ಆಪರೇಷನ್ ಕಮಲದ ಆಡಿಯೋ- ವೀಡಿಯೋ ವಿಷಯಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಮಂಗಳವಾರ ತನ್ನ ನಿಲುವು ವ್ಯಕ್ತಪಡಿಸಿದ್ದು, ಅನರ್ಹ ಶಾಸಕರ ಪ್ರಕರಣದ ತೀರ್ಪಿನಲ್ಲಿ ಈ ವಿಷಯವನ್ನೂ ಸೇರಿಸಿಕೊಳ್ಳಲಾಗುವುದು. ಹಾಗಾಗಿ ತೀರ್ಪು ಸಿದ್ಧವಾಗುತ್ತಿರುವ ಈ ಹಂತದಲ್ಲಿ ಮತ್ತೊಮ್ಮೆ ವಾದ- ಪ್ರತಿವಾದದ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ. ಈ ನಡುವೆ, ಆಡಿಯೋ ಪ್ರಕರಣದ ದನಿ ತಮ್ಮದೇ ಎಂದು ಮಾಧ್ಯಮಗಳ ಮುಂದೆ ಈ ಮೊದಲು ಹೇಳಿದ್ದ ಸಿಎಂ ಯಡಿಯೂರಪ್ಪ ಅವರು ಇದೀಗ ಉಲ್ಟಾ ಹೊಡೆದಿದ್ದು, ಅದಕ್ಕೂ ತಮಗೂ ಸಂಬಂಧವೇ ಇಲ್ಲ ಎಂದು, ತಮ್ಮ ಸರ್ಕಾರದ ನೂರು ದಿನದ ಸಂಭ್ರಮದಲ್ಲಿ ಮುಳುಗಿದ್ದಾರೆ.
ಇತ್ತ ನೂರು ದಿನದ ಸಾಧನೆಯ ಕಿರುಹೊತ್ತಿಗೆ ಬಿಡುಗಡೆಯ ಸಂಭ್ರಮದಲ್ಲಿರುವಾಗಲೇ ಅತ್ತ ಸುಪ್ರೀಂಕೋರ್ಟ್ ಆಡಿಯೋವನ್ನು ಪರಿಗಣಿಸಿಯೇ ಅನರ್ಹ ಶಾಸಕರ ತೀರ್ಪು ನೀಡುವುದಾಗಿ ಹೇಳಿದೆ. ಹಾಗಾಗಿ ಇನ್ನೇನು ಪ್ರಕಟವಾಗಲಿರುವ ಸುಪ್ರೀಂ ತೀರ್ಪಿನ ಮೇಲೆ ಎಲ್ಲರ ಕಣ್ಣುನೆಟ್ಟಿದ್ದು, ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳ ಪಾಳೆಯಕ್ಕಿಂತ ಇದೀಗ ಆಡಳಿತಪಕ್ಷ ಬಿಜೆಪಿಯಲ್ಲೇ ಆ ಬಗ್ಗೆ ಇನ್ನಿಲ್ಲದ ಆತಂಕ ಕಾಣತೊಡಗಿದೆ.
ಈ ನಡುವೆ, ಆಡಿಯೋ ವಿಷಯವನ್ನೇ ಮುಖ್ಯವಾಗಿಟ್ಟುಕೊಂಡು ರಾಜ್ಯಪಾಲರಿಗೂ ದೂರು ಸಲ್ಲಿಸಿದ್ದ ಕಾಂಗ್ರೆಸ್, ಇದೀಗ ರಾಜಕೀಯವಾಗಿ ಕಳೆದ ಮೂರ್ನಾಲ್ಕು ದಿನಗಳಿಂದ ಬಿಜೆಪಿ ಮತ್ತು ಸಿಎಂ ಯಡಿಯೂರಪ್ಪ ವಿರುದ್ಧ ಬಿರುಸಿನ ವಾಗ್ದಾಳಿ ನಡೆಸುತ್ತಿದೆ. ಆಡಿಯೋ ವಿಷಯ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದ್ದು, ಬಿಜೆಪಿಯ ಹೈಕಮಾಂಡಿಗೂ ಇರಿಸುಮುರಿಸು ತಂದಿದೆ. ಆ ಹಿನ್ನಲೆಯಲ್ಲಿ ಈಗಾಗಲೇ ಸ್ವತಃ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರೇ ಯಡಿಯೂರಪ್ಪ ಅವರನ್ನು ತರಾಟೆಗೆ ತೆಗೆದುಕೊಂಡಿದ್ದು, ಆಡಿಯೋ ವಿಷಯದಲ್ಲಿ ಮತ್ತೆ ಎಡವಟ್ಟಿನ ಹೇಳಿಕೆಗಳನ್ನು ನೀಡದಂತೆ ತಾಕೀತು ಮಾಡಿದ್ದಾರೆ ಎನ್ನಲಾಗಿದೆ.
