ಟಿಪ್ಪು ವಿವಾದ ಮತ್ತೆ ಗರಿಗೆದರಿದೆ. ಮಹಾರಾಷ್ಟ್ರದ ಚುನಾವಣೆಯಲ್ಲಿ ವಿ ಡಿ ಸಾವರ್ಕರ್ ಅವರಿಗೆ ಭಾರತ ರತ್ನ ಪುರಸ್ಕಾರ ನೀಡುವುದಾಗಿ ಪ್ರಣಾಳಿಕೆಯಲ್ಲಿ ಹೇಳುವ ಮೂಲಕ ಇಡೀ ಚುನಾವಣೆಯನ್ನು ಕೋಮುವಾದಿ ನೆಲೆಯಲ್ಲಿ ನಿರ್ವಹಿಸಿದ ಬಿಜೆಪಿ, ಇದೀಗ ರಾಜ್ಯದ 15 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗೂ ಅದೇ ಅಜೆಂಡಾವನ್ನು ನಿಗದಿ ಮಾಡಿದೆ. ಅದಕ್ಕಾಗಿ ಈಗ ಟಿಪ್ಪು ದಾಳ ಉರುಳಿಸಲಾಗಿದೆ.
ಅಸ್ತಿತ್ವಕ್ಕೆ ಬರುತ್ತಲೇ ಟಿಪ್ಪು ಜಯಂತಿ ರದ್ದು ಮಾಡುವ ನಿರ್ಣಯ ಕೈಗೊಂಡಿದ್ದ ಬಿ ಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ, ಇದೀಗ ಪ್ರವಾಹ ಪರಿಸ್ಥಿತಿ ಮತ್ತು ಪುನರ್ವಸತಿ ನಿರ್ಣಯದ ವಿಷಯದಲ್ಲಿ ತನ್ನ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಟಿಪ್ಪು ವಿಷಯವನ್ನು ಕೈಗೆತ್ತಿಕೊಂಡಿದೆ. ಹೀಗೆ ಜನರ ಗಮನವನ್ನು ಜ್ವಲಂತ ವಿಷಯಗಳಿಂದ ದಿಕ್ಕುತಪ್ಪಿಸುವ ತಂತ್ರಗಾರಿಕೆ ಬಿಜೆಪಿಗೆ ಸಿದ್ಧಿಸಿಬಿಟ್ಟಿದೆ.
ಹಾಗಾಗಿ ಉಳಿದ ರಾಜಕೀಯ ಪಕ್ಷಗಳು ಮತ್ತು ಜನಪರ ಸಂಘಟನೆಗಳು ಬಿಜೆಪಿಯ ಇಂತಹ ತಂತ್ರಗಾರಿಕೆಯನ್ನು ಅರಿತು ಅದರ ಪ್ರತಿ ತಂತ್ರಗಾರಿಕೆ ಹೆಣೆಯುವ ಮುನ್ನವೇ ಅವರುಗಳು ಬಿಜೆಪಿ ಬೀಸಿದ ಜಾಲದಲ್ಲಿ ಸಿಲುಕಿಕೊಂಡಿದ್ದಾರೆ. ಈಗ ಸುದ್ದಿ ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಬೀದಿ ಕಟ್ಟೆ ಚರ್ಚೆಗಳಲ್ಲೂ ಟಿಪ್ಪುವಿನ ಪರ ವಿರೋಧದ ಚರ್ಚೆಗಳೇ ಬಿಸಿಯೇರಿಸಿವೆ. ಅಷ್ಟರಮಟ್ಟಿಗೆ ಬಿಜೆಪಿಯ ತಂತ್ರಗಾರಿಕೆ ಫಲಕೊಟ್ಟಿದೆ.
