ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ ಸರ್ಕಾರ ಒಳ್ಳೆಯದಕ್ಕಾಗಿ ಸುದ್ದಿ ಮಾಡಿದ್ದು ಕಡಿಮೆ. ಆದರೆ ದಿನವೂ ಒಂದಿಲ್ಲೊಂದು ವಿವಾದವನ್ನೇ ಸೃಷ್ಟಿಸುತ್ತಿದೆ. ಕಫೀಲ್ ಖಾನ್ ಎಂಬ ಪ್ರಾಮಾಣಿಕ ವೈದ್ಯನನ್ನು ಶಿಶುಗಳ ಸಾವಿನ ಹೊಣೆ ಹೊರಿಸಿ ಜೈಲಿಗೆ ತಳ್ಳಿದ್ದ ಯೋಗಿ ಸರ್ಕಾರ ತನಿಖೆಯ ನಂತರ ಅಂತಿಮವಾಗಿ ಕಫೀಲ್ ಖಾನ್ ನಿರಪರಾಧಿ ಎಂದು ಒಪ್ಪಿಕೊಳ್ಳಬೇಕಾಗಿ ಬಂದಿದೆ. ಈ ಪ್ರಕರಣ ಮಾಸುವ ಮುನ್ನವೇ ಇದೀಗ ಫರ್ಖಾನ್ ಅಲಿ ಎಂಬ ಶಾಲಾ ಮುಖ್ಯೋಪಾಧ್ಯಾಯನನ್ನು ಅಮಾನತುಗೊಳಿಸಿ ವಿವಾದ ಸೃಷ್ಟಿಸಿದೆ.
ನೆನ್ನೆ (ಶುಕ್ರವಾರ) ಉತ್ತರ ಪ್ರದೇಶದ ಪಿಲಿಬಿಟ್ ಜಿಲ್ಲೆಯ ಗಯಾಸ್ಪುರ ಪ್ರದೇಶದ ಸರ್ಕಾರಿ ಪ್ರಾಥಮಿಕ ಶಾಲೆಯೊಂದರಲ್ಲಿ ಸುಮಾರು 30 ವಿದ್ಯಾರ್ಥಿಗಳು ಬೆಳಿಗ್ಗೆ 9:10ರ ಸುಮಾರಿಗೆ ಘೋಷಣೆ ಕೂಗುತ್ತಿದ್ದರು. “ದೇಶ ಕೀ ರಕ್ಷಾ ಕೌನ್ ಕರೇಗಾ? ಹಮ್ ಕರೇಂಗೆ (ದೇಶದ ರಕ್ಷಣೆ ಯಾರು ಮಾಡುತ್ತಾರ? ನಾವು ಮಾಡುತ್ತೇವೆ”), “ಕೈಸೇ ಕರೇಂಗೆ? ತನ್ ಸೇ ಕರೇಂಗೆ, ಮನ್ ಸೇ ಕರೇಂಗೆ, ಧನ್ ಸೇ ಕರೇಂಗೆ (ಹೇಗೆ ಮಾಡುತ್ತೇವೆ? ತನು, ಮನ ಧನದಿಂದ ಮಾಡುತ್ತೇವೆ?) ಎಂಬ ಘೋಷಣೆಗಳನ್ನು ಅವರು ಕೂಗಿದರು. ಹೀಗೆ 10 ನಿಮಿಷ ಘೋಷಣೆ ಕೂಗಿ ಶಾಲೆಯ ಆವರಣದಿಂದ ಹೊರನಡೆದರು. ಪೈಕಿ 5ನೇ ತರಗತಿಯ ವಿದ್ಯಾರ್ಥಿಯೊಬ್ಬ ಹೇಳಿದ, “ನಮ್ಮ ಶಾಲೆಯೆ ಹೆಡ್ ಮಾಸ್ಟರ್ ಅವರನ್ನು ಯಾವಾಗ ಶಾಲೆಗೆ ವಾಪಾಸು ಕರೆದುಕೊಂಡು ಬಂದು ನಮಗೆ ಪಾಠ ಹೇಳಿಕೊಡಲು ಬಿಡುತ್ತಾರೋ ಅಂದೇ ನಾವು ಶಾಲೆಗೆ ವಾಪಾಸು ಬರುತ್ತೇವೆ. ಅವರ ಸ್ಥಾನವನ್ನು ತುಂಬಲು ಯಾವ ಶಿಕ್ಷಕರಿಂದಲೂ ಸಾಧ್ಯವಿಲ್ಲ. ಅವರಿಗೆ ಮಾಡುತ್ತಿರುವುದು ಅನ್ಯಾಯ” ಎಂದು ಆ ವಿದ್ಯಾರ್ಥಿ ಕೂಗಿ ಹೇಳಿದ.
