ಆಪರೇಷನ್ ಕಮಲದ ಮೂಲಕ ಹಿಂದಿನ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರ್ಕಾರವನ್ನು ಕೆಡವಿ ತಮ್ಮ ಸರ್ಕಾರಕ್ಕೆ ಅಸ್ತಿತ್ವಕ್ಕೆ ಬರಲು ಸ್ವತಃ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರೇ ಕಾರಣವೆಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಹೇಳಿರುವ ವೀಡಿಯೋ ಬಹಿರಂಗವಾಗಿದ್ದು, ರಾಜಕೀಯ ವಲಯದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ.
ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಮಾತನಾಡಿದ್ದಾರೆ ಎನ್ನಲಾಗುವ ಆಡಿಯೋ ಅದಾಗಿದ್ದು, ಅದರಲ್ಲಿ ಯಡಿಯೂರಪ್ಪ ಅವರೇ ಸಭೆಯ ವೇದಿಕೆಯಿಂದ ಮಾತನಾಡುತ್ತಿರುವುದು ಮತ್ತು ಮಾತಿನ ನಡುವೆ ಪಕ್ಷದ ಅಧ್ಯಕ್ಷರೂ ಸಭೆಯಲ್ಲಿ ಹಾಜರಿರುವ ಬಗ್ಗೆ ಪ್ರಸ್ತಾಪಿಸಿರುವುದು ಕೂಡ ದಾಖಲಾಗಿದೆ. ಪ್ರಮುಖವಾಗಿ ಆಪರೇಷನ್ ಕಮಲಕ್ಕೊಳಗಾದ 17 ಮಂದಿ ಅನರ್ಹ ಶಾಸಕರ ವಿಷಯದಲ್ಲಿ ಬಿಜೆಪಿ ಶಾಸಕರು ಮತ್ತು ಮುಖಂಡರು ನೀಡುತ್ತಿರುವ ವ್ಯತಿರಿಕ್ತ ಹೇಳಿಕೆಗಳನ್ನು ಪ್ರಸ್ತಾಪಿಸುವ ಯಡಿಯೂರಪ್ಪ ಅವರು, ಅನರ್ಹರ ಬಗ್ಗೆ ಮಾತನಾಡಿರುವ ಪಕ್ಷದ ಮುಖಂಡರ ವಿರುದ್ಧ ಕಿಡಿಕಾರಿದ್ದಾರೆ. ಅಲ್ಲದೆ, ತಾವೇ ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತು ಅಪರಾಧ ಮಾಡಿದ್ದೇನೆ ಎಂದೂ ಆಕ್ರೋಶಭರಿತರಾಗಿ ಭಾವೋದ್ವೇಗದಿಂದ ಮಾತನಾಡಿರುವುದು ಕೂಡ ದಾಖಲಾಗಿದೆ.
ಸಭೆಯಲ್ಲಿ ಇದ್ದ ಮುಖಂಡರನ್ನು ಉದ್ದೇಶಿಸಿ ಮಾತನಾಡಿರುವ ಅವರು, “ನೀವುಗಳು ಮಾತನಾಡಿರುವ ದಾಟಿ ನೋಡಿದರೆ ಸರ್ಕಾರವನ್ನು ಉಳಿಸುವಂತೆ ಕಾಣುತ್ತಿಲ್ಲ. 17 ಶಾಸಕರ ರಾಜೀನಾಮೆ ವಿಷಯದಲ್ಲಿ ತೀರ್ಮಾನ ತೆಗೆದುಕೊಂಡಿದ್ದು ನಾನಲ್ಲ. ರಾಷ್ಟ್ರೀಯ ಅಧ್ಯಕ್ಷರೇ ಆ ತೀರ್ಮಾನ ತೆಗೆದುಕೊಂಡು, ಅವರನ್ನೆಲ್ಲಾ ಎರಡೂವರೆ ತಿಂಗಳ ಕಾಲ ಮುಂಬೈನಲ್ಲಿ ಇಟ್ಟಿದ್ದರು ಎಂಬುದು ನಿಮಗೆಲ್ಲಾ ಗೊತ್ತಿದೆಯಲ್ಲವೇ?” ಎಂದು ಪ್ರಶ್ನಿಸಿದ್ದಾರೆ.
ಅಲ್ಲದೆ, “ನಿಮ್ಮ ಯಾರೊಬ್ಬರ ಬಾಯಲ್ಲೂ ಅವರ(ಅನರ್ಹ ಶಾಸಕರ) ತ್ಯಾಗದಿಂದಲೇ ಅಧಿಕಾರಕ್ಕೆ ಬಂದಿದ್ದೇವೆ ಎಂಬ ಮಾತು ಬರಲಿಲ್ಲ. ವಾಸ್ತವಿಕ ಸ್ಥಿತಿಯನ್ನು ತಿಳಿದುಕೊಳ್ಳದೇ ಒಬ್ಬೊಬ್ಬರು ಒಂದೊಂದು ರೀತಿ ಮಾತನಾಡುತ್ತಿದ್ದೀರಿ. ಎರಡು ಕ್ಷೇತ್ರಗಳ ವಿಷಯದಲ್ಲಿ(ಅಥಣಿ ಮತ್ತು ಕಾಗವಾಡ) ನಿಮ್ಮಿಂದ ಇಂತಹ ಅಭಿಪ್ರಾಯ ನಿರೀಕ್ಷಿಸಿರಲಿಲ್ಲ. ಈ ವಿಷಯದಲ್ಲಿ ರಾಷ್ಟ್ರೀಯ ಅಧ್ಯಕ್ಷರೇ ಅಂತಿಮ ತೀರ್ಮಾನ ಕೈಗೊಳ್ಳಲಿ. ಇಲ್ಲಿನ ಮಾತುಗಳನ್ನೂ ನೀವು ಬಹಿರಂಗ ಮಾಡುತ್ತೀರಿ ಎಂದು ಗೊತ್ತು, ಇಲ್ಲಿ ಆಡಿದ ಮಾತು ಇಲ್ಲೇ ನಾಲ್ಕು ಗೋಡೆ ಮಧ್ಯೆ ಇರಲಿ” ಎಂದು ಯಡಿಯೂರಪ್ಪ ಹೇಳಿದ್ದಾರೆ. ಆದರೆ, ವಿಪರ್ಯಾಸವೆಂದರೆ, ಹಾಗೆ ನಾಲ್ಕು ಗೋಡೆ ಮಧ್ಯೆ ಇರಲಿ ಎಂದ ಮಾತುಗಳೇಈಗ ವೈರಲ್ ಆಗಿದ್ದು, ಬಿಜೆಪಿಯ ಮುಖಂಡರಲ್ಲೇ ಯಾರೋ ಒಬ್ಬರು ಅವರ ಇಡೀ ಮಾತನ್ನು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣಗಳ ಮೂಲಕ ಹರಿಬಿಟ್ಟಿದ್ದಾರೆ.
ಮುಖ್ಯಮಂತ್ರಿಗಳು ಪಕ್ಷದ ಆಂತರಿಕ ಸಭೆಯಲ್ಲಿ ಆಡಿರುವ ಈ ಮಾತುಗಳು ಈಗಾಗಲೇ ಮಾಧ್ಯಮಗಳಲ್ಲೂ ವರದಿಯಾಗಿದ್ದು, ಅನರ್ಹ ಶಾಸಕರ ರಾಜೀನಾಮೆ ಮತ್ತು ಅನರ್ಹತೆಯ ವಿಷಯದ ಕುರಿತು ನ್ಯಾಯಾಲಯದ ತೀರ್ಪು ಹೊರಬೀಳುವ ಎರಡು ದಿನ ಮುನ್ನ ಅವರ ರಾಜೀನಾಮೆಯ ಹಿಂದೆ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರೇ ಇದ್ದಾರೆ ಎಂಬ ಈ ಹೇಳಿಕೆ ದೀಢೀರ್ ಮಹತ್ವ ಪಡೆದುಕೊಂಡಿದೆ. ತಮ್ಮ ರಾಷ್ಟ್ರೀಯ ಅಧ್ಯಕ್ಷರ ಯೋಜನೆಯಂತೆಯೇ 17 ಮಂದಿ ಶಾಸಕರು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಿಗೆ ರಾಜೀನಾಮೆ ನೀಡಿದ್ದರು ಮತ್ತು ಬಳಿಕ ಅವರನ್ನು ಸುಮಾರು ಎರಡೂವರೆ ತಿಂಗಳ ಕಾಲ ಮುಂಬೈನಲ್ಲಿ ರಹಸ್ಯವಾಗಿ ಇರಿಸಿದ್ದು ಕೂಡ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರೇ ಎಂಬುದನ್ನು ಕೂಡ ಈ ವೀಡಿಯೋದಲ್ಲಿ ಯಡಿಯೂರಪ್ಪ ಸ್ಪಷ್ಟವಾಗಿ ಹೇಳಿದ್ದಾರೆ.
ಆ ಹಿನ್ನೆಲೆಯಲ್ಲಿ ಇದೇ ವೀಡಿಯೋ-ಆಡಿಯೋವನ್ನೇ ಸುಪ್ರೀಂಕೋರ್ಟಿಗೆ ಸಲ್ಲಿಸಿ, ಸೋಮವಾರ ಪ್ರಕರಣದ ತೀರ್ಪಿಗೆ ಮುನ್ನ ಇದನ್ನು ಪರಿಗಣಿಸುವಂತೆ ಕೋರಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಮತ್ತು ಆಪರೇಷನ್ ಕಮಲಕ್ಕೆ ಸಿಎಂ ಕುರ್ಚಿ ಕಳೆದುಕೊಂಡ ಎಚ್ ಡಿ ಕುಮಾರಸ್ವಾಮಿ ಅವರು ಹೇಳಿದ್ದಾರೆ. ಈಗಾಗಲೇ ಈ ನಿಟ್ಟಿನಲ್ಲಿ ತಮ್ಮ ವಕೀಲರನ್ನು ಸಂಪರ್ಕಿಸಿ ವೀಡಿಯೋ-ಆಡಿಯೋ ಕ್ಲಿಪಿಂಗ್ ಒದಗಿಸಿರುವುದಾಗಿಯೂ ಅವರು ಹೇಳಿರುವುದಾಗಿ ವರದಿಯಾಗಿದೆ.
ಈ ನಡುವೆ, ಕಾಂಗ್ರೆಸ್ ನಾಯಕರು ಕೂಡ ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಯಡಿಯೂರಪ್ಪ ವೀಡಿಯೋ ಹಿನ್ನೆಲೆಯಲ್ಲಿ 17 ಶಾಸಕರ ರಾಜೀನಾಮೆಯ ಹಿಂದೆ ಬಿಜೆಪಿ ನಾಯಕರ ಪಾತ್ರ ಇರುವುದನ್ನು ಅವರೇ ಸ್ವತಃ ಹೇಳಿರುವುದು ಸಾಕ್ಷ್ಯವಾಗಿ ದಾಖಲಾಗಿದೆ. ಹಾಗಾಗಿ ಆ ಶಾಸಕರ ರಾಜೀನಾಮೆ ಸ್ವ ಇಚ್ಛೆಯದ್ದಲ್ಲ ಮತ್ತು ಅದರ ಹಿಂದೆ ಬಿಜೆಪಿಯ ಕುಮ್ಮಕ್ಕು ಇದೆ ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ. ಅಲ್ಲದೆ, ಶಾಸಕರನ್ನು ತಿಂಗಳುಗಟ್ಟಲೆ ರಹಸ್ಯ ಸ್ಥಳದಲ್ಲಿ ಇಟ್ಟಿದ್ದು ತಾವೇ ಎಂದೂ ಯಡಿಯೂರಪ್ಪ ಹೇಳಿದ್ದಾರೆ. ಹಾಗಾಗಿ ಕೂಡಲೇ ಯಡಿಯೂರಪ್ಪ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಮತ್ತು ಅಮಿತ್ ಶಾ ಗೃಹ ಸಚಿವರ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಹೇಳಿಕೆ ನೀಡಿದ್ದಾರೆ. ಈ ನಡುವೆ, ಕಾಂಗ್ರೆಸ್ ಕೂಡ ವೀಡಿಯೋವನ್ನು ತಮ್ಮ ವಕೀಲರ ಮೂಲಕ ನ್ಯಾಯಾಲಯಕ್ಕೆ ಸಲ್ಲಿಸಲಿದೆ ಎನ್ನಲಾಗಿದೆ.
ಅದೇ ವೀಡಿಯೋದಲ್ಲಿ ಯಡಿಯೂರಪ್ಪ ಅವರು ಪಕ್ಷದ ಶಾಸಕರು ಮತ್ತು ಮುಖಂಡರನ್ನು ಉದ್ದೇಶಿಸಿ “ಯಾರನ್ನು ತೃಪ್ತಿಪಡಿಸಲು ಹೀಗೆಲ್ಲಾ ಮಾಡುತ್ತಿದ್ದೀರಿ. ನಾನೂ ಪಕ್ಷದ ಅಧ್ಯಕ್ಷನಾಗಿದ್ದೆ. ಎಲ್ಲೂ ಅಸಹಕಾರ ತೋರಿಸಿರಲಿಲ್ಲ. ನಿಮ್ಮಿಂದ ನೋವು ನಿರೀಕ್ಷೆ ಮಾಡಿರಲಿಲ್ಲ” ಎಂದು ಭಾವೋದ್ವೇಗಕ್ಕೆ ಒಳಗಾಗಿದ್ದಾರೆ ಕೂಡ. ಅವರ ಈ ಮಾತುಗಳು ನಿಶ್ಷಿತವಾಗಿಯೂ ಪಕ್ಷದ ಒಳಗೇ ಇರುವ ಯಡಿಯೂರಪ್ಪ ವಿರೋಧಿ ಬಣದ ನಾಯಕರತ್ತ ಬೆರಳುಮಾಡುತ್ತಿದ್ದು, ಆ ನಾಯಕರನ್ನು ತೃಪ್ತಿಪಡಿಸಲು, ಅವರ ಆಣತಿಯಂತೆಯೇ ಯಡಿಯೂರಪ್ಪ ಅವರಿಗೆ ಇರಿಸುಮುರಿಸು ತರುವ ಉದ್ದೇಶದಿಂದಲೇ ಅವರ ಬಂಟರು ಹೀಗೆ ಮಾಡಿರಬಹುದೇ ಎಂಬ ಶಂಕೆ ಯಡಿಯೂರಪ್ಪ ಪಾಳೆಯದಲ್ಲಿದೆ. ಅಂತಹ ಷಢ್ಯಂತ್ರದ ಭಾಗವಾಗಿಯೇ ಯಡಿಯೂರಪ್ಪ ಮಾತುಗಳನ್ನು ರೆಕಾರ್ಡ್ ಮಾಡಿ ಹೀಗೆ ವೈರಲ್ ಮಾಡಲಾಗಿದೆ. ಒಟ್ಟಾರೆ, ಯಡಿಯೂರಪ್ಪ ಕಾಲೆಳೆದು ಸಿಎಂ ಕುರ್ಚಿ ಮೇಲೆ ಕೂರಲು ಹವಣಿಸುತ್ತಿರುವ ಸಂಘಪರಿವಾರದ ನಾಯಕರೊಬ್ಬರು ಇಡೀ ಈ ಷಢ್ಯಂತ್ರದ ಹಿಂದಿದ್ದು, ಯಡಿಯೂರಪ್ಪ ಅವರೇ ಹೇಳಿದಂತೆ ಆ ನಾಯಕರನ್ನು ತೃಪ್ತಿಪಡಿಸುವ ಉದ್ದೇಶದಿಂದಲೇ ಅನರ್ಹರ ವಿರುದ್ಧದ ಹೇಳಿಕೆಗಳನ್ನು ನೀಡುವುದು ಮತ್ತು ಇದೀಗ ಯಡಿಯೂರಪ್ಪ ಮಾತುಗಳ ವೀಡಿಯೋ ವೈರಲ್ ಮಾಡಲಾಗಿದೆ ಎಂಬ ಮಾತುಗಳೂ ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.
