ಲೋಕಸಭಾ ಚುನಾವಣೆಯ ಬಳಿಕ ನಡೆದ ದೇಶದ ಎರಡು ಬಿಜೆಪಿ ಆಡಳಿತದ ರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶ ಬಹುತೇಕ ಹೊರಬಿದ್ದಿದೆ. ಎರಡೂ ಕಡೆ ಬಿಜೆಪಿ ಅಧಿಕಾರ ಉಳಿಸಿಕೊಳ್ಳುವುದು ಬಹುತೇಕ ಖಚಿತವಾದರೂ, ಅದಕ್ಕಾಗಿ ತೀರಾ ಖುಷಿಪಡುವ ಸ್ಥಿತಿಯಲ್ಲಿ ಬಿಜೆಪಿ ಇಲ್ಲ! ಅಲ್ಲದೇ ಈ ಚುನಾವಣೆ ರವಾನಿಸಿರುವ ಸಂದೇಶ ಬಿಜೆಪಿಯ ರಾಷ್ಟ್ರೀಯ ನಾಯಕರ ಆತಂಕ ಹೆಚ್ಚಿಸಿದೆ ಕೂಡ.
ಮಹಾರಾಷ್ಟ್ರದಲ್ಲಿ ಭಾರೀ ಸ್ಥಾನಗಳನ್ನು ಗೆಲ್ಲುವ ಬಿಜೆಪಿ ಮತ್ತು ಶಿವಸೇನಾ ನಿರೀಕ್ಷೆಗೆ ಪ್ರತಿಯಾಗಿ ಬಹಳ ಪ್ರಯಾಸದಿಂದ ಮ್ಯಾಜಿಕ್ ನಂಬರ್ ಗಡಿದಾಟಿವೆ. ಹರ್ಯಾಣದಲ್ಲಿ ಬಿಜೆಪಿಗೆ ಮ್ಯಾಜಿಕ್ ನಂಬರ್ ಗಡಿ ದಾಟಲು ಕೂಡ ಸಾಧ್ಯವಾಗಿಲ್ಲ.
ಒಟ್ಟು 288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಶಿವಸೇನಾ ಚುನಾವಣಾಪೂರ್ವ ಮೈತ್ರಿ ಮಾಡಿಕೊಂಡು ಜಂಟಿಯಾಗಿ ಚುನಾವಣೆ ಎದುರಿಸಿದ್ದವು. ಬಿಜೆಪಿ 150 ಕ್ಷೇತ್ರಗಳಲ್ಲಿ ಕಣಕ್ಕಿಳಿದಿದ್ದರೆ, ಶಿವಸೇನಾಗೆ 126 ಕ್ಷೇತ್ರಗಳನ್ನು ಬಿಟ್ಟುಕೊಡಲಾಗಿತ್ತು. ಆ ಪೈಕಿ ಬಿಜೆಪಿ ಸದ್ಯ 103 ಕಡೆ ಮತ್ತು ಸೇನಾ 59 ಕಡೆ ಬಹುತೇಕ ಗೆಲುವು ಪಡೆದಿದ್ದು(ಕೆಲವು ಕಡೆ ಇನ್ನೂ ಎಣಿಕೆ ಪೂರ್ಣಗೊಂಡು ಫಲಿತಾಂಶ ಪ್ರಕಟವಾಗಿಲ್ಲ), ಒಟ್ಟು ಮೈತ್ರಿಕೂಟ ಸರಳ ಬಹುತಮದ ಮ್ಯಾಜಿಕ್ ನಂಬರ್ 145ರ ಗಡಿ ದಾಟಿ 163 ಸ್ಥಾನ ಗೆಲ್ಲುವ ಹಂತದಲ್ಲಿವೆ. ಹರ್ಯಾಣದಲ್ಲಿ ಕೂಡ ಆಡಳಿತರೂಢ ಬಿಜೆಪಿ ಸರಳ ಬಹುಮತದ ಗಡಿ ದಾಟುವುದು ಕೂಡ ಸಾಧ್ಯವಾಗಿಲ್ಲ. ಒಟ್ಟು 90 ಸ್ಥಾನಬಲದ ವಿಧಾನಸಭೆಯಲ್ಲಿ ಅಧಿಕಾರಕ್ಕೆ ಬರಲು ಕನಿಷ್ಠ 46 ಸ್ಥಾನದ ಸರಳ ಬಹುಮತ ಬೇಕಿದೆ. ಆದರೆ, ಸದ್ಯದ ಮಾಹಿತಿ ಪ್ರಕಾರ ಬಿಜೆಪಿ 40 ಸ್ಥಾನ(ಕಳೆದ ಬಾರಿ 47) ಹಾಗೂ ಕಾಂಗ್ರೆಸ್ 31 ಸ್ಥಾನ ಪಡೆದಿದ್ದು, ಹೊಸ ಪಕ್ಷ ಜೆಜೆಪಿ 10 ಸ್ಥಾನಗಳನ್ನು ಪಡೆಯುವ ಮೂಲಕ ಕಿಂಗ್ ಮೇಕರ್ ಆಗಿದೆ. ಕಳೆದ ಬಾರಿ ಕೇವಲ 15 ಸ್ಥಾನ ಪಡೆದಿದ್ದ ಕಾಂಗ್ರೆಸ್ ಈ ಬಾರಿ ಸ್ಥಳೀಯ ನಾಯಕರ ಆಂತರಿಕ ಕಚ್ಚಾಟದ ಹೊರತಾಗಿಯೂ ತನ್ನ ಸ್ಥಾನಬಲವನ್ನು ದುಪ್ಪಟ್ಟು ಮಾಡಿಕೊಂಡಿದೆ.
ಕಳೆದ ಬಾರಿಗೆ ಹೋಲಿಸಿದರೆ, ಸೇನಾ ಈ ಬಾರಿ ನಾಲ್ಕು ಸ್ಥಾನ ಕಳೆದುಕೊಂಡಿದ್ದರೂ, ಕಳೆದ ಬಾರಿ ಯಾವುದೇ ಮೈತ್ರಿ ಇಲ್ಲದೆ ಅದು ಎಲ್ಲಾ 288 ಕಡೆಯೂ ಕಣಕ್ಕಿಳಿದು 63 ಸ್ಥಾನ ಪಡೆದಿತ್ತು. ಆ ಲೆಕ್ಕದಲ್ಲಿ ಈ ಬಾರಿ ಕೇವಲ 126 ಕಡೆ ಸ್ಪರ್ಧಿಸಿ 59 ಸ್ಥಾನ ಪಡೆದಿರುವುದು ದೊಡ್ಡ ಸಾಧನೆಯೇ. ಆದರೆ, ಮಿತ್ರಪಕ್ಷದ ಈ ಹರ್ಷದ ನಗೆ, ಬಿಜೆಪಿಯ ಪಾಲಿಗಿಲ್ಲ. ಏಕೆಂದರೆ, ಕಳೆದ ಬಾರಿ 122 ಸ್ಥಾನ ಗೆದ್ದು ಸೇನಾದ ಬೆಂಬಲದೊಂದಿಗೆ ಅಧಿಕಾರ ಹಿಡಿದಿದ್ದ ಬಿಜೆಪಿ, ಈ ಬಾರಿ, ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸರ ಸಾಧನೆಗಳ ದೊಡ್ಡ ಹೈಪ್ ನಡುವೆಯೂ ಸುಮಾರು 20 ಸ್ಥಾನಗಳಷ್ಟು ಹಿನ್ನಡೆ ಅನುಭವಿಸಿದೆ.
