ನಿರೀಕ್ಷೆಯಂತೆಯೇ ಎಲ್ಲವೂ ನಡೆಯುತ್ತಿದೆ; ಬಿಜೆಪಿ ಪಾಲಿಗೆ. ಹೌದು, ಯಾವ ಹೊತ್ತಿಗೆ ಯಾವುದು ನಡೆಯಬೇಕು ಎಂಬ ಲೆಕ್ಕಾಚಾರದಲ್ಲಿ ಬಿಜೆಪಿ ಉರುಳಿಸುವ ಪ್ರತಿ ದಾಳವೂ ಅದರ ನಿರೀಕ್ಷೆಯ ಫಲಿತಾಂಶವನ್ನೇ ಕೊಡುತ್ತಿದೆ. ಅಷ್ಟರಮಟ್ಟಿಗೆ ಬಿಜೆಪಿಯ ಪಾಲಿಗೆ ವಾಸ್ತವಾಂಶಗಳು ಎಷ್ಟೇ ಸವಾಲನ್ನೊಡ್ಡಿದರೂ ‘ವರ್ಚುವಲ್ ರಿಯಾಲಿಟಿ’ಯ ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರ ಅದು ಸೆಣೆಸುವ ಮುನ್ನವೇ ಸಮರ ಗೆಲ್ಲುವ ಕಲೆಗಾರಿಕೆ ಕರಗತ ಮಾಡಿಕೊಂಡಿದೆ.
ದೇಶದ ವಾಣಿಜ್ಯ ರಾಜಧಾನಿ ಮುಂಬೈ ಹೊಂದಿರುವ ಮಹಾರಾಷ್ಟ್ರ ಮತ್ತು ದೆಹಲಿ ಆಸುಪಾಸಿನ ಅತಿ ಹೆಚ್ಚು ಕೈಗಾರಿಕಾ ಪ್ರದೇಶಗಳನ್ನು ಹೊಂದಿರುವ ಹರ್ಯಾಣದಲ್ಲಿ ಏಕ ಕಾಲಕ್ಕೆ ವಿಧಾನ ಸಭಾ ಚುನಾವಣೆಗಳು ನಡೆಯುತ್ತಿವೆ. ಎರಡೂ ಕಡೆ ಹಾಲಿ ಅಧಿಕಾರದಲ್ಲಿರುವ ಬಿಜೆಪಿಗೆ ಅಧಿಕಾರ ಉಳಿಸಿಕೊಳ್ಳುವ ಸವಾಲು ಇದೆ. ನೋಟು ರದ್ದತಿಯ ಕೇಂದ್ರ ಬಿಜೆಪಿ ಸರ್ಕಾರದ ನಿರ್ಧಾರ ಹಾಗೂ ಆ ಬಳಿಕದ ಜಿಎಸ್ ಟಿ ಜಾರಿಯ ಫಲವಾಗಿ ಎರಡೂ ರಾಜ್ಯಗಳ ಉದ್ಯಮಗಳು ಉಸಿರುಗಟ್ಟಿವೆ. ಆಟೋಮೊಬೈಲ್, ಜವಳಿ ಸೇರಿದಂತೆ ಪ್ರಮುಖ ಖಾಸಗೀ ಮತ್ತು ಸಾರ್ವಜನಿಕ ಉದ್ದಿಮೆಗಳಲ್ಲಿ ಕೆಲಸ ಕಳೆದುಕೊಂಡು ಉದ್ಯೋಗಿಗಳು ಬೀದಿಗೆ ಬೀಳುತ್ತಿದ್ದಾರೆ. ಅಲ್ಲದೇ ಎರಡೂ ರಾಜ್ಯಗಳಲ್ಲಿ ಕಳೆದ ಕೆಲವು ವರ್ಷಗಳಿಂದ ಕೃಷಿ ಬಿಕ್ಕಟ್ಟು ತೀವ್ರವಾಗಿದ್ದು, ರೈತರು ಭಾರೀ ಪ್ರತಿಭಟನೆ, ಧರಣಿ, ಪಾದಯಾತ್ರೆಗಳ ಮೂಲಕ ಸರ್ಕಾರದ ವಿರುದ್ಧ ಬೆಂಕಿ ಕಾರಿದ್ದಾರೆ. ಮುಂಬೈ ಮೂಲದ ಹಲವು ಖಾಸಗಿ ಬ್ಯಾಂಕುಗಳು ದಿಢೀರನೇ ಬಾಗಿಲು ಮುಚ್ಚುವ ಸ್ಥಿತಿಗೆ ಬಂದಿದ್ದು, ಠೇವಣಿದಾರರ ಸರಣಿ ಆತ್ಮಹತ್ಯೆಗಳು ಮುಂದುವರಿದಿವೆ.
