ಶರಾವತಿ ಕಣಿವೆ ಮತ್ತೊಮ್ಮೆ ಸುದ್ದಿಯಲ್ಲಿದೆ. ಕೆಲವೇ ತಿಂಗಳ ಹಿಂದಷ್ಟೇ ಬೆಂಗಳೂರಿಗೆ ಶರಾವತಿ ನೀರು ಒಯ್ಯುವ ಸರ್ಕಾರದ ಪ್ರಸ್ತಾವನೆಯ ಹಿನ್ನೆಲೆಯಲ್ಲಿ ಸಾಕಷ್ಟು ಪ್ರತಿಭಟನೆ, ಬಂದ್ ಮೂಲಕ ಗಟ್ಟಿ ದನಿ ಮೊಳಗಿಸಿದ್ದ ಶರಾವತಿ ಕೊಳ್ಳದ ಜನ, ಇದೀಗ ಮತ್ತೊಂದು ಹೋರಾಟಕ್ಕೆ ಟೊಂಕ ಕಟ್ಟಿದ್ದಾರೆ. ಆದರೆ, ಒಂದೇ ವ್ಯತ್ಯಾಸವೆಂದರೆ; ಕಳೆದ ಬಾರಿ ಶರಾವತಿಯ ನೀರು ಕೊಡುವುದಿಲ್ಲ ಎಂದು ಕೂಗು ಹಾಕಿದ್ದವರು, ಈಗ ಶರಾವತಿ ಕೊಳ್ಳಕ್ಕೆ ಕಾಲಿಡಲು ಬಿಡೆವು ಎಂದು ಹೇಳುತ್ತಿದ್ದಾರೆ.
ಹೌದು, ಶರಾವತಿ ಕಣಿವೆಯ ವಿಶ್ವವಿಖ್ಯಾತ ಜೋಗ ಜಲಪಾತದಿಂದ ಕಣ್ಣಳತೆ ದೂರದಲ್ಲಿ ಹಬ್ಬಿರುವ ಮಲೆ ಮಧ್ಯದಲ್ಲಿ ಬರೋಬ್ಬರಿ 800 ಎಕರೆ ಮಾನವ ಹಸ್ತಕ್ಷೇಪವೇ ಇಲ್ಲದ ದಟ್ಟ ಮಲೆಕಾಡಿನ ನಡುವೆ ಇದೀಗ ಶರಾವತಿ ಭೂಗತ ವಿದ್ಯುದಾಗಾರವನ್ನು ನಿರ್ಮಿಸಲು ಮುಂದಾಗಿದ್ದು ಈಗಾಗಲೇ ಯೋಜನೆಯ ವಿಸ್ತೃತ ವರದಿ ತಯಾರಿಸುವಂತೆ ಸ್ವತಃ ಅದೇ ಜಿಲ್ಲೆಯ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರೇ ಆದೇಶ ಹೊರಡಿಸಿದ್ದಾರೆ. ಹಾಗಾಗಿ ಮೂರು ತಿಂಗಳ ಹಿಂದಷ್ಟೇ ರಾಜಧಾನಿಗೆ ಶರಾವತಿ ಹರಿಸುವ ಡಿಪಿಆರ್ ವಿರುದ್ಧ ಪ್ರತಿಭಟನೆ ನಡೆಸಿದ್ದ ಶರಾವತಿ ಮಕ್ಕಳು ಇದೀಗ ಮತ್ತೊಂದು ಡಿಪಿಆರ್ ವಿರುದ್ಧ ಹೋರಾಡಬೇಕಾಗಿದೆ.
