುವ ವಿಷಯ ಸಾರ್ವಜನಿಕ ಚರ್ಚೆಯ ಮುನ್ನೆಲೆಗೆ ಬಂದಿದೆ. ಚುನಾವಣೆ ಕಣ ಕೇಸರಿಯ ಬಣ್ಣ ರಂಗೇರತೊಡಗಿದೆ.
ಉಗ್ರರ ಒಳನುಸುಳುವಿಕೆ, ಅಯೋಧ್ಯೆ ವಿವಾದದ ತೀರ್ಪು, ಭಾರತ ರತ್ನ ವಿಷಯಗಳನ್ನು ದೇಶದ ಜನ ತಿರುಗಾ ಮುರುಗಾ ಚರ್ಚಿಸುತ್ತಿರುವ ಹೊತ್ತಿಗೇ, ವಾಟ್ಸಪ್, ಫೇಸ್ಬುಕ್ ಗಳಲ್ಲಿ ಇದೇ ವಿಷಯಗಳ ಚರ್ಚೆ ಮುಗಿಲುಮುಟ್ಟಿರುವಾಗಲೇ ನಿಜವಾಗಿಯೂ ಜನ ಚರ್ಚಿಸಲೇಬೇಕಿದ್ದ, ಬೆಚ್ಚಿಬೀಳಲೇಬೇಕಾದ ಸಂಗತಿಗಳು ನಿಧಾನಕ್ಕೆ ಬದಿಗೆ ಸರಿಯತೊಡಗಿವೆ. ಭೀತಿ, ಆತಂಕ ಮತ್ತು ಭಾವನಾತ್ಮಕ ಸಂಗತಿಗಳ ಕುರಿತು ಭಕ್ತರು ಮತ್ತು ಭಕ್ತರಲ್ಲದವರ ನಡುವಿನ ವಾದ-ಪ್ರತಿವಾದಗಳು ಜನರಿಗೆ ಒಂದು ರೀತಿಯ ಅನೆಸ್ತೇಸಿಯಾದ ಮಂಪರು ಕವಿಯುಂತೆ ಮಾಡಿರುವಾಗಲೇ, ನಿಜವಾಗಿಯೂ ದೇಶದ ಜನರು ಬೆಚ್ಚಿಬೀಳಲೇಬೇಕಾದ ಹಲವು ವಿದ್ಯಮಾನಗಳನ್ನು ಯಶಸ್ವಿಯಾಗಿ ಮರೆಮಾಚಲಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಷ್ಟೇ ಅಲ್ಲದೆ, ದೇಶದ ಬಹುತೇಕ ಮಾಧ್ಯಮಗಳಲ್ಲೂ ಪ್ರಮುಖವಾಗಿ ಕಾಣಿಸಿಕೊಳ್ಳದೆ ಹಾಗೆ ಮರೆಮಾಚಲ್ಪಟ್ಟ ಸಂಗತಿಗಳಲ್ಲಿ ಪ್ರಮುಖವಾಗಿ ಕೆಲವನ್ನು ಹೆಸರಿಸುವುದೇ ಆದರೆ; ದೇಶದ ರೈತರ ಬದುಕನ್ನೇ ಕಿತ್ತುಕೊಳ್ಳುವ ಆರ್ ಸಿ ಇಪಿ ಒಪ್ಪಂದಕ್ಕೆ ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿದೆ. ದೇಶದ ಒಟ್ಟು ರಾಷ್ಟ್ರೀಯ ಉತ್ಪನ್ನದ ದರ(ಜಿಡಿಪಿ ದರ) ದಾಖಲೆಯ ಕುಸಿತ ಕಂಡಿದೆ. ಪಿಎಂಸಿ ಸೇರಿದಂತೆ ದೇಶದ ಪ್ರಮುಖ ನಾಲ್ಕು ಖಾಸಗಿ ಬ್ಯಾಂಕುಗಳು ದಿವಾಳಿ ಎದ್ದಿವೆ. ಎಚ್ ಎ ಎಲ್, ಬಿಎಸ್ ಎನ್ ಎಲ್, ಒಎನ್ ಜಿಸಿ ಸೇರಿದಂತೆ ಸಾರ್ವಜನಿಕ ವಲಯದ ಬೃಹತ್ ಉದ್ದಿಮೆಗಳು ಏಕಕಾಲಕ್ಕೆ ಸಾವಿರಾರು ಕೋಟಿ ನಷ್ಟಕ್ಕೆ ಜಾರಿ, ಉದ್ಯೋಗಿಗಳನ್ನು ಮನೆಗೆ ಕಳಿಸಲು ಸಜ್ಜಾಗಿವೆ. ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ದೇಶ ದಾಖಲೆಯ ಕುಸಿತ ಕಂಡಿದೆ.
