ಗಾಂಧಿ ಹಂತಕ ನಾಥೂರಾಂ ಗೋಡ್ಸೆಯನ್ನು ಆರಾಧಿಸುತ್ತಲೇ ಬಂದಿರುವ ಬಿಜೆಪಿ, ಇದೀಗ ಸಂಸತ್ ಭವನದ ಒಳಗೇ ಆತನನ್ನು ‘ದೇಶಭಕ್ತ’ ಎಂದು ಕರೆದಿದೆ! ಆ ಮೂಲಕ ಭಾರತವೂ ಸೇರಿದಂತೆ ಇಡೀ ಜಗತ್ತಿನ ಪಾಲಿನ ಭಯೋತ್ಪಾದಕನನ್ನು ಸಂವಿಧಾನ ಮತ್ತು ಕಾನೂನಿನ ಚಿಂತನ ಚಾವಡಿಯಲ್ಲಿಯೇ ಹಾಡಿಹೊಗಳುವ ಪ್ರಯತ್ನಕ್ಕೆ ಬಿಜೆಪಿ ಚಾಲನೆ ನೀಡಿದೆ.
ಹೌದು, ಮಂಗಳವಾರ ಲೋಕಸಭಾ ಕಲಾಪದ ವೇಳೆ ವಿಶೇಷ ಭದ್ರತಾ ಗುಂಪು(ಎಸ್ ಪಿಜಿ) ಕಾಯ್ದೆ ತಿದ್ದುಪಡಿ ಕುರಿತ ಚರ್ಚೆಯ ವೇಳೆ ಡಿಎಂಕೆ ನಾಯಕ ಎ ರಾಜಾ ಅವರು, ಪ್ರಧಾನಿ ಹೊರತುಪಡಿಸಿ ಉಳಿದವರಿಗೆ ಎಸ್ಪಿಜಿ ರಕ್ಷಣೆ ತೆಗೆದುಹಾಕುವುದು ಸರಿಯಲ್ಲ ಎಂದು ಹೇಳುತ್ತಾ, ತಾನು ಏಕೆ ಗಾಂಧಿ ಹತ್ಯೆ ಮಾಡಿದೆ ಎಂಬ ಬಗ್ಗೆ ಗೋಡ್ಸೆ ನೀಡಿದ್ದ ಹೇಳಿಕೆಯನ್ನು ಉಲ್ಲೇಖಿಸಿದರು. ಅಲ್ಲದೆ, ಒಂದು ನಿರ್ದಿಷ್ಟ ಸಿದ್ಧಾಂತದಲ್ಲಿ ಗೋಡ್ಸೆ ನಂಬಿಕೆ ಇಟ್ಟಿದ್ದರಿಂದಲೇ ಆತ ಗಾಂಧೀ ಹತ್ಯೆ ಮಾಡಿದ ಎಂದೂ ರಾಜಾ ವ್ಯಾಖ್ಯಾನಿಸಿದರು.
ಆ ವೇಳೆ, ಅವರ ಮಾತಿನ ನಡುವೆ ಬಾಯಿ ಹಾಕಿದ, ಮಾಲೆಗಾಂವ್, ಅಜ್ಮೀರ್ ದರ್ಗಾ ಸೇರಿದಂತೆ ಹಲವು ಬಾಂಬ್ ಸ್ಫೋಟ ಪ್ರಕರಣಗಳಲ್ಲಿ ಭಾಗಿಯಾದ ಆರೋಪದ ಮೇಲೆ ವಿಚಾರಣೆ ಎದುರಿಸುತ್ತಿರುವ ಬಿಜೆಪಿ ಸಂಸದೆ ಮತ್ತು ಸರ್ಕಾರದ ರಕ್ಷಣಾ ಸಮಿತಿ ಸದಸ್ಯೆ ಪ್ರಗ್ಯಾ ಸಿಂಗ್ ಠಾಕೂರ್, ‘ನೀವು ಈ ವಿಷಯದಲ್ಲಿ ದೇಶಭಕ್ತರ ಉದಾಹರಣೆ ಕೊಡಬೇಡಿ’ ಎಂದು ಆಕ್ಷೇಪಿಸಿದರು. ಆ ಮೂಲಕ ಗೋಡ್ಸೆಯನ್ನು ಗಾಂಧಿ ಹಂತಕ ಎಂದು ಕರೆಯದಂತೆ ಮತ್ತು ಆತನೊಬ್ಬ ‘ದೇಶಭಕ್ತ’ ಎಂದು ಒಪ್ಪಿಕೊಳ್ಳುವಂತೆ ಸಂಸತ್ತಿನ ಒಳಗೇ ಅಧಿಕೃತ ಆಡಳಿತ ಪಕ್ಷದ ಸದಸ್ಯೆಯಾಗಿ ಪ್ರಗ್ಯಾ ಒತ್ತಾಯಿಸಿದರು.
