‘ನಲವತ್ತು ಸಾವಿರ ಕೋಟಿ ಹಣವನ್ನು ಲೂಟಿ ಮಾಡಲು ಅವಕಾಶ ನೀಡದಂತೆ ಸುರಕ್ಷಿತವಾಗಿ ಕೇಂದ್ರ ಸರ್ಕಾರಕ್ಕೆ ವಾಪಸು ಕಳಿಸುವ ಏಕೈಕ ಉದ್ದೇಶದಿಂದಲೇ ತಮ್ಮ ಬಿಜೆಪಿ ಪಕ್ಷದ ದೇವೇಂದ್ರ ಫಡ್ನವೀಸ್ ಮಹಾರಾಷ್ಟ್ರದಲ್ಲಿ ಮೂರು ದಿನದ ಮುಖ್ಯಮಂತ್ರಿಯಾಗಿದ್ದರು’ ಎಂಬ ಮಾಜಿ ಕೇಂದ್ರ ಸಚಿವ ಹಾಗೂ ಉತ್ತರಕನ್ನಡದ ಸಂಸದ ಅನಂತಕುಮಾರ ಹೆಗಡೆಯ ಹೇಳಿಕೆ ಈಗ ಹೊಸ ಅವಾಂತರಕ್ಕೆ ಕಾರಣವಾಗಿದೆ.
ಉಪಚುನಾವಣೆಯ ಪ್ರಚಾರದ ಭಾಗವಾಗಿ ತಮ್ಮದೇ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಯಲ್ಲಾಪುರದಲ್ಲಿ ಬಿಜೆಪಿ ಅಭ್ಯರ್ಥಿ ಶಿವರಾಮ ಹೆಬ್ಬಾರ ಪರ ಮತಯಾಚಿಸುವಾಗ ಅನಂತ ಕುಮಾರ ಹೆಗಡೆ, ಮಹಾರಾಷ್ಟ್ರದ ಸರ್ಕಾರ ರಚನೆಯ ಬಿಜೆಪಿಯ ‘ನಾಟಕ’ವನ್ನು ಪ್ರಸ್ತಾಪಿಸಿ, “ನಿಮಗೆಲ್ಲರಿಗೂ ಗೊತ್ತಿದೆ, ಮಹಾರಾಷ್ಟ್ರದಲ್ಲಿ ಕೇವಲ 80 ತಾಸಿಗೆ ನಮ್ಮವರು ಮುಖ್ಯಮಂತ್ರಿಯಾದರು. ಅಷ್ಟರ ನಂತರದಲ್ಲಿ ಫಡ್ನವೀಸ್ ಅವರು ರಾಜೀನಾಮೆ ನೀಡಿದರು. ಯಾಕೆ ಈ ನಾಟಕ ಮಾಡಬೇಕಿತ್ತು? ನಮಗೇನು ಗೊತ್ತಿರಲಿಲ್ಲವಾ? ಬಹುಮತ ಇಲ್ಲ ಅಂತ ಗೊತ್ತಿದ್ದರೂ ಯಾಕೆ ಸಿಎಂ ಆದರು? … ಅನ್ನೋದು ಸಾಮಾನ್ಯವಾಗಿ ಎಲ್ಲರೂ ಕೇಳುವ ಪ್ರಶ್ನೆ. ಆದರೆ, ಸುಮಾರು ನಲವತ್ತು ಸಾವಿರ ಕೋಟಿಗೂ ಹೆಚ್ಚು ಹಣ ಸಿಎಂ ನಿಯಂತ್ರಣದಲ್ಲಿತ್ತು. ಇವರು ಕಾಂಗ್ರೆಸ್ಸಿನವರು, ಎನ್ಸಿಪಿಯವರು ಮತ್ತು ಶಿವಸೇನೆಯವರು ಬಂದರೆ ಖಂಡಿತವಾಗಿಯೂ ಆ ನಲವತ್ತು ಸಾವಿರ ಕೋಟಿಗೆ ತುಳಸಿನೀರು