ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಯ ಸರ್ಕಸ್ಸು ಕೊನೆಗೂ ಕ್ಲೈಮಾಕ್ಸ್ ತಲುಪಿದೆ. ಕಳೆದ ನಾಲ್ಕು ದಿನಗಳಿಂದ ನಡೆದ ಕ್ಷಿಪ್ರ ರಾಜಕೀಯ ಬೆಳವಣಿಗೆಗಳಿಗೆ ಮಂಗಳವಾರ ಬೆಳಗಿನ ಸುಪ್ರೀಂಕೋರ್ಟ್ ತೀರ್ಪು ಸದ್ಯಕ್ಕೆ ಅಲ್ಪ ವಿರಾಮ ಹಾಕಿದ್ದು, ತೀರ್ಪಿನ ಪರಿಣಾಮವಾಗಿ ಬಿಜೆಪಿಯ ಮೂರು ದಿನ ಮುಖ್ಯಮಂತ್ರಿ ಫಡ್ನವೀಸ್ ರಾಜೀನಾಮೆ ನೀಡಿದ ಕೆಲವೇ ಕ್ಷಣಗಳಲ್ಲಿ ಶಿವಸೇನಾ-ಎನ್ ಸಿಪಿ- ಕಾಂಗ್ರೆಸ್ ಮೈತ್ರಿಯ ಶಾಸಕಾಂಗ ಪಕ್ಷದ ನಾಯಕರಾಗಿ ಉದ್ಧವ್ ಠಾಕ್ರೆ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಡಿಸೆಂಬರ್ ಒಂದರಂದು ನೂತನ ಮುಖ್ಯಮಂತ್ರಿಯಾಗಿ ಅವರು ಅಧಿಕಾರಸ್ವೀಕರಿಸಲಿದ್ದಾರೆ. ಈ ನಡುವೆ ಕೋರ್ಟ್ ಸೂಚನೆಯಂತೆ ಬುಧವಾರ ಬೆಳಗ್ಗೆ ಎಲ್ಲಾ ಶಾಸಕರೂ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಇದು ಎಲ್ಲರೂ ಬಲ್ಲ ರಾಜಕೀಯ ವಿದ್ಯಮಾನಗಳು. ಆದರೆ, ಈ ವಿದ್ಯಮಾನಗಳ ಹಿಂದಿನ ತಂತ್ರ-ಪ್ರತಿತಂತ್ರ, ಬಾಣ- ತಿರುಗುಬಾಣ, ಪಾಠ- ನೀತಿಪಾಠಗಳು ಏನು ಎಂಬುದು ಸುದ್ದಿಯಾಚೆಯ ಕುತೂಹಲ. ಬಿಜೆಪಿ ಮತ್ತು ಅದರ ಎನ್ ಡಿಎ ಮಿತ್ರಪಕ್ಷಗಳು ಹಾಗೂ ಮತ್ತೊಂದು ಕಡೆ ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳಿಗೆ ಮಹಾರಾಷ್ಟ್ರದ ಈ ಬೆಳವಣಿಗೆಗಳು ನೀಡುತ್ತಿರುವ ಸಂದೇಶವೇನು ಎಂಬ ಹಿನ್ನೆಲೆಯಲ್ಲಿ ನೋಡಿದರೆ, ಹಲವು ಮುನ್ಸೂಚನೆಗಳು, ಹಲವು ನೀತಿಪಾಠಗಳು ಕಾಣಿಸದೇ ಇರಲಾರವು.
