ಕಳೆದ ಆಗಸ್ಟ್ ನಲ್ಲಿ ಉಂಟಾದ ಭೀಕರ ಪ್ರವಾಹದಲ್ಲಿ ಸಿಲುಕಿ ರಾಜ್ಯದ ಬಹುತೇಕ ಜಿಲ್ಲೆಗಳಂತೆಯೇ ಶಿವಮೊಗ್ಗ ನಗರ ಕೂಡ ಭಾಗಶಃ ಮುಳುಗಿತ್ತು. ಜಾತಿ-ಮತ-ಧರ್ಮ-ಪಕ್ಷವೆನ್ನದೆ ನದಿ ತಟದ ಜನರು ಮನೆಮಠ ಕಳೆದುಕೊಂಡು ಬೀದಿಪಾಲಾಗಿದ್ದರು. ಆದರೆ, ರಾಜ್ಯ ಬಿಜೆಪಿ ಸರ್ಕಾರ ಸಂತ್ರಸ್ತರಿಗೆ ಪರಿಹಾರ ನೀಡುವಾಗ ಮಾತ್ರ ಧರ್ಮ- ಜಾತಿ- ಪಕ್ಷ ಮುಂತಾದ ಮಾನದಂಡಗಳನ್ನು ಅನುಸರಿಸಿರುವುದು ಇದೀಗ ಮೂರು ತಿಂಗಳ ಬಳಿಕ ಬೆಳಕಿಗೆ ಬಂದಿದೆ.
ಸಂತ್ರಸ್ತರಿಗೆ ಪರಿಹಾರ ನೀಡುವಾಗ ನಿಜವಾಗಿಯೂ ಅವರಿಗೆ ಹಾನಿಯಾಗಿದೆಯೇ ಎಂಬುದಕ್ಕಿಂತ ಅವರು ಯಾವ ಧರ್ಮ, ಯಾವ ಜಾತಿ ಮತ್ತು ಯಾವ ಪಕ್ಷದ ಬೆಂಬಲಿಗರು? ಬಿಜೆಪಿಯ ಮುಖಂಡರು ಮತ್ತು ಕಾರ್ಯಕರ್ತರ ಆಪ್ತರೇ ಅಥವಾ ಇತರ ಪಕ್ಷಗಳ ಜೊತೆ ನಂಟು ಹೊಂದಿದ್ದಾರೆಯೇ? ಎಂಬುದನ್ನು ನೋಡಿ ಪರಿಹಾರ ಬಿಡುಗಡೆ ಮಾಡಲಾಗಿದೆ. ಬಹಳಷ್ಟು ಪ್ರಕರಣಗಳಲ್ಲಿ ನೈಜ ಸಂತ್ರಸ್ತರಿಗೆ ಬಿಡಿಗಾಸಿನ ನೆರವು ಸಿಕ್ಕಿಲ್ಲ. ಆದರೆ, ಬಿಜೆಪಿ ಮತ್ತು ಸಂಘಪರಿವಾರದೊಂದಿಗೆ ನಂಟು ಹೊಂದಿರುವವರಿಗೆ ಯಾವುದೇ ಬಗೆಯ ಆಸ್ತಿಪಾಸ್ತಿ ಹಾನಿ ಸಂಭವಿಸದೇ ಇದ್ದರೂ ಪರಿಹಾರ ನೀಡಿದ ಉದಾಹರಣೆಗಳೂ ಇವೆ ಎಂದು ಪತ್ರಿಕೆಗಳು ವರದಿಮಾಡಿವೆ.