ಹೀಗೆ ಜನರ ಗಮನ ಬೇರೆಡೆ ಸೆಳೆದು, ನಿಜಕ್ಕೂ ಅವರ ಬದುಕಿಗೆ ಸಂಚಕಾರ ತರುವ ನೀತಿ, ವೈಪಲ್ಯಗಳನ್ನು ಕಳ್ಳಹಾದಿಯಲ್ಲಿ ಜಾರಿಗೆ ತರುವ, ಮರೆಮಾಚುವ ಯತ್ನವನ್ನೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಜೇಬುಗಳ್ಳರ ವರಸೆ ಎಂದಿದ್ದಾರೆ. ಅವರು ಪ್ರಧಾನಿ ಮೋದಿಯವರ ಬಗ್ಗೆ ಮಾಡಿರುವ ಆ ಟೀಕೆಯ ಬಗ್ಗೆ ಬಿಜೆಪಿ ವಲಯದಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ. ಅವರು ದೇಶದ ಪ್ರಧಾನಿಗೆ ಅವಮಾನಿಸಿದ್ದಾರೆ ಎಂದು ಪೊಲೀಸ್ ದೂರು ಕೂಡ ದಾಖಲಾಗಿದೆ. ಆದರೆ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಇಷ್ಟು ವರ್ಷಗಳಲ್ಲಿ ಜನರಿಗೆ ಆಘಾತ ತರುವ, ಅವರ ಬದುಕನ್ನು ಸಂಕಷ್ಟಕ್ಕೆ ಸಿಲುಕಿಸುವ ನೀತಿ- ಕಾಯ್ದೆಗಳನ್ನು ಜಾರಿಗೊಳಿಸುವಾಗ ಅಥವಾ ಜಿಡಿಪಿ ಕುಸಿತ, ಉದ್ಯಮ ಬಿಕ್ಕಟ್ಟು, ನಿರುದ್ಯೋಗ ಏರಿಕೆ, ಬ್ಯಾಂಕಿಂಗ್ ಪತನದಂತಹ ವೈಫಲ್ಯಗಳ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಚುಕ್ಕಾಣಿ ಹಿಡಿದುಕೊಂಡಿರುವವರು ಅನುಸರಿಸುತ್ತಿರುವುದು ವಾಸ್ತವವಾಗಿ ಅದೇ ತಂತ್ರವನ್ನೇ.
ಈಗ ಕೂಡ, ಅದೇ ತಂತ್ರಕ್ಕೆ ಮೊರೆಹೋಗಿದ್ದು, ತಮಗೆ ಇರಿಸುಮುರಿಸುವ ತರಿಸುವ ಅಂತಾರಾಷ್ಟ್ರೀಯ ವರದಿಗಳು, ಉದ್ಯಮ- ಬ್ಯಾಂಕಿಂಗ್, ಜಿಡಿಪಿ ಪತನದಿಂದ ಜನರ ಗಮನ ಬೇರೆಡೆ ಸೆಳೆಯುವ ಯತ್ನವಾಗಿ, ಚುನಾವಣಾ ಕಣದಲ್ಲಿ ಸಾವರ್ಕರ್ ಗೆ ಭಾರತ ರತ್ನ, ಭಯೋತ್ಪಾದನೆಯ ಭೂತ, ಅಯೋಧ್ಯಾ ವಿವಾದಗಳನ್ನು ಮುಂದು ಮಾಡಲಾಗುತ್ತಿದೆ. ಕೇಂದ್ರ ಸರ್ಕಾರದ ನಿರೀಕ್ಷೆಯಂತೆ ನಮ್ಮ ಮುಖ್ಯವಾಹಿನಿ ಮಾಧ್ಯಮಗಳು ಕೂಡ ಜನಸಾಮಾನ್ಯರನ್ನು ನಿಜವಾಗಿಯೂ ಕಾಡಲಿರುವ, ಅವರ ಭವಿಷ್ಯಕ್ಕೆ ಮಂಕು ಕವಿಸಲಿರುವ ಆರ್ಥಿಕ ಕುಸಿತದಂತಹ ಸಂಗತಿಗಳ ಬದಲಿಗೆ ಸರ್ಕಾರ ಪ್ರತಿಬಿಂಬಿಸುವ ವಿಷಯಗಳನ್ನೆ ದಿನವಿಡೀ ಚರ್ಚಿಸುವ ಮೂಲಕ ಆಳುವವರ ಇಷ್ಟಾರ್ಥ ನೆರವೇರಿಸುತ್ತಿವೆ.