ವಾಸ್ತವವಾಗಿ ಇದು ಕೆಪಿಸಿ(ಕರ್ನಾಟಕ ವಿದ್ಯುತ್ ನಿಗಮ)ಯ ಯೋಜನೆ. ಈಗಾಗಲೇ ಏಷ್ಯಾದ ಮೊಟ್ಟಮೊದಲ ಭೂಗತ ವಿದ್ಯುದಾಗಾರವನ್ನು ಇದೇ ಶಿವಮೊಗ್ಗ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಗಡಿಭಾಗದ ಉಪ್ಪಿನಂಗಡಿಯಲ್ಲಿ ಹೊಂದಿರುವ ಕೆಪಿಸಿ, ಈಗ ಅದೇ ಮಾದರಿಯಲ್ಲಿ 2000 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯ ಬೃಹತ್ ಭೂಗತ ವಿದ್ಯುದಾಗಾರ ನಿರ್ಮಾಣಕ್ಕೆ ಈಗಾಗಲೇ ಯೋಜನೆ ಅಂತಿಮಗೊಳಿಸಿ, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ದಟ್ಟ ಕಾಡಿನ ನಡುವೆ ಸರ್ವೇ ಮತ್ತು ವಿವಿಧ ಪರೀಕ್ಷೆಗಳಿಗೆ ರಾಜ್ಯ ವನ್ಯಜೀವಿ ಮಂಡಳಿಯ ನಿರಾಪೇಕ್ಷಣಾ ಪತ್ರವನ್ನೂ ಪಡೆದುಕೊಂಡಾಗಿದೆ. 2017ರಲ್ಲಿ ಸುಮಾರು 4800 ಕೋಟಿ ರೂ. ಅಂದಾಜು ವೆಚ್ಚದ ಯೋಜನೆ, ಇದೀಗ 6000 ಕೋಟಿಗೆ ಏರಿಕೆಯಾಗಿದೆ. ಈ ಬಹುಕೋಟಿ ಯೋಜನೆಗಾಗಿ ಜಗತ್ತಿನಲ್ಲೇ ಮಾನವ ಪ್ರವೇಶವೇ ಇರದ ಕೆಲವೇ ಕೆಲವು ಪ್ರದೇಶಗಳಲ್ಲಿ ಒಂದಾದ, ತಲಕಳಲೆ ಮತ್ತು ಗೇರುಸೊಪ್ಫಾ ಜಲಾಶಯಗಳ ನಡುವಿನ ದಟ್ಟ ಕಾಡಿನ ನಡುವೆ ಸುಮಾರು 378 ಎಕರೆಯಷ್ಟು ವಿಶಾಲ ಜಾಗವನ್ನು ಬಗೆದು ಭೂಮಟ್ಟದಿಂದ 300 ಮೀಟರ್ ಆಳದಲ್ಲಿ ತಲಾ 250 ಮೆಗಾವ್ಯಾಟ್ ಉತ್ಪಾದನೆಯ ಒಟ್ಟು 8 ವಿದ್ಯುದಾಗಾರಗಳನ್ನು ಸ್ಥಾಪಿಸುವ ಗುರಿ ಹೊಂದಿದೆ.
ಹಾಲಿ ಇರುವ ತಲಕಳಲೆ ಜಲಾಶಯದಿಂದ ಸುರಂಗ ಮಾರ್ಗದ ಮೂಲಕ ಭೂಗತ ವಿದ್ಯುದಾಗಾರಗಳಿಗೆ ನೀರು ಹರಿಸಿ ವಿದ್ಯುತ್ ಉತ್ಪಾದಿಸಲಾಗುತ್ತದೆ. ಬಳಿಕ ನೀರು ಸುರಂಗ ಮಾರ್ಗದ ಮೂಲಕವೇ ಗೇರುಸೊಪ್ಪ ಜಲಾಶಯ ತಲುಪುತ್ತದೆ. ಮತ್ತೆ ಟರ್ಬೈನ್ಗಳನ್ನು ಪಂಪ್ಸೆಟ್ನಂತೆ ಬಳಸಿ ಗೇರುಸೊಪ್ಪದಿಂದ 500 ಮೀ. ಎತ್ತರದ ತಲಕಳಲೆ ಜಲಾಶಯಕ್ಕೆ ಹರಿಸಲಾಗುತ್ತದೆ ಎಂದು ವ್ಯಾಪ್ಕೋಸ್ ಲಿಮಿಟೆಡ್ ಸಂಸ್ಥೆ ತಯಾರಿಸಿರುವ ಕಾರ್ಯಸಾಧ್ಯತೆ(ಫೀಸಬಿಲಿಟಿ) ವರದಿ ಹೇಳಿದೆ. ಆ ವರದಿಯ ಆಧಾರದ ಮೇಲೆಯೇ ಸಿಎಂ ಅವರು ಡಿಪಿಆರ್ ಸಿದ್ಧಪಡಿಸಲು ಸೂಚಿಸಿದ್ದಾರೆ.
