ಭಾರತೀಯ ಜನತಾ ಪಕ್ಷ ಎಂಬುದು ಭಾರತದ ಸದ್ಯದ ಪರಿಸ್ಥಿತಿಯಲ್ಲಿ ಮಹಾನ್ ‘ಕಳಂಕ ತೊಳೆಯುವ ಯಂತ್ರ’ ಎಂಬ ಮಾತಿಗೆ ಇದೀಗ ಮಹಾರಾಷ್ಟ್ರದ ಬಹುಕೋಟಿ ನೀರಾವರಿ ಹಗರಣದ ಆರೋಪಿ ಮತ್ತು ನೂತನ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ವಿರುದ್ಧದ ಪ್ರಕರಣ ಹೊಸ ಸೇರ್ಪಡೆಯಾಗಿದೆ.
ಬಿಜೆಪಿ ಕಳೆದ ಚುನಾವಣೆಯಲ್ಲಿ ಎನ್ ಸಿ ಪಿ ನಾಯಕನ ವಿರುದ್ಧದ ಪ್ರಮುಖ ಚುನಾವಣಾ ಅಸ್ತ್ರವಾಗಿ ಬಳಸಿದ್ದ ಸುಮಾರು ಎಪತ್ತು ಸಾವಿರ ಕೋಟಿ ರೂ. ಹಗರಣಕ್ಕೆ ಸಂಬಂಧಿಸಿದ ಒಂಭತ್ತು ಪ್ರಕರಣಗಳನ್ನು, ಇದೀಗ ಬಿಜೆಪಿ ನೇತೃತ್ವದ ಸರ್ಕಾರಕ್ಕೆ ಬೆಂಬಲ ಸೂಚಿಸಿ, ದೇವೇಂದ್ರ ಫಡ್ನವೀಸ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲು ಏಣಿಯಾದ ಕೇವಲ 48 ಗಂಟೆಯಲ್ಲೇ ಕೈಬಿಡಲಾಗಿದೆ. ಶನಿವಾರ ಅಜಿತ್ ಪವಾರ್ ಬೆಂಬಲದೊಂದಿಗೆ ಬಿಜೆಪಿಯ ಫಡ್ನವೀಸ್ ಅಧಿಕಾರ ಸ್ವೀಕರಿಸಿದ್ದರು. ಅವರೊಂದಿಗೆ ಅಜಿತ್ ಕೂಡ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಸ್ವತಃ ಸರ್ಕಾರ ರಚನೆಯ ಆ ಕ್ರಮದ ಬಗ್ಗೆಯೇ ಕಾನೂನು ಸಮರ ಸುಪ್ರೀಂಕೋರ್ಟ್ ಮೆಟ್ಟಿಲೇರಿರುವಾಗ, ಸರ್ಕಾರದ ಬಹುಮತದ ಬಗ್ಗೆಯೇ ಅನಿಶ್ಚಿತತೆ ಇರುವಾಗ, ಸೋಮವಾರ ಬಹುಕೋಟಿ ಹಗರಣದ ತನಿಖೆ ನಡೆಸುತ್ತಿದ್ದ ಎಸಿಬಿ, ದಿಢೀರನೇ ಒಂಭತ್ತು ಪ್ರಕರಣಗಳನ್ನು ರದ್ದುಪಡಿಸಿರುವುದು ಸಹಜವಾಗೇ ತೀವ್ರ ಟೀಕೆಗೆ ಕಾರಣವಾಗಿದೆ.
