ದೇಶಾದ್ಯಂತ ಆಘಾತ ಮತ್ತು ಆಕ್ರೋಶಕ್ಕೆ ಕಾರಣವಾಗಿದ್ದ ಹೈದರಾಬಾದ್ ಪಶುವೈದ್ಯೆಯ ಸಾಮೂಹಿತ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಅನಿರೀಕ್ಷಿತ ಅಂತ್ಯ ಕಂಡಿದ್ದು, ಪ್ರಕರಣದ ಎಲ್ಲಾ ನಾಲ್ವರು ಆರೋಪಿಗಳು ಹೈದರಾಬಾದ್ ಪೊಲೀಸರ ಎನ್ ಕೌಂಟರಿಗೆ ಬಲಿಯಾಗಿದ್ದಾರೆ.
ಶುಕ್ರವಾರ ಬೆಳಗಿನ ಜಾವ ಆರೋಪಿಗಳನ್ನು ಅತ್ಯಾಚಾರ ಮತ್ತು ಕೊಲೆಯ ಘಟನೆಯ ಮರುಸೃಷ್ಟಿಯಾಗಿ ಘಟನಾ ಸ್ಥಳಕ್ಕೆ ಕರೆದೊಯ್ದಾಗ, ಪೊಲೀಸರು ಅಸ್ತ್ರಗಳನ್ನು ಕಿತ್ತುಕೊಂಡು ಬೆದರಿಸಿ ಪರಾರಿಯಾಗಲು ಯತ್ನಿಸಿದರು. ಆಗ ನಡೆದ ಗುಂಡಿನ ಚಕಮಕಿಯಲ್ಲಿ ನಾಲ್ವರೂ ಆರೋಪಿಗಳು ಗುಂಡೇಟಿಗೆ ಬಲಿಯಾಗಿದ್ದಾರೆ ಎಂದು ಪೊಲೀಸರು ಹೇಳಿರುವುದಾಗಿ ವರದಿಯಾಗಿದೆ.
ಕಳೆದ ವಾರ ಹೈದರಾಬಾದಿನ ಬೆಂಗಳೂರು ಹೆದ್ದಾರಿ ಟೋಲ್ ಗೇಟ್ ಬಳಿ ನಾಲ್ವರು ಆರೋಪಿಗಳು, 26ರ ಹರೆಯದ ಪಶುವೈದ್ಯೆಯ ಸ್ಕೂಟರನ್ನು ಪಂಕ್ಚರ್ ಮಾಡಿ, ಆಕೆಗೆ ನೆರವಾಗುವ ನೆಪದಲ್ಲಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಸಾಮಾಹಿಕ ಅತ್ಯಾಚಾರ ನಡೆಸಿ, ಬಳಿಕ ಉಸಿರುಗಟ್ಟಿಸಿ ಕೊಲೆ ಮಾಡಿ, ಆಕೆಯ ಶವವನ್ನು ಸುಟ್ಟುಹಾಕುವ ಯತ್ನಮಾಡಿದ್ದರು. ಆದರೆ, ಅರೆಬೆಂದ ಸ್ಥಿತಿಯಲ್ಲಿ ಮಾರನೇ ದಿನ ನತದೃಷ್ಟೆಯ ಶವ ಪತ್ತೆಯಾಗಿತ್ತು. ಬಳಿಕ ಪೊಲೀಸರು, ಚಿಂತಕುಂತ ಚನ್ನಕೇಶವಲು, ಜೊಲ್ಲು ನವೀನ್, ಜೊಲ್ಲು ಶಿವು ಹಾಗೂ ಮಹಮ್ಮದ್ ಆರೀಫ್ ಎಂಬ ನಾಲ್ವರು ಪಾತಕಿಗಳನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಪಾತಕಿಗಳೆಲ್ಲರೂ 20ರಿಂದ 24 ವರ್ಷ ಆಸುಪಾಸಿನವರಾಗಿದ್ದು, ಎಲ್ಲರೂ ಲಾರಿ ಕೆಲಸಗಾರರಾಗಿದ್ದರು ಎಂಬುದು ಗಮನಾರ್ಹ.