ಪ್ರವಾಹ ಸಂತ್ರಸ್ತರ ಗೋಳು, ಸತಾಯಿಸಿ ಸತಾಯಿಸಿ ಪ್ರವಾಹ ಬಂದುಹೋಗಿ ಎರಡು ತಿಂಗಳ ಬಳಿಕ ಕೇವಲ 1200 ಕೋಟಿ ರೂ. ಪರಿಹಾರ ಘೋಷಿಸಿ ಕೈತೊಳೆದುಕೊಂಡು ಹೊಣೆಗೇಡಿತನ ಮತ್ತು ಕನ್ನಡಿಗರ ಬಗೆಗಿನ ದಿವ್ಯ ನಿರ್ಲಕ್ಷ್ಯ, ನಿರಂತವಾಗಿ ಮುಂದುವರಿದಿರುವ ಮಳೆ ರಾಜ್ಯಾದ್ಯಂತ ಕೃಷಿ ಬೆಳೆಗಳಿಗೆ ತಂದಿರುವ ಗಂಡಾಂತರ, ಬೆಳೆ ವಿಮೆ ಪರಿಹಾರದಲ್ಲಿ ಆಗಿರುವ ವಿಳಂಬ, ರೈತರು, ಹೈನುಗಾರರಿಗೆ ಮರಣಶಾಸನವಾಗಲಿರುವ ಆರ್ ಸಿಇಪಿ ಒಪ್ಪಂದದ ವಿಷಯದಲ್ಲಿ ಆಳುವ ಬಿಜೆಪಿಯ ಸ್ಪಷ್ಟ ನಿಲುವು ಏನು ಎಂಬ ಶ್ರೀಸಾಮಾನ್ಯನ ಸಾವು-ಬದುಕಿನ ಪ್ರಶ್ನೆಗಳನ್ನು ಬಿಜೆಪಿ ಒಂದೇ ಏಟಿಗೆ ನಿರಾಯಾಸವಾಗಿ ನಿವಾಳಿಸಿ ಬಿಸಾಕಿದೆ. ಟಿಪ್ಪು ದಾಳ ಅಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಿದೆ.
ಬಿಜೆಪಿಗೆ ಪ್ರವಾಹ ಸಂತ್ರಸ್ತರ ಪರಿಹಾರ ಮತ್ತು ಪುನರ್ವಸತಿ ವಿಷಯದಲ್ಲಿ ತನ್ನ ವೈಫಲ್ಯಗಳು ಉಪ ಚುನಾವಣಾ ಕಣದಲ್ಲಿ ತನಗೆ ತಿರುಗುಬಾಣವಾಗಲಿವೆ. ಅದರಲ್ಲೂ ಬಹುತೇಕ ಚುನಾವಣಾ ಕ್ಷೇತ್ರಗಳಲ್ಲೇ ಭೀಕರ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಆ ವೇಳೆ ತಾನು ಸಮ್ಮಿಶ್ರ ಸರ್ಕಾರ ಕೆಡವಿ ಆಪರೇಷನ್ ಕಮಲದ ಮೂಲಕ ತನ್ನ ಸರ್ಕಾರ ರಚಿಸುವ ಸರ್ಕಸ್ ಮಾಡುತ್ತಿದ್ದೆ. ಅತ್ತ ಜನ ಪ್ರವಾಹದಲ್ಲಿ ಸಿಲುಕಿ ನಲುಗುತ್ತಿದ್ದರೆ, ಇತ್ತ ತಾನು ಆ ಕ್ಷೇತ್ರಗಳ ಶಾಸಕರನ್ನು ಹೈಜಾಕ್ ಮಾಡಿ ಮುಂಬೈ ರೆಸಾರ್ಟಿನಲ್ಲಿಟ್ಟಿದ್ದೆ. ಜನರ ಗೋಳು ಕೇಳುವವರೇ ದಿಕ್ಕಿರಲಿಲ್ಲ. ಸರ್ಕಾರ ರಚಿಸಿದ ಬಳಿಕವೂ ಜನರ ಸಂಕಷ್ಟಕ್ಕೆ ಸರಿಯಾಗಿ ಸ್ಪಂದಿಸುವುದು ಸಾಧ್ಯವಾಗಲೇ ಇಲ್ಲ. ಸಚಿವ ಸಂಪುಟ ರಚನೆಗಾಗಿಯೇ ಹದಿನೈದು ದಿನಗಟ್ಟಲೆ ದಿಲ್ಲಿ ದರ್ಬಾರಿನ ಕಂಬ ಸುತ್ತಿದ್ದೇ ಆಯ್ತು. ಆ ನಡುವೆ ರಾಜ್ಯದ ಮಹಾಮಳೆಯಲ್ಲಿ ಲಕ್ಷಾಂತರ ಜನರ ಭವಿಷ್ಯವೇ ಕೊಚ್ಚಿ ಹೋಯ್ತು. ಮನೆ ಮಠ, ಆಸ್ತಿಪಾಸ್ತಿ, ಬೆಳೆ ಕಳೆದುಕೊಂಡವರು ಬೀದಿಪಾಲಾದರು. ಅವರಿಗೆ ತಾತ್ಕಾಲಿಕ ಗಂಜಿ ಕೇಂದ್ರಗಳನ್ನು ತೆರೆದು, ಆಹಾರ, ಆರೋಗ್ಯದ ಕಾಳಜಿ ವಹಿಸಿದ್ದಕ್ಕಿಂತ ಗಂಜಿ ಕೇಂದ್ರಕ್ಕೆ ಸಂಘಪರಿವಾರದ ಭಾಷೆಯಲ್ಲಿ ಕಾಳಜಿ ಕೇಂದ್ರ ಎಂದು ಮರುನಾಮಕರಣ ಮಾಡಿದ್ದೇ ದೊಡ್ಡ ಸಾಧನೆಯಾಯ್ತು.
ಈ ನಡುವೆ ಪ್ರವಾಹ ಸಂತ್ರಸ್ತ ಇತರೆ ನೆರೆಹೊರೆಯ ರಾಜ್ಯಗಳಿಗೆ ತತಕ್ಷಣಕ್ಕೆ ಸ್ಪಂದಿಸಿ ಸಾವಿರಾರು ಕೋಟಿ ರೂ. ತುರ್ತು ಪರಿಹಾರ ನೀಡಿದ್ದ ತಮ್ಮದೇ ಕೇಂದ್ರ ಸರ್ಕಾರ, ರಾಜ್ಯದ ಪ್ರವಾಹ ಸಂತ್ರಸ್ತರ ವಿಷಯದಲ್ಲಿ ಮಾತ್ರ ಬರೋಬ್ಬರಿ 60 ದಿನಗಳ ವಿಳಂಬ ಧೋರಣೆ ತಳೆಯಿತು. ರಾಜ್ಯ ಸರ್ಕಾರ ಸುಮಾರು 38 ಸಾವಿರ ಕೋಟಿ ನಷ್ಟವಾಗಿದೆ ಎಂದು ವರದಿ ಸಲ್ಲಿಸಿದರೆ, ಅದನ್ನು ಸಾರಾಸಗಟಾಗಿ ತಳ್ಳಿಹಾಕಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರೂ ಆದ ಗೃಹ ಸಚಿವ ಅಮಿತ್ ಶಾ ಅವರು, ಕೊನೆಗೂ ರಾಜ್ಯಕ್ಕೆ ಘೋಷಣೆ ಮಾಡಿದ್ದು ಕೇವಲ 1200 ಕೋಟಿಯಷ್ಟು ಬಿಡಿಗಾಸು ಮಾತ್ರ. ಪ್ರಧಾನಿ ಮೋದಿಯವರಂತೂ ಕನ್ನಡಿಗರ ಸಂಕಷ್ಟದತ್ತ ಕಣ್ಣೆತ್ತಿಯೂ ನೋಡಲಿಲ್ಲ. ಭೀಕರ ಪ್ರವಾಹದ ನಡುವೆಯೇ ಬೆಂಗಳೂರಿನ ಇಸ್ರೋಗೆ ಬಂದುಹೋದರೂ ಪ್ರವಾಹ ಪ್ರದೇಶ ಸಮೀಕ್ಷೆ ಇರಲಿ, ಕನಿಷ್ಠ ಪಕ್ಕದಲ್ಲೇ ನಿಂತಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಅವರೊಂದಿಗೆ ಒಂದು ನಿಮಿಷ ಕೂಡ ರಾಜ್ಯದ ಭೀಕರ ಪರಿಸ್ಥಿತಿಯ ಬಗ್ಗೆ ಚರ್ಚೆ ಮಾಡಲಿಲ್ಲ. ಮುಕ್ಕಾಲು ಭಾಗ ರಾಜ್ಯವೇ ಪ್ರವಾಹದಲ್ಲಿ ಮುಳುಗಿರುಬಾಗಲೂ ಪ್ರಧಾನಿ ಮೋದಿಯವರು ಕನ್ನಡಿಗರ ಬಗ್ಗೆ ತೋರಿದ ಅಸೀಮ ನಿರ್ಲಕ್ಷ್ಯ ಈ ಉಪಚುನಾವಣೆಯ ವಿಷಯವಾಗಲೇಬೇಕಿತ್ತು.