ಈ ಆಘಾತಕಾರಿ ಹೇಳಿಕೆಯ ವಿರುದ್ದ ಪ್ರತಿಪಕ್ಷಗಳು ಭಾರೀ ಆಕ್ಷೇಪ ವ್ಯಕ್ತಪಡಿಸಿ ಸದನದ ಕಲಾಪದಲ್ಲಿ ಕೋಲಾಹಲವೆಬ್ಬಿಸಿದವು. ಆದರೆ, ಆಡಳಿತರೂಢ ಬಿಜೆಪಿ ಸದಸ್ಯರು ಮಾತ್ರ ಯಾವ ಆಕ್ಷೇಪವನ್ನೂ, ವಿಷಾದವನ್ನು ವ್ಯಕ್ತಪಡಿಸಲಿಲ್ಲ! ದೇಶದ ಸಂವಿಧಾನದ ಶಕ್ತಿಕೇಂದ್ರ ಹಾಗೂ ಕಾನೂನು ಮತ್ತು ಸುವ್ಯವಸ್ಥೆಯ ಮೂಲ ಸ್ಥಳ ಸಂಸತ್ತಿನಲ್ಲಿಯೇ, ರಾಷ್ಟ್ರಪಿತನ ಹಂತಕನನ್ನು ದೇಶಭಕ್ತ ಎನ್ನುವ ಮೂಲಕ ಪ್ರಗ್ಯಾ, ಸಂಘಪರಿವಾರ ಮತ್ತು ಉಗ್ರ ಬಲಪಂಥೀಯ ಸಂಘಟನೆಗಳ ಬಹುದಿನಗಳ ಆಸೆಯನ್ನು ಪೂರೈಸಿದಂತಾಗಿದೆ. ಈ ಹಿಂದೆಯೂ ಪ್ರಗ್ಯಾ, ಬಿಜೆಪಿಯ ಅಧಿಕೃತ ಅಭ್ಯಯರ್ಥಿಯಾಗಿ ಲೋಕಸಭಾ ಚುನಾವಣಾ ಕಣದಲ್ಲಿರುವಾಗಲೇ ಗಾಂಧಿ ಹಂತಕನನ್ನು ದೇಶಭಕ್ತ ಎಂದು ಕರೆದಿದ್ದರು. ಆ ವಿವಾದ ಚುನಾವಣಾ ವಿಷಯವೂ ಆಗಿತ್ತು. ಆ ಬಳಿಕ, ಸಂಸದೆಯಾಗಿ ಆಯ್ಕೆಯಾದ ನಂತರವೂ ಹಲವು ಬಾರಿ ಗೋಡ್ಸೆಯನ್ನು ಸಮರ್ಥಿಸಿಕೊಂಡು ಸದನ ಹೊರಗೆ ಹೇಳಿಕೆಗಳನ್ನು ನೀಡಿದ್ದ ಪ್ರಗ್ಯಾಳನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದ ರಕ್ಷಣಾ ಸಮಿತಿಗೆ ನೇಮಕ ಮಾಡಲಾಗಿತ್ತು. ಕಳೆದ ವಾರವಷ್ಟೇ ನಡೆದ ಆ ನೇಮಕ ಕೂಡ ವಿವಾದ ಹುಟ್ಟುಹಾಕಿತ್ತು.
ಆಗಲೂ ಆಕೆಯನ್ನು ಸಮರ್ಥಿಸಿಕೊಂಡಿದ್ದ ಬಿಜೆಪಿ ಮತ್ತು ಸಂಘಪರಿವಾರ, ಇದೀಗ ಸಂಸತ್ತಿನ ಒಳಗೇ ದೇಶದ ಮೊದಲ ಭಯೋತ್ಪಾದಕನನ್ನು ‘ದೇಶಭಕ್ತ’ ಎಂದು ಕರೆದಾಗಲೂ ಅವರ ಹೇಳಿಕೆಯನ್ನು ವಿರೋಧಿಸುವುದಾಗಲೀ, ಅಲ್ಲಗಳೆಯುವುದಾಗಲೀ ಮಾಡಿಲ್ಲ ಎಂಬುದು ಗಮನಾರ್ಹ. ಕಲಾಪದ ನಡುವೆ ಆಕೆ ಆ ಹೇಳಿಕೆ ನೀಡದ್ದನ್ನು ಪ್ರತಿಭಟಿಸಿ ಪ್ರತಿಪಕ್ಷಗಳು ಆಕ್ರೋಶ ವ್ಯಕ್ತಪಡಿಸಿದಾಗ ಸರ್ಕಾರದ ಹಿರಿಯ ಸಚಿವರೂ ಸೇರಿದಂತೆ ಯಾರೊಬ್ಬರೂ ಅವರನ್ನು ತಡೆಯಲಿಲ್ಲ. ಅವರ ಹೇಳಿಕೆಯನ್ನು ತಿರಸ್ಕರಿಸಲಿಲ್ಲ. ಬದಲಾಗಿ, ಆಕೆಯನ್ನು ಮತ್ತಷ್ಟು ವಾದಕ್ಕೆ ಮುಂದಾಗದೆ ಕುಳಿತುಕೊಳ್ಳುವಂತೆ ಹೇಳಿ ಬಿಜೆಪಿ ನಾಯಕರು ಒಂದು ರೀತಿಯಲ್ಲಿ ಆಕೆಯ ಹೇಳಿಕೆಗೆ ಪಕ್ಷ ಮತ್ತು ಸರ್ಕಾರದ ಸಹಮತವಿದೆ ಎಂಬ ಸಂದೇಶ ರವಾನಿಸಿದರು. ಆದರೆ, ಅಂತಿಮವಾಗಿ ಪ್ರತಿಪಕ್ಷಗಳು ಆ ಹೇಳಿಕೆ ವಾಪಸು ಪಡೆಯಬೇಕು ಎಂದು ಪಟ್ಟುಹಿಡಿದಾಗ, ಸ್ಪೀಕರ್ ಆ ಹೇಳಿಕೆಯನ್ನು ಕಡತದಿಂದ ತೆಗೆಸಿದರು. ನಂತರ ಪ್ರತಿಪಕ್ಷ ಸದಸ್ಯರು ಆ ಹೇಳಿಕೆಗಾಗಿ ಕ್ಷಮೆಯಾಚಿಸುವಂತೆ ಬಿಜೆಪಿ ಸದಸ್ಯೆಗೆ ಹೇಳಿದರೂ ಆಕೆ ಅದಾವುದಕ್ಕೂ ಸೊಪ್ಪು ಹಾಕಲಿಲ್ಲ.
ಹಾಗೆ ನೋಡಿದರೆ, ಗೋಡ್ಸೆಯನ್ನು ದೇಶಭಕ್ತ ಎಂದು ಕರೆಯುವ, ಗಾಂಧಿಯನ್ನು ನಿಂದಿಸುವ, ರಾಷ್ಟ್ರಪಿತ ಅಲ್ಲ ಎಂಬಂತಹ ಹೇಳಿಕೆಗಳನ್ನು ನೀಡುವ ತಮ್ಮ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರ ವಿಷಯದಲ್ಲಿ ಬಿಜೆಪಿ ಹೀಗೆ ಮೌನ ಸಮ್ಮತಿ ಸೂಚಿಸುವ ವರಸೆ ಹೊಸದೇನೂ ಅಲ್ಲ. ಕಳೆದ ನಾಲ್ಕೈದು ವರ್ಷಗಳಲ್ಲಿ ದೇಶದ ಉದ್ದಗಲಕ್ಕೆ ಇಂತಹ ಹಲವು ವಿವಾದಾತ್ಮಕ ಹೇಳಿಕೆಗಳು ಬಂದಾಗೆಲ್ಲಾ ಬಿಜೆಪಿಯ ಸರ್ಕಾರ ಮತ್ತು ಪಕ್ಷಗಳೆರಡೂ ಒಂದೋ ಮೌನ ವಹಿಸಿವೆ, ಇಲ್ಲವೇ ಅಂತಹ ಹೇಳಿಕೆಗಳನ್ನು ಸಮರ್ಥಿಸಿಕೊಂಡಿವೆ.