ಹೀಗೆ ಆಳುವ ಮಂದಿ ಮತ್ತು ಮಾಧ್ಯಮಗಳ ಕಣ್ಕಟ್ಟಿನ ಆಟದಿಂದ ಸಾರ್ವಜನಿಕರ ಚರ್ಚೆಯಿಂದ ಬದಿಗೆ ಸರಿದಿರುವ ಮತ್ತು ಸರಿಯುತ್ತಿರುವ ಕೆಲವು ಪ್ರಮುಖ ಸಂಗತಿಗಳು ಇಲ್ಲಿವೆ, ಮೈಮರೆಯದೇ ಗಮನಿಸಲೇಬೇಕಾದ ವಿದ್ಯಮಾನಗಳಿವು ಎಂಬುದು ವಿಶೇಷ.
ಬ್ಯಾಂಕಿಂಗ್ ಹಗರಣ
ಕಳೆದ ಒಂದೂವರೆ ತಿಂಗಳಲ್ಲಿ ಪಂಜಾಬ್ ಮಹಾರಾಷ್ಟ್ರ ಸಹಕಾರ ಬ್ಯಾಂಕ್(ಪಿಎಂಸಿ) ಸೇರಿದಂತೆ ದೇಶದ ನಾಲ್ಕು ಪ್ರಮುಖ ಖಾಸಗೀ ಬ್ಯಾಂಕುಗಳು ಬಹುತೇಕ ದಿವಾಳಿ ಎದ್ದಿವೆ. ಲೆಕ್ಕಪತ್ರ ಅಕ್ರಮ, ಸಾಲ ನೀಡಿಕೆ ನಿಯಮಾವಳಿ ಉಲ್ಲಂಘನೆ, ವಸೂಲಿಯಾಗದ ಸಾಲ ಪ್ರಮಾಣ ಏರಿಕೆ, ನಗದು ಕೊರತೆಯಂತಹ ತಾಂತ್ರಿಕ ಅಂಶಗಳನ್ನು ಮುಂದುಮಾಡಿ ಈ ಬ್ಯಾಂಕಿನ ವಾಸ್ತವ ಚಿತ್ರಣವನ್ನು ಮುಚ್ಚಿಡಲಾಗುತ್ತಿದ್ದರೂ, ವಾಸ್ತವವಾಗಿ ಬ್ಯಾಂಕ್ ದಿವಾಳಿ ಎದ್ದಿದೆ ಎನ್ನಲಾಗುತ್ತಿದೆ. ಬ್ಯಾಂಕಿನ ದಿಢೀರ್ ಪತನದಿಂದ ಆಘಾತಗೊಂಡ ಠೇವಣಿದಾರರು ಆತ್ಮಹತ್ಯೆ ಹಾದಿ ಹಿಡಿದಿದ್ದು, ಈಗಾಗಲೇ ಮೂವರು (ಇಬ್ಬರು ಹೃದಯಾಘಾತ ಮತ್ತು ಒಬ್ಬರು ಆತ್ಮಹತ್ಯೆ) ಬ್ಯಾಂಕಿನ ಪತನಕ್ಕೆ ಬಲಿಯಾಗಿದ್ದಾರೆ.
ಪಿಎಂಸಿ ಮಾತ್ರವಲ್ಲದೆ, ಲಕ್ಷ್ಮಿವಿಲಾಸ್ ಬ್ಯಾಂಕ್, ಯೆಸ್ ಬ್ಯಾಂಕ್, ಇಂಡಸ್ಇಂಡ್ ಬ್ಯಾಂಕ್ಗಳು ಕೂಡ ಅದೇ ಪರಿಸ್ಥಿತಿಗೆ ತಲುಪಿದ್ದು, ಇನ್ನೂ ಕೆಲವು ಖಾಸಗಿ ಮತ್ತು ಸಾರ್ವಜನಿಕ ವಲಯದ ಬ್ಯಾಂಕುಗಳು ಕೂಡ ಇದೇ ಹಾದಿಯಲ್ಲಿವೆ ಎಂದು ಈಗಾಗಲೇ ತಜ್ಞರು ಎಚ್ಚರಿಸಿದ್ದಾರೆ! ಆದರೆ, ತಜ್ಞರ ಆ ಎಚ್ಚರಿಕೆಗಿಂತ, ಹೆಚ್ಚು ಈಗ ಚರ್ಚೆಯಾಗುತ್ತಿರುವುದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಬ್ಯಾಂಕಿಂಗ್ ಬಿಕ್ಕಟ್ಟಿಗೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಆರ್ ಬಿಐ ಮಾಜಿ ಗವರ್ನರ್ ರಘುರಾಂ ರಾಜನ್ ಅವರೇ ಕಾರಣ ಎಂದು ಹೇಳಿರುವುದು! ಅಲ್ಲಿಗೆ ಅಸಲೀ ವಿಷಯವನ್ನು ಮರೆಮಾಚುವ ಸರ್ಕಾರದ ಉದ್ದೇಶ ಸಲೀಸಾಗಿ ನೆರವೇರಿಬಿಟ್ಟಿತು!