ಹಾಗೇ ಆರ್ ಸಿ ಇಪಿ ಎಂಬ ದೇಶದ ಕೃಷಿಕರ ಪಾಲಿಗೆ ಮರಣಶಾಸನಕ್ಕೆ ಸಹಿ ಹಾಕಲು ಮೋದಿಯವರು ತುದಿಗಾಲಲ್ಲಿ ನಿಂತಿದ್ದಾರೆ. ಆಸ್ಟ್ರೇಲಿಯಾ, ಚೀನಾ, ಇಂಡೋನೇಷ್ಯಾ, ಜಪಾನ್, ಕೊರಿಯಾ, ಮಲೇಷ್ಯಾ, ನ್ಯೂಜಿಲೆಂಡ್ ಮುಂತಾದ 15 ದೇಶಗಳ ಕೃಷಿ, ಹೈನುಗಾರಿಕೆ, ಪೌಲ್ಟ್ರಿ ಸೇರಿದಂತೆ ಎಲ್ಲಾ ಉತ್ಪನ್ನಗಳ ಮುಕ್ತ ಮಾರುಕಟ್ಟೆಗೆ ಅವಕಾಶ ಕಲ್ಪಿಸುವ ಈ ಒಪ್ಪಂದ, 1991ರ ಗ್ಯಾಟ್ ಒಪ್ಪಂದದ ಬಳಿಕದ ಬಹುದೊಡ್ಡ ಮುಕ್ತ ಮಾರುಕಟ್ಟೆ ಆರ್ಥಿಕತೆಯ ಪ್ರಯತ್ನ. ಆದರೆ, ಅಡಿಕೆ, ರಬ್ಬರ್, ಸಾಂಬಾರ ಪದಾರ್ಥ, ಹಾಗೂ ಹಾಲು ಮತ್ತು ಹಾಲಿನ ಉತ್ಪನ್ನಗಳ ವಿಷಯದಲ್ಲಿ ದೇಶದ ರೈತರಿಗೆ ಈ ಹದಿನೈದು ದೇಶಗಳ ಪೈಪೋಟಿ ಎದುರಾಗಲಿದೆ. ಚೀನಾ, ಜಪಾನ್, ನ್ಯೂಜಿಲೆಂಡ್, ಆಸ್ಟ್ರೇಲಿಯಾದಂತಹ ದೇಶಗಳ ಹೈನುಗಾರಿಕೆಯ ಗುಣಮಟ್ಟ ಮತ್ತು ಬೆಲೆ ಸಮರದ ಎದುರು ನಮ್ಮ ಹೈನುಗಾರ ರೈತರು ಸ್ಪರ್ಧಿಸಲಾಗದು. ಹಾಗೇ ಪಿಲಿಫೈನ್ಸ್, ಇಂಡೋನೇಷ್ಯಾ, ಮಲೇಷ್ಯಾದಂತಹ ದೇಶಗಳ ಅಗ್ಗದ ಅಡಿಕೆ ಮತ್ತು ಸಾಂಬಾರು ಪದಾರ್ಥಗಳ ಮುಂದೆ ನಮ್ಮ ರೈತರ ಉತ್ಪನ್ನಗಳು ಬೆಲೆ ಕುಸಿತದ ಬಿರುಗಾಳಿಗೆ ಸಿಲುಕಿ ತೂರಿ ಹೋಗಲಿವೆ.
