ಬಹುನಿರೀಕ್ಷಿತ ರಾಜ್ಯ ಉಪ ಚುನಾವಣಾ ಫಲಿತಾಂಶ ಹೊರಬಿದ್ದಿದೆ. ಒಟ್ಟು ಹದಿನೈದು ಕ್ಷೇತ್ರಗಳ ಪೈಕಿ ನಿರೀಕ್ಷೆಯಂತೆ ಹನ್ನೆರಡು ಸ್ಥಾನ ಗೆಲ್ಲುವು ಮೂಲಕ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ, ಬೀಸೋ ದೊಣ್ಣೆಯಿಂದ ಪಾರಾಗಿ, ಅಗತ್ಯ ಸರಳ ಬಹುಮತ ಪಡೆಯುವಲ್ಲಿ ಯಶಸ್ವಿಯಾಗಿದೆ.
ಎಂದಿನಂತೆ ಕಾಂಗ್ರೆಸ್ ಮತ್ತು ಜೆಡಿಎಸ್ ಹೀನಾಯ ಸೋಲು ಕಂಡಿವೆ. ನಿರೀಕ್ಷೆಯಂತೆ ಬೆಂಗಳೂರಿನ ಶಿವಾಜಿನಗರದಲ್ಲಿ ಕಾಂಗ್ರೆಸ್ಸಿನ ರಿಜ್ವಾನ್ ಅರ್ಷಾದ್ ಗೆಲುವು ಪಡೆದಿರುವುದರಲ್ಲಿ ಅಚ್ಚರಿಯೇನಿಲ್ಲ. ಆದರೆ, ಹುಣಸೂರಿನಲ್ಲಿ ಹಳ್ಳಿ ಹಕ್ಕಿ ಎಚ್ ವಿಶ್ವನಾಥ್ ವಿರುದ್ಧ ಭರ್ಜರಿ ಜಯ ದಾಖಲಿಸಿರುವ ಎಚ್ ಪಿ ಮಂಜುನಾಥ್ ಅವರು ಕಾಂಗ್ರೆಸ್ ಪಾಲಿಗೆ ಜಯದ ಖುಷಿ ತಂದುಕೊಟ್ಟಿದ್ದಾರೆ. ಹಾಗೇ ಕೆ ಆರ್ ಪೇಟೆಯಲ್ಲಿ ಜೆಡಿಎಸ್ ಬಿ ಎಲ್ ದೇವರಾಜ್ ಅವರು ಬಿಜೆಪಿಯ ನಾರಾಯಣ ಗೌಡ ಅವರ ವಿರುದ್ಧ ಮುನ್ನಡೆ ಕಾಯ್ದುಕೊಂಡು ಆರಂಭದಲ್ಲಿ ಬಿರುಸಿನ ಪೈಪೋಟಿ ನೀಡಿದ್ದು ಆ ಪಕ್ಷಕ್ಕೆ ಭರವಸೆ ಹುಟ್ಟಿಸಿತ್ತು. ಆದರೆ, ಅಂತಿಮವಾಗಿ ಆ ಸ್ಥಾನ ಗೆಲ್ಲುವಲ್ಲಿ ಬಿಜೆಪಿ ಯಶಸ್ವಿಯಾಯಿತು. ಅಲ್ಲಿನ ಚುನಾವಣಾ ಹೊಣೆ ಹೊತ್ತಿದ್ದ ಸಿಎಂ ಪುತ್ರ ಬಿ ವೈ ವಿಜಯೇಂದ್ರ ಅವರ ರಾಜಕೀಯ ಭವಿಷ್ಯದ ದೃಷ್ಟಿಯಲ್ಲಿ ಈ ಜಯ ಮಹತ್ವದ್ದು. ಹಾಗೇ, ಹೋಸಕೋಟೆಯಲ್ಲಿ ಹಣದ ತೈಲಿಯನ್ನೇ ಹಿಡಿದುಕೊಂಡು ಮೆರೆಯುತ್ತಿದ್ದ ಎಂ ಟಿ ಬಿ ನಾಗರಾಜ್ ಅವರನ್ನು ಮಣ್ಣುಮುಕ್ಕಿಸಿ, ಗೆಲುವಿನ ನಗೆ ಬೀರಿರುವ ಪಕ್ಷೇತರ ಅಭ್ಯರ್ಥಿ ಹಾಗೂ ಬಿಜೆಪಿ ನಾಯಕ ಬಿ ಎನ್ ಬಚ್ಚೇಗೌಡ ಪುತ್ರ ಶರತ್ ಬಚ್ಚೇಗೌಡ ಅವರ ಜಯ ಕೂಡ ಭವಿಷ್ಯದ ರಾಜಕಾರಣದ ದಿಕ್ಸೂಚಿಯಾಗಿ ಮುಖ್ಯವಾದದ್ದು.
