ರಾಜ್ಯದ ಹದಿನೈದು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಕಣ ರಂಗೇರಿದೆ. ಮತದಾನದ ದಿನ ಸಮೀಪಿಸುತ್ತಿರುವಂತೆ, ಎಂದಿನಂತೆ ಪ್ರಮುಖ ರಾಜಕೀಯ ಪಕ್ಷಗಳ ಪ್ರಚಾರ ಭರಾಟೆ ಕೂಡ ಗರಿಗೆದರಿದೆ.
ಚುನಾವಣಾ ಕಣದಲ್ಲಿ ನಿರೀಕ್ಷೆಯಂತೆ ಐದು ತಿಂಗಳ ಬಿಜೆಪಿ ಸರ್ಕಾರದ ಸಾಧನೆಗಳ ಬಗ್ಗೆಯಾಗಲೀ, ನೆರೆ ಮತ್ತು ಬರದಂತಹ ಭೀಕರ ಸಮಸ್ಯೆಗಳ ನಿರ್ವಹಣೆಯಲ್ಲಿನ ಅದರ ವೈಫಲ್ಯಗಳ ಬಗ್ಗೆಯಾಗಲೀ ಚರ್ಚೆ ಕೇಳಿಬರುತ್ತಿಲ್ಲ. ಕನಿಷ್ಠ ಆಯಾ ಕ್ಷೇತ್ರಗಳ ಸ್ಥಳೀಯ ವಿಷಯಗಳೂ ಚುನಾವಣಾ ವಿಷಯಗಳಾಗಿಲ್ಲ. ಬದಲಾಗಿ ಹೀನಾಯ ರಾಜಕೀಯ ಕೆಸರೆರಚಾಟ, ವೈಯಕ್ತಿಕ ನಿಂದನೆ, ವ್ಯಂಗ್ಯ, ಕುಹಕದ ಮಾತುಗಳಿಗೆ ಇಡೀ ಪ್ರಚಾರಾಂದೋಲನ ಸೀಮಿತವಾಗಿದೆ.
ಇದು ರಾಜ್ಯದ ಚುನಾವಣಾ ಇತಿಹಾಸದಲ್ಲಿ ಹೊಸದೇನಲ್ಲ. ಆದರೆ, ಈ ಬಾರಿ ಚರ್ಚೆಯಾಗಲೇಬೇಕಾಗಿದ್ದ ವಿಷಯಗಳು ಹಲವು ಇದ್ದವು. ಒಂದು ಕಡೆ ಶತಮಾನ ಕಂಡುಕೇಳರಿಯದ ಭೀಕರ ಪ್ರವಾಹ ಮತ್ತೊಂದು ಕಡೆ ಬರ ಹಾಗೂ ಇಂತಹ ಭೀಕರ ಪರಿಸ್ಥಿತಿಯಲ್ಲೂ ಜನರ ಕಣ್ಣೀರು ಒರೆಸಬೇಕಾದ ಕೇಂದ್ರ ಸರ್ಕಾರ ಜಾಣಕುರುಡು- ಜಾಣಕಿವುಡುತನ ಪ್ರದರ್ಶಿಸಿತ್ತು. ರಾಜ್ಯ ಕೋರಿದ್ದ 38 ಸಾವಿರ ಕೋಟಿ ಪರಿಹಾರ ಪ್ಯಾಕೇಜಿಗೆ ಬದಲಾಗಿ ಕೇವಲ 1200 ಕೋಟಿ ಬಿಡಿಗಾಸಿನ ಪರಿಹಾರ ಘೋಷಿಸಿ ಕೈತೊಳೆದುಕೊಳ್ಳಲಾಗಿದೆ. ಆ ಪರಿಹಾರ ಕೂಡ ನಿಜವಾದ ಸಂತ್ರಸ್ತರಿಗೆ ಸಕಾಲಕ್ಕೆ ತಲುಪಿಲ್ಲ ಎಂಬ ಕೂಗು ಎಲ್ಲೆಡೆ ಕೇಳಿಬರುತ್ತಲೇ ಇದೆ. ಪರಿಹಾರ ಕಾರ್ಯಗಳು, ಸಾರ್ವಜನಿಕ ರಸ್ತೆ, ಸೇತುವೆ, ಶಾಲೆ ಮುಂತಾದ ಆಸ್ತಿಪಾಸ್ತಿ ದುರಸ್ತಿ ಮತ್ತು ಪುನರ್ ನಿರ್ಮಾಣ ಕಾರ್ಯಗಳು ಇನ್ನೂ ಕುಂಟುತ್ತಾ ಸಾಗಿವೆ. ರಾಜ್ಯದ ಉದ್ದಗಲಕ್ಕೆ ರಸ್ತೆಗಳ ದುರವಸ್ಥೆ ಹೀನಾಯ ಸ್ಥಿತಿ ತಲುಪಿದೆ.