ಜಿಡಿಪಿ ದಾಖಲೆ ಕುಸಿತ
ದೇಶದ ಒಟ್ಟು ಆಂತರಿಕ ಉತ್ಪನ್ನ(ಜಿಡಿಪಿ) ವೃದ್ಧಿ ದರದ ಮೇಲೆ ದೇಶ ಎಷ್ಟು ವೇಗದಲ್ಲಿ ಬೆಳವಣಿಗೆ ಕಾಣುತ್ತಿದೆ ಎಂಬುದನ್ನು ನಿರ್ಧರಿಸಲಾಗುವುದು. ಕಳೆದ 2008ರ ಜಾಗತಿಕ ಆರ್ಥಿಕ ಹಿಂಜರಿತದ ಬಳಿಕ ನಿರಂತರ ಏರುಗತಿಯಲ್ಲಿಯೇ ಇದ್ದ ಜಿಡಿಪಿ ದರ ಕಳೆದ ಮೂರು ವರ್ಷ ಹಿಂದೆ ಮೋದಿಯವರ ಅಮೋಘ ಸಾಧನೆಯಾಗಿ ಜಾರಿಗೆ ಬಂದ ನೋಟು ಅಮಾನ್ಯೀಕರಣದ ಬಳಿಕ ನಿರಂತರ ಇಳಿಮುಖದಲ್ಲೇ ಇತ್ತು. ಕಳೆದ ಜೂನ್ ಗೆ ಅಂತ್ಯವಾದ ತ್ರೈಮಾಸಿಕದಲ್ಲಿ ಅದು ಶೇ.5ಕ್ಕೆ ತಲುಪುವ ಮೂಲಕ ಭಾರೀ ಕುಸಿತ ಕಂಡಿತು. ಈ ವರ್ಷವಿಡೀ ಅದು ಶೇ.5.5ರಿಂದ 6ರ ಆಸುಪಾಸಿನಲ್ಲೇ ಇರಲಿದೆ. ಅಲ್ಲದೆ, ಮುಂದಿನ ಹಣಕಾಸು ವರ್ಷ ಕೂಡ ಜಿಡಿಪಿ ದರ ಶೇ.6ರನ್ನು ಮೀರಲಾರದು ಎಂದು ಐಎಂಎಫ್, ಮೂಡಿ, ಆರ್ ಬಿಐ ಸೇರಿದಂತೆ ಹಲವು ಹಣಕಾಸು ಸಮೀಕ್ಷಾ ಸಂಸ್ಥೆಗಳು ಹೇಳಿವೆ. ವಿಶ್ವಬ್ಯಾಂಕ್, ಎಡಿಬಿಗಳು ಕೂಡ ಇದನ್ನೇ ಹೇಳಿವೆ.
ಜಿಡಿಪಿ ದರ ಕುಸಿತವೆಂದರೆ, ದೇಶ ಬಡತನದತ್ತ ಜಾರುತ್ತಿದೆ ಎಂದೇ ಅರ್ಥ. ಹಣಕಾಸು ಮುಗ್ಗಟ್ಟು ಈಗಾಗಲೇ ಗಂಭೀರ ಸ್ವರೂಪಕ್ಕೆ ಹೋಗಿದೆ ಎಂಬುದಕ್ಕೆ ಕೇಂದ್ರ ಸರ್ಕಾರ ಇದೇ ಮೊದಲ ಬಾರಿಗೆ ಆರ್ ಬಿಐ ಮೀಸಲು ನಿಧಿಗೆ ಕೈಹಾಕಿದ್ದೇ ಸಾಕ್ಷಿ. ಆದರೆ, ಬಿಜೆಪಿ ಸರ್ಕಾರದ ಸೂತ್ರಧಾರ ಎಂದೇ ಹೇಳಲಾಗುವ ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು, ಜಿಡಿಪಿಗೂ ದೇಶದ ಅಭಿವೃದ್ಧಿಗೂ ಸಂಬಂಧವೇ ಇಲ್ಲ, ಅದೊಂದು ಕಪೋಲಕಲ್ಪಿತ ಸಂಗತಿ ಎನ್ನುವ ಮೂಲಕ ಕೈಗೆಟುಕದ ದಾಕ್ಷಿ ಹುಳಿ ಎಂಬ ನೀತಿ ಅನುಸರಿಸುತ್ತಿದ್ದಾರೆ!
