ತೀವ್ರ ಕುತೂಹಲ ಕೆರಳಿಸಿರುವ ರಾಜ್ಯದ ಹದಿನೈದು ವಿಧಾನಸಭಾ ಕ್ಷೇತ್ರಗಳ ಬಹಿರಂಗ ಚುನಾವಣಾ ಪ್ರಚಾರಕ್ಕೆ ಇಂದು ಸಂಜೆ ತೆರೆ ಬೀಳಲಿದೆ. ಅನರ್ಹ ಶಾಸಕರ ಅರ್ಹತೆಯನ್ನು ನಿರ್ಧರಿಸಲಿರುವ ಈ ಉಪ ಚುನಾವಣೆ, ರಾಜ್ಯ ಬಿಜೆಪಿ ಸರ್ಕಾರ ಮತ್ತು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಹಣೇಬರಹವನ್ನೂ ನಿರ್ಧರಿಸಲಿದೆ ಎಂಬ ಕಾರಣಕ್ಕೆ ರಾಷ್ಟ್ರಮಟ್ಟದಲ್ಲಿಯೂ ಗಮನ ಸೆಳೆದಿದೆ. ಹಾಗಾಗಿ ಹಲವು ಲೆಕ್ಕಾಚಾರಗಳು, ಊಹೆಗಳು ಮತ್ತು ಗೆಲುವಿನ ಕಾರ್ಯತಂತ್ರಗಳು ಬಿರುಸುಗೊಂಡಿದ್ದವು.
ಚುನಾವಣೆ ಎದುರಿಸುತ್ತಿರುವ ಕ್ಷೇತ್ರಗಳ ಬಹುತೇಕ ಅರ್ಧದಷ್ಟು ರಾಜಧಾನಿ ಮತ್ತು ಆಸುಪಾಸಿನ ಕಾಂಗ್ರೆಸ್ ಮತ್ತು ಜೆಡಿಎಸ್ ಪ್ರಾಬಲ್ಯದ ಪ್ರದೇಶಗಳಲ್ಲೇ ಇವೆ ಮತ್ತು ಈ ಉಪಚುನಾವಣೆಯ ಮೂಲಕ ಆ ಕ್ಷೇತ್ರಗಳಲ್ಲಿ ಬಿಜೆಪಿಯ ಸಂಘಟನೆ ಮತ್ತು ಶಕ್ತಿ ವೃದ್ಧಿಗೆ ಅವಕಾಶ ಒದಗಿಬಂದಿದೆ ಎಂಬುದು ಈ ಬಾರಿಯ ವಿಶೇಷ. ಆ ಹಿನ್ನೆಲೆಯಲ್ಲಿಯೇ ಹಳೇಮೈಸೂರು ಭಾಗದಲ್ಲಿ ತನ್ನ ಪ್ರಭಾವ ಹೆಚ್ಚಿಸಿಕೊಳ್ಳುವ ಮೂಲಕ, ಜೆಡಿಎಸ್ ಮತ್ತು ಕಾಂಗ್ರೆಸ್ ಭದ್ರಕೋಟೆಯನ್ನು ಛಿದ್ರಗೊಳಿಸುವಲ್ಲಿ ಆಡಳಿತಾರೂಢ ಬಿಜೆಪಿ ಯಶ ಗಳಿಸುವುದೇ? ಎಂಬ ಕುತೂಹಲದ ಕಾರಣಕ್ಕೂ ಈ ಚುನಾವಣೆ ಎಲ್ಲರ ಗಮನ ಸೆಳೆದಿದೆ.