ಈ ನಡುವೆ, ಸ್ವತಃ ತಮ್ಮ ಕ್ಷೇತ್ರಗಳು ಪ್ರವಾಹದ ನಡುವೆ ಕೊಚ್ಚಿಹೋಗುತ್ತಿರುವಾಗ ಜನರ ನೋವು-ನಷ್ಟಕ್ಕೆ ಕಿವಿಯಾಗುವ ಬದಲು, ಮುಂಬೈನ ರೆಸಾರ್ಟಿನಲ್ಲಿ ಮೋಜುಮಸ್ತಿಗೆ ಮೈಯೊಡ್ಡಿಕೊಂಡವರು ಇದೀಗ ಜನರ ಮೇಲೆ ಮತ್ತೊಂದು ಉಪ ಚುನಾವಣೆ ಹೇರಿದ್ದಾರೆ. ಈಗಲೂ ಸಂತ್ರಸ್ತರ ಗೋಳುಗಳ ಬಗ್ಗೆ ಸೊಲ್ಲೆತ್ತದ ಅವರುಗಳು ಮೈತ್ರಿ ಸರ್ಕಾರವನ್ನು ಬೀಳಿಸಿದ ತಮ್ಮ ದಿಗ್ವಿಜಯವನ್ನೇ ಜನರ ಮುಂದೆ ಕೊಚ್ಚಿಕೊಳ್ಳುತ್ತಾ ಮತ ಯಾಚಿಸುತ್ತಿದ್ದಾರೆ. ಕೆಲವು ಕಡೆಗಳಲ್ಲಿ ಜನ ಈ ಅನರ್ಹರಿಗೆ ನೀವು ಅಪ್ರಯೋಜಕರು ಎಂಬುದನ್ನು ನೇರವಾಗಿಯೇ ಹೇಳಿದ್ದಾರೆ. ಕೆಲವು ಕಡೆ ಪ್ರತಿರೋಧ, ದಿಗ್ಬಂಧನಗಳನ್ನು ಒಡ್ಡಲಾಗಿದೆ.
ಆದರೆ, ಪ್ರತಿಪಕ್ಷಗಳ ನಾಯಕರು ಇಡೀ ಚುನಾವಣೆಯನ್ನು ಸರ್ಕಾರದ ವೈಫಲ್ಯ ಮತ್ತು ಅನರ್ಹರ ಜನದ್ರೋಹದ ಮೇಲೆ ನಡೆಸುವ ಬದಲಾಗಿ, ಕ್ಷುಲ್ಲಕ ನಿಂದನೆ, ಪರಿಹಾಸ್ಯದ ಮಾತುಗಳಲ್ಲೇ ಪ್ರಚಾರವನ್ನು ಪರ್ಯಾವಸಾನಗೊಳಿಸುತ್ತಿರುವುದು ವಿಪರ್ಯಾಸ.
ಇಂತಹ ಲೆಜ್ಜೆಗೇಡಿ ವರಸೆಗೆ ಚಿಕ್ಕಬಳ್ಳಾಪುರದ ಮಂಚೇನಹಳ್ಳಿಯಲ್ಲಿ ಅನರ್ಹ ಬಿಜೆಪಿಯ ಅಭ್ಯರ್ಥಿ ಡಾ ಸುಧಾಕರ್ ಪರ ಪ್ರಚಾರದ ವೇಳೆ ಮಾಜಿ ರಾಜ್ಯಪಾಲ, ಮಾಜಿ ವಿದೇಶಾಂಗ ಸಚಿವ, ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಮಾತುಗಳೂ ಹೊರತಲ್ಲ. ರಾಜ್ಯಪಾಲರಂತಹ ಸಂವಿಧಾನಿಕ ಹುದ್ದೆಯಲ್ಲಿದ್ದು, ವಿದೇಶಾಂಗ ಖಾತೆಯಂತಹ ಮುತ್ಸದ್ಧಿತನದ ಹೊಣೆಗಾರಿಕೆಯನ್ನು ನಿಭಾಯಿಸಿದ ಮಾಜಿ ಮುಖ್ಯಮಂತ್ರಿಯೂ ಆದ ನಾಯಕರೊಬ್ಬರು, ‘ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರ್ಕಾರವನ್ನು ಬೀಳಿಸಿದ್ದೇ ನಾನು’ ಎಂಬ ಹೇಳಿಕೆ ನೀಡಿದ್ದಾರೆಂದರೆ, ಅವರ ‘ಸ್ಟೇಟ್ಸ್ ಮನ್ ಶಿಪ್’ ಈಗ ತಲುಪಿರುವ ಅಧೋಗತಿಯನ್ನು ಯಾರೂ ಬೇಕಾದರೂ ಊಹಿಸಬಹುದು.