ಆರ್ ಸಿಇಪಿ ಪ್ರಹಾರ
ಈಗಾಗಲೇ ದೇಶದ ಅರ್ಥವ್ಯವಸ್ಥೆಯೊಂದಿಗೆ ಕೃಷಿ ಮತ್ತು ಉದ್ಯಮ ಕೂಡ ತೀವ್ರ ಬಿಕ್ಕಟ್ಟಿನಲ್ಲಿವೆ. ಕೃಷಿ ಮತ್ತು ಕೃಷಿ ಸಂಬಂಧಿತ ಇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ದೇಶದ ಕೃಷಿಕರು ತಮ್ಮ ವೃತ್ತಿಯಿಂದ ಲಾಭ ಗಳಿಸುವುದಿರಲಿ, ಕನಿಷ್ಟ ಬದುಕು ನಡೆಸುವುದು ಕೂಡ ಕಷ್ಟವಾಗಿದ್ದು, ಸಾಲು ಸಾಲು ರೈತರ ಆತ್ಮಹತ್ಯೆಗಳಿಗೆ ಕೊನೆ ಇಲ್ಲದಂತಾಗಿದೆ. ಜಾಗತಿಕ ಪೈಪೋಟಿ, ಮಳೆ ವೈಪ್ಯರೀತ್ಯ, ಬೆಳೆ ಹಾನಿಯಂತಹ ಕಾರಣಗಳಿಂದ ಕೃಷಿ ಎಂಬುದೇ ಈಗ ಅವನತಿಯ ಹಾದಿಯಂತಾಗಿದೆ. ಇಂತಹ ಹೊತ್ತಲ್ಲಿ ಸಾಧ್ಯವಿರುವ ಹಣಕಾಸು ಬೆಂಬಲ, ರಕ್ಷಣಾ ಕ್ರಮಗಳ ಮೂಲಕ ದೇಶದ ಅನ್ನದಾತನ ಬೆಂಬಲಕ್ಕೆ ನಿಲ್ಲಬೇಕಾದ ಸರ್ಕಾರ, ಈಗ ರೈತ ವಿರೋಧಿ ಒಪ್ಪಂದ, ನೀತಿಗಳ ಮೂಲಕ ಪ್ರಹಾರ ನಡೆಸತೊಡಗಿದೆ. ಅಂತಹ ಜನದ್ರೋಹಿ ಕ್ರಮಕ್ಕೆ ಹೊಸ ಸೇರ್ಪಡೆ ಆರ್ ಸಿ ಇಪಿ(ರೀಜನಲ್ ಕಾಂಪ್ರೆಹೆನ್ಸಿವ್ ಎಕಾನಮಿಕ್ ಪಾರ್ಟನರ್ಶಿಪ್) ಮೂಲಕ ಚೀನಾ, ದಕ್ಷಿಣ ಕೊರಿಯಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಮತ್ತು ಜಪಾನ್ ಸೇರಿ ಪ್ರಾದೇಶಿಕ ರಾಷ್ಟ್ರಗಳೊಂದಿಗೆ ಮುಕ್ತ ವಹಿವಾಟು ಒಪ್ಪಂದಕ್ಕೆ ಸಹಿ ಹಾಕಲು ಪ್ರಧಾನಿ ಸಜ್ಜಾಗಿದ್ದಾರೆ.