ಆದರೆ, ಕೇವಲ ಭೂಗತ ವಿದ್ಯುದಾಗರ ಸ್ಥಾಪಿಸುವ ಜಾಗಕ್ಕೇ 378 ಎಕರೆ ಅರಣ್ಯ ಭೂಮಿ ಬೇಕಾಗುತ್ತದೆ ಎಂಬುದು ಯೋಜನಾ ವರದಿಯ ಅಧಿಕೃತ ಅಂಶ. ಅದರ ಜೊತೆಗೆ, 15 ಕಿ.ಮೀ. ದೂರಕ್ಕೆ 10 ಮೀ.ಅಗಲದ 6 ಟನೆಲ್ಗಳ ನಿರ್ಮಾಣಕ್ಕೆ ಸುಮಾರು 140 ಎಕರೆ, ಪವರ್ಹೌಸ್ಗೆ ಸುಮಾರು 60 ಎಕರೆ, ವಿದ್ಯುದಾಗಾರಕ್ಕೆ ತಲುಪುವ 20 ಕಿ.ಮೀ. ಉದ್ದದ ರಸ್ತೆಗಾಗಿ 110 ಎಕರೆ, ಸುಮಾರು 60 ಕಿ.ಮೀ. ಉದ್ದದ ಬೃಹತ್ ತಂತಿ ಮಾರ್ಗಕ್ಕೆ 490 ಎಕರೆ ಅರಣ್ಯ ಬಲಿಯಾಗಬಹುದು ಎಂದು ಅಂದಾಜಿಸಲಾಗಿದೆ. ಅಂದರೆ ಸಮಾರು 800 ಎಕರೆಯಷ್ಟು ಭಾರೀ ಪ್ರಮಾಣದ ದಟ್ಟ ಅರಣ್ಯ ನಾಮಾವಶೇಷವಾಗಲಿದೆ. ಕಾಡಿನ ಜೊತೆಗೆ, ಅತ್ಯಂತ ಸೂಕ್ಷ್ಮ ಪರಿಸರದ ಶರಾವತಿ ನದಿ ಕಣಿವೆಯ ಆಯಕಟ್ಟಿನ ಪ್ರದೇಶ ಘಾಸಿಗೊಳ್ಳಲಿದೆ. ಅದರಲ್ಲೂ ಶರಾವತಿ ಅಭಯಾರಣ್ಯದ ನಟ್ಟನಡುವೆ ಈ ವಿದ್ಯುದಾಗರಗಳು ತಲೆ ಎತ್ತಲಿವೆ. ಅದರಲ್ಲೂ ಅಪರೂಪದ ಸಿಂಗಳೀಕದ ನೆಲೆ ಮಾಯವಾಗಲಿದೆ.
ಶರಾವತಿ ಕಣಿವೆಯುದ್ದಕ್ಕೂ ಈಗಾಗಲೇ ಹತ್ತು ಜಲಾಶಯಗಳನ್ನು ಕಟ್ಟಲಾಗಿದೆ. ಕೇವಲ 130 ಕಿ.ಮೀ ಹರಿಯುವ ನದಿಯ ಗುಂಟ ಜಲವಿದ್ಯುತ್ ಉತ್ಪಾದನೆಯ ಏಕೈಕ ಉದ್ದೇಶದ ಈ ಸರಣಿ ಜಲಾಶಯಗಳು ಮತ್ತು ವಿದ್ಯುತ್ ಉತ್ಪಾದನೆಯ ಚಟುವಟಿಕೆಗಳು ಹಾಗೂ ಸಂಬಂಧಿತ ನಗರೀಕರಣಗಳು ಇಡೀ ಕಣಿವೆಯ ಪರಿಸರವನ್ನ ಸರಿಪಡಿಸಲಾಗದಷ್ಟು ನಾಶ ಮಾಡಿವೆ, ಸುಮಾರು ಮೂರು ಲಕ್ಷ ಎಕರೆ ಕಾಡು ಈಗಾಗಲೇ ಮುಳುಗಿದೆ, ಸಾವಿರಾರು ಕುಟುಂಬಗಳು ಸಂತ್ರಸ್ತರಾಗಿ ಏಳು ದಶಕದ ಬಳಿಕವೂ ನೆಲೆ ಕಂಡುಕೊಳ್ಳಲಾಗದೆ ಗೋಳಿಡುತ್ತಿದ್ದಾರೆ. ವಿವಿಧ ಜಲವಿದ್ಯುತ್ ಯೋಜನೆಗಳ ಸಂತ್ರಸ್ತರಿಗೆ ಕನಿಷ್ಠ ಮನೆ ಕಟ್ಟಿಕೊಳ್ಳಲೂ ಸರ್ಕಾರ ಜಾಗ ನೀಡದೆ, ಸರ್ಕಾರಿ ಜಾಗದಲ್ಲಿ ಮನೆ-ಮಠ ಮಾಡಿಕೊಂಡವರನ್ನು 192 ಎ, ಅರಣ್ಯ ಒತ್ತುವರಿ ಮತ್ತಿತರ ಕಾಯ್ದೆಯಡಿ ಜೈಲಿಗೆ ಕಳಿಸಲಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಅಭಯಾರಣ್ಯದ ಎದೆಯನ್ನೇ ಬಗೆಯುವ ಮೂಲಕ ನದಿ ಮತ್ತು ನದಿ ಪರಿಸರ ಜಗತ್ತಿನ ಅತಿ ಸೂಕ್ಷ್ಮ ಪರಿಸರವನ್ನೇ ಬುಡಮೇಲು ಮಾಡುವ ಯೋಜನೆಗೆ ಅರಣ್ಯ ಮತ್ತು ಪರಿಸರ ಕಣ್ಗಾವಲು ಸಂಸ್ಥೆಗಳು ಹೇಗೆ ಹಸಿರು ನಿಶಾನೆ ತೋರಿವೆ ಎಂಬುದು ಈಗ ಕಾಡುತ್ತಿರುವ ಪ್ರಶ್ನೆ!
ಏಕೆಂದರೆ, ಪ್ರಸ್ತಾವಿತ ಪ್ರದೇಶದಲ್ಲಿ, ಈವರೆಗೆ ಮನುಷ್ಯ ಹಸ್ತಕ್ಷೇಪವೇ ಇಲ್ಲದ ಕಾಡಿನ ನಡುವೆ ಭೂ ಪರೀಕ್ಷೆಗಾಗಿ ಸುಮಾರು 15 ಆಳ ಕಿಂಡಿ(ದೊಡ್ಡ ಬೋರ್) ಕೊರೆಯಲು ಮತ್ತು ಯೋಜನೆಯ ಸರ್ವೆ ಕಾರ್ಯಕ್ಕೆ ರಾಜ್ಯ ವನ್ಯಜೀವಿ ಮಂಡಳಿ ಹಸಿರು ನಿಶಾನೆ ತೋರಿದೆ. ಕಳೆದ ಸೆಪ್ಟೆಂಬರ್ 26ರಂದು ನಡೆದ ವನ್ಯಜೀವಿ ಮಂಡಳಿ ಸಭೆಯಲ್ಲಿ ಅನುಮತಿ ನೀಡುವ ನಿರ್ಧಾರ ಕೈಗೊಂಡು, ಕೇಂದ್ರ ಮಂಡಳಿಗೆ ಶಿಫಾರಸು ಮಾಡಲಾಗಿದೆ. ಸಿಂಗಳೀಕ, ಕಾಡುಪಾಪ, ಕಾಳಿಂಗ ಸರ್ಪ, ಕಾಡುಕೋಣ, ಕರಿ ಚಿರತೆ, ಆನೆ, ಮಲಬಾರ್ ಮುಂಗಟ್ಟೆ ಮುಂತಾದ ಅಪರೂಪದ ಜೀವವೈವಿಧ್ಯದ ನೆಲೆಯಾಗಿರುವ ಶರಾವತಿ ಅಭಯಾರಣ್ಯದ ನಟ್ಟನಡುವೆ ಇಂತಹ ಕಿಂಡಿ ಕೊರೆಯಲು ಬೃಹತ್ ಯಂತ್ರಗಳು ಸಂಚರಿಸಲು ಎಷ್ಟು ಕಾಡು ನಾಶವಾಗಲಿದೆ. ಸುಮಾರು 370 ಎಕರೆ ಪ್ರದೇಶದಲ್ಲಿ 15 ಕಿಂಡಿ ಕೊರೆದರೆ ಅದರ ಪರಿಣಾಮ ಸೂಕ್ಷ್ಮ ಪರಿಸರದ ಮೇಲೆ ಏನೇನಾಗಲಿದೆ? ಎಂಬ ಪ್ರಶ್ನೆಗಳನ್ನೆಲ್ಲಾ ಬದಿಗೆ ಸರಿಸಿ ಮಂಡಳಿ ಅನುಮತಿ ನೀಡಿದ್ದು ಹೇಗೆ? ಅಲ್ಲದೆ, ಕಿಂಡಿ ಕೊರೆಯಲು ಮತ್ತು ಸರ್ವೆ ನಡೆಸಲು ಅನುಮತಿ ನೀಡುವುದು ಎಂದರೆ, ಇಡೀ ಯೋಜನೆಗೆ ಹಸಿರು ನಿಶಾನೆ ತೋರಿಸಿದಂತೆಯೇ ಅಲ್ಲವೆ?