ಹಾಗೆ ನೋಡಿದರೆ, ನೆರೆ- ಬರದಂತಹ ಪ್ರಾಕೃತಿಕ ವಿಕೋಪಗಳ ಸಂದರ್ಭದಲ್ಲಿಯೂ ಹೀಗೆ ತಾರತಮ್ಯ ಎಸಗುವ ಮತ್ತು ಆ ಮೂಲಕ ಜನರಲ್ಲಿ ತಮ್ಮ ಪಕ್ಷಕ್ಕೆ ಬೆಂಬಲಿಸಿದರೆ ಮಾತ್ರ ನಿಮ್ಮ ಪಾಲಿಗೆ ಸರ್ಕಾರ ಇದೆ ಎಂಬ ಧೋರಣೆ ತಾಳುವ ಬಿಜೆಪಿಯಿಂದ, ಇತರ ವಿವಿಧ ಸರ್ಕಾರಿ ಯೋಜನೆ ಮತ್ತು ನೆರವುಗಳ ವಿಷಯದಲ್ಲಿ ಪಾರದರ್ಶಕ ನಡೆಯನ್ನು ನಿರೀಕ್ಷಿಸಲಾಗದು. ವಿಧವಾ ವೇತನದಿಂದ ಗಂಗಾ ಕಲ್ಯಾಣ ಯೋಜನೆಯವರೆಗೆ, ಪಡಿತರ ಚೀಟಿಯಿಂದ ಉದ್ಯೋಗ ಖಾತರಿ ಜಾಬ್ ಕಾರ್ಡ್ ವರೆಗೆ ಪಕ್ಷದ ಮತಗಟ್ಟೆ ಮಟ್ಟದ ಪ್ರಮುಖರು ಗುರುತಿಸಿದವರೇ ಫಲಾನುಭವಿಗಳಾಗುತ್ತಿರುವುದು ರಾಜ್ಯದ ಮೂಲೆಮೂಲೆಯ ವಾಸ್ತವ.
ಹೀಗೆ ತಮ್ಮ ಪಕ್ಷ ಮತ್ತು ಸಿದ್ಧಾಂತದ ಪರ ಇರುವವರಿಗೆ ಸಕಲ ಸವಲತ್ತು, ಸೌಲಭ್ಯ ಕೊಡುವ ಮತ್ತು ತಮ್ಮ ವಿರೋಧಿಗಳನ್ನು ಹಾಗೂ ‘ಹೊರಗಿನವರು’ ಎಂದು ತಾವು ಈಗಾಗಲೇ ಗುರುತಿಸಿರುವವರನ್ನು ಎಲ್ಲಾ ಅವಕಾಶಗಳಿಂದ ವಂಚಿತರನ್ನಾಗಿ ಮಾಡುವುದೇ ಅಲ್ಲದೆ, ಅವರ ವಿರುದ್ಧ ಸರ್ಕಾರಿ ತನಿಖಾ ಸಂಸ್ಥೆಗಳೂ ಸೇರಿದಂತೆ ಇತರೆ ಅಸ್ತ್ರಗಳನ್ನು ಪ್ರಯೋಗಿಸಿ ಹಣಿಯುವ ಕೆಲಸವನ್ನು ಕೂಡ ಬಹಳ ವ್ಯವಸ್ಥಿತವಾಗಿ ಮಾಡಿಕೊಂಡು ಬರಲಾಗುತ್ತಿದೆ ಎಂಬುದಕ್ಕೆ ಇತ್ತೀಚಿನ ದಿನಗಳಲ್ಲಿ ನೂರಾರು ನಿದರ್ಶನಗಳು ಕಣ್ಣ ಮುಂದಿವೆ.
ಅಂತಹ ಎರಡು ವೈರುಧ್ಯಗಳಿಗೆ ತಾಜಾ ಉದಾಹರಣೆಯಾಗಿ ಹೈದರಾಬಾದ್ ಪಶುವೈದ್ಯೆ ಅತ್ಯಾಚಾರ ಪ್ರಕರಣದ ವಿಷಯದಲ್ಲಿ ಸರ್ಕಾರ ಮತ್ತು ಬಿಜೆಪಿಯ ಬೆಂಬಲಿಗರ ವರಸೆ ಹಾಗೂ ಅದೇ ಬಿಜೆಪಿ ಆಡಳಿತದ ಉತ್ತರಪ್ರದೇಶದ ಉನ್ನಾವ್ ಅತ್ಯಾಚಾರ ಸಂತ್ರಸ್ತೆಯನ್ನು ಬೆಂಕಿ ಹಚ್ಚಿ ಸಾಯಿಸಿದ ವಿಷಯದಲ್ಲಿ ತೋರುತ್ತಿರುವ ಉದಾಸೀನ ಧೋರಣೆಗಳು ಎದುರಿಗಿವೆ. ಹೈದರಾಬಾದ್ ಪ್ರಕರಣದ ವಿಷಯದಲ್ಲಿ; ಆರೋಪಿಗಳು ಸಾಮೂಹಿಕ ಅತ್ಯಾಚಾರ ನಡೆಸಿ, ವೈದ್ಯೆಯನ್ನು ಕೊಂದು, ಸುಟ್ಟುಹಾಕಿರುವಂತಹ ಹೀನಾಯ ಅಪರಾಧ ಎಸಗಿದ್ದಾರೆ. ಅವರಿಗೆ ಕಾನೂನಿನ ಅಡಿಯಲ್ಲಿ ಸಾಧ್ಯವಿರುವ ಅತ್ಯಂತ ಕಠಿಣ ಶಿಕ್ಷೆಯಾಗಬೇಕು ಮತ್ತು ಅತ್ಯಂತ ಶೀಘ್ರವಾಗಿ ಜಾರಿಗೆ ಬರಬೇಕು ಎಂಬುದನ್ನು ಯಾರೂ ತಳ್ಳಿಹಾಕಲಾರರು. ಆದರೆ, ಅಲ್ಲಿನ ಪೊಲೀಸರು ಆರೋಪಿಗಳ ವಿರುದ್ಧ ಎನ್ ಕೌಂಟರ್ ಅಸ್ತ್ರ ಪ್ರಯೋಗಿಸಿ ಎಲ್ಲಾ ನಾಲ್ವರು ಆರೋಪಿಗಳನ್ನು ಕೊಂದುಹಾಕಿದರು.