ಆ ಒಪ್ಪಂದಕ್ಕೆ ಸಹಿ ಹಾಕಿದ್ದಲ್ಲಿ ಈಗಾಗಲೇ ಭಾರತೀಯ ಮಾರುಕಟ್ಟೆಯಲ್ಲಿ ಬಹುಪಾಲು ತುಂಬಿರುವ ಆ ದೇಶಗಳ ಕೃಷಿ ಮತ್ತು ಹೈನುಗಾರಿಕೆ ಉತ್ಪನ್ನಗಳು ಕೂಡ ದೇಶದೊಳಗೆ ತೆರಿಗೆರಹಿತವಾಗಿ ಅಥವಾ ಕನಿಷ್ಠ ತೆರಿಗೆಯಡಿ ದಾಂಗುಡಿ ಇಡುತ್ತವೆ. ಆ ಮೂಲಕ ದೇಸಿ ಕೃಷಿಕರನ್ನು ದಿವಾಳಿ ಎಬ್ಬಿಸಲಿವೆ. ಆದರೆ, ದೇಶದ ಬೆನ್ನೆಲುಬು ಎನ್ನುವ ಕೃಷಿಕರ ಬದುಕಿಗೇ ಕೊಳ್ಳಿ ಇಡುವ ಇಂತಹ ಅಪಾಯಕಾರಿ ಒಪ್ಪಂದದ ಬಗ್ಗೆ ಸಾರ್ವಜನಿಕ ಚರ್ಚೆಯೇ ನಡೆಯದಂತೆ ಬಹುತೇಕ ಮಾಧ್ಯಮಗಳು ಕುರುಡಾಗಿವೆ. ರೈತರು ಅಲ್ಲಲ್ಲಿ ಪ್ರತಿಭಟನೆ ನಡೆಸಿದರೂ ಅದಕ್ಕೆ ಪ್ರಚಾರ ಸಿಗುತ್ತಿಲ್ಲ!
ಎದ್ದ ಬಡತನದ ಭೂತ
ಜಾಗತಿಕವಾಗಿ ಪ್ರತಿ ವರ್ಷವೂ ಯಾವ ದೇಶದಲ್ಲಿ ಬಡತನದ ಪ್ರಮಾಣ ಎಷ್ಟಿದೆ ಎಂಬ ಅಂದಾಜಿನ ಮೇಲೆ ರ್ಯಾಂಕಿಂಗ್ ನೀಡಲಾಗುತ್ತದೆ. ಜಾಗತಿಕ ಹಸಿವು ಸೂಚ್ಯಂಕದ ಪ್ರಕಾರ ಭಾರತ ಈ ಬಾರಿ 117 ರಾಷ್ಟ್ರಗಳ ಪೈಕಿ 102ನೇ ಸ್ಥಾನಕ್ಕೆ ಕುಸಿದಿದೆ. ಅಲ್ಲದೆ, ಅತ್ಯಂತ ಗಂಭೀರ ಸ್ವರೂಪದ ಹಸಿವಿನ ಪ್ರಮಾಣವನ್ನು ಹೊಂದಿರುವ ರಾಷ್ಟ್ರ ಎಂಬ ಹಣೆಪಟ್ಟಿ ಕೂಡ ದೇಶಕ್ಕೆ ಸಿಕ್ಕಿದೆ. ನೆರೆಯ ಚೀನಾ(25), ಪಾಕಿಸ್ತಾನ(94), ಬಾಂಗ್ಲಾ(88), ಶ್ರೀಲಂಕಾ(66) ಮತ್ತು ನೇಪಾಳ(73)ದಂತಹ ದೇಶಗಳಿಗಿಂತ ಅತ್ಯಂತ ಭೀಕರ ಸ್ವರೂಪದ ಹಸಿವು ದೇಶದಲ್ಲಿ ಇದೆ. ದಕ್ಷಿಣ ಏಷ್ಯಾ ಮತ್ತು ಬ್ರಿಕ್ಸ್ ರಾಷ್ಟ್ರಗಳ ಪೈಕಿ ತೀವ್ರ ಹಸಿವು ಹೊಂದಿರುವ ದೇಶ ಭಾರತ ಎಂದೂ ವರದಿ ಹೇಳಿದೆ. 2015ರಿಂದ ಭಾರತದ ಹಸಿವಿನ ಪ್ರಮಾಣ ನಿರಂತರ ಏರುಗತಿಯಲ್ಲೇ ಇದ್ದು, ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ಕುಸಿತ ಕಾಣುತ್ತಲೇ ಇದೆ. ಕಳೆದ ವರ್ಷ ಕೂಡ ಭಾರತ 103ನೇ ಸ್ಥಾನ ಪಡೆದಿತ್ತು.