2014ಕ್ಕೆ ಮುನ್ನ ಕಾಂಗ್ರೆಸ್- ಎನ್ ಸಿಪಿ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿದ್ದ ಅಜಿತ್ ಅವಧಿಯಲ್ಲಿ ರಾಜ್ಯದ ಬರಪೀಡಿತ ವಿದರ್ಭ ಪ್ರಾಂತ್ಯದಲ್ಲಿ ನಡೆಸಲಾಗಿದ್ದ ನೀರಾವರಿ ಯೋಜನೆಗಳಲ್ಲಿ ಬರೋಬ್ಬರಿ 70,000 ಕೋಟಿ ರೂ. ಅವ್ಯವಹಾರ ನಡೆದಿರುವುದಾಗಿ ಹೇಳಿದ್ದ ಫಡ್ನವೀಸ್ ನೇತೃತ್ವದ ಸರ್ಕಾರ, ಅಧಿಕಾರಕ್ಕೆ ಬರುತ್ತಲೇ ಪ್ರಕರಣದ ತನಿಖೆಯನ್ನು ಎಸಿಬಿಗೆ ವಹಿಸಿತ್ತು. ಅಲ್ಲದೆ, ಕಳೆದ ತಿಂಗಳು ನಡೆದ ವಿಧಾನಸಭಾ ಚುನಾವಣೆಯಲ್ಲೂ ಬಿಜೆಪಿ ಮತ್ತು ಮುಖ್ಯಮಂತ್ರಿ ಫಡ್ನವೀಸ್ ಇದೇ ಪ್ರಕರಣವನ್ನು ಚುನಾವಣೆಯಲ್ಲಿ ಪ್ರಮುಖ ಅಸ್ತ್ರವಾಗಿ ಬಳಸಿ, ‘ತಾವು ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ, ಅಜಿತ್ ಸೇರಿದಂತೆ ಎನ್ ಸಿಪಿ ನಾಯಕರು ಜೈಲಿನಲ್ಲಿ ಕಲ್ಲು ಒಡೆಯುವುದು ಖಾಯಂ’ ಎಂದೂ ಘೋಷಿಸಿದ್ದರು. ಆದರೆ, ಇದೀಗ ತಮ್ಮ ಕುರ್ಚಿ ಉಳಿಸಿಕೊಳ್ಳಲು ಚುನಾವಣೆಯಲ್ಲಿ ಯಾರನ್ನು ಜೈಲಿಗೆ ಕಳಿಸುವುದಾಗಿ ಹೇಳಿದ್ದರೋ ಅವರೊಂದಿಗೇ ಕೈಜೋಡಿಸಿದ್ದು, ವೀರಾವೇಶದ ಹೇಳಿಕೆಗಳನ್ನು ನೀಡಿದ್ದ ಅದೇ ಪ್ರಕರಣದಲ್ಲಿ ಅಜಿತ್ ಅವರಿಗೆ ಕ್ಲೀನ್ ಚಿಟ್ ನೀಡಲಾಗಿದೆ!
ಮಾಧ್ಯಮಗಳಲ್ಲಿ ಎಸಿಬಿಯ ಈ ಕ್ರಮ ಮತ್ತು ಸದ್ಯದ ಬಿಜೆಪಿ ಮತ್ತು ಎನ್ ಸಿಪಿ ಅಜಿತ್ ಬಣದ ನಡುವಿನ ಮೈತ್ರಿಯ ಹಿನ್ನೆಲೆಯಲ್ಲಿ ಮಾಧ್ಯಮಗಳಲ್ಲಿ ತೀವ್ರ ಟೀಕೆ ವ್ಯಕ್ತವಾಗುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಮಹಾರಾಷ್ಟ್ರ ಎಸಿಬಿ, ಈ ಒಂಭತ್ತು ಪ್ರಕರಣಗಳು ನೀರಾವರಿ ಹಗರಣಕ್ಕೆ ಸಂಬಂಧಪಟ್ಟವೇ ಆದರೂ, ಅವು