ಪೌರತ್ವ (ತಿದ್ದುಪಡಿ) ಮಸೂದೆ 2019ರ(ಸಿಎಬಿ-ಕ್ಯಾಬ್) ಕುರಿತ ವಾಗ್ವಾದ ಈಗ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಚರ್ಚೆಯ ಸಂಗತಿಯಾಗಿದೆ. ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನದ ಸಂವಿಧಾನದ 370 ಮತ್ತು 35 ಎ ವಿಧಿಗಳ ರದ್ದತಿ, ರಾಮಜನ್ಮಭೂಮಿ ವಿವಾದಕ್ಕೆ ತಾರ್ಕಿಕ ಅಂತ್ಯದ ಬಳಿಕ ಇದೀಗ ಬಿಜೆಪಿ ತನ್ನ ಪ್ರಣಾಳಿಕೆಯ ಮತ್ತೊಂದು ಪ್ರಮುಖ ಅಂಶ, ಪೌರತ್ವ ಮಸೂದೆಯ ತಿದ್ದುಪಡಿಗೆ ಮುಂದಾಗಿದೆ. ಆದರೆ, ಅದು ಕೇವಲ ಹಿಂದಿನ ಮಸೂದೆಯ ತಿದ್ದುಪಡಿ ಮಾತ್ರವಾಗಿರದೆ, ಬಿಜೆಪಿ ಮತ್ತು ಅದರ ಪರಿವಾರದ ‘ಹಿಂದೂರಾಷ್ಟ್ರ’ ಸಾಕ್ಷಾತ್ಕಾರದ ಬಹಳ ಪ್ರಜ್ಞಾಪೂರ್ವಕ ಹೆಜ್ಜೆಯಾಗಿದೆ ಎಂಬುದೇ ಮಸೂದೆ ಈ ಪ್ರಮಾಣದ ವಿವಾದಕ್ಕೀಡಾಗಲು ಕಾರಣವಾಗಿದೆ.
ಪ್ರಮುಖವಾಗಿ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಆಫ್ಘಾನಿಸ್ತಾನದ ಮುಸ್ಲಿಮೇತರ ಸಮುದಾಯದವರು ಧರ್ಮ- ಕೋಮು ಕಾರಣದಿಂದಾಗಿ ನಿರಾಶ್ರಿತರಾಗಿ ಭಾರತಕ್ಕೆ ಬಂದು ನೆಲೆಸಿದ್ದಲ್ಲಿ ಅವರಿಗೆ ದೇಶದ ಪೌರತ್ವ ನೀಡುವ ಕುರಿತು ಈಗಾಗಲೇ ಇದ್ದ ಹಳೆಯ ಪೌರತ್ವ ಕಾಯ್ದೆ-1955ಕ್ಕೆ ತಿದ್ದುಪಡಿ ತರುವುದು ಈ ಮಸೂದೆಯ ಉದ್ದೇಶ. ಯಾವುದೇ ದಾಖಲೆಗಳಿಲ್ಲದೆ ಭಾರತದಲ್ಲಿ 2014ರ ಡಿಸೆಂಬರ್ 31ಕ್ಕೆ ಮುನ್ನ ಕನಿಷ್ಠ ಆರು ವರ್ಷ ಕಾಲ ದೇಶದಲ್ಲಿ ನೆಲೆಸಿರುವ ಪಾಕಿಸ್ತಾನ, ಬಾಂಗ್ಲಾ ಮತ್ತು ಆಫ್ಘಾನಿಸ್ತಾನ ಮೂಲದ ಹಿಂದೂಗಳು, ಪಾರ್ಸಿ, ಸಿಖ್, ಬೌದ್ಧ ಮತ್ತು ಕ್ರೈಸ್ತರು ದೇಶದ ಪೌರತ್ವ ಪಡೆಯಬಹುದು. ಆದರೆ, ಮುಸ್ಲಿಮರಿಗೆ ಆ ಅವಕಾಶ ಇಲ್ಲ ಮತ್ತು ಈ ಮೂರು ದೇಶಗಳಲ್ಲದೆ ಇತರ ದೇಶಗಳ ನಿರಾಶ್ರಿತರಿಗೂ ಈ ಅವಕಾಶ ಇಲ್ಲ ಎಂಬ ಅಂಶಗಳು ಇದೀಗ ವಿವಾದಕ್ಕೆಡೆಯಾಗಿವೆ. ವಿವಾದ, ವಿರೋಧದ ನಡುವೆಯೂ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳ ಭಾರೀ ಬಹುಮತ ಹೊಂದಿರುವ ಲೋಕಸಭೆಯಲ್ಲಿ ಮಸೂದೆಗೆ ಅನುಮೋದನೆ ನೀಡಲಾಗಿದೆ.