ಒಟ್ಟು ಹದಿನೈದು ಕ್ಷೇತ್ರಗಳ ಪೈಕಿ 12ರಲ್ಲಿ ತಾವು ಜಯಗಳಿಸಿಯೇ ಸಿದ್ಧ ಎಂಬುದು ಬಿಜೆಪಿಯ ವಿಶ್ವಾಸ. ಸಿಎಂ ಯಡಿಯೂರಪ್ಪ ಸೇರಿದಂತೆ ಆ ಪಕ್ಷದ ರಾಜ್ಯ ಪ್ರಮುಖರು 15ಕ್ಕೆ ಹದಿನೈದೂ ಕಡೆ ನಾವೇ ಜಯಗಳಿಸೋದು. ಮತ ಎಣಿಕೆಯ ದಿನ ಫಲಿತಾಂಶ ಹೊರಬೀಳುತ್ತಿದ್ದಂತೆ ಕಾಂಗ್ರೆಸ್- ಜೆಡಿಎಸ್ ನಾಯಕರು ತಲೆತಪ್ಪಿಸಿಕೊಂಡು ಓಡಿಹೋಗುವುದು ಖಾತ್ರಿ ಎಂಬಂತಹ ಉಮೇದಿನ ಮಾತುಗಳನ್ನು ಆಡುತ್ತಿದ್ದಾರೆ. ಆಡಳಿತ ಪಕ್ಷವಾಗಿ ಅದು ಸಹಜ ವರಸೆ. ಆದರೆ, ವಾಸ್ತವವಾಗಿ ಬಿಜೆಪಿಯ ಆಂತರಿಕ ಸಮೀಕ್ಷೆಯೇ ಅವರ ಆ ವಿಶ್ವಾಸದ ಬಲೂನಿಗೆ ಸೂಜಿಮೊನೆ ತಾಕಿಸಿದೆ ಎಂಬುದನ್ನು ಮರೆಯುವಂತಿಲ್ಲ. ಆ ನಾಯಕರಿಗೂ ಆ ವಾಸ್ತವದ ಅರಿವಿಲ್ಲದೇ ಇಲ್ಲ.
ಬಿಜೆಪಿ ಆಂತರಿಕ ಸಮೀಕ್ಷೆಯ ಪ್ರಕಾರ 8-9 ಸ್ಥಾನ ಗೆಲ್ಲುವ ಸಾಧ್ಯತೆ ಇದೆ. ಆದರೆ, ಆ ಕ್ಷೇತ್ರಗಳಲ್ಲಿ ಗೆಲುವು ಸುಲಭವಿಲ್ಲ. ತೀವ್ರ ಪೈಪೋಟಿ ಇದೆ. ಆದಾಗ್ಯೂ ಅಂತಿಮವಾಗಿ ಗೆಲುವು ಪಡೆಯುವ ವಿಶ್ವಾಸವಿದೆ ಎನ್ನಲಾಗಿದೆ. ಹಾಗೆ ಆಂತರಿಕ ಸಮೀಕ್ಷೆಯಲ್ಲಿ ಗೆಲ್ಲುವ ಸಾಧ್ಯತೆ ಇರುವ ಕ್ಷೇತ್ರಗಳೆಂದು, ಕೆ ಆರ್ ಪುರಂ, ಮಹಾಲಕ್ಷ್ಮಿ ಲೇಔಟ್, ಹಿರೇಕೆರೂರು, ರಾಣೆಬೆನ್ನೂರು, ವಿಜಯನಗರ, ಅಥಣಿ, ಕಾಗವಾಡ, ಯಲ್ಲಾಪುರ ಕ್ಷೇತ್ರಗಳನ್ನು ಗುರುತಿಸಲಾಗಿದೆ. ಆದರೆ, ಆ ಕ್ಷೇತ್ರಗಳಲ್ಲಿ ಕೊನೇ ಕ್ಷಣದ ಬದಲಾವಣೆಗಳು ಆ ನಿರೀಕ್ಷೆಯನ್ನು ತಲೆಕೆಳಗು ಮಾಡಿದರೂ ಅಚ್ಚರಿ ಇಲ್ಲ. ಇನ್ನು ಯಶವಂತಪುರ, ಗೋಕಾಕ, ಚಿಕ್ಕಬಳ್ಳಾಪುರ, ಹೊಸಕೋಟೆ, ಹುಣಸೂರು, ಕೆ ಆರ್ ಪೇಟೆ, ಶಿವಾಜಿನಗರ ಕ್ಷೇತ್ರಗಳಲ್ಲಿ ಪಕ್ಷದ ಗೆಲುವು ಕಷ್ಟವಿದೆ ಎಂದಿರುವ ಸಮೀಕ್ಷೆ, ಅದರಲ್ಲೂ ಮುಖ್ಯವಾಗಿ ಯಶವಂತಪುರ, ಚಿಕ್ಕಬಳ್ಳಾಪುರ ಮತ್ತು ಗೋಕಾಕದಲ್ಲಿ ಗೆಲುವು ಪಡೆಯುವುದು ಕಷ್ಟಸಾಧ್ಯ ಎಂದಿದೆ.