ಬಿಡುತ್ತಿದ್ದರು. ಖಂಡಿತವಾಗಿಯೂ ಅದು ಅಭಿವೃದ್ಧಿಗೆ ಹೋಗ್ತಿರಲಿಲ್ಲ. ಅದಷ್ಟೂ ಕೇಂದ್ರ ಸರ್ಕಾರದದ್ದು. ಹಾಗಾಗಿ ಆ ಮೂರೂ ಪಕ್ಷಗಳು ಒಂದಾಗಿ ಸರ್ಕಾರ ರಚನೆಗೆ ಮುಂದಾಗುವುದು ಗೊತ್ತಾಗುತ್ತಿದ್ದಂತೆ, ಆ ಹಣವನ್ನು ಉಳಿಸಲು ಏನೆಲ್ಲಾ ಮಾಡಬಹುದು ಎಂದು ಪ್ಲಾನ್ ಮಾಡಿದೆವು. ಅದಕ್ಕಾಗಿ ಒಂದು ದೊಡ್ಡ ನಾಟಕ ಮಾಡುವುದಾದರೂ ಸರಿ, ಮಾಡೋಣ. ಆ ಹಣ ಉಳಿಸಬೇಕು ಎಂದು ತೀರ್ಮಾನಿಸಿದೆವು. ಹಾಗಾಗಿ ಸ್ವಲ್ಪ ಮಟ್ಟಿಗೆ ಅಡ್ಜಸ್ಟ್ ಮಾಡಿ ಸಿಎಂ ಆದರು. ಪ್ರಮಾಣವಚನ ಸ್ವೀಕರಿಸಿದ 15 ಗಂಟೆಯಲ್ಲೇ ಅದನ್ನು ವ್ಯವಸ್ಥಿತವಾಗಿ ಎಲ್ಲಿಗೆ ತಲುಪಿಸಬೇಕೋ ಅಲ್ಲಿಗೆ ತಲುಪಿಸಿದರು. ಅಷ್ಟೂ ಹಣವನ್ನು ಕೇಂದ್ರಕ್ಕೆ ವಾಪಸು ಮಾಡಿದರು. ಇಲ್ಲದೇ ಹೋಗಿದ್ದರೆ ಮುಂದಿನ ಮುಖ್ಯಮಂತ್ರಿ ಏನು ಮಾಡುತ್ತಿದ್ದರು ಎಂಬುದು ನಿಮಗೆಲ್ಲಾ ಗೊತ್ತಿದೆಯಲ್ಲ” ಎಂದು ಹೇಳಿದ್ದರು.
ಅಜಿತ್ ಪವಾರ್ ಮಾತು ನಂಬಿ ಇಡೀ ರಾಜಭವನ, ರಾಷ್ಟ್ರಪತಿ ಭವನಗಳನ್ನೂ ದುರುಪಯೋಗ ಮಾಡಿಕೊಂಡು, ರಾತ್ರೋರಾತ್ರಿ ಕ್ಯಾಬಿನೆಟ್ ಸಮ್ಮತಿಯೂ ಇಲ್ಲದೆ ರಾಷ್ಟ್ರಪತಿ ಆಡಳಿತವನ್ನು ತೆಗೆದುಹಾಕಿ, ಬೆಳಗಿನ ಜಾವಕ್ಕೆ ಕದ್ದುಮುಚ್ಚಿ ಸಿಎಂ ಸ್ವೀಕಾರ ಮಾಡಿ ದೊಡ್ಡ ‘ನಾಟಕ’ ಆಡಿದ್ದರ ಹಿಂದೆ, ಈ ಮಹಾನ್ ದೇಶಪ್ರೇಮ ಅಡಗಿತ್ತು ಎಂಬುದು ಒಟ್ಟಾರೆ ಹೆಗಡೆಯ ಮಾತಿನ ಮರ್ಮ. ಆದರೆ, ಅದು ಸತ್ಯವೇ? ಅಥವಾ ಬಿಜೆಪಿಯ ಟ್ರೋಲ್ ಪಡೆ ಸೃಷ್ಟಿಸಿದ ಹಸಿಹಸಿ ಸುಳ್ಳೇ? ಎಂಬುದು ಬಹಿರಂಗವಾಗಲು ಹೆಚ್ಚು ಸಮಯ ತೆಗೆದುಕೊಳ್ಳಲೇ ಇಲ್ಲ.