ವಾಸ್ತವ ಇಷ್ಟು ಕಟುವಾಗಿರುವಾಗ ಯಾವುದೇ ಆಡಳಿತರೂಢ ಸರ್ಕಾರಕ್ಕೆ ದೊಡ್ಡ ಮಟ್ಟದ ಜನಾಕ್ರೋಶ ಮತ್ತು ಆಡಳಿತ ವಿರೋಧಿ ಅಲೆ ಸವಾಲಾಗುವುದು ಸಹಜ. ಸ್ಥಳೀಯವಾಗಿ ಮಹಾರಾಷ್ಟ್ರದಲ್ಲಿ ಫಡ್ನವೀಸ್ ಆಡಳಿತದ ಬಗ್ಗೆ ಜನಸಾಮಾನ್ಯರಿಗೆ ದೊಡ್ಡ ಆಕ್ಷೇಪಗಳಿಲ್ಲದೇ ಹೋದರೂ, ಅವರದೇ ಕೇಂದ್ರ ಸರ್ಕಾರದ ನೀತಿಗಳು ಜನರನ್ನು ಸಂಕಷ್ಟಕ್ಕೆ ದೂಡಿರುವ ವಿಷಯ ಜನರ ಮನಸ್ಸಿನಲ್ಲಿದೆ. ಹರ್ಯಾಣದಲ್ಲಿ ಕೇಂದ್ರ ಸರ್ಕಾರದ ನೀತಿಗಳೊಂದಿಗೆ, ಸ್ಥಳೀಯ ರಾಜ್ಯ ಸರ್ಕಾರದ ಬಗ್ಗೆಯೂ ಜನರಿಗೆ ದೂರುಗಳಿವೆ.
ಇದು ಬಿಜೆಪಿಯ ಪಾಲಿಗೆ ದೊಡ್ಡ ಸವಾಲಾಗಿತ್ತು. ಆದರೆ, ಅಂತಹ ಸವಾಲುಗಳನ್ನು ಎದುರಿಸುವ ತೆರೆಮರೆಯ ತಂತ್ರಗಾರಿಕೆಯಲ್ಲಿ ಅದರ ನಾಯಕರು ಪಳಗಿದ್ದಾರೆ. ಹಾಗಾಗಿ, ನಿತ್ಯದ ಗೋಳು, ಸಂಕಷ್ಟ, ಭವಿಷ್ಯದ ಆತಂಕಗಳಿಂದ ಜನರ ಮನಸ್ಸನ್ನು ಭಾವನಾತ್ಮಕ ವಿಷಯಗಳೆಡೆ ತಿರುಗಿಸುವ ಎಂದಿನ ತಂತ್ರಗಾರಿಕೆ ಅಲ್ಲಿ ಈಗ ಚಾಲ್ತಿಗೆ ಬಂದಿದೆ. ಈ ಹಿಂದಿನ ಚುನಾವಣೆಗಳಲ್ಲಿ ಯಶಸ್ವಿಯಾಗಿ ಪ್ರಯೋಗಿಸಿದ ಹಿಂದುತ್ವ ವರ್ಸಸ್ ಸೆಕ್ಯುಲರಿಸಂ, ದೇಶಪ್ರೇಮ ವರ್ಸಸ್ ದೇಶದ್ರೋಹ, ಭಾರತ ವರ್ಸಸ್ ಪಾಕಿಸ್ತಾನ, ಭಯೋತ್ಪಾದನೆ ವರ್ಸಸ್ ದೇಶಭಕ್ತಿ, ಬಿಜೆಪಿ ವರ್ಸಸ್ 70 ವರ್ಷದ ಕಾಂಗ್ರೆಸ್ ಎಂಬ ಸಿದ್ಧ ಸೂತ್ರಗಳ ಸಾರವನ್ನೇ ಅದು ಹೊಸ ಬಾಟಲಿಯಲ್ಲಿ ಜನರ ಮುಂದಿಟ್ಟಿದೆ.