ಈ ಭೀಕರ ಘಟನೆ ದೇಶಾದ್ಯಂತ ವ್ಯಾಪಕ ಆಘಾತ ಮತ್ತು ನಾಗರಿಕರ ಆಕ್ರೋಶಕ್ಕೆ ಕಾರಣವಾಗಿತ್ತು. ವ್ಯಾಪಕ ಪ್ರತಿಭಟನೆಗಳು ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು, ಶೀಘ್ರ ನ್ಯಾಯ ಬೇಕು ಮತ್ತು ಆರೋಪಿಗಳನ್ನು ಗಲ್ಲಿಗೇರಿಸಬೇಕು ಎಂಬ ಭಾರೀ ಕೂಗು ಕೇಳಿಬಂದಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಈ ಪ್ರಕರಣ ಕಳೆದ ಒಂದು ವಾರದಿಂದ ಬಹುಚರ್ಚಿತ ವಿಷಯವಾಗಿತ್ತು. ಕೇಂದ್ರ ಮತ್ತು ತೆಲಂಗಾಣ ರಾಜ್ಯ ಸರ್ಕಾರಗಳ ವಿರುದ್ಧ ದೊಡ್ಡ ಮಟ್ಟದ ಆಕ್ರೋಶ ವ್ಯಕ್ತವಾಗಿತ್ತು. ಪ್ರಮುಖವಾಗಿ ಪ್ರಧಾನಿ ಮೋದಿಯವರ ‘ಭೇಟಿ ಬಚಾವೋ ಭೇಟಿ ಪಡಾವೋ’ ಅಭಿಯಾನದ ಹಿನ್ನೆಲೆಯಲ್ಲಿ ದೇಶದಲ್ಲಿ ವಾಸ್ತವವಾಗಿ ಹೆಣ್ಣುಮಕ್ಕಳಿಗೆ ಎಷ್ಟು ಸುರಕ್ಷತೆ ಇದೆ ಎಂಬುದನ್ನು ಈ ಪ್ರಕರಣದ ಹಿನ್ನೆಲೆಯಲ್ಲಿ ಚರ್ಚಿಸಲಾಗಿತ್ತು. ಅಲ್ಲದೆ, ಈ ಹಿಂದೆ 2012ರಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ದೆಹಲಿಯಲ್ಲಿ ನಡೆದಿದ್ದ ನಿರ್ಭಯಾ ಪ್ರಕರಣವನ್ನು ಉಲ್ಲೇಖಿಸಿಯೂ ಮೋದಿ ಸರ್ಕಾರದ ವಿರುದ್ಧ ಟೀಕಿಸಿಲಾಗಿತ್ತು.
ಇದೀಗ, ನವೆಂಬರ್ 27ರಂದು ನಡೆದ ಘಟನೆಯ ಬಳಿಕ ಕೇವಲ ಹತ್ತು ದಿನಗಳಲ್ಲೇ ಎಲ್ಲಾ ಆರೋಪಿಗಳು ಪೊಲೀಸ್ ಎನ್ ಕೌಂಟರಿನಲ್ಲಿ ಹತರಾಗಿದ್ದಾರೆ. ದೇಶಾದ್ಯಂತ ನಾಗರಿಕರು ಆರೋಪಿಗಳ ವಿರುದ್ಧ ವ್ಯಕ್ತಪಡಿಸಿದ್ದ ತೀವ್ರ ಆಕ್ರೋಶ, ವಿಳಂಬ ನ್ಯಾಯದ ಬಗ್ಗೆ ವ್ಯಕ್ತವಾಗಿದ್ದ ತೀವ್ರ ಅಸಮಾಧಾನ, ಪೊಲೀಸ್ ವ್ಯವಸ್ಥೆಯ ಬಗ್ಗೆ ಇದ್ದ ಅಸಹನೆಗಳಿಗೆಲ್ಲಾ ಇದೀಗ ಪೊಲೀಸರ ಈ ಎನ್ ಕೌಂಟರ್ ವಿರಾಮ ಹಾಕಿದೆ.