ನೇರವಾಗಿ ಅಜಿತ್ ಪವಾರ್ ಅವರಿಗೆ ಸಂಬಂಧಿಸಿದವುಗಳಲ್ಲ ಎಂಬ ಸ್ಪಷ್ಟನೆ ನೀಡಿದೆ. ಆದರೆ, ಮಹಾರಾಷ್ಟ್ರದಲ್ಲಿ 2014ಕ್ಕೂ ಮುನ್ನ, ವಿದರ್ಭ ಪ್ರಾಂತ್ಯದಲ್ಲಿ ನಡೆದಿದೆ ಎನ್ನಲಾಗಿರುವ ನೀರಾವರಿ ಯೋಜನೆ ಅಕ್ರಮಗಳಿಗೆ ಸಂಬಂಧಪಟ್ಟ ಪ್ರಕರಣಗಳನ್ನೇ ಕೈಬಿಡಲಾಗಿದೆ ಎಂಬುದನ್ನು ಸ್ವತಃ ಎಸಿಬಿ ಒಪ್ಪಿಕೊಂಡಿದೆ! ಹಾಗಾಗಿ ಇದು ಬಿಜೆಪಿ ಮತ್ತು ಸ್ವತಃ ಎಸಿಬಿಗೆ ಆಗುವ ಮುಜಗರ ತಪ್ಪಿಸಿಕೊಳ್ಳುವ ಯತ್ನವಷ್ಟೇ ಆಗಿದ್ದು, ವಾಸ್ತವವಾಗಿ ಅಜಿತ್ ವಿರುದ್ಧದ ಪ್ರಕರಣಗಳನ್ನೇ ಕೈಬಿಡಲಾಗಿದೆ ಎಂದು ಪ್ರತಿಪಕ್ಷಗಳು ಟೀಕಿಸಿವೆ.
ಹಾಗೆ ನೋಡಿದರೆ, ಪ್ರತಿಪಕ್ಷವಾಗಿ ತನಗೆ ಪ್ರತಿಸ್ಪರ್ಧೆ ಒಡ್ಡುವಾಗ ಅವರ ವಿರುದ್ಧ ತನಿಖೆ ನಡೆಸುವ, ಜಾರಿ ನಿರ್ದೇಶನಾಲಯ, ಆದಾಯ ತೆರಿಗೆ ಇಲಾಖೆ, ಸಿಬಿಐ ದಾಳಿಗಳ ಮೂಲಕ ಬೆದರಿಸುವ ಪ್ರಯತ್ನಗಳನ್ನು ಮಾಡುವ ಬಿಜೆಪಿ, ಒಮ್ಮೆ ಅದೇ ಕಳಂಕಿತರು ತನ್ನ ಅಧಿಕಾರ ದಾಹಕ್ಕೆ ಊರುಗೋಲಾಗಿ ನಿಂತರೆ ಅಥವಾ ಪಕ್ಷಕ್ಕೆ ಸೇರ್ಪಡೆಯಾದರೆ, ತಾನೇ ಛೂ ಬಿಟ್ಟಿದ್ದ ತನಿಖಾ ಸಂಸ್ಥೆಗಳಿಂದಲೇ ಅವರಿಗೆ ಕ್ಲೀನ್ ಚಿಟ್ ಕೊಡಿಸಿ, ಕಳಂಕರಹಿತರನ್ನಾಗಿ ಮಾಡುವ ಜಾದೂ ಪ್ರದರ್ಶಿಸುತ್ತಿರುವುದು ಇದೇ ಮೊದಲೇನಲ್ಲ. ಈಗಾಗಲೇ ಕರ್ನಾಟಕ, ಹರ್ಯಾಣ, ಬಿಹಾರ ಸೇರಿದಂತೆ ಹಲವು ನಾಯಕರ ವಿಷಯದಲ್ಲಿ ಇದು ಮತ್ತೆ ಮರುಕಳಿಸುತ್ತಲೇ ಇದೆ. ಹಾಗಾಗಿಯೇ ಪ್ರತಿಪಕ್ಷಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿಯ ವಿರುದ್ದ ಮಹಾನ್ ‘ಕಳಂಕ ತೊಳೆಯುವ ಯಂತ್ರ’ ಅಥವಾ ‘ಗ್ರೇಟ್ ವಾಷಿಂಗ್ ಮಷೀನ್’ ಎಂಬ ಟೀಕೆಗಳು, ಕುಹಕದ ಮಾತುಗಳು ಚಾಲ್ತಿಯಲ್ಲಿವೆ.