ಆದರೆ, ಚುನಾವಣೋತ್ತರ ಸಮೀಕ್ಷೆಗಳ ಪ್ರಕಾರ ಬಿಜೆಪಿ ಏಕಾಂಗಿಯಾಗಿಯೇ 150ಕ್ಕೂ ಹೆಚ್ಚು ಸ್ಥಾನ ಗೆಲ್ಲಲಿದೆ ಎನ್ನಲಾಗಿತ್ತು. ಸ್ವತಃ ಬಿಜೆಪಿ ಕೂಡ ತಾನು 150 ಸ್ಥಾನ ಗೆಲ್ಲುವುದಾಗಿ ಹೇಳಿಕೊಂಡಿತ್ತು. ಆದರೆ, ಉತ್ತಮ ಆಡಳಿತವೆಂದು ಭಾರೀ ಹೆಚ್ಚುಗಾರಿಕೆಯ ಮಾತನಾಡಿದ್ದ ಫಡ್ನವೀಸರ ಬಿಜೆಪಿ ಸರ್ಕಾರಕ್ಕೆ ಕಳೆದ ಬಾರಿಯ ಸ್ಥಾನಗಳನ್ನು ಉಳಿಸಿಕೊಳ್ಳುವುದು ಕೂಡ ಸಾಧ್ಯವಾಗಿಲ್ಲ.
ಹಿಂದುತ್ವ, ರಾಷ್ಟ್ರೀಯತಾವಾದಗಳ ಪ್ರಬಲ ಅಲೆ ಮತ್ತು ಒಲವಿನ ಮಹಾರಾಷ್ಟ್ರದಲ್ಲಿ ಬಿಜೆಪಿಗೆ ಆಗಿರುವ ಈ ಹಿನ್ನಡೆಯನ್ನು ಅದರ ವಿಕಲ ರಾಷ್ಟ್ರೀಯತಾವಾದ ಮತ್ತು ಉಗ್ರ ಹಿಂದುತ್ವವಾದಿ ರಾಜಕಾರಣದ ವಿರುದ್ಧದ ಶ್ರೀಸಾಮಾನ್ಯನ ತೀರ್ಪು ಎಂದೇ ವಿಶ್ಲೇಷಿಸಲಾಗುತ್ತಿದೆ. ಏಕೆಂದರೆ; ಚುನಾವಣೆ ಘೋಷಣೆಯಾಗುತ್ತಿದ್ದಂತೆ ಸಂವಿಧಾನದ 370ನೇ ವಿಧಿ, ಕಾಶ್ಮೀರ ಸಮಸ್ಯೆ, ಪಾಕ್ ಭಯೋತ್ಪಾದನೆ ವಿಷಯಗಳನ್ನೇ ಮುಂದಿಟ್ಟುಕೊಂಡು ಬಿಜೆಪಿ ಮತ್ತು ಸಂಘಪರಿವಾರ ಮಹಾರಾಷ್ಟ್ರದ ಚುನಾವಣೆಯನ್ನು ಅದೇ ವಿಷಯಗಳ ಮೇಲೆ ನಡೆಸಲು ಚಾಲನೆ ನೀಡಿದ್ದವು. ಅದು ಸಾಲದು ಎಂಬಂತೆ ಚುನಾವಣಾ ಪ್ರಣಾಳಿಕೆಯಲ್ಲಿ ಪ್ರಮುಖ ಭರವಸೆಯಾಗಿ ಗಾಂಧಿ ಹತ್ಯೆ ಆರೋಪ ಎದುರಿಸಿದ್ದ ಉಗ್ರ ಹಿಂದುತ್ವವಾದಿ ನಾಯಕ ವಿ ಡಿ ಸಾವರ್ಕರ್ ಅವರಿಗೆ ಭಾರತ ರತ್ನ ಪುರಸ್ಕಾರ ನೀಡುವುದಾಗಿ ಘೋಷಿಸಿತ್ತು. ಆ ವಿಷಯ ಚುನಾವಣಾ ಕಣದಲ್ಲಿ ಭಾರೀ ಚರ್ಚೆಯ ವಿಷಯವಾಗಿ, ಮತದಾನಕ್ಕೆ ಕೆಲವೇ ದಿನಗಳ ಮುನ್ನ ಇಡೀ ಚುನಾವಣೆಯೇ ಆ ವಿವಾದಿತ ಪ್ರಣಾಳಿಕೆಯ ಸುತ್ತಲೇ ಗಿರಕಿಹೊಡೆಯವಂತೆ ಮಾಡುವಲ್ಲಿಯೂ ಬಿಜೆಪಿ ಯಶಸ್ವಿಯಾಗಿತ್ತು. ಜೊತೆಗೆ ಮತದಾನಕ್ಕೆ ಮುನ್ನಾ ದಿನ ಪಾಕಿಸ್ಥಾನದ ಗಡಿ ಭಾಗದ ಉಗ್ರರ ನೆಲೆ ಮೇಲೆ ಭಾರತೀಯ ಸೇನೆ ನಡೆಸಿದ ದಾಳಿ ಕೂಡ ಬಿಜೆಪಿ-ಸೇನಾ ಮೈತ್ರಿಗೆ ವರವಾಗಿತ್ತು.
ಸಾವರ್ಕರ್ ಮತ್ತು ಭಾರತ ರತ್ನದ ಬಿಜೆಪಿಯ ಚುನಾವಣಾ ಅಸ್ತ್ರ ಎಷ್ಟು ಪ್ರಬಲವಾಗಿತ್ತು ಎಂದರೆ ಅದರ ವಿರೋಧಿಪಾಳೆಯ ನೈಜ ಸಮರಕ್ಕೆ ಮುನ್ನವೇ ಶಸ್ತ್ರತ್ಯಾಗ ಮಾಡುವ ಸ್ಥಿತಿ ಉಂಟಾಗಿತ್ತು. ಮಹಾರಾಷ್ಟ್ರದಂತಹ ಪ್ರಬಲ ಹಿಂದುತ್ವದ, ರಾಷ್ಟ್ರೀಯತಾವಾದದ ನೆಲದಲ್ಲಿ ಬಿಜೆಪಿಯ ಆ ದಾಳಕ್ಕೆ ಪ್ರತಿದಾಳ ಉರುಳಿಸುವುದೇ ಪ್ರತಿಪಕ್ಷಗಳಿಗೆ ಸಾಧ್ಯವಾಗಿರಲಿಲ್ಲ. ಜೊತೆಗೆ ಅತ್ಯಂತ ದುರ್ಬಲ ಪರಿಸ್ಥಿತಿಯಲ್ಲಿದ್ದ ಕಾಂಗ್ರೆಸ್ ಅಂತೂ ಈ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದಂತೆಯೇ ಕಂಡಿರಲಿಲ್ಲ. ಪಕ್ಷದ ನಾಯಕ ರಾಹುಲ್ ಗಾಂಧಿ ಕೇವಲ ಏಳು ಪ್ರಚಾರ ರ್ಯಾಲಿಗಳನ್ನು ಮಾಡಿದ್ದರೆ, ಹಂಗಾಮಿ ಅಧ್ಯಕ್ಷೆ ಸೋನಿಯಾ ಅವರಂತೂ ಒಂದೂ ರ್ಯಾಲಿ ನಡೆಸಲಿಲ್ಲ. ಅದರ ಮಿತ್ರಪಕ್ಷ ಎನ್ ಸಿಪಿಯ ಬಲದಿಂದಾಗಿ ಇದೀಗ ಕನಿಷ್ಠ 100 ಸ್ಥಾನದ ಗಡಿ ದಾಟುವುದು ಸಾಧ್ಯವಾಗಿದೆ ಎಂಬುದು ಗಮನಾರ್ಹ.