ಅಲ್ಲದೆ ಖ್ಯಾತ ವನ್ಯಜೀವಿ ತಜ್ಞ ಸಂಜಯ್ ಗುಬ್ಬಿ ಸೇರಿದಂತೆ ಹಲವು ತಜ್ಞರು, ಅಧಿಕಾರಿಗಳನ್ನೊಳಗೊಂಡ ವನ್ಯಜೀವಿ ಮಂಡಳಿ ಇಂತಹ ಇಡೀ ಪಶ್ಚಿಮಘಟ್ಟಕ್ಕೇ ಅನಾಹುತಕಾರಿಯಾಗಬಲ್ಲ ಯೋಜನೆಯ ಸಮೀಕ್ಷೆಗೆ, ಕಿಂಡಿ ಕೊರೆಯಲು ಅನುಮತಿ ನೀಡಿರುವುದು ಅಚ್ಚರಿ ತರಿಸಿದೆ ಮತ್ತು ಹಲವು ಅನುಮಾನಗಳಿಗೂ ಕಾರಣವಾಗಿದೆ. ಏಕೆಂದರೆ, ಇದೇ ಸಂಜಯ್ ಗುಬ್ಬಿ ಅವರು ಕೆಲವು ವರ್ಷಗಳ ಹಿಂದೆ ಅಭಯಾರಣ್ಯಗಳಿಗೆ ರೈತರ ಜಾನುವಾರುಗಳನ್ನು ಬಿಡಕೂಡದು ಎಂದು ವಾದಿಸುತ್ತಾ, ‘ದನಕರುಗಳ ಕಾಲಿನ ಗೊರಸಿನಿಂದ ಕಾಡಿನ ಮೇವು ಮತ್ತು ಮೇಲ್ಮಣ್ಣು ಕಿತ್ತುಹೋಗುವುದರಿಂದ ವನ್ಯಜೀವಿಗಳಿಗೆ ಹುಲ್ಲಿನ ಕೊರತೆಯಾಗುತ್ತದೆ. ಹುಲ್ಲು ಇಲ್ಲದೆ ಜಿಂಕೆ ಇರಲಾರವು, ಜಿಂಕೆ ಇಲ್ಲದೆ ಹುಲಿ ಇರಲಾರದು. ಹೀಗೆ ದನಕರುಗಳು ಕಾಡಿಗೆ ಹೋದರೆ ಇಡೀ ವನ್ಯಜೀವಿ ಸಂಕುಲವೇ ನಾಶವಾಗುತ್ತದೆ’ ಎಂದಿದ್ದರು. ಆದರೆ, ಇಂದು ಅದೇ ಗುಬ್ಬಿ ಪ್ರಮುಖವಾಗಿರುವ ವನ್ಯಜೀವಿ ಮಂಡಳಿ, ಇಡೀ ಜಗತ್ತಿನ ಅತ್ಯಂತ ಸೂಕ್ಷ್ಮ ಪರಿಸರದ ಹೃದಯಕ್ಕೆ ಕಿಂಡಿ ಕೊರೆಯಲು ‘ನಮ್ಮದೇನೂ ಅಭ್ಯಂತರವಿಲ್ಲ’ ಎಂದು ಷರಾ ಬರೆದಿರುವುದು ಸಹಜವಾಗೇ ಪರಿಸರಪರವಾದ ಕಾಳಜಿಗಳು ಎಷ್ಟು ನೈಜ, ಎಷ್ಟು ಸೋಗಲಾಡಿ ಎಂಬ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿವೆ.