ಸ್ವಚ್ಛ ಭಾರತದಂತಹ ಯೋಜನೆಯನ್ನೇ ಟ್ರಂಪ್ ಕಾರ್ಡ್ ಮಾಡಿಕೊಂಡು ಪ್ರಧಾನಿ ಮೋದಿಯವರು ಹೋದಲ್ಲಿ ಬಂದಲ್ಲೆಲ್ಲಾ ಪ್ರಚಾರ ಪಡೆಯುತ್ತಿರುವ ಹೊತ್ತಿಗೇ, ದೇಶದ ಹಸಿವಿನ ಪ್ರಮಾಣದ ಏರಿಕೆಗೆ ದೇಶದ ಅಪೌಷ್ಟಿಕತೆ ಮತ್ತು ಶಿಶುಮರಣದ ಜೊತೆಗೆ ಸ್ವಚ್ಛತೆಯ ಕೊರತೆಯೂ ಸೂಚ್ಯಂಕದಲ್ಲಿ ಕುಸಿತವಾಗಲು ಕಾರಣ ಎಂದು ಸಮೀಕ್ಷೆ ನಡೆಸಿದ ಜಾಗತಿಕ ಸಂಸ್ಥೆ ಹೇಳಿದೆ. ಆದರೆ, ನಮ್ಮ ಪ್ರಧಾನಿಗಳು ತಮಿಳುನಾಡಿನ ಸಮುದ್ರತೀರದಲ್ಲಿ ಪ್ಲಾಸ್ಟಿಕ್ ಕಸ ತೆಗೆದದ್ದು ಸುದ್ದಿಯಾದಷ್ಟು ಈ ಆತಂಕಕಾರಿ ಸಂಗತಿ ಸುದ್ದಿಯಾಗುವುದಿಲ್ಲ!
ಸರಣಿ ಉದ್ದಿಮೆ ದಿವಾಳಿ
ತೀರಾ ಇತ್ತೀಚಿನ ವರ್ಷಗಳವರೆಗೆ ಲಾಭದಲ್ಲಿದ್ದ, ಸಾಕಷ್ಟು ಮೀಸಲು ನಿಧಿಯನ್ನೂ ಕಾಯ್ಡುಕೊಂಡಿದ್ದ ಒಎನ್ ಜಿಸಿಯಂತಹ ದೇಶದ ಅತಿ ಹೆಚ್ಚು ಲಾಭದ ಉದ್ದಿಮೆ ಕೂಡ ಕೇವಲ ಮೂರ್ನಾಲ್ಕು ವರ್ಷದಲ್ಲೇ ದಿವಾಳಿಯಾಗಿ ತನ್ನ ನೌಕರರಿಗೆ ವೇತನ ನೀಡಲು ಹಣವಿಲ್ಲದೆ ಸಾಲ ಮಾಡುವ ಸ್ಥಿತಿಗೆ ಬಂದಿದೆ. ಅದೇ ಸ್ಥಿತಿ ಎಚ್ ಎ ಎಲ್ ನಂತಹ ಭಾರತದ ಹೆಮ್ಮೆಯ ಉದ್ದಿಮೆಯದ್ದೂ ಆಗಿದೆ. ಅಲ್ಲದೆ ಬಿಎಸ್ ಎನ್ ಎಲ್, ಎಂಟಿ ಎನ್ ಎಲ್, ಏರ್ ಇಂಡಿಯಾ, ಕೋಲ್ ಇಂಡಿಯಾ, ಎಲ್ ಐಸಿ ಸೇರಿದಂತೆ ಸಾಲು ಸಾಲು ಸಾರ್ವಜನಿಕ ವಲಯದ ಉದ್ದಿಮೆ ಮತ್ತು ಸಂಸ್ಥೆಗಳು ಕೇವಲ ಮೂರ್ನಾಲ್ಕು ವರ್ಷಗಳಲ್ಲೇ ಅತಿ ಹೆಚ್ಚು ಲಾಭದಿಂದ ತೀವ್ರ ನಷ್ಟಕ್ಕೆ ಕುಸಿದಿವೆ. ಈ ಉದ್ದಿಮೆಗಳಲ್ಲಿ ಬದುಕು ಕಂಡುಕೊಂಡಿದ್ದ ಲಕ್ಷಾಂತರ ಮಂದಿ ಉದ್ಯೋಗಿಗಳು ಕೆಲಸದ ಕಳೆದುಕೊಂಡು ಬೀದಿಗೆ ಬೀಳುವ ಆತಂಕದಲ್ಲಿದ್ದು, ಈಗಾಗಲೇ ಬಿಎಸ್ ಎನ್ ಎಲ್, ಎಚ್ ಎ ಎಲ್, ಎಸ್ ಎಐಎಲ್ ಮುಂತಾದ ಸಂಸ್ಥೆಗಳ 20 ಸಾವಿರಕ್ಕೂ ಹೆಚ್ಚು ಸಿಬ್ಬಂದಿ ನಿರಂತರ ಧರಣಿ ಆರಂಭಿಸಿದ್ದಾರೆ.
