ರಾಜ್ಯ ಜಾತ್ಯತೀತ ಜನತಾ ದಳ ಮತ್ತೊಮ್ಮೆ ಬಿಜೆಪಿಯ ಕದ ತಟ್ಟತೊಡಗಿದೆ. ಕಳೆದ ಒಂದು ವಾರದಿಂದ ಬಿಜೆಪಿ ಮತ್ತು ಸಿಎಂ ಬಿ ಎಸ್ ಯಡಿಯೂರಪ್ಪ ವಿಷಯದಲ್ಲಿ ಮೃದುವಾಗುತ್ತಲೇ ಇದ್ದ ಜೆಡಿಎಸ್ ನಾಯಕರ ಧೋರಣೆ, ಇದೀಗ ಸಂಪೂರ್ಣ ಕರಗಿ ನೀರಾಗಿದೆ. ಸ್ವತಃ ಜಾತ್ಯತೀತ ವರಿಷ್ಠ ಎಚ್ ಡಿ ದೇವೇಗೌಡರೇ ಯಡಿಯೂರಪ್ಪ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದ್ದಾಗಿ ಹೇಳುವ ಮೂಲಕ ಬಿಜೆಪಿ ಮತ್ತು ಜೆಡಿಎಸ್ ಸಖ್ಯದ ಎರಡನೇ ಪರ್ವ ಆರಂಭದ ಸೂಚನೆ ನೀಡಿದ್ದಾರೆ.
ಆ ಮೂಲಕ ಉಪಚುನಾವಣೆಗೆ ಮುನ್ನವೇ ರಾಜ್ಯ ರಾಜಕಾರಣ ಮಗ್ಗಲು ಬದಲಿಸುವ ಸಾಧ್ಯತೆಯನ್ನು ಗೌಡರು ತೆರೆದಿಟ್ಟಿದ್ದು, ಅವರ ಈ ಹೊಸ ನಡೆ ಏಕ ಕಾಲಕ್ಕೆ ಹಲವು ಸೇನಾಧಿಪತಿಗಳನ್ನು ಬಲಿ ಹೊಡೆಯುವುದು ಬಹುತೇಕ ಖಚಿತ. ಹಾಗೇ, ಆಪರೇಷನ್ ಕಮಲದ ಕುರಿತ ಸಿಎಂ ಯಡಿಯೂರಪ್ಪ ಹೊಸ ಆಡಿಯೋ ಹೊರಬರುತ್ತಲೇ, ‘ದಳ’ಪತಿಗಳ ಈ ಕೂಡಿಕೆ ಬಯಕೆ ತೀವ್ರವಾಗಿರುವುದರ ಹಿಂದಿನ ಮರ್ಮವೇನು ಎಂಬ ಬಗ್ಗೆ ಕೂಡ ಕುತೂಹಲ ಗರಿಗೆದರಿದೆ. ಆಪರೇಷನ್ ಕಮಲ ಆಡಿಯೋ ಬಹಿರಂಗ, ಐಎಂಎ, ಟೆಲಿಫೋನ್ ಕದ್ದಾಲಿಕೆ ಸೇರಿ ಹಿಂದಿನ ಮೈತ್ರಿ ಸರ್ಕಾರದ ಅವಧಿಯ ಸರಣಿ ಹಗರಣಗಳ ಕುರಿತ ತನಿಖೆ, ಜೆಡಿಎಸ್ ಪಕ್ಷದ ಆಂತರಿಕ ಬಿಕ್ಕಟ್ಟು, ಅನರ್ಹ ಶಾಸಕರ ಪ್ರಕರಣದಲ್ಲಿ ಇನ್ನೇನು ಹೊರಬೀಳಲಿರುವ ಸುಪ್ರೀಂಕೋರ್ಟ್ ತೀರ್ಪು, ವಿಪಕ್ಷ ನಾಯಕ ಸಿದ್ದರಾಮಯ್ಯ ರಾಜ್ಯ ಪ್ರವಾಸ, ಕಾವೇರುತ್ತಿರುವ ಉಪ ಚುನಾವಣಾ ಕಣ,.. ಹೀಗೆ ರಾಜ್ಯ ರಾಜಕಾರಣದ ತೀವ್ರ ವಿದ್ಯಮಾನಗಳ ಹಿನ್ನೆಲೆಯಲ್ಲಿ ನೋಡಿದರೆ, ‘ದಳ’ಪತಿಗಳಿಗೆ ಹೀಗೆ ದಿಢೀರನೇ ಬಿಎಸ್ ವೈ ಮೇಲೆ ‘ಲವ್ವು’ ಗರಿಗೆದರಿರುವುದರ ಹಿಂದಿನ ಕಾರಣ ಅರಿವಾಗದೇ ಇರದು!