ಅಂದರೆ, ರಾಜ್ಯ ಸರ್ಕಾರದ ಅಸ್ತಿತ್ವ ಉಳಿಸಿಕೊಳ್ಳಲು ಅಗತ್ಯ ಸರಳ ಬಹುಮತ ಹೊಂದಲು ಬಿಜೆಪಿಗೆ ಈ 15 ಕ್ಷೇತ್ರಗಳ ಪೈಕಿ 9 ಕ್ಷೇತ್ರದಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ. ಇಲ್ಲದೇ ಹೋದರೆ, ಒಂದೋ ಸರ್ಕಾರ ಪತನವಾಗಲಿದೆ. ಅಥವಾ ಮತ್ತೆ ಆಪರೇಷನ್ ಕಮಲಕ್ಕೆ ಕೈಹಾಕಬೇಕಾಗಲಿದೆ. ಹಾಗಾಗಿ ಪಕ್ಷದ ಆಂತರಿಕ ಸಮೀಕ್ಷೆಯೇ 9 ಸ್ಥಾನ ಗೆಲ್ಲುವ ಬಗ್ಗೆಯೇ ಖಚಿತ ವಿಶ್ವಾಸ ವ್ಯಕ್ತಪಡಿಸಿಲ್ಲ ಎಂದಾದರೆ, ಕಳೆದ ಮೂರ್ನಾಲ್ಕು ದಿನಗಳ ಪ್ರತಿಪಕ್ಷಗಳ ತಂತ್ರಗಾರಿಕೆ ಮತ್ತು ಕೊನೇ ಕ್ಷಣದ ಜಾದೂಗಳ ಬಳಿಕ ಬಿಜೆಪಿಯ ಸ್ಥಾನ ಗಳಿಕೆಯ ಏನಾಗಬಹುದು ಎಂಬ ಕುತೂಹಲ ಕೂಡ ಮೂಡಿದೆ.
ಆರಂಭದಲ್ಲಿ ಬಿಜೆಪಿ ಹದಿನೈದರ ಪೈಕಿ ಕೇವಲ 5-6 ಕ್ಷೇತ್ರಗಳಲ್ಲಿ ಗೆಲುವು ಪಡೆಯುದೂ ದುಸ್ತರ ಎಂಬ ಸ್ಥಿತಿ ಇತ್ತು. ಆದರೆ, ಮೇಲಿನಿಂದ ಅಮಿತ್ ಶಾ ಅವರು, ಕನಿಷ್ಠ 12 ಸ್ಥಾನ ಗೆಲ್ಲದೇ ಹೋದರೆ ತಮಗೆ ಮುಖ ತೋರಿಸಬೇಡಿ ಎಂದು ಪಕ್ಷದ ರಾಜ್ಯ ಮುಖಂಡರಿಗೆ ತಾಕೀತು ಮಾಡಿದ ಬಳಿಕ ಕಳೆದ ಹತ್ತು ದಿನಗಳಿಂದ ಪರಿಸ್ಥಿತಿ ಸ್ವಲ್ಪ ಸುಧಾರಿಸಿದೆ. ನಾಯಕರು ಮತ್ತು ಸ್ಥಳೀಯ ಮುಖಂಡರು ಸಾಕಷ್ಟು ಆಸಕ್ತಿಯಿಂದ ಪ್ರಚಾರದಲ್ಲಿ ತೊಡಗಿದ್ದಾರೆ. ಜೊತೆಗೆ ಶಾ ಸೂಚನೆ ಬಳಿಕ ತಂತ್ರಗಾರಿಕೆಯಲ್ಲಿಯೂ ಬದಲಾವಣೆ ಮಾಡಿಕೊಳ್ಳಲಾಗಿದೆ. ಅದೆಲ್ಲದರ ಪರಿಣಾಮ ಸದ್ಯದ ಸ್ಥಿತಿಯಲ್ಲಿ ಸರ್ಕಾರದ ಉಳಿವಿಗೆ ಅಗತ್ಯವಿರುವ 9 ಸ್ಥಾನ ಗೆಲ್ಲಲು ಸಮಸ್ಯೆಯಾಗದು ಎಂಬ ವಿಶ್ವಾಸವಿದೆ ಎಂದು ಬಿಜೆಪಿ ಆಂತರಿಕ ಮೂಲಗಳು ಹೇಳುತ್ತಿವೆ.