ಸಂಸತ್ತಿನಲ್ಲಿ ತನಗಿರುವ ಸ್ಥಾನಬಲದ ಮೇಲೆ ಯಾವುದೇ ಮಸೂದೆಯನ್ನು ಸುಲಭವಾಗಿ ಅಂಗೀಕಾರ ಮಾಡಿ, ರಾಷ್ಟ್ರಪತಿಗಳ ಅಂಕಿತವನ್ನೂ ಹಾಕಿಸಿ, ಕಾಯ್ದೆಯಾಗಿ ಜಾರಿಗೆ ತರುವುದು ಈಗ ಬಿಜೆಪಿಗೆ ನೀರು ಕುಡಿದಷ್ಟೇ ಸರಳ. ಈ ವಾಸ್ತವ ಮಸೂದೆಯನ್ನು ಪ್ರಬಲವಾಗಿ ವಿರೋಧಿಸುತ್ತಿರುವ ಕಾಂಗ್ರೆಸ್, ಎಐಎಂಎಂಐ, ಡಿಎಂಕೆ, ಎಡಪಕ್ಷಗಳು, ಟಿಎಂಸಿ, ಶಿವಸೇನಾ, ಟಿಆರ್ ಎಸ್ ಮತ್ತಿತರ ಪಕ್ಷಗಳು, ಸಂಸತ್ತಿನ ಒಳಹೊರಗೆ ಪ್ರಬಲ ಪ್ರತಿರೋಧ ಒಡ್ಡುತ್ತಿವೆ. ಅಸ್ಸಾಂ ಸೇರಿದಂತೆ ಈಶಾನ್ಯ ರಾಜ್ಯಗಳಲ್ಲಂತೂ ಮಸೂದೆಯ ವಿರುದ್ಧ ಜನಾಕ್ರೋಶ ಭುಗಿಲೆದ್ದಿದೆ. ದೇಶದ ಮುಸ್ಲಿಂ ಸಮುದಾಯ ಕೂಡ ಆತಂಕ ಮತ್ತು ಭೀತಿಯಲ್ಲಿ ಇದರ ವಿರುದ್ಧ ಸಿಡಿದೆದ್ದಿದೆ.