ಕೇಂದ್ರ ಮಾಜಿ ಸಚಿವ ಹಾಗೂ ಆರು ಬಾರಿ ಸಂಸದರಾಗಿ, ರಾಮಕೃಷ್ಣ ಹೆಗಡೆಯವರಂಥ ಮುತ್ಸದ್ಧಿಯನ್ನು ಕೊಟ್ಟ ಜಿಲ್ಲೆಯ ‘ಬಹಳ ಬುದ್ಧಿವಂತರು’ ಎನ್ನಲಾಗುವ ಸಮುದಾಯಕ್ಕೆ ಸೇರಿದವರು ಎಂಬ ಹೆಗ್ಗಳಿಕೆಯ ಈ ಅನಂತ ಕುಮಾರ ಹೆಗಡೆಯ ಬಾಲಿಶ ಮತ್ತು ಹಾಸ್ಯಾಸ್ಪದ ಕಟ್ಟುಕತೆಯ ಮೂಲ ಕೂಡ ಬೆಳಕಿಗೆ ಬರಲು ಹೆಚ್ಚು ಕಾಲ ಹಿಡಿಯಲಿಲ್ಲ. ಮಹಾರಾಷ್ಟ್ರದಲ್ಲಿ ಪ್ರಜಾಪ್ರಭುತ್ವದ ನೀತಿನಿಯಮಗಳನ್ನೆಲ್ಲಾ ಗಾಳಿಗೆ ತೂರಿ, ತರಾತುರಿಯಲ್ಲಿ ಸರ್ಕಾರ ರಚಿಸಿ, ಕೊನೆಗೆ ಬೆಂಬಲವಾಗಿ ನಿಂತವರೇ ಯೂ ಟರ್ನ್ ಹೊಡೆದಿದ್ದರಿಂದ ರಾಷ್ಟ್ರೀಯ ಮಟ್ಟದಲ್ಲಿ ಪಕ್ಷಕ್ಕಾದ ಹೀನಾಯ ಮುಖಭಂಗದಿಂದ ಪಾರಾಗಲು ಬಿಜೆಪಿಯ ಟ್ರೋಲ್ ಪಡೆ ಈ ಹಸಿಹಸಿ ಸುಳ್ಳು ಸೃಷ್ಟಿಸಿತ್ತು. ಭಕ್ತರ ವಲಯದಲ್ಲಿ ಟ್ರೋಲ್ ಆಗಿದ್ದ ಈ ಹಸಿ ಸುಳ್ಳಿನ ಕಂತೆಯನ್ನು ಯಥಾವತ್ತು ಎತ್ತಿಕೊಂಡ ಅನಂತಕುಮಾರ, ಚುನಾವಣಾ ಪ್ರಚಾರದಲ್ಲೇ ಜನರಿಗೆ ಮಂಕುಬೂದಿ ಎರಚಲು ಅದನ್ನೇ ಪ್ರಯೋಗಿಸಿದ್ದರು.
ಹೆಗಡೆಯ ಈ ಹೇಳಿಕೆಯ ವೀಡಿಯೋ ವೈರಲ್ ಆಗುತ್ತಿದ್ದಂತೆ, ಸ್ಥಳೀಯ ಪತ್ರಿಕೆಗಳೂ ಸೇರಿದಂತೆ ರಾಷ್ಟ್ರೀಯ ಮಾಧ್ಯಮಗಳಲ್ಲಿಯೂ ಈ ಹೇಳಿಕೆಯ ಬಗ್ಗೆ ಚರ್ಚೆ ಶುರುವಾಯಿತು. ಒಂದು ಕಡೆ ಮಾಧ್ಯಮಗಳು ಈ ‘ವಿದೂಷಕ ವರಸೆ’ಯ ಬಗ್ಗೆ ಚರ್ಚೆ ಮಾಡುತ್ತಿರುವ ಹೊತ್ತಿಗೇ ಪ್ರತಿಪಕ್ಷಗಳು ಬಿಜೆಪಿಯ ವಿರುದ್ಧ ಹರಿಹಾಯ್ದವು. ಈ ಹೇಳಿಕೆಯ ಹಿನ್ನೆಲೆಯಲ್ಲಿ, ಮುಖ್ಯಮಂತ್ರಿಯಾಗಿ ಫಡ್ನವೀಸ್ ತೆಗೆದುಕೊಂಡಿರುವ ನಿರ್ಧಾರಗಳ ಬಗ್ಗೆ ಪರಿಶೀಲನೆ ಆಗಬೇಕು. ಬಹುಮತವಿಲ್ಲದೆ ಒಬ್ಬ ಸಿಎಂ ಮನಸೋಇಚ್ಛೆ ಕೈಗೊಂಡ ನಿರ್ಧಾರ ರಾಜ್ಯದ ಹಿತಕ್ಕೆ ಮಾರಕವಾಗಿದೆ. ರಾಜ್ಯದ ಪಾಲಿನ ಹಣವನ್ನು ಕೇಂದ್ರಕ್ಕೆ ವಾಪಸು ಕಳಿಸಿರುವುದು ಮಹಾರಾಷ್ಟ್ರ-ವಿರೋಧಿ ನಡೆ. ಇದಕ್ಕಾಗಿ ಬಿಜೆಪಿ ಕೇಂದ್ರ ನಾಯಕತ್ವ ಮತ್ತು ಸ್ವತಃ ಪ್ರಧಾನಿ ಸ್ಪಷ್ಟನೆ ನೀಡಬೇಕು ಎಂದು ಅವು ವಾಗ್ದಾಳಿ ನಡೆಸಿದವು.
ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲಾ, “ಕೇಂದ್ರದ ಮಾಜಿ ಸಚಿವರೊಬ್ಬರು ಮೋದಿ ಸರ್ಕಾರದ ಅವ್ಯವಹಾರಗಳ ಸರಣಿಯ ಸುಳಿವು ನೀಡಿದ್ದಾರೆ. ಬಿಜೆಪಿಯ ಮಹಾರಾಷ್ಟ್ರ ವಿರೋಧಿ ಮುಖ ಬಯಲಾಗಿದೆ. ಈ ಪ್ರಕರಣ ದೇಶದ ಒಕ್ಕೂಟ ವ್ಯವಸ್ಥೆಯನ್ನು ಬುಡಮೇಲು ಮಾಡುತ್ತಿರುವ ಬಿಜೆಪಿಯ ಕೃತ್ಯಕ್ಕೆ ಒಂದು ನಿದರ್ಶನ. ಮಹಾರಾಷ್ಟ್ರದ ಜನಸಾಮಾನ್ಯರು ಮತ್ತು ರೈತರ ಹಿತಕ್ಕಾಗಿ ಬಳಕೆಯಾಗಬೇಕಿದ್ದ ನಲವತ್ತು ಸಾವಿರ ಕೋಟಿ ರೂ. ಹಣ, ಬಿಜೆಪಿಯ ಕುತಂತ್ರ ಮತ್ತು ಪಿತೂರಿಯ ಭಾಗವಾಗಿ ಈಗ ರಾಜ್ಯದ ಕೈತಪ್ಪಿತೆ? ಪ್ರಧಾನಮಂತ್ರಿಗಳು ಈಗ ಜನರ ಮುಂದೆ ಸತ್ಯ ಹೇಳಬೇಕು..” ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದರು.
ಅದೇ ಹೊತ್ತಿಗೆ ಶಿವಸೇನಾ ರಾಜ್ಯಸಭಾ ಸದಸ್ಯ ಸಂಜಯ್ ರಾವತ್ ಕೂಡ ’80 ತಾಸಿನ ಒಬ್ಬ ಮುಖ್ಯಮಂತ್ರಿ ಮಹಾರಾಷ್ಟ್ರದ 40 ಸಾವಿರ ಕೋಟಿ ರೂ.ಗಳನ್ನು ಕೇಂದ್ರಕ್ಕೆ ವರ್ಗಾವಣೆ ಮಾಡಿದ್ದಾರೆ ಎಂದರೆ, ಅದು ಮಹಾರಾಷ್ಟ್ರದ ಜನತೆಗೆ ಬಗೆದ ಮಹಾದ್ರೋಹ’ ಎಂದು ಟ್ವೀಟ್ ಮಾಡಿದ್ದರು.