ಈ ನಡುವೆ, ಉಪ ಚುನಾವಣೆಯ ಫಲಿತಾಂಶ ಹೊರಬಿದ್ದ ಕೆಲವೇ ಕ್ಷಣಗಳಲ್ಲಿ ಅದರ ರಾಜಕೀಯ ಪರಿಣಾಮಗಳು ಘಟಿಸತೊಡಗಿದ್ದು, ಬಿಜೆಪಿಯಲ್ಲಿ ಸಚಿವ ಸಂಪುಟ ಪುನರ್ ರಚನೆ ಮತ್ತು ಆ ಬಳಿಕದ ಖಾತೆ ಪಡೆಯುವ- ಕಳೆದುಕೊಳ್ಳುವ ಲೆಕ್ಕಾಚಾರಗಳು ಗರಿಗೆದರಿದ್ದರೆ, ಪ್ರತಿಪಕ್ಷ ಪಾಳೆಯದಲ್ಲಿ ನೈತಿಕ ಹೊಣೆಯ ರಾಜೀನಾಮೆ ಪರ್ವ ಆರಂಭವಾಗಿದೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಿದ್ದು, ಉಪ ಚುನಾವಣೆಯಲ್ಲಿ ಪಕ್ಷ ನಿರೀಕ್ಷಿತ ಪ್ರಮಾಣದಲ್ಲಿ ಸಾಧನೆ ಮಾಡುವಲ್ಲಿ ಆಗಿರುವ ವೈಫಲ್ಯದ ಹೊಣೆ ಹೊತ್ತು ತಾವು ಸ್ಥಾನ ತ್ಯಜಿಸುತ್ತಿರುವುದಾಗಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಬರೆದಿರುವ ರಾಜೀನಾಮೆ ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ. ಅವರ ರಾಜೀನಾಮೆ ಬೆನ್ನಿಗೇ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕೂಡ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಪತ್ರಿಕಾಗೋಷ್ಠಿಯಲ್ಲಿ ಘೋಷಿಸಿದ್ದಾರೆ. ಈ ರಾಜೀನಾಮೆಗಳು ರಾಜ್ಯ ಕಾಂಗ್ರೆಸ್ಸಿನ ರಾಜೀನಾಮೆ ಪರ್ವಕ್ಕೆ ನಾಂದಿ ಹಾಡಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ನಾಯಕರು ಪಕ್ಷದ ಹುದ್ದೆಗಳಿಗೆ ರಾಜೀನಾಮೆ ನೀಡಲಿದ್ದಾರೆ. ಆ ಬಳಿಕ ಕೆಪಿಸಿಸಿ ಪುನರ್ ರಚನೆ ಕೂಡ ನಡೆಯಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಕಾಂಗ್ರೆಸ್ ಪಕ್ಷಕ್ಕೆ ಈ ಚುನಾವಣೆ ಫಲಿತಾಂಶ ಕೂಡ ಮತ್ತೊಂದು ಪಾಠವಷ್ಟೇ. ಆದರೆ, ಈ ಪಾಠದಿಂದ ಅದು ತಪ್ಪು ತಿದ್ದಿಕೊಳ್ಳುವುದೇ? ಮುಂದಿನ ಪಂಚಾಯ್ತಿ ಚುನಾವಣೆಯ ಹೊತ್ತಿಗಾದರೂ ಪ್ರಬಲ ಎದುರಾಳಿ ಬಿಜೆಪಿಯ ವಿರುದ್ಧ ಸಮಬಲದ ಪೈಪೋಟಿ ಕೊಡುವ ಮಟ್ಟಿಗಾದರೂ ತನ್ನನ್ನು ತಾನು ಸದೃಢಗೊಳಿಸಿಕೊಳ್ಳುವುದೇ ಎಂಬುದು ಮತ್ತೆ ಮಿಲಿಯನ್ ಡಾಲರ್ ಪ್ರಶ್ನೆಯೇ. ಏಕೆಂದರೆ, ಪಕ್ಷದ ನೆಲೆ ಅಷ್ಟಿಷ್ಟು ಉಳಿದಿರುವ ಕೆಲವೇ ಕೆಲವು ರಾಜ್ಯಗಳಲ್ಲಿ ಕರ್ನಾಟಕ ಕೂಡ ಒಂದು. ಅದರಲ್ಲೂ ದಕ್ಷಿಣ ಭಾರತದಲ್ಲಿ ಪಕ್ಷ ಒಂದಿಷ್ಟು ಪ್ರಭಾವ ಹೊಂದಿರುವುದು ಇಲ್ಲಿ ಮಾತ್ರ. ಆದರೆ, ಈಗ ಇಲ್ಲಿಯೂ ಪಕ್ಷ ಚುನಾವಣೆಯಿಂದ ಚುನಾವಣೆಗೆ ಸೋಲಿನ ಪ್ರಪಾತಕ್ಕೆ ಕುಸಿಯುತ್ತಿದೆ. ಆ ಹಿನ್ನೆಲೆಯಲ್ಲಿ ಈಗ, ಈ ಚುನಾವಣೆಯ ಬಳಿಕ ಪಕ್ಷ ತೆಗೆದುಕೊಳ್ಳುವ ಪುನರ್ ಸಂಘಟನೆಯ- ತಳಮಟ್ಟದಿಂದ ಪಕ್ಷದ ಕಾರ್ಯಕರ್ತರಲ್ಲಿ ವಿಶ್ವಾಸ ತುಂಬುವ ಮತ್ತು ಸದನದ ಒಳಹೊರಗೆ ಪ್ರತಿಪಕ್ಷವಾಗಿ ಮಾಡುವ ಕೆಲಸಗಳಷ್ಟೇ ಅದನ್ನು ಇನ್ನಷ್ಟು ಪತನದಿಂದ ತಡೆಯಬಲ್ಲವು. ಆ ನಿಟ್ಟಿನಲ್ಲಿ ಪಕ್ಷದ ಹೈಕಮಾಂಡ್ ಮತ್ತು ರಾಜ್ಯ ನಾಯಕತ್ವ ಎಷ್ಟು ಗಂಭೀರವಾಗಿ ಕೆಲಸ ಮಾಡುವುದನ್ನು ಕಾದುನೋಡಬೇಕಿದೆ.
ತಳಮಟ್ಟದಲ್ಲಿ ಪಕ್ಷದ ಸಿದ್ಧಾಂತ ಮತ್ತು ಕಳೆದ ಎಪ್ಪತ್ತು ವರ್ಷಗಳಲ್ಲಿ ಅದರ ಸಾಧನೆಗಳನ್ನು ಹೊಸ ತಲೆಮಾರಿನ ಮತದಾರರಿಗೆ ತಲುಪಿಸುವಲ್ಲಿ ಆಗಿರುವ ಲೋಪ ಮತ್ತು ಜನ ಸೇವೆಗೆ ಬದಲಾಗಿ ಹಣ ಮಾಡುವುದೇ ರಾಜಕಾರಣ ಎಂಬ ನಾಯಕರ ನಿಲುವೇ ಪಕ್ಷವನ್ನು ಅಧಃಪತನಕ್ಕೆ ತಳ್ಳಿದ್ದು ಎಂಬುದನ್ನು ಈಗಲಾದರೂ ಪಕ್ಷ ಅರ್ಥಮಾಡಿಕೊಳ್ಳುವುದೇ ಎಂಬುದರ ಮೇಲೆ ರಾಜ್ಯದಲ್ಲಿ ಆ ಪಕ್ಷದ ಭವಿಷ್ಯ ನಿಂತಿದೆ.
ಇನ್ನು ಜೆಡಿಎಸ್ ಪಾಳೆಯದಲ್ಲಿ ಈಗಾಗಲೇ ಶಿಥಿಲಗೊಂಡಿದ್ದ ಪಕ್ಷದ ಬುನಾದಿಗೆ ಈ ಸೋಲು ಕೊಡುವ ಪೆಟ್ಟು ಎಂಥದ್ದು ಮತ್ತು ಅದರ ಪರಿಣಾಮ ಎಷ್ಟರಮಟ್ಟಿಗೆ ಇರಲಿದೆ ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ. ಆದರೆ, ಸದ್ಯಕ್ಕೆ ಗೌಡರ ಕುಟುಂಬ ರಾಜಕಾರಣದ ವರಸೆ ಬದಲಾಗದೆ ಪಕ್ಷದ ಬುನಾದಿ ಗಟ್ಟಿಯಾಗದು ಎಂಬುದಂತೂ ಮತ್ತೊಮ್ಮೆ ಸಾಬೀತಾಗಿದೆ.
ಹಾಗೆ ನೋಡಿದರೆ, ಈ ಉಪಚುನಾವಣೆಯ ತತಕ್ಷಣದ ಅಡ್ಡಪರಿಣಾಮಕ್ಕೆ ಕಾಂಗ್ರೆಸ್ಸಿನ ಇಬ್ಬರು ಉನ್ನತ ನಾಯಕರ ಹುದ್ದೆಗಳು ಬಲಿಯಾಗಿದ್ದರೂ, ಇದರ ದೊಡ್ಡ ಪರಿಣಾಮ ಬೀರುವ ಸಾಧ್ಯತೆ ಇರುವುದು ಬಿಜೆಪಿಗೇ. ಸ್ಪಷ್ಟ ಬಹುಮತದ ಬಲದ ಮೇಲೆ ಉಳಿದಿರುವ ಮೂರು ವರ್ಷಗಳ ಕಾಲ ಸುಸೂತ್ರವಾಗಿ ಸರ್ಕಾರ ನಡೆಸಿಕೊಂಡು ಹೋಗುವ ಸವಾಲು ಬಿಜೆಪಿಯ ಸಿಎಂ ಯಡಿಯೂರಪ್ಪ ಅವರ ಮುಂದಿದೆ. ಈ ಹಿಂದಿನ ಬಿಜೆಪಿ ಸರ್ಕಾರಗಳ ಅನುಭವ ರಾಜ್ಯದ ಜನತೆಯಲ್ಲಿ ಅಂತಹ ಸುಸೂತ್ರ ಆಡಳಿತ ಭರವಸೆ ಉಳಿಸಿಲ್ಲ ಎಂಬುದು ಕಟುವಾಸ್ತವ.
ಮುಖ್ಯವಾಗಿ ಬಿಜೆಪಿಯೊಳಗಿನ ಬಣ ರಾಜಕಾರಣ, ನಾಯಕರ ಗುಂಪುಗಾರಿಕೆ, ಮೇಲಾಟಗಳನ್ನು ಹಿಮ್ಮೆಟ್ಟಿಸಿ, ಭ್ರಷ್ಟಾಚಾರ, ಹುಂಬತನದ ನಿರ್ಧಾರಗಳಿಂದ ಮುಕ್ತರಾಗಿ, ಮುಖ್ಯವಾಗಿ ತಮ್ಮ ಕುಟುಂಬದವರಿಂದ ಆಗಬಹುದಾದ ಅನಾಹುತಗಳಿಂದ ಪಾರಾಗಿ ಯಶಸ್ವಿಯಾಗಿ ಸಿಎಂ ಅವಧಿ ಪೂರೈಸುವರೇ ಎಂಬುದು ಈಗಿರುವ ಪ್ರಶ್ನೆ. ಹಾಗೇ ಅಭಿವೃದ್ಧಿ ಜಪ ಮಾಡುವ ಯಡಿಯೂರಪ್ಪ, ಅಭಿವೃದ್ಧಿಯ ಜೊತೆಗೆ ಈಗಾಗಲೇ ರಾಜ್ಯದ ಜನರನ್ನು ಹೈರಾಣು ಮಾಡಿರುವ ನೆರೆ, ಬರದಂತಹ ವಿಪತ್ತುಗಳ ನಿರ್ವಹಣೆಯಲ್ಲಿ ಎಷ್ಟು ಸಮರ್ಥವಾಗಿ, ಪಕ್ಷಾತೀತವಾಗಿ ನಿಜವಾದ ಅರ್ಹರ ನೆರವಿಗೆ ಬರುತ್ತಾರೆ ಮತ್ತು ಎಷ್ಟು ತ್ವರಿತವಾಗಿ ಪರಿಹಾರ ಕಾರ್ಯಗಳನ್ನು ಪೂರೈಸುತ್ತಾರೆ ಎಂಬ ಸವಾಲೂ ಇದೆ. ಜೊತೆಗೆ ಆರ್ಥಿಕ ಹಿಂಜರಿತ, ಉದ್ಯೋಗ ನಷ್ಟ, ಕೃಷಿ ಬಿಕ್ಕಟ್ಟು, ಗ್ರಾಮೀಣ ಉದ್ಯೋಗಖಾತರಿ ಯೋಜನೆ ಹಿನ್ನೆಡೆಯಂತಹ ವಿಷಯಗಳಲ್ಲಿ ರಾಜ್ಯ ಸರ್ಕಾರ ಎಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎಂಬುದರ ಮೇಲೆ ಮುಂದಿನ ಮೂರು ವರ್ಷಗಳ ಅದರ ಸಾಧನೆ- ವೈಫಲ್ಯಗಳ ತಾಳೆ ನಿಂತಿದೆ. ಹಾಗಾಗಿ ಈ ವಿಷಯದಲ್ಲಿ ಸಿಎಂ ಎಷ್ಟರಮಟ್ಟಿಗೆ ದಿಟ್ಟ ನೀತಿ-ನಿಲುವು ತಳೆಯುತ್ತಾರೆ ಎಂಬುದರ ನಿಜವಾದ ಅಗ್ನಿಪರೀಕ್ಷೆ ಇನ್ನು ಆರಂಭವಾಗಲಿದೆ.
ಸಚಿವ ಸಂಪುಟ ಪುನರ್ ರಚನೆ, ಖಾತೆ ಹಂಚಿಕೆ, ವಿವಿಧ ನಿಗಮಮಂಡಳಿ ಅಧಿಕಾರ ಹಂಚಿಕೆ ವಿಷಯಗಳು ಅವರ ಕುರ್ಚಿಯ ಭವಿಷ್ಯ ನಿರ್ಧರಿಸಿದರೆ, ರಾಜ್ಯದ ಜ್ವಲಂತ ಸಮಸ್ಯೆ ಮತ್ತು ಸಂಕಷ್ಟಗಳ ವಿಷಯದಲ್ಲಿ ಎಷ್ಟು ತ್ವರಿತವಾಗಿ ಮತ್ತು ದಿಟ್ಟವಾಗಿ ನಿರ್ಧಾರಗಳನ್ನು ಕೈಗೊಂಡು, ಅವುಗಳನ್ನು ಎಷ್ಟು ಪರಿಣಾಮಕಾರಿಯಾಗಿ ಜಾರಿಗೆ ತರಲಾಗುತ್ತದೆ ಎಂಬುದು ಬಿಜೆಪಿಯ ಸರ್ಕಾರದ ಮತ್ತು ಪಕ್ಷದ ಭವಿಷ್ಯವನ್ನು ನಿರ್ಧರಿಸಲಿದೆ. ಆ ಅರ್ಥದಲ್ಲಿ ಈ ಉಪಚುನಾವಣೆಯ ಫಲಿತಾಂಶ ರಾಜ್ಯದ ಸದ್ಯದ ರಾಜಕಾರಣದ ದಿಕ್ಸೂಚಿಯಂತೂ ಹೌದು!