ಮತ್ತೊಂದು ಕಡೆ ಪ್ರತಿಪಕ್ಷಗಳು ಕೂಡ ಬಿಜೆಪಿಯನ್ನು ಅಲ್ಪಮತಕ್ಕೆ ಕಟ್ಟಿಹಾಕುವ ತಂತ್ರಗಾರಿಕೆ ಹೆಣೆದಿದ್ದು, ಕನಿಷ್ಠ 10 ಕ್ಷೇತ್ರಗಳಲ್ಲಿ ಜಯಗಳಿಸುವ ವಿಶ್ವಾಸ ಹೊಂದಿವೆ. ಬಿಜೆಪಿ ಪಕ್ಕಾ ಗೆಲುವಿನ ವಿಶ್ವಾಸ ಹೊಂದಿರುವ ಎಂಟು ಕ್ಷೇತ್ರಗಳ ಪೈಕಿ ಮಹಾಲಕ್ಷ್ಮಿ ಲೇಔಟ್, ಕೆ ಆರ್ ಪುರಂ ಮತ್ತು ರಾಣೆಬೆನ್ನೂರು ಕ್ಷೇತ್ರಗಳಲ್ಲಿ ತಮ್ಮದೇ ಗೆಲುವು ಎಂಬ ವಿಶ್ವಾಸ ಕಾಂಗ್ರೆಸ್ ಮತ್ತು ಜೆಡಿಎಸ್ ಪಾಳೆಯದಲ್ಲಿದೆ. ಹಾಗಾಗಿ ಕೇವಲ ಐದು ಸ್ಥಾನಗಳಲ್ಲಿ ಬಿಜೆಪಿಯನ್ನು ಸೀಮಿತಗೊಳಿಸಿ, ಉಳಿದ 10 ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಏಳು ಮತ್ತು ಜೆಡಿಎಸ್ ಮೂರು ಸ್ಥಾನ ಹಂಚಿಕೊಳ್ಳಲಿವೆ ಎಂಬ ಲೆಕ್ಕಾಚಾರಗಳೂ ಇವೆ. ಈ ವಿಶ್ವಾಸದ ಹಿನ್ನೆಲೆಯಲ್ಲಿಯೇ ಕಳೆದ ಮೂರ್ನಾಲ್ಕು ದಿನಗಳಿಂದ ಕಾಂಗ್ರೆಸ್ ನಾಯಕರು ಡಿಸೆಂಬರ್ 9ರ ನಂತರ ಈ ಸರ್ಕಾರ ಉಳಿಯುವುದಿಲ್ಲ. ಜೆಡಿಎಸ್ ಮೈತ್ರಿಯೊಂದಿಗೆ ಮತ್ತೆ ತಮ್ಮದೇ ಸರ್ಕಾರ ಅಧಿಕಾರಕ್ಕೇರಲಿದೆ ಎಂಬ ಮಾತುಗಳನ್ನೂ ಆಡುತ್ತಿದ್ದಾರೆ. ಅದೇ ಅರ್ಥದಲ್ಲಿಯೇ ಜೆಡಿಎಸ್ ನಾಯಕ ಕುಮಾರಸ್ವಾಮಿ ಕೂಡ ಫಲಿತಾಂಶದ ದಿನ ಈ ಸರ್ಕಾರ ಉರುಳುತ್ತದೆ ಎಂಬ ವಿಶ್ವಾಸ ಮಾತನಾಡುತ್ತಿದ್ದಾರೆ ಎಂಬ ವಿಶ್ಲೇಷಣೆಗಳೂ ಇವೆ.
ಆದರೆ, ವಿಪಕ್ಷ ನಾಯಕ ಸಿದ್ದರಾಮಯ್ಯ, ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಮಾಜಿ ಮುಖ್ಯಮಂತ್ರಿ ಎಂ ವೀರಪ್ಪ ಮೊಯ್ಲಿ ಸೇರಿದಂತೆ ಕಾಂಗ್ರೆಸ್ಸಿನ ಅತಿರಥ ಮಹಾರಥರ ಅಂತಹ ಹೊಸ ಮೈತ್ರಿಯ ಕುರಿತ ಭವಿಷ್ಯವಾಣಿಗೆ, ಸ್ವತಃ ಭವಿಷ್ಯವಾಣಿ ಪ್ರವೀಣರಾದ ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡರೇ ತಣ್ಣೀರೆರಚಿದ್ದಾರೆ. “ಬಿಜೆಪಿ- ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು ಅನುಭವಿಸಿದ್ದೇವೆ. ಮತ್ತೆ ಮೈತ್ರಿಯ ಪ್ರಶ್ನೆಯೇ ಇಲ್ಲ. ನಮಗಂತೂ ಸಾಕಾಗಿಹೋಗಿದೆ” ಎಂದು ಗೌಡರು ಆ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಹಾಗಾಗಿ, ಕಾಂಗ್ರೆಸ್ ನಾಯಕರ ನಡುವೆ ಕಾಣಿಸುತ್ತಿರುವ ‘ಮರುಮದುವೆ’ಯ ಉತ್ಸಾಹ ಜೆಡಿಎಸ್ ಪಡಸಾಲೆಯಲ್ಲಿ ಕಾಣುತ್ತಿಲ್ಲ!