ನಡೆದಿದ್ದೇನು?
ಅಕ್ಟೋಬರ್ 14ರಂದು ಪಿಲಿಬಿಟ್ ಜಿಲ್ಲಾಡಳಿತವು ಫರ್ಖಾನ್ ಆಲಿ (45) ಎಂಬ ಮುಖ್ಯ ಶಿಕ್ಷಕರನ್ನು ಏಕಾ ಏಕಿ ಅಮಾನತ್ತುಗೊಳಿಸಿತು. ವಿಶ್ವ ಹಿಂದೂ ಪರಿಷತ್ ಸಂಘಟನೆಯ ಕೆಲವರು ಈ ಮುಖ್ಯಶಿಕ್ಷಕ ಅಲಿಯವರ ವಿರುದ್ಧ ನೀಡಿದ್ದ ದೂರು ಇದಕ್ಕೆ ಕಾರಣವಾಗಿತ್ತು. ಅವರು ನೀಡಿದ್ದ ದೂರಿನಲ್ಲಿ ಮುಖ್ಯ ಶಿಕ್ಷಕ ಫರ್ಖಾನ್ ಅಲಿ ಬೆಳಗಿನ ಪ್ರಾರ್ಥನೆಯ ಸಮಯದಲ್ಲಿ ಮಕ್ಕಳಿಂದ ಧಾರ್ಮಿಕ ಪ್ರಾರ್ಥನೆ ಮಾಡಿಸುತ್ತಾರೆ, ಮದರಸಾದಲ್ಲಿ ಹೇಳಿಸುವ ಪ್ರಾರ್ಥನೆಯನ್ನು ಮಕ್ಕಳಿಂದ ಹೇಳಿಸುತ್ತಾರೆ ಎಂದು ದೂರು ನೀಡಿದ್ದರು.
ಈ ದೂರು ಸ್ವೀಕರಿಸಿದ ಜಿಲ್ಲಾಡಳಿತ ಹಿಂದೆ ಮುಂದೆ ವಿಚಾರಿಸದೇ ಏಕಾಏಕಿಯಾಗಿ ಶಿಕ್ಷಕ ಫರ್ಕಾನ್ ಅಲಿಯವರನ್ನು ಅಮಾನತುಗೊಳಿಸಿದೆ.
ಆದರೆ ಬಿಸಾಲ್ಪುರದ ಬಿಇಒ ಉಪೇಂದ್ರ ಕುಮಾರ್ ಅವರು ಈ ಕುರಿತು ನಡೆಸಿದ ತನಿಖೆಯಲ್ಲಿ ವಿಶ್ವ ಹಿಂದೂ ಪರಿಷತ್ ನವರು ಮಾಡಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂಬುದು ತಿಳಿದು ಬಂದಿದೆ. ಈ ಶಾಲೆಯ ಮಕ್ಕಳು ಮೊಹಮ್ಮದ್ ಇಕ್ಬಾಲ್ ಅವರು 1902ರಲ್ಲಿ ಬರೆದಿರುವ ‘ಲಬ್ ಪೆ ಆತಿ ದೇ ದುವಾ’ ಎಂಬ ಗೀತೆಯನ್ನು ಪ್ರಾರ್ಥನೆ ಸಮುಯಲ್ಲಿ ಹಾಡುತ್ತಿದ್ದುದು ತಿಳಿದು ಬಂದಿದೆ. ಮೊಹಮ್ಮದ್ ಇಕ್ಬಾಲ್ ಅವರು ಬೇರೆ ಯಾರೂ ಅಲ್ಲ, “ಸಾರೇ ಜಂಹಾ ಸೇನ ಅಚ್ಛಾ, ಹಿಂದೂ ಸಿತಾ ಹಮಾರಾ” ಎಂಬ ಜನಜನಿತ ಗೀತೆ ಬರೆದಿರುವ ಕವಿ. ಇದೇ ರೀತಿಯಲ್ಲಿ ‘ಲಬ್ ಪೇ ಆತಿ ದೇ ದುವಾ’ ಕೂಡಾ ಒಂದು ದೇಶಭಕ್ತಿ ಗೀತೆಯಾಗಿದೆ.
ಬಿಇಓ ವರದಿಯ ನಂತರದಲ್ಲಿ ಉತ್ತರ ಪ್ರದೇಶದ ಪ್ರಾಥಮಿಕ ಶಿಕ್ಷಣ ಮಂತ್ರಿ ಸತೀಶ್ ಚಂದ್ರ ದ್ವಿವೇದಿ ಮಾಧ್ಯಮಗಳೊಂದಿಗೆ ಮಾತನಾಡಿ ಬಿಇಓ ಅವರ ವರದಿ ತಮಗೆ ತಲುಪಿದ್ದು ಫರ್ಖಾನ್ ಆಲಿಯವರ ಅಮಾನತ್ತನ್ನು ರದ್ದುಪಡಿಸುವುದಾಗಿ ಹೇಳಿದ್ದಾರೆ.

ಶಿಕ್ಷಣ ಇಲಾಖೆ ನಿಗದಿಪಡಿಸಿದ ಪ್ರಾರ್ಥನೆ ಹೊರತುಪಡಿಸಿ ಬೇರೆ ಯಾವ ಪ್ರಾರ್ಥನೆಯನ್ನೂ ಹೇಳಿಸುವಂತಿಲ್ಲ ಎಂಬ ಆದೇಶವನ್ನೂ ಸರ್ಕಾರ ಜಾರಿ ಮಾಡಲಿದೆ ಎಂದೂ ಅವರು ಹೇಳಿದ್ದಾರೆ.
ವಿದ್ಯಾರ್ಥಿಗಳ ಪ್ರತಿಭಟನೆಯ ನಾಯಕತ್ವ ವಹಿಸಿದ್ದ 5 ನೇ ತರಗತಿ ವಿದ್ಯಾರ್ಥಿ ಹೀಗೆ ಹೇಳುತ್ತಾನೆ: “ಲಬ್ ಪೇ ಆತಿ ದೇ ದುವಾ” ಎಂಬ ಪದ್ಯವನ್ನು ನಾವು ನಮ್ಮ ಉರ್ದು ಪಠ್ಯಪುಸ್ತಕದಲ್ಲಿ ನೋಡಿದಾಗ ನಮ್ಮ ಶಾಲೆಯ ಮುಖ್ಯೋಪಾಧ್ಯಾಯರಿಗೆ ಇದನ್ನು ಶಾಲಾ ಪ್ರಾರ್ಥನೆಯಲ್ಲಿ ಹಾಡಲು ಅನುಮತಿ ಬೇಕೆಂದು ಕೇಳಿದೆವು. ಹಿಂದೂ-ಮುಸ್ಲಿಂ ವಿದ್ಯಾರ್ಥಿಗಳಿಬ್ಬರೂ ಕೇಳಿಕೊಂಡಿದ್ದೆವು. ನಮ್ಮ ಬೇಡಿಕೆಗೆ ಅವರು ಇಲ್ಲ ಅನ್ನಲಿಲ್ಲ. ದಿನ ಬಿಟ್ಟು ದಿನ ಇನ್ನು ಹಾಡುವಂತೆ ಹೇಳಿದ್ದರು”. ಮತ್ತೊಬ್ಬ 4 ನೇ ತರಗತಿ ವಿದ್ಯಾರ್ಥಿ, “ಲಬ್ ಪೇ ಆತಿ ಹೇ ದುವಾ” ಮತ್ತು ‘ವೋ ಶಕ್ತಿ ಹಮೇ ದೋ ದಯಾನಿಧಿ” ಪದ್ಯಗಳೆರಡನ್ನೂ ನಾವು ಹಾಡ್ತಾ ಇದ್ವಿ. ಈ ಗೀತೆಗಳನ್ನು ಹಾಡಲು ಬಿಟ್ಟಿದ್ದಕ್ಕಾಗಿ ಅವರನ್ನು ಸಮಾನತುಗೊಳಿಸುವುದಾದರೆ ಈ ಪದ್ಯಗಳನ್ನು ಪಠ್ಯಪುಸ್ತಕದಲ್ಲಿ ಹಾಕಿದ್ದು ಸರ್ಕಾರದ ತಪ್ಪು. ಇದಕ್ಕಾಗಿ ಸರ್ಕಾರವನ್ನೂ ಅಮಾನತುಗೊಳಿಸುತ್ತೀರಾ?” ಎಂದು ಕೇಳುತ್ತಾನೆ. 