ಪ್ರತಿಪಕ್ಷಗಳು ಮುಗಿಬೀಳುತ್ತಿದ್ದಂತೆ, ತಮ್ಮ ಪಕ್ಷದ ಹಾಸ್ಯಾಸ್ಪದ ಸಂಸದರು ನೀಡಿದ ಹೇಳಿಕೆ ತಮ್ಮ ಕೊರಳಿಗೆ ಸುತ್ತಿಕೊಳ್ಳುತ್ತಿದೆ ಎಂಬುದನ್ನು ಅರಿತ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಕೂಡಲೇ ಮಾಧ್ಯಮಗಳಿಗೆ ಹೇಳಿಕೆ ನೀಡಿ, ಅಂತಹ ಯಾವುದೇ ಕ್ರಮವನ್ನು ತಾವು ತೆಗೆದುಕೊಂಡಿಲ್ಲ ಎಂದು ಸ್ಪಷ್ಟಪಡಿಸಿದರು. ಜೊತೆಗೆ, “ಅಂತಹ ಯಾವುದೇ ಘಟನೆ ನಡೆದಿಲ್ಲ, ಇದೆಲ್ಲಾ ಶುದ್ಧ ಸುಳ್ಳಿನ ಕಂತೆ. ಸಿಎಂ ಆಗಿ ನಾನು ಆ ಅವಧಿಯಲ್ಲಿ ಯಾವುದೇ ನೀತಿ-ನಿರ್ಧಾರದ ತೀರ್ಮಾನಗಳನ್ನೂ ತೆಗೆದುಕೊಂಡಿಲ್ಲ. ಅಷ್ಟಕ್ಕೂ ಅಂತಹ ಹಣಕಾಸು ವಿಷಯಗಳು ಅವರು ಹೇಳಿದಂತೆ ಸಲೀಸಾಗಿ ನಡೆಯುವುದಿಲ್ಲ. ಸರ್ಕಾರದ ಹಣಕಾಸು ಇಲಾಖೆ, ಬೇಕಾದರೆ ಆ ಬಗ್ಗೆ ತನಿಖೆ ನಡೆಸಬಹುದು. ಕೇಂದ್ರ ಸರ್ಕಾರ ಕೂಡ ಯಾವುದೇ ಹಣವನ್ನು ವಾಪಸು ಕೇಳಿಲ್ಲ ಮತ್ತು ಮಹಾರಾಷ್ಟ್ರ ಕೂಡ ಈ ಅವಧಿಯಲ್ಲಿ ಒಂದು ನಯಾಪೈಸೆಯನ್ನೂ ವಾಪಸು ಕಳಿಸಿಲ್ಲ” ಎಂದು ಸ್ಪಷ್ಟಪಡಿಸುವ ಮೂಲಕ ತಮ್ಮದೇ ಪಕ್ಷದ ‘ಸುಳ್ಳುಬುರುಕ’ ಸಂಸದರಿಗೆ ಕಪಾಳಮೋಕ್ಷ ಮಾಡಿದ್ದಾರೆ.
Not a single penny from Maharashtra got transferred to GoI.
महाराष्ट्राचा एकही रुपया केंद्राला गेला नाही.
केंद्र सरकारने तो मागण्याचा प्रश्नच निर्माण होत नाही!