ಆ ಹಿನ್ನೆಲೆಯಲ್ಲಿ ಪ್ರಮುಖವಾಗಿ ರೈತರ ಪಾಲಿನ ಮರಣಶಾಸನವಾಗಿರುವ ಈ ಒಪ್ಪಂದದಿಂದ ಕೃಷಿ ಮತ್ತು ಹೈನುಗಾರಿಕೆ ಉತ್ಪನ್ನಗಳನ್ನು ಹೊರಗಿಡಬೇಕು ಎಂಬುದು ರೈತರ ಆಗ್ರಹ. ಆದರೆ, ಕೇಂದ್ರ ಬಿಜೆಪಿ ಸರ್ಕಾರವಾಗಲೀ ಸ್ವತಃ ಪ್ರಧಾನಿ ಮೋದಿಯವರಾಗಲೀ ಈ ಬಗ್ಗೆ ಜನರ ಆತಂಕ ನಿವಾರಣೆಯ ಪ್ರಯತ್ನ ಮಾಡುತ್ತಿಲ್ಲ. ಈಗಾಗಲೇ ಆರ್ ಸಿ ಇಪಿ ವಿರುದ್ಧದ ಹೋರಾಟ ದೇಶವ್ಯಾಪಿ ಹಬ್ಬಿದ್ದು ರಾಜ್ಯದಲ್ಲೂ ದೊಡ್ಡ ಪ್ರಮಾಣದಲ್ಲಿ ಕೃಷಿಕರು ಬೀದಿಗಿಳಿಯತೊಡಗಿದ್ದಾರೆ. ಹಾಗಾಗಿ ಖಂಡಿತವಾಗಿಯೂ ಈ ಬಾರಿಯ 15 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಆರ್ ಸಿ ಇಪಿ ಒಪ್ಪಂದ ಮತ್ತು ಅದು ರಾಜ್ಯದ ರೈತ ಸಮುದಾಯದ ಮೇಲೆ ಬೀರುವ ಪರಿಣಾಮದ ಹಿನ್ನೆಲೆಯಲ್ಲಿ ಆಡಳಿತ ಪಕ್ಷ ಬಿಜೆಪಿಯ ನಿಲುವು ಏನು ಎಂಬುದು ದೊಡ್ಡ ಚರ್ಚೆಯ ವಿಷಯವಾಗಲೇಬೇಕಿತ್ತು.
ಹಾಗೆಯೇ, ಅಸ್ತಿತ್ವದಲ್ಲಿದ್ದ ಒಂದು ಸರ್ಕಾರವನ್ನು ಹಣ ಮತ್ತು ಅಧಿಕಾರದ ಆಮಿಷದ ಮೂಲಕ ಆಪರೇಷನ್ ಕಮಲ ನಡೆಸಿ ಕೆಡವಿದ್ದು ಮತ್ತು ಅಂತಹ ಆಮಿಷಕ್ಕೊಳಗಾದ ಶಾಸಕರ ಬಲದಲ್ಲಿ ಹೊಸ ಸರ್ಕಾರವನ್ನು ಅಧಿಕಾರಕ್ಕೆ ತಂದಿದ್ದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಷ್ಟು ಸರಿ? ನೈತಿಕವಾಗಿ ಎಂತಹ ನಡೆ ? ಈ ಹದಿನೈದು ಕ್ಷೇತ್ರಗಳ ಮೇಲೆ ಅನಗತ್ಯವಾಗಿ, ಕೇವಲ ಒಂದು ಪಕ್ಷ, ಒಬ್ಬ ವ್ಯಕ್ತಿಯ ಅಧಿಕಾರದ ಲಾಲಸೆಗಾಗಿ ಉಪ ಚುನಾವಣೆಯನ್ನು ಹೇರಿದ್ದು ಏಕೆ? ಹೀಗೆ ನೈಜವಲ್ಲದ, ಮತ್ತು ಅನಿವಾರ್ಯವಲ್ಲದ ಕಾರಣಗಳಿಂದಾಗಿ ಮೇಲಿಂದ ಮೇಲೆ ಚುನಾವಣೆಗಳನ್ನು ಹೇರುವುದು ಜನತಂತ್ರಕ್ಕೆ ಮಾಡುವ ಅಪಮಾನವಲ್ಲವೆ? ಅಲ್ಲದೆ ಇಂತಹ ಅನಗತ್ಯ ಚುನಾವಣೆಯ ವೆಚ್ಚದ ಹೊರೆಯನ್ನು ಯಾಕೆ ಜನರ ಮೇಲೆ ಹಾಕಲಾಗುತ್ತಿದೆ ಎಂಬ ಪ್ರಶ್ನೆಗಳು ಕೂಡ ಈ ಬಾರಿಯ ಉಪ ಚುನಾವಣೆಯಲ್ಲಿ ಚರ್ಚೆಗೆ ಬರಬೇಕಾಗಿತ್ತು.