ಬಿಎಸ್ ವೈ ನೇತೃತ್ವದ ಬಿಜೆಪಿ ಸರ್ಕಾರ ಅನಿರೀಕ್ಷಿತ ರೀತಿಯಲ್ಲಿ ರಾಜ್ಯದ ಅಧಿಕಾರದ ಗದ್ದುಗೆ ಏರಲು ಕಾರಣವಾಗಿದ್ದ 17 ಮಂದಿ ಅನರ್ಹ ಶಾಸಕರ ಅನರ್ಹತೆಯ ಪ್ರಕರಣದ ವಿಚಾರಣೆ ನಡೆಸಿ ಸುಪ್ರೀಂಕೋರ್ಟ್ ತನ್ನ ತೀರ್ಪನ್ನು ಇನ್ನೇನು ಪ್ರಕಟಿಸಲಿದೆ ಎನ್ನುವಷ್ಟರಲ್ಲಿ, ಸರಳ ಬಹುಮತದ ಮೇಲೆ ನಿಂತಿರುವ ಬಿಎಸ್ ವೈ ಸರ್ಕಾರ ಕುಸಿಯಲು ನಾವು ಬಿಡುವುದಿಲ್ಲ ಎಂದು ಜೆಡಿಎಸ್ ನಾಯಕ ಎಚ್ ಡಿ ಕುಮಾರಸ್ವಾಮಿ ಕಳೆದ ವಾರ ಹೇಳಿದ್ದರು. ಅವರ ಆ ಹೇಳಿಕೆ ರಾಜಕೀಯ ವಲಯದಲ್ಲಿ ಅಚ್ಚರಿಗೂ, ಹಲವು ಊಹಾಪೋಹಗಳಿಗೆ ಕಾರಣವಾಗಿತ್ತು. ಅದರ ಬೆನ್ನಲ್ಲೇ ಬಿಜೆಪಿ ವಿಷಯದಲ್ಲಿ ಮೃದು ಧೋರಣೆ ಇಲ್ಲ ಎಂಬ ಸ್ಪಷ್ಟನೆಯೂ ಮಾಜಿ ಮುಖ್ಯಮಂತ್ರಿಯಿಂದ ಹೊರಬಿದ್ದಿತ್ತು.