ಕೋರ್ ವಿಷಯಗಳು ಅವೇ ಆಗಿದ್ದರೂ, ಅದಕ್ಕೆ ಈ ಬಾರಿ ಹಿಂದುತ್ವದ ಐಕಾನ್ ಸಾವರ್ಕರ್ ಗೆ ‘ಭಾರತ ರತ್ನ’ ಎಂಬ ಹೊಸ ಬಾಟಲಿ ಈಗ ಸಿಕ್ಕಿದ್ದು, ಚುನಾವಣಾ ಕಣದಲ್ಲಷ್ಟೇ ಅಲ್ಲದೆ, ಅದರಾಚೆಗೂ ಇಡೀ ದೇಶಾದ್ಯಂತ ಈ ಹೊಸ ಆಕರ್ಷಕ ಬಾಟಲಿ ಭರ್ಜರಿ ವ್ಯಾಪಾರವಾಗತೊಡಗಿದೆ. ಹಾಗಾಗಿ ಕೇವಲ ವಿಧಾನಸಭಾ ಚುನಾವಣೆ ಎದುರಿಸುತ್ತಿರುವ ರಾಜ್ಯಗಳಷ್ಟೇ ಅಲ್ಲದೆ, ಇಡೀ ದೇಶಾದ್ಯಂತ ಉದ್ಯಮ ಕುಸಿತ, ನಿರುದ್ಯೋಗ, ಆರ್ಥಿಕ ಬಿಕ್ಕಟ್ಟು, ಬ್ಯಾಂಕ್ ದಿವಾಳಿ, ಹೆಚ್ಚುತ್ತಿರುವ ಬಡತನ, ಜಿಡಿಪಿ ಪತನ ಮುಂತಾದ ಜನರ ನಿತ್ಯದ ಬದುಕನ್ನು ನರಕ ಮಾಡುತ್ತಿರುವ ಸಾಲುಸಾಲು ಸಮಸ್ಯೆ, ವೈಫಲ್ಯಗಳು ಸಾರ್ವಜನಿಕ ಚರ್ಚೆಯಿಂದ ಬದಿಗೆ ಸರಿದಿವೆ. ಅಂತಹ ವೈಫಲ್ಯಗಳಿಗೆ, ಅನಾಹುತಗಳಿಗೆ ಕಾರಣವಾಗಿರುವ ಸರ್ಕಾರದ ಜನವಿರೋಧಿ ನೀತಿ-ನಡೆಗಳು ಕೂಡ ಜನರ ಮನಸ್ಸಿನಿಂದ ದೂರಾಗಿವೆ. ಅಷ್ಟರಮಟ್ಟಿಗೆ ‘ಭಾರತ ರತ್ನ’ ವಿವಾದ ಬಿಜೆಪಿಯ ಪಾಲಿಗೆ ಅತ್ಯಂತ ಪ್ರಭಾವಿ ಮತ್ತು ಸಕಾಲಿಕ ಅಸ್ತ್ರವಾಗಿ ಒದಗಿಬಂದಿದೆ. ನಿರೀಕ್ಷೆಗೂ ಮೀರಿದ ರೀತಿಯಲ್ಲಿ ಫಲಿತಾಂಶ ನೀಡುತ್ತಿದೆ.
ಇಡೀ ದೇಶದಾದ್ಯಂತ ಮಾಧ್ಯಮಗಳಿಂದ ಹಿಡಿದು ಸಾಮಾಜಿಕ ಜಾಲತಾಣಗಳವರೆಗೆ ಎಲ್ಲೆಡೆ ಸಾವರ್ಕರ್ ಗೆ ಭಾರತ ರತ್ನ ಕೊಡಬೇಕೇ ಬೇಡವೇ ಎಂಬ ಬಗ್ಗೆ ಭಾರೀ ಚರ್ಚೆ, ವಾಗ್ವಾದ, ಪರಸ್ಪರ ಟೀಕೆಗಳು ಮುಗಿಲುಮುಟ್ಟಿವೆ. ರಾಜ್ಯದಲ್ಲೂ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ನಡುವೆ ಈ ವಿವಾದ ದೊಡ್ಡ ಮಟ್ಟದ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಂತೂ ಕಳೆದ ಎರಡು ಮೂರು ದಿನಗಳಿಂದ ಆರ್ಥಿಕತೆ, ಕೃಷಿ, ಪ್ರವಾಹ ಸಂತ್ರಸ್ತರ ಗೋಳು ಸೇರಿದಂತೆ ವಾಸ್ತವಿಕವಾದ ನಿತ್ಯದ ಬದುಕಿಗೆ ಸಂಬಂಧಿಸಿದ ಎಲ್ಲಾ ವಿಷಯಗಳು ಬದಿಗೆ ಸರಿದು ಕೇವಲ ಸಾವರ್ಕರ್ ಮತ್ತು ‘ಭಾರತ ರತ್ನ’ ಪುರಸ್ಕಾರದ ಚರ್ಚೆಯೇ ಸರ್ವವ್ಯಾಪಿಯಾಗಿದೆ.