ವಾಸ್ತವವಾಗಿ ‘ಕ್ಯಾಬ್’ನಲ್ಲಿ ಮೂರು ಮುಸ್ಲಿಂ ರಾಷ್ಟ್ರಗಳಿಂದ ಬಂದು ಭಾರತದಲ್ಲಿ ಅಕ್ರಮವಾಗಿ ನೆಲೆಸಿರುವ ಮುಸ್ಲಿಮೇತರರಿಗೆ ದೇಶದ ಪೌರತ್ವ ನೀಡಲು ಅವಕಾಶ ಕಲ್ಪಿಸುವ ಪ್ರಸ್ತಾಪ ಮಾತ್ರ ಇದ್ದು, ಮುಸ್ಲಿಮರನ್ನು ಮಾತ್ರ ಆ ಮಸೂದೆಯ ವ್ಯಾಪ್ತಿಯಿಂದ ಹೊರಗಿಡಲಾಗಿದೆ. ಇದು ದೇಶದ ಸಂವಿಧಾನದ ಮೂಲ ಆಶಯಕ್ಕೆ ವಿರುದ್ಧವಾದ ಒಂದು ಉದ್ದೇಶ ಹೊಂದಿದೆ. ಧರ್ಮದ ಆಧಾರದ ಮೇಲೆ ತಾರತಮ್ಯ ಮಾಡಲು ದೇಶದ ಸರ್ವಸಮಾನತೆಯ, ಜಾತ್ಯತೀತ ಸಂವಿಧಾನದಲ್ಲಿ ಅವಕಾಶವಿಲ್ಲ. ಮುಸ್ಲಿಮೇತರ ವಲಸಿಗರಿಗೆ ಮಾತ್ರ ಯಾವುದೇ ದಾಖಲೆಪತ್ರಗಳಿಲ್ಲದೆಯೂ ದೇಶದ ಪೌರತ್ವ ನೀಡಲಾಗುವುದು ಎಂದರೆ, ಮುಸ್ಲಿಂ ವಲಸಿಗರಿಗೆ ಪೌರತ್ವ ನೀಡಲಾಗುವುದಿಲ್ಲ ಎಂಬ ಒಳಾರ್ಥವನ್ನೂ ಮಸೂದೆ ಹೊಂದಿದೆ. ಇದು ಮಸೂದೆಯ ವ್ಯಾಪ್ತಿಯಲ್ಲಿನ ಅಂಶ. ಆದರೆ, ಈ ಮಸೂದೆಯ ಉದ್ದೇಶವೇ ಅಸ್ಸಾಂನಲ್ಲಿ ಈ ಮೊದಲು ಜಾರಿಗೊಳಿಸಿದ ರಾಷ್ಟ್ರೀಯ ಪೌರತ್ವ ನೋಂದಣಿ(ಎನ್ ಆರ್ ಸಿ)ಯನ್ನು ದೇಶಾದ್ಯಂತ ವಿಸ್ತರಿಸಲು ಅಗತ್ಯ ಕಾನೂನು ತೊಡಕುಗಳನ್ನು ನಿವಾರಿಸಿಕೊಳ್ಳುವುದಾಗಿದೆ. ಅಂದರೆ, ದೇಶದ ಮುಸ್ಲಿಮರನ್ನು ಹೊರತುಪಡಿಸಿ ಉಳಿದ ಧರ್ಮೀಯರಿಗೆ ಸಲೀಸಾಗಿ ಎನ್ ಆರ್ ಸಿ ನೋಂದಣಿ ನಡೆಯಲಿದೆ. ಮುಸ್ಲಿಮರಿಗೆ ಮಾತ್ರ ಅವರು ವಲಸಿಗರಲ್ಲ ಎಂಬುದನ್ನು ಸಾಬೀತುಮಾಡುವುದು ಕಡ್ಡಾಯವಾಗಲಿದೆ! ಅಂದರೆ, ದೇಶದಲ್ಲಿರುವ ಸುಮಾರು 20 ಕೋಟಿ ಮುಸ್ಲಿಮರು ತಾವು ಮೂಲ ಭಾರತೀಯರೇ ಎಂಬುದನ್ನು ಸಾಬೀತುಪಡಿಸಿದರೆ ಮಾತ್ರ ದೇಶದ ಅಧಿಕೃತ ಪ್ರಜೆಗಳು ಎಂದು ನೋಂದಾಯಿಸಿಕೊಳ್ಳಬಹುದು!