ಎರಡು ದಿನ ಮುನ್ನ ಟಿವಿ ವಾಹಿನಿಗಳ ಸಂದರ್ಶನದಲ್ಲಿ ಅದು ತಮ್ಮದೇ ಎಂದು ಬಿಎಸ್ ವೈ ಒಪ್ಪಿಕೊಂಡಿದ್ದ ವೀಡಿಯೋದಲ್ಲಿ, ಅವರು ಅಮಿತ್ ಶಾ ನೇತೃತ್ವದಲ್ಲೇ 17 ಶಾಸರಕ ರಾಜೀನಾಮೆ ಕೊಡಿಸಲಾಯಿತು ಮತ್ತು ಮುಂಬೈನಲ್ಲಿ ಅವರುಗಳನ್ನು ಎರಡೂವರೆ ತಿಂಗಳ ಕಾಲ ನೋಡಿಕೊಂಡಿದ್ದು ಕೂಡ ಪಕ್ಷ ರಾಷ್ಟ್ರೀಯ ಅಧ್ಯಕ್ಷರೇ ಎಂಬ ಮಾತುಗಳು ಸ್ಪಷ್ಟವಾಗಿದ್ದವು. ಆದರೆ, ಇದೀಗ, ಶಾ ತಾಕೀತು ಮಾಡಿದ ಬಳಿಕ ಯಡಿಯೂರಪ್ಪ ಉಲ್ಟಾ ಹೊಡೆದಿದ್ದು, ಅಮಿತ್ ಶಾ ನೇತೃತ್ವದಲ್ಲೇ ನಡೆಯಿತು ಎಂಬುದನ್ನು ನಾನು ಹೇಳಿಲ್ಲ. ಶಾಸಕರು ಮುಂಬೈನಲ್ಲಿ ಇದ್ದದ್ದು ಅಮಿತ್ ಶಾ ಸೇರಿದಂತೆ ಎಲ್ಲರಿಗೂ ಗೊತ್ತಿತ್ತು ಎಂಬುದನ್ನು ಮಾತ್ರ ಹೇಳಿದ್ದೇನೆಯೇ ಹೊರತು ಬೇರೆ ಏನನ್ನೂ ಹೇಳಿಲ್ಲ. ಅನಗತ್ಯವಾಗಿ ಅವರ ಹೆಸರು ಎಳೆಯಬಾರದು. ಸಿದ್ದರಾಮಯ್ಯಗೆ ಅಧಿಕಾರ ಬೇಕಾಗಿದೆ. ಏನೇನೋ ಹೇಳುತ್ತಾರೆ ಎಂದು ಕಾಂಗ್ರೆಸ್ ನಾಯಕರ ಮೇಲೆಯೇ ಹರಿಹಾಯ್ದಿದ್ದಾರೆ. ಆದರೆ, ಬಿಎಸ್ ವೈ ತಮ್ಮ ಆಡಿಯೋವನ್ನು ಒಪ್ಪಿಕೊಂಡು, ಅದು ತಮ್ಮದೇ ದನಿ, ತಾವೇ ಮಾತನಾಡಿರುವುದು, ಹುಬ್ಬಳ್ಳಿಯ ಸಭೆಯಲ್ಲಿ ಮಾತನಾಡಿದ್ದು ಎಂಬುದನ್ನು ಪದೇಪದೆ ಹೇಳುವ ಟಿವಿ ಸಂದರ್ಶನದ ದೃಶ್ಯಾವಳಿಗಳು ಈಗ ವೈರಲ್ ಆಗಿವೆ.