ವೀಡಿಯೋ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ಜಗದೀಶ್ ಶೆಟ್ಟರ್ ಕೂಡ, ಆಡಿಯೋದ ಬಗ್ಗೆಯಾಗಲೀ, ಅದರ ರಾಜಕೀಯ ಮಹತ್ವದ ಬಗ್ಗೆಯಾಗಲೀ ಮಾತನಾಡದೆ, ಆ ವೀಡಿಯೋ ಮಾಡಿದ್ದು ಯಾರು ? ಯಾತಕ್ಕಾಗಿ ಮಾಡಿದ್ದಾರೆ? ಎಂಬುದು ಬಹಿರಂಗವಾಗಲೀ ಎಂದಿದ್ದಾರೆ. ಆ ಮೂಲಕ ಅವರಿಗೂ ಯಡಿಯೂರಪ್ಪ ಅವರ ಮಾತುಗಳನ್ನು ಹೀಗೆ ಕದ್ದು ವೀಡಿಯೋ ಮಾಡಿ ವೈರಲ್ ಮಾಡಿರುವ ತಮ್ಮದೇ ಪಕ್ಷದ ಮುಖಂಡರ ವಿಷಯದಲ್ಲಿ ಯಡಿಯೂರಪ್ಪ ಅವರಿಗೆ ಇರುವ ಸಂಶಯವೇ ಇದೆ ಎಂಬುದನ್ನು ಪರೋಕ್ಷವಾಗಿ ಹೇಳಿದ್ದಾರೆ.
ಆದರೆ, ಯಡಿಯೂರಪ್ಪ ಅವರನ್ನು ಕೆಡವುವ ಬಿಜೆಪಿಯ ಒಳಗೇ ಇರುವ ಯಡಿಯೂರಪ್ಪ ವಿರೋಧಿ ಬಣದ ಶತಾಯಗತಾಯ ಪ್ರಯತ್ನದ ಭಾಗವಾಗಿ ಇದೀಗ ಈ ಆಡಿಯೋ ಬಹಿರಂಗವಾಗಿದೆ ಮತ್ತು ಹೀಗೆ ತಮ್ಮ ಮಾತುಗಳನ್ನು ಕದ್ದು ರೆಕಾರ್ಡ್ ಮಾಡಿ ವೈರಲ್ ಮಾಡಿ ತಮಗೆ ಸಂಕಷ್ಟ ತರುವ ಸೂಚನೆ ಕೂಡ ಯಡಿಯೂರಪ್ಪ ಅವರಿಗೆ ಮೊದಲೇ ಗೊತ್ತಿತ್ತು ಎಂಬುದು ಕೂಡ ಈ ಪ್ರಕರಣದ ವಿಶೇಷ. ಈ ನಡುವೆ, ಇದೀಗ ಪ್ರತಿಪಕ್ಷಗಳು ಈ ಪ್ರಕರಣದಲ್ಲಿ ನ್ಯಾಯಾಲಯದ ಮೆಟ್ಟಿಲೇರಿದರೆ ಮುಂದಿನ ಪರಿಣಾಮಗಳೇನಾಗಬಹುದು? ರಾಜ್ಯ ರಾಜಕಾರಣದ ಮೇಲೆ ಅದರ ಪರಿಣಾಮವೇನು? ಅದರಲ್ಲೂ ಮುಖ್ಯವಾಗಿ ಅನರ್ಹ ಶಾಸಕರ ಕುರಿತು ಸುಪ್ರೀಂಕೋರ್ಟ್ ತೀರ್ಪಿನ ಮೇಲೆ ಈ ವೀಡಿಯೋ-ಆಡಿಯೋ ಪ್ರಕರಣ ಪರಿಣಾಮ ಬೀರಬಹುದೆ? ಹಾಗಾದಲ್ಲಿ ಅನರ್ಹ ಶಾಸಕರ ಸ್ಥಿತಿ ಏನಾಗಬಹುದು? ಎಂಬ ಹಲವು ಪ್ರಶ್ನೆಗಳು ಎದ್ದಿವೆ.