ಹಾಗೆಯೇ ಬೆಂಗಳೂರಿಗೆ ಶರಾವತಿ ನೀರು ಕೊಂಡೊಯ್ಯುವ ಕುರಿತ ಬಿ ಎನ್ ತ್ಯಾಗರಾಜ್ ವರದಿಯಲ್ಲಿ ಪ್ರಸ್ತಾಪಿಸಿರುವ, ಶರಾವತಿ ಕೊಳ್ಳದ ಜಲವಿದ್ಯುತ್ ಉತ್ಪಾದನೆಯನ್ನು ಹಂತಹಂತವಾಗಿ ಸ್ಥಗಿತಗೊಳಿಸಿ ಸುಮಾರು 70 ಟಿಎಂಸಿಯಷ್ಟು(ಲಿಂಗನಮಕ್ಕಿ ಜಲಾಶಯದ ಶೇ.50ರಷ್ಟು) ನೀರನ್ನು ಬೆಂಗಳೂರಿಗೆ ಒಯ್ಯಬಹುದು ಎಂಬುದನ್ನು ಒಪ್ಪಿಕೊಂಡು ಯೋಜನೆ ಡಿಪಿಆರ್ ತಯಾರಿಗೆ ಸಜ್ಜಾಗಿದ್ದ ರಾಜ್ಯ ಸರ್ಕಾರ, ಇದೀಗ ಉಲ್ಟಾ ಹೊಡೆದಿರುವುದು ಯಾಕೆ? ಬೆಂಗಳೂರಿಗೆ ನೀರು ಒಯ್ಯಲು ಮಾತ್ರ ಜಲವಿದ್ಯುತ್ ಉತ್ಪಾದನೆ ಬೇಡ, ಪರ್ಯಾಯ ಮೂಲಗಳಿಂದ ವಿದ್ಯುತ್ ಪಡೆಯಬಹುದು, ನೀರು ಮಾತ್ರ ಬೇಕು ಎನ್ನುವ ಸರ್ಕಾರ, ಇಡೀ ದೇಶದ ಶ್ವಾಸಕೋಶದಂತಿರುವ ಸಹ್ಯಾದ್ರಿಯ ಶ್ರೇಣಿಯ ಜೀವಾಳವಾಗಿರುವ ಶರಾವತಿ ಕಣಿವೆಗೆ ಕನ್ನ ಹಾಕಲು ಮಾತ್ರ ಜಲವಿದ್ಯುತ್ ಯೋಜನೆ ಅನಿವಾರ್ಯ ಎನ್ನುತ್ತಿರುವುದು ಏಕೆ?
ವನ್ಯಜೀವಿ ಮಂಡಳಿ, ರಾಜ್ಯ ಸರ್ಕಾರಗಳು ಹೀಗೆ ಭೂಗತ ವಿದ್ಯುದಾಗಾರ ಯೋಜನೆ ವಿಷಯದಲ್ಲಿ; ಪರಿಸರ ಮತ್ತು ಜಲವಿದ್ಯುತ್ ಕುರಿತ ತಮ್ಮ ಹಿಂದಿನ ನಿಲುವುಗಳಿಗೆ ತದ್ವಿರುದ್ಧ ನಿಲುವು ತಳೆದು ದಿಢೀರ್ ಡಿಪಿಆರ್ ತಯಾರಿ, ಸಮೀಕ್ಷೆಗೆ ಅನುಮತಿ ನೀಡಿರುವುದ ಹಿಂದಿನ ಹಕೀಕತ್ತು ಏನು ಎಂಬುದು ಹಲವು ಅನುಮಾನಗಳಿಗೆ ಎಡೆಮಾಡಿದೆ. ಅಲ್ಲದೆ, ಶರಾವತಿ ನೀರಿನ ವಿಷಯದಲ್ಲಿ ಶರಾವತಿ ನದಿ ಉಳಿಸಿ ಹೋರಾಟ ಒಕ್ಕೂಟ ಸಂಘಟಿಸಿದ್ದ ಜನಹೋರಾಟಕ್ಕೆ ಭಾರೀ ದೊಡ್ಡ ಬೆಂಬಲ ನೀಡಿದ್ದ ಕೆಲವು ವೃತ್ತಿಪರ ಪರಿಸರ ಹೋರಾಟಗಾರರು, ಬಿಜೆಪಿ ಮತ್ತು ಅದರ ಸಂಘಪರಿವಾರದ ಪ್ರಮುಖರು, ಕೆಲವು