ವಿಪರ್ಯಾಸವೆಂದರೆ; ಸಮಾಜದ ಕೆಳಸ್ತರದ ಆರೋಪಿಗಳ ವಿಷಯದಲ್ಲಿ ನೇರವಾಗಿ ಕಾನೂನು ಕೈಗೆ ತೆಗೆದುಕೊಂಡು ‘ಅರಣ್ಯ ನ್ಯಾಯ’ ಪಾಲಿಸಿದ ಇದೇ ಪೊಲೀಸ್ ವ್ಯವಸ್ಥೆ, ಉತ್ತರಪ್ರದೇಶದ ಉನ್ನಾವ್ ಅತ್ಯಾಚಾರ ವಿಷಯದಲ್ಲಿ ಮಾತ್ರ ಜಾಣಮರೆವು, ಜಾಣಕಿವುಡು, ಜಾಣಕುರುಡುತನದ ಮೊರೆಹೋಗಿದೆ. ಯುವತಿಯ ಮೇಲೆ 2017ರಲ್ಲೇ ಅತ್ಯಾಚಾರ ನಡೆದಿದ್ದರೂ, ಆ ಕೃತ್ಯ ಎಸಗಿದ ಆರೋಪಿಗಳು ಜಾಮೀನಿನ ಮೇಲೆ ಹೊರಬಂದಿದ್ದರೂ ಆಕೆಗೆ ಕನಿಷ್ಠ ರಕ್ಷಣೆಯನ್ನೂ ನೀಡಲಿಲ್ಲ. ಆಕೆ ನ್ಯಾಯಾಲಯಕ್ಕೆ ಬರುವ ಮಾರ್ಗದಲ್ಲೇ ಆಕೆಯನ್ನು ಅಪಹರಿಸಿ ಮತ್ತೆ ಸಾಮೂಹಿಕ ಅತ್ಯಾಚಾರ ನಡೆಸಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚುವ ಮಟ್ಟಿನ ಕ್ರೌರ್ಯ ಮೆರೆದು, ಅಂತಿಮವಾಗಿ ಆಕೆಯ ಸಾವಿಗೆ ಕಾರಣರಾದ ಆರೋಪಿಗಳ ವಿರುದ್ಧ ಯಾವ ಎನ್ ಕೌಂಟರ್ ಪ್ರಯೋಗವೂ ಆಗಲಿಲ್ಲ. ಏಕೆಂದರೆ, ಆ ಆರೋಪಿಗಳು ಅಲ್ಲಿನ ಅಧಿಕಾರ ಹಿಡಿದಿರುವ ಬಿಜೆಪಿಯ ಒಪ್ಪಿತ ಸಾಮಾಜಿಕ ಹಿನ್ನೆಲೆಯವರು!
