ಮಗು ನೋವಿನಿಂದ ಬಿಕ್ಕುತ್ತದೆ;
ಅಮ್ಮಾ, ನನ್ನ ಬಿಗಿಯಾಗಿ ಅಪ್ಪಿಕೋ
ನನಗೆ ಚಳಿಯಾಗುತ್ತಿದೆ ನೋಡು.
ಅಮ್ಮ ಹೇಳುತ್ತಾಳೆ ಅವಳಿಗೆ;
ಅದು ಚಳಿಯಲ್ಲಾ ಕಂದ
ತಣ್ಣನೆಯ ಅನುಭವ, ಹಿಮಬಿಳಲಿನಿಂದ.
ಮಗು ಹಲುಬುತ್ತದೆ;
ಅಮ್ಮಾ, ನನ್ನ ಬಿಗಿಯಾಗಿ ಅಪ್ಪಿಕೋ
ಈ ರಾತ್ರಿಯ ಕತ್ತಲು ಹೆಚ್ಚಾಗಿದೆ ಎಂದಿಗಿಂತಲೂ.
ಅಮ್ಮ ಹೇಳುತ್ತಾಳೆ ಅವಳಿಗೆ;
ಕಂದಾ, ಕತ್ತಲೆಗೆ ಕಾರಣ ರಾತ್ರಿಯಲ್ಲಾ,
ಇರುವುದು ಸುಟ್ಟ ಕಲ್ಲಿದ್ದಲು ಹಳ್ಳಿಯ ಸುತ್ತಲ್ಲೆಲ್ಲಾ.
ಮಗು ಪಿಸುಗುಡುತ್ತದೆ;
ಅಮ್ಮಾ, ನನ್ನ ಬಿಗಿಯಾಗಿ ಅಪ್ಪಿಕೋ
ಅಲೆಗಳ ಭೋರ್ಗರೆತದಲಿ ನನ್ನ ಬಾಯಾರುವುದು.
ಅಮ್ಮ ಹೇಳುತ್ತಾಳೆ ಅವಳಿಗೆ;
ಭೋರ್ಗರೆಯುತಿರುವುದು ಜೀಲಂ ಅಲ್ಲವದು
ವ್ಯಾಕುಲಗೊಂಡ ವೆರಿನಾಗ್ * ಚಿಮ್ಮುತ್ತಿದೆ.
ಮಗು ಕಿರುಚುತ್ತದೆ;
ಅಮ್ಮಾ, ನನ್ನ ಬಿಗಿಯಾಗಿ ಅಪ್ಪಿಕೋ
ನಾ ಉಸಿರಾಡಲಾರೆ.
ಅಮ್ಮ ಹೇಳುತ್ತಾಳೆ ಅವಳಿಗೆ;
ಗಾಳಿಯಲ್ಲಿ ಇಲ್ಲ ಮಗು ಧೂಳು,
ಅದು ನಿನ್ನ ಕುತ್ತಿಗೆ ಹಿಸುಕುತ್ತಿರುವ ಬೂಟುಗಾಲು!
ಮಗು ನಿಟ್ಟಿಸಿರು ಬಿಡುತ್ತದೆ;
ಅಮ್ಮಾ, ನನ್ನ ಬಿಗಿಯಾಗಿ ಅಪ್ಪಿಕೋ
ನಾ ಚಲಿಸಲಾರೆ.
ಅಮ್ಮ ಹೇಳುತ್ತಾಳೆ ಅವಳಿಗೆ;
ತಡೆ ಹಿಡಿದಿರುವುದು ಗುಡುಗಲ್ಲ ಮಗು
ನಿನ್ನ ಕೊಲ್ಲುತಿರುವುದು ಬಂದೂಕಿನ ನಳಿಕೆಗಳು.
ಅಮ್ಮಾ, ನನ್ನ ಬಿಗಿಯಾಗಿ ಅಪ್ಪಿಕೋ
ನಾ ನಿನ್ನ ನೋಡಲಾರೆ
ಅಮ್ಮ ಹೇಳುತ್ತಾಳೆ ಅವಳಿಗೆ;
ಶಾಂತವಾಗಿರು ಕಂದ,
ನಿನ್ನ ಕಂಗಳಿಂದ ಸಿಡಿಮದ್ದುಗಳ ಹೆಕ್ಕಿ ತೆಗೆಯುವೆ.
ತಾಯಿ ಬಿಕ್ಕುತ್ತಾಳೆ, ಅರಚುತ್ತಾಳೆ..
ಅಮ್ಮನ ಬಿಗಿಯಾಗಿ ಅಪ್ಪಿಕೊಂಡ ಹಿಬಾ
ಅಮ್ಮನಿಗಾಗಿ ಲಾಲಿ ಹಾಡುತ್ತಾಳೆ….
* ವೆರಿನಾಗ್: ಕಾಶ್ಮೀರ ಕಣಿವೆಯ ಒಂದು ಪ್ರಖ್ಯಾತ ಸರೋವರ
(ಕನ್ನಡಕ್ಕೆ: ಜ್ಯೋತಿ ಅನಂತಸುಬ್ಬರಾವ್)
ಇಂಗ್ಲಿಷ್ ಮೂಲ: Countercurrents.org