ಮೊದಲನೆಯದಾಗಿ ತನ್ನ ಚುನಾವಣಾಪೂರ್ವ ಮಿತ್ರಪಕ್ಷ ಶಿವಸೇನಾದೊಂದಿಗಿನ ಸಿಎಂ ಹುದ್ದೆಯ ಚೌಕಾಸಿ ಕೈಗೂಡದೆ, ಅದು ಮೈತ್ರಿ ಮುರಿದುಕೊಂಡು ಹೋದ ಬಳಿಕ, ತನ್ನ ಸಂಖ್ಯಾಬಲ ಅಗತ್ಯ ಸರಳ ಬಹುಮತದ ಮ್ಯಾಜಿಕ್ ನಂಬರ್ ತಲುಪುವುದಿಲ್ಲ ಎಂಬ ಅರಿವಿದ್ದೂ ಬಿಜೆಪಿ ಅಪವಿತ್ರ ರಾಜಕೀಯ ಲಾಲಸೆಗೆ ಮುಂದಾಗಿದ್ದಕ್ಕೆ ಈಗ ತಕ್ಕ ಶಾಸ್ತಿ ಅನುಭವಿಸಿದೆ. ಅಗತ್ಯ ಸಂಖ್ಯಾಬಲವಿಲ್ಲದೇ ಹೋದರೂ, ಕರ್ನಾಟಕವೂ ಸೇರಿದಂತೆ ದೇಶದ ವಿವಿಧೆಡೆ ಮಾಡಿದಂತೆಯೇ ಆಪರೇಷನ್ ಕಮಲದ ಮೂಲಕ ಪ್ರತಿಪಕ್ಷಗಳ ಶಾಸಕರನ್ನು ಖರೀದಿಸಿ ಅಥವಾ ಬ್ಲಾಕ್ ಮೇಲ್ ಮಾಡಿ ತನ್ನತ್ತ ಸೆಳೆದುಕೊಂಡು ಬೆಂಬಲ ಕ್ರೋಡೀಕರಿಸಿ ಕುರ್ಚಿ ಹಿಡಿಯುವ ಯತ್ನವನ್ನು ಅಲ್ಲಿಯೂ ಮಾಡಲಾಯಿತು. ಎನ್ ಸಿಪಿ ಮುಖಂಡ ಹಾಗೂ ಮಾಜಿ ಮುಖ್ಯಮಂತ್ರಿ ಅಜಿತ್ ಪವಾರ್ ಅವರನ್ನೇ ಸೆಳೆದು, ಅವರೊಂದಿಗೆ ಅಗತ್ಯ ಸಂಖ್ಯೆಯ(40 ಮಂದಿ) ಶಾಸಕರನ್ನು ಕರೆತರುವಂತೆ ಹೇಳಿ, ಬಿಜೆಪಿ ಸರ್ಕಾರ ರಚನೆಗೆ ಮುಂದಾಯಿತು.
ಅಜಿತ್ ಬೆಂಬಲದ ಅಭಯದ ಮೇರೆಗೆ, ಕೇಂದ್ರ ಸಚಿವ ಸಂಪುಟದ ಒಪ್ಪಿಗೆಯನ್ನೂ ಪಡೆಯದೆ ರಾತ್ರೋರಾತ್ರಿ ನಿಯಮಗಳನ್ನು ಗಾಳಿಗೆ ತೂರಿ ರಾಷ್ಟ್ರಪತಿ ಆಡಳಿತವನ್ನು ಹಿಂತೆಗೆಸಿದ ಬಿಜೆಪಿ, ಬೆಳಗಿನ ಜಾವ ಫಡ್ನವೀಸ್ ಮುಖ್ಯಮಂತ್ರಿಯಾಗಿ, ಮತ್ತು ಅಜಿತ್ ಉಪಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವಂತೆ ನೋಡಿಕೊಂಡಿತು. ರಾಜ್ಯಪಾಲರು ಕೂಡ ಬಿಜೆಪಿಗೆ ಅಗತ್ಯ ಸಂಖ್ಯಾಬಲ ಇದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳದೆಯೇ ಸರ್ಕಾರ ರಚನೆಗೆ ಅವಕಾಶನೀಡಿದ್ದಲ್ಲದೆ, ಹೊತ್ತಲ್ಲದ ಹೊತ್ತಲ್ಲಿ ಪ್ರಮಾಣ ವಚನ ಬೋಧಿಸಿ ತಾವೊಬ್ಬ ಸಂವಿಧಾನಿಕ ಸ್ಥಾನದಲ್ಲಿರುವ ವ್ಯಕ್ತಿ ಎಂಬುದಕ್ಕಿಂತ ತಾವೊಬ್ಬ ಬಿಜೆಪಿ ಸಂಘಪರಿವಾರದ ವ್ಯಕ್ತಿ ಎಂಬಂತೆ ನಡೆದುಕೊಂಡರು. ರಾಷ್ಟ್ರಪತಿ ಆಡಳಿತ ಹಿಂತೆಗೆತದ ವಿಷಯದಲ್ಲಿ ರಾಷ್ಟ್ರಪತಿಗಳು ತಮ್ಮ ಹುದ್ದೆಗೆ ಧಕ್ಕೆ ಬರುವಂತೆ ನಡೆದುಕೊಂಡರೆ, ಸರ್ಕಾರ ರಚನೆ ಮತ್ತು ಪ್ರಮಾಣವಚನ ಬೋಧನೆ ವಿಷಯದಲ್ಲಿ ರಾಜ್ಯಪಾಲರು ತಮ್ಮ ಹುದ್ದೆಯ ಘನತೆಯನ್ನು ಮಣ್ಣುಪಾಲು ಮಾಡಿದರು ಎಂಬ ಮಾತುಗಳಿಗೆ ಈ ಬೆಳವಣಿಗೆಗಳು ಎಡೆಮಾಡಿಕೊಟ್ಟವು.