ಇದು ಉನ್ನಾವ್ ನಲ್ಲಿ ಶನಿವಾರ ನಿಧನರಾದ ಅತ್ಯಾಚಾರ ಸಂತ್ರಸ್ತೆಯ ವಿಷಯವಾದರೆ; ಅದೇ ಉನ್ನಾವ್ ನಲ್ಲಿ ಎರಡು ವರ್ಷಗಳ ಹಿಂದೆ ಸ್ವತಃ ಬಿಜೆಪಿಯ ಶಾಸಕ ಕುಲದೀಪ್ ಸಿಂಗ್ ಸೆಂಗಾರ್ ಎಂಬಾತ ಅಪ್ರಾಪ್ತ ವಯಸ್ಸಿನ ಹುಡುಗಿಯ ಅತ್ಯಾಚಾರ ಎಸಗುತ್ತಾನೆ. ಆಕೆ ಪೊಲೀಸ್ ದೂರು ನೀಡಿದಾಗ, ಪೊಲೀಸರು ಆಕೆಯ ದೂರು ಸ್ವೀಕರಿಸುವ ಬದಲು ಬೆದರಿಕೆ ಹಾಕಿ ಬಾಯಿಮುಚ್ಚಿಸುವ ಯತ್ನ ಮಾಡುತ್ತಾರೆ. ನಂತರ ಆಕೆ ನೇರವಾಗಿ ಸಿಎಂ ಯೋಗಿ ಆದಿತ್ಯನಾಥರ ಕಚೇರಿಯ ಮುಂದೆ ಧರಣಿ ಕೂರುತ್ತಾಳೆ. ಆಗಲೂ ಆಕೆಯ ಮೇಲೆ ಸರ್ಕಾರಿ ವ್ಯವಸ್ಥೆ ದಬ್ಬಾಳಿಕೆ ನಡೆಸಿ ಪ್ರಕರಣ ಮುಚ್ಚಿಹಾಕುವ ಯತ್ನ ಮಾಡುತ್ತದೆ. ನಂತರ ನ್ಯಾಯಾಲಯದ ಕಲಾಪಕ್ಕೆ ಹಾಜರಾಗಲು ಆಕೆ ತಂದೆಯೊಂದಿಗೆ ಬರುತ್ತಿರುವಾಗ ಆರೋಪಿ ಶಾಸಕ ಆಕೆಯ ಮೇಲೆ ಲಾರಿ ಹರಿಸಿ ಕೊಲ್ಲುವ ಯತ್ನ ಮಾಡುತ್ತಾನೆ. ಕೊನೆಗೆ ಆಕೆಯ ತಂದೆ ಮತ್ತು ಚಿಕ್ಕಪ್ಪನ ಕೊಲೆಯಾಗುತ್ತದೆ. ಈಗಲೂ ಆಕೆ ನ್ಯಾಯಕ್ಕಾಗಿ ಹೋರಾಡುತ್ತಿದ್ದಾಳೆ. ಬಿಜೆಪಿ ಆ ಶಾಸಕನನ್ನು ಪಕ್ಷದಿಂದ ಹೊರಹಾಕಿ ಕೈತೊಳೆದುಕೊಂಡಿದೆ. ಆ ಪ್ರಕರಣದಲ್ಲಿ ಯಾವ ಎನ್ ಕೌಂಟರ್ ಆಗಲಿಲ್ಲ, ಶೀಘ್ರ ವಿಲೇವಾರಿ ನ್ಯಾಯಾಲಯಕ್ಕೂ ಪ್ರಕರಣ ಬರಲಿಲ್ಲ. ಆರೋಪಿ ಶಾಸಕನಿಗೆ ಶಿಕ್ಷೆಯೂ ಆಗಲಿಲ್ಲ!
ಆದರೆ, ಹೈದರಾಬಾದ್ ಎನ್ ಕೌಂಟರ್ ವಿಷಯದಲ್ಲಿ ಎದೆಯುಬ್ಬಿಸಿದ ಪೊಲೀಸ್ ವ್ಯವಸ್ಥೆಯಾಗಲಿ, ಅವರ ಕಾರ್ಯವನ್ನು ದೇಶದ ಸಹಜ ನ್ಯಾಯ ವ್ಯವಸ್ಥೆ ಮತ್ತು ಕಾನೂನು ರೀತಿರಿವಾಜುಗಳನ್ನು ಗಾಳಿಗೆ ತೂರಿ ಸಂಭ್ರಮಿಸಿದ ಬಿಜೆಪಿ ಮತ್ತು ಅದರ ಬೆಂಬಲಿಗರಾಗಲೀ, ಬಿಜೆಪಿಯ ತುತ್ತೂರಿ ಮಾಧ್ಯಮಗಳಾಗಲೀ,.. ಯಾರೊಬ್ಬರೂ ಉನ್ನಾವ್ ಅತ್ಯಾಚಾರ ವಿಷಯದಲ್ಲಿ ಚಕಾರವೆತ್ತಿಲ್ಲ. ಒಂದು ಪ್ರಕರಣದ ಸಂತ್ರಸ್ತೆ ಜೀವ ಬಿಟ್ಟಿದ್ದರೂ ಆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ಮತ್ತು ಸಂಘದ ಮಂದಿಯ ಸದ್ದೇ ಇಲ್ಲ!