ಆದರೆ, ಕುಮಾರಸ್ವಾಮಿಯ ಹೇಳಿಕೆ ಮತ್ತು ಸ್ಪಷ್ಟನೆಗಳ ಹೊರತಾಗಿಯೂ ಆ ಬಗ್ಗೆ ದೊಡ್ಡ ಗೌಡರು ಯಾವುದೇ ‘ಜಾತ್ಯತೀತ ಬದ್ಧತೆ’ ಪ್ರದರ್ಶಿಸದೇ ಇರುವುದರ ಹಿನ್ನೆಲೆಯಲ್ಲಿ ಸಾಕಷ್ಟು ಅನುಮಾನಗಳು ಹುಟ್ಟಿಕೊಂಡಿದ್ದವು. ಏಕೆಂದರೆ, 2006ರ ಬಿಜೆಪಿ- ಜೆಡಿಎಸ್ 20:20 ಸರ್ಕಾರ ರಚನೆಯಾದಾಗ ಸುಮಾರು ಒಂದೂವರೆ ವರ್ಷ ಕಾಲ ಮಗನೊಂದಿಗಿನ ಸಂಬಂಧವನ್ನೇ ಕಡಿದುಕೊಂಡಿದ್ದೇನೆ ಎಂದು ತಮ್ಮ ಜಾತ್ಯತೀತತೆ ತಮ್ಮ ಟ್ಯಾಗ್ ಕಾಯ್ದುಕೊಳ್ಳಲು ಇನ್ನಿಲ್ಲದ ಸಾಹಸ ಮಾಡಿದ್ದರು. ಪ್ರತಿ ಬಾರಿಯೂ ಬಿಜೆಪಿ ಜೊತೆಗಿನ ನಂಟಿನ ಪ್ರಶ್ನೆ ಎದುರಾದಾಗೆಲ್ಲಾ ಮೈಮೇಲೆ ಬೆಂಕಿ ಸುರಿದಂತೆ ಬೆಚ್ಚಿಬಿದ್ದು ಖಂಡತುಂಡವಾಗಿ ಬಿಜೆಪಿಯನ್ನು ವಿರೋಧಿಸುತ್ತಿದ್ದರು. ಆದರೆ, ಈಗ ಕುಮಾರಸ್ವಾಮಿ ಅವರು ಬಿಜೆಪಿ ಸರ್ಕಾರವನ್ನು ಬೀಳಲು ಬಿಡೆವು ಎಂದು ಹೆಗಲು ಕೊಟ್ಟು ನಿಲ್ಲುವ ಉಮೇದು ತೋರುತ್ತಿರುವಾಗ ಗೌಡರು ತುಟಿಬಿಚ್ಚಲೇ ಇಲ್ಲ! ಹನ್ನೆರಡು ವರ್ಷ ಹಿಂದಿನಂತೆ ಈಗಲೂ ದೊಡ್ಡ ಗೌಡರ ಈ ಮೌನವೇ ಸಮ್ಮತಿ ಎಂಬ ವ್ಯಾಖ್ಯಾನಗಳೂ ರಾಜಕೀಯ ವಲಯದಲ್ಲಿ ಕೇಳಿಬಂದಿದ್ದವು.
ಇದೀಗ ಸ್ವತಃ ದೇವೇಗೌಡರೇ ಅಂತಹ ರಾಜಕೀಯ ಪಂಡಿತರ ಊಹೆಗಳನ್ನು ನೂರಕ್ಕೆ ನೂರರಷ್ಟು ನಿಜ ಮಾಡಿದ್ದಾರೆ. ‘ಯಡಿಯೂರಪ್ಪ ನಮ್ಮ ಶತ್ರುವಲ್ಲ; ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು’ ಎಂದೂ ಹೇಳುವ ಮೂಲಕ ರಾಜಕೀಯದ ಹಾದಿಯಲ್ಲಿ ಈಗಾಗಲೇ ಆಗಬೇಕಾದ್ದು ಆಗತೊಡಗಿದೆ ಎಂಬ ಸೂಚನೆಯನ್ನೂ ದೊಡ್ಡ ಗೌಡರು ನೀಡಿದ್ದಾರೆ! ಯಡಿಯೂರಪ್ಪ ಕೂಡ ‘ಮಾಜಿ ಪ್ರಧಾನಿ ದೇವೇಗೌಡರು ಹಿರಿಯರಿದ್ದಾರೆ. ಅವರಿಗೆ ಯಾವುದು ಸರಿ, ಯಾವುದು ತಪ್ಪು ಎಂಬುದು ಗೊತ್ತಿದೆ’ ಎನ್ನುವ ಮೂಲಕ ತಾವಿಬ್ಬರು ಮಾತನಾಡಿರುವುದು ನಿಜ ಎಂದಿದ್ದಾರೆ.