ರಾಜ್ಯಪಾಲರ ಈ ಕ್ರಮವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದ ಪ್ರತಿಪಕ್ಷಗಳಿಗೆ, ಮಂಗಳವಾರ ಬೆಳಗ್ಗೆ ಹೊರಬಿದ್ದು ತೀರ್ಪು ಹೊಸ ಭರವಸೆ ಮೂಡಿಸಿದರೆ, ಬಿಜೆಪಿಗೆ ರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಮುಖಭಂಗವಾಯಿತು. ಸುಪ್ರೀಂಕೋರ್ಟ್, ಮುಂದಿನ ಇಪ್ಪತ್ತು ನಾಲ್ಕು ತಾಸಿನಲ್ಲಿ ಬಹುಮತ ಸಾಬೀತು ಮಾಡಬೇಕು. ಗುಪ್ತ ಮತದಾನ ಮಾಡುವಂತಿಲ್ಲ; ಮತದಾನದ ಪ್ರಕ್ರಿಯೆ ನೇರಪ್ರಸಾರವಾಗಬೇಕು ಸೇರಿದಂತೆ ಹಾಕಿದ ಹಲವು ಷರತ್ತುಗಳಿಗೆ ಬೆದರಿದ ಅಜಿತ್, ನ್ಯಾಯಾಲಯದ ಕಣ್ಗಾವಲಿನಲ್ಲಿ ಬಿಜೆಪಿ ಸರ್ಕಾರಕ್ಕೆ ಸದನದಲ್ಲಿ ಬೆಂಬಲ ನೀಡಿ ಉಳಿಸಿಕೊಳ್ಳಲಾಗದು ಎಂದು ಅರಿತರು. ನ್ಯಾಯಾಲಯ ತೀರ್ಪು ಹೊರಬರುತ್ತಿದ್ದಂತೆ ಇನ್ನಷ್ಟು ಹುಮ್ಮಸ್ಸಿನಿಂದ ಒಗ್ಗೂಡಿದ ಪ್ರತಿಪಕ್ಷಗಳು ಶಾಸಕರ ಸಭೆ ನಡೆಸಿ ಒಮ್ಮತ ಪ್ರದರ್ಶಿಸಿದವು. ಈ ಬೆಳವಣಿಗೆಗಳ ನಡುವೆ ಅಜಿತ್ ತಮ್ಮ ಡಿಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ಅಜ್ಞಾತ ಸ್ಥಳಕ್ಕೆ ತೆರಳಿದರು. ಅದರ ಬೆನ್ನಲ್ಲೆ ಸುಪ್ರೀಂಕೋರ್ಟಿನ ತಪರಾಕಿಯಿಂದ ತೀವ್ರ ಘಾಸಿಗೊಂಡಿದ್ದ ಫಡ್ನವೀಸ್ ಕೂಡ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ, ಸಮರಕ್ಕೆ ಮುನ್ನವೇ ಶಸ್ತ್ರತ್ಯಾಗ ಮಾಡಿದರು.