ಅದರಲ್ಲೂ ಕಾಂಗ್ರೆಸ್ ಪಕ್ಷದಲ್ಲೇ ರಾಜಕೀಯ ಏಳಿಗೆ ಕಂಡು, ಸಾಮಾನ್ಯ ಶಾಸಕನ ಸ್ಥಾನದಿಂದ ರಾಜ್ಯಪಾಲರ ಹುದ್ದೆಯವರೆಗೆ ಏರಿದ ನಾಯಕರೊಬ್ಬರು ಹೀಗೆ ಗಲ್ಲಿ ರಾಜಕೀಯದ ಗೇಮ್ ಆಡುವುದು ಮತ್ತು ಅದನ್ನು ಸಾರ್ವಜನಿಕವಾಗಿ ಲಜ್ಜೆಗೆಟ್ಟು ಹೇಳಿಕೊಳ್ಳುವುದು ನಮ್ಮ ರಾಜಕಾರಣ ತಲುಪಿರುವ ಹಾಸ್ಯಾಸ್ಪದ ಅವಸ್ಥೆಗೂ ಕನ್ನಡಿಯಾಗಿದೆ ಎಂದರೆ ಅತಿಶಯೋಕ್ತಿಯಾಗಲಾರದು.
ಹಾಗೆ ನೋಡಿದರೆ, ಕೃಷ್ಣ ಅವರೇ ಹೇಳಿಕೊಂಡಿರುವಂತೆ ಹೀಗೆ ಸರ್ಕಾರ ಬೀಳಿಸುವುದರಲ್ಲಿ ಅವರ ನೈಪುಣ್ಯಕ್ಕೆ ಜೆಡಿಎಸ್- ಕಾಂಗ್ರೆಸ್ ಸರ್ಕಾರವಷ್ಟೇ ಸಾಕ್ಷಿಯಲ್ಲ. 1991-92ರಲ್ಲಿ ಕೂಡ ಅಂದಿನ ಕಾಂಗ್ರೆಸ್ ಮುಖ್ಯಮಂತ್ರಿ ಎಸ್ ಬಂಗಾರಪ್ಪ ಅವಧಿಯಲ್ಲಿ ಕೂಡ ಕೃಷ್ಣ ಅವರು ಮಹಾಭಾರತದ ಶ್ರೀಕೃಷ್ಣನ ತಂತ್ರಗಾರಿಕೆ ಮಾಡಿದ್ದರು ಎಂಬುದಕ್ಕೆ ಇತಿಹಾಸದ ಸಾಕ್ಷ್ಯವಿದೆ. ಅಂದು ವೀರಪ್ಪ ಮೊಯ್ಲಿ ಬಣ ಭರ್ಜರಿ ಭಿನ್ನಮತ ಪ್ರದರ್ಶನದ ಮೂಲಕ ಕ್ಲಾಸಿಕ್ ಕಂಪ್ಯೂಟರ್ ಹಗರಣ ಮತ್ತು ಕಾವೇರಿ ಗಲಭೆಯನ್ನೇ ಮುಂದಿಟ್ಟುಕೊಂಡು ಬಂಗಾರಪ್ಪ ಅವರನ್ನು ಸಿಎಂ ಕುರ್ಚಿಯಿಂದ ಕೆಳಗಿಳಿಸುವಲ್ಲಿ ಯಶಸ್ವಿಯಾಗಿತ್ತು. ಆದರೆ, ಆ ಯಶಸ್ಸಿನ ಬಹುಪಾಲು ಶ್ರೇಯ ಆಗ ಸ್ಪೀಕರ್ ಕುರ್ಚಿಯಲ್ಲಿ ಕೂತಿದ್ದ ಎಸ್ ಎಂ ಕೃಷ್ಣ ಅವರಿಗೇ ಸಲ್ಲಬೇಕಾಗಿತ್ತು ಎಂಬುದನ್ನು ಆಗಿನ ಅವರ ಸಮಕಾಲೀನ ರಾಜಕಾರಣಿಗಳೆಲ್ಲರೂ ಒಪ್ಪುತ್ತಾರೆ.