ಸ್ವತಃ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ನಾರಾಯಣ ರಾಣೆ ವಿರುದ್ದವೂ ಬಿಜೆಪಿ ಈ ಹಿಂದೆ ಹಣಕಾಸು ಅವ್ಯವಹಾರ ಮತ್ತು ಭೂ ಹಗರಣಗಳ ಆರೋಪದ ಮೇಲೆ ಬಿಜೆಪಿ ಭಾರೀ ಟೀಕೆಗಳನ್ನು ಮಾಡಿತ್ತು ಮತ್ತು ತನಿಖೆಗೂ ಆಗ್ರಹಿಸಿತ್ತು. ಆದರೆ, ಕಳೆದ ವರ್ಷ ಅವರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗುತ್ತಲೇ ಎಲ್ಲವೂ ತಣ್ಣಗಾಗಿತ್ತು. ಸಿಬಿಐ ಮತ್ತು ಇಡಿ ಕೂಡ ಅವರ ವಿರುದ್ಧದ ಪ್ರಕರಣಗಳನ್ನು ಮೂಲೆಗುಂಪು ಮಾಡಿ ಶಸ್ತ್ರತ್ಯಾಗ ಮಾಡಿತ್ತು. ಇದೇ ವರಸೆ ಪಶ್ಚಿಮಬಂಗಾಳದ ಟಿಎಂಸಿ ನಾಯಕ ಮುಕುಲ್ ರಾಯ್ ವಿಷಯದಲ್ಲಿಯೂ ಕಮಲ ಪಾಳೆಯದಿಂದ ಪ್ರದರ್ಶನವಾಗಿತ್ತು. ರಾಯ್ ವಿರುದ್ಧ ಶಾರದಾ ಚಿಟ್ ಫಂಡ್ ಹಗರಣ ಸೇರಿದಂತೆ ಹಲವು ಆರೋಪಗಳನ್ನು ಮಾಡಿ ಸಿಬಿಐ ಮತ್ತಿತರ ತನಿಖಾ ಸಂಸ್ಥೆಗಳನ್ನು ಛೂ ಬಿಟ್ಟಿದ್ದ ಬಿಜೆಪಿ, ಕಳೆದ ವರ್ಷ ಅವರು ತನ್ನ ತೆಕ್ಕೆಗೆ ಬರುತ್ತಿದ್ದಂತೆ ಎಲ್ಲವನ್ನೂ ಬದಿಗೆ ಸರಿಸಿ, ಅವರನ್ನು ಮಹಾನ್ ನಾಯಕ ಎಂದು ಬಿಂಬಿಸಿತ್ತು.