ಈ ನಡುವೆ ಈ ಪ್ರಕರಣದಿಂದ ತೀವ್ರ ಮುಜಗರಕ್ಕೆ ಸಿಲುಕಿರುವ ಬಿಜೆಪಿ, ಆ ಬಗ್ಗೆ ಆಂತರಿಕ ತನಿಖೆಯನ್ನೂ ಆರಂಭಿಸಿದೆ. ಮುಖ್ಯವಾಗಿ ಹುಬ್ಬಳ್ಳಿಯ ಆ ಸಭೆಯಲ್ಲಿ ವೀಡಿಯೋ ಮಾಡಿ ಹರಿಯಬಿಟ್ಟವರು ಯಾರು ಎಂಬುದನ್ನು ಪತ್ತೆ ಮಾಡಲು ಪ್ರಯತ್ನ ನಡೆದಿದೆ. ಆ ಮೂಲಕ ಆ ವೀಡಿಯೋ ಹಿಂದಿರುವುದು ಯಾರು ಎಂಬುದನ್ನು ಕಂಡುಕೊಳ್ಳುವುದು ಬಿಜೆಪಿ ವರಿಷ್ಠರ ಯೋಚನೆ. ಆದರೆ, ಈ ನಡುವೆ ಅದೇ ಸಭೆಯಲ್ಲಿ ಹಾಜರಿದ್ದ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲು ಅವರು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರೇ ವೀಡಿಯೋ ಮಾಡಿಸಿದ್ದಾರೆ ಎಂದು ಆರೋಪಿಸಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಕುಹಕದ ಸರಕಾಗಿದೆ. ಬಿಜೆಪಿ ಪಕ್ಷದ ಶಾಸಕರು ಮತ್ತು ಪ್ರಮುಖರ ರಹಸ್ಯ ಸಭೆಯಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೋಗಿ ಕೂತು ಈ ವಿಡಿಯೋ ಮಾಡಿದ್ದಾರೆಯೇ ಎಂದು ನೆಟ್ಟಿಗರು ನಳೀನ್ ಕುಮಾರ್ ಕಾಲೆಳೆದಿದ್ದಾರೆ. ಇಂತಹ ಹಾಸ್ಯಾಸ್ಪದ ಹೇಳಿಕೆಗಳನ್ನು ಕೊಡುವುದನ್ನು ಇನ್ನಾದರೂ ನಿಲ್ಲಿಸಿ, ಮಂಗಳೂರಿನ ಮರ್ಯಾದೆ ಕಾಪಾಡಿ ಎಂದೂ ಕೆಲವರು ಹೇಳಿದ್ದಾರೆ.
ಹಾಗೇ ಬೆಂಗಳೂರಿನ ಸಾಮಾಜಿಕ ಕಾರ್ಯಕರ್ತರೊಬ್ಬರು ಆಡಿಯೋ-ವೀಡಿಯೋ ಪ್ರಕರಣದ ತನಿಖೆ ನಡೆಸಬೇಕು ಎಂದು ಕೋರಿ ಎಸಿಬಿಗೆ ದೂರು ನೀಡಿದ್ದಾರೆ. ಇದು ಬಿಜೆಪಿಗೆ ನುಂಗಲಾರದ ತುತ್ತಾಗಿ ಪರಿಣಮಿಸುತ್ತಿದ್ದು, ಬಿಜೆಪಿ ನಾಯಕರು ಆಳಿಗೊಂದು ಮಾತು ಆಡುವ ಮೂಲಕ ಇಡೀ ಪ್ರಕರಣದ ತಿಪ್ಪೇಸಾರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಜೊತೆಗೆ ಯಡಿಯೂರಪ್ಪ ವಿರೋಧಿ ಬಣ ಇದೇ ಪ್ರಕರಣವನ್ನು ಬಳಸಿಕೊಂಡು ಅವರನ್ನು ಹಣಿಯುವ ತಂತ್ರವನ್ನೂ ಹೂಡಿದ್ದು, ಅದರ ಭಾಗವಾಗಿಯೇ ಪಕ್ಷದ ಆಂತರಿಕ ತನಿಖೆ ನಡೆಸಲಾಗುತ್ತಿದೆ. ಸರ್ಕಾರವನ್ನು ಉಳಿಸಿಕೊಳ್ಳುವ ಉದ್ದೇಶದಿಂದ ಬಿಜೆಪಿ ಮತ್ತು ಆರ್ ಎಸ್ ಎಸ್ ನಾಯಕರು ತಂತ್ರ ಹೆಣೆಯುತ್ತಿದ್ದಾರೆ. ಈ ನಡುವೆ ನ್ಯಾಯಾಲಯದ ತೀರ್ಪು ಕೂಡ ಈ ಸಾಕ್ಷ್ಯದ ಬಗ್ಗೆ ಯಾವ ನಿಲುವು ತಳೆಯುತ್ತದೆ ಎಂಬ ಆತಂಕ ಕೂಡ ಎದುರಾಗಿದೆ. ಸದ್ಯ ರಾಜಕೀಯವಾಗಿ ಈ ವಿಷಯವನ್ನು ನಿಭಾಯಿಸುವುದರ ಜೊತೆಗೆ ಮುಂದೆ ಎದುರಾಗಬಹುದಾದ ಕಾನೂನು ಹೋರಾಟದ ಬಗ್ಗೆಯೂ ಬಿಜೆಪಿ ನಾಯಕರು ತಲೆಕೆಡಿಸಿಕೊಂಡಿದ್ದಾರೆ ಎನ್ನಲಾಗಿದೆ.