ಆದರೆ, ಯಡಿಯೂರಪ್ಪ ಮತ್ತು ಬಿಜೆಪಿ ವಿರುದ್ಧ ಕಳೆದ ಹನ್ನೆರಡು ವರ್ಷಗಳಿಂದ ಬೆಂಕಿ ಕಾರುತ್ತಲೇ ಇದ್ದ ಕುಮಾರಸ್ವಾಮಿ ಮತ್ತು ದೇವೇಗೌಡರು ಮತ್ತು ಈ ‘ಅಪ್ಪ-ಮಕ್ಕಳೇ ತಮ್ಮ ವಿರೋಧಿಗಳು. ಅವರನ್ನು ರಾಜಕೀಯವಾಗಿ ಮುಗಿಸುವವರಗೆ ನಾನು ನಿದ್ದೆ ಮಾಡುವುದಿಲ್ಲ’ ಎಂದು ಕೇವಲ ವರ್ಷದ ಹಿಂದೆ ಶಪತಮಾಡಿದ್ದ ಯಡಿಯೂರಪ್ಪ, ಇದೀಗ ಹೀಗೆ ದಿಢೀರ್ ದೋಸ್ತಿ ಬೆಸೆದುಕೊಳ್ಳಲು ಕಾರಣವೇನು? ಎಂಬುದು ಸದ್ಯಕ್ಕೆ ಹತ್ತಾರು ಕೋನಗಳ, ಹತ್ತಾರು ಉತ್ತರಗಳ ಹೊಳೆಸುತ್ತಿರುವ ಪ್ರಶ್ನೆ.
ತತಕ್ಷಣಕ್ಕೆ ಕುಮಾರಸ್ವಾಮಿಯವರಿಗೆ ಬಿಎಸ್ ವೈ ಮೇಲೆ ಕಾಳಜಿ ಉಕ್ಕಲು, ಪ್ರಮುಖವಾಗಿ ಐಎಂಎ ಬಹುಕೋಟಿ ವಂಚನೆ ಹಗರಣದಲ್ಲಿ ತನಿಖೆ ಬಿಗಿಯಾದಲ್ಲಿ ತಮಗೆ ಕಳಂಕ ಬರಬಹುದು ಮತ್ತು ಟೆಲಿಫೋನ್ ಕದ್ದಾಲಿಕೆ ಪ್ರಕರಣದಲ್ಲಿಯೂ ತಮಗೆ ಉರುಳಾಗಬಹುದು ಎಂಬ ಭೀತಿ ಕಾರಣವೆನ್ನಲಾಗುತ್ತಿದೆ. ಆದರೆ, ಕುಮಾರಸ್ವಾಮಿ ಅವರು ಈ ಆರೋಪಗಳನ್ನು ತಳ್ಳಿಹಾಕಿದ್ದರು. ದೇವೇಗೌಡರು ಕೂಡ ತಾವು ಸಿಎಂ ಜೊತೆ ದೂರವಾಣಿ ಸಂಭಾಷಣೆ ನಡೆಸಿದ್ದಾಗಿ ಹೇಳಿದ ಬಳಿಕ ತನಿಖೆಗಳಿಂದ ಬಚಾವಾಗಲು ಬಿಎಸ್ ವೈ ನಂಟು ಬಯಸುತ್ತಿರುವ ಊಹೆ ಇನ್ನಷ್ಟು ಬಲಬಂದಿತ್ತು. ಗೌಡರು ತನಿಖೆಯ ಉರುಳಿದ್ದ ಮಗನನ್ನು ಉಳಿಸುವ ಉದ್ದೇಶದಿಂದಲೇ ತಾವು ನಖಶಿಖಾಂತ ದ್ವೇಷಿಸುತ್ತಿದ್ದ ಬಿಜೆಪಿ ನಾಯಕರೊಂದಿಗೆ ಮಾತುಕತೆ ನಡೆಸಿದ್ದಾರೆ ಎಂದೇ ವಿಶ್ಲೇಷಿಸಲಾಗಿತ್ತು.