ಅಲ್ಲಿಗೆ, ಮೊದಲೇ ಹಿಂದುತ್ವದ ಅಲೆ ಇರುವ ಮತ್ತು ಸ್ವತಃ ಸಾವರ್ಕರ್ ಅವರ ತವರು ರಾಜ್ಯವಾದ ಮಹಾರಾಷ್ಟ್ರದಲ್ಲಿ ಬಿಜೆಪಿ ಜಯಭೇರಿ ಭಾರಿಸುವುದು ಈಗಾಗಲೇ ಖಾತ್ರಿಯಾದಂತಿದೆ. ಇನ್ನೂ ಹರ್ಯಾಣದಲ್ಲಿಯೂ ಇದೇ ಸೂತ್ರ ಬಿಜೆಪಿಗೆ ಸಾಕಷ್ಟು ಮತ ಬಾಚಿಕೊಡುವುದರಲ್ಲಿ ಅನುಮಾನವಿಲ್ಲ. ವಾಸ್ತವಿಕ ಬದುಕಿನ ಕಡು ಕಷ್ಟ, ಸಂಕಷ್ಟಕ್ಕೆ ಕಾರಣವಾದ ತನ್ನ ವೈಫಲ್ಯಗಳ ವಿರುದ್ಧ ಜನರ ಆಕ್ರೋಶವನ್ನು ಎದುರಿಸುವ ಸವಾಲನ್ನು ಜನಸಾಮಾನ್ಯರ ನಿತ್ಯದ ಬದುಕಿಗೆ ಯಾವ ರೀತಿಯಲ್ಲೂ ಸಂಬಂಧವೇ ಪಡದ ಒಂದು ವಿಷಯವನ್ನು ಮುಂದುಮಾಡುವ ಮೂಲಕ ಬಿಜೆಪಿ ಬಹಳ ಸಲೀಸಾಗಿ ಎಲ್ಲವನ್ನೂ ತಿರುವುಮುರುವು ಮಾಡಿಬಿಟ್ಟಿದೆ.
ಬಿಜೆಪಿ ಬೀಸಿದ ಈ ಜಾಲದಲ್ಲಿ ಜನಸಾಮಾನ್ಯರಷ್ಟೇ ಅಲ್ಲದೆ, ಪ್ರತಿಪಕ್ಷಗಳೂ ಸಿಲುಕಿ ಆ ಗುದ್ದಾಟವನ್ನೇ ತಮ್ಮ ಹುತಾತ್ಮರಾಗುವ ಹಾದಿಯ ಹೋರಾಟ ಎಂಬಂತೆ ಭಾವಿಸಿಬಿಟ್ಟಿವೆ. ಹಾಗಾಗಿ ಬಿಜೆಪಿಯ ವಾದಕ್ಕಿಂತ ಈಗ ಕಾಂಗ್ರೆಸ್ ಸೇರಿದಂತೆ ಪ್ರಮುಖ ಪ್ರತಿಪಕ್ಷಗಳ ಪ್ರತಿವಾದವೇ ಹೆಚ್ಚು ಬಿರುಸಾಗಿದೆ.