ಜೊತೆಗೆ ಮಂಡ್ಯ ಜಿಲ್ಲೆ ಕೆ ಆರ್ ಪೇಟೆಯ ಅನರ್ಹ ಶಾಸಕ ನಾರಾಯಣಗೌಡ ಮತ್ತೊಂದು ಸ್ಫೋಟಕ ಹೇಳಿಕೆ ನೀಡಿದ್ದು, ತಮ್ಮ ಕ್ಷೇತ್ರಕ್ಕೆ ಒಂದು ಸಾವಿರ ಕೋಟಿ ರೂ. ಅನುದಾನ ನೀಡುತ್ತೇನೆ ಎಂದು ಯಡಿಯೂರಪ್ಪ ಅವರು ಹೇಳಿದ್ದರಿಂದಲೇ ತಾವು ರಾಜೀನಾಮೆ ನೀಡಿದ್ದಾಗಿ ಹೇಳಿದ್ದಾರೆ. ಮಂಗಳವಾರ ಈ ವಿವಾದಿತ ಹೇಳಿಕೆ ನೀಡಿದ ಬೆನ್ನಲ್ಲೇ ನೂರು ದಿನದ ಸಂಭ್ರಮದ ನಡುವೆ ಯಡಿಯೂರಪ್ಪ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿತ್ತು.
ಕೆ.ಆರ್.ಪೇಟೆ ತಾಲೂಕಿನ ಅಭಿವೃದ್ಧಿಗಾಗಿ ನಾನು ಏಳು ನೂರು ಕೋಟಿ ಅನುದಾನ ಕೇಳಿದ್ದೆ. ಆದರೆ ಯಡಿಯೂರಪ್ಪನವರೇ ಸಾವಿರ ಕೋಟಿ ಕೊಡುವೆ ಅಂದಿದ್ದರು. ಹಾಗಾಗಿ ನಾನು ನನ್ನ ತಾಲೂಕಿನ ಅಭಿವೃದ್ಧಿಗಾಗಿ ಯಡಿಯೂರಪ್ಪ ಜೊತೆ ಕೈ ಜೋಡಿಸಿದೆ ಎಂದು ನಾರಾಯಣಗೌಡ ಹೇಳಿದ್ದರು. ಈ ವಿಷಯ ಕೂಡ ಪ್ರತಿಪಕ್ಷಗಳ ಆಪರೇಷನ್ ಕಮಲದ ಆರೋಪಕ್ಕೆ ಸಾಕ್ಷ್ಯವಾಗಿ ಬಳಕೆಯಾಗುವ ಸೂಚನೆ ಸಿಗುತ್ತಿದ್ದಂತೆ ನಾರಾಯಣ ಗೌಡ ಉಲ್ಟಾ ಹೊಡೆದಿದ್ದು, ಯಡಿಯೂರಪ್ಪ ಆ ಭರವಸೆ ನೀಡಿದ್ದು ರಾಜೀನಾಮೆಗೂ ಮುಂಚೆ ಅಲ್ಲ; ರಾಜೀನಾಮೆ ನೀಡಿದ ಬಳಿಕ ಎಂದು ಸ್ಪಷ್ಟನೆ ನೀಡಿದ್ದಾರೆ.