ಸ್ಪೀಕರ್ ಕುರ್ಚಿಯಲ್ಲಿ ಕೂತುಕೊಂಡೇ ಕೃಷ್ಣ ಅವರು ಬಂಗಾರಪ್ಪ ವಿರುದ್ಧ ಏನೆಲ್ಲಾ ಮಾಡಬೇಕೋ ಅದೆಲ್ಲವನ್ನೂ ಮಾಡಿದ್ದರು. ಆ ಬಳಿಕ ಬಂದ ಮೊಯ್ಲಿ ನೇತೃತ್ವದ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿದ್ದರೂ, ಸರ್ಕಾರ ರಚನೆಯಾಗಿ ಕೇವಲ ಆರು ತಿಂಗಳಲ್ಲೇ ಸಿಎಂ ವಿರುದ್ಧ ದಿಲ್ಲಿಯ ಹೈಕಮಾಂಡಿಗೆ ಮೇಲಿಂದ ಮೇಲೆ ದೂರು ಒಯ್ಯುವ ಮೂಲಕ ಆ ಸರ್ಕಾರದ ವಿರುದ್ಧವೂ ಷಢ್ಯಂತ್ರ ಮುಂದುವರಿಸಿದ್ದರು ಎಂಬುದನ್ನು ಇತಿಹಾಸ ಹೇಳುತ್ತದೆ.
ತಮ್ಮದೇ ಪಕ್ಷದ ಸರ್ಕಾರಗಳ ವಿರುದ್ಧ ಪಕ್ಷ ಮತ್ತು ಸರ್ಕಾರದ ಜವಾಬ್ದಾರಿಯುತ ಸ್ಥಾನದಲ್ಲಿದ್ದುಕೊಂಡೇ ಷಢ್ಯಂತ್ರಗಳನ್ನು ಹೆಣೆದ, ಸರ್ಕಾರಗಳನ್ನು ಉರುಳಿಸಿದ ಅವರು, ಅದೇ ಪಕ್ಷದಲ್ಲೇ ಮುಖ್ಯಮಂತ್ರಿಯಾಗಿ, ರಾಜ್ಯಪಾಲರಾಗಿ, ಮತ್ತೆ ಕೇಂದ್ರದ ವಿದೇಶಾಂಗ ಸಚಿವರಾಗಿ ಅವಕಾಶ ಬಾಚಿಕೊಂಡರು ಕೂಡ. ಕೊನೆಗೇ ಎಲ್ಲಾ ಪಡೆದ ಬಳಿಕ ಪಕ್ಷ ಅತ್ಯಂತ ದುರ್ಬಲವಾಗಿದ್ದ ಹೊತ್ತಿನಲ್ಲಿ ಅದಕ್ಕೆ ಕೈಕೊಟ್ಟು ಅಧಿಕಾರದಲ್ಲಿದ್ದ ಬಿಜೆಪಿಗೇ ಸೇರಿ, ಇಳಿವಯಸ್ಸಿನಲ್ಲೂ ಗೆದ್ದೆತ್ತಿನ ಬಾಲ ಹಿಡಿವ ಮತ್ತು ಉಂಡ ಮನೆಯ ಗಳ ಹಿರಿಯುವ ವರಸೆ ಮೆರೆದವರು ಕೃಷ್ಣ ಎಂಬ ಮಾತೂ ಅವರ ಬಗ್ಗೆ ಕೇಳಿಬರುತ್ತಿದೆ. ಇದೀಗ ಅಂತಹ ತಮ್ಮ ‘ಉರುಳಿಸುವ’ ಹೆಚ್ಚುಗಾರಿಕೆಯನ್ನು ಸಾರ್ವಜನಿಕವಾಗಿ ಹೇಳಿಕೊಂಡಿದ್ದಾರೆ ಎಂಬುದು ಈ ಉಪಚುನಾವಣಾ ಕಣದ ಹೈಲೈಟ್ಸ್!