‘ಕ್ಯಾಬ್’ ಕಾಯ್ದೆಯ ಗುರಿಯೇ; ಎನ್ ಆರ್ ಸಿಯನ್ನು ದೇಶಾದ್ಯಂತ ಜಾರಿಗೆ ತಂದಾಗ, ಅದನ್ನು ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿಕೊಂಡು ಕಡ್ಡಾಯವಾಗಿ ಹೇರುವ ಬಿಜೆಪಿಯ ಅಜೆಂಡಾಕ್ಕೆ ಕಾನೂನು ಬಲ ನೀಡುವುದು. ಆದರೆ, ಈಗ ಮಸೂದೆಯಲ್ಲಾಗಲೀ, ಸ್ವತಃ ಮಸೂದೆಯನ್ನು ಮಂಡಿಸಿರುವ ಗೃಹ ಸಚಿವ ಅಮಿತ್ ಶಾ ಅವರಾಗಲೀ ಮುಂದೆ ಎನ್ ಆರ್ ಸಿ ನೋಂದಣಿ ವೇಳೆ ತಿದ್ದುಪಡಿ ಕಾಯ್ದೆಯನ್ನು ಹೇಗೆ ಬಳಸಲಾಗುತ್ತದೆ ಎಂಬ ಬಗ್ಗೆ ತುಟಿಬಿಚ್ಚಿಲ್ಲ. ಆದರೆ, ಮಸೂದೆಯನ್ನು ಸಮರ್ಥಿಸಿಕೊಳ್ಳುತ್ತಾ, ಪ್ರತಿಪಕ್ಷಗಳ ಟೀಕೆಗೆ ಉತ್ತರವಾಗಿ ಅವರು ಮಾಡಿದ ಮಾತುಗಳು ಸೂಚ್ಯವಾಗಿ ಮಸೂದೆಯ ಪರಮ ಗುರಿಯ ಬಗ್ಗೆ ಹೇಳದೇ ಉಳಿದಿಲ್ಲ.
‘ದೇಶವನ್ನು ಧರ್ಮದ ಆಧಾರದ ಮೇಲೆ ವಿಭಜಿಸಿದಾಗ, ಕಾಂಗ್ರೆಸ್ ಮುಸ್ಲಿಮೇತರರಿಗೆ ದೇಶದ ಪೌರತ್ವ ನೀಡುವ ನಿಟ್ಟಿನಲ್ಲಿ ಇಂತಹ ಕ್ರಮಕೈಗೊಂಡಿದ್ದರೆ, ಈಗ ಇಂತಹ ಮಸೂದೆಯ ಅಗತ್ಯವೇ ಇರಲಿಲ್ಲ’ ಎಂಬ ಅವರ ಮಾತಿನಲ್ಲೇ ದೇಶವನ್ನು ಧರ್ಮದ ಆಧಾರದ ಮೇಲೆ ಕಟ್ಟುವ ಉದ್ದೇಶ ಕಾಣುತ್ತಿದೆ. ವಾಸ್ತವವಾಗಿ ದೇಶ ವಿಭಜನೆಯಾದಾಗ ಮಹಮದ್ ಅಲಿ ಜಿನ್ನಾ ಧರ್ಮದ ಆಧಾರದ ಮೇಲೆ ಪಾಕಿಸ್ತಾನ ಕೇಳಿದ್ದರು. ಆದರೆ, ಸಾವರ್ಕರ್ ಮತ್ತು ಜಿನ್ನಾ ಪ್ರತಿಪಾದಿಸಿದ್ದ ದ್ವಿರಾಷ್ಟ್ರ ಸಿದ್ಧಾಂತವನ್ನು ಗಾಂಧಿ, ನೆಹರು ಸೇರಿದಂತೆ ಅಂದಿನ ಪ್ರಮುಖ ನಾಯಕರು ವಿರೋಧಿಸಿದ್ದರು. ಅಲ್ಲದೆ ಸ್ವತಃ ಸರ್ಧಾರ್ ಪಟೇಲರು ಕೂಡ, ಭಾರತ ಜಾತ್ಯತೀತ ರಾಷ್ಟ್ರವಾಗಿಯೇ ಉಳಿಯಲಿದೆ ಎಂಬುದನ್ನು ಬಲವಾಗಿ ಪ್ರತಿಪಾದಿಸಿದ್ದರು. ಆದರೆ, ಸಂಸತ್ತಿನಲ್ಲಿ ಮಾತನಾಡುತ್ತಾ ಅಮಿತ್ ಶಾ, ಇತಿಹಾಸವನ್ನು ತಮ್ಮ ಮೂಗಿನ ನೇರಕ್ಕೆ ಯಶಸ್ವಯಾಗಿ ತಿರುಚಿದರು! ಆ ಮೂಲಕ ಮುಸ್ಲಿಮ ಪ್ರತ್ಯೇಕತಾ ನೀತಿಯ ಎನ್ ಆರ್ ಸಿ ಮತ್ತು ‘ಕ್ಯಾಬ್’ ಗೆ ಇತಿಹಾಸ ತಪ್ಪನ್ನು ಸರಿಪಡಿಸುವ ಉದ್ದೇಶದ ಆಯಾಮ ನೀಡುವ ಪ್ರಯತ್ನ ಮಾಡಿದರು.