ಅಂದರೆ, ಅಪರಾಧ ಮತ್ತು ನೋವು ಎಂಬುದು ಕೂಡ ದೇಶದಲ್ಲಿ ಈಗ ಅದರ ಹಿಂದಿರುವ ವ್ಯಕ್ತಿಯ ರಾಜಕೀಯ ಒಲವು-ನಿಲುವುಗಳ ಮೇಲೆ ಅವಲಂಬಿತವಾಗಿದೆ. ಆಳುವ ವ್ಯವಸ್ಥೆಯ ಭಾಗವಾಗಿದ್ದರೆ, ಅಥವಾ ಆ ಆಳುವ ಮಂದಿಯ ಪರ ನಿಲುವು ಹೊಂದಿದ್ದರೆ, ಅವರ ನಂಬಿಕೆ, ಸಿದ್ಧಾಂತಗಳ ಬಗ್ಗೆ ಸಹಮತ ಹೊಂದಿದ್ದರೆ, ಅಂತಹ ವ್ಯಕ್ತಿಗಳು ಎಂಥದ್ದೇ ಅಪರಾಧ ಎಸಗಿದರೂ, ಯಾವುದೇ ಪಾಪಕೃತ್ಯದಲ್ಲಿ ತೊಡಗಿದರು ಅದನ್ನು ಮನ್ನಾ ಮಾಡಲಾಗುತ್ತದೆ ಮತ್ತು ಸಾಧ್ಯವಾದರೆ ಅವರಿಗೆ ಎಲ್ಲಾ ರೀತಿಯಲ್ಲೂ ಕಾನೂನಿನ ಕೈಗಳಿಂದ ರಕ್ಷಣೆ ನೀಡಲಾಗುತ್ತದೆ. ಅದಕ್ಕೆ ಕುಲದೀಪ್ ಸಿಂಗ್ ಸೆಂಗಾರ್, ಕಥುವಾ ಬಾಲಕಿ ಅತ್ಯಾಚಾರ ಮತ್ತು ಕೊಲೆ ಆರೋಪಿಗಳಾದ ಸೇನಾ ಯೋಧ, ದೇವಾಲಯದ ಅರ್ಚಕ, ಅವರ ಬೆಂಬಲಕ್ಕೆ ಬೀದಿಗಳಿದು ಹೋರಾಟ ಮಾಡಿದ ಬಿಜೆಪಿಯ ಅಂದಿನ ಕಾಶ್ಮೀರದ ಸಚಿವರು, ಶಾಸಕರು, ಬಿಜೆಪಿ ಸಂಸದ ಚಿನ್ಮಯಾನಂದ, ಅಸಾರಾಮ್ ಬಾಪು, ರಾಮ್ ರಹೀಂ, ಬಿಡದಿಯ ನಿತ್ಯಾನಂದ, ರಾಮಚಂದ್ರಾಪುರದ ರಾಘವೇಶ್ವರ ಸೇರಿದಂತೆ ನೂರಾರು ಪ್ರಕರಣಗಳ ಸರಣಿ ಉದಾಹರಣೆಗಳಿವೆ.