ಆ ಮೂಲಕ ಬಿಜೆಪಿಯ ಅನೈತಿಕ ರಾಜಕಾರಣದ ವರಸೆಗೆ ಇಡೀ ದೇಶದ ಬೆಕ್ಕಸಬೆರಗಾಗಿ ನೋಡುವಂತಹ ತಪರಾಕಿ ಬಿದ್ದಿತು. ಅಜಿತ್ ಪವಾರ್ ಹೊಡೆದ ಯೂಟರ್ನ್, ಕಳೆದ ಶನಿವಾರ ರಾಜಭವನ ಮತ್ತು ರಾಷ್ಟ್ರಪತಿ ಭವನಗಳ ಮೂಲಕ ಅಧಿಕಾರದ ಕುರ್ಚಿ ಹಿಡಿದಿದ್ದ ಬಿಜೆಪಿ ಮತ್ತು ಅದರ ‘ಸೋ ಕಾಲ್ಡ್’ ಚಾಣಾಕ್ಷ ನಾಯಕರಿಗೆ ಸರಿಯಾದ ತಿರುಮಂತ್ರವನ್ನೇ ಹಾಕಿತ್ತು. ಮಿತ್ರಪಕ್ಷಗಳ ಮೇಲೆ ಸವಾರಿ ಮಾಡಿದರೆ ಅಂತಹ ದುರಂಹಕಾರದ ಮತ್ತು ಉದ್ಧಟತನಕ್ಕೆ ಯಾವ ಬೆಲೆ ತೆರಬೇಕಾಗುತ್ತದೆ ಎಂಬುದನ್ನು ಬಿಜೆಪಿಗೆ ಅದರಿಂದ ಸಿಡಿದು ದೂರಾಗಿ ಶತ್ರುಪಾಳೆಯ ಸೇರಿಕೊಂಡ ಶಿವಸೇನಾ ನಡೆ ತೋರಿಸಿಕೊಟ್ಟರೆ, ಅನೈತಿಕ ದಾರಿಗಳ ಮೂಲಕ ಅಧಿಕಾರದ ಕುರ್ಚಿಗೆ ಅಂಟಿಕೊಳ್ಳಲು ಪ್ರಯತ್ನಿಸಿದರೆ ಹೇಗೆ ಮುಖಮುಚ್ಚಿಕೊಂಡು ಮುಜುಗರದಿಂದ ಪಾರಾಗಬೇಕಾದ ನಾಚಿಕೆಗೇಡಿನ ಪರಿಸ್ಥಿತಿ ಎದುರಾಗುತ್ತದೆ ಎಂಬುದನ್ನು ಅಜಿತ್ ಪವಾರ್ ತೋರಿಸಿಕೊಟ್ಟಿದ್ದಾರೆ. ಆ ದೃಷ್ಟಿಯಿಂದ ಮಹಾರಾಷ್ಟ್ರದ ಕಳೆದ ಹದಿನೈದು ದಿನಗಳ ಈ ವಿದ್ಯಮಾನಗಳು ಬಿಜೆಪಿ ಪಾಲಿಗೆ ಮರೆಯದ ನೀತಿಪಾಠವಾಗಿ ಚರಿತ್ರೆಯಲ್ಲಿ ದಾಖಲಾಗಲಿವೆ.
ಜೊತೆಗೆ ರಾಷ್ಟ್ರೀಯ ಮಟ್ಟದಲ್ಲಿ ಮತ್ತು ಬಿಹಾರ ಸೇರಿದಂತೆ ವಿವಿಧ ರಾಜ್ಯಗಳ ಮಟ್ಟದಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವು ವಿವಿಧ ಪ್ರಾದೇಶಿಕ ಮತ್ತು ರಾಷ್ಟ್ರೀಯ ಪಕ್ಷಗಳಿಗೆ ಮಹಾರಾಷ್ಟ್ರದ ಈ ವಿದ್ಯಮಾನಗಳು ಒಂದು ಎಚ್ಚರಿಕೆಯ ಗಂಟೆಯಾಗಿದ್ದು, ಆ ಪಕ್ಷಗಳು ಕೂಡ ಭವಿಷ್ಯದಲ್ಲಿ ಬಿಜೆಪಿಯ ದಬ್ಬಾಳಿಕೆಯ ಮತ್ತು ದಾಷ್ಟ್ರ್ಯದ ನಡವಳಿಕೆಯ ವಿರುದ್ಧ ಶಿವಸೇನಾ ಮಾದರಿಯಲ್ಲೇ ಸಿಡಿದೇಳಲಿವೆ ಎಂಬ ಲೆಕ್ಕಾಚಾರಗಳೂ ಕೇಳಿಬರುತ್ತಿವೆ.