ಈ ನಡುವೆ ಸುಪ್ರೀಂಕೋರ್ಟ್ ತೀರ್ಪನ್ನು ಎದುರುನೋಡುತ್ತಿರುವ ಅನರ್ಹ ಶಾಸಕರು, ಇಂತಹ ಹೇಳಿಕೆಗಳಿಂದ ದಿನದಿಂದ ದಿನಕ್ಕೆ ವಿಚಲಿತರಾಗುತ್ತಿದ್ದು, ಯಡಿಯೂರಪ್ಪ ಮತ್ತು ಟೀಂ ನಂಬಿಕೊಂಡು ಹಾಳಾಗಿಬಿಟ್ಟಿವು ಎಂದು ತಮ್ಮತಮ್ಮಲ್ಲೇ ಮಾತನಾಡಿಕೊಳ್ಳುತ್ತಿದ್ದಾರೆ. ಇಂತಹ ಹೇಳಿಕೆಗಳು ಮುಂದುವರಿದು, ನ್ಯಾಯಾಲಯದ ತೀರ್ಪು ಕೂಡ ಅವರಿಗೆ ವ್ಯತಿರಿಕ್ತವಾಗಿ ಬಂದಲ್ಲಿ ಉಪಚುನಾವಣೆಗೆ ಮುನ್ನೇ ರಾಜ್ಯದಲ್ಲಿ ಮತ್ತೊಂದು ಸುತ್ತಿನ ರಾಜಕೀಯ ಹೈಡ್ರಾಮ ನಡೆಯುವ ಸಾಧ್ಯತೆ ಹೆಚ್ಚಿದೆ ಎನ್ನಲಾಗುತ್ತಿದೆ. ಈ ನಡುವೆ, ಈ ಅತೃಪ್ತ ಅನರ್ಹರು ಮತ್ತು ಯಡಿಯೂರಪ್ಪ ನಡುವೆ ಕಂದಕ ಸೃಷ್ಟಿಸಿ ಪರಸ್ಪರರನ್ನು ಎತ್ತಿಕಟ್ಟುವ ಉದ್ದೇಶದಿಂದಲೇ ಬಿಜೆಪಿಯ ‘ಸಂತೋಷ ಬಣ’ ಹುಬ್ಬಳ್ಳಿ ಆಡಿಯೋ ವೈರಲ್ ಮಾಡಿದೆ ಎಂಬ ವ್ಯಾಖ್ಯಾನ ಕೂಡ ಹೊಸದಾಗಿ ಹುಟ್ಟಿಕೊಂಡಿದೆ.
ಒಟ್ಟಾರೆ ಈ ವೀಡಿಯೋ- ಆಡಿಯೋ ಪ್ರಕರಣ ಬಿಜೆಪಿಯ ಒಳಗೆ ಆಂತರಿಕವಾಗಿ ಯಾರ ಕೊರಳಿಗೆ ಸುತ್ತಿಕೊಳ್ಳಲಿದೆ ಎಂಬ ಕುತೂಹಲ ಒಂದು ಕಡೆಯಾದರೆ, ಸುಪ್ರೀಂ ತೀರ್ಪಿನ ಮೂಲಕ ಅನರ್ಹರ ಭವಿಷ್ಯದ ಮೇಲೆ ಯಾವ ಪರಿಣಾಮ ಬೀರಲಿದೆ ಎಂಬ ಲೆಕ್ಕಾಚಾರಗಳು ಮತ್ತೊಂದು ಕಡೆ. ಈ ನಡುವೆ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಈ ವಿಷಯವನ್ನು ಎಷ್ಟು ಸಮರ್ಥವಾಗಿ ರಾಜಕೀಯ ಮತ್ತು ಕಾನೂನು ಹೋರಾಟಕ್ಕೆ ಬಳಸಿಕೊಳ್ಳುತ್ತವೆ ಎಂಬ ಕುತೂಹಲವೂ ಇದೆ. ಜೊತೆಗೆ, ಪ್ರಕರಣದ ವಿಷಯದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನಡೆಯುತ್ತಿರುವ ಹೇಳಿಕೆ ಮತ್ತು ಪ್ರತಿಹೇಳಿಕೆಯ ಕೆಸರೆರಚಾಟ ಕೂಡ ಸಾರ್ವಜನಿಕರ ಪಾಲಿಗೆ ಪುಕ್ಕಟ್ಟೆ ಮನರಂಜನೆಯಂತಾಗಿದೆ.
ಆದರೆ, ಅಂತಿಮವಾಗಿ ಅನರ್ಹರ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ತೀರ್ಪು ಏನಾಗಲಿದೆ? ಆ ತೀರ್ಪಿನಲ್ಲಿ ಈ ಆಡಿಯೋ-ವೀಡಿಯೋ ಪ್ರಕರಣದ ಬಗ್ಗೆ ಯಾವ ಉಲ್ಲೇಖ ಮಾಡಲಾಗುತ್ತದೆ ಎಂಬುದೇ ಇಡೀ ಪ್ರಕರಣದ ಭವಿಷ್ಯವನ್ನು ನಿರ್ಧರಿಸಲಿದೆ ಎಂಬುದು ವಾಸ್ತವ!