ಕರ್ನಾಟಕದ ಹಾಲಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಕೂಡ ಬಿಜೆಪಿಯ ಈ ಡಬಲ್ ಸ್ಟ್ಯಾಂಡರ್ಡ್ ವರಸೆಗೆ ಹೊರತಾದವರಲ್ಲ. 2012-13ರಲ್ಲಿ ಅವರು ಬಿಜೆಪಿ ತೊರೆದು ಕೆಜೆಪಿ ಪಕ್ಷ ಕಟ್ಟಿ ವಿಧಾನಸಭಾ ಚುನಾವಣೆಯಲ್ಲಿ ಕಮಲ ಪಾಳೆಯದ ವಿರುದ್ಧ ತೊಡೆತಟ್ಟಿದ್ದಾಗ, ಇಡೀ ಚುನಾವಣಾ ಪ್ರಚಾರದುದ್ದಕ್ಕೂ ಬಿಜೆಪಿಯ ರಾಜ್ಯ ಮತ್ತು ರಾಷ್ಟ್ರನಾಯಕರು ಅವರ ವಿರುದ್ಧದ ಸಾಲುಸಾಲು ಭ್ರಷ್ಟಾಚಾರ ಪ್ರಕರಣಗಳನ್ನೇ ಎತ್ತಿ ಆಡಿದ್ದರು. ಅಲ್ಲದೆ, ಅವರನ್ನು ಜೈಲಿಗೆ ಹೋಗಿ ಬಂದವರು ಎಂದೇ ಮೂದಲಿಸಿದ್ದರು. ಆದರೆ, ಅದಾಗಿ ಕೇವಲ ಒಂದೇ ವರ್ಷದಲ್ಲೇ ಅವರನ್ನು ಮತ್ತೆ ತನ್ನ ತೆಕ್ಕೆಗೆ ಎಳೆದುಕೊಳ್ಳುತ್ತಲೇ ಅವರು ರಾಜ್ಯದ ‘ಪ್ರಶ್ನಾತೀತ ನಾಯಕ’ರಾಗಿ ಬದಲಾಗಿಬಿಟ್ಟಿದ್ದರು. ಅಷ್ಟರಮಟ್ಟಿಗೆ ಬಿಜೆಪಿಯ ಮಹಾನ್ ಕಳಂಕ ತೊಳೆಯುವ ಯಂತ್ರದ ದಕ್ಷತೆ ಕೆಲಸ ಮಾಡಿತ್ತು!
ಈಗಾಗಲೇ ಇಡಿ, ಸಿಬಿಐ ಮತ್ತು ಐಟಿ ಇಲಾಖೆಗಳಿಂದ ತನಿಖೆಗೊಳಗಾಗಿ ತಿಹಾರ್ ಜೈಲು ದರ್ಶನ ಮಾಡಿಬಂದಿರುವ ಕಾಂಗ್ರೆಸ್ ನಾಯಕ ಡಿ ಕೆ ಶಿವಕುಮಾರ್ ಮತ್ತು ಅವರ ಸಹೋದರರ ವಿಷಯದಲ್ಲಿಯೂ ಬಿಜೆಪಿಯ ಈ ಪವಾಡಸದೃಶ ಯಂತ್ರದ ಪ್ರಯೋಗದ ಪ್ರಯತ್ನಗಳು ನಡೆದಿದ್ದವು ಎಂದು ಸ್ವತಃ ಅವರೇ ಹೇಳಿದ್ದರು. ಬಿಜೆಪಿಗೆ ಸೇರಿದರೆ ನಿಮ್ಮ ವಿರುದ್ಧದ ಎಲ್ಲಾ ಪ್ರಕರಣಗಳನ್ನು ಕೈಬಿಡುವುದಾಗಿ ಬಿಜೆಪಿಯ ಹೈಕಮಾಂಡ್ ನಿಂದಲೇ ಆಮಿಷ ಒಡ್ಡಲಾಗಿತ್ತು. ಆದರೆ ತಾವು ಆ ಆಮಿಷಕ್ಕೆ ಮಣಿಯಲಿಲ್ಲ. ಹಾಗಾಗಿಯೇ ತಮ್ಮ ವಿರುದ್ಧ ಹೀಗೆ ಸೇಡು ತೀರಿಸಿಕೊಳ್ಳಲಾಗುತ್ತಿದೆ ಎಂದು ಡಿ ಕೆ ಶಿವಕುಮಾರ್ ಮತ್ತು ಅವರ ಸಹೋದರ ಡಿ ಕೆ ಸುರೇಶ್ ನೇರ ಆರೋಪ ಮಾಡಿದ್ದರು. ಅಲ್ಲದೆ 2018ರ ವಿಧಾನಸಭಾ ಚುನಾವಣೆಗೂ ಎರಡು ವರ್ಷ ಮುನ್ನವೇ ಬಿಜೆಪಿ ಆ ಇಬ್ಬರಿಗೆ ಗಾಳ ಹಾಕಿತ್ತು ಮತ್ತು ಅವರು ಬಿಜೆಪಿಗೆ ಸೇರಿದರೆ ಅದಕ್ಕೆ ಪ್ರತಿಯಾಗಿ ಅವರ ವಿರುದ್ಧದ ಎಲ್ಲಾ ಆರೋಪಗಳಲ್ಲಿ ಕ್ಲೀನ್ ಚಿಟ್ ನೀಡುವ ಭರವಸೆ ನೀಡಲಾಗಿದೆ ಎಂಬ ಮಾತು ರಾಜ್ಯ ರಾಜಕಾರಣದಲ್ಲಿ ಚಾಲ್ತಿಯಲ್ಲಿತ್ತು.