ಅದೇ ಹೊತ್ತಿಗೆ, ದೇಶದ ಪ್ರಜಾಪ್ರಭುತ್ವ, ಸಂವಿಧಾನ, ಕಾನೂನು, ನ್ಯಾಯಾಂಗ, ರಾಷ್ಟ್ರಪತಿ ಭವನ, ರಾಜಭವನಗಳ ಘನತೆ, ಗೌರವವನ್ನೆಲ್ಲಾ ಗಾಳಿಗೆ ತೂರಿ, ಕೇವಲ ಅಧಿಕಾರ ಹಿಡಿಯುವ ಸರ್ವಾಧಿಕಾರ ವರಸೆಯ ರಾಜಕಾರಣದ ವಿರುದ್ಧ ಪ್ರತಿಪಕ್ಷಗಳು ಹೇಗೆ ತಮ್ಮ ಸೈದ್ಧಾಂತಿಕ ಭಿನ್ನಾಭಿಪ್ರಾಯ, ನೀತಿ-ನಿಲುವಿನ ಕಂದಕಗಳನ್ನೆಲ್ಲಾ ಬದಿಗೊತ್ತಿ ಪರಸ್ಪರ ಕೈಜೋಡಿಸುತ್ತಿವೆ ಎಂಬುದಕ್ಕೂ ಮಹಾರಾಷ್ಟ್ರದ ಈ ಬೆಳವಣಿಗೆಗಳು ಸಾಕ್ಷಿಯಾಗಿವೆ. ಪರಸ್ಪರ ವಿರುದ್ಧ ಸಿದ್ಧಾಂತದ ಶಿವಸೇನಾ ಮತ್ತು ಕಾಂಗ್ರೆಸ್- ಎನ್ ಸಿಪಿ ಮೈತ್ರಿ ಕೈಜೋಡಿಸಿ ‘ಮಹಾ ಅಘಾಡಿ’ ರಚಿಸಿಕೊಂಡು, ಬಿಜೆಪಿಯ ಎಲ್ಲಾ ತಂತ್ರ- ಕುತಂತ್ರಗಳನ್ನೂ ಬುಡಮೇಲು ಮಾಡಿ ನ್ಯಾಯಾಂಗದ ಬಲದ ಮೇಲೆ ಸರ್ಕಾರ ರಚಿಸುವ ಅವಕಾಶ ಪಡೆದುಕೊಂಡಿವೆ. ಆ ಮೂಲಕ ಅತ್ಯಂತ ಪ್ರಬಲ ಮತ್ತು ದೇಶದ ರಾಜಕೀಯ ವ್ಯವಸ್ಥೆಯ ಮೇಲೆ ಮನಸೋಇಚ್ಛೆ ದಾಳಿ ನಡೆಸುತ್ತಿರುವ ಆಡಳಿತ ಪಕ್ಷದ ವಿರುದ್ಧ ರಾಷ್ಟ್ರಮಟ್ಟದಲ್ಲಿ ಪ್ರತಿಪಕ್ಷಗಳು ತಮ್ಮ ಎಲ್ಲ ಭಿನ್ನಮತವನ್ನೂ ಮೀರಿ ಹೇಗೆ ಒಂದಾಗಿ ಹೋರಾಡಬಹುದು? ರಾಜಕೀಯ ಪೈಪೋಟಿ ನೀಡಬಹುದು? ಮತ್ತು ಮುಖ್ಯವಾಗಿ ಪರ್ಯಾಯ ಆಯ್ಕೆಗಳಿಲ್ಲದೆ ಕಂಗೆಟ್ಟಿರುವ ದೇಶದ ಜನತೆಯ ಮುಂದು ಒಂದು ವಿಶ್ವಾಸಾರ್ಹ ರಾಜಕೀಯ ಪರ್ಯಾಯವನ್ನು ಇಡಬಹುದು ಎಂಬುದಕ್ಕೂ ಈ ಮೈತ್ರಿ ಒಂದು ಮಾದರಿಯಾಗಬಹುದು ಎಂಬ ವಿಶ್ಲೇಷಣೆಗಳೂ ಕೇಳಿಬರುತ್ತಿವೆ.