ಹಾಗೇ ಸಂತ್ರಸ್ತ ಹೆಣ್ಣುಮಕ್ಕಳ ಸಾಮಾಜಿಕ ಮತ್ತು ಆರ್ಥಿಕ ಸ್ಥಾನಮಾನಗಳು ಕೂಡ ಸರ್ಕಾರ ಮತ್ತು ಮಾಧ್ಯಮಗಳ ಕ್ರಿಯಾಶೀಲತೆಯ ಮಟ್ಟವನ್ನು ನಿರ್ಧರಿಸುತ್ತವೆ ಎಂಬುದಕ್ಕೂ ಸಾಕಷ್ಟು ಪ್ರಕರಣಗಳ ನಿದರ್ಶನ ಕಣ್ಣ ಮುಂದಿವೆ. ಅದು ಕಾಶ್ಮೀರ ಕಣಿವೆಯ ಕಥುವಾದ ಮುಸ್ಲಿಂ ಬುಡಕಟ್ಟು ಬಾಲಕಿಯನ್ನು ಹಿಂದೂ ಮಂದಿರದ ಒಳಗೇ ಧಾರುಣವಾಗಿ ಸಾಮೂಹಿಕ ಅತ್ಯಾಚಾರವೆಸಗಿ ಕೊಲೆ ಮಾಡಿ ಕಾಡಿನಲ್ಲಿ ಬಿಸಾಕಿದ ಪ್ರಕರಣವಿರಬಹುದು, ರಾಜ್ಯದ ವಿಜಯಪುರದ ದಾನಮ್ಮನ ಅತ್ಯಾಚಾರ ಮತ್ತು ಕೊಲೆ ಪ್ರಕರಣವಿರಬಹುದು, ಇಂತಹ ನೂರಾರು ಪ್ರಕರಣಗಳಲ್ಲಿ ಬಿಜೆಪಿಯ ನಾಯಕರು ಮತ್ತು ನಮ್ಮ ಮುಖ್ಯವಾಹಿನಿ ಮಾಧ್ಯಮಗಳ ಧೋರಣೆ ಈಗಾಗಲೇ ಜಗಜ್ಜಾಹೀರಾಗಿದೆ.
ಇನ್ನು ಬಿಜೆಪಿಯ ತತ್ವ ಸಿದ್ಧಾಂತದ ವಿರೋಧಿಗಳು, ಅದು ಪ್ರತಿಪಾದಿಸುವ ಮೌಲ್ಯಗಳನ್ನು ಒಪ್ಪುದ ವ್ಯಕ್ತಿಗಳನ್ನು, ಅದು ತನ್ನವರಲ್ಲ ಎಂದು ಗುರುತುಹಾಕಿ ಹೊರಗಿಟ್ಟಿರುವ ‘ಹೊರಗಿನವರ’ ವಿಷಯದಲ್ಲಿ ಮಾತ್ರ ಸರ್ಕಾರದ ಪೊಲೀಸ್, ಆದಾಯ ತೆರಿಗೆ, ಜಾರಿ ನಿರ್ದೇಶನಾಲಯ, ಸಿಬಿಐ ಸೇರಿದಂತೆ ಆಡಳಿತ ವ್ಯವಸ್ಥೆಯ ವಿವಿಧ ಸಂಸ್ಥೆಗಳು ಕಾನೂನು ಕ್ರಮವನ್ನಷ್ಟೇ ಅಲ್ಲದೆ, ಕೆಲವೊಮ್ಮೆ ಕಾನೂನು ವ್ಯಾಪ್ತಿಯನ್ನೂ ಮೀರಿ ಕತ್ತಿ ಝಳಪಿಸುತ್ತವೆ ಎಂಬುದಕ್ಕೆ ಕಳೆದ ಐದಾರು ವರ್ಷಗಳಲ್ಲಿ ಹಲವು ಪ್ರಕರಣಗಳನ್ನು ಕಂಡಿದ್ದೇವೆ. ಆ ಪೈಕಿ ಹೈದರಾಬಾದ್ ಅತ್ಯಾಚಾರ ಆರೋಪಿಗಳ ವಿರುದ್ಧದ ಎನ್ ಕೌಂಟರ್ ಒಂದು ತಾಜಾ ಉದಾಹರಣೆ. ಹಾಗೇ ಅಳುವ ಮಂದಿಗೆ ಒಂದಲ್ಲಾ ಒಂದು ರೀತಿಯಲ್ಲಿ ಹತ್ತಿರ ಇರುವವರು ಮತ್ತು ಅವರ ವಿರುದ್ಧದ ಇರುವವರ ವಿಷಯದಲ್ಲಿ ಒಂದೇ ರೀತಿಯ ಪ್ರಕರಣಗಳಲ್ಲಿ ಆಡಳಿತ ವ್ಯವಸ್ಥೆ ಹೇಗೆ ಪರಸ್ಪರ ವಿರುದ್ಧ ರೀತಿಯಲ್ಲಿ ನಡೆದುಕೊಂಡಿದೆ ಎಂಬುದನ್ನು ಗಮನಿಸುವುದಾದರೆ; ವಿಜಯ ಮಲ್ಯ, ಲಲಿತ್ ಮೋದಿ, ಚೋಕ್ಸಿ ಮುಂತಾದ ಬಹುಕೋಟಿ ವಂಚಕರು ವರ್ಸಸ್ ಪಿ ಚಿದಂಬರಂ ಮತ್ತು ಡಿ ಕೆ ಶಿವಕುಮಾರ್ ಪ್ರಕರಣಗಳಲ್ಲಿ ಐಟಿ, ಇಡಿ ಮತ್ತು ಸಿಬಿಐ ನಡೆದುಕೊಂಡಿರುವ ರೀತಿ ಕಣ್ಣೆದುರಿಗಿದೆ. ಹಾಗೇ ಬಿಡದಿ ನಿತ್ಯಾನಂದ, ಹೊಸನಗರ ರಾಘವೇಶ್ವರ, ಅಸರಾಂ ಬಾಪೂ, ಚಿನ್ಮಯಾನಂದ ವರ್ಸಸ್ ಇಂತಹದ್ದೇ ಪ್ರಕರಣಗಳ ಇತರ ಸಾಮಾನ್ಯ ಆರೋಪಿಗಳ ವಿಷಯದಲ್ಲಿ ಪೊಲೀಸ್ ಮತ್ತು ನ್ಯಾಯಾಂಗ ನಡೆದುಕೊಳ್ಳುತ್ತಿರುವ ರೀತಿಗಳನ್ನು ಜನಸಾಮಾನ್ಯರು ನೋಡುತ್ತಲೇ ಇದ್ದಾರೆ.
ಆದರೆ, ಜನಸಾಮಾನ್ಯರ ಅರಿವಿಗೆ ಮೀರಿದ ಒಂದು ವ್ಯವಸ್ಥಿತ ವಿನ್ಯಾಸ(ಮೆಗಾ ಡಿಸೈನ್) ಈ ಎಲ್ಲದರ ಹಿಂದೆ ಕೆಲಸ ಮಾಡುತ್ತಿರುವಂತಿದೆ. ಅದು; ತನ್ನ ಏಕ ಸಿದ್ಧಾಂತ, ಏಕ ಧರ್ಮ, ಏಕ ಸಂಸ್ಕೃತಿ, ಏಕ ಆಹಾರ, ಏಕ ರೀತಿಯ ಉಡುಗೆ-ತೊಡುಗೆ, ಏಕ ರೀತಿಯ ಚಿಂತನಕ್ರಮ ಸೇರಿದಂತೆ ತನ್ನದೇ ಎರಕದ ವ್ಯವಸ್ಥೆಯ ಒಳಗೆ ಎಲ್ಲರನ್ನೂ ಕೂರಿಸುವ ಮತ್ತು ಹಾಗೆ ಹೊಂದಿಕೆಯಾಗದವರನ್ನು ‘ಹೊರಗಿನವರು’ ಎಂದು ಬೇರ್ಪಡಿಸಿ, ಗುರುತಿಸಿ ಅವರ ಮೇಲೆ ಕಾನೂನು ವ್ಯಾಪ್ತಿಯನ್ನೂ ಮೀರಿ ಗಧಾಪ್ರಹಾರ ನಡೆಸುವ, ಆ ಮೂಲಕ ಭಯ- ಭೀತಿ ಹುಟ್ಟಿಸುವ, ತನ್ನನ್ನು ಒಪ್ಪಿಕೊಳ್ಳುವಂತೆ, ತನಗೆ ಶರಣಾಗುವಂತೆ ಮಾಡುವ ದಾಢಸೀತನದ ವರಸೆ; ದಬ್ಬಾಳಿಕೆಯ ಪ್ರಯೋಗ.