ಮಠಾಧೀಶರುಗಳು, ನೀರಿನ ವಿಷಯಕ್ಕಿಂತ ನೂರು ಪಟ್ಟು ಗಂಭೀರವಾಗಿರುವ ಈ ವಿಷಯದಲ್ಲಿ ಯಾಕೆ ಉತ್ಸಾಹ ತೋರುತ್ತಿಲ್ಲ? ಪಶ್ಚಿಮಘಟ್ಟ ಕಾರ್ಯಪಡೆಯಂತಹ ಸಂಸ್ಥೆಯ ಸಾರಥ್ಯ ವಹಿಸಿದವರು ಕೂಡ ಮೌನಕ್ಕೆ ಶರಣಾಗಿರುವುದರ ಹಿಂದಿನ ಕಾರಣವೇನು? ಇವರೆಲ್ಲರ ಪರಿಸರ ಕಾಳಜಿ ಕೇವಲ ರಾಜಕೀಯ ಹಿತಾಸಕ್ತಿಗೆ ಸೀಮಿತವೇ? ತಮ್ಮ ಸಿದ್ಧಾಂತಕ್ಕೆ ಹೊರತಾದ ಸಿದ್ಧಾಂತದ, ರಾಜಕೀಯ ಪಕ್ಷದವರು ಅಧಿಕಾರದಲ್ಲಿದ್ದಾಗ ಮಾತ್ರ ಇವರ ಪರಿಸರಪ್ರೇಮ ಭುಗಿಲೇಳುವುದೇ? ಎಂಬ ಪ್ರಶ್ನೆಗಳು ಕೂಡ ಈ ಕಾಡತೊಡಗಿವೆ.
ಹೀಗೆ ಹಲವು ಅನುಮಾನ, ಪ್ರಶ್ನೆ ಮತ್ತು ಆತಂಕಗಳ ನಡುವೆ ಮಲೆನಾಡಿನ ಶರಾವತಿ ಕಣಿವೆಯಲ್ಲಿ ಮತ್ತೊಂದು ಅನಾಹುತಕ್ಕೆ ಪರಿಸರ ಕಾಯಬೇಕಾದ ವನ್ಯಜೀವಿ ಮಂಡಳಿಯವರು ಮತ್ತು ಅದನ್ನು ಖಾತ್ರಿಪಡಿಸಬೇಕಾದ ಸರ್ಕಾರವೇ ಮುನ್ನುಡಿ ಬರೆದಿವೆ. ಸದ್ಯಕ್ಕೆ ಪರಿಸರವಾದಿಗಳ ಹೆಸರಲ್ಲಿ ಮಂಡಳಿಗಳ ಕುರ್ಚಿ ಏರಿದವರೂ ಮತ್ತು ಪರಿಸರವಾದದ ಹೆಸರಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳುವರಿಬ್ಬರೂ ಶರಾವತಿಯ ಬೆನ್ನಿಗೆ ಇರಿದಿದ್ದಾರೆ! ಎಂದಿನಂತೆ ಕಣಿವೆಯ ಜನ ಕೇವಲ ಮೂರು ತಿಂಗಳಲ್ಲೇ ಮತ್ತೊಮ್ಮೆ ತಮ್ಮ ನದಿ ಮತ್ತು ನದಿ ಕಣಿವೆಗೆ ಕನ್ನ ಹಾಕುವವರ ವಿರುದ್ಧ ಮತ್ತೊಂದು ಹೋರಾಟ ಕಟ್ಟಲು ಸಜ್ಜಾಗುತ್ತಿದ್ದಾರೆ. ಆದರೆ, ಈ ಬಾರಿ ಬಿಜೆಪಿ ಅಧಿಕಾರದಲ್ಲಿದೆ. ಹಾಗಾಗಿ ಸೋಗಲಾಡಿ ಪರಿಸರವಾದಿಗಳ ದನಿ ಉಡುಗಿಹೋಗಿದೆ! ನೈಜ ಮಲೆನಾಡಿನ ಮಕ್ಕಳ ದನಿ ಎಷ್ಟು ಜೋರಾಗಿ ಕೇಳಲಿದೆ ಎಂಬುದನ್ನು ಮುಂದಿನ ದಿನಗಳು ನಿರ್ಧರಿಸಲಿವೆ!