ಆ ಮೂಲಕ ನಿರುದ್ಯೋಗ, ಆರ್ಥಿಕ ಕುಸಿತ, ಬ್ಯಾಂಕ್ ದಿವಾಳಿ, ಕೃಷಿ ಬಿಕ್ಕಟ್ಟು, ಸರ್ಕಾರಿ ಸ್ವಾಮ್ಯದ ಬೃಹತ್ ಉದ್ದಿಮೆಗಳ ಪತನದಂತಹ ಜನರ ವಾಸ್ತವ ಬದುಕಿನ ನೈಜ ಸಮಸ್ಯೆಗಳಿಂದ, ಸರ್ಕಾರಗಳ ಸಾಲು ಸಾಲು ವೈಫಲ್ಯಗಳಿಂದ ಜನರ ಗಮನವನ್ನು ಭಾವನಾತ್ಮಕ ವಿಷಯಗಳತ್ತ ತಿರುಗಿಸುವ ಯತ್ನವನ್ನೂ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು ಮಾಡಿದ್ದವು. ಆ ಹಿನ್ನೆಲೆಯಲ್ಲಿಯೇ ಈ ಚುನಾವಣಾ ಫಲಿತಾಂಶದ ಮೇಲೆ ಇಡೀ ದೇಶದ ಜನರ ಕಣ್ಣಿತ್ತು. ದೇಶದ ಇಡೀ ವ್ಯವಸ್ಥೆಯೇ ಕುಸಿದು ಬೀಳುತ್ತಿರುವ ಹೊತ್ತಲ್ಲಿ, ಜನಸಾಮಾನ್ಯರು ಸಂಕಷ್ಟದ ದಿನಗಳನ್ನು ಕಳೆಯುತ್ತಿರುವ ಹೊತ್ತಲ್ಲಿ ಕೇವಲ ದೇಶಭಕ್ತಿ, ಪಾಕ್ ದ್ವೇಷ, ಹಿಂದುತ್ವದಂತಹ ವಿಷಯಗಳನ್ನೇ ತೇಲಿಬಿಟ್ಟು ಶ್ರೀಸಾಮಾನ್ಯನ ವಿವೇಕವನ್ನು ಮಣ್ಣುಮುಕ್ಕಿಸಬಹುದೇ ಎಂಬ ಕುತೂಹಲ ಎಲ್ಲರದ್ದಾಗಿತ್ತು. ಆ ಹಿನ್ನೆಲೆಯಲ್ಲಿ ಈ ಫಲಿತಾಂಶ, ಜನರ ವಿವೇಕ ಇನ್ನೂ ಇಡಿಯಾಗಿ ಮಣ್ಣುಪಾಲಾಗಿಲ್ಲ ಎಂಬ ಸಮಾಧಾನದ ಸಂದೇಶವನ್ನಂತೂ ನೀಡಿದೆ ಎನ್ನಬಹುದು.
ಹಾಗೇ ಪ್ರತಿಪಕ್ಷಗಳಿಗೆ ಕೂಡ ಈ ಚುನಾವಣೆ ಒಂದು ಪೂರಕ ಸಂದೇಶ ನೀಡಿದ್ದು, ದೇಶದ ಜನಸಾಮಾನ್ಯ ಬಿಜೆಪಿಗೆ ಪರ್ಯಾಯ ಪಕ್ಷವನ್ನು ಹುಡುಕತೊಡಗಿದ್ದಾನೆ. ನೀವು ಜಾಗೃತರಾಗಿ ರಾಜಕಾರಣವನ್ನು ಮಾಡುವುದೇ ಆದರೆ, ಆತನ ಆಯ್ಕೆ ನೀವೇ ಆಗಬಹುದು ಎಂಬುದನ್ನು ಈ ಎರಡೂ ರಾಜ್ಯಗಳ ಫಲಿತಾಂಶದ ಸಂದೇಶ ಹೇಳಿದೆ. ಹಾಗೇ, ಮಹಾರಾಷ್ಟ್ರದಲ್ಲಿ ಈಗಾಗಲೇ ಶಿವಸೇನಾ ತನ್ನ ಬಲವೃದ್ಧಿಗೊಂಡ ಬೆನ್ನಲ್ಲೇ ಮಿತ್ರಪಕ್ಷದ ಮುಂದೆ ಹೊಸ ಬೇಡಿಕೆ ಮುಂದಿಟ್ಟಿದೆ. ಸರ್ಕಾರದಲ್ಲಿ 50:50ರ ಸೂತ್ರದಂತೆ ಎಲ್ಲಾ ಅಧಿಕಾರ ಹಂಚಿಕೆಯಾಗಬೇಕು. ಮುಖ್ಯಮಂತ್ರಿ ಸ್ಥಾನ ನೀಡಬೇಕು ಮತ್ತು ಒಟ್ಟು ಐದು ವರ್ಷದ ಅಧಿಕಾರವಧಿಯಲ್ಲಿಯೂ ಸಮಪಾಲು ಬೇಕು ಎಂಬ ಬೇಡಿಕೆ ಮುಂದಿಟ್ಟಿದೆ. ಆ ಮೂಲಕ ಬಿಜೆಪಿಯ ಪಾರುಪತ್ಯ ಅದರ ಪ್ರಬಲ ಕೋಟೆಯಲ್ಲಿಯೇ ಇನ್ನು ನಡೆಯದು ಎಂಬ ಸಂದೇಶವನ್ನು ಅದರದೇ ಮಿತ್ರಪಕ್ಷ ರವಾನಿಸಿದೆ. ಹಾಗಾಗಿ ಬಿಜೆಪಿ ನಾಯಕತ್ವಕ್ಕೆ ಮುಂದಿನ ಐದು ವರ್ಷಗಳ ಕಾಲ ಸೇನೆಯೊಂದಿಗೆ ಅಧಿಕಾರ ನಡೆಸುವುದೆಂದರೆ ಸೆರಗಲ್ಲಿ ಕೆಂಡ ಕಟ್ಟಿಕೊಂಡಂತೆ ಎಂಬುದಂತೂ ದಿಟ.
ಹಾಗಾಗಿ ಭಾರೀ ಬಹುಮತದ ಲೋಕಸಭಾ ಚುನಾವಣೆಯ ದಿಗ್ವಿಜಯದ ಬಳಿಕ ಬಿಜೆಪಿ ಎದುರಿಸಿದ ಮೊದಲ ವಿಧಾನಸಭಾ ಚುನಾವಣೆಯ ಫಲಿತಾಂಶ ಕೇಸರಿಪಡೆಗೆ ಒಂದು ಎಚ್ಚರಿಕೆಯ ಸಂದೇಶವನ್ನೂ, ಲೋಕಸಭಾ ಫಲಿತಾಂಶದಿಂದ ಕುಗ್ಗಿ ಮೂಲೆ ಸೇರಿದ್ದ ಪ್ರತಿಪಕ್ಷಗಳ ನಾಯಕರಿಗೆ ಒಂದು ಆಶಾದಾಯಕ ಸಂದೇಶವನ್ನೂ ಏಕಕಾಲಕ್ಕೆ ನೀಡಿದೆ. ಈ ಸಂದೇಶವನ್ನು ಸ್ವೀಕರಿಸುವವರು ಎಷ್ಟರಮಟ್ಟಿಗೆ ಸ್ವೀಕರಿಸುತ್ತಾರೆ ಎಂಬುದನ್ನು ಕಾದುನೋಡಬೇಕಿದೆ. ಆದರೆ, ಸದ್ಯಕ್ಕಂತೂ ದೇಶದ ಜನಸಾಮಾನ್ಯರ ವಿವೇಕ ಗೆದ್ದಿದೆ. ಜನ ತಮ್ಮ ಹೊಣೆಗಾರಿಕೆ ಮೆರೆದಿದ್ದಾರೆ. ಈಗ ಪ್ರತಿಪಕ್ಷಗಳ ಸರದಿ..!