5ನೇ ತರಗತಿಯ ಮತ್ತೊಬ್ಬ ವಿದ್ಯಾರ್ಥಿ ಮಧ್ಯೆ ಬಾಯಿ ಹಾಕಿ, “ಹಿಂದೂ-ಮುಸ್ಲಿಂ ಇಬ್ಬರೂ ಒಂದೇ ಎಂದು ಮೋದೀಜಿಯವರು ಹೇಳಿದ್ದಾರೆ. ‘ವೋ ಶಕ್ತಿ ಹಮೇ ದೋ ದಯಾನಿಧಿ”ಯನ್ನು ಹಾಡಬಹುದಾದರೆ ‘ಲಬ್ ಪೇ ಆತಿ ಹೇ ದುವಾ” ಪದ್ಯ ಯಾಕೆ ಹಾಡಬಾರದು? ಎಂದು ಕೇಳುತ್ತಾನೆ.
ಮೊಹಮ್ಮದ್ ಇಕ್ಬಾಲ್ ಪದ್ಯದ ಅರ್ಥ ತಿಳಿದಿದೆಯೇ ಎಂದು ಕೇಳಿದ್ದಕ್ಕೆ ಆ ವಿದ್ಯಾರ್ಥಿ: “ಅದು ಏಕತೆಯ ಬಗ್ಗೆ ಇದೆ” ಎಂದು ಉತ್ತರಿಸಿದ್ದಕ್ಕೆ ಮಿಕ್ಕ ವಿದ್ಯಾರ್ಥಿಗಳೆಲ್ಲರೂ ತಲೆಯಾಡಿಸುತ್ತಾರೆ.
“ಅಮಾನತುಗೊಳಿಸಿರುವ ಬಗ್ಗೆ ವಿದ್ಯಾರ್ಥಿಗಳಿಗೆ ಖುಷಿ ಇಲ್ಲ. ಅಂದಿನಿಂದಲೂ ಹಾಜರಾತಿ ಕಡಿಮೆ ಆಗಿದೆ. ಗುರುವಾರ ಕೇವಲ 5 ವಿದ್ಯಾರ್ಥಿಗಳು ಹಾಜರಾಗಿದ್ದರು” ಎನ್ನುತ್ತಾರೆ ಬದಲಿ ಶಿಕ್ಷಕರಾಗಿ ಬಂದಿರುವ ರೇಹನ್ ಹುಸ್ಸೇನ್ ಚಿಸ್ತಿ. “ಆಲಿಯವರಿದ್ದಾಗ 150 ವಿದ್ಯಾರ್ಥಿಗಳು ಶಾಲೆಗೆ ಬರುತ್ತಿದ್ದರು” ಎಂದವರು ಹೇಳುತ್ತಾರೆ.
“ಆಲಿಯರನ್ನು ವಿದ್ಯಾರ್ಥಿಗಳು ಬಹಳ ಹಚ್ಚಿಕೊಂಡಿದ್ದರಿಂದಾಗಿ ಹಾಜರಾತಿ ಕುಸಿದಿದೆ” ಎಂದೆನ್ನುವ ಬಿಇಓ ಉಪೇಂದ್ರ ಕುಮಾರ್ “ಮುಂದಿನ ದಿನಗಳಲ್ಲಿ ಹಾಜರಾತಿ ಹೆಚ್ಚುತ್ತದೆ ಎಂದು ಆಶಿಸುತ್ತೇವೆ”. ಹಲವಾರು ವಿದ್ಯಾರ್ಥಿಗಳ ಪೋಷಕರು ಹೇಳುವ ಪ್ರಕಾರ ಆಲಿಯವರ ಅಮಾನತು ತಿಳಿದ ನಂತರ ವಿದ್ಯಾರ್ಥಿಗಳು ಮಾನಸಿಕವಾಗಿ ನೊಂದಿದ್ದಾರೆ.