ಕೃಷ್ಣ ಅವರ ಈ ‘ಮುತ್ಸದ್ಧಿತನ’ದ ಹೊರತುಪಡಿಸಿ ಮತ್ತೊಬ್ಬ ಹಿರಿಯ ನಾಯಕರು ಕೂಡ ಅಂತಹದ್ದೇ ಘನಗಂಭೀರ ‘ಮುತ್ಸದ್ಧಿತನ’ದ ಹೇಳಿಕೆ ನೀಡಿದ್ದಾರೆ. ಅದರು ಸ್ವತಃ ಸಿಎಂ ಯಡಿಯೂರಪ್ಪ ಅವರಿಂದಲೇ ಹೊರಬಿದ್ದಿರುವ ಹೇಳಿಕೆ. ಈ ಉಪ ಚುನಾವಣೆಯಲ್ಲಿ ‘ವೀರಶೈವ-ಲಿಂಗಾಯತರ ಒಂದೇ ಒಂದು ಮತವೂ ಬೇರೆ ಪಕ್ಷಗಳಿಗೆ ಹೋಗಬಾರದು’ ಎಂದು ಯಡಿಯೂರಪ್ಪ ಬೆಳಗಾವಿ ಜಿಲ್ಲಾ ಪ್ರವಾಸದಲ್ಲಿ ಹೇಳಿದ್ದರು. ಸ್ವತಃ ಲಿಂಗಾಯತ ಸಮುದಾಯದ ನಾಯಕರೆಂದು ಬಿಂಬಿಸಿಕೊಂಡಿರುವ ಸಿಎಂ ಯಡಿಯೂರಪ್ಪ ಅವರಿಗೆ ಸಹಜವೆನಿಸಬಹುದು. ಆದರೆ, ಒಬ್ಬ ಮುಖ್ಯಮಂತ್ರಿಯಾಗಿ, ಒಂದು ಸರ್ಕಾರದ ಮುಖ್ಯಸ್ಥರಾಗಿ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿ ಜಾತಿ ಮತ್ತು ಮತಗಳನ್ನು ನೇರವಾಗಿ ಉಲ್ಲೇಖಿಸಿ ಮತ ಯಾಚಿಸಿರುವುದು ಸರಿಯೇ ಎಂಬ ಪ್ರಶ್ನೆಯನ್ನು ಪ್ರತಿಪಕ್ಷಗಳು ಕೇಳುತ್ತಿವೆ. ಅಲ್ಲದೆ, ಈಗಾಗಲೇ ಈ ಹೇಳಿಕೆ ಸಂಬಂಧ ಅವರ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆ ದೂರು ದಾಖಲಿಸಲಾಗಿದೆ ಕೂಡ.
ಈ ಇಬ್ಬರು ಹಿರಿಯ ಧುರೀಣರು ಮತ್ತು ಮುತ್ಸದ್ಧಿಗಳ ಈ ಮಾತುಗಳು ಈ ಬಾರಿಯ ಉಪಚುನಾವಣೆಯ ಪ್ರಚಾರ ಮಟ್ಟ ತಲುಪಿರುವ ಅವಸ್ಥೆಗೆ ಸಾಕ್ಷಿಯಾಗಿರುವಂತೆಯೇ, ಒಟ್ಟಾರೆ ರಾಜ್ಯದ ರಾಜಕಾರಣ ಮತ್ತು ಚುನಾವಣಾ ವಾಗ್ವಾದಗಳು ಸಾಗುತ್ತಿರುವ ದಿಕ್ಕಿನ ದಿಕ್ಸೂಚಿಯೂ ಆಗಿವೆ ಎಂಬುದು ನಿಜ. ಇಂತಹ ಪರಿಸ್ಥಿತಿಯಲ್ಲಿ ಮತದಾರರು ಯಾರು ಅನರ್ಹರು, ಯಾರು ಅರ್ಹರು ಎಂಬುದನ್ನು ನಿರ್ಧರಿಸಲಾಗದ ಗೊಂದಲಕ್ಕೆ ಸಿಲುಕುವುದರಲ್ಲಿ ಅಚ್ಚರಿಯೇನಿದೆ?