ಆದರೆ, ವಿಪರ್ಯಾಸವೆಂದರೆ; ದೇಶದ ಆಡಳಿತ ಚುಕ್ಕಾಣಿ ಹಿಡಿದಿರುವ ಬಿಜೆಪಿ ಸರ್ಕಾರ ಒಂದು ಕಡೆ ಮಹಾತ್ಮ ಗಾಂಧಿಯವರ 150ನೇ ಜನ್ಮ ದಿನೋತ್ಸವ ಆಚರಣೆಯ ಅನಿವಾರ್ಯ ಸಂಕಷ್ಟಕ್ಕೆ ಸಿಲುಕಿದೆ. ಅದೇ ಅನಿವಾರ್ಯತೆಯಲ್ಲಿ ದೇಶಾದ್ಯಂತ ಗಾಂಧಿ ಸಂಕಲ್ಪ ಯಾತ್ರೆ ನಡೆಸುತ್ತಿದೆ. ಸರ್ಕಾರವಾಗಿ ಅದನ್ನು ಮಾಡಲೇಬೇಕಾದ ಶಿಷ್ಟಾಚಾರಕ್ಕೆ ಗಂಟುಬಿದ್ದು ಮಾಡುತ್ತಿದೆ. ಆದರೆ, ಅದೇ ಬಿಜೆಪಿ ಪಕ್ಷವಾಗಿ ಗಾಂಧಿ ಹತ್ಯೆ ಸಂಚಿನ ಆರೋಪ ಹೊತ್ತಿದ್ದ ಸಾವರ್ಕರ್ ಗೆ ದೇಶದ ಅತ್ಯುನ್ನತ ಗೌರವವಾದ ಭಾರತ ರತ್ನ ನೀಡಲು ಸಜ್ಜಾಗಿದೆ. ಅಷ್ಟೇ ಅಲ್ಲ, ಮೂಲತಃ ಗಾಂಧಿ ವಿರೋಧಿ ಸಿದ್ಧಾಂತ ಮತ್ತು ಧೋರಣೆಯ ಮೂಲಕವೇ ಬೆಳೆದುಬಂದಿರುವ ತನ್ನ ಸಂಘಪರಿವಾರವನ್ನು ಮೆಚ್ಚಿಸುವ ಅನಿವಾರ್ಯತೆ ಕೂಡ ಬಿಜೆಪಿಗೆ ಇದೆ. ಹಾಗಾಗಿ ಅದು ಒಂದು ಕಡೆ ಬೀದಿಯಲ್ಲಿ ಗಾಂಧಿ ಜಪ ಮಾಡುತ್ತಾ, ಸಂಕಲ್ಪ ಯಾತ್ರೆಯ ಹೆಜ್ಜೆ ಹಾಕುತ್ತಿದ್ದರೆ, ಮತ್ತೊಂದು ಕಡೆ ಗಾಂಧಿ ಹಂತಕ ನಾಥೂರಾಂ ಗೋಡ್ಸೆಯ ಗುರು ಮತ್ತು ಮಾರ್ಗದರ್ಶಕರೆಂದೇ ಚರಿತ್ರೆಯಲ್ಲಿ ದಾಖಲಾಗಿರುವ ವ್ಯಕ್ತಿಯನ್ನು ‘ಭಾರತ ರತ್ನ’ ಎಂದು ಜಯಘೋಷ ಮೊಳಗಿಸುತ್ತಿದೆ. ಹಾಕುವ ಹೆಜ್ಜೆಗಿಂತ, ಕೂಗುವ ದನಿ ಹೆಚ್ಚು ಗಟ್ಟಿಯಾಗಿದೆ ಮತ್ತು ದಿಟ್ಟವಾಗಿದೆ!