ಹಾಗೇ ಚುನಾವಣೆ ನಡೆಯುತ್ತಿರುವ ಹದಿನೈದು ಕ್ಷೇತ್ರಗಳಲ್ಲಿ ಅಲ್ಲಿಯದ್ದೇ ಆದ ಹತ್ತಾರು ಗಂಭೀರ ಸಮಸ್ಯೆಗಳು, ಸರ್ಕಾರದ ವೈಫಲ್ಯಗಳು ಇವೆ. ಆ ವಿಷಯಗಳು ಖಂಡಿತವಾಗಿಯೂ ಆಯಾ ಕ್ಷೇತ್ರವ್ಯಾಪ್ತಿಯಲ್ಲಿ ಚುನಾವಣೆಯ ವಾಗ್ವಾದದ ವಿಷಯವಾಗಬೇಕಿದ್ದವು. ಆ ಮೂಲಕ ರಾಜಕೀಯ ನಾಯಕರ ಗಮನ ಸಳೆಯಬೇಕಾಗಿದ್ದವು.
ಆದರೆ, ಈಗ ನೋಡಿ ಏನಾಗಿದೆ. ಇಡೀ ರಾಜ್ಯದಾದ್ಯಂತ ಟಿಪ್ಪು ಚರಿತ್ರೆಯನ್ನು ಪಠ್ಯಪುಸ್ತಕಗಳಿಂದ ತೆಗೆಯುತ್ತೇವೆ ಎಂದು ಸಿಎಂ ಯಡಿಯೂರಪ್ಪ ಹೇಳಿಕೆ ಪ್ರತಿಧ್ವನಿಸತೊಡಗಿದೆ. ಸಿಎಂ ಹೇಳಿಕೆಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸೇರಿದಂತೆ ಆರ್ ಅಶೋಕ್ ಮತ್ತಿತರ ಸಚಿವರು, ಬಿಜೆಪಿ ಶಾಸಕರು ಕೂಡ ದನಿ ಗೂಡಿಸಿದ್ದಾರೆ. ಟಿಪ್ಪು ಹಿಂದೂ ವಿರೋಧಿಯಾಗಿದ್ದ ಎಂಬ ಕಟ್ಟುಕತೆಗಳನ್ನೇ ಆಧಾರವಾಗಿಟ್ಟುಕೊಂಡು ಆತನೊಬ್ಬ ಮುಸ್ಲಿಂ ಆಗಿದ್ದ ಎಂಬುದನ್ನೇ ಆಧಾರವಾಗಿ ಬಳಸಿ ಹರಿಬಿಡಲಾಗುತ್ತಿರುವ ವಾಟ್ಸಪ್ ಯೂನಿವರ್ಸಿಟಿ ಥಿಯರಿಗಳನ್ನೇ ನಂಬಿ ಸರ್ಕಾರವೊಂದು ಪಠ್ಯಪುಸ್ತಕಗಳಿಂದಲೇ ಟಿಪ್ಪುವಿನ ಕುರಿತ ಮಾಹಿತಿಯನ್ನು ಅಳಿಸಿಹಾಕುವುದಾಗಿ ಹೇಳುವುದು ಹಾಸ್ಯಾಸ್ಪದ. ಬಹುಶಃ ಸರ್ಕಾರದ ಅಂತಹ ನಿರ್ಧಾರಕ್ಕೆ ಯಾವ ಸಂಶೋಧನೆಯ ಆಧಾರವಿದೆ ಎಂಬ ಪ್ರಶ್ನೆಗೆ ಸ್ವತಃ ಯಡಿಯೂರಪ್ಪ ಬಳಿಯೂ ಉತ್ತರವಿರಲಿಕ್ಕಿಲ್ಲ. ಏಕೆಂದರೆ, ಇದೇ ಯಡಿಯೂರಪ್ಪ, ಜಗದೀಶ್ ಶೆಟ್ಟ ರ್, ಆರ್ ಅಶೋಕ್ ಅವರುಗಳು ವಿವಿಧ ಸಂದರ್ಭಗಳಲ್ಲಿ ಟಿಪ್ಪುವಿನ ವೇಷ ಕಟ್ಟಿ ಕತ್ತಿ ಹಿಡಿದು ಪೋಜು ನೀಡಿ, ಟಿಪ್ಪುವನ್ನು ಮಹಾನ್ ದೇಶಭಕ್ತ, ಸ್ವಾತಂತ್ರ್ಯ ಸೇನಾನಿ ಎಂದು ಹೊಗಳಿದ ಸಚಿತ್ರ ವರದಿಗಳು ಈಗಲೂ ಜಾಲತಾಣಗಳಲ್ಲಿ ಕಣ್ಣಿಗೆ ರಾಚುತ್ತಿವೆ.