ಕೆಲವೇ ದಿನಗಳ ಹಿಂದೆ ಹರ್ಯಾಣದಲ್ಲಿ ಮೈತ್ರಿ ಸರ್ಕಾರ ರಚನೆಯ ಸಂದರ್ಭದಲ್ಲಿಯೂ ಬಿಜೆಪಿ ಅಧಿಕಾರ ಹಿಡಿಯಲು ಇದೇ ಮಹಾನ್ ಕಳಂಕ ತೊಳೆಯುವ ಯಂತ್ರದ ತನ್ನ ತಂತ್ರವನ್ನೇ ಬಳಸಿಕೊಂಡಿತು. ಅಲ್ಲಿನ ಅಧಿಕಾರ ಹಿಡಿಯಲು ದುಷ್ಯಂತ್ ಚೌತಾಲರ ಜೆಜೆಪಿಯ ಬೆಂಬಲ ಪಡೆದ ಬಿಜೆಪಿ, ಅಧಿಕಾರಕ್ಕೆ ಬರುತ್ತಲೆ ಆ ಪಕ್ಷದ ನಾಯಕ ಅಜಯ್ ಚೌಟಾಲ ವಿರುದ್ಧದ ಪ್ರಕರಣಗಳನ್ನು ಕೈಬಿಟ್ಟಿತ್ತು.
ಇದೀಗ ಮಹಾರಾಷ್ಟ್ರದಲ್ಲಿಯೂ ಅದೇ ವರಸೆ ಮುಂದುವರಿದಿದ್ದು, ಬಿಜೆಪಿಯ ಅಧಿಕಾರದ ಹಾವುಏಣಿ ಆಟದಲ್ಲಿ ದೇಶದ ತನಿಖಾ ಸಂಸ್ಥೆಗಳು ದಾಳಗಳಾಗಿ ಬಳಕೆಯಾಗುತ್ತಿರುವುದಕ್ಕೆ ಮತ್ತೊಂದು ನಿದರ್ಶನ ದೊರೆತಿದೆ. ರಾಜ್ಯಮಟ್ಟದ ತನಿಖಾ ಸಂಸ್ಥೆಗಳಿಂದ ಹಿಡಿದು ಸಿಬಿಐ, ಇಡಿ, ಐಟಿಯವರೆಗೆ ಸ್ವಾಯತ್ತ ಮತ್ತು ಸಂವಿಧಾನಿಕ ಸಂಸ್ಥೆಗಳನ್ನು ಕೂಡ ಬಿಜೆಪಿ ತನ್ನ ಪಕ್ಷದ ಮೋರ್ಚಾಗಳಂತೆ ಬಳಸುತ್ತಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕುಹಕದ ಮಾತುಗಳು ಕೇಳಿಬರುತ್ತಿರುವ ಹೊತ್ತಲ್ಲಿ ಈ ಹೊಸ ಪ್ರಕರಣ ಇನ್ನಷ್ಟು ಅಪಹಾಸ್ಯಕರ ಸನ್ನಿವೇಶ ಸೃಷ್ಟಿಸಿದೆ.