ಪ್ರಗ್ಯಾ ಸಿಂಗ್ ವಿಷಯವನ್ನೇ ತೆಗೆದುಕೊಂಡರೂ, ಆಕೆ ಕಳೆದ ಮೇನಲ್ಲಿ ಲೋಕಸಭಾ ಚುನಾವಣೆ ಪ್ರಚಾರದ ವೇಳೆಯೇ ಗೋಡ್ಸೆಯನ್ನು ದೇಶಭಕ್ತ ಎಂದು ಕರೆದದ್ದೇ ಅಲ್ಲದೆ, ಆತನನ್ನು ಭಯೋತ್ಪಾದಕ ಎಂದು ಕರೆದವರಿಗೆ ಮುಂದಿನ ದಿನಗಳಲ್ಲಿ ತಕ್ಕ ಪ್ರತ್ಯುತ್ತರ ನೀಡಲಾಗುವುದು ಎಂಬ ಪರೋಕ್ಷ ಬೆದರಿಕೆಯನ್ನೂ ಹಾಕಿದ್ದರು. ಆರಂಭದಲ್ಲಿ ಎಂದಿನಂತೆ ಮೌನ ವಹಿಸಿದ್ದ ಬಿಜೆಪಿ ಪಕ್ಷ ಮತ್ತು ಅದರ ಅತಿರಥ-ಮಹಾರಥರು , ಆ ಹೇಳಿಕೆಯ ಬಗ್ಗೆ ದೇಶಾದ್ಯಂತ ಟೀಕೆ, ಆಕ್ರೋಶ ವ್ಯಕ್ತವಾಗುತ್ತಲೇ ಅಂತರ ಕಾಯ್ದುಕೊಂಡು ಚುನಾವಣಾ ಕಣದಲ್ಲಿ ಆಗಬಹುದಾದ ವ್ಯತಿರಿಕ್ತ ಪರಿಣಾಮದಿಂದ ಪಾರಾಗುವ ಪ್ರಯತ್ನ ಮಾಡಿದ್ದರು.
ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೇ ಆ ಬಗ್ಗೆ ಹೇಳಿಕೆ ನೀಡಿ, ‘ಅದೊಂದು ತಪ್ಪು ಹೇಳಿಕೆ ಮತ್ತು ಸಮಾಜಕ್ಕೆ ತಪ್ಪು ಸಂದೇಶ ನೀಡುವ ಹೇಳಿಕೆ. ಆ ಬಗ್ಗೆ ಆಕೆ ಕ್ಷಮೆಯಾಚಿಸಿದ್ದಾರೆ. ಅದೇನೇ ಇರಲಿ ನಾನು ಮಾತ್ರ ಆಕೆಯನ್ನು ಎಂದೂ ಕ್ಷಮಿಸಲಾರೆ’ ಎಂದಿದ್ದರು. ಆದರೆ, ಅದೇ ಮೋದಿಯವರೇ ಆಕೆಯನ್ನು ಇದೀಗ ರಕ್ಷಣಾ ಇಲಾಖೆಯ ಉನ್ನತಮಟ್ಟದ ಸಮಿತಿಗೆ ನೇಮಕ ಮಾಡಿ ಪುರಸ್ಕರಿಸಿದ್ದಾರೆ. ಅದೂ ಭಯೋತ್ಪಾದನೆಯ ಆರೋಪದಡಿ ಜೈಲುಶಿಕ್ಷೆ ಅನುಭವಿಸಿದ ಮತ್ತು ಇನ್ನೂ ಹಲವು ಪ್ರಕರಣಗಳಲ್ಲಿ ಈಗಲೂ ನ್ಯಾಯಾಲಯದಲ್ಲಿ ವಿಚಾರಣೆ ಎದುರಿಸುತ್ತಿರುವ ಆಕೆಯನ್ನು ದೇಶದ ಸುರಕ್ಷತೆ ಮತ್ತು ಭದ್ರತೆಗೆ ಸಂಬಂಧಿಸಿದ ನೀತಿನಿಲುವು ಕೈಗೊಳ್ಳುವ ಉನ್ನತ ಸಮಿತಿಯ ಸದಸ್ಯೆಯನ್ನಾಗಿ ಮಾಡುವ ಮೂಲಕ ಪರೋಕ್ಷವಾಗಿ ಸರ್ಕಾರ ಮತ್ತು ಸ್ವತಃ ಮೋದಿ, ತಮ್ಮ ಒಲವು ಮತ್ತು ನಿಲುವನ್ನು ತೋರಿಸಿದ್ದಾರೆ ಎಂಬ ಟೀಕೆಗಳು ಕೇಳಿಬಂದಿವೆ.
ಆ ವಿವಾದ ಇನ್ನೂ ಹಸಿಯಾಗಿರುವಾಗಲೇ, ಇದೀಗ ಅದೇ ರಕ್ಷಣಾ ಸಮಿತಿಯ ಸದಸ್ಯೆಯ ಸ್ಥಾನದಿಂದಲೇ ಮಾತನಾಡಿರುವ ಪ್ರಗ್ಯಾ, ಮತ್ತೊಮ್ಮೆ ಗಾಂಧಿ ಹಂತಕನಿಗೆ ದೇಶಭಕ್ತನ ಪಟ್ಟ ಕೊಟ್ಟಿದ್ದಾರೆ. ಆದರೆ, ಈ ಬಾರಿ ಹಾದಿಬೀದಿಯಲ್ಲಲ್ಲ; ಬದಲಾಗಿ ದೇಶದ ಸಂವಿಧಾನ ಮತ್ತು ಕಾನೂನು ಎತ್ತಿಹಿಡಿಯಬೇಕಾದ ಸಂವಿಧಾನಿಕ ಅತ್ಯುನ್ನತ ಸ್ಥಾನದಲ್ಲಿ ಕೂತು ಸಂಸತ್ತಿನ ಒಳಗೇ ಈ ಮಾತು ಹೇಳಿದ್ದಾರೆ ಮತ್ತು ಅದಕ್ಕೆ ಬಿಜೆಪಿ ಸರ್ಕಾರ ಮತ್ತು ಅದರ ಸಂಸತ್ ಸದಸ್ಯರು ಮೌನ ಸಮ್ಮತಿ ಸೂಚಿಸಿದ್ದಾರೆ ಎಂಬುದು ಆಘಾತಕಾರಿ ಸಂಗತಿ.
ಶಂಕಿತ ಭಯೋತ್ಪಾದಕಿಯೊಬ್ಬಳಿಗೆ ಚುನಾವಣಾ ಟಿಕೆಟ್ ನೀಡಿದಾಗಲೇ ಭವಿಷ್ಯದ ಇಂತಹ ಭೀಕರತೆಯ ಸುಳಿವು ಸಿಕ್ಕಿತ್ತು. ಆದರೆ, ಆಕೆಯನ್ನು ಅತಿ ಹೆಚ್ಚು ಬಹುಮತದೊಂದಿಗೆ ಆರಿಸಿ ಸಂಸತ್ತಿಗೆ ಕಳಿಸಿದ ಜನತೆಗೆ ಕವಿದಿದ್ದ ಮತಾಂಧತೆಯ ಮಂಕು ಅವರನ್ನು ಮಂಕುದಿಣ್ಣೆಗಳನ್ನಾಗಿ ಮಾಡಿತ್ತು. ಪರಿಣಾಮ ಈಗ ನಮ್ಮ ಕಣ್ಣ ಮುಂದಿದೆ!