ಹಾಗೇ ಟಿಪ್ಪುವಿನ ಸಾಧನೆ, ಹೋರಾಟ ಮತ್ತು ಕನ್ನಡ ನಾಡಿನ ಹಿಂದೂ ದೇವಾಲಯ, ಅಗ್ರಹಾರಗಳಿಗೆ ಆತ ನೀಡಿದ ಕೊಡುಗೆಗಳ ಪ್ರಸ್ತಾಪ ಮಾಡಿ, ಪಠ್ಯಪುಸ್ತಕದಿಂದ ಅಳಿಸಿದಂತೆ ಇವನ್ನೂ ಅಳಿಸಿಹಾಕುತ್ತೀರಾ ಮುಖ್ಯಮಂತ್ರಿಗಳೇ ಎಂದು ಜಾಲತಾಣಿಗರು ಕೇಳುತ್ತಿದ್ದಾರೆ. ಈ ನಡುವೆ ಶಿಕ್ಷಣ ಸಚಿವರು, ಪಠ್ಯದಿಂದ ಟಿಪ್ಪು ಕುರಿತ ವಿಷಯ ಕೈಬಿಡುವಂತೆ ಮಡಿಕೇರಿ ಶಾಸಕರು ಮನವಿ ಮಾಡಿದ್ದರು. ಆ ಹಿನ್ನೆಲೆಯಲ್ಲಿ ಒಂದು ಸಮಿತಿ ರಚಿಸಿ ಅವರ ಆಕ್ಷೇಪಗಳ ಬಗ್ಗೆ ಚರ್ಚಿಸಿ ಶಿಫಾರಸು ಮಾಡುವಂತೆ ಹೇಳಿದ್ದೇವೆ. ನವೆಂಬರ್ 7ರಂದು ಸಮಿತಿ ಸಭೆ ಬಳಿಕ ಸರ್ಕಾರ ಆ ಬಗ್ಗೆ ತೀರ್ಮಾನ ಕೈಗೊಳ್ಳಲಿದೆ ಎಂದಿದ್ದಾರೆ.
ಅಂದರೆ, ಚುನಾವಣೆ ಕಾವೇರುವ ಹೊತ್ತಿಗೆ ಟಿಪ್ಪು ವಿಷಯ ಮತ್ತಷ್ಟು ಬಿಸಿಯೇರುವುದು ಖಂಡಿತ. ಹಾಗಾಗಿ ಮುಂಬೈ ವಿಧಾನಸಭೆಯ ಮಾದರಿಯಲ್ಲೇ, ರಾಜ್ಯದ ಉಪ ಚುನಾವಣೆಗೂ ಕೋಮು ವಿಭಜನೆ, ಭಾವನಾತ್ಮಕ ಬ್ಲಾಕ್ ಮೇಲ್ ಮೂಲಕ ಮತ ಕ್ರೋಡೀಕರಣಕ್ಕೆ ಜಾಲ ಹೆಣೆಯಲಾಗಿದೆ. ಜನರಿಗೆ ಮತಾಂಧತೆಯ ಅಫೀಮು ಸರಬರಾಜಾಗಿದೆ. ಇದೀಗ ಅಮಲೇರತೊಡಗಿದೆ. ಇನ್ನೇನಿದ್ದರೂ ಅದು ರಂಗೇರಲಿದೆ! ಪ್ರವಾಹ, ಕನ್ನಡಿಗರ ಉದಾಸೀನ, ಆರ್ ಸಿ ಇಪಿ, ರೈತರ ಗೋಳು, ಎಲ್ಲವೂ ಅಮಲಿನ ಮಂಕುಬೂದಿಯ ಗುಂಗಲ್ಲಿ ಮರೆತು ಮರೆಯಾಗಲಿವೆ!