ಈ ನಡುವೆ, ಮಹಾರಾಷ್ಟ್ರದ ರಾಜಕೀಯ ಅನಿಶ್ಚಿತತೆ ಸೋಮವಾರವೂ ಮುಂದುವರಿದಿದ್ದು, ಬಿಜೆಪಿ ಮತ್ತು ಅಜಿತ್ ಅವರ ಸರ್ಕಾರ ರಚನೆಯ ಕ್ರಮಬದ್ಧತೆಯನ್ನು ಮತ್ತು ರಾಜ್ಯಪಾಲರ ಕ್ರಮವನ್ನು ಪ್ರಶ್ನಿಸಿ ಎನ್ ಸಿಪಿ, ಶಿವಸೇನಾ ಮತ್ತು ಕಾಂಗ್ರೆಸ್ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿರುವ ಸುಪ್ರೀಂಕೋರ್ಟ್, ಮಂಗಳವಾರ ಬೆಳಗ್ಗೆ 10.30ಕ್ಕೆ ತನ್ನ ತೀರ್ಪು ಪ್ರಕಟಿಸಲಿದೆ. ಈ ನಡುವೆ, ಎನ್ ಸಿಪಿ, ಶಿವಸೇನಾ ಮತ್ತು ಕಾಂಗ್ರೆಸ್ ಮುಂಬೈನ ಖಾಸಗಿ ಹೋಟೆಲ್ ಒಂದರಲ್ಲಿ ತನ್ನ ಶಾಸಕರ ಪರೇಡ್ ನಡೆಸಿ, ಬಿಜೆಪಿಗೆ ಅದು ಹೇಳಿಕೊಂಡಷ್ಟು ಬೆಂಬಲವಿಲ್ಲ. ರಾಜ್ಯಪಾಲರು ಶಾಸಕರ ಬಲವನ್ನು ನೋಡಿ ತಮ್ಮ ನಿರ್ಧಾರ ಕೈಗೊಂಡಿಲ್ಲ ಎಂದು ಆರೋಪಿಸಿವೆ. ಹೋಟೆಲಿನಲ್ಲಿ ನಾವು 162 ಶಾಸಕರು ಒಟ್ಟಾಗಿ ಇದ್ದೇವೆ, ಬಿಜೆಪಿಗೆ ಬೆಂಬಲಿಸುವ ಪ್ರಶ್ನೆಯೇ ಇಲ್ಲ, ಪಕ್ಷಕ್ಕೆ ದ್ರೋಹ ಬಗೆಯುವುದಿಲ್ಲ ಎಂದು ಶಾಸಕರು ಹೇಳಿದ್ದಾರೆ. ಒಗ್ಗಟ್ಟಿನ ಮಂತ್ರ ಪಠಿಸಿದ್ದಾರೆ. 288 ಸ್ಥಾನಬಲದ ವಿಧಾನಸಭೆಯಲ್ಲಿ ಸರಳ ಬಹುಮತಕ್ಕೆ 145 ಶಾಸಕರ ಅಗತ್ಯವಿದ್ದು, ಆ ಬಲ ತಮಗಿದೆ ಎಂದು ಬಿಜೆಪಿ ಪ್ರತಿಕ್ರಿಯಿಸಿದೆ. ಸದ್ಯ ಎಲ್ಲವೂ ಗೊಂಲದಮಯವಾಗಿದ್ದು, ಮಂಗಳವಾರ ಬೆಳಗಿನ ಸುಪ್ರೀಂಕೋರ್ಟ್ ತೀರ್ಪಿನ ಬಳಿಕ ಮಹಾರಾಷ್ಟ್ರ ಸರ್ಕಾರದ ಚಿತ್ರಣದ ಸ್ಪಷ್ಟವಾಗಲಿದೆ.