4ನೇ ತರಗತಿಯಲ್ಲಿರುವ 13 ವರ್ಷದ ಮಗನ ತಾಯಿ ಕೃಷ್ಣಾದೇವಿ (45), “ಅವರನ್ನು ಅಮಾನತುಗೊಳಿಸಿದ್ದು ಯಾಕೆ ಎಂದು ವಿದ್ಯಾರ್ಥಿಗಳಿಗೆ ಹೇಳಿರಲಿಲ್ಲ. ನನ್ನ ಮಗ ಮುಖ್ಯೋಪಾಧ್ಯಾಯರಾದ ಆಲಿಯವರನ್ನು ಎಷ್ಟು ಇಷ್ಟಪಡುತ್ತಾನೆ ಎಂದರೆ ಅವರನ್ನು ಸಸ್ಪೆಂಡ್ ಮಾಡಿದ ಸುದ್ದಿ ತಿಳಿಯುತ್ತಲೇ ಊಟ ಮಾಡುವುದನ್ನೇ ಬಿಟ್ಟು ಬಿಟ್ಟಿದ್ದಾನೆ” ಎನ್ನುತ್ತಾರೆ.
2ನೇ ತರಗತಿ ಮತ್ತು 5 ನೇ ತರಗತಿ ಓದುತ್ತಿರುವ ಮಕ್ಕಳ ತಂದೆ ರಾಜೇಶ್ ಕುಮಾರ್ ವೃತ್ತಿಯಲ್ಲಿ ಕಾರ್ಪೆಂಟರ್ ಆಗಿದ್ದು (38) ಹೀಗೆನ್ನುತ್ತಾರೆ. “ಎಲ್ಲಾ ಮೂರೂ ಮಕ್ಕಳೂ ಮುಖ್ಯ ಶಿಕ್ಷಕರನ್ನು ಯಾವಾಗಲೂ ಹೊಗಳುತ್ತಿರುತ್ತಾರೆ. ಶಾಲೆಯ ಅಭಿವೃದ್ಧಿಗಾಗಿ ತಮ್ಮ ಜೇಬಿನಿಂದಲೇ ದುಡ್ಡು ಖರ್ಚು ಮಾಡುತ್ತಾರೆ ಎಂದು ಹೇಳುತ್ತಿರುತ್ತಾರೆ”
ಬಿಇಒ ಉಪೇಂದ್ರ ಕುಮಾರ್ ಅವರು ಹೇಳುವಂತೆ ಫರ್ಖಾನ್ ಅಲಿ ಶಾಲೆಯ ಮೂಲ ಸೌಕರ್ಯಗಳಿಗಾಗಿ ತಮ್ಮ ಸ್ವಂತ ಹಣ ಖರ್ಚು ಮಾಡಿದ್ದಾರೆ. “ಅವರು 65,000 ರೂಪಾಯಿ ಕೈಯಿಂದ ಹಾಕಿಕಿಂಡು ಒಂದು ಪ್ರೊಜೆಕ್ಟರ್ ತಂದು ಸ್ಮಾರ್ಟ್ ಕ್ಲಾಸ್ ರೂಮನ್ನು ಆರಂಭಿಸಿದ್ದಾರೆ. ತನ್ನ ಪ್ರತಿ ತಿಂಗಳ ಸಂಬಳದಲ್ಲಿ ಶಾಲೆಯ ಅಭಿವೃದ್ಧಿಗಾಗಿ ಅವರ ಖರ್ಚು ಮಾಡುತ್ತಾರೆ. ಯಾವುದಾದರೂ ಕೆಲಸಲ್ಲೆ ಸರ್ಕಾರ 5,000 ಕೊಟ್ಟು, ಅದಕ್ಕೆ 7,000 ತಗುಲಿದರೆ ಬಾಕಿ 2000ಕ್ಕಾಗಿ ಇವರು ಕಾಯುತ್ತಾ ಕೂರುವುದಿಲ್ಲ. ತಮ್ಮ ಕೈಯಿಂದಲೇ ಹಾಕಿಕೊಂಡು ಆ ಕೆಲಸ ಮಾಡುತ್ತಾರೆ” ಎನ್ನುತ್ತಾರೆ ಬಿಇಓ ಉಪೇಂದ್ರ ಕುಮಾರ್.