ಆ ದೃಷ್ಟಿಯಿಂದ ನೋಡಿದರೆ, ಪರಸ್ಪರ ವಿರುದ್ಧ ನಿಲುವುಗಳ ಈ ಮೈತ್ರಿ(ಸೇನಾ, ಕಾಂಗ್ರೆಸ್ ಮತ್ತು ಎನ್ ಸಿಪಿ) ಮುಂದಿನ ಐದು ವರ್ಷಗಳ ಕಾಲ ಎಷ್ಟು ಯಶಸ್ವಿಯಾಗಿ ಕೆಲಸ ಮಾಡಲಿದೆ? ಒಗ್ಗಟ್ಟಿನಲ್ಲಿ ಅವಧಿ ಪೂರ್ಣಗೊಳಿವುದೆ? ಎಂಬ ಮಹತ್ವದ ಪ್ರಶ್ನೆಗಳು ಕೂಡ ಇವೆ. ಆ ಪ್ರಶ್ನೆಗಳಿಗೆ ಮುಂದಿನ ದಿನಗಳಲ್ಲಿ ಸಿಗುವ ಉತ್ತರ ಈ ರಾಜಕೀಯ ಪ್ರಯೋಗದ ಭವಿಷ್ಯ ಮತ್ತು ಬಲವನ್ನು ನಿರ್ಧರಿಸಲಿದೆ. ಹಾಗೇ ಬಿಜೆಪಿ ಮತ್ತು ಮಿತ್ರಪಕ್ಷಗಳೊಂದಿಗಿನ ಅದರ ಸಂಬಂಧ ಹಾಗೂ ಭವಿಷ್ಯದಲ್ಲಿ ಅದು ನಡೆಸಲಿರುವ ಆಪರೇಷನ್ ಕಮಲಗಳ ಮೇಲೂ ಈ ಬೆಳವಣಿಗೆಗಳು ಪರಿಣಾಮಬೀರಲಿವೆ. ಅದರಲ್ಲೂ ಮುಖ್ಯವಾಗಿ ಆಪರೇಷನ್ ಕಮಲದ ಪರಿಣಾಮವಾಗಿಯೇ ಸದ್ಯ 15 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಎದುರಿಸುತ್ತಿರುವ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರದ ಭವಿಷ್ಯದ ಮೇಲೆಯೂ ಪರಿಣಾಮಬೀರಲಿದೆ. ಹಾಗೇ ರಾಜಭವನ ಮತ್ತು ರಾಷ್ಟ್ರಪತಿ ಭವನಗಳ ಘನತೆ ಕುಸಿಯಬಹುದಾದ ಕೀಳುಮಟ್ಟವನ್ನೂ ಈ ಬೆಳವಣಿಗಳು ಬಹಿರಂಗಪಡಿಸಿವೆ.
ಈ ಮೂರೂ ದೃಷ್ಟಿಯಿಂದಲೂ ಮಹಾರಾಷ್ಟ್ರದ ಈ ಬೆಳವಣಿಗಳು ದೇಶದ ಉದ್ದಗಲಕ್ಕೂ ಹಲವು ಎಚ್ಚರಿಕೆ ಗಂಟೆಯನ್ನೂ, ನೀತಿಪಾಠವನ್ನೂ, ಹೊಸ ರಾಜಕೀಯ ಸಮೀಕರಣಗಳ ಸಾಧ್ಯತೆಯನ್ನೂ ತೆರೆದಿಟ್ಟಿವೆ.