ಆದರೆ, ಈ ಎನ್ ಕೌಂಟರ್ ಕೂಡ ದೇಶಾದ್ಯಂತ ಈಗ ಹೊಸ ವಾದವನ್ನು, ವಾಗ್ವಾದವನ್ನೂ ಹುಟ್ಟುಹಾಕಿದ್ದು, ಎನ್ ಕೌಂಟರ್ ಕುರಿತ ಪೊಲೀಸರ ವಾದವನ್ನು ಕೂಡ ಅನುಮಾನದಿಂದ ನೋಡಲಾಗುತ್ತಿದೆ. ಪೊಲೀಸರು ಘಟನೆಯ ಮರುಸೃಷ್ಟಿಗಾಗಿ ರಾತ್ರೋರಾತ್ರಿ ಏಕೆ ಕರೆದೊಯ್ದರು ಎಂಬ ಪ್ರಶ್ನೆಯಿಂದ ಹಿಡಿದು, ನಾಲ್ವರು ಆರೋಪಿಗಳನ್ನು ಹದ್ದುಬಸ್ತಿನಲ್ಲಿಟ್ಟುಕೊಳ್ಳಲಾಗದಷ್ಟು ಕಡಿಮೆ ಸಂಖ್ಯೆಯ ಪೊಲೀಸರು ಆಗ ಜೊತೆಗಿದ್ದರೆ? ಒಂದು ವೇಳೆ ಆರೋಪಿಗಳು ತಪ್ಪಿಸಿಕೊಂಡರೆ ಅವರಿಗೆ ಮೊಣಕಾಲಿನ ಕೆಳಗೆ ಗುಂಟೇಟು ನೀಡಿ ಜೀವಂತ ಹಿಡಿಯುವ ಅವಕಾಶವಿತ್ತಲ್ಲವೆ? ಹಾಗಿದ್ದರೂ ಪೊಲೀಸರು ಏಕಾಏಕಿ ಅತಿರೇಕದ ಕ್ರಮಕ್ಕೆ ಯಾಕೆ ಮುಂದಾದರು? ಜನಾಕ್ರೋಶ ಮತ್ತು ಸಾಮಾಜಿಕ ಜಾಲತಾಣ ಮತ್ತು ಮಾಧ್ಯಮಗಳ ಸ್ವಯಂ ನ್ಯಾಯ ನಿರ್ಣಯ ವರಸೆಗಳು ಪೊಲೀಸರ ಮೇಲೆ ಇನ್ನಿಲ್ಲದ ಒತ್ತಡ ಹಾಕಿದವೆ? ದೇಶದ ಕಾನೂನು ಮತ್ತು ನ್ಯಾಯ ವ್ಯವಸ್ಥೆಯಲ್ಲಿ ಆಗಬೇಕಾಗಿದ್ದ ಕೆಲಸವನ್ನು, ಪೊಲೀಸರು ನೇರವಾಗಿ ಕಾನೂನನ್ನು ಕೈಗೆ ತೆಗೆದುಕೊಂಡು ಮುಗಿಸಿಹಾಕಿದರೆ? ಅಥವಾ ಜನಾಕ್ರೋಶಕ್ಕೆ ಮಣಿದ ಸರ್ಕಾರವೇ ಈ ದಾರಿ ಹಿಡಿಯಿತೆ? ಆ ಮೂಲಕ ತನ್ನ ವಿರುದ್ಧ ಭುಗಿಲೆದ್ದಿದ್ದ ಜನಾಕ್ರೋಶವನ್ನು ತಣಿಸಿ, ತನ್ನ ಪರ ಜನಬೆಂಬಲವನ್ನಾಗಿ ಪರಿವರ್ತಿಸುವ ತಂತ್ರಗಾರಿಕೆಯ ಭಾಗವಾಗಿ ಈ ಎನ್ ಕೌಂಟರ್ ನಡೆಸಲಾಯಿತೆ?