ಜೊತೆಗೆ, ಈಗಾಗಲೇ ಕುಮಾರಸ್ವಾಮಿ ನಾಯಕತ್ವದ ವಿರುದ್ಧ ಸಿಡಿದೆದ್ದಿರುವ ಪಕ್ಷ ಶಾಸಕರು, ಬಹುತೇಕ ಮಂದಿ ಬಿಜೆಪಿ ಕಡೆ ಮುಖ ಮಾಡಿದ್ದಾರೆ. ಅಲ್ಲದೆ, ಆಪರೇಷನ್ ಕಮಲಕ್ಕೊಳಗಾಗಿ ರಾಜೀನಾಮೆ ನೀಡಿದವರೂ ಬಿಜೆಪಿಯ ಹೊಸ್ತಿಲಲ್ಲೇ ಇದ್ದಾರೆ. ಹಾಗಾಗಿ, ಅವರೆಲ್ಲರನ್ನು ಎದೆಗುಂದಿಸಿ ಪಕ್ಷದ ಬಿಕ್ಕಟ್ಟನ್ನು ಸದ್ಯಕ್ಕೆ ಶಮನಗೊಳಿಸುವ ತಂತ್ರವಾಗಿ ಈ ಮಾತುಕತೆ ಮತ್ತು ಬೆಂಬಲದ ಹೇಳಿಕೆಗಳನ್ನು ನೀಡಲಾಗಿದೆ. ಅಲ್ಲದೆ, ಒಂದು ವೇಳೆ ಉಪಚುನಾವಣೆಯಲ್ಲಿ 12ಕ್ಕಿಂತ ಕಡಿಮೆ ಸ್ಥಾನ ಬಂದಲ್ಲಿ, ಸರ್ಕಾರ ಕುಸಿಯಲಿದೆ. ಅಂತಹ ಸಂದರ್ಭದಲ್ಲಿ ಸರ್ಕಾರ ಉಳಿಸಿಕೊಳ್ಳಲು ಬಿಜೆಪಿ ಮತ್ತೊಂದು ಸುತ್ತಿನ ಆಪರೇಷನ್ ಕಮಲ ನಡೆಸಲಿದ್ದು, ಬಹುತೇಕ ಜೆಡಿಎಸ್ ಶಾಸಕರಿಗೆ ಗಾಳ ಹಾಕಲು ಹೊಂಚುತ್ತಿದೆ. ಈಗಾಗಲೇ ಕೆಲವು ಶಾಸಕರು ಅವರ ಸಂಪರ್ಕದಲ್ಲಿದ್ದಾರೆ ಎಂಬ ಮಾಹಿತಿಗಳ ಹಿನ್ನೆಲೆಯಲ್ಲಿಯೂ ಗೌಡರು, ತಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳುವ ತಂತ್ರವಾಗಿಯೂ ಈ ದೋಸ್ತಿಯ ತಂತ್ರ ಹೂಡಿದ್ದಾರೆ ಎನ್ನಲಾಗುತ್ತಿದೆ.
ಅದೇ ಹೊತ್ತಿಗೆ, ಒಂದು ವೇಳೆ ಉಪ ಚುನಾವಣೆಯಲ್ಲಿ ಅಗತ್ಯ ಸ್ಥಾನ ಗೆಲ್ಲಲಾಗದೆ ಬಿಜೆಪಿ ಸರ್ಕಾರ ಕುಸಿದಲ್ಲಿ, ಮಧ್ಯಂತರ ಚುನಾವಣೆ ಎದುರಾಗಲಿದೆ. ಆಗ ಸದ್ಯದ ಸ್ಥಿತಿಯಲ್ಲಿ ಕಾಂಗ್ರೆಸ್ ಬಹುಮತ ಪಡೆಯುವ ವಾತಾವರಣವಿದೆ. ಹಾಗಾದಲ್ಲಿ ಸಿದ್ದರಾಮಯ್ಯ ಮತ್ತೆ ಸಿಎಂ ಆಗುವ ಸಾಧ್ಯತೆ ಇದೆ. ಹಾಗಾಗಿ ಸಿದ್ದು ಸಿಎಂ ಆಗುವುದನ್ನು ತಡೆಯದೇ ಹೋದರೆ ಜೆಡಿಎಸ್ ಪಕ್ಷಕ್ಕೆ ಉಳಿಗಾಲವಿಲ್ಲ ಎಂಬ ಲೆಕ್ಕಾಚಾರ ಕೂಡ ಗೌಡರದ್ದು. ಒಂದು ಕಡೆ ಬಿಜೆಪಿಗೆ ಬೆಂಬಲ ನೀಡುವ ಮೂಲಕ ಮಧ್ಯಂತರ ಚುನಾವಣೆ ತಡೆದು, ಸಿಎಂ ಆಗುವ , ಸಿದ್ದು ಬಯಕೆಗೆ ಬ್ರೇಕ್ ಹಾಕುವುದು, ಮತ್ತೊಂದು ಕಡೆ ಬಿಜೆಪಿಗೆ ತಾವು ಅನಿವಾರ್ಯ ಎಂಬ ಹಮ್ಮಿನಲ್ಲಿರುವ ಅನರ್ಹ ಶಾಸಕರಿಗೆ ನಿಮ್ಮ ನೆರವಿಲ್ಲದೆಯೂ ಸರ್ಕಾರ ಉಳಿಯಲಿದೆ ಎಂಬ ಸಂದೇಶ ನೀಡಿ, ಅವರನ್ನು ಕುಗ್ಗಿಸುವುದು ಕೂಡ ಗೌಡರ ತಂತ್ರ ಎನ್ನಲಾಗುತ್ತಿದೆ.