ಅದೇ ಹೊತ್ತಿಗೆ ದೇಶದ ಒಟ್ಟು ಸಾಲದ ಪ್ರಮಾಣ ಕೂಡ ಕಳೆದ ಮೂರ್ನಾಲ್ಕು ವರ್ಷಗಳಲ್ಲಿ ಶೇ.57ಕ್ಕೂ ಹೆಚ್ಚು ಪ್ರಮಾಣದಲ್ಲಿ ಏರಿಕೆ ಕಂಡಿದ್ದು, ಬರೋಬ್ಬರಿ 30 ಲಕ್ಷ ಕೋಟಿ ಅಧಿಕ ಸಾಲದ ಹೊರೆ ದೇಶದ ನಾಗರಿಕರ ಮೇಲೆ ಬಿದ್ದಿದೆ. ಅಂದರೆ ದೇಶದ ಲಾಭದಾಯಕ ಉದ್ದಿಮೆಗಳು ದಿಢೀರ್ ನಷ್ಟಕ್ಕೆ ಈಡಾಗಿ ಮುಚ್ಚುವ ಹಂತ ತಲುಪಿವೆ. ಆರ್ ಬಿಐನಿಂದ ಮೀಸಲು ನಿಧಿ ದೋಚುವ ಮಟ್ಟಿಗೆ ಸರ್ಕಾರದ ಖಜಾನೆ ಖಾಲಿಯಾಗಿದೆ. 70 ವರ್ಷದಲ್ಲಿ ಸುಮಾರು 53 ಲಕ್ಷ ಕೋಟಿಯಷ್ಟಿದ್ದ ದೇಶದ ಒಟ್ಟು ಸಾಲದ ಪ್ರಮಾಣ ಕೇವಲ ಐದೇ ವರ್ಷದಲ್ಲಿ 30 ಲಕ್ಷ ಕೋಟಿಯಷ್ಟು ಏರಿಕೆಯಾಗಿದೆ. ಹಾಗಾದರೆ, ದೇಶದ ಇಷ್ಟೊಂದು ಅಪಾರ ಹಣ ಎಲ್ಲಿ ಹೋಯಿತು? ಅದು ಕೇವಲ ಎರಡು ಮೂರು ವರ್ಷಗಳಲ್ಲೇ ಲಕ್ಷಾಂತರ ಕೋಟಿ ಹಣ ದಿಢೀರನೇ ಮಾಯವಾದದ್ದು ಹೇಗೆ?
ಇಂತಹ ಪ್ರಶ್ನೆಗಳನ್ನು ಕೇಳಲು ಮಾಧ್ಯಮಗಳೂ ಸಿದ್ಧವಿಲ್ಲ ಮತ್ತು ನಿಮಗೂ ಆ ಬಗ್ಗೆ ಯೋಚಿಸಲು ಅವು ಬಿಡುವುದೂ ಇಲ್ಲ! ಏಕೆಂದರೆ, ನಿಮ್ಮ ತಲೆಯಲ್ಲಿ ಇಡೀ ಭಯೋತ್ಪಾದನೆ, ಅಯೋಧ್ಯಾ, ಭಾರತ ರತ್ನ ಮತ್ತು ಅದಾವುದೂ ಇಲ್ಲವೆಂದರೆ, ಭ್ರಷ್ಟಾಚಾರದ ಆರೋಪದ ಮೇಲೆ ಪ್ರತಿಪಕ್ಷ ನಾಯಕರನ್ನು ಜೈಲಿಗಟ್ಟುವುದು, ಎನ್ ಆರ್ ಸಿ ಅಥವಾ ನೆಹರೂ ತುಂಬಿಬಿಟ್ಟಿದ್ದಾರೆ. ನೀವು ಆ ಬಗ್ಗೆ ವಾಟ್ಸಪ್ ನಲ್ಲಿ ಭೀಕರ ವಾದ ಮಾಡುತ್ತಿರುವ ಹೊತ್ತಿಗೇ ಇತ್ತ ನಿಮ್ಮ ಜೇಬನ್ನಷ್ಟೇ ಅಲ್ಲದೆ, ದೇಶದ ಖಜಾನೆಯನ್ನೂ ಕೊಳ್ಳೆ ಹೊಡೆಯಲಾಗಿದೆ. ಆದರೆ ನೀವು ಅದನ್ನು ಜೇಬುಗಳ್ಳತನ ಎಂದು ಅವಮಾನಿಸುವಂತಿಲ್ಲ,.. ಅಷ್ಟೇ!