ಆದರೆ, ಉಪ ಚುನಾವಣೆ ಎದುರಿಸುತ್ತಿರುವ ಕ್ಷೇತ್ರಗಳಲ್ಲಿ ಸಹಜವಾಗೇ ಕಾಣುತ್ತಿರುವ ಅನರ್ಹ ಶಾಸಕರ ಕುರಿತ ಅಸಮಾಧಾನ, ಆಕ್ರೋಶ ಮತ್ತು ಆ ಪೈಕಿ ಹಲವರ ಹನಿಟ್ರ್ಯಾಪ್ ವೀಡಿಯೋ ಮತ್ತು ಆಡಿಯೋಗಳು ಚುನಾವಣಾ ಕಣದಲ್ಲಿ ಕೊನೇ ಕ್ಷಣದಲ್ಲಿ ಹುಟ್ಟಿಸಿರುವ ಅಸಹ್ಯ ಭಾವನೆಗಳು ಎಷ್ಟು ಪರಿಣಾಮ ಬೀರಲಿವೆ ಎಂಬುದು ಒಟ್ಟಾರೆ ಫಲಿತಾಂಶದ ದಿಕ್ಕನ್ನು ನಿರ್ಧರಿಸಲಿದೆ. ಜೊತೆಗೆ, ಆಳುವ ಪಕ್ಷವಾಗಿ ಸಹಜವಾಗೇ ಆಡಳಿತ ಯಂತ್ರ ಮತ್ತು ಇಡೀ ಸರ್ಕಾರದ ಬಿಜೆಪಿಗೆ ಅನುಕೂಲಕರವಾಗಿ ಒದಗಿಬರಲಿದೆ. ಅದರಲ್ಲೂ ಕೊನೇ ಕ್ಷಣದಲ್ಲಿ ಮತದಾನದ ಮುನ್ನಾ ದಿನ ನಡೆಯುವ ‘ಕತ್ತಲರಾತ್ರಿಯ ಆಟ’ದ ಬಿರುಸಿಗೆ ಈ ವ್ಯವಸ್ಥೆಗಳು ಎಷ್ಟರಮಟ್ಟಿಗೆ ಸಹಕರಿಸುತ್ತವೆ ಎಂಬುದು ಕೂಡ ಅಂತಿಮ ಫಲಿತಾಂಶ ನಿರ್ಧರಿಸುವಲ್ಲಿ ಪ್ರಮುಖ ಅಂಶ.
ಈ ನಡುವೆ ಮತ್ತೆ ಮೈತ್ರಿ ಸರ್ಕಾರ ರಚನೆ ಮಾಡ್ತೀವಿ, ಬಿಜೆಪಿಗೆ ಬಹುಮತ ಬರುವುದಿಲ್ಲ ಎಂಬ ಕುರಿತ ಕಾಂಗ್ರೆಸ್ ಹಿರಿಯ ನಾಯಕರ ಹೇಳಿಕೆಗಳು ಚುನಾವಣಾ ಕಣದಲ್ಲಿ ಮತದಾರರ ಮನಸ್ಸಿಗೆ ಎಷ್ಟರಮಟ್ಟಿಗೆ ನಾಟುತ್ತವೆ? ಮತದಾರ ಆ ಮಾತುಗಳನ್ನು ವಾಸ್ತವ ಸಾಧ್ಯತೆಯಾಗಿ ಪರಿಗಣಿಸುತ್ತಾನೆಯೇ? ಅಥವಾ ಅದೊಂದು ಚುನಾವಣಾ ತಂತ್ರಗಾರಿಕೆಯ ಹೇಳಿಕೆ ಎಂದಷ್ಟೇ ತಳ್ಳಿಹಾಕುತ್ತಾನೆಯೇ ಎಂಬುದು ಕೂಡ ಫಲಿತಾಂಶವನ್ನು ನಿರ್ಧರಿಸಲಿದೆ.