ಗೌಡರ ಈ ತಂತ್ರದ ಸುಳಿವು ಸಿಕ್ಕಿರುವ ಹಿನ್ನೆಲೆಯಲ್ಲೇ, ಅನರ್ಹ ಶಾಸಕರ ಉಪಟಳದಿಂದ ಹೈರಾಣಾಗಿರುವ ಸಿಎಂ ಯಡಿಯೂರಪ್ಪ ಕೂಡ, ಗೌಡರ ಜೊತೆಗಿನ ತಮ್ಮ ಮಾತುಕತೆಯನ್ನು ಮಾಧ್ಯಮಗಳಿಗೆ ಸ್ಪಷ್ಟಪಡಿಸುವಾಗ, ಕೆಲವು ಒಗಟಿನ ಮಾತುಗಳನ್ನು ಆಡಿದ್ದಾರೆ. ಗೌಡರ ಬಗ್ಗೆ ಆದರದ ಮಾತುಗಳನ್ನಾಡುವ ಮೂಲಕ ತಾವೂ ಅಗತ್ಯಬಿದ್ದಲ್ಲಿ ಜೆಡಿಎಸ್ ಬೆಂಬಲ ಪಡೆಯುವ ಮನಸ್ಸು ಮಾಡಿರುವ ಸಂದೇಶ ನೀಡಿದ್ದಾರೆ. ಬಿಎಸ್ ವೈ ಆ ಹೇಳಿಕೆ, ಕೇವಲ ಅನರ್ಹರನ್ನು ಮಾತ್ರವಲ್ಲದೆ, ಬಿಜೆಪಿಯ ಒಳಗೆ ಇರುವ ಅವರ ವಿರೋಧಿ ಪಾಳೆಯಕ್ಕೂ ನಡುಕ ಹುಟ್ಟಿಸಿದೆ. ಏಕೆಂದರೆ ಆಪರೇಷನ್ ಕಮಲದ ಕುರಿತ ಬಿಎಸ್ ವೈ ಹೇಳಿಕೆಯ ಆಡಿಯೋವನ್ನೇ ಇಟ್ಟುಕೊಂಡು ಅವರನ್ನು ಸಿಎಂ ಕುರ್ಚಿಯಿಂದ ಇಳಿಸಿ, ತಾವು ಅಧಿಕಾರಕ್ಕೇರಬೇಕು ಎಂಬ ಕನಸು ಕಾಣುತ್ತಿರುವ ಬಿಜೆಪಿಯ ಕೆಲವು ನಾಯಕರಿಗೆ ಜೆಡಿಎಸ್ ವರಿಷ್ಠರು ಮತ್ತು ಬಿಎಸ್ ವೈ ನಡುವಿನ ಈ ಅನಿರೀಕ್ಷಿತ ದೋಸ್ತಿ ಬೆಚ್ಚಿಬೀಳಿಸಿದೆ. ತಮ್ಮ ವಿರುದ್ಧ ಷಢ್ಯಂತ್ರ ನಡೆಸಿ ಕೆಳಗಿಳಿಸುವ ಪ್ರಯತ್ನ ಮಾಡಿದರೆ, ಸಂದರ್ಭ ಬಂದರೆ ಜೆಡಿಎಸ್ ನಾಯಕರು ತಮ್ಮ ನೆರವಿಗೆ ನಿಲ್ಲಲಿದ್ದಾರೆ . ಆ ಬಳಿಕದ ರಾಜಕೀಯ ಚಿತ್ರಣ ಏನು ಬೇಕಾದರೂ ಆಗಬಹುದು ಎಂಬ ಸಂದೇಶವನ್ನೂ ಈ ವಿದ್ಯಮಾನ ಬಿಎಸ್ ವೈ ವಿರೋಧಿ ಪಾಳೆಯಕ್ಕೆ ರವಾನಿಸಿದೆ.