ತನ್ನನ್ನು ಮತ್ತು ತಾನು ಪ್ರತಿನಿಧಿಸುವ ವ್ಯವಸ್ಥೆಯನ್ನು ಒಪ್ಪಿದರೆ, ಅದಕ್ಕೆ ಹೊಂದಿಕೊಂಡರೆ, ಶರಣಾದರೆ ನಿಮಗೆ ಎಲ್ಲಾ ರೀತಿಯ ಕಾನೂನು ರಕ್ಷಣೆ ಸಿಗಲಿದೆ. ನೀವು ಅತ್ಯಾಚಾರಿಯಾಗಿರಿ(ಕುಲದೀಪ್ ಸಿಂಗ್, ಚಿನ್ಮಯಾನಂದ, ನಿತ್ಯಾನಂದ), ಭಯೋತ್ಪಾದಕರಾಗಿರಿ(ಸಾಧ್ವಿ ಪ್ರಜ್ಯಾ ಸಿಂಗ್ ಠಾಕೂರ್), ಅಸಲೀ ದೇಶ ದ್ರೋಹಿಯಾಗಿರಿ(ಬಳ್ಳಾರಿ ರೆಡ್ಡಿ ಬ್ರದರ್ಸ್ ಸೇರಿದಂತೆ ‘ಸದಾವತ್ಸಲೆ’ಯ ಒಡಲುಬಗೆದವರು), ನಿಮಗೆ ಎಲ್ಲಾ ಕಾನೂನು, ಕಾಯ್ದೆಗಳಿಂದ ರಕ್ಷಣೆ ನೀಡಲಾಗುತ್ತದೆ. ನಿಮಗೆ ಸಂಸದರು, ಶಾಸಕರಂತಹ ಗೌರವಾನ್ವಿತ ಸ್ಥಾನಮಾನ, ಸಚಿವ ಪದವಿ ನೀಡಿ ಗೌರವಿಸಲಾಗುತ್ತದೆ. ಇಲ್ಲದೇ ಹೋದರೆ, ವಿಚಾರಣಾರಹಿತ ಜೈಲು ಶಿಕ್ಷೆ, ಆರೋಪರಹಿತ ಜೈಲು ವಾಸ, ದೇಶದ್ರೋಹದ ಪ್ರಕರಣ, ಎನ್ ಕೌಂಟರ್ ಶಿಕ್ಷೆ ನೀಡಲಾಗುತ್ತದೆ!
ಒಟ್ಟಾರೆ ಆಡಳಿತ ವ್ಯವಸ್ಥೆ ಪರೋಕ್ಷವಾಗಿ ಗುರುತುಹಾಕಿರುವ, ಒಪ್ಪಿತ ಮಾನದಂಡಗಳ ಅಡಿಯಲ್ಲಿ ಎಲ್ಲರನ್ನೂ ತರುವ ಮತ್ತು ಎಲ್ಲರನ್ನೂ ತನ್ನ ಮೂಗಿನ ನೇರಕ್ಕೆ ಬಗ್ಗಿಸುವ ಪ್ರಯತ್ನಗಳು ಸರ್ಕಾರದ ವಿವಿಧ ಅಂಗಗಳ ಮೂಲಕ ನಡೆಯುತ್ತಿವೆ. ಅದು ನೆರೆ ಪರಿಹಾರದಿಂದ ‘ನ್ಯಾಯ’ ಪರಿಹಾರದವರೆಗೆ ವಿವಿಧ ಹಂತದಲ್ಲಿ, ವಿವಿಧ ಸ್ವರೂಪದಲ್ಲಿ ಜಾರಿಯಲ್ಲಿದೆ! ಅಂತಹ ಪ್ರಯತ್ನಗಳಿಗೆ ಸಾರ್ವಜನಿಕ ಮನ್ನಣೆ ಗಳಿಸಿಕೊಳ್ಳಲು ಪ್ರಮುಖವಾಗಿ ಟಿವಿ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ಜನಾಭಿಪ್ರಾಯ ಉತ್ಪಾದನೆಯ ಕಸರತ್ತುಗಳೂ ನಡೆಯುತ್ತಿವೆ. ಹಾಗಾಗಿಯೇ ಹೈದರಾಬಾದ್ ಅತ್ಯಾಚಾರ ಆರೋಪಿಗಳ ಎನ್ ಕೌಂಟರ್ ಬಗ್ಗೆ ಸಿಹಿ ಹಂಚಿ ಸಂಭ್ರಮಿಸಿದ ಜನ, ಉನ್ನಾವ್ ಯುವತಿಯ ಬರ್ಬರ ಅತ್ಯಾಚಾರ ನಡೆಸಿ ಬೆಂಕಿ ಹೊಚ್ಚಿ ಸಾಯಿಸಿದ ಪ್ರಕರಣದ ವಿಷಯದಲ್ಲಿ ತುಟಿಬಿಚ್ಚುವುದೇ ಇಲ್ಲ! ವ್ಯವಸ್ಥೆ ಎಳೆಯುತ್ತಿರುವ ‘ಒಳಗಿನವರು’ ಮತ್ತು ‘ಹೊರಗಿನವರ’ ನಡುವಿನ ಗೆರೆಗಳು ಸ್ಪಷ್ಟವಾಗತೊಡಗಿವೆ.