ಮಸೂದೆಯ ಉದ್ದೇಶದ ಬಗ್ಗೆ ಸಂಶಯ ಮೂಡಿಸುವ ಹಲವು ಸಂಗತಿಗಳಲ್ಲಿ, ಪ್ರಮುಖವಾಗಿ ಭಾರತದ ಭಾಗವಾಗವಲ್ಲದ ಆಫ್ಘಾನಿಸ್ತಾನವನ್ನೂ ಸೇರಿಸಿ ಮೂರು ಮುಸ್ಲಿಂ ರಾಷ್ಟ್ರಗಳಿಂದ ವಲಸೆ ಬಂದವರಿಗೆ ಮಾತ್ರ ಎಂಬ ಷರತ್ತು ಅನುಮಾನಕ್ಕೆ ಕಾರಣವಾಗಿದೆ. ದೇಶದಿಂದ ವಿಭಜನೆಯಾದ ದೇಶಗಳಲ್ಲಿ ಅಲ್ಪಸಂಖ್ಯಾತರಾಗಿ ಧಾರ್ಮಿಕ ದಬ್ಬಾಳಿಕೆಗೆ ಒಳಗಾಗಿ ವಲಸೆ ಬಂದಿರುವ ಮುಸ್ಲಿಮೇತರರಿಗೆ ನ್ಯಾಯ ದೊರಕಿಸುವ ಉದ್ದೇಶವಿದ್ದಿದ್ದರೆ, ಪಾಕಿಸ್ತಾನ ಮತ್ತು ಬಾಂಗ್ಲಾ ಮಾತ್ರ ಈ ಪಟ್ಟಿಯಲ್ಲಿರಬೇಕಿತ್ತು. ಆಫ್ಘಾನಿಸ್ತಾನವನ್ನು ಏಕೆ ಸೇರಿಸಿದ್ದು? ಹಾಗೇ, ಕೇವಲ ದೇಶದೊಂದಿಗೆ ನೇರ ಗಡಿ ಹಂಚಿಕೊಂಡಿರುವ ರಾಷ್ಟ್ರಳಿಂದ ಬಂದವರಿಗೆ ಅನ್ವಯವಾಗುವುದಾಗಿದ್ದರೆ, ಶ್ರೀಲಂಕಾದ ಹಿಂದೂ ಮತ್ತು ತಮಿಳು ಕ್ರೈಸ್ತ ವಲಸಿಗರು, ನೇಪಾಳದ ಹಿಂದೂ ಮತ್ತು ಭೌದ್ಧ ವಲಸಿಗರು, ಮ್ಯಾನ್ಮಾರ್ ನ ಹಿಂದೂ ವಲಸಿಗರಿಗೂ ಈ ಮಸೂದೆಯಲ್ಲಿ ಅವಕಾಶ ಇರಬೇಕಿತ್ತು. ಆದರೆ, ಅವರಾರಿಗೂ ಅವಕಾಶ ನೀಡಿಲ್ಲ! ಅಲ್ಲದೆ, ಉಲ್ಲೇಖಿತ ಮೂರು ರಾಷ್ಟ್ರಗಳಲ್ಲಿ ಧಾರ್ಮಿಕ ಅಲ್ಪಸಂಖ್ಯಾತರಿಗೆ ಈ ಅವಕಾಶ ಎನ್ನಲಾಗಿದೆ. ಆದರೆ, ಸುನ್ನಿ ಬಾಹುಳ್ಯದ ಪಾಕಿಸ್ತಾನದಲ್ಲಿ ಅಹಮದೀಯ ಮುಸ್ಲಿಮರು ಮತ್ತು ಶಿಯಾ ಮುಸ್ಲಿಮರು ಅಲ್ಪಸಂಖ್ಯಾತರಾಗಿ ತಾರತಮ್ಯ ಎದುರಿಸುತ್ತಿದ್ದಾರೆ. ಹಾಗೇ ಮ್ಯಾನ್ಮಾರ್ ನಲ್ಲಿ ರೊಹಿಂಗ್ಯಾ ಮುಸ್ಲಿಮರು ಮತ್ತು ಹಿಂದೂಗಳು ಅಲ್ಪಸಂಖ್ಯಾತರು, ಶ್ರೀಲಂಕಾದಲ್ಲಿ ಹಿಂದೂ ಮತ್ತು ಕ್ರೈಸ್ತ ತಮಿಳರು ಅಲ್ಪಸಂಖ್ಯಾತರೇ. ಆದರೆ ಅವರ ಬಗ್ಗೆ ಮಸೂದೆ ಪ್ರಸ್ತಾಪಿಸುವುದೇ ಇಲ್ಲ. ಆ ಬಗ್ಗೆ ಸಂಸತ್ತಿನಲ್ಲಿ ಪ್ರತಿಕ್ರಿಯಿಸಿರುವ ಗೃಹ ಸಚಿವರು, ‘ಮುಸ್ಲಿಮರಿಗೆ ಆಶ್ರಯ ನೀಡಲು ಮುಸ್ಲಿಂ ರಾಷ್ಟ್ರಗಳಿವೆ. ಹಿಂದೂಗಳಿಗೆ ನಾವಲ್ಲದೆ ಇನ್ನಾರು ಆಶ್ರಯ ನೀಡಬೇಕು’ ಎಂದಿದ್ದಾರೆ. ಆ ಮೂಲಕ ಭಾರತ ‘ಹಿಂದೂ ರಾಷ್ಟ್ರ’ ಎಂಬ ತಮ್ಮ ಮೂಲ ಸಿದ್ಧಾಂತವನ್ನು ಪರೋಕ್ಷವಾಗಿ ಉಲ್ಲೇಖಿಸಿದ್ದಾರೆ!
ಆದರೆ ಈ ಅಪಾಯಕಾರಿ ತಿದ್ದುಪಡಿ ಮಸೂದೆ ದೇಶದ ಮುಸ್ಲಿಂ ಸಮುದಾಯ ಹಾಗೂ ಪ್ರಮುಖವಾಗಿ ಈಶಾನ್ಯ ರಾಜ್ಯಗಳ ಹಿತಕ್ಕೆ ಮರಣಶಾಸನ ಎಂಬುದನ್ನು ಗ್ರಹಿಸಿದ ದೇಶದ ಪ್ರಜ್ಞಾವಂತರು ಇದರ ವಿರುದ್ಧ ಸಿಡಿದೆದ್ದಿದ್ದಾರೆ. ಸುಮಾರು 600ಕ್ಕೂ ಹೆಚ್ಚು ಲೇಖಕರು, ಕಲಾವಿದರು ಈ ಮಸೂದೆಯ ವಿರುದ್ಧ ದನಿ ಎತ್ತಿದ್ದಾರೆ. ಅಸ್ಸಾಂ, ತ್ರಿಪುರಾ ಸೇರಿದಂತೆ ಈಶಾನ್ಯ ಭಾರತ ಹೊತ್ತಿ ಉರಿಯುತ್ತಿದೆ. ಬಂಗಾಳದಲ್ಲಿಯೂ ಪ್ರತಿರೋಧ ಜೋರಾಗಿದೆ. ಆದರೆ, ಸರ್ಕಾರ ಜನರ ಆತಂಕ ದೂರ ಮಾಡುವ ಬದಲಾಗಿ ಇಂಟರ್ ನೆಟ್ ಸಂಪರ್ಕ ಕಡಿತ, ಪೊಲೀಸ್ ಬಲ ಪ್ರಯೋಗದಂತಹ ಕ್ರಮಗಳ ಮೂಲಕ ಜನಾಭಿಪ್ರಾಯ ಹತ್ತಿಕ್ಕುವ ಪ್ರಯತ್ನಕ್ಕೆ ಕೈಹಾಕಿದೆ. ಈ ನಡುವೆ, ಕ್ಯಾಬ್ ಮಸೂದೆಯ ವ್ಯಾಪ್ತಿಯಿಂದ ಈಶಾನ್ಯ ರಾಜ್ಯಗಳಲ್ಲಿ ಹೊರಗಿಡುವುದಾಗಿ ಸ್ಪಷ್ಟಪಡಿಸಲಾಗಿದೆ. ಆದರೂ ಈಶಾನ್ಯ ರಾಜ್ಯಗಳಲ್ಲಿ ಆಕ್ರೋಶ ತಣ್ಣಗಾಗಿಲ್ಲ.
ದೇಶವನ್ನು ಧರ್ಮದ ಆಧಾರದ ಮೇಲೆ ಒಡೆಯುವ ಉದ್ದೇಶ ಈ ಮಸೂದೆಯ ಹಿಂದಿದೆ ಎಂಬುದು ಅದನ್ನು ವಿರೋಧಿಸುತ್ತಿರುವವರ ವಾದ. ಆದರೆ, ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು ಮಸೂದೆ ದೇಶದಲ್ಲಿ ಅಕ್ರಮವಾಗಿ ನೆಲೆಸಿರುವ ಮೂರು ದೇಶಗಳ ಮುಸ್ಲಿಮೇತರರಿಗೆ ದೇಶದ ಅಧಿಕೃತ ಪೌರತ್ವ ನೀಡುವ ಮಾನವೀಯ ಉದ್ದೇಶ ಹೊಂದಿದೆ ಎಂದು ಸಮರ್ಥನೆ ನೀಡುತ್ತಿವೆ. ಆದರೆ, ನಿಜಕ್ಕೂ ಮಸೂದೆಯ ಹೂರಣದ ಆಚೆ ನಾಳೆ, ಎನ್ ಆರ್ ಸಿ ದೇಶಾದ್ಯಂತ ಜಾರಿಗೆ ಬರುವ ಹೊತ್ತಿಗೆ ಅದರ ಪರಿಣಾಮಗಳೇನು ಎಂಬ ಬಗ್ಗೆ ಆಡಳಿತ ಪಕ್ಷ ಮುಗುಮ್ಮಾಗಿದೆ. ಅಂದರೆ; ಪ್ರತಿಪಕ್ಷ ಮತ್ತು ದೇಶದ ಪ್ರಜ್ಞಾವಂತರು ಹಾಗೂ ಅಲ್ಪಸಂಖ್ಯಾತ ಸಮುದಾಯದ ಆತಂಕಕ್ಕೆ ಕಾರಣವಿಲ್ಲದೇ ಇಲ್ಲ! ದೇಶದ ಮುಸ್ಲಿಮರನ್ನು ಎರಡನೇ ದರ್ಜೆ ನಾಗರಿಕರನ್ನಾಗಿ ಮಾಡುವ ದುರುದ್ದೇಶ ಸರ್ಕಾರದ್ದು ಎಂಬ ಆರೋಪಗಳು ಕೂಡ ಪೂರಾ ಸುಳ್ಳಲ್ಲ ಎಂಬುದಕ್ಕೆ ಸರ್ಕಾರದ ಈ ಜಾಣ ಮರೆವಿನ ವರಸೆಯೇ ಸಾಕ್ಷಿ!