ಜೊತೆಗೆ, ಈ ಹಿಂದೆ ಇದೇ ಮಾದರಿಯ ಆಪರೇಷನ್ ಕಮಲದ ವಿಷಯದಲ್ಲಿ ಗುರುಮಿಠ್ಕಲ್ ಶಾಸಕರ ಪುತ್ರ ಶರಣಗೌಡ ಪಾಟೀಲರೊಂದಿಗೆ ಸ್ವತಃ ಯಡಿಯೂರಪ್ಪ ಅವರೇ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಒಂದು ವೈರಲ್ ಆಗಿತ್ತು. ಆ ಆಡಿಯೋ ವಿಷಯ ಹಿಂದಿನ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಸದನದ ಒಳಗೆ ಭಾರೀ ಕೋಲಾಹಲಕ್ಕೆ ಕಾರಣವಾಗಿತ್ತು. ಸ್ವತಃ ಯಡಿಯೂರಪ್ಪ ಸದನದಲ್ಲಿಯೇ ಆಡಿಯೋ ದನಿ ತಮ್ಮದೇ ಎಂದು ಒಪ್ಪಿಕೊಂಡಿದ್ದಲ್ಲದೇ ಕ್ಷಮಿಸಿ ಬಿಡಿ ಎಂದೂ ಹೇಳಿದ್ದರು. ಆಗಿನ ಸ್ಪೀಕರ್ ರಮೇಶ್ ಕುಮಾರ್ ಅವರಿಗೇ ಆಮಿಷವೊಡ್ಡಿದ ಪ್ರಸ್ತಾಪ ಕೂಡ ಆಡಿಯೋದಲ್ಲಿದ್ದಿದ್ದರಿಂದ, ಸ್ಪೀಕರ್, ಆ ಪ್ರಕರಣದ ತನಿಖೆಗೆ ಎಸ್ ಐಟಿ ರಚನೆಗೆ ಆದೇಶಿಸಿದ್ದರು. ಆದರೆ, ಸರ್ಕಾರ ಆ ನಿಟ್ಟಿನಲ್ಲಿ ಆಸಕ್ತಿ ತೋರಿರಲಿಲ್ಲ.
ಹಾಗಾಗಿ ಇದೀಗ ಈ ಆಡಿಯೋ-ವೀಡಿಯೋ ಕೂಡ ರಾಜಕೀಯ ಕೆಸರೆರಚಾಟದ ದಾಳವಾಗಿ ಬಳಕೆಯಾಗಿ ಪರ್ಯಾವಸಾನ ಹೊಂದುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ. ಅದರಲ್ಲೂ ಐಎಂಎ ಮತ್ತು ಟೆಲಿಫೋನ್ ಕದ್ದಾಲಿಕೆ ಪ್ರಕರಣದ ತೂಗುಗತ್ತಿ ಹಾಗೂ ಐಟಿ, ಇಡಿ ದಾಳಿಗಳ ಭೀತಿಯಲ್ಲಿರುವ ಪ್ರತಿಪಕ್ಷ ನಾಯಕರಲ್ಲಿ ಕುಮಾರಸ್ವಾಮಿ ಸೇರಿದಂತೆ ಹಲವರು ಈಗಾಗಲೇ ಬಿಜೆಪಿ ವಿಷಯದಲ್ಲಿ ಮೃದು ಧೋರಣೆ ತಳೆಯುತ್ತಿರುವ ಮಾತುಗಳಿವೆ. ಆ ಹಿನ್ನೆಲೆಯಲ್ಲಿ ಇಂತಹ ಆಡಿಯೋ- ವೀಡಿಯೋಗಳನ್ನು ಮುಂದಿಟ್ಟುಕೊಂಡು ಕಾನೂನು ಮತ್ತು ರಾಜಕೀಯ ಹೋರಾಟ ಮಾಡುವ ಛಾತಿ ಪ್ರತಿಪಕ್ಷಗಳಿಗೆ ಇದೆಯೇ ಎಂಬ ಪ್ರಶ್ನೆ ಕೂಡ ಇದೆ. ಹಾಗಾದಲ್ಲಿ ನಿಜಕ್ಕೂ ಯಡಿಯೂರಪ್ಪ ಅವರಿಗೆ ನಿರಾಳವೆನಿಸಲಿದೆ. ಆದರೆ, ಅವರದೇ ಪಕ್ಷದ ವಿರೋಧಿ ಬಣಕ್ಕೆ ಖಂಡಿತವಾಗಿಯೂ ನಿರಾಶೆಯಾಗಲಿದೆ!