शेतकऱ्यांना देण्यात आलेली मदत वगळता जाणीवपूर्वक कोणताही धोरणात्मक निर्णय त्या काळात घेतला नाही!https://t.co/XqI7f4xMRi pic.twitter.com/weteWoGtOz— Devendra Fadnavis (@Dev_Fadnavis) December 2, 2019
ಸ್ವತಃ ಫಡ್ನವೀಸರ ಈ ಸ್ಪಷ್ಟನೆ ಹೊರಬೀಳುತ್ತಿದ್ದಂತೆ, ಒಂದು ಕಡೆ 40 ಸಾವಿರ ಕೋಟಿ ಹಣದ ವಿಷಯ ರಾಷ್ಟ್ರೀಯ ಮಟ್ಟದಲ್ಲಿ ವಿವಾದಕ್ಕೆ ಎಡೆಮಾಡಿದಂತೆಯೇ, ಮತ್ತೊಂದು ಕಡೆ ಆರು ಬಾರಿ ಸಂಸದರಾಗಿರುವ ಮತ್ತು ಮಾಜಿ ಕೇಂದ್ರ ಸಚಿವರೂ ಆಗಿರುವ ಒಬ್ಬ ರಾಜಕಾರಣಿಯ ಅಪ್ರಬುದ್ಧತೆ ಮತ್ತು ನಯವಂಚಕತನ ಕೂಡ ಬೀದಿಗೆ ಬಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಅನಂತಕುಮಾರ ಹೆಗಡೆಯ ವಿರುದ್ಧ ವ್ಯಾಪಕ ಟೀಕೆಗಳು, ಪರಿಹಾಸ್ಯದ ಮಾತುಗಳು, ವ್ಯಂಗ್ಯ, ವಿಡಂಬನೆ ಮತ್ತು ಅಪಹಾಸ್ಯದ ಹೊಳೆಯೇ ಹರಿಯಿತು. ಹಸಿ ಸುಳ್ಳುಗಳ ಮೇಲೆಯೇ ಹೇಗೆ ಬಿಜೆಪಿ ಮತ್ತು ಅದರ ನಾಯಕರು ದೇಶದ ಜನರನ್ನು ದಿಕ್ಕುತಪ್ಪಿಸುತ್ತಿದ್ದಾರೆ ಮತ್ತು ಜನರ ಗಮನವನ್ನು ತಮ್ಮ ಸರ್ಕಾರಗಳ ಸರಣಿ ವೈಫಲ್ಯಗಳಿಂದ ಬೇರೆಡೆ ಸೆಳೆಯುವಲ್ಲಿ ಈ ಸುಳ್ಳಿನ ಕಂತೆಯನ್ನು ಹೇಗೆ ಬಳಸುತ್ತಿದ್ದಾರೆ ಎಂಬುದು ವ್ಯಾಪಕ ಚರ್ಚೆಗೆ ಒಳಗಾಯಿತು. ಬುದ್ಧಿವಂತರ ಜಿಲ್ಲೆಯ ಸಂಸದರು ಜನರ ವಿವೇಕದ ಎದುರು ಬೆತ್ತಲಾದರು!
ಹಾಗೆ ನೋಡಿದರೆ ಅನಂತ ಕುಮಾರ ಹೆಗಡೆಯ ಇಂತಹ ಹಸಿ ಸುಳ್ಳಿನ ಕಂತೆಗಳ ಫಜೀತಿ, ಇದೇ ಮೊದಲೇನಲ್ಲ. ಹಲವು ಬಾರಿ ಹಲವು ವಿಷಯಗಳಿಗೆ ಸಂಬಂಧಿಸಿದಂತೆ ಇಂತಹದ್ದೇ ಹೇಳಿಕೆಗಳನ್ನು ನೀಡಿ ಏಕಕಾಲಕ್ಕೆ ತಮ್ಮ ಭಕ್ತರನ್ನೂ, ಪಕ್ಷದ ವರಿಷ್ಠರನ್ನೂ ಪೇಚಿಗೆ ಸಿಲುಕಿಸುವ, ಹೀನಾಯ ಮುಖಭಂಗಕ್ಕೆ ಒಳಪಡಿಸುವ ‘ಚತುರತೆ’ಗಾಗಿಯೇ ಅವರು ಕುಖ್ಯಾತರು ಎಂಬುದು ಗೊತ್ತಿರುವ ಸಂಗತಿಯೇ. ಮಾಜಿ ಕೌಶಲಾಭಿವೃದ್ಧಿ ಸಚಿವರ ಅಂತಹ ‘ಚತುರ ಕೌಶಲ’ದ ಕಾರಣಕ್ಕಾಗಿಯೇ ಮೋದಿ 2.0 ಸರ್ಕಾರದಲ್ಲಿ ಅವರು ಕೊನೇ ಕ್ಷಣದಲ್ಲಿ ಸಚಿವ ಸ್ಥಾನವಂಚಿತರಾದರು ಎಂಬ ಮಾತೂ ಉತ್ತರಕನ್ನಡದಲ್ಲಿ ಈಗ ಜನಜನಿತ! ಇದೀಗ ಆ ‘ಚತುರತೆ’ ಈ ‘40 ಸಾವಿರ ಕೋಟಿಯ ಬೂಕಾಳಿ’ ಹೊಸ ಸೇರ್ಪಡೆ ಅಷ್ಟೇ!