ಹೀಗೆ ಸದ್ಯದ ರಾಜ್ಯ ರಾಜಕಾರಣದ ವಿದ್ಯಮಾನಗಳ ಹಿನ್ನೆಲೆಯಲ್ಲಿ ಎತ್ತ ಕಡೆಯಿಂದ ನೋಡಿದರೂ, ಜೆಡಿಎಸ್ ವರಿಷ್ಠರು ಮತ್ತು ಬಿಎಸ್ ವೈ ನಡುವಿನ ಈ ‘ಕುಚುಕುಕುಚುಕು’ ಭಾರೀ ತಂತ್ರಗಾರಿಕೆ ಎನಿಸದೇ ಇರದು. ಒಂದೇ ಕಲ್ಲಿಗೆ ಕೇವಲ ಎರಡು ಹಕ್ಕಿಯಲ್ಲ; ಬದಲಾಗಿ ಹಲವು ಹಕ್ಕಿ ಹೊಡೆಯುವ ಚಾಣಾಕ್ಷ ನಡೆ ಇದು. ಆದರೆ, ಎಲ್ಲಾ ಚಾಣಾಕ್ಷತನಗಳಿಗೂ ಇರುವಂತೆ, ಈ ನಡೆಗೂ ತಿರುಗುಬಾಣವಾಗುವ ಅಪಾಯವಿದ್ದೇ ಇದೆ. ಈಗಾಗಲೇ ಬಿಜೆಪಿಯ ಮತ್ತು ಜೆಡಿಎಸ್ ಎರಡೂ ಕಡೆ ಕೆಲವು ಶಾಸಕರು ಇಂತಹ ಹೇಳಿಕೆಗಳ ಹಿನ್ನೆಲೆಯಲ್ಲಿ ಚುರುಕಾಗಿದ್ದಾರೆ. ಜೆಡಿಎಸ್- ಬಿಜೆಪಿ ಮೈತ್ರಿಯ ಮತ್ತೊಂದು ಪರ್ವ ಬಂದರೆ, ತಮ್ಮ ತಮ್ಮ ಕ್ಷೇತ್ರ ಮತ್ತು ವೈಯಕ್ತಿಕ ರಾಜಕೀಯ ಭವಿಷ್ಯದ ಹಿನ್ನೆಲೆಯಲ್ಲಿ ಏನೇನಾಗಬಹುದು ಎಂಬ ಅಂದಾಜು ಆರಂಭಿಸಿರುವ ಅವರು, ಈ ಹೇಳಿಕೆಗಳ ಬಗ್ಗೆ ಈಗಾಗಲೇ ಅಸಮಾಧಾನ ಹೊರಹಾಕಿದ್ದಾರೆ.
ಸದ್ಯಕ್ಕಂತೂ ರಾಜಕೀಯ ಚಾಣಾಕ್ಷತೆಯ ಮಜಬೂತು ನಡೆಯಂತೆ ಕಾಣುತ್ತಿರುವ ಈ ವಿದ್ಯಮಾನ, ಮುಂದಿನ ದಿನಗಳಲ್ಲಿ ರಾಜ್ಯ ರಾಜಕೀಯಕ್ಕೆ ನೀಡುವ ತಿರುವುಗಳು ತೀವ್ರ ಕುತೂಹಲ ಕೆರಳಿಸಿವೆ.