2011ರಲ್ಲಿ ಶಾಲೆಗೆ ನೇಮಕಗೊಂಡ ಆಲಿ ಕೇವಲ 71 ಮಕ್ಕಳಿದ್ದ ಶಾಲೆಗೆ 150 ಮಕ್ಕಳು ಹಾಜರಾಗುವಂತೆ ಮಾಡಿರುವುದು ಕಡಿಮೆ ಸಾಧನೆಯೇನಲ್ಲ. ಈ ಕುರಿತು ಹೇಳುವ ಅವರು, “ನಾನು ಈ ಶಾಲೆಯನ್ನು ಇಟ್ಟಿಗೆ ಇಟ್ಟಿಗೆ ಜೋಡಿಸಿ ಕಟ್ಟಿದ್ದೇನೆ. ನಾನು ಇಲ್ಲಿ ಸೇರಿದಾಗ ಮಕ್ಕಳಿಗೆ ಸರಿಯಾಗಿ ಕುಳಿತುಕೊಳ್ಳಲೂ ಆಗುತ್ತಿರಲಿಲ್ಲ. ಅಷ್ಟು ಕೆಟ್ಟ ವ್ಯವಸ್ಥೆಯಿತ್ತು. ಈಗ ಇಲ್ಲಿ ಸ್ಮಾರ್ಟ್ ಕ್ಲಾಸ್ ನಡೆಯುತ್ತಿದೆ. ನಾನು ನನ್ನ ಜೇಬಿನಿಂದ ಯಾವಾಗಲೂ ಯಾಕೆ ದುಡ್ಡು ಖರ್ಚು ಮಾಡುತ್ತೇನೆ ಎಂದರೆ ನಾನು ನನ್ನ ವಿದ್ಯಾರ್ಥಿಗಳನ್ನು ಪ್ರೀತಿಸುತ್ತೇನೆ..”
ತನ್ನ ತಂದೆ ತಾಯಿಯ ಏಳು ಮಕ್ಕಳ ಪೈಕಿ ಒಬ್ಬರಾಗಿರುವ ಅಲಿ ತಾನು 4ನೇ ತರಗತಿಯಲ್ಲಿದ್ದಾಗ ತಾಯಿಯನ್ನು ಕಳೆದುಕೊಂಡಿದ್ದರು. ಅವರ ತಂದೆ ತರಕಾರಿ ಮಾರಾಟ ಮಾಡುತ್ತಿದ್ದರು. “ನನಗೆ ನನ್ನ ವಿದ್ಯಾಭ್ಯಾಸ ಮುಗಿಸುವುದು ಅಷ್ಟು ಸುಲಭವಾಗಿರಲಿಲ್ಲ. ನಾವು ಬೆಳೆಯುವಾಗ ನಮ್ಮ ಪರಿಸ್ಥಿತಿ ಅಷ್ಟೇನೂ ಚೆನ್ನಾಗಿರಲಿಲ್ಲ” ಎನ್ನುತ್ತಾರೆ ಅಲಿ.
2009ರಲ್ಲಿ ಬೇಸಿಕ್ ಟ್ರೈನಿಂಗ್ ಸರ್ಟಿಫಿಕೇಟ್ ಪಡೆದ ಅಲಿ ಮೊದಲು ಬಿಸ್ಲಾಪುರ್ ಬ್ಲಾಕ್ ಸರ್ಕಾರಿ ಪ್ರಾಥಮಿಕ ಶಾಲೆಗೆ ನೇಮಕಗೊಂಡಿದ್ದರು. 2011ರಲ್ಲಿ ಗಯಾಸ್ಪುರ್ ಪ್ರಾಥಮಿಕ ಶಾಲೆಗೆ ವರ್ಗಾವಣೆಯಾಗಿದ್ದರು.
ಕೃಪೆ: ಇಂಡಿಯನ್ ಎಕ್ಸ್ ಪ್ರೆಸ್