ಇವೆಲ್ಲಾ ಚುನಾವಣಾ ತಂತ್ರಗಾರಿಕೆ, ಭವಿಷ್ಯದ ರಾಜಕೀಯ ಸಮೀಕರಣ ಮತ್ತು ಸಾಧ್ಯತೆಗಳ ಲೆಕ್ಕಾಚಾರಗಳಾದವು. ಆದರೆ, ಈ ಬಾರಿ ನಿಜಕ್ಕೂ ಈ ಉಪ ಚುನಾವಣೆಯ ದಿಕ್ಕನ್ನು ನಿರ್ಧರಿಸಬೇಕಾಗಿದ್ದು ಇವಾವೂ ಅಲ್ಲವೇ ಅಲ್ಲ. ಬದಲಾಗಿ ಭೀಕರ ನೆರೆ ವಿಷಯದಲ್ಲಿ ಸರ್ಕಾರಗಳು ಜನರನ್ನು ನಡೆಸಿಕೊಂಡ ರೀತಿ ಮತ್ತು ಪುನರ್ವಸತಿ ಮತ್ತು ಪರಿಹಾರದ ವಿಷಯದಲ್ಲಿ ತೋರಿದ ಉದಾಸೀನವೇ ಚುನಾವಣೆಯ ವಿಷಯವಾಗಬೇಕಿತ್ತು. ಹಾಗೇ ಕ್ಷೇತ್ರದ ಜನ ನೀರಲ್ಲಿ ಕೊಚ್ಚಿಹೋಗುತ್ತಿರುವಾಗ, ಅಧಿಕಾರ ಮತ್ತು ಹಣದ ಲಾಲಸೆಗೆ ಬಿದ್ದು ಆಪರೇಷನ್ ಕಮಲಕ್ಕೆ ಒಳಗಾಗಿ ಮುಂಬೈನ ರೆಸಾರ್ಟ್ ಗಳಲ್ಲಿ ಕೂತು ಹನಿಟ್ರ್ಯಾಪ್ ಬಲೆಯಲ್ಲಿ ತೇಲಾಡುತ್ತಿದ್ದ ಶಾಸಕರ ನೈತಿಕ ಅಧೋಗತಿಯೂ ಚುನಾವಣೆಯ ಮುಖ್ಯ ವಿಷಯವಾಗಬೇಕಿತ್ತು. ಅದಾಗಿದ್ದರೆ, ಚುನಾವಣೆಯ ಫಲಿತಾಂಶದ ದಿಕ್ಕು ಬೇರೆಯೇ ಆಗಿರಬೇಕಿತ್ತು!
ಆದರೆ, ಅಂತಹ ನಿರೀಕ್ಷೆ ಸದ್ಯಕ್ಕಂತೂ ಕಾಣಿಸುತ್ತಿಲ್ಲ. ಮತದಾರನ ಮನದಲ್ಲಿ ಈಗಲೂ ನೆರೆಯ, ಬರದ ಭೀಕರ ಹೊತ್ತಲ್ಲಿ ತಮ್ಮನ್ನು ಮರೆತು ‘ಹನಿ’ಯಲ್ಲಿ ಮೈಮರೆತವರ ಕುರಿತ ಆಕ್ರೋಶ ಮಡುಗಟ್ಟಿದ್ದು, ಅದು ಕನಿಷ್ಠ ಮತಗಟ್ಟೆಯ ಒಳ ಹೋದಾಗಲಾದರೂ ಜಾಗೃತವಾದರೆ,.. ದೇಶದ ಪ್ರಜಾಪ್ರಭುತ್ವ ಮತ್ತು ಜನಸಾಮಾನ್ಯರ ವಿವೇಕದಲ್ಲಿ ನಂಬಿಕೆ ಇಡಬಹುದು! ಇಲ್ಲದೇ ಹೋದರೆ,.. ಡಿ.9ರ ಫಲಿತಾಂಶದಿಂದ ಹೆಚ್ಚಿನ ವ್ಯತ್ಯಾಸವನ್ನೇನೂ ನಿರೀಕ್ಷಿಸಲಾಗದು!!