ಅಲ್ಲದೆ, ಕೆಲವೇ ತಿಂಗಳ ಹಿಂದೆ ನಡೆದ ಲೋಕಸಭಾ ಚುನಾವಣೆಗೆ ಮುಂಚೆ ಮತ್ತು ಚುನಾವಣಾ ಪ್ರಚಾರದ ವೇಳೆ ಕೂಡ ಗಾಂಧಿ ಹಂತಕ ಗೋಡ್ಸೆಯನ್ನು ಕೊಂಡಾಡಿದ, ಆತನ ಭಾವಚಿತ್ರಕ್ಕೆ ಪೂಜೆ ಮಾಡಿದ, ಆತನೇ ನಿಜವಾದ ದೇಶಭಕ್ತ ಎಂದು ಬಣ್ಣಿಸಿದ ಸಾದ್ವಿ ಪ್ರಜ್ಯಾ ಎಂಬ ಮಾಲೇಗಾಂವ್ ಸ್ಫೋಟ ಸೇರಿದಂತೆ ಹಲವು ಭಯೋತ್ಪಾದಕ ಕೃತ್ಯಗಳಲ್ಲಿ ಆರೋಪಿಯಾಗಿದ್ದ ಮಹಿಳೆಗೆ ಚುನಾವಣಾ ಟಿಕೆಟ್ ನೀಡಿ, ಗೆಲ್ಲಿಸಿ ಸಂಸದೆಯನ್ನಾಗಿ ಮಾಡಿದ ಹೆಚ್ಚುಗಾರಿಕೆ ಬಿಜೆಪಿಯದ್ದು. ಎಪತ್ತು ವರ್ಷಗಳ ಕಾಲ ರಾಷ್ಟ್ರಪಿತನ ಹಂತಕ ಎಂಬ ಏಕೈಕ ಹೆಸರು ಹೊತ್ತಿದ್ದ ವ್ಯಕ್ತಿಗೆ, ದೇಶಭಕ್ತನ ಬಿರುದು ಕೊಟ್ಟ ಬಿಜೆಪಿ, ಸಾಮಾಜಿಕ ಜಾಲತಾಣಗಳ ವರ್ಚುವಲ್ ಜಗತ್ತಿನ ಮಾಯಾಜಾಲವನ್ನೇ ಬಳಸಿಕೊಂಡು ಗೋಡ್ಸೆಯನ್ನು ಹೀರೋ ಮಾಡುವ ಯತ್ನದಲ್ಲೂ ಸಾಕಷ್ಟು ಯಶ ಕಂಡಿದೆ. ಅದು ಸಾಮಾಜಿಕ ಜಾಲತಾಣದ ತಾಕತ್ತು ಮತ್ತು ಅದರ ಆ ತಾಕತ್ತು ಬಳಸಿಕೊಳ್ಳುವ ಬಿಜೆಪಿಯ ತಂತ್ರಗಾರಿಕೆಯ ಯಶಸ್ಸು.
ಇದೀಗ ಅದೇ ವರ್ಚುವಲ್ ಜಗತ್ತಿನ ಶಕ್ತಿಯನ್ನೇ ಬಳಸಿಕೊಂಡು ಏಕ ಕಾಲಕ್ಕೆ ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆಯುವಲ್ಲಿ ಕೂಡ ಬಹುತೇಕ ಯಶಸ್ಸು ಕಂಡಿದೆ. ಭಾರತ ರತ್ನ ವಿವಾದವನ್ನು ಸಾಮಾಜಿಕ ಜಾಲತಾಣಗಳ ಮೂಲಕ ದೇಶಾದ್ಯಂತ ವ್ಯಾಪಕಗೊಳಿಸುವ ಮೂಲಕ ಬಿಜೆಪಿ ಏಕ ಕಾಲಕ್ಕೆ ಸಾವರ್ಕರ್ ಮತ್ತು ಗೋಡ್ಸೆಗೆ ಅಂಟಿದ್ದ ಕಳಂಕವನ್ನು ತೊಡೆದುಹಾಕಿ, ಅವರ ದೇಶಭಕ್ತಿಯ ಕುರಿತ ಚರ್ಚೆಯನ್ನು ವಿಶ್ವವ್ಯಾಪಿ ಮಾಡಿದೆ ಮತ್ತು ಅದೇ ಹೊತ್ತಿಗೆ ತನ್ನ ಮಹಾ ವೈಫಲ್ಯಗಳ ನಡುವೆಯೂ ಮಹಾರಾಷ್ಟ್ರ ಮತ್ತು ಹರ್ಯಾಣದ ವಿಧಾನಸಭಾ ಚುನಾವಣೆಯಲ್ಲಿ ನೈಜ ವಿಷಯಗಳು ಚುನಾವಣಾ ವಾಗ್ವಾದದಿಂದ ಬದಿಗೆ ಸರಿಯುವಂತೆ ಮಾಡಿ, ಭಾವನಾತ್ಮಕ ವಿಷಯದ ಮೇಲೆ ಮತ ಕ್ರೋಡೀಕರಣಕ್ಕೂ ಚಾಲನೆ ನೀಡಿದೆ!
ಇದು ಬಿಜೆಪಿಯ ತಂತ್ರಗಾರಿಕೆ!