ಎಂಬ ಹತ್ತುಹಲವು ಪ್ರಶ್ನೆಗಳು ಈಗ ಕೇಳಿಬರತೊಡಗಿವೆ. ಪೈಶಾಚಿಕ ಕೃತ್ಯವನ್ನು ನಡೆಸಿದ ಪಾತಕಿಗಳಿಗೆ ತಕ್ಕ ಶಿಕ್ಷೆಯಾಗಲೇಬೇಕು ಮತ್ತು ಆ ಮೂಲಕ ಸಮಾಜಘಾತುಕ ಶಕ್ತಿಗಳಿಗೆ ಒಂದು ಕಠಿಣ ಸಂದೇಶ ಹೋಗಬೇಕು ಎಂಬುದನ್ನು ಒಪ್ಪುವವರು ಕೂಡ, ಪೊಲೀಸರ ಈ ಆತುರದ ಕ್ರಮದ ಬಗ್ಗೆ ಸಂದೇಹ ವ್ಯಕ್ತಪಡಿಸತೊಡಗಿದ್ದಾರೆ.
ಅಲ್ಲದೆ, ಇಂತಹ ವಿಷಯದಲ್ಲಿ ಒಬ್ಬರಿಗೊಂದು ನ್ಯಾಯ ಧೋರಣೆಯ ಬಗ್ಗೆಯೂ ಪ್ರಶ್ನೆಗಳು ಎದ್ದಿವೆ. ಅದೇ ರೀತಿಯ ಉತ್ತರಪ್ರದೇಶದ ಉನ್ನಾವೋ ಅತ್ಯಾಚಾರ ಪ್ರಕರಣದ ವಿಷಯದಲ್ಲಿ ಪೊಲೀಸರು ಯಾಕೆ ನಿಷ್ಕ್ರಿಯರಾಗಿದ್ದಾರೆ. ಆ ಪ್ರಕರಣದಲ್ಲಿ ಸ್ವತಃ ಬಿಜೆಪಿಯ ಶಾಸಕರೇ ಆರೋಪಿಯಾಗಿದ್ದು, ಸಂತ್ರಸ್ತೆಯ ವಿರುದ್ಧ ಅಲ್ಲಿ ಸರ್ಕಾರವೇ ನಿಂತಿದೆ. ಆಕೆಯನ್ನು ಲಾರಿ ಹಾಯಿಸಿ ಕೊಲೆಮಾಡುವ ಯತ್ನದ ಬಳಿಕ, ಇದೀಗ ಬೆಂಕಿ ಹಚ್ಚಿ ಸಾಯಿಸುವ ಪ್ರಯತ್ನವನ್ನು ಸ್ವತಃ ಆರೋಪಿ ಬಿಜೆಪಿ ಶಾಸಕನೇ ಮಾಡಿದ್ದಾನೆ. ಆ ನತದೃಷ್ಟ ಸಂತಸ್ತೆ ಇದೀಗ ಸಾವುಬದುಕಿನ ನಡುವೆ ಹೋರಾಡುತ್ತಿದ್ದಾಳೆ. ಹಾಗಿದ್ದರೂ ಬಿಜೆಪಿಯ ಮತ್ತು ಸರ್ಕಾರಗಳು ತಮ್ಮ ಪಾತಕಿ ಶಾಸಕನ ವಿಷಯದಲ್ಲಿ ಮೌನ ವಹಿಸಿವೆ. ಅದೇ ರೀತಿ, ಎರಡು ವರ್ಷಗಳ ಹಿಂದೆ ಕಾಶ್ಮೀರದ ಕಥುವಾದಲ್ಲಿ ಎಂಟು ವರ್ಷದ ಬಾಲಕಿಯ ಮೇಲೆ ಸತತ ಒಂದು ವಾರ ದೇವಾಲಯವೊಂದರಲ್ಲಿಯೇ ಸಾಮೂಹಿಕ ಅತ್ಯಾಚಾರ ಎಸಗಿ ಕೊಲೆ ಮಾಡಿ ಬಿಸಾಕಲಾಗಿತ್ತು. ಆ ಪ್ರಕರಣದಲ್ಲಿಯೂ ಬಿಜೆಪಿ ಮತ್ತು ಸಂಘಪರಿವಾರದ ಕಾರ್ಯಕರ್ತರು ಭಾಗಿಯಾಗಿದ್ದರು ಮತ್ತು ಆರೋಪಿಗಳ ಪರ ಬಿಜೆಪಿ ಸಚಿವರು ಮತ್ತು ಶಾಸಕರು ಬೀದಿಗಿಳಿದು ಹೋರಾಟ ಮಾಡಿದ್ದರು. ಹೈದರಾಬಾದ್ ಪ್ರಕರಣದ ವಿಷಯದಲ್ಲಿ ಅನುಸರಿಸಿದ ‘ನ್ಯಾಯ’ವನ್ನೇ ಉನ್ನಾವೋ ಮತ್ತು ಕಥುವಾ ಅತ್ಯಾಚಾರ ಪ್ರಕರಣದಲ್ಲಿಯೂ ಪಾಲಿಸಲಾಗುತ್ತದೆಯೇ? ಎಂಬ ಪ್ರಶ್ನೆ ಕೂಡ ಕೇಳಿಬರತೊಡಗಿದೆ.
ಹಾಗೇ ರಾಜ್ಯದ ರಾಮಚಂದ್ರಾಪುರ ಮತ್ತು ಬಿಡದಿ ಮಠಗಳು ಸೇರಿದಂತೆ ಪ್ರಮುಖ ಸ್ವಾಮೀಜಿಗಳು ಮತ್ತು ರಾಜಕಾರಣಿಗಳ ವಿರುದ್ಧ ಕೇಳಿಬಂದಿರುವ ನಿರಂತರ ಅತ್ಯಾಚಾರ ಪ್ರಕರಣಗಳ ವಿಷಯದಲ್ಲಿಯೂ ಪೊಲೀಸರು ಯಾಕೆ ಇದೇ ಮಾದರಿಯ ‘ನ್ಯಾಯ’ ಜಾರಿಮಾಡುವುದಿಲ್ಲ ಎಂಬ ಪ್ರಶ್ನೆಯೂ ಎದ್ದಿದೆ.
ಒಟ್ಟಾರೆ, ಇಡೀ ಪ್ರಕರಣ ಇದೀಗ ದೇಶವ್ಯಾಪಿ ಅತ್ಯಾಚಾರದಂತಹ ಹೀನಾಯ ಅಪರಾಧ ಪ್ರಕರಣಗಳಲ್ಲಿ ಪೊಲೀಸರು ಕ್ರಮ ಮತ್ತು ಎನ್ ಕೌಂಟರ್ ನಂತಹ ಅಸ್ತ್ರವನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳುವ, ಬಲಹೀನರ ವಿಷಯದಲ್ಲಿ ಒಂದು ನ್ಯಾಯ ಮತ್ತು ಪ್ರಭಾವಿಗಳ ವಿಷಯದಲ್ಲಿ ಮತ್ತೊಂದು ನ್ಯಾಯ ‘ಜಾರಿ’ ಮಾಡುವ ಆಡಳಿತಾರೂಢರ ವರಸೆ ಹಾಗೂ ಅತ್ಯಾಚಾರದಂತಹ ವಿಷಯವನ್ನು ಕೂಡ ರಾಜಕೀಯ ಲಾಭ-ನಷ್ಟದ ಲೆಕ್ಕಾಚಾರದ ಮೇಲೆ ನಿಭಾಯಿಸುವ ‘ಪಕ್ಕಾ ರಾಜಕೀಯ ನಡೆ’ಯ ಬಗ್ಗೆಯೂ ಬಿರುಸಿನ ಚರ್ಚೆಗೆ ಚಾಲನೆ ನೀಡಿದೆ.